ಎಂ.ನಾರಾಯಣ
ತಿ.ನರಸೀಪುರ ಬಸ್ ನಿಲ್ದಾಣದಲ್ಲಿರುವ ವಾಹನ ನಿಲುಗಡೆ ಸ್ಥಳದಲ್ಲಿ ಸುಲಿಗೆ: ಆರೋಪ
ತಿ.ನರಸೀಪುರ: ನಿತ್ಯ ನೂರಾರು ಪ್ರಯಾಣಿಕರು ಮತ್ತು ದ್ವಿಚಕ್ರ ವಾಹನ ಸವಾರರು ಆಶ್ರಯಿಸುವ ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಪಾರ್ಕಿಂಗ್ ಸ್ಟ್ಯಾಂಡ್ ಈಗ ಸುಲಿಗೆ ಹಾಗೂ ಅವ್ಯವಸ್ಥೆಯ ಕೇಂದ್ರವಾಗಿ ಮಾರ್ಪಟ್ಟಿದೆ.
ವಾಹನಗಳಿಗೆ ಸೂಕ್ತ ಭದ್ರತೆ ಮತ್ತು ಕನಿಷ್ಠ ಮೂಲಸೌಕರ್ಯ ಒದಗಿಸಬೇಕಾದ ಗುತ್ತಿಗೆ ದಾರರು, ಕೇವಲ ಹಣ ವಸೂಲಿಗಷ್ಟೇ ಸೀಮಿತವಾಗಿ ದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅದರಲ್ಲೂ, ನಿಗದಿತ ಪಾರ್ಕಿಂಗ್ ವ್ಯಾಪ್ತಿಯ ಹೊರಗೆ ವಾಹನ ನಿಲ್ಲಿಸಿದರೂ ಬಲವಂತವಾಗಿ ಶುಲ್ಕ ತೆಗೆದುಕೊಳ್ಳುತ್ತಿರುವುದು ಹಾಗೂ ಪ್ರಶ್ನಿಸಿದ ಸವಾರರ ಮೇಲೆ ಸಿಬ್ಬಂದಿ ಅವಾಚ್ಯ ಶಬ್ದಗಳಿಂದ ನಿಂದಿಸಿ ದಬ್ಬಾಳಿಕೆ ನಡೆಸುತ್ತಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ವ್ಯಾಪ್ತಿ ಮೀರಿ ಶುಲ್ಕ ವಸೂಲಿ: ಕೆಎಸ್‌ಆರ್‌ಟಿಸಿ ನಿಗಮವು ಪಾರ್ಕಿಂಗ್ ನಿರ್ವಹಣೆಗೆ ಗುತ್ತಿಗೆ ನೀಡುವಾಗ ನಿರ್ದಿಷ್ಟ ಅಳತೆಯ ಜಾಗವನ್ನು ಗುರುತಿಸಿ ಹಸ್ತಾಂತರಿಸುತ್ತದೆ. ಆ ವ್ಯಾಪ್ತಿಯಲ್ಲಿ ನಿಲ್ಲಿಸುವ ವಾಹನಗಳಿಗೆ ಮಾತ್ರ ಶುಲ್ಕ ವಿಽಸುವುದು ನಿಯಮ. ಆದರೆ, ಇಲ್ಲಿ ಗುತ್ತಿಗೆದಾರರು ತಮಗೆ ನಿಗದಿಪಡಿಸಿದ ಸ್ಥಳದ ಮಿತಿಯನ್ನು ಮೀರಿ, ಹೊರಭಾಗದಲ್ಲಿ ಸ್ವಂತ ಜವಾಬ್ದಾರಿಯ ಮೇಲೆ ವಾಹನ ನಿಲ್ಲಿಸಿ ಪ್ರಯಾಣಕ್ಕೆ ತೆರಳುವ ಸವಾರರಿಂದಲೂ ಬಲವಂತವಾಗಿ ಶುಲ್ಕ ವಸೂಲಿ ಮಾಡುತ್ತಿದ್ದಾರೆ. ಹಣ ನೀಡಲು ನಿರಾಕರಿಸಿದರೆ ಅವಾಚ್ಯ ಶಬ್ದಗಳಿಂದ ನಿಂದಿಸಿ ದಬ್ಬಾಳಿಕೆ ನಡೆಸಲಾಗುತ್ತಿದೆ.
