ಎಡಿಟೋರಿಯಲ್

ಮಂಡ್ಯ ನೆಲದಲ್ಲಿ ಸ್ವಾತಂತ್ರ್ಯದ ಕಿಚ್ಚು!

ಸಿ.ಸಿದ್ದರಾಜು ಆಲಕೆರೆ

ಭಾಗ -೧

ಭಾರತ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಮೈಸೂರು ಸಂಸ್ಥಾನದಲೂ ಅದರ ಕಿಚ್ಚು ಹರಡಿತ್ತು. ನಾಲ್ವಡಿ ಕೃಷ್ಣರಾಜ ಒಡೆಯರ ಉತ್ತಮ ಆಡಳಿತ ಇದ್ದಾಗಿಯೂ ಮೈಸೂರು ಸಂಸ್ಥಾನದಲ್ಲಿ ‘ಮೈಸೂರು ಕಾಂಗ್ರೆಸ್ ಸಮಿತಿ’ ಅಸ್ತಿತ್ವಕ್ಕೆ ಬಂದು ಅದರಡಿಯಲ್ಲಿ ಭಾರತವನ್ನು ಸ್ವಾತಂತ್ರ ದೇಶವನ್ನಾಗಿ ಮಾಡುವುದು ಹಾಗೂ ಇಲ್ಲಿ ಜವಾಬ್ದಾರಿ ಸರ್ಕಾರದ ಸ್ಥಾಪನೆಗಾಗಿ ಹೋರಾಟ ನಡೆಸುವ ಮೂಲಕ ತನ್ನ ಕೊಡುಗೆಯನ್ನು ನೀಡಿದೆ.

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ೧೯೮೫ ಸ್ಥಾಪಿತವಾಯಿತು. ಆಗ ಅದು ಕೆಲವೇ ವಿದ್ಯಾವಂತರಿಗೆ ಸೀಮಿತವಾಗಿತ್ತು. ನಂತರ ಬಾಲಗಂಗಾಧರ ತಿಲಕ್ ಅವರು ‘ಸ್ವರಾಜ್ಯ ನನ್ನ ಜನ್ಮಸಿದ್ದ ಹಕ್ಕು’ ಅದನ್ನು ಪಡೆದೆ ತೀರುತ್ತೇನೆ ಎಂದು ಹೇಳಿ ಗಣೇಶ ಉತ್ಸವ ಮಾಡಲು ಯುವಕರಿಗೆ ಕರೆಕೊಟ್ಟು ಆ ಮೂಲಕ ಯುವಕರನ್ನು ಸಂಘಟಿಸಿ ಅವರನ್ನು ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕುವಂತೆ ಮಾಡಿದರು.

ಮಹಾತ್ಮ ಗಾಂಧೀಜಿ ಅವರ ಸ್ವಾತಂತ್ರದ ಹೋರಾಟದ ನೇತೃತ್ವದಲ್ಲಿ ದೇಶದ ಜನಸಾಮಾನ್ಯರು ಸಹ ಸಕ್ರಿಯವಾಗಿ ಪಾಲ್ಗೊಳ್ಳತೊಡಗಿದರು.
೧೯೨೪ರಲ್ಲಿ ಕನ್ನಡದ ನೆಲ ಬೆಳಗಾವಿಯಲ್ಲಿ ಗಾಂಧೀಜಿ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಅಧಿವೇಶನ ನಡೆಯಿತು. ನಂತರ ಕನ್ನಡದ ನೆಲದಲ್ಲಿ ಕರ್ನಾಟಕದ ಏಕೀಕರಣ ಚಳವಳಿ ಹಾಗೂ ಸ್ವಾತಂತ್ರ್ಯ ಹೋರಾಟದ ಕಾವು ಜೊತೆ ಜೊತೆಗೆ ನಡೆಯಿತು.

