Andolana originals

೪ ದಶಕ ರಾಜಕಾರಣದಲ್ಲಿ ಛಾಪು ಮೂಡಿಸಿದ ಪ್ರಸಾದ್

ಶ್ರೀಧರ್ ಆರ್.ಭಟ್

ಸ್ವಾಭಿಮಾನಿ ರಾಜಕಾರಣಿ ವಿ.ಶ್ರೀನಿವಾಸ ಪ್ರಸಾದ್ ಅವರ ೧ನೇ ವರ್ಷದ ಸ್ಮರಣೆ ಇಂದು

ನಂಜನಗೂಡು: ಸ್ವಾಭಿಮಾನಿ ರಾಜಕಾರಣಿ ಎಂದೇ ಪ್ರಖ್ಯಾತರಾಗಿದ್ದ ಕೇಂದ್ರದ ಮಾಜಿ ಸಚಿವ, ರಾಜ್ಯದ ಮಾಜಿ ಕಂದಾಯ ಸಚಿವ ವಿ.ಶ್ರೀನಿವಾಸಪ್ರಸಾದ್ ನಿಧನರಾಗಿ ೧ ವರ್ಷ ಕಳೆದರೂ ಸ್ವಾಭಿಮಾನಿ ಎಂದರೆ ಹಳೇ ಮೈಸೂರು ಭಾಗದ ಜನರ ಮನಸ್ಸಿನಲ್ಲಿ ಮೂಡುವ ಹೆಸರು ವಿ.ಶ್ರೀನಿವಾಸ ಪ್ರಸಾದ್ ಅವರದು.

ಇಂಥ ಗೌರವವನ್ನು ತಮ್ಮ ಧೀಶಕ್ತಿಯಿಂದ ಸಂಪಾದಿಸಿಕೊಂಡು ಜೀವನದುದ್ದಕ್ಕೂ ಸ್ವಾಭಿಮಾನದ ಕೊಂಡಿಯನ್ನು ವೃದ್ಧಿಸುತ್ತಲೇ ಬಂದವರು ಶ್ರೀನಿವಾಸ ಪ್ರಸಾದ್. ಕುಟುಂಬ ರಾಜಕಾರಣಕ್ಕೆ ಹೆಸರಾಗಿರುವ ಕರ್ನಾಟಕದಲ್ಲಿ ರಾಜಕಾರಣದ ಮನೆತನದವರಲ್ಲದೆ ರಾಜಕಾರಣಿಗಳ ಸಂಬಂಽಕರೂ ಆಗದೆ ಸ್ವಶಕ್ತಿಯಿಂದಲೇ ನಾಲ್ಕು ದಶಕಗಳ ಕಾಲ ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ತಮ್ಮದೇ ಆದ ರಾಜಕಾರಣದ ಛಾಪು ಮೂಡಿಸಿಕೊಂಡು ಜನನಾಯಕರಾಗಿ ಬೆಳೆದು ಬಂದವರು.

ದೀನ-ದಲಿತರ, ಬಡವರ ಸ್ವಾಭಿಮಾನಕ್ಕೆ ಧಕ್ಕೆ ಬಂದಾಗಲೆಲ್ಲ ಸಿಡಿದೇಳುತ್ತಿದ್ದವರು. ಯಾವುದೇ ಸಂದರ್ಭದಲ್ಲಿಯೂ ಯಾವುದೇ ವಿಚಾರ ಕುರಿತು ಹೇಳಲೇಬೇಕಾಗಿರುವ ಅಭಿಪ್ರಾಯವನ್ನು ಯಾವುದೇ ಭಯವಿಲ್ಲದೆ ಹೇಳುತ್ತಿದ್ದ ಪ್ರಸಾದ್ ಅವರು ಕೆಲವು ರಾಜಕಾರಣಿಗಳ ಪಾಲಿಗೆ ಬೆಂಕಿ ಚೆಂಡಾಗಿದ್ದರು. ಹಾಗೆಯೇ ಬದುಕಿದವರು.