ಪಾರ್ಕಿಂಗ್ ಗಡಿಯನ್ನು ಸ್ಪಷ್ಟವಾಗಿ ಗುರುತಿಸದಿರುವುದು ಮತ್ತು ಈ ಅಕ್ರಮದ ಬಗ್ಗೆ ನಿಗಮದ ಅಧಿಕಾರಿಗಳು ಮೌನ ವಹಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಗುತ್ತಿಗೆದಾರರ ಅಕ್ರಮ ವಸೂಲಿಗೆ ಅಧಿಕಾರಿಗಳ ಮೌನ ಸಮ್ಮತಿಯಿದೆಯೇ ಅಥವಾ ಅವರೂ ಶಾಮೀಲಾಗಿದ್ದಾರೆಯೇ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದ್ದು, ಹಿರಿಯ ಅಧಿಕಾರಿಗಳು ತಕ್ಷಣ ಸ್ಪಷ್ಟನೆ ನೀಡಬೇಕೆಂಬ ಒತ್ತಾಯ ಕೇಳಿಬಂದಿದೆ. ಹೆಸರಿಗೆ ಮಾತ್ರ ಚಾವಣಿ, ಸಿಸಿಟಿವಿ: ವಾಹನಗಳನ್ನು ಬಿಸಿಲು ಮತ್ತು ಮಳೆಯಿಂದ ರಕ್ಷಿಸಲು ನಿರ್ಮಿಸಿರುವ ಚಾವಣಿ ಕಳಪೆಯಾಗಿದ್ದು, ಮಳೆ ನೀರು ಸೋರಿ ವಾಹನಗಳ ಮೇಲೆ ಬೀಳುತ್ತಿದೆ.
ವಾಹನಗಳ ಸುರಕ್ಷತೆಗಾಗಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಅಲ್ಲದೆ, ರಾತ್ರಿ ವೇಳೆ ವಿದ್ಯುತ್ ದೀಪಗಳ ವ್ಯವಸ್ಥೆಯಿಲ್ಲದ ಕಾರಣ ಸವಾರರು ಕತ್ತಲಿನಲ್ಲಿಯೇ ವಾಹನಗಳನ್ನು ನಿಲ್ಲಿಸುವ ಮತ್ತು ಹೊರತೆಗೆಯುವ ಅನಿವಾರ್ಯತೆ ಎದುರಾಗಿದೆ.
ಮಳೆ ಬಂದರೆ ಪಾರ್ಕಿಂಗ್ ಕೊಚ್ಚೆಗುಂಡಿ: ಮಳೆಗಾಲದಲ್ಲಿ ಪಾರ್ಕಿಂಗ್ ಸ್ಟ್ಯಾಂಡ್‌ನ ಅವ್ಯವಸ್ಥೆ ಮತ್ತಷ್ಟು ಬಿಗಡಾಯಿಸುತ್ತಿದೆ. ಮಳೆ ಬಂದರೆ ಇಡೀ ಪ್ರದೇಶ ಕೆಸರುಗದ್ದೆಯಾಗಿ ಮಾರ್ಪಟ್ಟು, ವಾಹನಗಳ ನಡುವೆ ನೀರು ನಿಂತುಕೊಳ್ಳುತ್ತದೆ. ಇದರಿಂದ ಬೈಕ್‌ಗಳನ್ನು ಹೊರತೆಗೆಯಲು ಸವಾರರು ಹರಸಾಹಸ ಪಡಬೇಕಾಗಿದೆ. ವಿಶೇಷ ವಾಗಿ ರಾತ್ರಿ ಪಾಳಿಯ ಕೆಲಸ ಮುಗಿಸಿ ಬರುವವರು ಕೆಸರು ಮತ್ತು ಕತ್ತಲಿನಿಂದಾಗಿ ವಾಹನ ಹೊರ ತೆಗೆಯಲಾಗದೆ ಪರದಾಡುವಂತಾಗಿದೆ. ಅನಿವಾರ್ಯವಾಗಿ ಮರುದಿನ ಬೆಳಿಗ್ಗೆ ಬಂದು ವಾಹನ ತೆಗೆದುಕೊಂಡು ಹೋದರೆ, ಅದಕ್ಕೂ ಹೆಚ್ಚುವರಿ ಪಾರ್ಕಿಂಗ್ ಶುಲ್ಕ ವಸೂಲಿ ಮಾಡಲಾಗುತ್ತಿದೆ ಎಂಬುದು ಸವಾರರ ಅಳಲಾಗಿದೆ.