೧೯೨೭ ರಲ್ಲಿ ಗಾಂಧೀಜಿ ಅವರು ವಿಶ್ರಾಂತಿ ಪಡೆಯಲು ನಂದಿ ಬೆಟ್ಟಕ್ಕೆ ಬಂದಿದ್ದರು.ಆ ಸಂದರ್ಭದಲ್ಲಿ ಗಾಂಧಿ ಅವರು ಮೈಸೂರಿಗೆ ಭೇಟಿ ನೀಡಿದ್ದರು. ಅಷ್ಟೆಯಲ್ಲ ಮಾರ್ಗದಲ್ಲಿ ಚನ್ನಪಟ್ಟಣ ,ಮದ್ದೂರು, ಮಂಡ್ಯ, ಶ್ರೀರಂಗಪಟ್ಟಣ, ಮೈಸೂರು ಅಲ್ಲದೆ ನಂಜನಗೂಡು ಸೇರಿದಂತೆ ತಗಡೂರು, ಬದನವಾಳ ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಲ್ಲಿ ಭಾಷಣ ಮಾಡಿ ಇಲ್ಲಿನ ಜನತೆಯಲ್ಲಿ ಸ್ವಾತಂತ್ರದ ಅರಿವು ಮೂಡಿಸಿದರು. ಆ ವೇಳೆಯಲ್ಲಿ ಇಲ್ಲಿನ ಜನರು ಸ್ವಾತಂತ್ರ ಹೋರಾಟಕ್ಕೆ ಅನುಕೂಲವಾಗುವಂತೆ ಗಾಂಧೀಜಿ ಅವರಿಗೆ ನಿಧಿ ಅರ್ಪಿಸಿದ್ದರು. ಗಾಂಧೀಜಿ ಅವರ ಸರಳತೆ, ಭಾಷಣಗಳಿಂದ ಪ್ರಭಾವಿತರಾದ ನಂಜನಗೂಡು ಹಾಗೂ ಮಂಡ್ಯ ನೆಲದ ಹಳ್ಳಿ ಹಳ್ಳಿಗಳಲ್ಲಿ ಗಾಂಧಿ ಅನುಯಾಯಿಗಳು ಹುಟ್ಟಿಕೊಂಡರು.

ಮೈಸೂರು ಸಂಸ್ಥಾನದಲ್ಲಿ ಬೆಂಗಳೂರಿನ ಒಂದು ಚಿಕ್ಕ ಕೊಠಡಿಯಲ್ಲಿ ‘ಕಾಂಗ್ರೆಸ್ ಕಚೇರಿ’ ತಲೆಯೆತ್ತಿತ್ತು. ಆಗ ಒಂದು ಮೇಜು, ಒಂದು ಪೆಟ್ಟಿಗೆ, ಒಂದು ಟೈಪ್‌ರೈಟರ್, ಕೆಲವು ಪುಸ್ತಕ ಕಾಗದ ಪತ್ರಗಳು ಮಾತ್ರ ಆ ಕಚೇರಿಯಲ್ಲಿ ಇದ್ದವು. ೧೯೩೭ ರ ವೇಳೆಗೆ ಸಂಯುಕ್ತ ಪ್ರಜಾ ಪಕ್ಷವು ಮೈಸೂರು ಕಾಂಗ್ರೆಸ್ ಸಮಿತಿ ಜೊತೆ ಸೇರಿಕೊಂಡಿತು. ಪ್ರಸಿದ್ಧ ವ್ಯಕ್ತಿಗಳಾದ ಹೆಚ್.ಸಿ.ದಾಸಪ್ಪ, ಕೆ.ಸಿ.ರೆಡ್ಡಿ ಮೊದಲಾದವರು ಕಾಂಗ್ರೆಸ್ ಗೆ ಸೇರಿದರು, ಎಂ.ಎನ್.ಜೋಯಿಸ್, ತಗಡೂರು ರಾಮಚಂದ್ರರಾಯ, ಅಗರಂ ರಂಗಯ್ಯ, ಟಿ.ಸಿದ್ದಲಿಂಗಯ್ಯ, ಕೆ. ಟಿ. ಭಾಷ್ಯಮ್, ಶ್ರೀರಂಗಪಟ್ಟಣದ ವಕೀಲರಾದ ಎ. ಜಿ. ಬಂದಿಗೌಡ, ಮದ್ದೂರಿನ ಎಚ್.ಕೆ. ವೀರಣ್ಣಗೌಡ ಮೊದಲಾದ ಗಣ್ಯರು ಇದ್ದ ‘ಮೈಸೂರು ಕಾಂಗ್ರೆಸ್ ಸಮಿತಿ’ ಮೈಸೂರು ಸಂಸ್ಥಾದಲ್ಲಿ ಪ್ರಬಲ ಪಕ್ಷವಾಗಿ ತಲೆಯೇತ್ತಿತು.

೧೯೩೮ರ ಜನವರಿ ೨೬ ರಂದು ಮೈಸೂರಿನಲ್ಲಿ ಸುಬ್ಬಮ್ಮ ಜೋಯಿಸ್, ತಗಡೂರು ರಾಮಚಂದ್ರರಾಯ ಹಾಗೂ ಅಗರಂ ರಂಗಯ್ಯ ಇವರುಗಳು ತ್ರಿವರ್ಣ ಧ್ವಜಾರೋಹಣ ಮಾಡಲು ಯತ್ನಿಸಿದಾಗ ಅವರನ್ನು ದಸ್ತಗಿರಿ ಮಾಡಿದರು. ಇದರಿಂದ ರೊಚ್ಚಿಗೆದ್ದ ಕಾಂಗ್ರೆಸ್ ನಾಯಕರುಗಳು ಮೈಸೂರು ಬಿಟ್ಟು ಬೇರೆ ಕಡೆ ಧ್ವಜ ಹಾರಿಸಬೇಕೆಂದು ಯೋಚಿಸಿದರು.