ತಮ್ಮ ವಿದ್ಯಾರ್ಥಿ ಜೀವನದಿಂದಲೇ ಸಮಾನತೆ, ಭಾರತೀಯತೆ, ರಾಷ್ಟ್ರೀಯತೆಯನ್ನು ಮೈಗೂಡಿಸಿ ಕೊಂಡಿದ್ದ ಅವರು, ೧೯೭೪ರಿಂದ ೨೦೨೪ರವರೆಗೂ ರಾಜಕಾರಣದಲ್ಲಿದ್ದರು. ಕಳಂಕ ರಹಿತ ರಾಜಕಾರಣಿ ಎಂದರೆ ಪ್ರಸಾದ್ ಅವರಂತಿರಬೇಕು ಎಂದು ಅವರ ವಿರೋಧಿಗಳೂ ಹೇಳುವಂತೆ ರಾಜಕಾರಣದ ಮೈಲಿಗಲ್ಲು ದಾಟಿದವರು ಪ್ರಸಾದ್.

ಎಂದಿಗೂ ಜಾತಿ ನಾಯಕರಾಗದೆ ಸಮಾಜದ ಎಲ್ಲ ವರ್ಗದವರ ನಾಯಕರಾಗಿ ಗುರುತಿಸಿಕೊಂಡಿದ್ದ ಪ್ರಸಾದ್, ಬದನವಾಳಿನ ಕಹಿ ಘಟನೆಯಲ್ಲಿ ತಮ್ಮ ಪಾತ್ರವಿಲ್ಲದಿದ್ದರೂ ತಮ್ಮ ಹೆಸರಿಗೆ ಅಂಟಿಸಿದ ಜಿಡ್ಡನ್ನು ನಂಜನಗೂಡಿನ ಶಾಸಕರಾಗಿ ತಮ್ಮ ಕಾರ್ಯವೈಖರಿಯ ಮೂಲಕವೇ ತೊಳೆದುಕೊಂಡ ಅಪರೂಪದ ರಾಜಕಾರಣಿ ಅವರು.

ಜಾತಿ ಜಾತಿಗಳ ವೈಮನಸ್ಸಿನ ಕುರಿತು ಮನದಾಳದಲ್ಲೇ ಕೊರಗುತ್ತಿದ್ದ ಪ್ರಸಾದ್, ಅನ್ಯಾಯ-ಅಕ್ರಮಗಳು ಕಂಡರೆ ಸಿಡಿದೇಳುತ್ತಿದ್ದ ರಾಜಕಾರಣಿಯಾಗಿದ್ದರು. ತಾವು ಶಾಸಕರಾಗಿ ಆಯ್ಕೆಯಾದ ಪ್ರಥಮದಲ್ಲೇ ಅಧಿಕಾರಿಗಳಿಗೆ ಅವರು ಹೇಳಿದ ಮಾತು ಅವರ ಸಮರ್ಥ ನಾಯಕತ್ವಕ್ಕೆ ಹಿಡಿದ ಕನ್ನಡಿಯಂತಿತ್ತು. ಅಟ್ರಾಸಿಟಿ ಕೇಸುಗಳ ದುರುಪಯೋಗದ ಕುರಿತು ಸಾಕಷ್ಟು ಅರಿವಿದ್ದ ಪ್ರಸಾದ್, ಅಂದು ಕ್ಷೇತ್ರದಲ್ಲಿ ಅಟ್ರಾಸಿಟಿ ಪ್ರಕರಣಗಳು ಕಂಡುಬಂದಲ್ಲಿ ತಕ್ಷಣ ಪ್ರಾಮಾಣಿಕವಾಗಿ ತನಿಖೆ ಮಾಡಿ, ಅದು ಸತ್ಯ ಎಂದು ತನಿಖೆಯಲ್ಲಿ ಮನವರಿಕೆಯಾದರೆಮಾತ್ರ ಪ್ರಕರಣ ದಾಖಲಿಸಿ. ಅನುಮಾನ ಬಂದರೆ ನನ್ನ ಗಮನಕ್ಕೆ ತನ್ನಿ ಎಂದು ಪೊಲೀಸ್ ಅಧಿಕಾರಿಗಳಿಗೆ ತಾಕೀತು ಮಾಡಿದ್ದರಿಂದಲೇ ಪ್ರಸಾದ್ ಅವರ ಶಾಸಕತ್ವದ ಅವಧಿಯಲ್ಲಿ ಅಂತಹ ಪ್ರಕರಣ ಕ್ಷೇತ್ರದಲ್ಲಿ ಕಾಣಿಸಿ ಕೊಳ್ಳಲೇ ಇಲ್ಲ.