ಪಾರ್ಕಿಂಗ್ ಸ್ಟ್ಯಾಂಡ್‌ನಲ್ಲಿ ಸಾರ್ವಜನಿಕರಿಗೆ ಕಾಣುವಂತೆ ನಿಗದಿತ ಶುಲ್ಕದ ದರಪಟ್ಟಿಯನ್ನು ಪ್ರದರ್ಶಿಸಿಲ್ಲ. ಎಷ್ಟು ಅವಧಿಗೆ ಎಷ್ಟು ಹಣ ಪಾವತಿಸಬೇಕು ಎಂಬ ಮಾಹಿತಿಯೇ ಲಭ್ಯವಿಲ್ಲದ ಕಾರಣ, ಸಿಬ್ಬಂದಿ ಕೇಳಿದಷ್ಟು ಹಣ ನೀಡಬೇಕಾಗಿದೆ. ಶುಲ್ಕ ಪಡೆಯುವ ಗುತ್ತಿಗೆದಾರರು ವಾಹನಗಳ ಸುರಕ್ಷತೆ ಮತ್ತು ಸ್ಥಳದ ಸ್ವಚ್ಛತೆಯ ಜವಾಬ್ದಾರಿಯನ್ನೂ ನಿರ್ವಹಿಸಬೇಕು. ಆದರೆ, ಇಲ್ಲಿ ಸೌಲಭ್ಯ ಕಲ್ಪಿಸುವಲ್ಲಿ ಸಂಪೂರ್ಣ ನಿರ್ಲಕ್ಷ್ಯ ವಹಿಸಿ, ಕೇವಲ ಹಣ ವಸೂಲಿಗಷ್ಟೇ ಆದ್ಯತೆ ನೀಡಲಾಗುತ್ತಿದೆ. ಸಂಬಂಧಪಟ್ಟ ಮೇಲಧಿಕಾರಿಗಳು ತಕ್ಷಣವೇ ಇತ್ತ ಗಮನಹರಿಸಿ, ಗುತ್ತಿಗೆದಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಸಾರ್ವಜನಿಕರಿಗೆ ಮೂಲ ಸೌಕರ್ಯ ಒದಗಿಸಬೇಕೆಂದು ವಾಹನ ಸವಾರರು ಆಗ್ರಹಿಸಿದ್ದಾರೆ.
” ಪಾರ್ಕಿಂಗ್ ವಿಚಾರ ಕುರಿತು ಸಾಕಷ್ಟು ಆರೋಪಗಳು ಕೇಳಿ ಬರುತ್ತಿವೆ. ದ್ವಿಚಕ್ರ ವಾಹನ ಟೆಂಡರ್‌ದಾರರಿಗೆ ನೋಟಿಸ್ ನೀಡಲಾಗುವುದು. ಈ ಹಿಂದೆ ಟೆಂಡರ್ ಪಡೆದಿದ್ದವರು ಉತ್ತಮವಾಗಿ ಕಾರ್ಯನಿರ್ವಹಿಸಿದ್ದರು. ಈಗ ಟೆಂಡರ್ ಪಡೆದವರ ಮೇಲೆ ಸಾಕಷ್ಟು ದೂರಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ನೋಟಿಸ್ ನೀಡಲಾಗುವುದು.”
