ಅಕ್ಷತಾ
ಸಾಬ್ರ ಹುಡುಗಿ ದೇವಿ ವೇಷ ಹಾಕ್ತಾಳಂತೆ! ಮಡಿ ಮೈಲಿಗೆ ಎಷ್ಟ್ರ ಮಟ್ಟಿಗೆ ಮಾಡ್ತಾರೋ? ಮಾಂಸ ಮಡ್ಡಿ ತಿನ್ನೋರಿಗೆ ದೇವಿ ಪಾತ್ರ ಒಲಿಯುತ್ತಾ!? ಇದೆಲ್ಲ ಸುಮ್ನೆ ಹೇಳ್ತಾರೆ ಅಷ್ಟೇ’- ಇವು ಇತ್ತೀಚೆಗೆ ಕರಾವಳಿ ಭಾಗದಲ್ಲಿ ತರುಣಿಯೊಬ್ಬಳ ಸುತ್ತ ಸುತ್ತಿದ ಹಲವು ಮಾತುಗಳು. ಯಾಕೆ ಆಕೆಯ ಬಗ್ಗೆ ಅಷ್ಟೊಂದು ಮಾತುಗಳು? ದೇವಿ ಪಾತ್ರದ ಕುರಿತಾಗಿಯೇ ಯಾಕಿಷ್ಟು ಚರ್ಚೆ? ಎಲ್ಲಕ್ಕೂ ಕೇಂದ್ರಬಿಂದು ಅವಳಿಗಿಂತಲೂ ಅವಳ ಧರ್ಮ! ಮುಸ್ಲಿಂ ಯುವತಿ ರಂಗಸ್ಥಳದಲ್ಲಿ ದೇವಿಯ ಪಾತ್ರ ಅದರಲ್ಲೂ ಅಷ್ಟಭುಜೆ ದೇವಿಯಾಗಿ ಬರುತ್ತಾಳೆ ಎಂದಾಗ ಪರ-ವಿರೋಧ, ಕುಹಕಗಳು ಸಾಕಷ್ಟು ಕೇಳಿಬಂತು. ಆದರೆ ಇವನ್ನೆಲ್ಲ ಸವಾಲಾಗಿ ಸ್ವೀಕರಿಸಿದ ಯುವತಿ ಮಾತ್ರ ರಂಗಸ್ಥಳದಲ್ಲಿ ಅಷ್ಟಭುಜೆ ದೇವಿಯಾಗಿಯೇ ಪಾತ್ರಕ್ಕೆ ಜೀವ ತುಂಬಿದಳು. ಆರು ತಿಂಗಳು ಕಾಲ ಪಾತ್ರಕ್ಕೆ ಅಗತ್ಯವಾದ ನಿಷಿದ್ಧ ವ್ರತಾಚರಣೆಗಳನ್ನು ಅನುಸರಿಸಿ ಅವಳು ಚೌಕಿಯಲ್ಲಿ ಬಣ್ಣ ಹಚ್ಚುವ ಹೊತ್ತು ಸುತ್ತಲೂ ಉಸಿರಾಡಲು ಆಗದಷ್ಟು ಜನ! ಧರ್ಮಗಳು ಹೇಗೆ ಅನಿಯಂತ್ರಿತ ಗೆರೆಯನ್ನು ಎಳೆದುಬಿಡುತ್ತವೆ ಎಂಬುದಕ್ಕೆ ಒಂದು ಉದಾಹರಣೆಯೂ ಹೌದು. ಆದರೆ ಹೀಗಿರುವ ಪರಿಧಿಯನ್ನೊಮ್ಮೆ ದಾಟುವ ಧೈರ್ಯ ಮಾಡಿದರೆ ಹೇಗಿರುತ್ತೆ ಎನ್ನುವುದಕ್ಕೆ ಸಾಕ್ಷಿಯಾಗಿ ನಿಂತಿದ್ದಾಳೆ ಕರಾವಳಿಯ ಯುವತಿ. ದೇಶದ ಗಮನ ಸೆಳೆದಾಕೆ ಧರ್ಮ ಸೀಮಿತ ಕಲೆಯ ಮಡಿವಂತಿಕೆಯ ಚೌಕಟ್ಟನ್ನು ಮೀರಿ ಕಲೆಗೆ ಧರ್ಮ ಇಲ್ಲವೆಂದು ತೋರಿಸಿಕೊಟ್ಟಿದ್ದಾಳೆ.
