ಎಡಿಟೋರಿಯಲ್

ಅಧಿಕಾರ ರಾಜಕಾರಣದ ಶಕ್ತಿ ಕೇಂದ್ರಗಳಿಗೆ ‘ಜನ’ ಎಂಬುದರ ನಿಜಾರ್ಥವನ್ನು ಮನದಟ್ಟುಮಾಡಬೇಕಿದೆ!

ಪಿತೃಪಕ್ಷ ಮತ್ತೆ ಬಂದೇಬಿಟ್ಟಿತು 

ಜೆ. ಬಿ.ರಂಗಸ್ವಾಮಿ
ವಿಚಾರವಾದಿಗಳ ಸಹವಾಸದಲ್ಲಿದ್ದ ನಾನು ಎಂದೂ ಪಿತೃಪಕ್ಷದ ಪೂಜಾ ಕಾರ್ಯದಲ್ಲಿ ಪಾಲ್ಗೊಳ್ಳುತ್ತಿರಲಿಲ್ಲ. ಅದನ್ನು ಆಚರಿಸುವವರನ್ನೆಲ್ಲ  ಕೀಳು ಕಠಿಣ ಶಬ್ದಗಳಲ್ಲಿ ಟೀಕಿಸಿದ್ದೇ ಟೀಕಿಸಿದ್ದು. ಹಾಸನದ ಗೌಡರುಗಳ ಮನೆಯಲ್ಲಿ ಪಿತೃಪಕ್ಷ ಎಂದರೆ, ತಮ್ಮ ಕುಟುಂಬದಲ್ಲಿ ಗತಿಸಿದವರ ಗೌರವಾರ್ಥ ಬಟ್ಟೆ ಮಡಗುವುದು. ಅಕಸ್ಮಾತ್ ಆ ಕುಟುಂಬದಲ್ಲಿ ಹುಟ್ಟಿ,  ಒಂದೆರಡೇ  ದಿನಗಳ ಕಾಲ ಬದುಕಿ ಸತ್ತಿರಲಿ. ಆ ಹಸುಳೆಗೂ ಪಂಚೆ ಟವಲು ಎಡೆಗಿಡುತ್ತಾರೆ. ಸತ್ತವರ ಪ್ರೀತಿಯ ಭಕ್ಷ್ಯ ಭೋಜ್ಯವನ್ನು ಶ್ರದ್ಧೆಯಿಂದ ತಯಾರಿಸಿ ಎಡೆಗಿಟ್ಟು ಪೂಜೆ ಮಾಡುತ್ತಾರೆ.
ಸತ್ತವರು ಬಳಸುತ್ತಿದ್ದ ಟವಲು ಪಂಚೆ , ಇಷ್ಟಪಟ್ಟು ತಿನ್ನುತ್ತಿದ್ದ ಮಾಂಸ ಮಡ್ಡಿ ತರಕಾರಿ ಸಿಹಿ ಭಕ್ಷ್ಯಗಳು, ಕುಡಿಯುತ್ತಿದ್ದರೆ ವಿಸ್ಕಿ / ಹೆಂಡ, ಸೇದುತ್ತಿದ್ದ ಗಣೇಶ ಬೀಡಿ, ಚೀತಾ/ರೈಸಿಂಗ್ ಸನ್  ಬೆಂಕಿಪೊಟ್ಟಣ,  ಇತ್ಯಾದಿಗಳನ್ನೂ ಎಡೆಗಿಟ್ಟಿರುತ್ತಾರೆ. ಸತ್ತವರು ಇಷ್ಟಪಡುತ್ತಿದ್ದ ಎಲ್ಲವನ್ನೂ ಎಡೆಗಿಟ್ಟು ಪೂಜಿಸುವುದರಿಂದ ಅವರ ಆತ್ಮಕ್ಕೆ ಶಾಂತಿ ಸಿಗುತ್ತದೆ. ತಾವುಗಳು ತಕ್ಕ ಗೌರವ ಸಲ್ಲಿಸಿದಂತಾಗುತ್ತದೆ ಎಂಬ ಸರಳ ಜಾನಪದ ನಂಬಿಕೆ. ಮೊದಲೆಲ್ಲ ಫೋಟೋ ಇತ್ಯಾದಿ ಇರುತ್ತಿರಲಿಲ್ಲ. ಚೆಂಬು ಕಳಸವೇ ನಮ್ಮೆಲ್ಲ ಪೂರ್ವಿಕರು. ಈಗ ಫೋಟೋ ಇಡುತ್ತಾರೆ.