-ಕಲಾಶ್ರೀ, ಡಿಟಿಒ, ಕೆಎಸ್‌ಆರ್‌ಟಿಸಿ, ಮೈಸೂರು
ಸೌಲಭ್ಯಗಳೇ ಇಲ್ಲ: ದ್ವಿಚಕ್ರ ವಾಹನಗಳನ್ನು ಬಿಸಿಲು ಮತ್ತು ಮಳೆಯಿಂದ ರಕ್ಷಿಸಲು ಸಮರ್ಪಕ ಚಾವಣಿ ಇಲ್ಲ. ಸಿಸಿಟಿವಿ ಕ್ಯಾಮೆರಾಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ರಾತ್ರಿ ವೇಳೆ ವಾಹನಗಳ ಸುರಕ್ಷತೆಗೆ ಅಗತ್ಯವಾದ ವಿದ್ಯುತ್ ದೀಪಗಳ ವ್ಯವಸ್ಥೆಯೂ ಇಲ್ಲ. ಮಳೆಗಾಲದಲ್ಲಿ ಪಾರ್ಕಿಂಗ್ ಪ್ರದೇಶಕೆಸರುಗದ್ದೆಯಾಗಿ ಮಾರ್ಪಡುತ್ತದೆ. ಪಾರ್ಕಿಂಗ್ ಶುಲ್ಕ ಪಡೆದ ಮೇಲೆ ಸೌಲಭ್ಯ ಕಲ್ಪಿಸಬೇಕು.
-ಪುಟ್ಟಸ್ವಾಮಿ, ಮುದ್ದುಬೀರನಹುಂಡಿ
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಗುರುವಾರ ನಡೆದ ಸಂವಿಧಾನ ದಿನಾಚರಣೆ ಸರ್ಕಾರದ ವತಿಯಿಂದ ನಡೆದ ಕಾರ್ಯಕ್ರಮ. ಹಾಗಿರುವಾಗ ಎಲ್ಲ ಪಕ್ಷಗಳ…
ನವೀನ್ ಡಿಸೋಜ ರಾಷ್ಟ್ರೀಯ ಅಸಾಂಕ್ರಾಮಿಕ ರೋಗಗಳ ಪತ್ತೆ ಮತ್ತು ನಿಯಂತ್ರಣ ಕಾರ್ಯಕ್ರಮದಡಿ ರೋಗ ಪತ್ತೆ-ಚಿಕಿತ್ಸೆಗೆ ವಿಶೇಷ ಗಮನ ಮಡಿಕೇರಿ: ಬದಲಾಗುತ್ತಿರುವ…
ಆದರ್ಶ ಜೀವನಕ್ಕೆ ಪ್ರೇರಣೆ: ಮಹಾತ್ಮ ಗಾಂಧೀಜಿ ಬಗ್ಗೆ ಪ್ರಬಂಧ ಬರೆಯಲು ನಮ್ಮ ಶಾಲೆಯ ಶಿಕ್ಷಕರಾದ ಯಶೋಧ ಮಿಸ್ ನನಗೆ ಪ್ರೇರಣೆ…
ಕೆ.ಪಿ.ಸುರೇಶ್ ರಾಷ್ಟ್ರಪಿತ ಗಾಂಧಿ ಎಂಬ ಅಸ್ತಿತ್ವ ಗಾಳಿಯಷ್ಟೇ ಸಲೀಸು ಎಂಬ ವಾತಾವರಣ ಇತ್ತು. ಆದರೆ ಕಳೆದೊಂದು ದಶಕದಿಂದ ಗಾಂಧಿಯ ಚಾರಿತ್ರ್ಯಹನನ, ಅಪಮಾಹಿತಿಯ…
ಕೆ.ವಿ.ಸುರೇಶ್, ರೀಡರ್, ಸರ್ಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ, ಮೈಸೂರು ಗಾಂಧಿ ಅಭಿಯಾನ ಅರಿವಿನಯಾನ ವಿಷಯ ಕುರಿತ ‘ಆಂದೋಲನ’ ದಿನಪತ್ರಿಕೆಯಸರಣಿ ಲೇಖನಗಳು, ಮುಗ್ಧ…
ಕೆ.ವೆಂಕಟರಾಜು, ರಂಗಕರ್ಮಿ, ಚಾಮರಾಜನಗರ ಗಾಂಧೀಜಿಯವರ ಆತ್ಮಕತೆ ‘ನನ್ನ ಸತ್ಯಾನ್ವೇಷಣೆ’ಗೆ ೧೦೦ ವರ್ಷ. ದೇಶದ ಒಳಗೆ ಗಾಂಧೀಜಿಯವರ ಬಗ್ಗೆ ಅವಜ್ಞೆ ಹಬ್ಬುತ್ತಿರುವ…