ಹೆಸರು ಆರ್ಷಿಯಾ ಖಾನ್. ಮೂವತ್ತರ ಆಸುಪಾಸಿನ ಮುಸ್ಲಿಂ ತರುಣಿ. ಹುಟ್ಟಿದ್ದು ದಕ್ಷಿಣಕನ್ನಡ ಜಿಲ್ಲೆಯ ವಿಟ್ಲ ಎಂಬ ಊರಿನ ಒಕ್ಕೆತ್ತೂರು ಮಾಡ ಎಂಬ ಪುಟ್ಟ ಗ್ರಾಮದಲ್ಲಿ. ‘ದೈವಸ್ಥಾನದ ಹಿಂದಿನ ಸಾಬ್ರರ ಮನೆ’ ಇದು ಆರ್ಷಿಯಾಳ ಮನೆಯ ಗುರುತು. ‘ನಾನು ಹುಟ್ಟಿದ್ದೇ ದೈವದ ಮಣ್ಣಿನಲ್ಲಿ. ನಮ್ಮ ತೋಟಕ್ಕೆ ‘ಓಲಸರಿ’ ತೋಟವೆಂದೇ ಬಹಳ ಹಿಂದಿನಿಂದ ಬಂದ ಹೆಸರು (ತುಳುನಾಡಿನ ದೈವಸ್ಥಾನಗಳ ವರ್ಷಾವಧಿ ಜಾತ್ರೆಯ ಸಮಯದಲ್ಲಿ ದೈವ ಸಂಚಾರದ ಹಾದಿಯನ್ನು ‘ಓಲಸರಿ’ ಜಾಗ ಎಂದು ಕರೆಯುವುದು ರೂಢಿ). ಜಾತ್ರೆಯ ಹೊತ್ತಲ್ಲಿ ಯಾರಿಲ್ಲದಿದ್ರೂ ಸಾಬ್ರ ಮನೆ ಹುಡುಗಿ ಇದ್ದೇ ಇರ್ತಾಳೆ ಅನ್ನೋವಷ್ಟರ ಮಟ್ಟಿಗೆ ಭಾಗಿಯಾಗುತ್ತಿದ್ದೆ” ಎನ್ನುವ ಅರ್ಷಿಯಾ ಮನೆಯ ಚಾವಡಿಯಲ್ಲೇ ಹಜರತ್ರಿಂದ ಇಸ್ಲಾಂ ಧರ್ಮ ಪಾಠವನ್ನೂ ಕಲಿತವರು. ಮನೆಯೆದುರಿನ ದೈವ, ಕದ್ದು ಮುಚ್ಚಿ ಓದುತ್ತಿದ್ದ ಭಗವದ್ಗೀತೆ, ಮನೆಯೊಳಗೆ ಕಲಿತ ಇಸ್ಲಾಂ ಧರ್ಮ ಪಾಠ ಇವೆಲ್ಲದರ ಒಟ್ಟು ಮೊತ್ತ ಧರ್ಮ ಮೀರಿ ಕಲೆಯನ್ನು ನೆಚ್ಚಿಕೊಂಡ ಆರ್ಷಿಯಾ ಎಂದರೆ ತಪ್ಪಲ್ಲ.
ತನ್ನ ಹೆಸರಿನೊಡನೆ “ಯಕ್ಷಪ್ರಿಯೆ ತನು ವಿಟ್ಲ” ಎಂಬುದನ್ನು ಸೇರಿಸಿಕೊಂಡಿರುವ ಆರ್ಷಿಯಾಗೆ ಚೌಕಿಯ ಬಣ್ಣ ಹೊಸತೇನಲ್ಲ. ೯ನೇ ವಯಸ್ಸಿನಲ್ಲಿಯೇ ಭಾಗವತಿಕೆಗೆ ಹೆಜ್ಜೆ ಹಾಕಲು ಆರಂಭಿಸಿದವರಿಗೆ ಹಿಮ್ಮೇಳದ ಚೆಂಡೆಯೂ ಆಸಕ್ತಿಯ ಪಾಠವೇ. ‘ದೇವಿ ಮಹಾತ್ಮೆ’ ಪ್ರಸಂಗದ ಮಹಿಷಾಸುರನ ಆರ್ಭಟ ಅವರಲ್ಲಿ ಯಕ್ಷಗಾನ ಕಲಿಯುವ ಬಯಕೆಯನ್ನು ಚಿಗುರೊಡೆಸಿತ್ತು.
