ಆಂದೋಲನ 50

ಸ್ನೇಹಜೀವಿ – ಸಮಾಜವಾದಿ ಚಿಂತಕ ರಾಜಶೇಖರ ಕೋಟಿ

ಆಂದೋಲನ ದಿನ ಪತ್ರಿಕೆಯ ಹಿತೈಷಿ ಅಭಿಮಾನಿ ಬಳಗದಲ್ಲಿ ನಾನು ಒಬ್ಬ. ಕಳೆದ 50 ವರ್ಷಗಳಿಂದ ನಾನು ‘ಆಂದೋಲನದ’ ಓದುಗನಾಗಿದ್ದೇನೆ. ಮತ್ತು ಅದರ ಒಡನಾಟದಲ್ಲಿದ್ದೇನೆ. ಈ 50 ವರ್ಷಗಳಲ್ಲಿ ಆಂದೋಲನ ಬೆಳೆದು ಬಂದ ಹಾದಿ ಅಷ್ಟು ಸುಗಮವಾಗಿಯೇನೂ ಇರಲಿಲ್ಲ. ಅದು ಅನೇಕ ಏಳು-ಬೀಳು, ಕಷ್ಟ-ಸುಖ ಅನುಭವಿಸಿದೆ. ಬಹಳ ಕಷ್ಟದ ದಿನಗಳಲ್ಲೂ ರಾಜಶೇಖರ ಕೋಟಿಯವರು ಆತ್ಮಸ್ಥೈರ್ಯ ಕಳೆದುಕೊಳ್ಳದೆ ಅದನ್ನು ಮುನ್ನಡೆಸಿಕೊಂಡು ಬಂದ ರೀತಿ ಒಂದು ರೋಚಕ ಇತಿಹಾಸವೇ ಸರಿ.

ರಾಜಶೇಖರ ಕೋಟಿ ಅವರು ಮೂಲತಃ ಒಬ್ಬ ಸಮಾಜವಾದಿ ಚಿಂತಕ, ಪಾಟೀಲ ಪುಟ್ಟಪ್ಪ ಅವರ ಪ್ರಪಂಚ ಪತ್ರಿಕೆಯಲ್ಲಿ ದುಡಿದು ಅನುಭವಿಯಾದರು. ಮೈಸೂರಿನ ಸಮಾಜವಾದಿ ಸಮಾನ ಮನಸ್ಕ ಗೆಳೆಯರಾದ ಪ್ರೊ ಎಂ.ಡಿ ನಂಜುಂಡಸ್ವಾಮಿ, ಡಾ. ಯು. ಆರ್ ಅನಂತಮೂರ್ತಿ, ದೇವನೂರು ಮಹಾದೇವ, ಪ್ರೊ.ಜಿ.ಹೆಚ್.ನಾಯಕ್, ಪ.ಮಲ್ಲೇಶ್, ಕಾಳೇಗೌಡ ನಾಗವರ, ಆಲನಹಳ್ಳಿ ಕೃಷ್ಣ, ಕೆ ರಾಮದಾಸ್ ಮುಂತಾದವರ ಸಂಪರ್ಕದಿಂದ ಕೋಟಿ ಅವರು ಮೈಸೂರಿಗೆ ಬಂದು ಸಮಾಜವಾದಿ ಸಿದ್ಧಾಂತದ ಹಿನ್ನೆಲೆಯ ಆಂದೋಲನ ಪತ್ರಿಕೆಯನ್ನು ತರುವಂತಾಯಿತು.

‘ಆಂದೋಲನ’ ಪ್ರಾರಂಭದ ದಿನಗಳಲ್ಲಿ ರಾಜಶೇಖರ ಕೋಟಿ ಅವರು ಪಟ್ಟ ಪಾಡನ್ನು ನೆನೆಸಿಕೊಂಡರೆ ಈಗಲೂ ಕರುಳು ಚುರ್ರ್ ಎನ್ನುತ್ತದೆ. ಕೆಜಿಕೊಪ್ಪಲಿನಲ್ಲಿ ಒಂದು ಸಣ್ಣ ಮಳಿಗೆ, ಪ್ರೆಸ್ಸು ಕಚೇರಿ ಎಲ್ಲ ಅಲ್ಲಿಯೇ. ಸ್ವತಃ ರಾಜಶೇಖರ ಕೋಟಿ ಅವರೇ ಮೊಳೆಜೋಡಿಸಿ ಕಂಪೋಸ್ ಮಾಡಿ, ಕಾಲಿಂದ ಒತ್ತುವ ಮುದ್ರಣ ಯಂತ್ರದಲ್ಲಿ ಪತ್ರಿಕೆಯ ಮುದ್ರಣ ಕಾರ್ಯ ಪೂರೈಸುತ್ತಿದ್ದರು. ಅನಂತರ ಬೀದಿ ಬೀದಿ ಸುತ್ತಿ ಅವರೇ ಪತ್ರಿಕೆ ವಿತರಣೆಯ ಕೆಲಸವನ್ನೂ ಮಾಡುತ್ತಿದ್ದರು.ಅವರ ಅವಿರತ ದುಡಿಮೆಯ ಫಲವಾಗಿ ಪತ್ರಿಕೆ ತಳವೂರಿ ನಿಲ್ಲುವಂತಾಯಿತು.

ವಿಕ್ರಾಂತ್ ಟಯರ್ಸ್ ಲಿಮಿಟೆಡ್ ನ ನೌಕರ ಸತ್ಯದೇವ್ ಈಜು ಕೊಳವೊಂದರಲ್ಲಿ ಕೊಲೆಯಾದರು. ಅಂದಿನ ಡಿಸಿಪಿ ಸೋಮಶೇಖರ್ ಮೇಲೆ ಕೊಲೆ ಆರೋಪ ಬಂದಿತು. ಆಗ ರಾಜಶೇಖರ ಕೋಟಿಯವರು ಸ್ವತಃ ಶ್ರಮವಹಿಸಿ ಅನ್ವೇಷಣೆ ನಡೆಸಿ ತನಿಖಾ ಪತ್ರಿಕೋದ್ಯಮಕ್ಕೆ ಮಾದರಿ ಎಂಬಂತೆ ವರದಿ ಪ್ರಕಟಿಸಿದರು. ದಂತ ಚೋರ ವೀರಪ್ಪನ್ ಸಹಚರರ ಚಲನ ವಲನಗಳನ್ನು ಸ್ವತಃ ರಾಜಶೇಖರ ಕೋಟಿ ಅವರು ಫೀಲ್ಡ್ ವರ್ಕ್ ಮಾಡಿ ವರದಿ ಮಾಡುತ್ತಿದ್ದರು. ಪ್ರಾಯಶಃ ಈ ಎರಡೂ ವರದಿಗಳಲ್ಲಿಯ ಪ್ರಾಮಾಣಿಕತನವನ್ನು ಕಂಡು ಮೈಸೂರು ಭಾಗದ ಓದುಗರು ಆಂದೋಲನದ ಹಿಂದೆ ಬಿದ್ದರೇನಬಹುದು. ಪತ್ರಿಕೆಯ ಬೆಳವಣಿಗೆಗೆ ಈ ರೀತಿಯ ಆಕರ್ಷಕ ಮತ್ತು ಗುಣಾತ್ಮಕ ವರದಿಗಳು ಮುಖ್ಯ ಕಾರಣವೆಂದು ಹೇಳಬಹುದು.