ಇದನ್ನೆಲ್ಲಾ ಅಮ್ಮ ಕಕ್ಕುಲತೆಯಿಂದ ವಿವರಿಸಿ ಹೇಳುತ್ತಿದ್ದರು. ‘ನಮ್ಮ ಹಿಂದಿನ ತಲೆಮಾರಿನ  ಎಲ್ಲ ಹಿರಿಯರಿಗೂ ಒಟ್ಟಿಗೆ ಗೌರವ ಸಲ್ಲಿಸುವ ಹಬ್ಬ ಇದು. ಇದಕ್ಕೆ ಮಾತ್ರ ತಪ್ಪಿಸಿಕೊಳ್ಳಬೇಡ. ಒಡಹುಟ್ಟಿದವರೆಲ್ಲರೂ ಒಟ್ಟಿಗೆ ಸೇರುವ ಹಬ್ಬ ಇದು. ಭ್ರಾತೃತ್ವ ಬೆಳೆಸುತ್ತದೆ. ಭಿನ್ನಾಭಿಪ್ರಾಯ ಬಾಡಿಸುತ್ತದೆ’  ಎಂದೆಲ್ಲಾ ಹೇಳುತ್ತಿದ್ದರು.
ಅವರ ಶ್ರದ್ಧಾ ಭಕ್ತಿಗಳೆಲ್ಲವೂ ಹಸೀ ಮೂರ್ಖತನದ ಮೂಢ ಆಚರಣೆಗಳೆಂದು ಅವರನ್ನು ಹೀಯಾಳಿಸಿ ಬೇಜಾರುಗೊಳಿಸುತ್ತಿದ್ದೆ.
ಅವರು ಬಡಿಸುವ ಎಡೆಯ ಭಕ್ಷ್ಯಗಳು ನನಗೆ ಪವಿತ್ರ  ಪ್ರಸಾದವೇನಲ್ಲ. ಭರ್ಜರಿ ಊಟ ಅಷ್ಟೇ. ಅದನ್ನು ಚೆನ್ನಾಗಿ ಕತ್ತರಿಸಿ ಮೇಲೇಳುತ್ತಿದ್ದೆ.
ಪೊಲೀಸಾಗಿ ಮೈಸೂರು ಸೇರಿದ ಮೇಲೆ ‘ಪಕ್ಷ’ಕ್ಕಾಗಿ ಊರಿಗೆ  ಹೋಗುವುದು ಬಿಟ್ಟೇ ಹೋಯಿತು. ತೀರುಗೆಟ್ಟ ತಲೆತಿರುಕ  ಎಂದು ತೀರ್ಮಾನಿಸಿ ಮನೆಯವರೂ ಸುಮ್ಮನಾದರು.
ಎಷ್ಟೋ ವರ್ಷಗಳ ನಂತರ ನಮ್ಮಜ್ಜಿ ಹೇಳುತ್ತಿದ್ದ ಮಾತುಗಳು ನೆನಪಾಗತೊಡಗಿದವು. ‘ನೋಡೋ ರಂಗ್ಸಾಮೀ ನಾವೇನು ರಾಜ ಮಾರಾಜ್ರ ವಂಸದವರಲ್ಲ. ಉತ್ತು ಬಿತ್ತು ಜೀವ್ಣ ಮಾಡೋ ರೈತರುಗಳು. ಇನ್ನೊಬ್ಬರ ಹತ್ರ ಛೀ ಥೂ ಅನ್ನಿಸಿಕೊಳ್ಳದಂತೆ ನಮ್ಮ ಹಿರೀಕರು ಬಾಳ್ಮೆ ಮಾಡಿದ್ದಾರೆ. ಒಂದು ದಿನವೂ ಕೋರ್ಟು, ಪೊಲೀಸು, ಪಂಚಾಯ್ತಿ ಕಟ್ಟೆ ದಂಡ ಹಾಕಿಸಿಕೊಂಡವರಲ್ಲ. ಯಾರತ್ರಾನೂ ಮೆಟ್ಟಲ್ಲಿ ಹೊಡೆಸಿಕೊಂಡವರಲ್ಲ. ಹಂಗೆ ನಿಯತ್ತಿನಿಂದ ಬದುಕು ಮಾಡವ್ರೇ. ಬದುಕಿದ್ರೆ ಹಂಗೆ ಬದುಕಬೇಕು. ಈ ಮಾಳಾದಬ್ಬಕ್ಕೆ ಬಂದು ನೀನು ಬೇಡ್ಕೋ ಬೇಕಾದದ್ದು ಅವರಂಗೆ ಬದುಕ್ತೀವಿ ಆಸೀರ್ವಾದ ಮಾಡಿ ಅಂತ. . . .’
