ಡಾಕ್ಟರ್ ಮೆಹತಾ ಮತ್ತು ನಾನು ಅವರ ಮಿತ್ರನ ಮನೆಗೆ ಹೋದೆವು. ಅವರು ನನ್ನ ವಿಷಯದಲ್ಲಿ ತುಂಬಾ ಕರುಣೆ ಮತ್ತು ಆದರವುಳ್ಳವರಾಗಿದ್ದರು. ನನ್ನನ್ನು ಅವರು ತಮ್ಮ ಸ್ವಂತ ತಮ್ಮ ನಂತೆಯೇ ಕಂಡರು. ಇಂಗ್ಲಿಷ್ ಶಬ್ದ ಪ್ರಯೋಗ ರೀತಿಗಳನ್ನು ನನಗೆ ಕಲಿಸಿದರು. ಆ ಭಾಷೆಯನ್ನು ಮಾತನಾಡುವ ಅಭ್ಯಾಸವನ್ನೂ ಮಾಡಿಸಿದರು. ಆದರೆ ನನ್ನ ಆಹಾರದ ಪ್ರಶ್ನೆ ಒಂದು ಕಠಿಣ ಸಮಸ್ಯೆಯೇ ಆಯಿತು.
ಬೇಯಿಸಿದ ತರಕಾರಿ, ಉಪ್ಪು ಮತ್ತು ಮಸಾಲೆ ಇಲ್ಲದುದು ನನಗೆ ರುಚಿಯಾಗಲಿಲ್ಲ. ನನಗೆ ಯಾವ ಊಟವನ್ನು ಸಿದ್ಧ ಮಾಡಬೇಕೆಂದು ಮನೆಯ ಯಜ ಮಾನಿಗೆ ತಿಳಿಯಲಿಲ್ಲ. ಬೆಳಗಿನ ಊಟಕ್ಕೆ ತೋಕೆ ಗೋಧಿಯ (ಓಟ್ಸ್) ಅಂಬಲಿ ಮಾಡುತ್ತಿದ್ದರು. ಅದರಿಂದ ತಕ್ಕ ಮಟ್ಟಿಗೆ ಹೊಟ್ಟೆ ತುಂಬುತ್ತಿತ್ತು. ಆದರೆ ಮಧ್ಯಾಹ್ನ ಮತ್ತು ಸಾಯಂಕಾಲದ ಊಟ ಹೊಟ್ಟೆ ತುಂಬುತ್ತಲೇ ಇರಲಿಲ್ಲ. ಆ ಮಿತ್ರರು ನಾನು ಮಾಂಸಾಹಾರ ತಿನ್ನಬೇಕೆಂದು ನಿತ್ಯ ಬಲಾತ್ಕರಿಸುತ್ತಲೇ ಇದ್ದರು. ಆದರೆ ನಾನು ನನ್ನ ಪ್ರತಿಜ್ಞೆಯನ್ನು ಜ್ಞಾಪಿಸುತ್ತಾ ಮೌನವಾಗಿರುತ್ತಿದ್ದೆನು. ಮಧ್ಯಾಹ್ನದ ಊಟ ಬರಿಯ ರೊಟ್ಟಿ, ಸಾಗು ಮತ್ತು ಮುರಬ್ಬದಿಂದ ನಡೆಯುತ್ತಿದ್ದಿತು. ಸಾಯಂಕಾಲವೂ ಅದೇ. ನಾನು ಒಳ್ಳೆಯ ಊಟಗಾರ. ಹೊಟ್ಟೆಯೂ ದೊಡ್ಡದು. ಆದರೆ ಎರಡು ಮೂರು ಚೂರು ರೊಟ್ಟಿಗಿಂತ ಹೆಚ್ಚಾಗಿ ಕೇಳಲು ನನಗೆ ನಾಚಿಕೆಯಾಗುತ್ತಿತ್ತು. ಜತೆಗೆ ಮಧ್ಯಾಹ್ನದ ಊಟಕ್ಕಾಗಲಿ, ಸಾಯಂಕಾಲದ ಊಟಕ್ಕಾಗಲಿ ಹಾಲು ಇರಲಿಲ್ಲ. ಆ ಮಿತ್ರರಿಗೆ ಈ ಪರಿಸ್ಥಿತಿಯಿಂದ ಜುಗುಪ್ಪೆ ಯುಂಟಾಗಿ ಹೀಗೆ ಹೇಳಿದರು: ‘ನೀನು ನನ್ನ ತಮ್ಮನೇ ಆಗಿದ್ದರೂ ನಿನ್ನನ್ನು ಗಂಟುಮೂಟೆ ಕಟ್ಟಿ ಹಿಂದಕ್ಕೆ ಕಳುಹಿಸುತ್ತಿದ್ದೆ. ಇಲ್ಲಿಯ ಪರಿಸ್ಥಿತಿಯನ್ನು ತಿಳಿಯದೆ, ಅವಿದ್ಯಾವಂತಳಾದ ತಾಯಿಯ ಮುಂದೆ ಮಾಡಿದ ಪ್ರತಿಜ್ಞೆಗೆ ಏನು ಬೆಲೆ? ಅದು ಪ್ರತಿಜ್ಞೆಯೇ ಅಲ್ಲ. ಕಾನೂನಿನ ಪ್ರಕಾರ ಅದು ಪ್ರತಿಜ್ಞೆಯೇ ಅಲ್ಲ. ಅಂತಹ ವಾಗ್ದಾನಕ್ಕೆ ಅಂಟಿಕೊಳ್ಳು ವುದು ಬರಿಯ ಮೂಢನಂಬಿಕೆ, ಅಂಧವಿಶ್ವಾಸ. ಈ ಹಟಮಾರಿತನದಿಂದ ನಿನಗೆ ಈ ದೇಶದಲ್ಲಿ ಏನೂ ಪ್ರಯೋಜನವಾಗುವುದಿಲ್ಲವೆಂದು ಹೇಳಬಲ್ಲೆ. ನೀನು ಮಾಂಸವನ್ನು ತಿಂದು ಅದರ ರುಚಿಯನ್ನು ಅನುಭವಿಸಿರುವುದಾಗಿ ಹೇಳುತ್ತಿ. ಎಲ್ಲಿ ಅನವಶ್ಯಕವಾಗಿತ್ತೋ ಅಲ್ಲಿ ಅದನ್ನು ತಿಂದೆ. ಎಲ್ಲಿ ಅದು ಅತ್ಯಂತ ಆವಶ್ಯಕವೋ ಅಲ್ಲಿ ತಿನ್ನುವುದಿಲ್ಲವೆನ್ನುತ್ತಿ, ಎಂತಹ ವಿಚಿತ್ರ!’
ನನ್ನ ಮನೋನಿಶ್ಚಯ ಕದಲಲಿಲ್ಲ. ಮಿತ್ರರು ಹಗಲುರಾತ್ರಿ ನನ್ನ ಜತೆ ವಾದಿಸುತ್ತಲೇ ಇದ್ದರು. ನನ್ನದು ಯಾವಾಗಲೂ ಒಂದೇ ಉತ್ತರ, ಬೇಡ ಎಂದು. ಅವರು ಹೆಚ್ಚು ಹೆಚ್ಚಾಗಿ ವಾದಿಸಿದಂತೆ ನಾನೂ ಹೆಚ್ಚು ಹೆಚ್ಚು ದೃಢವಾಗುತ್ತಿದ್ದೆ. ಪರಮಾತ್ಮಾ ರಕ್ಷಿಸು ಎಂದು ನಿತ್ಯ ಪ್ರಾರ್ಥಿಸುತ್ತಿದ್ದೆ. ಆತ ರಕ್ಷಿಸುತ್ತಿದ್ದ. ದೇವರು ಎಂದರೆ ಏನು ಎಂಬುದು ನನಗೆ ಗೊತ್ತಿರಲಿಲ್ಲ, ನಿಜ. ನನ್ನಲ್ಲಿ ಕೆಲಸ ಮಾಡುತ್ತಿದ್ದುದು ಬರಿಯ ನಂಬಿಕೆ ಮಾತ್ರ. ಪುಣ್ಯಜೀವಿ ದಾದಿ ರಂಭಾ ನನ್ನ ಮನಸ್ಸಿನಲ್ಲಿ ಬಿತ್ತಿದ್ದ ನಂಬಿಕೆ.
