ಸಿರಿ ಮೈಸೂರು
ಸಾಮಾನ್ಯವಾಗಿ ನಾವು ಯಾವುದಾದರೂ ಹೊರಗಿನ ನಗರಕ್ಕೆ, ದೇಶಕ್ಕೆ ಹೋಗಿ ಬಂದು ಅಲ್ಲಿನ ಜನರು, ಸಂಸ್ಕೃತಿ, ಅಭ್ಯಾಸಗಳನ್ನು ಹೊಗಳಿದರೆ ನಮ್ಮ ಜನರು ಅದೆಷ್ಟು ಮೂಗು ಮುರಿಯುತ್ತಾರೆ ಎಂಬುದನ್ನು ಎಲ್ಲರೂ ನೋಡಿರುತ್ತಾರೆ. ‘ಓಹ್! ಅಲ್ಲಿಗೆ ಹೋಗಿ ಬಂದೆ ಅಂತ ನೀನು ದಿನಾ ಇರೋ ಜಾಗದ ಬಗ್ಗೆ ಹೀಗೆಲ್ಲಾ ಮಾತಾಡ್ತಿ ದೀಯಾ? ಎಷ್ಟೇ ಆದ್ರೂ ನೀನು ಇಲ್ಲೇ ಇರ್ಬೇಕು. ಎಚ್ಚರ!’ ಎಂಬ ಮಾತುಗಳು ಸಾಮಾನ್ಯ. ಆದರೆ ಅಸಲಿಗೆ ನಾವು ಹೊರಗೆ ಹೋದಾಗ ಒಳ್ಳೆಯ ವಿಷಯಗಳನ್ನು ನೋಡಿ, ಅನುಭವಿಸಿ, ತಿಳಿದುಕೊಂಡು ಅದನ್ನು ನಮ್ಮ ಜಾಗದಲ್ಲೂ ಅಳವಡಿಸಿದರೆ ಚೆನ್ನಾಗಿರುತ್ತದೆ ಎಂದುಕೊಂಡರೆ ತಪ್ಪೇನು? ನಮ್ಮ ನಗರ ಇನ್ನೂ ಸುಂದರವಾಗಲಿ ಎಂಬುದಷ್ಟೇ ಅದರ ಹಿಂದಿನ ಉದ್ದೇಶ ಅಲ್ಲವೇ? ನನಗೂ ಇಂತಹದ್ದೇ ಅನುಭವ ಕೆಲವು ದಿನಗಳ ಹಿಂದೆ ಆಯಿತು.
ನಾನು ಒಂದು ಕಾರ್ಯಕ್ರಮಕ್ಕೆ ಹಾಜರಾಗಲು ದೂರದ ಲಂಡನ್ಗೆ ತೆರಳಿದ್ದೆ. ಪ್ರವಾಸೋದ್ಯಮ, ಆತಿಥ್ಯಕ್ಷೇತ್ರವನ್ನೇ ಮುಖ್ಯ ಆದಾಯದ ಮೂಲವಾಗಿ ಇಟ್ಟುಕೊಂಡಿರುವ ಲಂಡನ್ನಲ್ಲಿ ಈ ಕಾರ್ಯಕ್ರಮ ನಡೆಯುವುದು ಬಹಳ ಸೂಕ್ತ. ಇದು ವರ್ಲ್ಡ್ ಟ್ರಾವೆಲ್ ಮಾರ್ಕೆಟ್. ಪ್ರಪಂಚದ ಬೇರೆ ಬೇರೆ ಸ್ಥಳಗಳಲ್ಲಿ ಈ ಇವೆಂಟ್ ನಡೆಯುತ್ತದೆ. ಈ ಕಾರ್ಯಕ್ರಮ ಅದೆಷ್ಟು ಅಚ್ಚುಕಟ್ಟಾಗಿ, ಉತ್ತಮವಾಗಿ ನಡೆಯುತ್ತದೆ ಎಂದರೆ, ಇದನ್ನು