‘ಹಂಗೇ ಬದುಕ್ತೀನಿ  ಅಂತ ನೀನು ಬದಿಕ್ಕಳಜ್ಜೀ.  ನಮ್ಮ ಥರಾ ನಾವು ಬದುಕ್ತೀವಿ. ಯಾವುದೋ ಕಾಲದ ಗುಗ್ಗೂಗಳಂತೆ ಈಗ ಬದ್ಕೋದಿಕ್ಕೆ ಆಗಲ್ಲ’  ಎಂದೆಲ್ಲಾ ಛೇಡಿಸುತ್ತಿದ್ದೆ.
ನಮ್ಮಜ್ಜಿ ಸಿಟ್ಟಾಗುತ್ತಿದ್ದಳು. ‘ಮಾತು ಬತ್ತದೇ ಅಂತ ಕ್ವಾಲ ಕ್ವಾಲನಂಗೆ (ತಲೆಹರಟೆ ) ಆಡ್ಬೇಡಾ. ಏನಿಲ್ಲದಿದ್ದರೂ ನಮ್ಮ ಹಿರೀಕರಂಗೆ ಬದುಕು. ನಮ್ಮ ವಂಶದಲ್ಲಿ ಯಾರೂ ಹೆಂಡ ಕುಡಿದೋರಲ್ಲ. ಬೀಡಿ ಸೇದ್ದೋರಲ್ಲ. ಕಂಡೋರ ಗಂಟು ಹೊಡೆದೋರಲ್ಲ. ಅವರಂಗೆ ಬದುಕು ಸಾಕು. ಅವರಂಗೇ ನಿನ್ನ ಮಕ್ಕಳು ಮೊಮ್ಮಕ್ಳು ಜೀವನಾ ಮಾಡ್ಬೇಕು. ನೀನು ನಿಮ್ಮಪ್ಪಗೆ ಮರ್ಯಾದೆ ಕೊಡದಿದ್ರೆ ಕತ್ತೆಬಾಲ. ( ಆ ವೇಳೆಗಾಗಲೇ ನನ್ನ ತಂದೆ ತೀರಿಕೊಂಡಿದ್ದರು ) ಅವ್ನ ಬದ್ಕಿದ್ನಲ್ಲ ಹಂಗ್ ಬದುಕು. ಸಾಕು. . . . . ನನ್ನತ್ರ  ಬರೀ ಲಾಯ್ರಿ ಕಣಿ ಹೊಡೀತಾನೆ ಕತ್ತೆ..!’  ಎಂದು ಆಶೀರ್ವದಿಸಿ ಕಳಿಸಿದ್ದರು.
ಆ ಮಾತುಗಳು ಅದು ಹೇಗೋ ಮನಸ್ಸಿನಾಳಕ್ಕೆ ಇಳಿದಿದ್ದವು. ಮುಂದೆ ಪೊಲೀಸಿನಲ್ಲಿ ಬಿಟ್ಟಿ ಕುಡಿಯುವ ಸಂದರ್ಭಗಳು ಬರುತ್ತಲೇ ಇದ್ದವು. ಊರಮ್ಮನ (ಅಜ್ಜಿ) ಮಾತು ಎಚ್ಚರಿಕೆ ಘಂಟೆಯಾಗಿ ಬಾರಿಸುತ್ತಿತ್ತು. ನಮ್ಮ ವಂಶದ ಬಗ್ಗೆ ಯಾವ ದೊಡ್ಡಸ್ತಿಕೆಯ ಭ್ರಮೆಗಳಿಲ್ಲದಿದ್ದರೂ, ಊರಮ್ಮನಿಂದಾಗಿ ಒಂಥರಾ ಹೆಮ್ಮೆ ಮೂಡಿತ್ತು. ಹೆಂಡ ಇತ್ಯಾದಿಗಳನ್ನಿಡದ ನಮ್ಮನೆಯ ಸರಳ ಎಡೆ ಊಟ ಬಟ್ಟೆಗಳು ಅಭಿಮಾನ ಮೂಡಿಸಿತು. ಒಮ್ಮೆಯೂ ತಪ್ಪಿ ಕೂಡ ಹೆಂಡ ಪಂಡ   ಮುಟ್ಟಲಿಲ್ಲ.