ಕ್ಷೇತ್ರದ ಮತದಾರರು, ಮುಖಂಡರ ನಡವಳಿಕೆಗಳಿಗೆ ಸಂಬಂಧಿಸಿದಂತೆ ಎಲ್ಲ ವಿವರಗಳನ್ನೂ ಮನದಲ್ಲಿಟ್ಟುಕೊಳ್ಳುತ್ತಿದ್ದ ಪ್ರಸಾದ್ ಅವರು, ವ್ಯತಿರಿಕ್ತ ನಡವಳಿಕೆಗಳ ಮುಖಂಡರನ್ನು ದೂರದಲ್ಲಿಡುತ್ತಿದ್ದರು. ‘ನಾನು ಪಕ್ಷಾಂತರಿಯಾದೆ. ಆದರೆ ಎಂದಿಗೂ ತತ್ವಾಂತರಿಯಾಗಲಿಲ್ಲ, ಆಗುವುದೂ ಇಲ್ಲ’ ಎಂದು ಸದಾ ಗುಡುಗುತ್ತಿದ್ದ ಸ್ವಾಭಿಮಾನದ ಪ್ರತೀಕ ಪ್ರಸಾದ್ ತಮ್ಮ ಜೀವಿತದ ಕೊನೆಯವರೆಗೂ ಹಾಗೆಯೇ ರಾಜಕಾರಣ ಮಾಡಿ ಮಾದರಿಯಾಗಿಯೇ ಬದುಕಿದರು. ಹಾಗಾಗಿಯೇ ರಾಗದ್ವೇಷ ರಹಿತ ರಾಜಕಾರಣ ಮಾಡಿದ ಪ್ರಸಾದ್ ಸಮುದಾಯ ಭವನಗಳ ಜನಕ ಎನಿಸಿಕೊಂಡಿದ್ದಾರೆ.

ಹದಗೆಟ್ಟ ರಾಜಕಾರಣದ ಕೊಳಕಲ್ಲೂ ಪ್ರಸಾದ್ ಮಾತ್ರ ಯಾವುದೇ ಆಮಿಷಕ್ಕೆ, ಕಳಂಕಕ್ಕೆ ಒಳಗಾಗದೆ ರಾಜಕಾರಣ ಮಾಡುತ್ತಲೇ ಸ್ವಾಭಿಮಾನಿ ಎಂದರೆ ಪ್ರಸಾದ್, ಪ್ರಸಾದ್ ಎಂದರೆ ಸ್ವಾಭಿಮಾನ ಎಂಬಂತೆ ತಮ್ಮ ನಡೆ-ನುಡಿಯ ಮೂಲಕ ಜನತೆಗೆ ತೋರಿದ ಧೀಮಂತ ರಾಜಕಾರಣದ ಸ್ವಾಭಿಮಾನದ ಕೊಂಡಿ ಕಳಚಿ ಇಂದಿಗೆ ವರ್ಷ ತುಂಬಿದರೂ ಸ್ವಾಭಿಮಾನ ಎಂದರೆ ನೆನಪಾಗುವುದು ವಿ.ಶ್ರೀನಿವಾಸ ಪ್ರಸಾದ್ ಮಾತ್ರ.