ನೋಡಿ ನನಗೆ ಮೈಸೂರು ಬಿಟ್ಟೂ ಬಿಡದೆ ನೆನಪಾಯಿತು. ಮೊದಲಿಗೆ ಲಂಡನ್ನ ವರ್ಲ್ಡ್ ಟ್ರಾವೆಲ್ ಮಾರ್ಕೆಟ್ ನಡೆಯುವುದು ನವೆಂಬರ್ ತಿಂಗಳಲ್ಲಿ. ಪ್ರತಿ ವರ್ಷ ತಪ್ಪದೆ ಅದೇ ಸಮಯಕ್ಕೆ ಇದನ್ನು ಆಯೋಜನೆ ಮಾಡುತ್ತಾರೆ. ಇವರ ಮುಂದಾಲೋ ಚನೆ ಎಷ್ಟೆಂದರೆ, ಮೂರು ದಿನಗಳ ಈ ಕಾರ್ಯಕ್ರಮದ ಕೊನೆಯ ದಿನ ಮುಂದಿನ ವರ್ಷದ ವರ್ಲ್ಡ್ ಟ್ರಾವೆಲ್ ಮಾರ್ಕೆಟ್ ದಿನಾಂಕವನ್ನೂ ಘೋಷಿಸಿಬಿಡುತ್ತಾರೆ. ಇಲ್ಲಿಗೆ ೫೦ ಸಾವಿರಕ್ಕೂ ಹೆಚ್ಚು ಜನರು ಬರುತ್ತಾರೆ. ಏಷ್ಯಾ, ಯುರೋಪ್, ಆಫ್ರಿಕಾ ಇತ್ಯಾದಿ ಎಲ್ಲಾ ಖಂಡಗಳಿಗಾಗಿ ನಿಗದಿತ ಹಾಲ್ಗಳಿರುತ್ತವೆ. ಅಲ್ಲಿ ಆಯಾ ದೇಶಗಳ ಮಳಿಗೆಗಳು. ಈ ಕಾರ್ಯಕ್ರಮ ನಡೆಯುವುದು ಎಕ್ಸೆಲ್ ಲಂಡನ್ ಎಂಬ ಒಂದು ಸ್ಥಳದಲ್ಲಿ. ಇದು ಒಂದು ರೀತಿ ಕನ್ವೆನ್ಷನ್ ಸೆಂಟರ್. ನಗರದ ಹೃದಯ ಭಾಗದಿಂದ ಈ ಜಾಗ ಹೆಚ್ಚೂ ಕಡಿಮೆ ೪೦ ನಿಮಿಷಗಳಷ್ಟು ಪ್ರಯಾಣದ ದೂರದಲ್ಲಿದೆ. ಒಮ್ಮೆ ಇಲ್ಲಿ ಒಳಗೆ ಪ್ರವೇಶ ಮಾಡಿಬಿಟ್ಟರೆ ಸುಸಜ್ಜಿತ ಆಹಾರ ಮಳಿಗೆಗಳು, ಶೌಚಾಲಯಗಳು, ಮೀಟಿಂಗ್ ಲಾಂಜ್ಗಳು.. ಏನುಂಟು ಏನಿಲ್ಲ! ಹಾಗೆಂದ ಮಾತ್ರಕ್ಕೆ ಇಲ್ಲಿಗೆ ಎಲ್ಲರೂ ಬರುವಂತಿಲ್ಲ. ತಿಂಗಳುಗಳ ಮೊದಲೇ ಆನ್ಲೈನ್ ಮೂಲಕ ನೋಂದಣಿ ಮಾಡಿಕೊಂಡಿ ರಬೇಕು. ವಿವಿಧ ಫೋಟೋ ಬೂತ್ಗಳು, ವೇದಿಕೆಗಳು, ಚರ್ಚಾ ಕಾರ್ಯಕ್ರಮಗಳು.. ಹೀಗೆ ಎಲ್ಲವೂ ಇಲ್ಲಿ ನೋಡಲು ಲಭ್ಯ.
