ಎಡಿಟೋರಿಯಲ್

ವಿವೇಕ ಕೊಠಡಿಗಳ ನಿರ್ಮಾಣ ಮತ್ತು ಕೇಸರಿ ಬಣ್ಣ !

-ಡಾ.ಬಿ.ಪಿ.ಮಹೇಶ ಚಂದ್ರ ಗುರು

ಸ್ವಾಮಿ ವಿವೇಕಾನಂದರು ಭಾರತೀಯ ಸಂಸ್ಕೃತಿ, ರಾಷ್ಟ್ರೀಯತೆ ಮತ್ತು ಹಿಂದೂ ಧರ್ಮಗಳಿಗೆ ಮಾನವೀಯತೆ, ವೈಜ್ಞಾನಿಕತೆ ಮತ್ತು ಪ್ರಕೃತಿದತ್ತ ಸಮಾನತೆಗಳ ಆಧಾರದ ಮೇಲೆ ಕಾಯಕಲ್ಪ ನೀಡಿದರು. ಇವರು ಬಂಗಾಳ ಪುನರುಜ್ಜೀವನ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಭಾರತದ ಆಧುನೀಕರಣಕ್ಕೆ ಮಾನವ ಸ್ಪರ್ಶ ನೀಡಿದರು. ಕ್ರಿ.ಶ.೧೮೬೩-೧೯೦೨ರ ಅವಧಿಯಲ್ಲಿ ಹುಟ್ಟಿ ಬೆಳೆದ ಸ್ವಾಮಿ ವಿವೇಕಾನಂದರು ಹಿಂದೂ ಧರ್ಮವನ್ನು ಅತ್ಯಂತ ವಿಮರ್ಶಾತ್ಮಕ ದೃಷ್ಟಿಕೋನದಿಂದ ಅವಲೋಕಿಸಿದರು. ಇವರು ಅದ್ವೈತ ಸಿದ್ಧಾಂತವನ್ನು ಸಮರ್ಥಿಸಿದರೂ ಅಸ್ಪೃಶ್ಯತೆ, ಅಸಮಾನತೆ ಮತ್ತು ತಾರತಮ್ಯಗಳನ್ನು ಒಳಗೊಂಡ ಹಿಂದೂಧರ್ಮ ಬಹುಸಂಖ್ಯಾತ ಶೂದ್ರ ಹಿಂದೂ ಧರ್ಮೀಯರನ್ನು ಅವನತಿಯೆಡೆಗೆ ದಬ್ಬಿರುವುದಾಗಿ ಬಲವಾಗಿ ಪ್ರತಿಪಾದಿಸಿದರು.

ಅಸ್ಪೃಶ್ಯತೆಯೆಂಬ ಕ್ಯಾನ್ಸರ್ ಹಿಂದೂ ಧರ್ಮವನ್ನು ನಾಶಪಡಿಸುವುದಾಗಿ ಬಹಳ ಹಿಂದೆಯೇ ಎಚ್ಚರಿಸಿದ್ದರು. ಸ್ವಾಮಿ ವಿವೇಕಾನಂದರು ಬ್ರಾಹ್ಮಣ್ಯದ ಕಡುವಿರೋಧಿಯಾಗಿದ್ದರೂ ಭಾರತೀಯ ರಾಷ್ಟ್ರೀಯತೆಯ ಪರಮ ಸಮರ್ಥಕರಾಗಿದ್ದರು. ಭಾರತೀಯ ಪುನರುಜ್ಜೀವನದ ಹರಿಕಾರ ರಾಜಾರಾಮ್ ಮೋಹನ್‌ರಾಯ್ ಅವರ ಬ್ರಹ್ಮ ಸಮಾಜದಲ್ಲಿ ಸ್ವಾಮಿ ವಿವೇಕಾನಂದರು ಸಕ್ರಿಯವಾಗಿ ಹಿಂದೂ ಧರ್ಮದ ಅಮಾನವೀಯ ಹಾಗೂ ಅವೈಜ್ಞಾನಿಕ ಪರಿಕಲ್ಪನೆಗಳು ಮತ್ತು ಸಂಪ್ರದಾಯಗಳ ವಿರುದ್ಧ ಹೋರಾಟ ನಡೆಸಿದರು.
ಶಾರದಾಮಾತೆ ಮತ್ತು ರಾಮಕೃಷ್ಣ ಪರಮಹಂಸರ ಮಾನಸ ಪುತ್ರನಂತೆಯೇ ಸ್ವಾಮಿ ವಿವೇಕಾನಂದರು ಮಾನವೀಯತೆಯ ಗರಡಿಯಲ್ಲಿ ಪಳಗಿದರು.

