Andolana originals

ಗಾಂಧಿ ಎಂಬ ಮರುಕಳಿಕೆ

ಕೆ.ಪಿ.ಸುರೇಶ್

ರಾಷ್ಟ್ರಪಿತ ಗಾಂಧಿ ಎಂಬ ಅಸ್ತಿತ್ವ ಗಾಳಿಯಷ್ಟೇ ಸಲೀಸು ಎಂಬ ವಾತಾವರಣ ಇತ್ತು. ಆದರೆ ಕಳೆದೊಂದು ದಶಕದಿಂದ ಗಾಂಧಿಯ ಚಾರಿತ್ರ್ಯಹನನ, ಅಪಮಾಹಿತಿಯ ಪ್ರಚಾರ ಬಲು ದೊಡ್ಡ ರಾಷ್ಟ್ರೀಯ ಅಭಿಯಾನವಾದಂತಿದೆ! ಇದರ ಹಿಂದೆ ಯಾರಿದ್ದಾರೆ ಎಂಬುದು ಗೊತ್ತು.

ಈ ಘಾತುಕ ಕೆಲಸದಿಂದ ವಿಚಲಿತಗೊಂಡಿರುವ ನಾಗರಿಕ ಸಮಾಜ, ಒಂದಷ್ಟು ಸಾಕ್ಷಿಪ್ರಜ್ಞೆ ಉಳಿಸಿಕೊಂಡಿರುವ ಜನರು ಗಾಂಧಿಯ ಮರು ನೆನಪು ಮಾಡಿಕೊಳ್ಳುತ್ತಿದ್ದಾರೆ. (ನೆಹರು ಮತ್ತು ಸಂವಿಧಾನದ ಕುರಿತೂ ಇದೇ ಬಗೆಯ ದಾಳಿ ನಡೆಯುತ್ತಿದೆ) ಈ ಪ್ರತಿಕ್ರಿಯೆ ಬಲು ಮುಖ್ಯ.

ಆದರೆ ಈ ಬಗೆಯ ಸ್ಮರಣೆ, ಓದು ಮತ್ತು ಪ್ರಸ್ತುತಿಗಳಲ್ಲಿ ಒಂದು ಮಿತಿಯನ್ನು ನಾನು ಕಂಡಿದ್ದೇನೆ. ಇವುಗಳಲ್ಲಿ ಹೆಚ್ಚಿನವು ಗಾಂಧೀ ಕುರಿತಾದ ಮಾಹಿತಿಯ ಗೌರವಪೂರ್ವಕ ಸ್ಮರಣೆ. ಮುಖ್ಯವಾಗಿ ಅವರ ಜೀವನದ ಲಭ್ಯ ವಿವರಗಳ ಪುಟಗಳು, ಅವರ ಅನುಯಾಯಿಗಳ ಧಿರೋದಾತ್ತ ನಡೆಗಳು ಇಲ್ಲಿ ಅರಿವಿನ ಮಜಲು ತುಂಬಿವೆ.

ವರ್ತಮಾನದಲ್ಲಿ ಗಾಂಧಿಯನ್ನು ಸ್ವಚ್ಛ ಭಾರತದ ಕನ್ನಡಕವಾಗಿ ಕೂರಿಸಲಾಗಿದೆ. ಇನ್ನೊಂದೆಡೆ ಗ್ರಾಮೀಣ ರಚನಾತ್ಮಕ ಕಾರ್ಯಗಳನ್ನು, ಖಾದಿ ತಯಾರಿಕೆಯನ್ನು, ಗಾಂಧಿಯ ಅನುಸರಣೆ ಎಂದು ಹೊಗಳಿ ಪೋಷಿಸಲಾಗುತ್ತಿದೆ.

ಈ ವಿಕೃತ ವೈರುಧ್ಯವನ್ನು ಕೊಂಚ ವಿವರಿಸಬೇಕಿದೆ. ಗಾಂಧಿ ಏಕಕಾಲಕ್ಕೆ ಗ್ರಾಮೀಣ ಆರ್ಥಿಕತೆಯನ್ನು ಕಟ್ಟುವುದನ್ನು ವಿದೇಶಿ ಬಂಡವಾಳಶಾಹಿ, ವಸಾಹತುಶಾಹಿ ವಿರುದ್ಧದ ಸಾಧನವಾಗಿ ಬಳಸಿದರು. ಎರಡನೆಯದಾಗಿ ನಮ್ಮ ದೇಶದ ಸಾಮಾಜಿಕ ತಾರತಮ್ಯ ಶೋಷಣೆಯನ್ನು ಹೋಗಲಾಡಿಸಲು ಸಾಮಾಜಿಕ ಶ್ರೇಣಿಯ, ವರ್ಣಾಶ್ರಮ ವ್ಯವಸ್ಥೆಯ ವಾರಸುದಾರರ ವಿರುದ್ಧದ ಮೇಲ್ಜಾತಿಯ ಅಂತಃ ಸಾಕ್ಷಿಯಾಗಿ ನಿಂತರು.

