Andolana originals

ಗ್ರೇಟರ್ ಮೈಸೂರು ಯೋಜನೆ ಡೋಲಾಯಮಾನ

ಕೆ.ಬಿ.ರಮೇಶನಾಯಕ

ದಿಢೀರ್ ಸಭೆ ಮುಂದೂಡಿದ ಸಿಎಂ ಸಿದ್ದರಾಮಯ್ಯ ನಡೆಯಿಂದ ಅನುಮಾನ

ಬೃಹತ್ ಪಾಲಿಕೆ ರಚನೆ ಪರ-ವಿರೋಧ ನಿಲುವಿನಿಂದ ಮುಂದುವರಿದ ಗೊಂದಲ

ಮೈಸೂರು: ಮೈಸೂರು ನಗರಪಾಲಿಕೆಯನ್ನು ಬೃಹತ್ ಮೈಸೂರು ಮಹಾನಗರ ಪಾಲಿಕೆಯಾಗಿ (ಗ್ರೇಟರ್ ಮೈಸೂರು) ಮೇಲ್ದರ್ಜೆಗೇರಿಸಬೇಕು ಎನ್ನುವ ಮಹದಾಸೆ ಹೊತ್ತಿರುವ ರಾಜ್ಯ ಸರ್ಕಾರದ  ಪ್ರಸ್ತಾಪ ಮತ್ತೆ ಡೋಲಾಯಮಾನಕ್ಕೆ ಸಿಲುಕಿದೆ.

ಗ್ರೇಟರ್ ಮೈಸೂರು ರಚನೆ ಸಂಬಂಧ ನಗರದ ಜಲದರ್ಶಿನಿ ಅತಿಥಿ ಗೃಹದಲ್ಲಿ ಕರೆದಿದ್ದ ಸಭೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಿಢೀರನೆ ಮುಂದೂಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಗ್ರೇಟರ್ ಮೈಸೂರು ರಚನೆಗೆ ಎದ್ದಿರುವ ಪರ-ವಿರೋಧದ ಚರ್ಚೆಗಳೇ ಇದಕ್ಕೆ ಪ್ರಮುಖ ಕಾರಣ ಎಂಬ ಮಾತುಗಳು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಲಯದಿಂದ ಕೇಳಿ ಬರುತ್ತಿವೆ. ಇದರಿಂದಾಗಿ ಗ್ರೇಟರ್ ಮೈಸೂರು ಪ್ರಸ್ತಾಪಕ್ಕೆ ಮತ್ತೆ ಜೀವ ಬರುವುದೋ ಅಥವಾ ಸಮಯ ದೂಡುವುದೇ ಎನ್ನುವ ಪ್ರಶ್ನೆ ಎದ್ದಿದೆ.

ಗ್ರೇಟರ್ ಮೈಸೂರು ರಚನೆಯಾದರೆ ಮೈಸೂರಿಗೆ ಹೊಂದಿಕೊಂಡಿರುವ ಚಾಮುಂಡೇಶ್ವರಿ ಕ್ಷೇತ್ರದ ಎಲ್ಲ ನೂತನ ಬಡಾವಣೆಗಳೂ ಬೃಹತ್ ಮೈಸೂರು ನಗರಪಾಲಿಕೆ ವ್ಯಾಪ್ತಿಗೆ ಒಳಪಡುತ್ತವೆ. ಹೀಗಾಗಿ ಸಹಜವಾಗಿಯೇ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಗ್ರೇಟರ್ ಮೈಸೂರು ರಚನೆಗೆ ಒಲವು ತೋರಿದ್ದಾರೆ. ಆದರೆ, ಕಾಂಗ್ರೆಸ್‌ನ ಸಾಕಷ್ಟು ನಾಯಕರು ಹಾಗೂ ನಗರಪಾಲಿಕೆಯ ಮಾಜಿ ಸದಸ್ಯರು ಗ್ರೇಟರ್ ಮೈಸೂರಿನ ಕುರಿತು ಒಲವು ಹೊಂದಿಲ್ಲ. ಹೀಗಾಗಿ ಗ್ರೇಟರ್ ಮೈಸೂರು ರಚನೆ ಕೈಬಿಟ್ಟು ನಗರಪಾಲಿಕೆ ಚುನಾವಣೆ ಎದುರಿಸೋಣ ಎಂಬುದು ಅವರ ಸಲಹೆಯಾಗಿದೆ. ಈ ಕಾರಣಕ್ಕೆ ಸಿಎಂ ಸಭೆಯನ್ನು ದಿಢೀರನೆ ಮುಂದೂಡಿದ್ದಾರೆ ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಕೇಳಿ ಬರುತ್ತಿವೆ.