ವಿವಿಧ ಧರ್ಮಗಳ ತೌಲನಿಕ ಅಧ್ಯಯನ ನಡೆಸಿದ ಇವರು ಸನಾತನ ಹಿಂದೂ ಧರ್ಮದಲ್ಲಿ ಅಡಕವಾಗಿರುವ ಸ್ತ್ರೀ ವಿರೋಧಿ, ಶೂದ್ರ ವಿರೋಧಿ ಮತ್ತು ಪ್ರಕೃತಿ ವಿರೋಧಿ ಪ್ರವೃತ್ತಿಗಳನ್ನು ವಸ್ತುನಿಷ್ಟವಾಗಿ ಖಂಡಿಸಿದರು. ಇವರು ಹಿಂದೂ ಧರ್ಮದ ಅವೈಚಾರಿಕತೆ ಮತ್ತು ಜೀವವಿರೋಧಿ ಪ್ರವೃತ್ತಿಗಳನ್ನು ವಿರೋಧಿಸಿ ಪರ್ಯಾಯ ಬುದ್ಧಧರ್ಮವನ್ನು ಸ್ಥಾಪಿಸಿದ ಭಗವಾನ್ ಬುದ್ಧರನ್ನು ನನ್ನ ಇಷ್ಟದೇವತೆ, ನಾನು ಬುದ್ಧರ ಜೀವನ ಮೌಲ್ಯಗಳನ್ನು ಅನುಸರಿಸುತ್ತೇನೆ, ರಾಮಕೃಷ್ಣಪಂಥ ಹಿಂದೂ ಧರ್ಮವನ್ನು ಒಪ್ಪಿಕೊಳ್ಳುವುದಿಲ್ಲ ಮತ್ತು ಸಮಾನತೆಯ ನೆಲೆಗಟ್ಟಿನಲ್ಲಿ ಪ್ರಬುದ್ಧ ಭಾರತವನ್ನು ನಿರ್ಮಿಸಲು ಶ್ರಮಿಸುತ್ತೇನೆ ಎಂದು ವೀರೋಚಿತವಾಗಿ ಘೋಷಿಸಿ ಹಿಂದುತ್ವವಾದಿಗಳನ್ನು ತಿರಸ್ಕರಿಸಿದರು.