‘ಆದೋಲನ’ ಪತ್ರಿಕೆ ನಡೆಸುತ್ತಿದ್ದ ‘ಆಂದೋಲನ ಭವನ’ವನ್ನು ಬ್ಯಾಂಕ್ ಸಾಲದ ಹೊರೆಯಿಂದ ಕೋಟಿಯವರು ಮಾರಾಟ ಮಾಡಬೇಕಾಗಿ ಬಂದಿತು. ಆಗ ಅವರು “ವಿಶ್ವೇಶ್ವರ ನಗರದಲ್ಲಿರುವ ಆದಿಕರ್ನಾಟಕ ಮಹಾಸಂಸ್ಥೆಗೆ ಸೇರಿದ ನಿವೇಶನದಲ್ಲಿ ತಾತ್ಕಾಲಿಕವಾಗಿ ಬಾಡಿಗೆ ಆಧಾರದಲ್ಲಿ ಕೆಲದಿವಸ ಪ್ರೆಸ್ ನಡೆಸಲು ವ್ಯವಸ್ಥ ಮಾಡಿಕೊಳ್ಳುವೆ. ಆದರೆ ಒಂದು ಷರತ್ತು ಏನೆಂದರೆ ಅದು ದಲಿತಬಾಂಧವರ ಆಸ್ತಿಯಾದುದರಿಂದ ಒಂದು ಆಕ್ಷೇಪಣೆ ಬಂದರೂ ನನಗದು ಬೇಡ” ಎಂದರು. ನಾನು ಅವರ ವಿಚಾರ ಒಪ್ಪಿ ಕರ್ನಾಟಕ ಮಹಾಸಂಸ್ಥೆಯ ಸರ್ವ ಸದಸ್ಯರ ಸಭೆ ಕರೆದು ವಿಷಯ ಪ್ರಸ್ತಾಪಿಸಿದೆ. ಎಲ್ಲಾ ಸದಸ್ಯರು ಒಕ್ಕೊರಲಿನಿಂದ ಆಂದೋಲನ ನಮ್ಮ ಪತ್ರಿಕೆ ಅದನ್ನು ಬಳಸಿಕೊಳ್ಳಲು ನಮ್ಮ ಯಾವುದೇ ತಕರಾರು ಇಲ್ಲ ಎಂದರೆ. ಆ ಸಭೆಯಲ್ಲಿ ರಾಜಶೇಖರ ಕೋಟಿ ಅವರೂ ಇದ್ದರು. ಇನ್ನೇನು ಅಲ್ಲಿ ಪ್ರೆಸ್ ಹಾಕಲು ವ್ಯವಸ್ಥೆ ಮಾಡಿಕೊಳ್ಳಬೇಕು ಎನ್ನುತ್ತಿರುವಾಗ ಅಶೋಕಪುರಂನಿಂದ ತಕರಾರಿನ ಧಾಟಿಯಲ್ಲಿ ಅನಾಮಧೇಯ ಪತ್ರವೊಂದು ಕೋಟಿ ಅವರಿಗೆ ಹೋಗಿತ್ತು. ಅದನ್ನು ಕಂಡ ಕೋಟಿ ಅವರ ತಮ್ಮ ತೀರ್ಮಾನ ಬದಲಿಸಿದರು. ನಾವು ಎಷ್ಟೇ ಬಲವಂತ ಮಾಡಿದರೂ ಅವರು ಒಪ್ಪಲಿಲ್ಲ. ರಾಜಶೇಖರ ಕೋಟಿ ಅವರು ಅಷ್ಟು ಸೂಕ್ಮ ಮತ್ತು ಸಂವೇದನಾಶೀಲರಾಗಿದ್ದರು.

ಪ್ರಾಯಶಃ ಒಂದು ಜಿಲ್ಲಾ ಪತ್ರಿಕೆ ಇಷ್ಟು ಪ್ರಮಾಣದಲ್ಲಿ ಪ್ರಸಾರ ಕಂಡ ಉದಾಹರಣೆ ಇನ್ನೊಂದಿರಲಾರದು. ಅವಿಭಜಿತ ಮೖೆಸೂರು ಜಿಲ್ಲೆಯ ಹಳ್ಳಿ ಹಳ್ಳಿಗಳಲ್ಲಿಯೂ ‘ಆಂದೋಲನ’ದ ಓದುಗ ವರ್ಗ ನಿರ್ಮಾಣವಾಯಿತು.

ರಾಜಶೇಖರ ಕೋಟಿ ಅವರ ಮತ್ತು ನನ್ನ ಸಂಬಂಧ ಹೆಚ್ಚಾಗಿ ಬೆಳೆದಿದ್ದು ಜೆ.ಪಿ ಅವರ ಸಮಗ್ರಕ್ರಾಂತಿ ಚಳುವಳಿಯ ಸಂದರ್ಭದಲ್ಲಿ.ಅಂದು ದೇಶದಲ್ಲಿ ತುರ್ತು ಪರಿಸ್ಛಿತಿ ಜಾರಿಯಲ್ಲಿದ್ದ ಕಾಲ. ನಾವಿಬ್ಬರೂ ಸಕ್ರಿಯವಾಗಿ ಈ ಚಳುವಳಿಯಲ್ಲಿ ಭಾಗವಹಿಸಿದ್ದೆವು.ಅನಂತರ ನಾನು ಪಾರ್ಲಿಮೆಂಟ್ ಚುನಾವಣೆಯಲ್ಲಿ ಸ್ಪರ್ಧಿಸಿದೆ. ಆಗ ನಮ್ಮ ಸಂಬಂಧ ಮತ್ತಷ್ಟು ಗಾಢವಾಯಿತು.

ನಾನು ಸಂಸದನಾಗಿ ದೆಹಲಿಯಲ್ಲಿದ್ದಾಗ ಕೇಂದ್ರ ಸರ್ಕಾರದ ವಾರ್ತಾ ಮತ್ತು ಪ್ರಸಾರ ಇಲಾಖೆಯ ಜಾಹೀರಾತನ್ನು ‘ಆಂದೋಲನ’ ಕ್ಕೂ ಕೊಡಿಸಲು ಓಡಾಡಿದೆ. ದೆಹಲಿಗೆ ಬಂದಾಗ ರಾಜಶೇಖರ ಕೋಟಿ ನಮ್ಮ ಮನೆಯಲ್ಲಿಯೇ ಉಳಿದುಕೊಳ್ಳುತ್ತಿದ್ದರು.

