Andolana originals

ಹಲಗೂರಿನಲ್ಲಿ ಮಿತಿ ಮೀರಿದ ಚಿರತೆ ಹಾವಳಿ

ಎಸ್.ಉಮೇಶ

ಚಿರತೆ ಸೆರೆಗೆ ವಿಶೇಷ ಕಾರ್ಯಪಡೆ ರಚಿಸಲು ಗ್ರಾಮಸ್ಥರ ಒತ್ತಾಯ

ಹಲಗೂರು: ಗ್ರಾಮೀಣ ಪ್ರದೇಶಗಳಲ್ಲಿ ಚಿರತೆಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಜನರು ಹಾಗೂ ರೈತರು ಜೀವಭಯದಲ್ಲೇ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮಗಳ ಹೊರವಲಯ, ಜಮೀನುಗಳು ಹಾಗೂ ಜನವಸತಿ ಪ್ರದೇಶಗಳ ಸಮೀಪವೇ ಚಿರತೆಗಳು ಕಾಣಿಸಿಕೊಳ್ಳುತ್ತಿರುವುದರಿಂದ ರಾತ್ರಿ ವೇಳೆ ಮನೆಯಿಂದ ಹೊರಬರಲೂ ಭಯಪಡುವಂತಾಗಿದೆ.

ಚಿರತೆ ಸೆರೆಗೆ ಮುಂದಾಗಿರುವ ಅರಣ್ಯ ಇಲಾಖೆ ತಾಲ್ಲೂಕಿನ ಹತ್ತು ಕಡೆಗಳಲ್ಲಿ ಬೋನ್‌ಗಳನ್ನು ಅಳವಡಿಸಿದ್ದು, ಪ್ರಸಕ್ತ ವರ್ಷದಲ್ಲಿ ಐದು ಚಿರತೆಗಳನ್ನು ಸೆರೆಹಿಡಿಯಲಾಗಿದೆ. ಆದರೂ ಚಿರತೆಗಳ ಹಾವಳಿಗೆ ಕಡಿವಾಣ ಬೀಳದಿರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.

ಚಿರತೆಗಳ ಸೆರೆಗಾಗಿ ಹಲಗೂರು ಹೋಬಳಿಯ ನಿಟ್ಟೂರು, ಗೊಲ್ಲರಹಳ್ಳಿ, ಗುಂಡಾಪುರ, ಕಸಬಾ ಹೋಬಳಿಯ ಅಗಸನಪುರ, ಬಿ.ಜಿ.ಪುರ ಹೋಬಳಿಯ ಕೆ.ಪಿ.ದೊಡ್ಡಿ, ದಬ್ಬಳ್ಳಿ ಮತ್ತು ಮಲ್ಲಿನಾಥಪುರ ಹಾಗೂ ಕಿರುಗಾವಲು ಹೋಬಳಿಯ ಕಿರುಗಾವಲು, ಜೆ.ಸಿ.ಪುರ ಮತ್ತು ಮುದ್ದಗೌಡನಕೊಪ್ಪಲು ಸೇರಿದಂತೆ ಹತ್ತು ಸ್ಥಳಗಳಲ್ಲಿ ಅರಣ್ಯ ಇಲಾಖೆ ಬೋನ್‌ಗಳನ್ನು ಇರಿಸಿದೆ. ಆದರೆ, ಚಿರತೆಗಳ ಹಾವಳಿ ವ್ಯಾಪಕವಾಗಿರುವುದರಿಂದ ಪ್ರಸ್ತುತ ಇರುವ ಬೋನ್‌ಗಳ ಸಂಖ್ಯೆ ಸಾಲುತ್ತಿಲ್ಲ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ಗ್ರಾಮಗಳತ್ತ ಮುಖ ಮಾಡಿದ ಚಿರತೆಗಳು ಮಳವಳ್ಳಿ ತಾಲ್ಲೂಕಿನ ಬಹುತೇಕ ಗ್ರಾಮಗಳು ಅರಣ್ಯ ಪ್ರದೇಶದ ಅಂಚಿನಲ್ಲಿರುವುದರಿಂದ ಚಿರತೆಗಳ ಸಂಚಾರ ಹೆಚ್ಚಾಗಿದೆ. ಹಲಗೂರು ಹೋಬಳಿಯ ನಿಟ್ಟೂರು, ಗೊಲ್ಲರಹಳ್ಳಿ, ವಳಗೆರೆ ದೊಡ್ಡಿ, ಒಡೆಯರ್ ಬಸಾಪುರ, ಹಂಡನಹಳ್ಳಿ, ಕರಡಹಳ್ಳಿ, ನಿಟ್ಟೂರು ಕೋಡಿಹಳ್ಳಿ, ಮಾರಗೌಡನಹಳ್ಳಿ, ಜೂಗನಹಳ್ಳಿ, ಬಾಳೆಹೊನ್ನಿಗ, ಕೆಂಪಯ್ಯನದೊಡ್ಡಿ, ನಂದೀಪುರ, ಗುಂಡಾಪುರ, ಬುಯ್ಯನದೊಡ್ಡಿ ಹಾಗೂ ಹೊಸಪುರ ಮುಂತಾದ ಗ್ರಾಮಗಳಲ್ಲಿ ಆಗಾಗ್ಗೆ ಚಿರತೆಗಳು ದಾಳಿ ಮಾಡುತ್ತಿವೆ.