ಒಂದು ದಿನ ಈ ಮಿತ್ರರು ನನ್ನ ಹತ್ತಿರ ಬೆಂಥಮ್ ಬರೆದ ಉಪ ಯುಕ್ತತಾವಾದ ಎಂಬ ಪುಸ್ತಕವನ್ನು ಓದತೊಡಗಿದರು. ನನ್ನ ಬುದ್ಧಿ ಮಂಕು ಆಯಿತು. ಭಾಷೆ ಕಠಿಣವಾಗಿದ್ದುದರಿಂದ ನಾನು ಅರ್ಥಮಾಡಿಕೊಳ್ಳಲಾಗಲಿಲ್ಲ. ಅವರು ಅದರ ವಿವರಣೆಗೆ ತೊಡಗಿದರು. ನಾನು ಹೀಗೆ ಹೇಳಿದೆ: ‘ದಯವಿಟ್ಟು ನನ್ನನ್ನು ಮನ್ನಿಸಿ. ಈ ಗಹನ ವಿಷಯಗಳು ನನ್ನ ಬುದ್ಧಿಗೆ ಮೀರಿದವು. ಮಾಂಸಾಹಾರವನ್ನು ತಿನ್ನುವುದು ಆವಶ್ಯಕ ಎಂದು ನಾನು ಒಪ್ಪುತ್ತೇನೆ. ಆದರೆ ನನ್ನ ಪ್ರತಿಜ್ಞೆಯನ್ನು ನಾನು ಭಂಗಗೊಳಿಸಲಾರೆ. ಅದರ ಬಗ್ಗೆ ಚರ್ಚೆಯನ್ನೂ ಮಾಡಲಾರೆ. ವಾದದಲ್ಲಿ ನಿಮ್ಮನ್ನು ನಾನು ಎದುರಿಸಲಾರೆ. ನಾನೊಬ್ಬ ಮೂರ್ಖ, ಹಠವಾದಿ ಎಂದು ನನ್ನನ್ನು ದಯವಿಟ್ಟು ಬಿಟ್ಟುಬಿಡಿ. ನಿಮಗೆ ನನ್ನಲ್ಲಿರುವ ಪ್ರೀತಿ ನನಗೆ ಚೆನ್ನಾಗಿ ಗೊತ್ತು. ನೀವು ನನ್ನ ಹಿತೈಷಿ ಎಂಬುದೂ ಗೊತ್ತು. ನನ್ನ ವಿಷಯದಲ್ಲಿ ನಿಮಗೆ ಕನಿಕರವಾಗುತ್ತಿರುವುದರಿಂದಲೇ ನೀವು ಪದೇ ಪದೇ ನನಗೆ ಹೇಳುತ್ತಿರುವಿರಿ ಎಂಬುದನ್ನೂ ಬಲ್ಲೆ. ಇದಕ್ಕೆ ಉಪಾಯವಿಲ್ಲ. ಪ್ರತಿಜ್ಞೆ ಪ್ರತಿಜ್ಞೆಯೇ. ಅದನ್ನು ಮುರಿಯಲಾಗದು. ’ ಮಿತ್ರರಿಗೆ ಆಶ್ಚರ್ಯವಾಯಿತು. ಪುಸ್ತಕ ಮುಚ್ಚಿ, ‘ಹಾಗೆಯೇ ಆಗಲಿ, ಇನ್ನು ನಾನು ವಾದಿಸುವುದಿಲ್ಲ’ ಎಂದರು.