ಬದನವಾಳು ಕೋಮು  ಗಲಭೆಯಲ್ಲಿ ಪತ್ರಕರ್ತರಾಗಿ ರಾಜಶೇಖರ ಕೋಟಿ ನನಗೆ ಬೆಂಬಲವಾಗಿ ನಿಂತರು. ಈ ದಿನದಲ್ಲಿ ಧಾರ್ಮಿಕ ಮುಖಂಡರು ಇಡೀ ವೀರಶೈವ ಸಮಾಜ ಕಾರಣವಲ್ಲ: ಕೆಲವು ಕಿಡಿಗೇಡಿಗಳು ಮಾತ್ರ ಕಾರಣ ಎಂಬ ನನ್ನ ವಿಚಾರಗಳನ್ನು ಮುಖಪುಟದಲ್ಲಿ ಹಾಕಿಸಿದ್ದರು. ಮುಂದೆ ಉಮ್ಮತ್ತೂರು ಗಲಬೆಯಲ್ಲಿ ಪೂರ್ವಗ್ರಹದಿಂದ ಕೆಲವು ಜನ ರಾಜಶೇಖರ ಕೋಟಿ ಅವರ ಮೇಲೆ ತಿರುಗಿ ಬಿದ್ದು ಅವರಿಗೆ ಬೆದರಿಕೆ ಹಾಕಿದರು. ಆದರೆ ಅವರು ಅಂಜಲಿಲ್ಲ ಮತ್ತು ತಮ್ಮ ಪತ್ರಿಕಾ ಧರ್ಮವನ್ನು ಬಿಡಲಿಲ್ಲ.

ರಾಜಶೇಖರ ಕೋಟಿ ಅವರು ಈ ದೇಶದಲ್ಲಿ ನೂರಾರು ವರ್ಷಗಳಿಂದ ರೂಢಿಯಲ್ಲಿರುವ ಅಸ್ಪೃಶ್ಯತೆ ಆಚರಣೆ ಮತ್ತು ದಲಿತರ ಮೇಲಿನ ದೌರ್ಜನ್ಯಕ್ಕೆ ನೊಂದಿದ್ದರು. ಅವರು ಆಗಾಗ ಹೇಳುತ್ತಿದ್ದ “ನಾನು ದಲಿತನಲ್ಲದಿದ್ದರೂ ಅಸ್ಪೃಶ್ಯತೆಯ ಆಚರಣೆ ಮತ್ತು ದಲಿತರ ವೇತನ ಕಂಡಾಗ ನನ್ನ ರಕ್ತ ಕುದಿಯುತ್ತದೆ.” ನಿಮ್ಮ ಮಾತು ಅವರಲ್ಲಿದ್ದ ಸಮಾನತಾ ಮನೋಧರ್ಮವನ್ನು ಆರೋಗ್ಯಕರ ಮನಸ್ಥಿತಿಯನ್ನು ಸೂಚಿಸುತ್ತದೆ.

“ನೀನು ಏನಾದರೂ ಆಗು, ಆದರೆ ಸಿದ್ಧಾಂತದ ಜೊತೆ ರಾಜಿಯಾಗಬೇಡ” ಎಂಬ ರಾಮ ಮನೋಹರ ಲೋಹಿಯಾ ಅವರ ಮಾತಿಗೆ ರಾಜಶೇಖರ ಕೋಟಿ ಅವರ ಬದುಕು ಒಂದು ಉಜ್ವಲವಾದ ನಿದರ್ಶನವಾಗಿತ್ತು. ರಾಜಶೇಖರ ಕೋಟಿ ಅತ್ಯುತ್ತಮ ಮಾನವೀಯ ಗುಣವುಳ್ಳವರಾಗಿದ್ದರು.( he is an excellent human being) ಈಗ ಅವರು ಭೌತಿಕವಾಗಿ ನಮ್ಮೊಡನಿಲ್ಲ. ಆದರೆ ಪ್ರತಿದಿನ ಬೆಳಿಗ್ಗೆ ‘ಆಂದೋಲನ’ ಪತ್ರಿಕೆ ನೋಡುತ್ತಿದ್ದಂತೆ  ಅವರ ವ್ಯಕ್ತಿತ್ವ ನಮ್ಮ ಮನುಭೂಮಿಕೆಯಲ್ಲಿ ಮೂಡುತ್ತದೆ.ಈ ಹಿನ್ನೆಲೆಯಲ್ಲಿ ರಾಜಶೇಖರ ಕೋಟಿ ಅಮರರೆಂದೇ ಹೇಳಬೇಕು.