ಮೈಸೂರು ಕಾಂಗ್ರೆಸ್ ಸಮಿತಿಯು ೧೯೩೮ರ ಫೆಬ್ರವರಿಯಲ್ಲಿ ಸಭೆ ಸೇರಿ ಏಪ್ರಿಲ್ ತಿಂಗಳಿನಲ್ಲಿ ಧ್ವಜ ಸತ್ಯಾಗ್ರಹ ನಡೆಸಬೇಕೆಂದು ತೀರ್ಮಾನಕ್ಕೆ ಬಂದಿತು. ಈ ಸಭಾರಂಭಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಸೇರಿಸಿ ನಡೆಸಬೇಕೆಂದು ಚರ್ಚೆ ನಡೆಸಿ ನದಿ ಪರಿಸರ ಹಾಗೂ ಛತ್ರಗಳ ಸೌಲಭ್ಯ ಇರುವ ಕಾವೇರಿ ನದಿಯ ಶ್ರೀರಂಗಪಟ್ಟಣದ ಪಶ್ಚಿಮ ವಾಹಿನಿ ಇಲ್ಲವೆ ಕಪಿಲಾ ನದಿಯ ನಂಜನಗೂಡು ಹತ್ತಿರ ನಡೆಸಬೇಕು ಎಂದು ಪ್ರಸ್ತಾಪ ಬಂದಿತು.
ಈ ಕಾರ್ಯಕ್ರಮದ ಮೇಲ್ವಿಚಾರಣೆ ವಹಿಸಿಕೊಳ್ಳಲು ಶ್ರೀರಂಗಪಟ್ಟಣದ ವಕೀಲರಾಗಿದ್ದ ಎ. ಜಿ. ಬಂದಿಗೌಡರು ವಕೀಲ ವೃತ್ತಿಯನ್ನು ಒಂದೂವರೆ ತಿಂಗಳು ಬಿಟ್ಟು ಈ ಕೆಲಸವನ್ನು ಮಾಡಲು ಇಚ್ಛಿಸದೆ ಮುಂದೆ ಬರಲಿಲ್ಲ, ನಂಜನಗೂಡಿನ ಕೆ.ವಿಶ್ವೇಶ್ವರಗೌಡರು ತಮ್ಮಿಂದ ಈ ಕೆಲಸ ಸಾಧ್ಯವಿಲ್ಲ ಎಂದು ಹೇಳಿದರು.

ಅಂತಹ ಸಂದರ್ಭದಲ್ಲಿ ೧೯೩೧-೩೨ ರಲ್ಲಿ ನಡೆದ ಇರ್ವಿನ್ ನಾಲಾ (ಈಗಿನ ವಿಶ್ವೇಶ್ವರಯ್ಯ ನಾಲಾ) ಚಳವಳಿಯ ನೇತೃತ್ವದಲ್ಲಿ ರೈತ ಸಂಘಟನೆ ಮಾಡಿ ಅನುಭವ ಪಡೆದಿದ್ದ ಮದ್ದೂರಿನ ಎಚ್.ಕೆ. ವೀರಣ್ಣಗೌಡ ಅವರು ಮದ್ದೂರಿನಲ್ಲಿ ನಡೆಸಲು ಅವಕಾಶ ನೀಡುವುದಾದರೆ ಆ ಕಾರ್ಯಕ್ರಮದ ಜವಾಬ್ದಾರಿ ವಹಿಸಿಕೊಳ್ಳುವುದಾಗಿ ಹೇಳಿದರು. ಮದ್ದೂರು ಪಟ್ಟಣ ಬೆಂಗಳೂರು- ಮೈಸೂರು ಹೆದ್ದಾರಿ ಮಧ್ಯೆ ಇರುವುದರಿಂದ ಹಾಗೂ ರೈಲ್ವೆ ನಿಲ್ದಾಣ ಅನುಕೂಲ ಮತ್ತು ಶಿಂಷಾ ನದಿಯ ಪರಿಸರ ಇದ್ದಿದ್ದರಿಂದ ಅಂತಿಮವಾಗಿ ಮದ್ದೂರು ರೈಲ್ವೆ ನಿಲ್ದಾಣ ಇದ್ದ ಶಿವಪುರದಲ್ಲಿ ಧ್ವಜ ಸತ್ಯಾಗ್ರಹ ನಡೆಸಲು ತೀರ್ಮಾನಕ್ಕೆ ಬಂದು ಅದಕ್ಕೆ ‘ರಾಷ್ಟ್ರಕೂಟ’ ಎಂದು ಹೆಸರು ಇಡಲಾಯಿತು.