ಸ್ವಾಮಿ ವಿವೇಕಾನಂದರು ಧರ್ಮದ ಹೆಸರಿನಲ್ಲಿ ಬಹುಸಂಖ್ಯಾತ ಸ್ವಧರ್ಮಿಯರನ್ನು ಬಡತನಕ್ಕೆ ದಬ್ಬಿದ ಹಿಂದೂ ಧರ್ಮದ ಭ್ರಮನಿರಸನದ ನೈಜ ಸ್ಥಿತಿಯನ್ನು ತಮ್ಮ ಬರಹಗಳು ಮತ್ತು ಭಾಷಣಗಳಲ್ಲಿ ವಸ್ತುನಿಷ್ಟವಾಗಿ ಪ್ರತಿಪಾದಿಸಿದರು. ಹಸಿದ ಹೊಟ್ಟೆಯನ್ನು ಸೃಷ್ಟಿಸುವ ಧರ್ಮ ನಿಜವಾದ ಅರ್ಥದಲ್ಲಿ ಧರ್ಮವೇ ಅಲ್ಲ ಎಂಬುದನ್ನು ಗುರುದೇವ ರಾಮಕೃಷ್ಣ ಪರಮಹಂಸರು ಪ್ರತಿಪಾದಿಸಿದರು. ರಾಮಕೃಷ್ಣ ಆಶ್ರಮದ ವತಿಯಿಂದ ದೇಶದ ಉದ್ದಗಲಕ್ಕೂ ಅನಾಥಾಲಯಗಳು, ಶಾಲೆಗಳು, ಆಸ್ಪತ್ರೆಗಳು ಮೊದಲಾದವುಗಳನ್ನು ಸ್ಥಾಪಿಸಿ ‘ದರಿದ್ರ ನಾರಾಯಣ ದೇವೋಭವ’ ಎಂದು ನಂಬಿ ದೀನದಲಿತ ಸಮುದಾಯಗಳ ರಕ್ಷಣೆ ಮತ್ತು ಪ್ರಗತಿಗಳಿಗೆ ಅಹರ್ನಿಸಿ ದುಡಿದ ಮಹಾ ಯೋಗಿ – ತ್ಯಾಗಿ ಸ್ವಾಮಿ ವಿವೇಕಾನಂದರೇ ನಿಜವಾದ ವಿಶ್ವ ಗುರುವೇ ಹೊರತು ಮೇಲ್ವರ್ಗ ಮತ್ತು ಮೇಲ್ಜಾತಿ ಪ್ರಭುತ್ವಗಳ ರಕ್ಷಣೆಗೆ ಮುಂದಾಗಿರುವ ಪ್ರಧಾನಿ ಮೋದೀಜಿ ವಿಶ್ವಗುರುವಲ್ಲ ಎಂಬ ಸತ್ಯವನ್ನು ಬಹುಸಂಖ್ಯಾತ ಭಾರತೀಯರು (ವಿಶೇಷವಾಗಿ ಯುವಜನರು) ಮನಗಂಡು ಭಾರತವನ್ನು ಹಿಂದುತ್ವವಾದಿಗಳ ಅವಿವೇಕ, ಅಟ್ಟಹಾಸ ಮತ್ತು ದೌರ್ಜನ್ಯಗಳಿಂದ ರಕ್ಷಿಸಬೇಕು. ಭಾರತದಲ್ಲಿ ಕಳೆದ ೮ ವರ್ಷಗಳಿಂದ ಹೆಚ್ಚುತ್ತಿರುವ ಬಡತನ, ನಿರುದ್ಯೋಗ, ಹಸಿವು, ಅನಾರೋಗ್ಯ, ಅಪೌಷ್ಟಿಕತೆ, ಅಸಹಾಯಕತೆ ಮತ್ತು ಅರಾಜಕತೆಗಳಿಗೆ ನೇರವಾಗಿ ಕಾರಣವಾಗಿರುವವರನ್ನು ವಿಶ್ವಗುರುವೆಂದು ಬಿಂಬಿಸುವವರು ನಿಜಕ್ಕೂ ವಿವೇಕಿಗಳೇ?

ಇಂದು ನಮ್ಮನ್ನಾಳುತ್ತಿರುವ ನಾಯಕರಿಗೆ ಹಿಂದೂ ಧರ್ಮ ಮತ್ತು ಹಿಂದುತ್ವಗಳ ನಡುವಣ ನೈಜ ವ್ಯತ್ಯಾಸ ತಿಳಿದಿಲ್ಲ. ಸ್ವಾಮಿ ವಿವೇಕಾನಂದರನ್ನು ಹಿಂದುತ್ವದ ಪ್ರವರ್ತಕ ಮತ್ತು ರಕ್ಷಕ ಎಂದು ಬಿಂಬಿಸಿ ದೇಶದ ಜನರನ್ನು ತಪ್ಪು ದಾರಿಗೆ ಎಳೆದಿದ್ದಾರೆ. ವಿವೇಕಾನಂದರ ವಿಚಾರಧಾರೆಗಳು ಮತ್ತು ಪರಂಪರೆಯನ್ನು ಬಲ್ಲವರು ಇಂತಹ ಗ್ರಹಿಕೆಯನ್ನು ತಪ್ಪು ಮತ್ತು ಸತ್ಯಕ್ಕೆ ಬಗೆದ ಅಪಚಾರವೆಂದು ಖಂಡಿತ ಭಾವಿಸುತ್ತಾರೆ. ವಿವೇಕಾನಂದರು ತಮ್ಮ ಜೀವನದುದ್ದಕ್ಕೂ ಬೋಧಿಸಿದ ಮತ್ತು ಪ್ರತಿಪಾದಿಸಿದ ವಿಶಾಲವಾದ ಮಾನವತಾವಾದ ಮತ್ತು ಜಾಗತಿಕ ಧಾರ್ಮಿಕ ಸೌಹಾರ್ದತೆಗಳಿಗೆ ಮತಾಂಧತೆಯನ್ನು ಉತ್ತೇಜಿಸುವ ಹಿಂದುತ್ವ ಸ್ವೀಕಾರಾರ್ಹವಲ್ಲ. ಹಿಂದುತ್ವ ಬ್ರಿಗ್ರೇಡ್ ವಿಚಾರಧಾರೆಗಳು ವಿವೇಕಾನಂದರು ಪ್ರತಿಪಾದಿಸಿದ ಸಮಾನತೆ ಮತ್ತು ಮಾನವೀಯತೆ ಮೌಲ್ಯಗಳಿಗೆ ತದ್ವಿರುದ್ಧವಾಗಿದೆ.