ರಾಯಲ್ ವಂಶ ಅಲ್ಲದಿದ್ದರೇನು? ಮೆಟ್ಟಿನಲ್ಲಿ ಹೊಡೆಸಿಕೊಳ್ಳದೆ ಮರ್ಯಾದೆಯಾಗಿ ಬದುಕಿದ್ದಾರೆ. ಕುಡಿದಿಲ್ಲ. ಗಂಟು ನುಂಗಿಲ್ಲ. ಮಣ್ಣನ್ನು ಉತ್ತಿ ಉತ್ತಿ ಆರೋಗ್ಯವಂತರಾಗಿ ಬಾಳಿದ್ದಾರೆ. ನಾನೂ ಹಂಗ್ ಬದುಕಿದರೆ ನನ್ನ ಮಕ್ಕಳು ಮೊಮ್ಮಕ್ಕಳಿಗೂ ಹೇಳಬಹುದು.
ಸಂಕಲ್ಪ ಮೂಡಿತು. ಈ ಬಾರಿ ಅಮೆರಿಕಾಕ್ಕೆ ಹೋದಾಗ ಮೊಮ್ಮಕ್ಕಳಿಗೆ ಒಂದಿಷ್ಟು  ಅರ್ಥವಾಗುವಂತೆ ಹೇಳಿದೆ. ತಲೆಯಾಡಿಸಿದವ So We’re  not from ROYAL family. But you live in the Royal city !  ಉದ್ಗರಿಸಿದಳು ಮೊಮ್ಮಗಳು!
ಪಿತೃಪಕ್ಷವನ್ನು ಮಹಾಲಯ ಅಮಾವಾಸ್ಯೆಯ ನಂತರ ವಿಜಯ ದಶಮಿಯೊಳಗೆ ಹತ್ತು ದಿನಗಳಲ್ಲಿ ಯಾವತ್ತು ಮಾಡಿದರೂ ಶ್ರೇಷ್ಠವಂತೆ. ಅಂದರೆ ಊರಿಗೆ ಊರೇ ಸಂಭ್ರಮದಿಂದ ಒಟ್ಟಿಗೆ ಆಚರಿಸುವ ಹಬ್ಬ ಇದು.  ಈ ಚಿಂತನೆಯೇ ಸಂತೋಷಕರ. ಒಂದೊಂದೇ ಆಚರಣೆಗಳು ಅರ್ಥವಾಗುತ್ತಾ ಹೋದಂತೆ ಇಮ್ಮಡಿ ಗೌರವ ಮುಮ್ಮಡಿಯಾಯಿತು.
ಕಳೆದೈದಾರು ವರ್ಷಗಳಿಂದ ನಮ್ಮ ಮನೆಯಲ್ಲಿ ಪಿತೃಪಕ್ಷ ಆಚರಿಸುತ್ತಿದ್ದೇನೆ. ಒಡಹುಟ್ಟಿದವರೆಲ್ಲರೂ ಬರುತ್ತಾರೆ. ಅಪ್ಪ ಅಮ್ಮರ ಇಷ್ಟದ ತಿನಿಸನ್ನು ಎಲ್ಲ ಮಕ್ಕಳೂ  ಮಾಡಿಕೊಂಡು ಬಂದು ಎಡೆಗಿಡುತ್ತಾರೆ. ಅವರ ಮಕ್ಕಳು ಮೊಮ್ಮಕ್ಕಳು ಎಲ್ಲರೂ ಬರುತ್ತಾರೆ. ಯಾವುದಕ್ಕೂ ಕೊರತೆಯಿಲ್ಲದ ಭರ್ಜರಿ ಭೋಜನ, ನಗೆ ಮಾತುಗಳಲ್ಲಿ ಇಡೀ ದಿನ ಸಾಗುತ್ತದೆ. ನಮ್ಮೆಲ್ಲ ಹಿರಿಯರನ್ನು ಒಟ್ಟಿಗೆ ನೆನೆದು ಗೌರವ ಸಲ್ಲಿಸಿದೆವು ಎಂಬ ಸಂತೃಪ್ತ ಭಾವ ಎಲ್ಲರದು.
ಪಿತೃಪಕ್ಷ  ಭಿನ್ನಾಭಿಪ್ರಾಯವನ್ನು ಬಾಡಿಸುತ್ತದೆ. ಬಂಧುತ್ವವನ್ನು ಬೆಳೆಸುತ್ತದೆ. ಅಮ್ಮನ ಈ  ಮಾತು ಮಿಡಿಯುತ್ತದೆ!
andolana