ಮೈಸೂರು ಸಂಸ್ಥಾನದ ಇತಿಹಾಸದಲ್ಲೆ ರಾಷ್ಟ್ರಕೂಟ ಸಮಾವೇಶ ನಡೆಸುವುದು ಅಂದು ದೊಡ್ಡ ಸವಾಲು ಆಗಿತ್ತು. ಮಂಡ್ಯದ ಗೋಪಾಲ ಶೆಟ್ಟರ ಮನೆಯ ಮಹಡಿಯಲ್ಲಿ ಸಭೆ ಸೇರಿ ಶಿವಪುರದ ಅಧಿವೇಶನದ ಎಲ್ಲಾ ಜವಾಬ್ದಾರಿಯನ್ನು ಎಚ್.ಕೆ. ವೀರಣ್ಣಗೌಡರಿಗೆ ವಹಿಸಿದ್ದರು.

ಅಧಿವೇಶನ ನಡೆಸಲು ಹೆಚ್ಚಿನ ಹಣದ ಅವಶ್ಯಕತೆ ಇತ್ತು. ಮಂಡ್ಯದ ಉಮ್ಮಡಹಳ್ಳಿ ಮೂಲದ ಮೈಸೂರಿನ ಸಾಹುಕಾರ ಚನ್ನಯ್ಯ ಅವರನ್ನು ರಾಷ್ಟ್ರಕೂಟದ ಸ್ವಾಗತ ಸಮಿತಿಯ ಅಧ್ಯಕ್ಷರನ್ನಾಗಿ ಒಪ್ಪಿಸಲಾಯಿತು. ಉಪಾಧ್ಯಕ್ಷರುಗಳಾಗಿ ಎಚ್.ಸಿ.ದಾಸಪ್ಪ, ಎಸ್.ರಂಗರಾಮಯ್ಯ, ಶಿವಪುರದ ಪಿ. ತಿರುಮಲೇಗೌಡ ಅವರನ್ನು,ಕಾರ್ಯದರ್ಶಿಗಳಾಗಿ ಹೆಚ್.ಕೆ. ವೀರಣ್ಣಗೌಡ ಮತ್ತು ಎ. ಜಿ. ಬಂದಿಗೌಡರನ್ನು ಹಾಗೂ ಖಜಾಂಚಿಯಾಗಿ ಎಂ.ಎನ್.ಜೋಯಿಸ್ ಮತ್ತು ಕೊಪ್ಪದ ಜೋಗಿಗೌಡ ಅವರನ್ನು ಆಯ್ಕೆ ಮಾಡಲಾಯಿತ್ತು. ನೂರು ರೂಪಾಯಿ ಚಂದಾ ಕೊಟ್ಟವರನ್ನು ಸ್ವಾಗತ ಸಮಿತಿ ಸದಸ್ಯರುಗಳನ್ನಾಗಿ, ಐದು ರೂ ಕೊಟ್ಟವರನ್ನು ಪ್ರತಿನಿಧಿಗಳು ಎಂದು ಪರಿಗಣಿಸಲಾಯಿತು.ಶಿವಪುರದಲ್ಲಿ ಸ್ವಾಗತ ಸಮಿತಿಯ ಕಚೇರಿಯನ್ನು ಸ್ಥಾಪಿಸಲಾಯಿತು.
ಸ್ವಾಗತ ಸಮಿತಿಯು ರಾಷ್ಟ್ರಕೂಟ ಸಮಾವೇಶವನ್ನು ೧೯೩೮ ರ ದಿನಾಂಕ ೯ ರಿಂದ ೧೧ರ ವರಗೆ ಮೂರು ದಿನಗಳ ಕಾಲ ನಡೆಸಲು ತೀರ್ಮಾನಿಸಲಾಯಿತು. ಕಾರ್ಯಕ್ರಮ ನಡೆಸಲು ಶಿವಪುರದ ಪಿ. ತಿರುಮಲೇಗೌಡ ಅವರು ತಮ್ಮ ಎಂಟು ಎಕರೆ ಜಮೀನಿನಲ್ಲಿ ಅವಕಾಶ ನೀಡಲು ಒಪ್ಪಿಕೊಂಡರು. (ಮುಂದುವರೆಯುವುದು)

