ರಾಜ್ಯ

ರಾಜ್ಯಸಭೆ ಚುನಾವಣೆಗೆ ಬಿಜೆಪಿ-ಜೆಡಿಎಸ್‌ನಲ್ಲಿ ತೀವ್ರ ಪೈಪೋಟಿ

ಬೆಂಗಳೂರು : ಇದೇ ತಿಂಗಳ 18 ರಂದು ನಡೆಯಲಿರುವ ರಾಜ್ಯಸಭೆ ಮತ್ತು ವಿಧಾನಪರಿಷತ್ ಚುನಾವಣೆಗೆ ಎನ್‍ಡಿಎ ಮೈತ್ರಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್‌ನಲ್ಲಿ ತೀವ್ರ ಪೈಪೋಟಿ ಆರಂಭಗೊಂಡಿದೆ.
ರಾಜ್ಯಸಭೆಯ 4 ಹಾಗೂ ವಿಧಾನಪರಿಷ್‍ನ 7 ಸ್ಥಾನಗಳಿಗೆ ಜೂ.18 ರಂದು ಮತದಾನ ನಡೆಯಲಿದ್ದು, ಅಂದೇ ಫಲಿತಾಂಶ ಪ್ರಕಟವಾಗಲಿದೆ.

ಒಂದು ವೇಳೆ ಅವಿರೋಧವಾಗಿ ಆಯ್ಕೆಯಾದರೆ ಚುನಾವಣೆ ನಡೆಸುವ ಪ್ರಶ್ನೆಯೇ ಉದ್ಭವವಾಗುವುದಿಲ್ಲ. ಮೂರು ಪಕ್ಷಗಳಿಂದ ಅಡ್ಡಮತದಾನ ನಡೆಯಬಹುದೆಂಬ ಭೀತಿಯಿಂದಾಗಿ ಹೆಚ್ಚುವರಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಸಾಧ್ಯತೆ ತೀರಾ ಕಡಿಮೆ.

ವಿಧಾನಸಭೆ ಬಲಾಬಲ ಪ್ರಕಾರ, ಎನ್‍ಡಿಎ ಮೈತ್ರಿಕೂಟಕ್ಕೆ ರಾಜ್ಯಸಭೆ ಚುನಾವಣೆಯಲ್ಲಿ 1 ಸ್ಥಾನ ಹಾಗೂ ವಿಧಾನಪರಿಷತ್‍ನಲ್ಲಿ 2 ಸ್ಥಾನ ದಕ್ಕಲಿವೆ. ಆಡಳಿತಾರೂಢ ಕಾಂಗ್ರೆಸ್ ಭಾರಿ ಬಹುಮತ ಪಡೆದಿರುವ ಕಾರಣ ರಾಜ್ಯಸಭೆಯಲ್ಲಿ 3 ಹಾಗೂ ವಿಧಾನಪರಿಷತ್‍ನ 7 ಸ್ಥಾನಗಳ ಪೈಕಿ 5 ಸ್ಥಾನಗಳನ್ನು ನಿರಾಯಾಸವಾಗಿ ಗೆಲ್ಲಲಿದೆ.

ಬಿಜೆಪಿಯಿಂದ ರಾಜ್ಯಸಭೆ ಸದಸ್ಯರಾದ ಈರಣ್ಣ ಕಡಾಡಿ, ನಾರಾಯಣ ಸಾ ಭಾಂಡಗೆ ಹಾಗೂ ಜೆಡಿಎಸ್ ನಿಂದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ನಿವೃತ್ತರಾಗಲಿದ್ದಾರೆ. ರಾಜ್ಯಸಭೆಗೆ ಆಯ್ಕೆಯಾಗಲು ಓರ್ವ ಅಭ್ಯರ್ಥಿ 45 ಮತಗಳನ್ನು ಪಡೆಯಬೇಕು. ಬಿಜೆಪಿ, ಜೆಡಿಎಸ್ ಎರಡೂ ಪಕ್ಷಗಳು ಮೈತ್ರಿಯಾಗಿರುವುದರಿಂದ 1 ಸ್ಥಾನವನ್ನು ಪಡೆಯಲಷ್ಟೆ ಶಕ್ತವಾಗಿದೆ.