ಮೂರನೆಯದಾಗಿ, ವಸಾಹತುಶಾಹಿಯು ಪ್ರಭುತ್ವವೂ ಆಗಿದ್ದರ ಅರಿವು ಅವರಿಗಿತ್ತು. ಆದ್ದರಿಂದಲೇ ಪ್ರಭುತ್ವದ ವಿರುದ್ಧ ನಿರಂತರ ಹೋರಾಡಿದರು. ಈ ಮೂರೂ ಅಂಶಗಳೇ ಗಾಂಧಿಯನ್ನು ವಿಶಿಷ್ಟವಾಗಿಸಿರುವುದು. ಇವು ಜಡೆಯ ಹೆಣಿಗೆಯ ರೀತಿ ಇರುವ ಮೂರು ಎಳೆಗಳು. ಇವುಗಳಲ್ಲಿ ಒಂದನ್ನು ಮಾತ್ರ ಆರಿಸಿಕೊಂಡರೆ ಅದು ಗಾಂಧಿಯ ಅನುಸರಣೆಯಾಗುವುದು ಸಾಧ್ಯವಿಲ್ಲ. ಅರ್ಥಾತ್, ಗಾಂಧಿಯ ಹಾದಿ ಬಗ್ಗೆ ಆಸಕ್ತಿ ಇರುವವರು, ಬದ್ಧತೆ ಇರುವವರು ವರ್ತಮಾನದಲ್ಲಿ ಈ ಮೂರೂ ಅಂಶಗಳು ಪಡೆದಿರುವ ಸ್ವರೂಪಗಳನ್ನು ಅರ್ಥ ಮಾಡಿಕೊಳ್ಳಬೇಕು.

ಗಾಂಧಿ ಭಾರತಕ್ಕೆ ಮರಳಿದಾಗ ಮಾಡಿದ ಮೊದಲ ಭಾಷಣ ವಾರಣಾಸಿಯಲ್ಲಿ. ಅಲ್ಲಿದ್ದ ರಾಜ ಮಹಾರಾಜರನ್ನು ಉದ್ದೇಶಿಸಿ ಈ ಸಂಪತ್ತೆಲ್ಲಾ ಭಾರತದ ಬಡವರಿಂದ ಮಾಡಿದ ಸುಲಿಗೆ ಎಂದು ಖಂಡಿಸಿದರು. ಈ ಭಾಷಣ ಮಾಡುತ್ತಿದ್ದಂತೆ ಎಷ್ಟು ಕೋಲಾಹಲ ಎದ್ದಿತೆಂದರೆ ಅನಿಬೆಸೆಂಟ್ ಈ ಗಾಂಧಿ ಭಾಷಣವನ್ನು ಅರ್ಧಕ್ಕೇ ನಿಲ್ಲಿಸಿದರು!

ಈ ನೈತಿಕ ಸ್ಥೈರ್ಯವೇ ಮೋಹನದಾಸ್ ಎಂಬ ಸಾಮಾನ್ಯನನ್ನು ಅಸಾಮಾನ್ಯವಾಗಿಸಿದ್ದು. ಇಂದು ಗಾಂಧಿ ಕಂಡ ವಾಸ್ತವಗಳ ಸ್ವರೂಪವೇನು? ಗ್ರಾಮೀಣ ಭಾರತ ನಿರಂತರ ಬಡವಾಗಿದೆ. ಸಣ್ಣ ಗುಡಿ ಕೈಗಾರಿಕೆಯಲ್ಲೂ ತಯಾರಿಸಬಹುದಾದ ಹಿಟ್ಟು, ಎಣ್ಣೆ ಬಹುರಾಷ್ಟ್ರೀಯ ಕಂಪೆನಿಗಳ ಪಾಲಾಗಿದೆ. ನಾವು ಬಳಸುವ ಫ್ರೀಡಂ(ಆ ಹೆಸರಿನ ವ್ಯಂಗ್ಯ ಗಮನಿಸಿ) ಅದಾನಿಯದ್ದು. ಹಿಟ್ಟಿನ ಬ್ರಾಂಡುಗಳು ಐಟಿಸಿಯದ್ದು ಅಥವಾ ಇನ್ನಿತರ ಕಂಪೆನಿಗಳದ್ದು. ಕುಡಿಯುವ ನೀರೂ ಈ ಕಂಪೆನಿಗಳು ಕಬ್ಜ ಮಾಡಿವೆ. ಅರ್ಥಾತ್ ಎಲ್ಲರೂ ಕೇವಲ ಗ್ರಾಹಕರಾಗಿದ್ದಾರೆ. Production by the masses ಎಂದು ಗಾಂಧಿ ಹೇಳಿದ್ದರು. ಇಂದು ಇಡೀ ಭಾರತದ ಮಂದಿ ಗ್ರಾಹಕರಾಗಿದ್ದಾರೆ! ನಾವು- ನೀವು ಸೇರಿ. ಎರಡನೆಯದಾಗಿ, ದೇಶದ ಎಲ್ಲಾ ಬಲಾಢ್ಯ ಜಾತಿಗಳೂ ಸ್ಪರ್ಧಾತ್ಮಕವಾಗಿ ಅಧಿಕಾರದ ಪಾಲು ಪಡೆಯಲು ಹೊರಟಿವೆ.

