ದೆಹಲಿ ಕಣ್ಣೋಟ: ಶಿವಾಜಿ ಗಣೇಶನ್ ಅವರ ವಾರದ ಅಂಕಣ
ನಾಲ್ಕು ಸುಪ್ರೀಂ ಕೋರ್ಟ್ ಪೀಠಗಳ ಸ್ಥಾಪನೆಗೆ ಕಾನೂನು ಆಯೋಗದ ಶಿಫಾರಸ್ಸು
ʼನ್ಯಾಯದಾನ ವಿಳಂಬವಾದರೆ ನ್ಯಾಯವನ್ನೇ ನಿರಾಕರಿಸಿದಂತೆ’ ಎನ್ನುವ ಹತಾಶೆಯ ಮಾತು ಹಳೆಯದು. ಆದರೆ ಸುಪ್ರೀಂ ಕೋರ್ಟಿನ ಈಗಿನ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ಪ್ರಕಾರ ನ್ಯಾಯ ವಿಳಂಬ ನ್ಯಾಯವನ್ನು ನಿರಾಕರಿಸುವುದು ಮಾತ್ರವಲ್ಲದೆ ನ್ಯಾಯವನ್ನೇ ನಿರ್ನಾಮ ಮಾಡಿದಂತೆ. ಈ ವರ್ಷದ ಜನವರಿ ೨೪ರಂದು ಮುಂಬೈನಲ್ಲಿ ಸುಪ್ರೀಂ ಕೋರ್ಟಿನ ಹೆಸರಾಂತ ನ್ಯಾಯವಾದಿಯಾಗಿದ್ದ ದಿವಂಗತ ಫಾಲಿ ನಾರಿಮನ್ ಸ್ಮರಣಾರ್ಥ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ವ್ಯಕ್ತಪಡಿಸಿರುವ ಹೇಳಿಕೆ ಪತ್ರಿಕೆಗಳಲ್ಲಿ ವರದಿಯಾಗಿತ್ತು. ನ್ಯಾಯ ವಿಳಂಬದ ಬಗೆಗೆ ಜನಸಾಮಾನ್ಯರು ಮಾತನಾಡುವುದು ‘ ಗೆದ್ದವ್ನು ಸೋತ; ಸೋತವ್ನು ಸತ್ತ’ ಎನ್ನುವುದು. ಜನರು ವರ್ಷಗಟ್ಟಲೆ ನ್ಯಾಯಕ್ಕಾಗಿ ಅಲೆಯುವುದರಿಂದಾಗುವ ಸಮಯ ಹಾಳಾಗುವುದಲ್ಲದೆ ಹಣದ ವ್ಯಯದಿಂದ ಈ ಹತಾಶೆಯ ಮಾತು ಬರುವುದು ಸಹಜ.
ಇಂದು ನ್ಯಾಯಾಲಯಗಳಲ್ಲಿ ಇತ್ಯರ್ಥವಾಗದೆ ಉಳಿಯುತ್ತಿರುವ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಾ ಹೋಗುತ್ತಿವೆ. ಸುಪ್ರೀಂ ಕೋರ್ಟಿನಲ್ಲಿಯೇ ಕಳೆದ ವರ್ಷ ಲಭ್ಯವಾದ ಮಾಹಿತಿಯ ಪ್ರಕಾರ ೯೨,೦೦೦ಕ್ಕೂ ಹೆಚ್ಚು ಪ್ರಕರಣಗಳು ನ್ಯಾಯಕ್ಕಾಗಿ ಕಾದಿವೆ. ಸಾರ್ವಜನಿಕ ಜೀವನದಲ್ಲಿ ಅಗುವ ತಪ್ಪುಗಳು ಮತ್ತು ಕಾನೂನು ಬಾಹಿರ ಕ್ರಮಗಳಿಂದ ನ್ಯಾಯಕ್ಕಾಗಿ ಜನರು ನ್ಯಾಯಾಲಯದ ಮೆಟ್ಟಿಲುಗಳನ್ನು ಹತ್ತುವುದು ದಿನೇ ದಿನೇ ಹೆಚ್ಚಾಗುತ್ತಿದೆ. ಅದು ಹೈಕೋರ್ಟಿರಲಿ, ಸುಪ್ರೀಂ ಕೋರ್ಟ್ ಇರಲಿ ಕೆಲವರು ತಮಗಾಗಿರುವ ಅನ್ಯಾಯದ ವಿರುದ್ಧ ನ್ಯಾಯಕ್ಕಾಗಿ ನ್ಯಾಯಾಲಯದ ಮೊರೆ ಹೋಗುತ್ತಾರೆ. ಮತ್ತೆ ಕೆಲವರು ಸೋಲೊಪ್ಪದೆ ವೈಯಕ್ತಿಕ ಮತ್ತು ಸಾಮಾಜಿಕ ಪ್ರತಿಷ್ಠೆಗಾಗಿ ಮೇಲಿನ ನ್ಯಾಯಾಲಯಗಳಿಗೆ ಹೋಗುವುದು ಇಂದಿನ ವಿದ್ಯಮಾನ.