ಸ್ವಾಮಿ ವಿವೇಕಾನಂದರ ಹೆಸರಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಸರ್ಕಾರಿ ಶಾಲೆ ಮತ್ತು ಪಿಯು ಕಾಲೇಜುಗಳಲ್ಲಿ ವಿವೇಕ’ ಹೆಸರಿನಲ್ಲಿ ೮೧೦೦ ಹೊಸ ಕೊಠಡಿಗಳ ನಿರ್ಮಾಣಕ್ಕೆ ಇತ್ತೀಚೆಗೆ ಏಕಕಾಲದಲ್ಲಿ ಶಂಕುಸ್ಥಾಪನೆ ನೆರವೇರಿಸಿರುವುದು ಶಿಕ್ಷಣದ ಕೇಸರೀಕರಣದ ಒಂದು ಭಾಗವೇ ಆಗಿದೆ. ವಾಮಮಾರ್ಗದ ಮೂಲಕ ಅಧಿಕಾರಕ್ಕೆ ಬಂದವರು ಇಂತಹ ಓಟ್ಬ್ಯಾಂಕ್ ಆಧರಿತ ಕ್ರಮಗಳನ್ನು ಕೈಗೊಳ್ಳುವುದು ನಿಜಕ್ಕೂ ಒಪ್ಪುವಂತದ್ದಲ್ಲ. ಇದರ ಜೊತೆಗೆ ಕೊಠಡಿಗಳಿಗೆ ಕೇಸರಿ ಬಣ್ಣ ಬಳಿಯುವುದು ಧರ್ಮನಿರಪೇಕ್ಷತೆಯೆಂಬ ಸಾಂವಿಧಾನಿಕ ಮೌಲ್ಯಕ್ಕೆ ಅಪಚಾರವೆಸಗಿದಂತಾಗಿದೆ. ಸರ್ಕಾರದ ಈ ನಡೆ ರಾಜ್ಯದಾದ್ಯಂತ ಪ್ರಗತಿಪರ ಚಿಂತಕರು ಮತ್ತು ಸಾಮಾಜಿಕ ನ್ಯಾಯಪರ ಹೋರಾಟಗಾರರ ವಿರೋಧಕ್ಕೆ ಗುರಿಯಾಗಿದೆ. ಇದು ಸಂಘ ಪರಿವಾರಿಗಳ ನಿಯಂತ್ರಣದಲ್ಲಿರುವ ಬಿಜೆಪಿ ಸರ್ಕಾರದ ತಪ್ಪು ನಡೆಯಾಗಿದೆ. ಶಾಲಾ ಕಾಲೇಜುಗಳ ಮಕ್ಕಳಿಗೆ ಬೇಕಿರುವುದು ಮೂಲಸೌಕರ್ಯಗಳ ಅಭಿವೃದ್ಧಿ, ಶಿಕ್ಷಕರ ನೇಮಕಾತಿ, ಶೈಕ್ಷಣಿಕ ತಂತ್ರಜ್ಞಾನಗಳ ಅಳವಡಿಕೆ, ಪಠ್ಯಪುಸ್ತಕ, ಮಧ್ಯಾಹ್ನದ ಊಟ, ಸೈಕಲ್ ಸೌಲಭ್ಯ ಮೊದಲಾದವುಗಳೇ ಹೊರತಾಗಿ ಕೊಠಡಿಗಳಿಗೆ ವಿವೇಕ ಎಂಬ ಹೆಸರು ಮತ್ತು ಕೇಸರಿ ಬಣ್ಣ ಅಲ್ಲವೇ ಅಲ್ಲ!