 

andolana

Recent Posts

ಶೇ.56ರಷ್ಟು ಮೀಸಲಾತಿ | 9ನೇ ಶೆಡ್ಯೂಲ್‌ಗೆ ಸೇರಿಸಲು ವಿ.ಎಸ್.ಉಗ್ರಪ್ಪ ಆಗ್ರಹ

ಬೆಂಗಳೂರು : ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ಜಾತಿಗಳ ಮೀಸಲಾತಿ ಪ್ರಮಾಣವನ್ನು ಶೇ.56ಕ್ಕೆ ಹೆಚ್ಚಳ…

5 hours ago

Padma Award | ಧರ್ಮೇಂದ್ರಗೆ ಪದ್ಮವಿಭೂಷಣ, ಮಮ್ಮುಟಿಗೆ ಪದ್ಮಭೂಷಣ ಪ್ರಶಸ್ತಿ

ಹೊಸದಿಲ್ಲಿ : ಹಿರಿಯ ನಟ ಧರ್ಮೇಂದ್ರ, ದಂತಕಥೆ ಹಿನ್ನೆಲೆ ಗಾಯಕಿ ಅಲ್ಕಾ ಯಾಜ್ಞಿಕ್, ಮಲಯಾಳಂ ಸಿನಿಮಾ ದಿಗ್ಗಜ ಮಮ್ಮುಟ್ಟಿ, ಬಂಗಾಳಿ…

5 hours ago

ನ್ಯಾಯಾಂಗ ಸ್ವಾತಂತ್ರ್ಯಕ್ಕೆ ʼಆಂತರಿಕ ಅಪಾಯʼ : ಸುಪ್ರೀಂ ನ್ಯಾಯಾಧೀಶರಿಂದ ಕಾರ್ಯಾಂಗದ ಬಗ್ಗೆ ಅಸಮಾಧಾನ

ಹೊಸದಿಲ್ಲಿ : ನ್ಯಾಯಾಂಗ ಸ್ವಾತಂತ್ರ್ಯಕ್ಕೆ ಅಪಾಯ ಹೊರಗಿನಿಂದಲ್ಲ, ‘ಆಂತರಿಕ ವ್ಯವಸ್ಥೆ’ಯಿಂದಲೇ ಇದೆ ಎಂದು ಹೇಳಿರುವ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಉಜ್ಜಲ್…

6 hours ago

ಅಧಿಕಾರಿಗಳು ಜನಪ್ರತಿನಿಧಿಗಳ ಕರೆ ಸ್ವೀಕರಿಸಿ : ರಾಜ್ಯ ಸರ್ಕಾರಿ ಅಧಿಕಾರಿಗಳಿಗೆ ಮುಖ್ಯಕಾರ್ಯದರ್ಶಿ ಖಡಕ್ ಸೂಚನೆ

ಬೆಂಗಳೂರು : ಅಧಿಕಾರಿಗಳು ಜನಪ್ರತಿನಿಧಿಗಳ ದೂರವಾಣಿ ಕರೆಯನ್ನು ಸ್ವೀಕರಿಸಲೇಬೇಕು ಎಂಬ ಸುತ್ತೋಲೆಯನ್ನು ಹೊರಡಿಸುವ ಮೂಲಕ ಸರ್ಕಾರಿ ಅಧಿಕಾರಿಗಳಿಗೆ ರಾಜ್ಯ ಸರ್ಕಾರ…

7 hours ago

ಬುದ್ಧಗಯಾ ವಿಮೋಚನಾ ಚಳವಳಿ ಬೆಂಬಲಿಸಿ

ಮೈಸೂರು : ಹೊಸದಿಲ್ಲಿಯಲ್ಲಿ ಬುದ್ಧಗಯಾ ವಿಮೋಚನೆ ಐತಿಹಾಸಿಕ ಚಳವಳಿಯಲ್ಲಿ ಬೌದ್ಧ ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಬೌದ್ಧ ಚಿಂತಕ,…

7 hours ago

ಮೈಸೂರಲ್ಲಿ ಸಂಭ್ರಮದ ರಥಸಪ್ತಮಿ

ಮೈಸೂರು : ರಥಸಪ್ತಮಿ ಅಂಗವಾಗಿ ನಗರದಲ್ಲಿ ಭಾನುವಾರ ಅರಮನೆ ಸೇರಿದಂತೆ ವಿವಿಧೆಡೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಸೂರ್ಯನಿಗೆ ನಮಿಸಲಾಯಿತು.…

8 hours ago