ಕಳೆದ ತಿಂಗಳು ಮುಖ್ಯಮಂತ್ರಿಯವರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್ ಕರೆದಿದ್ದ ಸಭೆ ದಿಢೀರನೆ ಮುಂದೂಡಿದ್ದರೆ, ಸಿಎಂ ಅವರ ಅಧಿಕೃತ ಕಾರ್ಯಕ್ರಮದಲ್ಲಿದ್ದ ಸಭೆಯನ್ನೂ ಮುಂದೂಡಿರುವುದರಿಂದ ಯೋಜನೆ ಮತ್ತೆ ತೂಗುಯ್ಯಾಲೆಯಲ್ಲಿ ಇದೆ.

ವಿರೋಧಕ್ಕೆ ಕಾರಣವೇನು?: ಮೈಸೂರು ನಗರ ಈಗಾಗಲೇ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ. ತೆರಿಗೆ ಸಂಗ್ರಹದಲ್ಲಿ ಹೆಚ್ಚಿನ ಪ್ರಗತಿ ಕಾಣುತ್ತಿಲ್ಲ. ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳಿಗೆ ಬಿಲ್ ಪಾವತಿಸಲು ಕೂಡ ನಗರ ಪಾಲಿಕೆಯಲ್ಲಿ ಹಣ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ವ್ಯವಸ್ಥಿತವಾಗಿ ಅಭಿವೃದ್ಧಿಗೊಂಡಿರುವ ನಗರದಲ್ಲಿಯೇ ಇಷ್ಟೊಂದು ಸಮಸ್ಯೆ ಇರುವಾಗ ನಗರವನ್ನು ವಿಸ್ತರಣೆ ಮಾಡಿದರೆ ಹಲವಾರು ನೂತನ ಬಡಾವಣೆಗಳು ಪಾಲಿಕೆಗೆ ಒಳಪಡುತ್ತದೆ. ಆ ಬಡಾವಣೆಗಳಿಗೆ ಮೂಲಸೌಲಭ್ಯ ಕಲ್ಪಿಸುವುದು, ಪಾಲಿಕೆಗೆ ಹೆಚ್ಚುವರಿ ನೌಕರರು, ಪೌರ ಕಾರ್ಮಿಕರನ್ನು ನೇಮಕ ಮಾಡಲು ಸಾವಿರಾರು ಕೋಟಿ ರೂ.ಗಳ ಅವಶ್ಯಕತೆ ಇದೆ. ಹೊಸ ಬಡಾವಣೆಗಳ ಎಲ್ಲ ಸಮಸ್ಯೆಗಳಿಗೂ ಸ್ಪಂದಿಸುವಷ್ಟು ಅನುದಾನವನ್ನು ಹೊಂದಿಸುವುದು ಸರ್ಕಾರಕ್ಕೆ ಸವಾಲಾಗುತ್ತದೆ.

ಹೀಗಾಗಿ ಗ್ರೇಟರ್ ಮೈಸೂರು ರಚನೆ ಬೇಡ ಎಂಬ ಸಲಹೆಯನ್ನು ಕಾಂಗ್ರೆಸ್‌ನ ಹಲವು ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೀಡಿದ್ದಾರೆ. ಆದ್ದರಿಂದ ಗ್ರೇಟರ್ ಮೈಸೂರು ರಚನೆ ಗೊಂದಲದ ಗೂಡಾಗಿದೆ. ಈ ಪ್ರಶ್ನೆಗಳಿಗೆ ಸರ್ಕಾರ ಉತ್ತರ ಕಂಡುಕೊಂಡು ನಂತರ ಗ್ರೇಟರ್ ಮೈಸೂರು ರಚನೆಗೆ ಮುಂದಾಗುವ ಸಾಧ್ಯತೆ ಇದೆ.