ಸಾವಿರಾರು ಅಂಚಿಗೆ ಸರಿದ ಜಾತಿ ಸಮುದಾಯಗಳು ದಿಕ್ಕೆಟ್ಟು ಕೂತಿವೆ. ಜೇನು ಕುರುಬ ಸೋಲಿಗರಿಂದ ಹಿಡಿದುನೂರಾರು ಸಮುದಾಯಗಳು ಯಾವ ಆರ್ಥಿಕ, ರಾಜಕೀಯ ಪಾಲೂ ದೊರಕದೇ ಅನಾಮಿಕವಾಗಿವೆ. ಅಷ್ಟೇಕೆ ಈ ಶೋಷಣೆಯ ವಿರುದ್ಧದ ಹೋರಾಟವೂ ಆ ಜಾತಿಗಳಿಗೆ ಸಂಬಂಧಿಸಿದ್ದು ಎಂಬ ಅಸಡ್ಡೆಯಲ್ಲಿ ನಾವಿದ್ದೇವೆ.

ಇನ್ನು ಪ್ರಭುತ್ವ ಹಿಂದೆಂದೂ ಇಲ್ಲದಷ್ಟು ಕೋಮು ಧ್ರುವೀಕರಣದ ಮಸೂರದ ಮೂಲಕ ಪ್ರಜೆಗಳನ್ನು ನೋಡುತ್ತಿದೆ. ಭಿನ್ನ ಮತವನ್ನು ರಾಷ್ಟ್ರದ್ರೋಹವೆಂಬಂತೆ ನೋಡುತ್ತಿದೆ. ಆರ್ಥಿಕವಾಗಿ ಈ ದೇಶದಲ್ಲಿ ಒಂದು ಗುಂಡು ಸೂಜಿಯೂ ತಯಾರಿಸಲಾರದಷ್ಟು ವಿದೇಶೀ ಉತ್ಪನ್ನಗಳು ತುಂಬಿವೆ. ಒಂದು ಕಾರು ಬಿಡಿ, ಒಂದು ಮೊಬೈಲೂ ನಮ್ಮದೆಂದಿಲ್ಲ.

ಜನರೇ ವಸ್ತು ವಿಶೇಷಗಳಿಗೆ ಎಷ್ಟು ಲೋಲುಪರಾಗಿದ್ದಾರೆಂದರೆ ಬಿಲಿಯನ್‌ಗಟ್ಟಲೆ ಡಾಲರುಗಳ ವಿದೇಶೀ ವಸ್ತುಗಳ ಖರೀದಿಯ ಪೈಪೋಟಿಗೆ ಬಿದ್ದಿದ್ದಾರೆ. ಅವರು ಯಾರು? ಅಂದರೆ ನಾವೇ! ಗಾಂಧಿ ಮುಖ್ಯವಾಗುವುದು ಇಲ್ಲಿ. ಈ ಅಂಶಗಳಲ್ಲಿ ಗಾಂಧಿ ಕಂಡ ಕಾಣ್ಕೆ ಮತ್ತು ನಮ್ಮ ಕಾಲದ ರೂಪಾಂತರಗಳನ್ನು ಗಮನಿಸಿ ಅವುಗಳನ್ನು ಪರ್ಯಾಯದೊಂದಿಗೆ ಎದುರಿಸುವ ಸ್ಥೈರ್ಯ ಮುಖ್ಯವಾಗಬೇಕು. ಇಲ್ಲವಾದರೆ ನಮ್ಮ ನಡೆಗಳೆಲ್ಲಾ, ಅವರೇ ಹೋರಾಡಿದ ಸಂಗತಿಗಳ ಬೆಂಬಲಿಗರಾಗಿ ನಾವಿದ್ದು,ಗಾಂಧಿಗೆ ಔಪಚಾರಿಕ ಗೌರವ ಸಲ್ಲಿಸುವ ನಟನೆ ಆಗಿಬಿಡುತ್ತದೆ. ದೇಶೀಯ ಸ್ವಾಯತ್ತತೆಯ ಸಂಕೇತವಾಗಿ ಉಪ್ಪನ್ನು ಗಾಂಧಿ ಪರಿಗಣಿಸಿದ್ದರು. ಇಂದು ನಾವು ಬಳಸುವ ಉಪ್ಪು? ಬಡ ಉಪ್ಪು ತಯಾರಿಸುವವನದ್ದಲ್ಲ. ಏಕಕಾಲಕ್ಕೆ ನಮ್ಮ ಕಾಲದಲ್ಲಾದ ದೊಡ್ಡ ಬದಲಾವಣೆಯ ಅರಿವು, ಅದಕ್ಕೆ ನಾವು ನೀಡಿದ ಇಷ್ಟಿಷ್ಟೇ ಕೊಡುಗೆ ಬಗ್ಗೆ ಆತ್ಮ ನಿರೀಕ್ಷಣೆ ಮೂಡಿದಲ್ಲಿ ಗಾಂಧಿ ಮತ್ತೆ ಚಿಗುರೊಡೆಯಬಲ್ಲರು. ಇಲ್ಲವಾದರೆ ಗಾಂಧಿಯೂ ರಾಷ್ಟ್ರಧ್ವಜದ ಹಾಗೆ ಆ ದಿನ ತಾಲ್ಲೂಕಾಫೀಸಲ್ಲಿ ಕೊಡವಿ ತೆಗೆವ ಬಟ್ಟೆ ಅಷ್ಟೇ.