50 ವರ್ಷಗಳು ಆಗಿರುವ ಈ ಸಂದರ್ಭದಲ್ಲಿ ಆಂದೋಲನ ದಿನ ಪತ್ರಿಕೆಗೆ ಅಭಿನಂದನೆಗಳನ್ನು ಸಲ್ಲಿಸುತ್ತಾ: ಪತ್ರಿಕೆ ಹೀಗೆಯೇ ಸಮಾಜಮುಖಿಯಾಗಿ ನೂರು ವರ್ಷ ಸಾಗಲೆಂದು ಆಶಿಸುವೆ.

ವಿ. ಶ್ರೀನಿವಾಸಪ್ರಸಾದ್

ಲೋಕಸಭಾ ಸದಸ್ಯರು,

ಚಾಮರಾಜನಗರ ಲೋಕಸಭಾ ಕ್ಷೇತ್ರ.

 

andolana

Recent Posts

ಕೊಳ್ಳೇಗಾಲ: ಅಂಬೇಡ್ಕರ್ ಪ್ರತಿಮೆಗೆ ಸಿಎಂ ಡಿ.ಕೆ.ಶಿವಕುಮಾರ್ ಮಾಲಾರ್ಪಣೆ

ಹನೂರು : ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದಲ್ಲಿರುವ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು…

18 hours ago

ಶಿಕಾರಿಪುರದಿಂದ ‘ಭಾರತ್ ಜೋಡೋ 2.0’ ಪಾದಯಾತ್ರೆಗೆ ಚಾಲನೆ!

ಶಿವಮೊಗ್ಗ: ಕಾಂಗ್ರೆಸ್‌ ಸೋತಿರುವ 84 ವಿಧಾನಸಭಾ ಕ್ಷೇತ್ರಗಳನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್‌ ಸಂಘಟನೆ ಬಲಪಡಿಸಲು ಪಾದಯಾತ್ರೆ ಆರಂಭಿಸಲಾಗಿದೆ. ಕೆಪಿಸಿಸಿ ಅಧ್ಯಕ್ಷ ಬಿ.ಕೆ.…

18 hours ago

ಚಾಮರಾಜನಗರ ಎಂದರೆ ನನಗೆ ಬಲು ಪ್ರೀತಿ: ಸಿಎಂ ಡಿ.ಕೆ.ಶಿವಕುಮಾರ್‌

ಹನೂರು: ಚಾಮರಾಜನಗರ ಎಂದರೆ ನನಗೆ ಬಲು ಪ್ರೀತಿ, ನನ್ನ ಕ್ಷೇತ್ರದ ಪಕ್ಕದಲ್ಲೇ ಚಾಮರಾಜನಗರ ಜಿಲ್ಲೆ ಇದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್…

18 hours ago

ಹನೂರು ತಾಲೂಕಿನಲ್ಲಿ ಮುಂದುವರಿದ ಮಳೆ ಅವಾಂತರ: ಹಳ್ಳದಲ್ಲಿ ಗಣಪತಿ ದೇವಾಲಯ ಜಲಸಮಾಧಿ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕು ವ್ಯಾಪ್ತಿಯಲ್ಲಿ ಕಳೆದ ಎರಡು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವ…

19 hours ago

ಹನೂರಿನಲ್ಲಿ ಮಳೆಯ ಅಬ್ಬರ: 50ಕ್ಕೂ ಹೆಚ್ಚು ಮನೆಗಳು ಜಲಾವೃತ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಕಳೆದ ಎರಡು ದಿನಗಳಿಂದ ಹನೂರು ತಾಲೂಕಿನಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಮಳೆಗೆ…

19 hours ago

ಓದುಗರ ಪತ್ರ: ಜನರ ಹಿತ ಕಾಯಲಿ!

ಜನರ ಹಿತ ಕಾಯಲಿ! ನಕಲಿ ವೈದ್ಯರು, ಕಲಬೆರಿಕೆ ಔಷಧದ ಹಾವಳಿಯಿಂದ ಜನ ಬೇಸ್ತುಬಿದ್ದಿರುವಾಗ ನೈಜ ದರಕ್ಕಿಂತ ಅತ್ಯಧಿಕ ದರಕ್ಕೆ ಔಷಧಿ ಮಾರಾಟ…

1 day ago