ದಶಕಗಳ ಕೂಗು: ರಾಜ್ಯದಲ್ಲಿ ೨೦೦೮ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ‘ಗ್ರೇಟರ್ ಮೈಸೂರು’ ರಚನೆಯಾಗಬೇಕು ಎಂಬ ಒತ್ತಾಯ ಕೇಳಿ ಬಂತು. ಅಂದು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಸ್.ಎ. ರಾಮದಾಸ್, ಗ್ರೇಟರ್ ಮೈಸೂರಿಗೆ ಯೋಜನೆ ಸಿದ್ಧಪಡಿಸಿದ್ದರು. ಆದರೆ ಕಾರಣಾಂತರಗಳಿಂದ ‘ಗ್ರೇಟರ್ ಮೈಸೂರು’ ಕನಸು ನನಸಾಗಲಿಲ್ಲ.

ನಂತರದ ಹಲವು ವರ್ಷಗಳಲ್ಲಿ ‘ಗ್ರೇಟರ್ ಮೈಸೂರು’ ವಿಷಯ ಕೇವಲ ಬಜೆಟ್ ಸಂದರ್ಭ ಮಾತ್ರ ಚರ್ಚೆಗೆ ಸೀಮಿತವಾಯಿತು. ಆದರೆ, ಕಳೆದ ಬಾರಿ ಸಂಸದರಾಗಿದ್ದ ಪ್ರತಾಪ್ ಸಿಂಹ ಮೈಸೂರಿಗರ ‘ಗ್ರೇಟರ್ ಮೈಸೂರು’ ಕನಸಿಗೆ ಮತ್ತೆ ರೆಕ್ಕೆ ಕಟ್ಟಲು ಪ್ರಾರಂಭಿಸಿದರು. ಈ ನಿಟ್ಟಿನಲ್ಲಿ ಹಲವಾರು ಸಭೆಗಳನ್ನು ನಡೆಸಿದರು. ಆದರೆ, ಕೋವಿಡ್, ಮಹಾಪೌರರ ಚುನಾವಣೆ ವಿಳಂಬ ಹಿನ್ನೆಲೆಯಲ್ಲಿ ಕುರಿತು ಯಾವುದೇ ಅಂತಿಮ ತೀರ್ಮಾನ ಕೈಗೊಳ್ಳಲು ಸಾಧ್ಯವಾಗಲಿಲ್ಲ.

ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಸ್.ಟಿ.ಸೋಮಶೇಖರ್ ನೇತೃತ್ವದಲ್ಲಿ ಶಾಸಕರು, ಸಂಸದರ ಸಭೆ ನಡೆಸಿ ಗ್ರೇಟರ್ ಮೈಸೂರು ಕುರಿತು ಅಭಿಪ್ರಾಯ ಪಡೆಯಲಾಯಿತು. ಎಲ್ಲ ಪಕ್ಷಗಳ ಜನಪ್ರತಿನಿಧಿಗಳು ಗ್ರೇಟರ್ ಮೈಸೂರು ಕುರಿತು ಒಲವು ವ್ಯಕ್ತಪಡಿಸಿದ್ದು ವಿಶೇಷವಾಗಿತ್ತು. ಆದರೆ, ಈ ಬಗ್ಗೆ ನಗರಪಾಲಿಕೆ ಕೌನ್ಸಿಲ್ ಒಪ್ಪಿಗೆ ಪಡೆಯಲು ಸಾಧ್ಯವಾಗಲಿಲ್ಲ. ಈ ವಿಚಾರವಾಗಿ ಆ ಸಂದರ್ಭ ಕಾಂಗ್ರೆಸ್ ಹಾಗೂ ಬಿಜೆಪಿ ನಗರ ಪಾಲಿಕೆ ಸದಸ್ಯರು ಪರಸ್ಪರ ದೋಷಾರೋಪಣೆಯಲ್ಲಿ ಮುಳುಗಿದ್ದರು. ಆ ನಂತರ ವಿಧಾನಸಭೆ ಚುನಾವಣೆ ನಡೆದು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂತು. ೨೦೨೪ರ ದಸರಾ ನಂತರ ಗ್ರೇಟರ್ ಮೈಸೂರು ಚರ್ಚೆ ಮತ್ತೆ ಮುನ್ನೆಲೆಗೆ ಬಂತು. ದಸರಾ ಮುಕ್ತಾಯಗೊಂಡ ನಂತರ ನಡೆದ ಅನೌಪಚಾರಿಕ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗ್ರೇಟರ್ ಮೈಸೂರು ರಚನೆ ಕುರಿತು ವರದಿ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು.