ಕಸಬಾ ಹೋಬಳಿಯ ಅಂತರಹಳ್ಳಿ, ಬೆಳ್ತೂರು, ಹುಲ್ಲೇಗಾಲ, ನಂಜೇಗೌಡನದೊಡ್ಡಿ, ಧನಗೂರು, ದಬ್ಬಳ್ಳಿ, ತಾಳೆಹಳ್ಳ, ಧನಗೂರು ಕುರಿಫಾರಂ, ಅಗಸನಪುರ, ಲಿಂಗಣಪುರ ಹಾಗೂ ಕಂಸಾಗರ ಸೇರಿದಂತೆ ವಿವಿಧ ಗ್ರಾಮಗಳಲ್ಲಿಯೂ ಚಿರತೆಗಳ ಸಂಚಾರ ರಾತ್ರಿ ವೇಳೆ ಕಂಡುಬರುತ್ತಲೇ ಇದೆ.

ಜೀವ ಭಯದಲ್ಲೇ ಕೃಷಿ ಚಟುವಟಿಕೆ: ವಿದ್ಯುತ್ ಪೂರೈಕೆಯ ಪಾಳಿ ವ್ಯವಸ್ಥೆಯಿಂದಾಗಿ ರೈತರು ರಾತ್ರಿ ವೇಳೆ ಜಮೀನುಗಳಿಗೆ ತೆರಳಿ ಬೆಳೆಗಳಿಗೆ ನೀರು ಹಾಯಿಸಬೇಕಾದ ಅನಿವಾರ್ಯತೆ ಇದೆ. ಆದರೆ, ರಾತ್ರಿ ವೇಳೆ ಚಿರತೆಗಳು ಕಾಣಿಸಿ ಕೊಳ್ಳುತ್ತಿರುವುದರಿಂದ ರೈತರು ಜೀವಭಯದಲ್ಲೇ ಕೃಷಿ ಚಟುವಟಿಕೆ ನಡೆಸುವಂತಾಗಿದೆ.

ಚಿರತೆ ಕಾರ್ಯಪಡೆ ರಚನೆ ಮಾಡಿ: ಮಳವಳ್ಳಿ ತಾಲ್ಲೂಕಿನಾದ್ಯಂತ ಹೆಚ್ಚುತ್ತಿರುವ ಚಿರತೆ ಹಾವಳಿ ನಿಯಂತ್ರಿಸಲು ವಿಶೇಷ ಚಿರತೆ ಕಾರ್ಯಪಡೆ (ಲೆಪರ್ಡ್ ಟಾಸ್ಕ್ ಫೋರ್ಸ್) ರಚಿಸಬೇಕು ಎಂದು ಬಿಎಸ್‌ಪಿ ತಾಲ್ಲೂಕು ಅಧ್ಯಕ್ಷ ನಂಜುಂಡಸ್ವಾಮಿ ಒತ್ತಾಯಿಸಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಸಚಿವರಿಗೆ ಮನವಿ ಸಲ್ಲಿಸಲಾಗಿದೆ. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಕನಿಷ್ಠ ಒಂದು ಬೋನ್ ಒದಗಿಸಬೇಕು. ಚಿರತೆಗಳ ಚಲನವಲನದ ಮೇಲೆ ನಿಗಾ ಇಡಲು ವಿಶೇಷ ತಂಡ ರಚಿಸಬೇಕು. ಅರಣ್ಯ ಇಲಾಖೆ ಸಿಬ್ಬಂದಿಯಿಂದ ರಾತ್ರಿ ಗಸ್ತು ಹೆಚ್ಚಿಸಬೇಕು. ಮಾಂಸ ಮಾರಾಟ ಅಂಗಡಿಗಳ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಸುರಿಯದಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

” ಚಿರತೆಗಳು ಹೆಚ್ಚಾಗಿ ತಡರಾತ್ರಿ ಸಂಚರಿಸುವುದರಿಂದ ರೈತರು ಜಮೀನುಗಳಿಗೆ ತೆರಳುವುದು ಅಪಾಯಕಾರಿಯಾಗಿದೆ. ನಾನು ಈ ಹಿಂದೆ ಚಿರತೆ ದಾಳಿಗೆ ಒಳಗಾಗಿ ಬದುಕಿ ಬಂದಿದ್ದೇನೆ. ಆದ್ದರಿಂದ ರೈತರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಹಗಲು ವೇಳೆಯಲ್ಲಿಯೇ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪೂರೈಸಬೇಕು.”

ನಾಗೇಂದ್ರ, ವಳಗೆರೆದೊಡ್ಡಿ ನಿವಾಸಿ

” ಚಿರತೆಗಳು ಕಾಡಂಚಿನ ಪ್ರದೇಶಗಳಲ್ಲಿ ಕೋಳಿ ಅಂಗಡಿಯವರು ತಂದು ಎಸೆದುಹೋಗುವ ತ್ಯಾಜ್ಯದತ್ತ ಆಕರ್ಷಿತವಾಗಿ, ಗ್ರಾಮಗಳಿಗೆ ದಾಳಿ ಮಾಡುತ್ತವೆ. ಆದ್ದರಿಂದ ಎಲ್ಲೆಂದರಲ್ಲಿ ಕೋಳಿ ಮಾಂಸದ ತ್ಯಾಜ್ಯವನ್ನು ಬಿಸಾಡಬಾರದು.”

ಪ್ರಮೋದ್‌ಕುಮಾರ್ ದೇವ್, ಕಾವೇರಿ ವನ್ಯಜೀವಿ ವಲಯದ ವಲಯ ಅರಣ್ಯಾಧಿಕಾರಿ

” ಅರಣ್ಯ ಇಲಾಖೆ ವತಿಯಿಂದ ಈ ವರ್ಷದಲ್ಲಿ ಐದು ಚಿರತೆಗಳನ್ನು ಸೆರೆ ಹಿಡಿಯಲಾಗಿದೆ. ಈಗಲೂ ತಾಲ್ಲೂಕಿನ ಹಲವೆಡೆ ಸಾಕಷ್ಟು ಬೋನುಗಳನ್ನು ಇರಿಸಿ ಚಿರತೆ ಸೆರೆಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ.”

-ಮುಬಾರಕ್, ಪ್ರಾದೇಶಿಕ ವಲಯ ಅರಣ್ಯಾಧಿಕಾರಿ, ಮಳವಳಿ

 

 

ಆಂದೋಲನ ಡೆಸ್ಕ್

Recent Posts

ಲಂಡನ್‌ನಲ್ಲಿ ಅಲೆಯುತ್ತಾ ಮೈಸೂರ ಧ್ಯಾನ

ಸಿರಿ ಮೈಸೂರು ಸಾಮಾನ್ಯವಾಗಿ ನಾವು ಯಾವುದಾದರೂ ಹೊರಗಿನ ನಗರಕ್ಕೆ, ದೇಶಕ್ಕೆ ಹೋಗಿ ಬಂದು ಅಲ್ಲಿನ ಜನರು, ಸಂಸ್ಕೃತಿ, ಅಭ್ಯಾಸಗಳನ್ನು ಹೊಗಳಿದರೆ…

41 mins ago

ಕಾರ್ಡೀಲಿಯಾ ಸಮುದ್ರಯಾನ

ಭಾರತಿ ಬಿ.ವಿ. ಕೇರಳಂ ರಾಜ್ಯದ ಕೊಚ್ಚಿ ಸಾಗರಿಕಾ ಬಂದರಿಗೆ ಕಾಲಿಟ್ಟಾಗ ಅಲ್ಲಿನ ಜನಸಂದಣಿ ಕಂಡು ಬೆಚ್ಚಿಬಿದ್ದಿದ್ದೆ! ೨೫೦೦ ಜನರಿಗೆ ಈ…

47 mins ago

ಮುಸ್ಲಿಂ ಹುಡುಗಿ ಆರ್ಷಿಯಾ ಯಕ್ಷಗಾನದ ಅಷ್ಟಭುಜೆ ದೇವಿ!

ಅಕ್ಷತಾ ಸಾಬ್ರ ಹುಡುಗಿ ದೇವಿ ವೇಷ ಹಾಕ್ತಾಳಂತೆ! ಮಡಿ ಮೈಲಿಗೆ ಎಷ್ಟ್ರ ಮಟ್ಟಿಗೆ ಮಾಡ್ತಾರೋ? ಮಾಂಸ ಮಡ್ಡಿ ತಿನ್ನೋರಿಗೆ ದೇವಿ…

54 mins ago

ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ರೂಪುಗೊಳ್ಳುವ ಸಾಧ್ಯತೆ: ಮೀನುಗಾರರಿಗೆ ಎಚ್ಚರಿಕೆ!

ನವದೆಹಲಿ: ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ರೂಪುಗೊಳ್ಳುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿರುವುದಾಗಿ ವರದಿಯಾಗಿದೆ. ಆಗ್ನೇಯ ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ…

18 hours ago

ಕಡಲೂರಿನಲ್ಲಿ ಹಕ್ಕಿಜ್ವರ ಆತಂಕ: 35,647 ಕೋಳಿಗಳ ಸಾವು!

ತಮಿಳುನಾಡು: ಇಲ್ಲಿನ ಕಡಲೂರು ಜಿಲ್ಲೆಯಲ್ಲಿ ಹಕ್ಕಿಜ್ವರ ದೃಢಪಟ್ಟಿರುವುದಾಗಿ ವರದಿಯಾಗಿದೆ. ಅಕ್ಟೋಬರ್‌ 30ರಿಂದ ನವೆಂಬರ್‌ 13ರವರೆಗೆ ಒಟ್ಟು 35,647 ಕೋಳಿಗಳು ಸಾವನ್ನಪ್ಪಿವೆ…

19 hours ago