ನ್ಯಾಯಾಲಯಗಳಿಂದ ನ್ಯಾಯಪಡೆಯುವುದು ವಿಳಂಬ ಮಾತ್ರವಲ್ಲ ಖರ್ಚು ವೆಚ್ಚವನ್ನು ಗಮನಿಸಿದಾಗ ಅತ್ಯಂತ ದುಬಾರಿ ಕೂಡ. ಆದರೂ ನ್ಯಾಯಕ್ಕಾಗಿ ಅಂಗಲಾಚುವುದು ನೊಂದವರಿಗೆ ಅನಿವಾರ್ಯ. ಈ ವಿಳಂಬ ಮತ್ತು ದುಬಾರಿ ಖರ್ಚು ವೆಚ್ಚದ ಪರಿಣಾಮ ಸುಪ್ರೀಂಕೋರ್ಟ್ ಹೊರತುಪಡಿಸಿ ಹೈಕೋರ್ಟು ಮತ್ತು ಹೈಕೋರ್ಟು ಪೀಠಗಳು ಹಾಗೂ ಕೆಳಹಂತದ ನ್ಯಾಯಾಲಯಗಳು ದೇಶದಾದ್ಯಂತ ಸ್ಥಾಪನೆ ಆಗುತ್ತಲೇ ಇವೆ. ಆದರೆ ದೇಶದ ಆಡಳಿತ ಮತ್ತು ನಮ್ಮ ಸಾಮಾಜಿಕ ವ್ಯವಸ್ಥೆಗೆ ಸಂವಿಧಾನವು ಒಂದು ನ್ಯಾಯಾಂಗದ ಚೌಕಟ್ಟು ಕಲ್ಪಿಸಿರುವ ನಿಯಮಗಳನ್ನೂ ಮೀರಿದ ಪ್ರಕರಣಗಳ ವಿಶ್ಲೇಷಣೆ ಮಾಡಿ ನ್ಯಾಯ ನೀಡುವುದು ನಮ್ಮ ಅತ್ಯುನ್ನತ ನ್ಯಾಯಪೀಠವಾದ ಸುಪ್ರೀಂ ಕೋರ್ಟ್ ಎನ್ನುವುದು ಗೊತ್ತಿರುವ ಸಂಗತಿ. ನೂರ ನಲ್ವತ್ತು ಕೋಟಿಗೂ ಹೆಚ್ಚಿರುವ ಜನಸಂಖ್ಯೆಯ ೨೮ ರಾಜ್ಯಗಳು ಮತ್ತು ಎಂಟು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರ ಮತ್ತು ಸಾರ್ವಜನಿಕರು ಅವಲಂಬಿಸಿರುವುದು ದೇಶದ ರಾಜಧಾನಿ ನವದೆಹಲಿಯಲ್ಲಿರುವ ಸುಪ್ರೀಂ ಕೋರ್ಟನ್ನು ಮಾತ್ರ. ಪ್ರಮುಖ ಪ್ರಕರಣಗಳ ವಿಚಾರಣೆ ಮತ್ತು ನ್ಯಾಯಕ್ಕಾಗಿ ದಕ್ಷಿಣ ರಾಜ್ಯಗಳ ಜನರು ದೂರದ ದೆಹಲಿಗೆ ಹೋಗಿ ಬರುವುದು, ನಿತ್ಯ ಅನುಭವಿಸುವ ಕಷ್ಟ ಸಂಬಂಧಿಸಿದವರಿಗಷ್ಟೇ ಗೊತ್ತು. ಜೊತೆಗೆ ಸರ್ಕಾರದ ಪ್ರಕರಣಗಳಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ನಿರಂತರವಾಗಿ ನಷ್ಟ ಆಗುತ್ತಲೇ ಇದೆ. ಈ ಕಾರಣಕ್ಕಾಗಿ ಚೆನ್ನೈನಲ್ಲಿ ಸುಪ್ರೀಂ ಕೋರ್ಟ್ ಪೀಠವೊಂದನ್ನು ಸ್ಥಾಪಿಸಬೇಕೆನ್ನುವುದು ಮೂರೂವರೆ ದಶಕಗಳ ಬೇಡಿಕೆ. ೧೯೮೦ರಲ್ಲಿ ಅಂದಿನ ಮುಖ್ಯಮಂತ್ರಿ ಎಂ. ಕರುಣಾನಿಧಿ ತಮಿಳುನಾಡಿನಲ್ಲಿ ಸುಪ್ರೀಂ ಕೋರ್ಟ್ ಪೀಠ ಸ್ಥಾಪಿಸಬೇಕೆಂದು ಮಾಡಿದ ಒತ್ತಾಯ ಈಗಲೂ ನಿರಂತರವಾಗಿ ಕೇಳಿ ಬರುತ್ತಲೇ ಇದೆ.
ಈಗಿನ ಮುಖ್ಯಮಂತ್ರಿ ಸಿ.ಜೋಸೆಫ್ ವಿಜಯ್ ಈ ತಿಂಗಳ ೪ರಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರವೊಂದನ್ನು ಬರೆದು ಚೆನ್ನೈನಲ್ಲಿ ಸುಪ್ರೀಂ ಕೋರ್ಟಿನ ಪೀಠವೊಂದನ್ನು ಸ್ಥಾಪಿಸಬೇಕೆನ್ನುವ ತಮ್ಮ ರಾಜ್ಯದ ಬೇಡಿಕೆಯನ್ನು ಪುನರುಚ್ಚರಿಸಿದ್ದಾರೆ. ಇಷ್ಟು ಮಾತ್ರವಲ್ಲದೆ ಲೋಕಸಭೆಯಲ್ಲಿ ತಮಿಳುನಾಡಿನ ಸದಸ್ಯರು ಆಗಿಂದಾಗೆ ದಕ್ಷಿಣ ರಾಜ್ಯಗಳ ಪರವಾಗಿ ತಮ್ಮ ಈ ಬೇಡಿಕೆಯ ಸಂಬಂಧ ಪ್ರಶ್ನೆಗಳನ್ನು ಕೇಳುವುದು ಸಂಪ್ರದಾಯ ಎನ್ನುವಷ್ಟು ವಾಡಿಕೆಯಾಗಿಬಿಟ್ಟಿದೆ. ಸಿದ್ದರಾಮಯ್ಯ ಅವರೂ ಸೇರಿದಂತೆ ಕರ್ನಾಟಕದ ಹಿಂದಿನ ಕೆಲವು ಮುಖ್ಯಮಂತ್ರಿಗಳು ಸಾಂದರ್ಭಿಕವಾಗಿ ಈ ಬೇಡಿಕೆಗೆ ದನಿಗೂಡಿಸಿರುವುದನ್ನು ಬಿಟ್ಟರೆ ಬೇರೇನೂ ಆಗಿಲ್ಲ. ದಕ್ಷಿಣ ರಾಜ್ಯಗಳು ದೆಹಲಿಯಿಂದ ಸಾವಿರಾರು ಕಿ.ಮೀ. ದೂರದಲ್ಲಿರುವುದರಿಂದ ಸಂಬಂಧಿಸಿದ ಹೈಕೋರ್ಟಿನ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಬರುವ ಅರ್ಜಿದಾರರು ತಮ್ಮ ಪ್ರಕರಣಗಳು ಇತ್ಯರ್ಥವಾಗುವವರೆಗೂ ದೆಹಲಿಗೆ ಹೋಗಿ ಬರುವುದು, ಅಲ್ಲಿ ಉಳಿದುಕೊಳ್ಳುವುದಕ್ಕೆ ಆಗುವ ದುಬಾರಿ ಖರ್ಚು ಮಾಡುವುದು ಕಷ್ಟವಾಗುತ್ತಿರುವುದು ಕೇಂದ್ರ ಸರ್ಕಾರ ಮತ್ತು ಸುಪ್ರೀಂ ಕೋರ್ಟಿಗೂ ಗೊತ್ತಿರುವ ಸಂಗತಿ. ಚೆನ್ನೈಯಲ್ಲಿ ಸುಪ್ರೀಂ ಕೋರ್ಟ್ ಪೀಠ ಸ್ಥಾಪಿಸಿದರೆ ಅದಕ್ಕೆ ಬೇಕಾಗುವ ನಿವೇಶನ ಮತ್ತು ಸಿಬ್ಬಂದಿಯ ವಸತಿಗಳ ನಿರ್ಮಾಣದಲ್ಲಿ ರಾಜ್ಯ ಸರ್ಕಾರವು ತನ್ನ ಪಾಲಿನ ಹೊರೆಯನ್ನು ಹೊತ್ತುಕೊಳ್ಳಲು ಸಿದ್ಧವಿರುವುದಾಗಿ ಮುಖ್ಯಮಂತ್ರಿ ಜೋಸೆಫ್ ವಿಜಯ್ ತಮ್ಮ ಪತ್ರದಲ್ಲಿ ಕೇಂದ್ರ ಸರ್ಕಾರಕ್ಕೆ ತಿಳಿಸಿದ್ದಾರೆ.
ವರ್ಷದ ಆರಂಭದಲ್ಲಿ ಲೋಕಸಭೆಯ ಡಿಎಂಕೆ ಸದಸ್ಯ ವೈದ್ಯಲಿಂಗಂ ಕೇಳಿದ ಲಿಖಿತ ಪ್ರಶ್ನೆಗೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ಅರ್ಜುನ್ ಮೇಘವಾಲ್, ಈ ವರ್ಷದ ಫೆಬ್ರವರಿ ೬ರಂದು ಉತ್ತರಿಸಿದ್ದಾರೆ. ಸಂವಿಧಾನದ ವಿಧಿ ೧೩೦ರ ಪ್ರಕಾರ ರಾಷ್ಟ್ರಪತಿಗಳ ಅನುಮತಿಯ ಮೇರೆಗೆ ದೆಹಲಿ ಮತ್ತು ದೇಶದ ಇತರೆ ಭಾಗಗಳಲ್ಲಿ ಸುಪ್ರೀಂ ಕೋರ್ಟಿನ ವಿಚಾರಣೆಗಳನ್ನು ನಡೆಸುವ ಅಧಿಕಾರ ಹೊಂದಿದ್ದಾರೆ. ಹಾಗೆಯೇ ಹತ್ತು ಮತ್ತು ಹನ್ನೊಂದು ಮತ್ತು ಹದಿನೆಂಟನೇ ಕಾನೂನು ಆಯೋಗವು ತನ್ನ ಮೂರು ವರದಿಗಳಲ್ಲಿಯೂ ಉತ್ತರ ಭಾರತಕ್ಕೆ ಅನುಕೂಲವಾಗಲು ದೆಹಲಿ, ದಕ್ಷಿಣ ಭಾರತದ ರಾಜ್ಯಗಳಿಗೆ ಅನುಕೂಲವಾಗಲು ಚೆನ್ನೈ ಅಥವಾ ಹೈದರಾಬಾದ್, ಪಶ್ಚಿಮ ಭಾಗದಲ್ಲಿ ಕೋಲ್ಕತ್ತ, ಪೂರ್ವದಿಕ್ಕಿನ ರಾಜ್ಯಗಳಿಗೆ ಮುಂಬೈನಲ್ಲಿ ಸುಪ್ರೀಂ ಕೋರ್ಟ್ ಪೀಠಗಳನ್ನು ಸ್ಥಾಪಿಸಬಹುದು ಎಂದು ಶಿಫಾರಸ್ಸು ಮಾಡಿದೆ.