ಗ್ರೇಟರ್ ಮೈಸೂರು ರಚನೆಯಾದರೆ ಅಭಿವೃದ್ಧಿಗೆ ಹೊಸ ವೇಗ: 

” ಗ್ರೇಟರ್ ಮೈಸೂರು ರಚನೆಯಾದರೆ ನಗರದ ಅಭಿವೃದ್ಧಿಗೆ ಹೊಸ ವೇಗ ದೊರೆಯುವುದು ನಿಶ್ಚಿತ. ನಗರಕ್ಕೆ ಹೊಂದಿಕೊಂಡಿರುವ ಪ್ರದೇಶಗಳಿಗೆ ಮೂಲಸೌಲಭ್ಯಗಳು ಶೀಘ್ರದಲ್ಲಿಯೇ ದೊರೆತು ನಗರ ಅಭಿವೃದ್ಧಿ ಹೊಂದಲು ಸಹಕಾರಿಯಾಗುತ್ತದೆ. ನಗರ ಹಾಗೂ ನಗರದ ಹೊರ ವಲಯದ ಜನರ ದಾಹ ನೀಗಿಸಲು ಹಳೇ ಉಂಡವಾಡಿ ಕುಡಿಯುವ ನೀರಿನ ಯೋಜನೆ, ಕಬಿನಿ ಎರಡನೇ ಹಂತದ ಯೋಜನೆಯನ್ನು ಕಾರ್ಯರೂಪಕ್ಕೆ ತರಲಾಗುತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಗ್ರೇಟರ್ ಮೈಸೂರು ವ್ಯಾಪ್ತಿಗೆ ಬರುವ ಪ್ರದೇಶಗಳಲ್ಲಿ ಕುಡಿಯುವ ನೀರು ಸೇರಿದಂತೆ ಎಲ್ಲ ಮೂಲಸೌಲಭ್ಯಗಳೂ ವೇಗವಾಗಿ ದೊರೆಯುವ ನಿರೀಕ್ಷೆ ಹೊಂದಲಾಗಿದೆ. ಎಲ್ಲ ಸೌಲಭ್ಯಗಳು ದೊರೆತರೆ ಸಹಜವಾಗಿಯೇ ಹೊಸ ಬಡಾವಣೆಗಳಲ್ಲಿ ಜನರು ಮನೆಗಳ ನಿರ್ಮಾಣಕ್ಕೆ ಉತ್ಸಾಹ ತೋರುತ್ತಾರೆ. ಇದರಿಂದ ಪಾಲಿಕೆಯ ಆದಾಯವೂ ವೃದ್ಧಿಯಾಗುತ್ತದೆ ಎಂದು ಗ್ರೇಟರ್ ಮೈಸೂರು ಪರವಾಗಿ ಅಭಿಪ್ರಾಯ ಹೊಂದಿರುವವರು ವಾದಿಸುತ್ತಿದ್ದಾರೆ”