ನನಗೆ ಸಂತೋಷವಾಯಿತು. ಅವರು ಮತ್ತೆ ಆ ವಿಷಯ ಎತ್ತಲಿಲ್ಲ. ಆದರೆ ನನ್ನ ಹಿತವನ್ನು ಕುರಿತು ಯೋಚಿಸುವುದನ್ನು ಅವರು ಬಿಡಲಿಲ್ಲ. ಅವರು ಕುಡಿಯುತ್ತಿದ್ದರು. ಹೊಗೆಬತ್ತಿ ಸೇದುತ್ತಿದ್ದರು. ಆದರೆ ನಾನೂ ಹಾಗೆ ಮಾಡಬೇಕೆಂದು ಅವರು ಎಂದೂ ಹೇಳಲಿಲ್ಲ. ವಾಸ್ತವವಾಗಿ ಅವೆರಡನ್ನೂ ನಿನ್ನ ಹತ್ತಿರ ಬರಗೊಡಬೇಡ ಎಂದು ಅವರು ಹೇಳಿದರು. ಅವರಿಗಿದ್ದದ್ದು ಒಂದೇ ಯೋಚನೆ, ಮಾಂಸವಿಲ್ಲದಿದ್ದರೆ ನಾನು ನಿಶ್ಶಕ್ತನಾಗಿ, ಹಾಯಾಗಿ ಇಂಗ್ಲೆಂಡಿನಲ್ಲಿ ಇರಲಾರೆನಲ್ಲ ಎಂಬುದು.
ನಾನು ಒಂದು ತಿಂಗಳ ಕಾಲ ಹೀಗೆ ಅನುಭವವನ್ನು ಪಡೆದೆ. ಈ ಸ್ನೇಹಿತರ ಮನೆ ಇದ್ದುದು ರಿಚ್ಮಂಡ್‌ನಲ್ಲಿ, ಅಲ್ಲಿಂದ ವಾರಕ್ಕೆ ಒಂದೆರಡು ಸಲಕ್ಕಿಂತ ಹೆಚ್ಚಾಗಿ ಲಂಡನ್ನಿಗೆ ಹೋಗಿ ಬರಲು ಆಗುತ್ತಿರ ಲಿಲ್ಲ. ಡಾಕ್ಟರ್ ಮೆಹತಾ ಮತ್ತು ದಳಪತ್ ರಾಮ್‌ರು ನಾನು ಯಾವುದಾದರೂ ಸಂಸಾರದಲ್ಲಿರಬೇಕೆಂದು ನಿರ್ಣಯಿಸಿ ದರು. ಶ್ರೀ ಶುಕ್ಲಾರವರು ವೆಸ್ಟ್ ಕೆನ್ಸಿಂಗ್ಟನ್ ನಲ್ಲಿದ್ದ ಒಬ್ಬ ಆಂಗ್ಲೋ ಇಂಡಿಯನ್ನರ ಮನೆಯನ್ನು ಗೊತ್ತುಹಚ್ಚಿ ನನ್ನನ್ನು ಅಲ್ಲಿ ಬಿಟ್ಟರು. ಆ ಮನೆಯ ಯಜಮಾನಿ ಒಬ್ಬ ವಿಧವೆ. ನಾನು ಆಕೆಗೆ ನನ್ನ ಪ್ರತಿಜ್ಞೆಯ ವಿಷಯ ಹೇಳಿದೆ. ಆ ವೃದ್ಧೆ ನನ್ನನ್ನು ಸರಿಯಾಗಿ ನೋಡಿಕೊಳ್ಳುವುದಾಗಿ ಹೇಳಿದಳು. ಅಲ್ಲಿಯೂ ನಾನು ಹಸಿದುಕೊಂಡೇ ಇರಬೇಕಾಯಿತು. ಮಿಠಾಯಿ ಮತ್ತು ಇತರ ತಿನಿಸುಗಳಿಗಾಗಿ ನಾನು ನಮ್ಮ ಮನೆಗೆ ಬರೆದಿದ್ದೆ. ಅದಕ್ಕೆ ಯಾವುದೂ ಉತ್ತರ ಇನ್ನೂ ಬಂದಿರಲಿಲ್ಲ. ಪದಾರ್ಥಗಳೆಲ್ಲ ನೀರಸ, ಸಪ್ಪೆ, ಪ್ರತಿ ದಿನವೂ ಆ ವೃದ್ಧೆ ‘ಊಟ ಚೆನ್ನಾಗಿದೆಯೆ’ ಎಂದು ಕೇಳುತ್ತಿದ್ದಳು. ಪಾಪ, ಪ್ರತಿ ದಿನವೂ ಆ ವೃದ್ಧೆ ಏನು ಮಾಡಿಯಾಳು? ನನ್ನ ಸಂಕೋಚ ಮೊದಲಿನಂತೆಯೇ ಇತ್ತು. ನನ್ನ ತಟ್ಟೆಯಲ್ಲಿ ಆಕೆ ಹಾಕಿ ಇಡುತ್ತಿದ್ದುದಕ್ಕಿಂತ ಹೆಚ್ಚು ಆಹಾರ ಕೇಳಲು ನನಗೆ ಧೈರ್ಯವಿರಲಿಲ್ಲ. ಮನೆಯ ಯಜಮಾನಿಗೆ ಇಬ್ಬರು ಹೆಣ್ಣು ಮಕ್ಕಳಿದ್ದರು. ನಾನು ಇನ್ನೂ ಒಂದು ಅಥವಾ ಎರಡು ತುಣುಕು ರೊಟ್ಟಿ ಹೆಚ್ಚಾಗಿ ತಿನ್ನಬೇಕೆಂದು ಅವರು ಬಲಾತ್ಕರಿಸುತ್ತಿದ್ದರು. ಆದರೆ ಪಾಪ, ಒಂದು ಪೂರ್ತಿ ರೊಟ್ಟಿಗಿಂತ ಕಡಿಮೆಯಾದರೆ ನನ್ನ ಹೊಟ್ಟೆ ತುಂಬುತ್ತಲೇ ಇರಲಿಲ್ಲವೆಂಬುದು ಅವರಿಗೆ ತಿಳಿಯಲೇ ಇಲ್ಲ. ಆ ವೇಳೆಗೆ ನನ್ನ ರೆಕ್ಕೆ ಬಲಿತುಕೊಂಡಿತು. ನನ್ನ ವ್ಯಾಸಂಗವನ್ನು ಇನ್ನೂ ಕ್ರಮವಾಗಿ ಪ್ರಾರಂಭಿಸಿರಲಿಲ್ಲ. ಶ್ರೀ ಶುಕ್ಲರವರ ಪ್ರೇರಣೆಯಿಂದ ನಾನು ಆಗತಾನೆ ವರ್ತಮಾನ ಪತ್ರಿಕೆಗಳನ್ನು ಓದಲು ಮೊದಲು ಮಾಡಿದ್ದೆ. ಭಾರತದಲ್ಲಿದ್ದಾಗ ನಾನು ಒಂದಾದರೂ ವರ್ತಮಾನ ಪತ್ರಿಕೆಯನ್ನು ಓದಿರಲಿಲ್ಲ. ಆದರೆ ಇಂಗ್ಲೆಂಡಿನಲ್ಲಿ ಅವುಗಳನ್ನು ಕ್ರಮವಾಗಿ ಓದುತ್ತಾ ನನಗೆ ಅವುಗಳಲ್ಲಿ ಅಭಿರುಚಿಯುಂಟಾಯಿತು. ಡೈಲಿ ನ್ಯೂಸ್, ಡೈಲಿ ಟೆಲಿಗ್ರಾಫ್, ಪೆಲ್ಮೆಲ್ ಗೆಜೆಟ್ ಇವುಗಳನ್ನು ನಿತ್ಯ ಮಗುಚುತ್ತಿದ್ದನು. ಈ ಕಾರ್ಯಕ್ಕೆ ನನಗೆ ಒಂದು ಗಂಟೆಯೂ ಬೇಕಾಗುತ್ತಿರಲಿಲ್ಲ. ನಾನು ಒಂದು ಅಗ್ಗವಾದ ಶಾಕಾಹಾರಿ ಫಲಾಹಾರ ಮಂದಿರ ಹುಡುಕಿಕೊಂಡು ಹೊರಟೆ. ಲಂಡನ್ ನಗರದಲ್ಲಿ ಅಂತಹ ಸ್ಥಳಗಳು ಇವೆ ಎಂದು ಯಜಮಾನಿ ಹೇಳಿದ್ದಳು.
ನಾನು ಪ್ರತಿದಿನವೂ ೧೦-೧೨ ಮೈಲಿ ನಡೆದು ಹೋಗಿ ಒಂದು ಅಗ್ಗವಾದ ಶಾಕಾಹಾರ ಗೃಹದಲ್ಲಿ ಹೊಟ್ಟೆ ತುಂಬ ರೊಟ್ಟಿಯನ್ನು ತಿನ್ನುತ್ತಿದ್ದೆ. ಆದರೂ ನನಗೆ ತೃಪ್ತಿಯುಂಟಾಗುತ್ತಿರಲಿಲ್ಲ. ನನ್ನ ತಿರುಗಾಟದ ನಡುವೆ ಫ್ಯಾರಿಂಗ್ಟನ್‌ನಲ್ಲಿ ಒಂದು ಶಾಕಾಹಾರ ಗೃಹ ನನ್ನ ಕಣ್ಣಿಗೆ ಬಿತ್ತು. ತನಗೆ ಬೇಕಾದ ವಸ್ತು ಸಿಕ್ಕಿದಾಗ ಮಗುವಿಗೆ ಆಗುವ ಆನಂದ, ಆ ಸ್ಥಳವನ್ನು ನೋಡಿ ನನಗೆ ಉಂಟಾಯಿತು. ಅದರೊಳಗೆ ಪ್ರವೇಶಿಸುವುದಕ್ಕೆ ಮುಂಚೆ, ಬಾಗಿಲ ಬಳಿಯ ಗಾಜಿನ ಕಿಟಕಿಯಲ್ಲಿ ಮಾರಾಟಕ್ಕಾಗಿ ಇಟ್ಟಿದ್ದ ಕೆಲವು ಪುಸ್ತಕಗಳನ್ನು ನೋಡಿದೆನು. ಅವುಗಳ ಮಧ್ಯೆ ಸಾಲ್ಟ್‌ರವರು ಬರೆದ, ‘ಶಾಕಾಹಾರ – ಒಂದು ವಿನಂತಿ’ ಎಂಬ ಪುಸ್ತಕವನ್ನು ನೋಡಿದೆ. ಆ ಪುಸ್ತಕವನ್ನು ಒಂದು ಷಿಲ್ಲಿಂಗಿಗೆ ಕೊಂಡುಕೊಂಡು ನಾನು ನೇರವಾಗಿ ಊಟದ ಮನೆಗೆ ಹೋದೆ. ಇಂಗ್ಲೆಂಡಿಗೆ ಹೋದ ಮೇಲೆ ನಾನು ಹೊಟ್ಟೆ ತುಂಬ ಊಟ ಮಾಡಿದುದು ಅದೇ ಮೊದಲು. ನನ್ನ ನೆರವಿಗೆ ದೇವರು ಬಂದನು.