ಆಂದೋಲನ ಡೆಸ್ಕ್

Recent Posts

ವರ್ತಮಾನದ ಕಣ್ಣಲ್ಲಿ ಸತ್ಯಾನ್ವೇಷಕ ಗಾಂಧಿ

ಆದರ್ಶ ಜೀವನಕ್ಕೆ ಪ್ರೇರಣೆ: ಮಹಾತ್ಮ ಗಾಂಧೀಜಿ ಬಗ್ಗೆ ಪ್ರಬಂಧ ಬರೆಯಲು ನಮ್ಮ ಶಾಲೆಯ ಶಿಕ್ಷಕರಾದ ಯಶೋಧ ಮಿಸ್ ನನಗೆ ಪ್ರೇರಣೆ…

1 min ago

ಗಾಂಧಿ ಪ್ರಭಾವಳಿ

ಕೆ.ವಿ.ಸುರೇಶ್, ರೀಡರ್, ಸರ್ಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ, ಮೈಸೂರು ಗಾಂಧಿ ಅಭಿಯಾನ ಅರಿವಿನಯಾನ ವಿಷಯ ಕುರಿತ ‘ಆಂದೋಲನ’ ದಿನಪತ್ರಿಕೆಯಸರಣಿ ಲೇಖನಗಳು, ಮುಗ್ಧ…

17 mins ago

ಒಂದು ಅಪೂರ್ವ, ಸಾರ್ಥಕ ಪ್ರಯತ್ನ

ಕೆ.ವೆಂಕಟರಾಜು, ರಂಗಕರ್ಮಿ, ಚಾಮರಾಜನಗರ ಗಾಂಧೀಜಿಯವರ ಆತ್ಮಕತೆ ‘ನನ್ನ ಸತ್ಯಾನ್ವೇಷಣೆ’ಗೆ ೧೦೦ ವರ್ಷ. ದೇಶದ ಒಳಗೆ ಗಾಂಧೀಜಿಯವರ ಬಗ್ಗೆ ಅವಜ್ಞೆ ಹಬ್ಬುತ್ತಿರುವ…

25 mins ago

ಗಾಂಯನ್ನು ಇನ್ನೊಮ್ಮೆ ಇಣುಕಿ ನೋಡುವ ‘ಆಂದೋಲನ’ದ ಪ್ರಯತ್ನ ಶ್ಲಾಘನೀಯ

ಸದಾನಂದ ಆರ್., ಆಂಗ್ಲ ಭಾಷಾ ಉಪನ್ಯಾಸಕರು, ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು, ಹುಣಸೂರು ಇತ್ತೀಚೆಗೆ ದೆಹಲಿಯ ಹಾದಿ ಬೀದಿಗಳಲ್ಲಿ ಜಿರಲೆಗಳು…

33 mins ago

ಗಾಂಧೀಜಿಯವರನ್ನು ಮತ್ತೊಮ್ಮೆ ಓದೋಣ..

ರವಿ ಕೋಟೆ, ಸಂಪಾದಕ  ಗಾಂಧೀಜಿಯವರ ಬಗ್ಗೆ ಮಾತನಾಡುವವರು ಇಂದು ಬಹಳ ಮಂದಿ; ಅವರನ್ನು ಹೊಗಳುವವರೂ ಇದ್ದಾರೆ, ತೆಗಳುವವರೂ ಇದ್ದಾರೆ. ಆದರೆ,…

47 mins ago