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ನೆಹರೂ ಸೇವೆ ಸ್ಮರಿಸೋಣ

ರಾಜಕೀಯ ಮುತ್ಸದ್ದಿ, ದೇಶದ ಪ್ರಥಮ ಪ್ರಧಾನ ಮಂತ್ರಿ ದಿವಂಗತ ಪಂಡಿತ್ ಜವಾಹರಲಾಲ್ ನೆಹರೂರವರ ಹುಟ್ಟುಹಬ್ಬವನ್ನು ಮಕ್ಕಳ ದಿನಾಚರಣೆಯ ಹೆಸರಿನಲ್ಲಿ ಶನಿವಾರ…

35 mins ago

ಓದುಗರ ಪತ್ರ: ಪ್ರತಿ ನಗರಕ್ಕೂ ಬೇಕಾಗಿದೆ ಕಸ ಸಂಸ್ಕರಣಾ ಘಟಕ

ಸ್ವಚ್ಛತಾ ಪಟ್ಟಿಯಲ್ಲಿ ರಾಜ್ಯದಲ್ಲಿ ಮೈಸೂರು ಮಕುಟ ಧರಿಸಿರುವುದು ಹೆಮ್ಮೆಯ ಸಂಗತಿಯಾದರೂ ಶೇ.೯೦ಕ್ಕೂ ಹೆಚ್ಚು ನಗರಗಳಲ್ಲಿ ಇಂದಿಗೂ ಕಸದ ನಿರ್ವಹಣೆ ಸಮರ್ಪಕವಾಗಿಲ್ಲದಿರುವುದು…

36 mins ago

ಓದುಗರ ಪತ್ರ: ಮೋದಿಯವರ ಹೃದಯ ವೈಶಾಲ್ಯತೆಯೂ ಹಾಸ್ಯಪ್ರಜ್ಞೆಯೂ

ಪ್ರಧಾನ ಮಂತ್ರಿ ಮೋದಿ ಅವರು ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ರೈಲಿನ ಗುಲಾಬಿ ಮಾರ್ಗದ ಉದ್ಘಾಟನೆ ಹಾಗೂ ಮೈಸೂರಿನ ಚಾಮುಂಡಿ ಬೆಟ್ಟದ…

39 mins ago

ಓದುಗರ ಪತ್ರ: ಜನ ಮೆಚ್ಚುಗೆಗೆ ಪಾತ್ರವಾದ ಪಾಲಿಕೆ ಆಯುಕ್ತರ ಕರ್ತವ್ಯ ನಿಷ್ಠೆ

ಮೈಸೂರು ಮಹಾನಗರ ಪಾಲಿಕೆಯ ಆಯುಕ್ತೆ ಎಂ.ಕೆ. ಸವಿತಾ ಅವರ ಕಾರ್ಯವೈಖರಿ ಹಾಗೂ ಕರ್ತವ್ಯನಿಷ್ಠೆ ಸಹಜವಾಗಿ ನಗರವಾಸಿಗಳ ಗಮನಸೆಳೆದಿದೆ. ಅಧಿಕಾರಿಯೊಬ್ಬರು ತಮ್ಮ…

42 mins ago

ಸುಪ್ರೀಂಕೋರ್ಟ್ ಪೀಠಕ್ಕೆ ನಿಲ್ಲದ ತಮಿಳುನಾಡಿನ ಹೋರಾಟ

ದೆಹಲಿ ಕಣ್ಣೋಟ: ಶಿವಾಜಿ ಗಣೇಶನ್‌ ಅವರ ವಾರದ ಅಂಕಣ  ನಾಲ್ಕು ಸುಪ್ರೀಂ ಕೋರ್ಟ್ ಪೀಠಗಳ ಸ್ಥಾಪನೆಗೆ ಕಾನೂನು ಆಯೋಗದ ಶಿಫಾರಸ್ಸು …

48 mins ago

ನಿಗಮ, ಮಂಡಳಿ, ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ಹಲವರ ಕಣ್ಣು

ಕೆ.ಬಿ.ರಮೇಶನಾಯಕ ಎರಡು ವರ್ಷಗಳ ಅವಧಿ ಪೂರೈಸಿರುವ ಅಯೂಬ್ ಖಾನ್, ಡಾ.ಪುಷ್ಪ ಅಮರನಾಥ್ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಸ್ಥಾನಕ್ಕೆ…

54 mins ago