ಈ ಕ್ಷಣದವರೆಗೂ ನಡೆದಿರುವ ರಾಜಕೀಯ ಬೆಳವಣಿಗೆಗಳ ಪ್ರಕಾರ, ರಾಜ್ಯಸಭೆಗೆ ಬಿಜೆಪಿ ಯಾರನ್ನು ಆಯ್ಕೆ ಮಾಡಬೇಕು ಎಂಬ ಗೊಂದಲದಲ್ಲೆ ಇದೆ. 2 ದಿನಗಳ ಹಿಂದೆ ದೆಹಲಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತೆರಳಿ ಪಕ್ಷದ ವರಿಷ್ಠರ ಜೊತೆ ಮಾತುಕತೆ ನಡೆಸಿದ್ದಾರೆ. ರಾಜ್ಯ ಕೋರ್‍ಕಮಿಟಿಯಲ್ಲಿ ಏನೇ ಚರ್ಚೆ ನಡೆದರೂ ದೆಹಲಿ ನಾಯಕರ ಆಯ್ಕೆಯೇ ಅಂತಿಮವಾಗುವುದರಿಂದ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸ್ಥಳೀಯ ನಾಯಕರಿಗೆ ಸಾಧ್ಯವಾಗುತ್ತಿಲ್ಲ. ಬಿಜೆಪಿಯಲ್ಲಿ ಒಂದು ಬಣ ಕೇಂದ್ರದ ಮಾಜಿ ಸಚಿವ ಡಿ.ವಿ.ಸದಾನಂದಗೌಡ ಅವರನ್ನು ಅಭ್ಯರ್ಥಿ ಮಾಡಬೇಕೆಂದು ಒಲವು ತೋರಿದ್ದರೆ, ಮತ್ತೊಂದು ಬಣ ದೇವೇಗೌಡರಿಗೆ ಬೆಂಬಲ ನೀಡಿದರೆ ಮೈತ್ರಿಕೂಟಕ್ಕೆ ಹೆಚ್ಚಿನ ಬಲ ಬರುತ್ತದೆ ಎಂಬ ವಾದವನ್ನು ಮುಂದಿಟ್ಟಿದ್ದಾರೆ.

ದೇವೇಗೌಡರನ್ನು ಕರ್ನಾಟಕದ ಬದಲು ಅಸ್ಸಾಂ ಇಲ್ಲವೇ, ಮಹಾರಾಷ್ಟ್ರದಿಂದ ಸ್ಪರ್ಧೆಗಿಳಿಸಬೇಕೆಂಬ ಬೇಡಿಕೆಯೂ ಇದೆ. ಈ ಎರಡೂ ರಾಜ್ಯಗಳಲ್ಲಿ ಎನ್‍ಡಿಎ ಆಡಳಿತ ಇರುವುದರಿಂದ ಗೌಡರು ಸುಲಭವಾಗಿ ಗೆದ್ದು ಬರುತ್ತಾರೆ. ಕರ್ನಾಟಕದಲ್ಲಿ 1 ಸ್ಥಾನ ತಮಗೆ ದಕ್ಕಲಿದೆ ಎಂಬುದು ಬಿಜೆಪಿ ಲೆಕ್ಕಾಚಾರ. ಹೀಗಾಗಿ ದೇವೇಗೌಡರನ್ನು ಅಸ್ಸಾಂನಿಂದ ಹಾಗೂ ಸದಾನಂದಗೌಡ ಅವರನ್ನು ಕರ್ನಾಟಕದಿಂದಲೇ ಕಣಕ್ಕಿಳಿಸುವ ಬಗ್ಗೆ ಪಕ್ಷದೊಳಗೆ ಪರ-ವಿರೋಧ ಚರ್ಚೆಯಾಗಿದೆ. ವಿಧಾನಪರಿಷತ್‍ಗೆ 2 ಸ್ಥಾನಗಳು ಗೆಲ್ಲಲು ಸಾಧ್ಯವಿರುವುದರಿಂದ ಪಕ್ಷ ನಿಷ್ಠರಿಗೆ ಟಿಕೆಟ್ ಕೊಡಬೇಕೆಂಬ ಆಗ್ರಹ ಕೇಳಿಬಂದಿದೆ.

ಈಗಾಗಲೇ ಒಂದು ಅವಧಿಗೆ ಆಯ್ಕೆಯಾಗಿರುವವರನ್ನು ಪುನಃ ಮತ್ತೊಂದು ಅವಧಿಗೆ ಆಯ್ಕೆ ಮಾಡದೇ 2028 ರ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕೆಂಬ ಅಭಿಪ್ರಾಯ ಪಕ್ಷದೊಳಗೆ ಕೇಳಿಬರುತ್ತಿದೆ.