ಈ ಸಂಬಂಧದ ಸಂಸದೀಯ ವ್ಯವಹಾರಗಳ ಸಮಿತಿಯೂ ಇದೇ ಶಿಫಾರಸ್ಸುಗಳನ್ನು ಪುನರುಚ್ಚರಿಸಿದೆ. ದುರದೃಷ್ಟಕರ ಸಂಗತಿ ಎಂದರೆ ೨೦೧೦ರಲ್ಲಿ ಸುಪ್ರೀಂ ಕೋರ್ಟಿನ ಪೂರ್ಣ ಪ್ರಮಾಣದ ನ್ಯಾಯಪೀಠವು ಆ ವರ್ಷದ ಫೆಬ್ರವರಿ ೧೮ರಂದು ನಡೆದು ಸುಪ್ರೀಂ ಕೋರ್ಟಿನ ಪೀಠಗಳನ್ನು ಸ್ಥಾಪಿಸುವ ಪ್ರಸ್ತಾವನೆಯನ್ನು ತಳ್ಳಿಹಾಕಿರುವುದು ಈಗ ಹೊಸ ಪೀಠಗಳ ರಚನೆಗೆ ಅಡ್ಡಿಯಾಗಿದೆ ಎನ್ನುವ ವಾದ.
ದೆಹಲಿಯಲ್ಲಿರುವ ಸುಪ್ರೀಂ ಕೋರ್ಟ್ ಸಂವಿಧಾನದ ಬಿಕ್ಕಟ್ಟುಗಳ ವಿಶ್ಲೇಷಣೆ ಮತ್ತು ಅವುಗಳಿಗೆ ಸಂಬಂಽಸಿದಂತೆ ಬರುವ ಸಮಸ್ಯೆಗಳನ್ನು ಇತ್ಯರ್ಥಪಡಿಸಲಿ. ಉಳಿದ ಪ್ರಾದೇಶಿಕ ನ್ಯಾಯಪೀಠಗಳು ಹೈಕೋರ್ಟ್ ತೀರ್ಪುಗಳ ವಿರುದ್ಧ ಮತ್ತು ಅವುಗಳನ್ನು ಪ್ರಶ್ನಿಸುವ ಮೇಲ್ಮನವಿಗಳ ವಿಚಾರಣೆ ನಡೆಸಲಿ ಎನ್ನುವುದು ಕಾನೂನು ಆಯೋಗದ ಅಭಿಪ್ರಾಯ. ಲೋಕಸಭೆಯಲ್ಲಿ ತಮಿಳುನಾಡಿನ ಡಿಎಂಕೆ ಸದಸ್ಯ ವೈದ್ಯಲಿಂಗಂ ಮತ್ತು ತೆಲಂಗಾಣದ ಡಾ. ಗದ್ದಂ ರಣಜಿತ್ ರೆಡ್ಡಿ ಅವರು ಮಂಡಿಸಿದ ಖಾಸಗಿ ಮಸೂದೆಗೆ ಸಂಬಂಧಿಸಿದಂತೆ ರಾಷ್ಟ್ರಪತಿಗಳ ಪರಿಶೀಲನೆಗೆ ಕಳುಹಿಸುವುದಾಗಿ ೨೦೨೨ರಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜುಜು ಭರವಸೆಯನ್ನಷ್ಟೇ ನೀಡಲು ಸಾಧ್ಯವಾಗಿದೆ. ದಕ್ಷಿಣ ರಾಜ್ಯಗಳ ಈ ಬೇಡಿಕೆ ಈಡೇರಲು ಸುಪ್ರೀಂ ಕೋರ್ಟಿನ ನಿರ್ಧಾರ ಬದಲಾಗಬೇಕಿದೆ. ಅದು ಎಂದು ಆಗಲಿದೆ ಎನ್ನುವುದರ ಮೇಲೆ ಸುಪ್ರೀಂ ಕೋರ್ಟಿನ ಪ್ರಾದೇಶಿಕ ಪೀಠಗಳ ಕನಸು ನನಸಾಗಲಿದೆ.