೧೨ ವರ್ಷಗಳಿಂದೀಚೆ ರಂಗಸ್ಥಳದ ನಂಟನ್ನು ಹೊಂದಿರುವಾಕೆ ಮಂಗಳೂರಿನ ಕದಳಿ ಕಲಾ ಕೇಂದ್ರದಲ್ಲಿ ರಮೇಶ್ ಭಟ್ ಕದ್ರಿ ಅವರ ಗರಡಿಯ ಶಿಷ್ಯೆ. ರಾಕ್ಷಸ (ಬಣ್ಣದ ವೇಷ)ಪಾತ್ರಗಳಲ್ಲಿ ಹೆಚ್ಚು ಉತ್ಸುಕರಾಗಿರುವ ಆರ್ಷಿಯಾ ಇದುವರೆಗೆ ನಿಶುಂಬ, ರಕ್ತಬೀಜಾಸುರ, ಮಹಿಷಾಸುರನಂತಹ ರಕ್ಕಸ ವೇಷಗಳಿಗೆ ಕಲಾಭಿಮಾನಿ ಗಳಿಂದ ಭಾರಿ ಮೆಚ್ಚುಗೆ ಗಳಿಸಿದ್ದಾರೆ. ಹೀಗೆ ರಕ್ಕಸ ಪಾತ್ರ ಗಳನ್ನು ಹಾಕುತ್ತಿದ್ದಾಗಲೇ ಎಂದಾದರೊಂದು ದಿನ ಅಷ್ಟಭುಜೆ ದೇವಿಯಾಗಬೇಕೆಂಬ ಆಸೆ ಹುಟ್ಟಿದ್ದು ಆರ್ಷಿಯಾರಿಗೆ.
“ಧರ್ಮ, ಜಾತಿ, ಮತ ಎಂದು ಹೊಡೆದಾಡುವವರ ನಡುವೆ ಈ ದಿಟ್ಟತನಕ್ಕೆ ಧೈರ್ಯ ಹೇಗೆ ಬಂತು?” ಎಂದು ಕೇಳಿದರೆ ಆರ್ಷಿಯಾ ಮನತುಂಬಿ ನಗುತ್ತಾರೆ. “ದೇವರಿಗೆ ಯಾವ ಜಾತಿ ಇದೆ? ದೇವರ ಜಾತಿ ಹುಡುಕಿ ದವರು ಯಾರು?! ತಿನ್ನುವ ಅನ್ನವನ್ನು ದೇವರನ್ನಾಗಿ ಕಂಡರೆ ಈ ಧರ್ಮ ಸಂಘರ್ಷಗಳೇ ಜಗತ್ತಿನಲ್ಲಿ ನಡೆ ಯದು. ನನ್ನನ್ನೇ ನೋಡಿ, ಮುಸ್ಲಿಂ ಧರ್ಮದಲ್ಲಿ ಹುಟ್ಟಿದೆ, ಕ್ರೈಸ್ತರ ಸಂಸ್ಥೆಯೊಂದರಲ್ಲಿ ಉದ್ಯೋಗ ಮಾಡುತ್ತಿದ್ದೇನೆ, ಯಕ್ಷಗಾನ ಕಲಾವಿದೆಯಾಗಿ ಹಿಂದೂ ಧರ್ಮದವರ ಪ್ರೀತಿ ಸಿಕ್ಕಿದೆ” ಆರ್ಷಿಯಾ ಮಾತು ಯೋಚಿಸಬೇಕಾದದ್ದು. ಕುಟುಂಬದ ತುಂಬು ಪ್ರೋತ್ಸಾಹವೂ ಆರ್ಷಿಯಾರ ಬೆಳವಣಿಗೆಗೆ ಕಾರಣ. “ನಾನು ಹೆಸರು ಮಾಡುತ್ತಿರುವುದು ಮನೆಯವರೆಲ್ಲರಿಗೂ ಹೆಮ್ಮೆ ಇದೆ. ಅವರು ಶಿಕ್ಷಣವಂತರು ಎನ್ನುವುದಕ್ಕಿಂತಲೂ ಜ್ಞಾನವಂತರು ಎಂದು ಹೇಳಬಲ್ಲೆ. “ನಿವೃತ್ತ ತಹಸಿಲ್ದಾರ್ ಮಗಳೆಂದು ಒಂದು ಕಾಲದಲ್ಲಿ ನನ್ನನ್ನು ಗುರುತಿಸುತ್ತಿದ್ದರು. ಆದರೆ ಈಗ ಯಕ್ಷಪ್ರಿಯೆ ತನು ವಿಟ್ಲ ಅವರ ಮನೆಯವ್ರು ಎನ್ನುವಾಗ ಅಪ್ಪ ಅಮ್ಮನಿಗೂ ಖುಷಿಯಿದೆ” ಎಂಬಾಕೆ ಸಾಮಾಜಿಕ ಜಾಲತಾಣಗಳ ಟ್ರೋಲ್ ಕುರಿತು ಗಂಭೀರವಾಗುತ್ತಾರೆ. “ನನ್ನನ್ನು ಟ್ರೋಲ್ ಮಾಡಿದಷ್ಟು ನಾನು ಮುಂದೆ ಸಾಗುತ್ತೇನೆ. ಪರಿಚಿತರೇ ಟ್ರೋಲ್ ಮಾಡುತ್ತಾರೆ, ಇಂತಹದ್ದನ್ನು ಸೀರಿಯಸ್ಸಾಗಿ ತೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲ. ಈ ಭಾರತದ ಮಣ್ಣಿನಲ್ಲಿ ಹುಟ್ಟಿದ ನಂತರ ಸಹಬಾಳ್ವೆ ನಡೆಸಲೇಬೇಕು. ಇದು ನನಗೆ ಸಿಕ್ಕಿದ ಶಿಕ್ಷಣ, ದಕ್ಕಿದ ಓದು” ಅರ್ಷಿಯಾರ ಈ ಮಾತು ಎಲ್ಲರ ಮನಸಿನೊಳಗೆ ಬೇರೂರಿದರೆ ಎಷ್ಟು ಚೆನ್ನ!
ಕರಾವಳಿಯಲ್ಲಿ ಒಂದ್ಕಾಲದಲ್ಲಿ ಯಕ್ಷಗಾನ ಗಂಡುಕಲೆಯೆಂದೇ ಪ್ರತೀತಿ. ‘ಧೀಂಗಿಣ ಹಾಕಲು ಮಹಿಳೆಯರಿಗೆ ಸಾಧ್ಯವೇ ಇಲ್ಲ’ ಎಂಬ ಅಪವಾದ ಹೊದ್ದುಕೊಂಡಿದ್ದ ಕಲೆಯ ಮುಸುಕನ್ನು ಸರಿಸಿದ್ದು ಹೆಣ್ಮಕ್ಳೇ. ಚೆಂಡೆ, ಮದ್ದಳೆ ಜೊತೆಗೆ ಮಟ್ಟುಗಳ ಏರಿಳಿತದ ಭಾಗವತಿಕೆ ಹೀಗೆ ಹಿಮ್ಮೇಳ ದಲ್ಲಿ ಮಹಿಳೆಯರು ಪ್ರವೇಶ ಪಡೆದುಕೊಂಡಾಗಲೂ ‘ಚೌಕಿಯಲ್ಲಿ ಹೆಂಗಸರ ಕಾರುಬಾರು ನಡೆಯದು, ಅವ್ರು ವೇಷ ಬಳಿದು ಚೆಂಡೆ ಪೆಟ್ಟಿಗೆ ಕುಣಿಯುವುದುಂಟ!?’ ಎಂದಾಗಲೂ ‘ಕುಣಿಯದೇ ಇರಲಾರೆವು’ ಎನ್ನುವುದರ ಮೂಲಕ ಕಲೆಯಲ್ಲಿದ್ದ ಲಿಂಗ ತಾರತಮ್ಯವನ್ನು ತೊಡೆದು ಹಾಕಿದ್ದು ಮಹಿಳೆಯರೇ. ಹಿಂದೆ- ಇಂದು-ಮುಂದು ಮೂರನ್ನೂ ತಾಳೆ ಹಾಕಿದರೆ ಇಂದಿನ ಕಾಲಕ್ಕೆ ಬೇಕಾಗಿರುವುದು ಕುರುಡು ಧರ್ಮದ ಮುಸುಕನ್ನು ಸರಿಸಿ ಮಾನವ ಧರ್ಮದ ಅರ್ಥ ತಿಳಿಸುವ ಆರ್ಷಿಯಾರಂತಹ ಹೆಣ್ಮಕ್ಳು!