 

andolana

Recent Posts

ಪಡಿತರ ವಿತರಣೆ | ಸಮಯ ಬದಲಾವಣೆ

ನ್ಯಾಯಬೆಲೆ ಅಂಗಡಿಗಳ ಗ್ರಾಹಕರ ಮನವಿಗೆ ಸರ್ಕಾರದ ಸ್ಪಂದನೆ ಅ.1ರಿಂದ ಬೆಳಿಗ್ಗೆ 7ರಿಂದ ಮಧ್ಯಾಹ್ನ 12; ಸಂಜೆ 4ರಿಂದ ರಾತ್ರಿ 8…

9 mins ago

3,705 ಕೋಟಿ ರೂ. ಪರಿಹಾರ ಕೋರಿ ಕೇಂದ್ರಕ್ಕೆ ಮೆಮೊರಾಂಡಂ ಸಲ್ಲಿಸಿದ ರಾಜ್ಯ ಸರ್ಕಾರ

ಬೆಂಗಳೂರು : ಕರ್ನಾಟಕದಲ್ಲಿ ಮುಂಗಾರು ಮಳೆ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಬರ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುತ್ತಿದ್ದು, ಮೊದಲ ಹಂತದಲ್ಲಿ ಘೋಷಿಸಲಾದ 101…

10 hours ago

ಹನೂರು | ಮಳೆಯ ನೀರಿನಲ್ಲಿ ಕೊಚ್ಚಿ ಹೋಗಿ ಕಾರ್ಮಿಕ ಸಾವು

ಹನೂರು : ಕೆಲಸಕ್ಕೆ ಹೋಗಿ ವಾಪಸ್ ಬರುವಾಗ ಮಳೆಯ ನೀರಿನಲ್ಲಿ ಕೊಚ್ಚಿ ಹೋಗಿ ಗಾರೆ ಕಾರ್ಮಿಕರೊಬ್ಬರು ಮೃತಪಟ್ಟಿರುವ ಘಟನೆ ಹನೂರು…

10 hours ago

ಗ್ರಾಮದ ಸ್ವಚ್ಛತೆ ನೋಡಿಕೊಳ್ಳುವವರೇ ಅನೈರ್ಮಲ್ಯಕ್ಕೆ ಕಾರಣ?

ನಂಜನಗೂಡು : ಗ್ರಾಮದ ಸ್ವಚ್ಛತೆಯ ಜವಾಬ್ದಾರಿ ಹೊತ್ತವರೇ ಪಂಚಾಯಿತಿ ಆವರಣವನ್ನೆ ಮೂತ್ರಾಲಯವಾಗಿಸಿ ಅನೈರ್ಮಲ್ಯಕ್ಕೆ ಕಾರಣರಾದರೆ ಬೇರೆಯವರಿಗೆ ಸ್ವಚ್ಚತೆ ಕಾಪಾಡುವ ಬಗ್ಗೆ…

12 hours ago

ಮಹಾಪ್ರವಾಹಕ್ಕೆ ನೇಪಾಳ ತತ್ತರ: ನಾಪತ್ತೆಯಾದವರ ಸಂಖ್ಯೆ 6100ಕ್ಕೆ ಏರಿಕೆ

ಕಠ್ಮಂಡು: ಮಹಾ ಪ್ರವಾಹಕ್ಕೆ ನೇಪಾಳ ತತ್ತರಿಸಿದೆ. ಪ್ರವಾಹ ಹಾಗೂ ಭೂಕುಸಿತದಿಂದ ನಾಪತ್ತೆಯಾದವರ ಸಂಖ್ಯೆ 6,100ಕ್ಕೆ ಏರಿಕೆಯಾಗಿದೆ. ಇದೀಗ ಹೈಡ್ರೋ ಪವರ್…

17 hours ago

ಓದುಗರ ಪತ್ರ: ಇನ್ಸ್‌ಪೆಕ್ಟರ್ ಧನಂಜಯರ ಹೇಳಿಕೆಯಲ್ಲಿ ತಪ್ಪಿಲ್ಲ

ತಿ.ನರಸೀಪುರ ಪಟ್ಟಣದಲ್ಲಿ ನಡೆದ ಗಣೇಶೋತ್ಸವ ಪೂರ್ವಭಾವಿ ಸಭೆಯಲ್ಲಿ ಇನ್ಸ್ ಪೆಕ್ಟರ್ ಧನಂಜಯ ಅವರು ಪ್ರಚೋದನಕಾರಿಯಾಗಿ ಮಾತನಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ…

24 hours ago