” ದೆಹಲಿಯಲ್ಲಿರುವ ಸುಪ್ರೀಂ ಕೋರ್ಟ್ ಸಂವಿಧಾನದ ಬಿಕ್ಕಟ್ಟುಗಳ ವಿಶ್ಲೇಷಣೆ ಮತ್ತು ಅವುಗಳಿಗೆ ಸಂಬಂಧಿಸಿದಂತೆ ಬರುವ ಸಮಸ್ಯೆಗಳನ್ನು ಇತ್ಯರ್ಥಪಡಿಸಲಿ. ಉಳಿದ ಪ್ರಾದೇಶಿಕ ನ್ಯಾಯಪೀಠಗಳು ಹೈಕೋರ್ಟ್ ತೀರ್ಪುಗಳ ವಿರುದ್ಧ ಮತ್ತು ಅವುಗಳನ್ನು ಪ್ರಶ್ನಿಸುವ ಮೇಲ್ಮನವಿಗಳ ವಿಚಾರಣೆ ನಡೆಸಲಿ ಎನ್ನುವುದು ಕಾನೂನು ಆಯೋಗದ ಅಭಿಪ್ರಾಯ”
ಸ್ವಚ್ಛತಾ ಪಟ್ಟಿಯಲ್ಲಿ ರಾಜ್ಯದಲ್ಲಿ ಮೈಸೂರು ಮಕುಟ ಧರಿಸಿರುವುದು ಹೆಮ್ಮೆಯ ಸಂಗತಿಯಾದರೂ ಶೇ.೯೦ಕ್ಕೂ ಹೆಚ್ಚು ನಗರಗಳಲ್ಲಿ ಇಂದಿಗೂ ಕಸದ ನಿರ್ವಹಣೆ ಸಮರ್ಪಕವಾಗಿಲ್ಲದಿರುವುದು…
ಪ್ರಧಾನ ಮಂತ್ರಿ ಮೋದಿ ಅವರು ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ರೈಲಿನ ಗುಲಾಬಿ ಮಾರ್ಗದ ಉದ್ಘಾಟನೆ ಹಾಗೂ ಮೈಸೂರಿನ ಚಾಮುಂಡಿ ಬೆಟ್ಟದ…
ಮೈಸೂರು ಮಹಾನಗರ ಪಾಲಿಕೆಯ ಆಯುಕ್ತೆ ಎಂ.ಕೆ. ಸವಿತಾ ಅವರ ಕಾರ್ಯವೈಖರಿ ಹಾಗೂ ಕರ್ತವ್ಯನಿಷ್ಠೆ ಸಹಜವಾಗಿ ನಗರವಾಸಿಗಳ ಗಮನಸೆಳೆದಿದೆ. ಅಧಿಕಾರಿಯೊಬ್ಬರು ತಮ್ಮ…
ಕೆ.ಬಿ.ರಮೇಶನಾಯಕ ಎರಡು ವರ್ಷಗಳ ಅವಧಿ ಪೂರೈಸಿರುವ ಅಯೂಬ್ ಖಾನ್, ಡಾ.ಪುಷ್ಪ ಅಮರನಾಥ್ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಸ್ಥಾನಕ್ಕೆ…
ಎಸ್.ಉಮೇಶ ಚಿರತೆ ಸೆರೆಗೆ ವಿಶೇಷ ಕಾರ್ಯಪಡೆ ರಚಿಸಲು ಗ್ರಾಮಸ್ಥರ ಒತ್ತಾಯ ಹಲಗೂರು: ಗ್ರಾಮೀಣ ಪ್ರದೇಶಗಳಲ್ಲಿ ಚಿರತೆಗಳ ಹಾವಳಿ ದಿನದಿಂದ ದಿನಕ್ಕೆ…
ಸಿರಿ ಮೈಸೂರು ಸಾಮಾನ್ಯವಾಗಿ ನಾವು ಯಾವುದಾದರೂ ಹೊರಗಿನ ನಗರಕ್ಕೆ, ದೇಶಕ್ಕೆ ಹೋಗಿ ಬಂದು ಅಲ್ಲಿನ ಜನರು, ಸಂಸ್ಕೃತಿ, ಅಭ್ಯಾಸಗಳನ್ನು ಹೊಗಳಿದರೆ…