ಸಾವಿರದ ಲೆಕ್ಕದಲ್ಲಿ ಜನರು ಬರುವ ಇಂತಹ ಕಾರ್ಯಕ್ರಮಕ್ಕೆ ಒಂದು ವರ್ಷದ ಹಿಂದೆಯೇ ತಯಾರಿ ಮಾಡಲು ಶುರು ಮಾಡು ವಾಗ ಲಕ್ಷಾಂತರ ಜನರು ಬರುವ ನಮ್ಮ ದಸರಾ ಹಬ್ಬಕ್ಕೆ ಒಂದು ವರ್ಷದ ಹಿಂದೆಯಿಂದ ತಯಾರಿ ಬೇಡವೇ? ನಮ್ಮ ಹಬ್ಬಕ್ಕಂತೂ ದಿನಾಂಕ ನಿಗದಿ ಮಾಡುವ ಗೋಜಿಲ್ಲ. ಅದೇ ನಿಗದಿಯಾಗುತ್ತದೆ. ಆದ್ದರಿಂದ ಒಂದು ವರ್ಷ ಹಿಂದೆಯಿಂದಲೇ ಸ್ವಲ್ಪ ನಿಗಾವಹಿಸಿ ಅಗತ್ಯ ಕಾರ್ಯಕ್ರಮಗಳ ರೂಪುರೇಷೆ ಸೇರಿದಂತೆ ಇನ್ನಿತರ ಅಗತ್ಯ ಸಂಗತಿಗಳನ್ನು ತಯಾರು ಮಾಡಿಕೊಂಡು ಎಲ್ಲವನ್ನೂ ಸುಸಜ್ಜಿತವಾಗಿರುವಂತೆ ನೋಡಿಕೊಂಡರೆ ದಸರಾ ವೇಳೆ ಆಗುವ ಯಾವ ಗೊಂದಲಗಳೂ ಆಗುವುದಿಲ್ಲ. ಇದಕ್ಕೆಲ್ಲಾ ಒಂದು ಪ್ರತ್ಯೇಕ ತಂಡ ಬೇಕು. ಅದೂ ಕೂಡ ಈ ರೀತಿ ಕಾರ್ಯಕ್ರಮಗಳ ಆಯೋಜನೆ ಮಾಡಿರುವ ಅನುಭವ ಇರುವವರೇ ಹೊರತು ಅಧಿಕಾರಿಗಳಲ್ಲ. ಅಧಿಕಾರಿಗಳು ಏನಿದ್ದರೂ ಮೇಲ್ವಿಚಾರಣೆ ಅಷ್ಟೇ. ದಸರಾ ಆಚರಣೆ ಸಮಿತಿ/ಪ್ರಾಧಿಕಾರ ಎಂಬುದೊಂದನ್ನು ಮಾಡಿ ಎಲ್ಲ ಜವಾಬ್ದಾರಿಯನ್ನೂ ಅವರಿಗೆ ವಹಿಸಿಬಿಟ್ಟರೆ ಎಲ್ಲವೂ ಸುಲಭವೇ ಆಗುತ್ತದೆ. ಆದರೆ ಇದಕ್ಕೆ ಈವರೆಗೂ ಏಕೆ ಮುಂದಡಿ ಇಟ್ಟಿಲ್ಲ ಎಂಬುದು ತಿಳಿಯದು. ಅಲ್ಲದೆ ಇಂತಹ ಒಂದು ಕನ್ವೆನ್ಷನ್ ಸೆಂಟರ್ ಮಾಡಿ ವರ್ಷವಿಡೀ ಕಾರ್ಯಕ್ರಮಗಳನ್ನು ನಡೆಸಿದರೆ ನಮ್ಮ ನಗರದ ಆರ್ಥಿಕತೆಗೂ ಒಳ್ಳೆಯದು, ಪ್ರಚಾರಕ್ಕೂ ಒಳ್ಳೆಯದು.
ದಸರಾ ಆಚರಣೆ ಹೊರತುಪಡಿಸಿ ಸಾಮಾನ್ಯವಾಗಿ ಪ್ರವಾಸೋದ್ಯಮ ಹಾಗೂ ಆತಿಥ್ಯ ಕ್ಷೇತ್ರದ ಬಗ್ಗೆ ಹೇಳುವುದಾದರೆ, ನಮ್ಮಲ್ಲಿ ಇರುವಷ್ಟು ಐತಿಹಾಸಿಕ, ಪ್ರವಾಸೋದ್ಯಮ ಸಂಪತ್ತು ಮತ್ತೆಲ್ಲೂ ಇಲ್ಲ. ಲಂಡನ್ನಲ್ಲಿ ಕಾಣಸಿಗುವಂತೆ ಹಳೇ ಕಟ್ಟಡಗಳು, ಗ್ರಂಥಾಲಯಗಳು, ಮ್ಯೂಸಿಯಂಗಳು, ಸುತ್ತಮುತ್ತ ಹಳ್ಳಿಗಳು, ನೈಸರ್ಗಿಕ ಸಂಪತ್ತು..ಎಲ್ಲವೂ ನಮ್ಮಲ್ಲೂ ಇವೆ. ಆದರೆ ನಾವು ಜನರಿಗೆ ಅದನ್ನು ತಲುಪಿಸುವಲ್ಲಿ ಸೋತಿದ್ದೇವೆ. ಲಂಡನ್ನಲ್ಲಿ ನಗರದ ಯಾವ ಮೂಲೆಯಲ್ಲಿ ನಿಂತರೂ ೧೦-೧೫ ನಿಮಿಷಕ್ಕೆ ಒಂದರಂತೆ ಸೈಟ್ ಸೀಯಿಂಗ್ ಬಸ್ಗಳು ಸಿಗುತ್ತವೆ. ಒಳಗೆ ಹೋದರೆ ಆಡಿಯೋ ಗೈಡ್ಗಳು, ಅದನ್ನು ಕೇಳಲು ಇಯರ್ ಫೋನ್, ಕೈಲಿ ಹಿಡಿದು ನೋಡುವ ನಕ್ಷೆ ಎಲ್ಲವೂ ಲಭ್ಯ. ಒಂದೊಂದು ಪ್ರವಾಸಿ ಸ್ಥಳಕ್ಕೆ ಹೋದರೂ ಅಲ್ಲಿ ಇಂತಹದ್ದೇ ವ್ಯವಸ್ಥೆಗಳನ್ನು ಕಾಣಬಹುದು. ಇದರಿಂದ ಸರಾಗವಾಗಿ ಒಂದೊಂದು ಸ್ಥಳದಲ್ಲೂ ಕನಿಷ್ಠ ೧ ಗಂಟೆ ಸಮಯ ಕಳೆಯಬಹುದು. ಜೊತೆಗೆ ಸೋವೆನಿರ್ ಅಂಗಡಿಗಳು, ಎಲ್ಲ ಕಡೆಗೂ ಸಾಕಷ್ಟು ಸಾರಿಗೆ ವ್ಯವಸ್ಥೆ ಸೇರಿದಂತೆ ಏನು ಬೇಕೋ ಎಲ್ಲವೂ ಇವೆ. ನಮ್ಮ ಮೈಸೂರಿನಲ್ಲಿ ಇದಕ್ಕೂ ಮೀರಿದ ನೈಸರ್ಗಿಕ ಸಂಪತ್ತಿದೆ, ಇತಿಹಾಸ ಇದೆ. ಜನರು ನೋಡಿ, ಅನುಭವಿಸಿ ತಿಳಿದುಕೊಳ್ಳಬೇಕಾದ ಸಂಗತಿಗಳಿವೆ. ಆದರೆ ಅದನ್ನು ಜನರಿಗೆ ತಲುಪಿಸುವ ಆಸ್ಥೆ, ಚಾಕಚಕ್ಯತೆ ಬೇಕಷ್ಟೇ. ಈಗಲೂ ಖಾಸಗಿ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ತಂತ್ರಜ್ಞಾನ ಬಳಸಿಕೊಂಡು ಲಂಡನ್ ನಂತಹ ದೊಡ್ಡ ನಗರ ಗಳಿಂದ ಪ್ರೇರಣೆ ಪಡೆದುಕೊಂಡು ಈ ನಿಟ್ಟಿನಲ್ಲಿ ಸಂಬಂಧಪಟ್ಟವರು ಯೋಚಿ ಸಿದರೆ ನಮ್ಮ ಮೈಸೂರು ಓವರ್ ಟೂರಿಸಂಗೆ ಬಲಿಯಾಗುವ ಬದಲು ಪ್ರವಾ ಸೋದ್ಯಮದ ಮುಖೇನ ಇನ್ನಷ್ಟು ಅಭಿವೃದ್ಧಿಯಾಗುವುದರ ಅನುಮಾನವೇ ಇಲ್ಲ.