” ಸಾಮಾನ್ಯರಿಗೆ ಸಹಾಯಹಸ್ತ” 

ನಂಜನಗೂಡು: ಕ್ಷೇತ್ರದ ಜನರಿಗೆ ಪ್ರಸಾದ್ ಅವರ ಸಹಾಯಹಸ್ತ ಎಲೆ ಮರೆಯ ಕಾಯಿಯಂತಿರುತ್ತಿತ್ತು. ಆರೋಗ್ಯ ಹಾಗೂ ಶೈಕ್ಷಣಿಕ ವಿಷಯದಲ್ಲಿ ಯಾವುದೇ ತಾರತಮ್ಯವಿಲ್ಲದೆ ಸ್ಪಂದಿಸುತ್ತಿದ್ದರು. ಹಾಗಾಗಿಯೇ ಸಾವಿರಾರು ಜನ ವಿದ್ಯಾರ್ಥಿಗಳ ಶಾಲಾ ಶುಲ್ಕ ಪ್ರಸಾದ್ ಅವರ ಲೋಕಸಭಾ ಭತ್ಯೆಯಿಂದ ಪ್ರತಿ ತಿಂಗಳೂ ಕರಾರುವಾಕ್ಕಾಗಿ ವಿತರಣೆಯಾಗುತ್ತಿದ್ದರೂ ಅದು ಹೊರಪ್ರಪಂಚದ ಗಮನಕ್ಕೆ ಬರುತ್ತಲೇ ಇರಲಿಲ್ಲ. ಶಾಲೆ, ಸಮುದಾಯ ಭವನಗಳು ಅವರ ವಿಶೇಷ ಆಸಕ್ತಿಯಾಗಿದ್ದರಿಂದಲೇ ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಬೇರೆಡೆಗಿಂತ ಹೆಚ್ಚು ಸಮುದಾಯ ಭವನಗಳು ಅಂಬೇಡ್ಕರ್ ಭವನಗಳು ತಲೆ ಎತ್ತಿ ನಿಲ್ಲುವಂತಾಗಿದೆ. ನಂಜನಗೂಡಿನ ಶಾಸಕರಾಗಿ ಪ್ರಸಾದ್ ಮಾಡಿದ ಅಭಿವೃದ್ಧಿ ಕೆಲಸಗಳು ರಾಜ್ಯದ ಬೇರಾವುದೇ ತಾಲ್ಲೂಕಿನಲ್ಲಿರದ ವಿಶಾಲವಾದ ಆಡಳಿತಸೌಧ, ಅಂಬೇಡ್ಕರ್ ಭವನ, ಸರ್ಕಾರಿ ಪದವಿ ಕಾಲೇಜಿನ ಕಟ್ಟಡ, ಬಾಲಕಿಯರ ಕಾಲೇಜು, ಸಂಚಾರ ಪೊಲೀಸ್ ಠಾಣೆ, ಜೋಡಿ ರಸ್ತೆಯಲ್ಲಿನ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ನಿಲ್ದಾಣ, ಹೆಡಿಯಾಲದ ಕಾಲೇಜು ಹಾಗೂ ಪ್ರವಾಸಿ ಮಂದಿರ, ಹುಲ್ಲಹಳ್ಳಿಯ ಪದವಿ ಕಾಲೇಜು, ಕುಸಿಯುವ ಹಂತದಲ್ಲಿದ್ದ ಕಪಿಲಾ ಸ್ನಾನ ಘಟ್ಟದ ಹದಿನಾರು ಕಾಲು ಮಂಟಪದ ಪುನರ್ ನಿರ್ಮಾಣ ಇಂದಿಗೂ ಪ್ರಸಾದ್ ಅವರ ಹೆಸರನ್ನು ನಂಜನಗೂಡು ಕ್ಷೇತ್ರದಲ್ಲಿ ಚಿರಸ್ಥಾಯಿಯಾಗಿಸಿವೆ. ಪ್ರಸಾದ್ ಅವರ ಕನಸಿನ ಸಸ್ಯಕಾಶಿ ಮಾತ್ರ ೩ ಕೋಟಿ ರೂ. ವ್ಯಯವಾಗಿಯೂ ಇಂದಿಗೂ ಮರಿಚಿಕೆಯಾಗಿಯೇ ಉಳಿದೇ ಹೋಯಿತು”