“ಧರ್ಮ, ಜಾತಿ, ಮತ ಎಂದು ಹೊಡೆದಾಡುವವರ ನಡುವೆ ಈ ದಿಟ್ಟತನಕ್ಕೆ ಧೈರ್ಯ ಹೇಗೆ ಬಂತು?” ಎಂದು ಕೇಳಿದರೆ ಆರ್ಷಿಯಾ ಖಾನ್ ಮನತುಂಬಿ ನಗುತ್ತಾರೆ. “ದೇವರಿಗೆ ಯಾವ ಜಾತಿ ಇದೆ? ದೇವರ ಜಾತಿ ಹುಡುಕಿದವರು ಯಾರು?! ತಿನ್ನುವ ಅನ್ನವನ್ನು ದೇವರನ್ನಾಗಿ ಕಂಡರೆ ಈ ಧರ್ಮ ಸಂಘರ್ಷ ಗಳೇ ಜಗತ್ತಿನಲ್ಲಿ ನಡೆಯದು ಅನ್ನುತ್ತಾರೆ.”
ಭಾರತಿ ಬಿ.ವಿ. ಕೇರಳಂ ರಾಜ್ಯದ ಕೊಚ್ಚಿ ಸಾಗರಿಕಾ ಬಂದರಿಗೆ ಕಾಲಿಟ್ಟಾಗ ಅಲ್ಲಿನ ಜನಸಂದಣಿ ಕಂಡು ಬೆಚ್ಚಿಬಿದ್ದಿದ್ದೆ! ೨೫೦೦ ಜನರಿಗೆ ಈ…
ನವದೆಹಲಿ: ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ರೂಪುಗೊಳ್ಳುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿರುವುದಾಗಿ ವರದಿಯಾಗಿದೆ. ಆಗ್ನೇಯ ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ…
ತಮಿಳುನಾಡು: ಇಲ್ಲಿನ ಕಡಲೂರು ಜಿಲ್ಲೆಯಲ್ಲಿ ಹಕ್ಕಿಜ್ವರ ದೃಢಪಟ್ಟಿರುವುದಾಗಿ ವರದಿಯಾಗಿದೆ. ಅಕ್ಟೋಬರ್ 30ರಿಂದ ನವೆಂಬರ್ 13ರವರೆಗೆ ಒಟ್ಟು 35,647 ಕೋಳಿಗಳು ಸಾವನ್ನಪ್ಪಿವೆ…
ದೆಹಲಿ: ಇಲ್ಲಿನ ರಾಮಲೀಲಾ ಮೈದಾನದಲ್ಲಿ ನಡೆಯುವ ಪ್ರತಿಭಟನೆ, ಸಮಾವೇಶ ಹಾಗೂ ಸಾರ್ವಜನಿಕ ಸಭೆಗಳಿಗೆ ಹೊಸ ಮಾರ್ಗಸೂಚಿಗಳನ್ನು ದೆಹಲಿ ಪೊಲೀಸರು ಪ್ರಕಟಿಸಿರುವುದಾಗಿ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ರಾಜ್ಯದ ಪ್ರಸಿದ್ಧ ಧಾರ್ಮಿಕ ಯಾತ್ರಾಸ್ಥಳ ಮಲೆ ಮಹದೇಶ್ವರ ಬೆಟ್ಟಕ್ಕೆ ಕೇಂದ್ರ…