” ಲಂಡನ್ನಲ್ಲಿ ಕಾಣಸಿಗುವಂತೆ ಹಳೇ ಕಟ್ಟಡಗಳು, ಗ್ರಂಥಾಲಯಗಳು, ಮ್ಯೂಸಿಯಂಗಳು, ಸುತ್ತಮುತ್ತ ಹಳ್ಳಿಗಳು, ನೈಸರ್ಗಿಕ ಸಂಪತ್ತು ಎಲ್ಲವೂ ನಮ್ಮ ಮೈಸೂರಲ್ಲೂ ಇವೆ. ಆದರೆ ನಾವು ಜನರಿಗೆ ಅದನ್ನು ತಲುಪಿಸುವಲ್ಲಿ ಸೋತಿದ್ದೇವೆ”
ಭಾರತಿ ಬಿ.ವಿ. ಕೇರಳಂ ರಾಜ್ಯದ ಕೊಚ್ಚಿ ಸಾಗರಿಕಾ ಬಂದರಿಗೆ ಕಾಲಿಟ್ಟಾಗ ಅಲ್ಲಿನ ಜನಸಂದಣಿ ಕಂಡು ಬೆಚ್ಚಿಬಿದ್ದಿದ್ದೆ! ೨೫೦೦ ಜನರಿಗೆ ಈ…
ಅಕ್ಷತಾ ಸಾಬ್ರ ಹುಡುಗಿ ದೇವಿ ವೇಷ ಹಾಕ್ತಾಳಂತೆ! ಮಡಿ ಮೈಲಿಗೆ ಎಷ್ಟ್ರ ಮಟ್ಟಿಗೆ ಮಾಡ್ತಾರೋ? ಮಾಂಸ ಮಡ್ಡಿ ತಿನ್ನೋರಿಗೆ ದೇವಿ…
ನವದೆಹಲಿ: ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ರೂಪುಗೊಳ್ಳುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿರುವುದಾಗಿ ವರದಿಯಾಗಿದೆ. ಆಗ್ನೇಯ ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ…
ತಮಿಳುನಾಡು: ಇಲ್ಲಿನ ಕಡಲೂರು ಜಿಲ್ಲೆಯಲ್ಲಿ ಹಕ್ಕಿಜ್ವರ ದೃಢಪಟ್ಟಿರುವುದಾಗಿ ವರದಿಯಾಗಿದೆ. ಅಕ್ಟೋಬರ್ 30ರಿಂದ ನವೆಂಬರ್ 13ರವರೆಗೆ ಒಟ್ಟು 35,647 ಕೋಳಿಗಳು ಸಾವನ್ನಪ್ಪಿವೆ…
ದೆಹಲಿ: ಇಲ್ಲಿನ ರಾಮಲೀಲಾ ಮೈದಾನದಲ್ಲಿ ನಡೆಯುವ ಪ್ರತಿಭಟನೆ, ಸಮಾವೇಶ ಹಾಗೂ ಸಾರ್ವಜನಿಕ ಸಭೆಗಳಿಗೆ ಹೊಸ ಮಾರ್ಗಸೂಚಿಗಳನ್ನು ದೆಹಲಿ ಪೊಲೀಸರು ಪ್ರಕಟಿಸಿರುವುದಾಗಿ…