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ನಿಷ್ಪಕ್ಷಪಾತ ತನಿಖೆ ನಡೆಯಲಿ

ಇತ್ತೀಚಿನ ದಿನಗಳಲ್ಲಿ ಹೆಚ್ಚು ಸದ್ದುಮಾಡುತ್ತಿರುವ ಸ್ಟ್ರಿಂಗ್ ಆಪರೇಷನ್ ಸುದ್ದಿ, ಅದರ ಸುತ್ತ ನಡೆಯುವ ಆರೋಪ-ಪ್ರತ್ಯಾರೋಪಗಳು ಹಾಗೂ ಸಿಡಿ/ಪೆನ್ ಡ್ರೈವ್‌ಗಳ ವಿಚಾರ…

51 mins ago

ಓದುಗರ ಪತ್ರ: ದೀಪಾಲಂಕಾರ ಸಮಿತಿ ಕೆಲಸಕ್ಕೆ ಒಂದು ಸಲಾಂ

ಈ ವರ್ಷದ ದಸರಾ ಮಹೋತ್ಸವದಲ್ಲಿನ ವಿದ್ಯುತ್ ದೀಪಾಲಂಕಾರಗಳು ಪ್ರತಿ ವರ್ಷದಂತೆ ಈ ವರ್ಷವೂ ಜನರ ಮನಸ್ಸನ್ನು ಆಕರ್ಷಿಸುತ್ತಿದೆ. ಅದರಲ್ಲೂ ದೇವರಾಜ…

53 mins ago

ಓದುಗರ ಪತ್ರ: ‘ಈ ಮಾತು’ ಶೋಭೆ ತರುವುದೇ?

‘ಮತ್ತೆ ಹಾರ್ಟ್ ಸರ್ಜರಿ ಮಾಡಿಸಿಕೊಳ್ಳಬೇಕಾಗುತ್ತದೆ’- ಇದು ಮಾಜಿ ಮುಖ್ಯಮಂತ್ರಿ, ಹಾಲಿ ಕೇಂದ್ರ ಸಚಿವ ಹೆಚ್. ಡಿ. ಕುಮಾರಸ್ವಾಮಿ ಅವರ ಕುರಿತು…

55 mins ago

ದಾರಿ ತೋರಿದ ರಾಘವೇಂದ್ರ?!

ವರದಿ ರೂಪ: ರವಿಚಂದ್ರ ಚಿಕ್ಕೆಂಪಿಹುಂಡಿ ನನ್ನ ಮನೆಯಲ್ಲಿ ಇಟ್ಟಿದ್ದ ನೋಟಿನ ಕಂತೆಗಳನ್ನು ಪೊಲೀಸ್ ಸಿಬ್ಬಂದಿ ಮತ್ತು ಮಹಜರ್ ಸಾಕ್ಷಿದಾರರು ಎಣಿಸಿದರು.…

1 hour ago

ಮತದಾನದ ಹಕ್ಕು ಕಸಿಯಲು ನಮೂನೆ ೭ ದುರ್ಬಳಕೆ ಆರೋಪ!

ಕೆ.ಎಸ್.ಚಂದ್ರಶೇಖರ ಮೂರ್ತಿ ಮೈಸೂರಿನ ಎನ್.ಆರ್. ಕ್ಷೇತ್ರದಲ್ಲಿ ೫೦೦ಕ್ಕೂ ಹೆಚ್ಚು ಮತದಾರರ ವಿರುದ್ಧ ಸುಳ್ಳು ಮಾಹಿತಿ ಸಲ್ಲಿಕೆ ಆರೋಪ; ಪೊಲೀಸ್ ತನಿಖೆ …

1 hour ago

ಮಳೆ ಬಂದರೆ ತಾತ್ಕಾಲಿಕ ಬಸ್ ನಿಲ್ದಾಣದಲ್ಲಿ ಫಜೀತಿ!

ಆರ್.ಎಲ್.ಮಂಜುನಾಥ್ ದಸರಾ ನೋಡಲು ಬಂದವರ ಪಾಡು ಅಯೋಮಯ; ತಾತ್ಕಾಲಿಕ ಶೆಲ್ಟರ್ ಅಳವಡಿಸಲು ಆಗ್ರಹ  ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ದಸರಾ ಮಹೋತ್ಸವದ…

1 hour ago