ಸಾಲ್ಟ್‌ರ ಪುಸ್ತಕವನ್ನು ಮೊದಲಿನಿಂದ ಕೊನೆಯವರೆಗೆ ಓದಿದೆ. ಅದು ನನ್ನ ಮನಸ್ಸಿಗೆ ತುಂಬಾ ಹಿಡಿಸಿತು. ಆ ಪುಸ್ತಕವನ್ನು ಓದಿದಂದಿನಿಂದಲೇ ನಾನು ಮನಃಪೂರ್ವಕವಾಗಿ ಸ್ವಂತ ಇಚ್ಛೆಯಿಂದ ಶಾಕಾಹಾರಿಯಾದೆನೆಂದು ಹೇಳಬಹುದು. ತಾಯಿಯ ಮುಂದೆ ಪ್ರತಿಜ್ಞೆ ಕೊಟ್ಟ ದಿನವನ್ನು ನಾನು ಹರಸಿದೆ. ಅಲ್ಲಿಯವರೆಗೆ ನಾನು ಸತ್ಯಕ್ಕಾಗಿಯೂ, ನಮ್ಮ ತಾಯಿಗೆ ಕೊಟ್ಟ ಭಾಷೆಗಾಗಿಯೂ ಶಾಕಾಹಾರಿಯಾಗಿದ್ದೆ. ಆದರೆ ಜತೆಯಲ್ಲಿಯೇ ಇತರ ಭಾರತೀಯರೆಲ್ಲ ಮಾಂಸಾಹಾರಿಗಳೇ ಆಗಬೇಕೆಂದೂ ಬಯಸುತ್ತಿದ್ದೆ.
ಯಾವತ್ತಾದರೂ ಒಂದು ದಿನ ನಾನೂ ನಿರ್ಭಯದಿಂದ ಮಾಂಸಾಹಾರಿಯಾಗಬೇಕು, ಇತರರಲ್ಲಿಯೂ ಅದನ್ನು ಪ್ರಚಾರ ಮಾಡಬೇಕು ಎಂಬುದು ನನ್ನ ಆಸೆಯಾಗಿತ್ತು. ಆದರೆ ಅಂದಿನಿಂದ ನಾನು ಮನಃಪೂರ್ವಕವಾಗಿ ಶಾಕಾಹಾರಿಯಾದೆ. ಅದಕ್ಕಾಗಿ ಪ್ರಚಾರ ಮಾಡುವುದೇ ನನ್ನ ಜೀವನದ ಉದ್ದೇಶವಾಯಿತು.
ಡಾ.ಎಂ.ಡಿ.ಉಮೇಶ್, ಉಪನ್ಯಾಸಕರು, ಗಾಂಧಿ ಅಧ್ಯಯನ ಕೇಂದ್ರ, ಮೈಸೂರು ವಿ.ವಿ ಬೆಳಗಾವಿ ಜಿಲ್ಲೆಯ ಹುದಲಿ ಗ್ರಾಮದಲ್ಲಿ ಬಾಲ ಕೃಷ್ಣ ಮತ್ತು ರಾಧಾಬಾಯಿ…
ನಂಜನಗೂಡು : ಹಾಡಾ ಹಗಲೇ ಜನನಿಬಿಡ ಪ್ರದೇಶದಲ್ಲಿ ನಿಲ್ಲಿಸಿದ್ದ ಸ್ಕೂಟಿಯಿಂದ ಹಣ ಕದ್ದ ಘಟನೆ ಪಟ್ಟಣದ ಮಿನಿ ವಿಧಾನಸೌಧದ ಬಳಿ…
ಮೈಸೂರು : ದಸರಾ ವಸ್ತು ಪ್ರದರ್ಶನವನ್ನು ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಆಕರ್ಷಣೀಯವಾಗಿಸಲು ಕರ್ನಾಟಕ ಪ್ರದರ್ಶನ ಪ್ರಾಧಿಕಾರವು ವಸ್ತು ಪ್ರದರ್ಶನ ಆವರಣವನ್ನು…
ಬೆಂಗಳೂರು: ಇಂದಿನಿಂದ ಮೂರು ದಿನ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆ ರಾಜ್ಯದ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ…
ಮೈಸೂರು: ಇಂದು ಆಷಾಢ ಮಾಸದ ಮೊದಲ ಶುಕ್ರವಾರದ ಸಂಭ್ರಮ ಮನೆಮಾಡಿದ್ದು, ನಾಡ ಅಧಿದೇವತೆ ಚಾಮುಂಡೇಶ್ವರಿಗೆ ಮಹಾಲಕ್ಷ್ಮೀ ಅಲಂಕಾರ ಮಾಡಲಾಗಿದೆ. ಇಡೀ…