ಆಂದೋಲನ ಡೆಸ್ಕ್

Recent Posts

ಅಲೆಮಾರಿ ಜನಾಂಗ ನಾಡಿನ ಸಂಸ್ಕೃತಿಯ ಜೀವಂತಿಕೆ

ಟಿ.ಕೆ.ಹರೀಶ್ ಸಮುದಾಯಗಳಿಗೆ ಸೂರು, ಶಿಕ್ಷಣ ಒದಗಿಸುವುದು ಅತ್ಯಗತ್ಯ ಭಾರತೀಯ ಅಲೆಮಾರಿ ಜನಾಂಗಗಳು ಕೇವಲ ಸಂಚಾರಿಗಳಲ್ಲ; ಅವರು ನಮ್ಮ ಶ್ರೀಮಂತ ಸಾಂಸ್ಕೃತಿಕ…

3 hours ago

ಓದುಗರ ಪತ್ರ: ನೆಮ್ಮದಿ ಕೇಂದ್ರಕ್ಕೆ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಿ

ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲ್ಲೂಕು ಕಚೇರಿ ಆಡಳಿತ ಸೌಧದಲ್ಲಿ ಇರುವ ನೆಮ್ಮದಿ ಕೇಂದ್ರದ ಮೂಲಕ ಜಾತಿ ಪ್ರಮಾಣ ಪತ್ರ, ಆದಾಯ…

3 hours ago

ಓದುಗರ ಪತ್ರ: ಆಹಾರ ಸರಬರಾಜಿಗೆ ಕಪ್ಪು ಪ್ಲಾಸ್ಟಿಕ್ ಡಬ್ಬಿಗಳನ್ನು ನಿಷೇಧಿಸಿ

ನಗರ ಪ್ರದೇಶಗಳ ಹೋಟೆಲ್‌ಗಳಲ್ಲಿ ನೀಡಲಾಗುವ ಆಹಾರ ಪಾರ್ಸೆಲ್‌ಗಳು ಹಾಗೂ ಆನ್ ಲೈನ್ ಮೂಲಕ ಸರಬರಾಜಾಗುವ ಶೇ.೯೦ ಕ್ಕಿಂತ ಹೆಚ್ಚು ಆಹಾರ…

3 hours ago

ಓದುಗರ ಪತ್ರ: ಅಧಿಕಾರಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕ್ರಿಯಾಶೀಲವಾಗಲಿ

ಸಾಮಾಜಿಕ ಮಾಧ್ಯಮ ಬಳಕೆದಾರರು ಬೆಂಗಳೂರಿನ ನಂತರ ಅತಿ ಹೆಚ್ಚು ಕ್ರಿಯಾಶೀಲರಾಗಿರುವುದು ಮೈಸೂರು ನಗರದಲ್ಲಿ. ಆದರೆ ಬೇಸರದ ಸಂಗತಿ ಎಂದರೆ ಇಲ್ಲಿನ…

3 hours ago

ಓದುಗರ ಪತ್ರ: ಎಸ್‌ಐಆರ್: ಸಂಪೂರ್ಣ ಮಾಹಿತಿ ನೀಡಿ

ರಾಜ್ಯದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್)ಪ್ರಕ್ರಿಯೆ ಜೂ.೩೦ರಿಂದ ಆರಂಭವಾಗಿದೆ. ಆದರೆ ಮತದಾರರು ಈ ಪ್ರಕ್ರಿಯೆಯಲ್ಲಿ ಯಾವ ದಾಖಲೆಗಳನ್ನು…

3 hours ago

ಅನನ್ಯಾಳ ಬದುಕು ಬದಲಾಯಿಸಿದ 20 ರೂಪಾಯಿ ನೋಟು

ಪಂಜು ಗಂಗೊಳ್ಳಿ  ಬಡಕಟ್ಟು ಜನರಿಗೆ ಅಕ್ಷರ ಕಲಿಸಿ ಬದುಕು ರೂಪಿಸಿದ ಕರುಣಾಮಯಿ ೧೯೯೦ರಲ್ಲಿ ಅಸ್ಸಾಮಿನ ಹೊಜಾಯ್ ಜಿಲ್ಲೆಯ ಲುಮ್ಡಿಂಗ್ ಗ್ರಾಮದ…

3 hours ago