Recent Posts

ಓದುಗರ ಪತ್ರ: ಚುಟುಕು ಸಾಹಿತ್ಯ ಪ್ರಶಸ್ತಿ ಸೇರ್ಪಡೆ ಸ್ವಾಗತಾರ್ಹ

೨೦೨೫-೨೬ನೇ ಸಾಲಿಗೆ ಕನ್ನಡ ಪುಸ್ತಕ ಪ್ರಾಧಿಕಾರವು ಅರ್ಹ ಸಾಹಿತಿಗಳಿಗೆ ಪ್ರಶಸ್ತಿಯನ್ನು ಪ್ರಕಟಿಸಿದ್ದು ಅದರಲ್ಲಿ ಇದೇ ಮೊದಲ ಬಾರಿಗೆ ಚುಟುಕು ಸಾಹಿತ್ಯಕ್ಕೂ…

22 hours ago

ವೈಚಾರಿಕ ಕ್ರಾಂತಿಯ ವಚನಕಾರ ಹಡಪದ ಅಪ್ಪಣ್ಣ

ಎಚ್.ಹಾಲಪ್ಪ ಅಸಮಾನತೆ, ಶೋಷಣೆ, ಅಂಧಶ್ರದ್ಧೆ ವಿರುದ್ಧ ವಚನ ರಚಿಸಿದ ಹಡಪದ ಅಪ್ಪಣ್ಣ ಜಯಂತಿ ಇಂದು ೧೨ನೇ ಶತಮಾನದ ವಚನ ಚಳವಳಿ…

22 hours ago

ಹವಾಮಾನ ಬದಲಾವಣೆ; ಹುಲಿಗಳಿಗೆ ಹೊಸ ಅಪಾಯ?

ಶ್ರೇಯಸ್ ದೇವನೂರು, ವನ್ಯಜೀವಿ ಛಾಯಾಗ್ರಾಹಕ ಜುಲೈ ೨೯ರಂದು ವಿಶ್ವ ಹುಲಿ ದಿನವನ್ನು ಆಚರಿಸುವಾಗ, ಭಾರತದ ಹುಲಿ ಸಂರಕ್ಷಣೆಯ ಯಶಸ್ಸನ್ನು ನಾವು…

22 hours ago

ಪಂಜುಗಂಗೊಳ್ಳಿ ಅವರ ವಾರದ ಅಂಕಣ: ಗೌರವ್ ಶುಕ್ಲಾ ಎಂಬ ‘ಸಮವಸ್ತ್ರವಿಲ್ಲದ ಸೈನಿಕ’

‘ಸಪೋರ‍್ಟ್ ಅವರ್ ಹೀರೋಸ್’ ಸರ್ಕಾರೇತರ ಸಂಸ್ಥೆ ಸ್ಥಾಪನೆ  ೩೬ವರ್ಷ ಪ್ರಾಯದ ಗೌರವ್ ಶುಕ್ಲಾ(ಕುಳಿತವರಲ್ಲಿ ಎಡ ಬದಿ)ರ ತಂದೆ ೨೮ ವರ್ಷಗಳ…

22 hours ago

ಮಲ್ಲಳ್ಳಿ ಜಲಪಾತದ ರೋಪ್‌ವೇ ಯೋಜನೆಗೆ ವೇಗ

ಲಕ್ಷ್ಮೀಕಾಂತ್ ಕೊಮಾರಪ್ಪ ಸೋಮವಾರಪೇಟೆ: ತಾಲ್ಲೂಕಿನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾದ ಮಲ್ಲಳ್ಳಿ ಜಲಪಾತದಲ್ಲಿ ಬಹುನಿರೀಕ್ಷಿತ ರೋಪ್‌ವೇ ಯೋಜನೆಗೆ ವೇಗ ದೊರೆತಿದೆ.…

22 hours ago

ಮೀನುಗಾರಿಕೆ ಉತ್ತೇಜನಕ್ಕೆ ಸಂಚಾರ ಮತ್ಸ್ಯ ವಾಹಿನಿ

ಕೆ.ಬಿ.ರಮೇಶನಾಯಕ ಮೈಸೂರು: ಹಲವು ರೋಗಗಳಿಗೆ ರಾಮಬಾಣವಾದ ಹಾಗೂ ಆರೋಗ್ಯಕ್ಕೆ ಹಿತಕರ ಎನ್ನಲಾಗಿರುವ ಮೀನು ಆಹಾರವನ್ನು ಜನಸಾಮಾನ್ಯರಿಗೆ ಸುಲಭವಾಗಿ ದೊರೆಯುವಂತೆ ಮಾಡಲು…

22 hours ago