ಕೆ.ಬಿ.ರಮೇಶನಾಯಕ
ಪ್ರಗತಿಯಲ್ಲಿ ಹಿಂದೆ ಬಿದ್ದಿರುವ ಗ್ರಾಪಂಗಳನ್ನು ಹುರಿದುಂಬಿಸಲು ಜಿಪಂ ಹೊಸ ಯೋಜನೆ
ಪ್ರಶಸ್ತಿಗೆ ನಾಲ್ಕು ಕಾರ್ಯಸೂಚಿಯಲ್ಲಿ ಪ್ರಗತಿ ಸಾಧಿಸಿದ ಗ್ರಾಪಂಗಳ ಆಯ್ಕೆ
ಮೈಸೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಗ್ರಾಮ ಪಂಚಾಯಿತಿಗಳಲ್ಲಿ ನಿರೀಕ್ಷಿತ ಸಾಧನೆ ಮಾಡದ ಗ್ರಾಪಂಗಳನ್ನು ಹುರಿದುಂಬಿಸಿ, ಅತ್ಯುತ್ತಮವಾಗಿ ಪ್ರಗತಿ ಸಾಧಿಸುವ ಗ್ರಾಪಂಗೆ ಉತ್ತಮ ಪ್ರಶಸ್ತಿ ಕೊಡಲು ರಾಜ್ಯದಲ್ಲೇ ಮೊಟ್ಟ ಮೊದಲ ಬಾರಿಗೆ ಮೈಸೂರು ಜಿಲ್ಲಾ ಪಂಚಾಯಿತಿಯು ಪ್ರಾರಂಭಿಸಿರುವ ವಿನೂತನ ಪ್ರಯತ್ನ ಸಫಲವಾಗಿದೆ.
ಗ್ರಾಪಂ ಮಟ್ಟದಲ್ಲಿ ನಾಲ್ಕು ಕಾರ್ಯ ಸೂಚಿಗಳಲ್ಲಿ ಪ್ರಗತಿ ಸಾಧಿಸುವ ಗ್ರಾಪಂಗಳಿಗೆ ಉತ್ತಮ ಪ್ರಗತಿ ಸಾಧಿಸಿದ ಪಂಚಾಯಿತಿ ಎನ್ನುವಂತೆ ಪ್ರಶಸ್ತಿ ಕೊಡಲು ಶುರು ಮಾಡಿದ ಮೇಲೆ ಸಾಧನೆಯಲ್ಲಿ ಹಿಂದೆ ಬಿದ್ದಿರುವ ಗ್ರಾಪಂಗಳ ನಡುವೆ ಪೈಪೋಟಿ ಶುರುವಾಗಿರುವುದಲ್ಲದೆ, ಪ್ರಗತಿಯಲ್ಲೂ ಗಣನೀಯ ಏರಿಕೆಯಾಗಿದೆ. ಇದರಿಂದಾಗಿ, ಮೈಸೂರು ಜಿಲ್ಲೆಯಲ್ಲಿ ಅನುಸರಿಸಿದ ಮಾದರಿಯನ್ನೇ ಇತರ ಜಿಲ್ಲೆಗಳಲ್ಲೂ ಅಳವಡಿಸಿಕೊಳ್ಳಲು ದಾರಿ ಮಾಡಿಕೊಟ್ಟಿದೆ. ಗಾಂಧೀಜಿ ಕಂಡ ರಾಮರಾಜ್ಯದ ಕನಸನ್ನು ನನಸು ಮಾಡಲು ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಯನ್ನು ಜಾರಿಗೆ ತಂದಿದ್ದರೂ ಇಂದಿಗೂ ಗ್ರಾಮಾಂತರ ಪ್ರದೇಶಗಳಲ್ಲಿ ಮೂಲಸೌಕರ್ಯದ ಕೊರತೆ ಕಾಡುತ್ತಿದೆ.
ರಾಜ್ಯ, ಕೇಂದ್ರ ಸರ್ಕಾರಗಳಿಂದ ಹಲವಾರು ಯೋಜನೆಗಳನ್ನು ಜಾರಿಗೊಳಿಸುತ್ತಿದ್ದರೂ ಕೂಡ ಅಧಿಕಾರಿಗಳ ನಿರುತ್ಸಾಹ, ಇಚ್ಛಾಶಕ್ತಿಯ ಕೊರತೆಯಿಂದ ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತಿಲ್ಲ. ಪಂಚಾಯತ್ ರಾಜ್ ವ್ಯವಸ್ಥೆಯಡಿ ಮೂರು ಹಂತದ ಗ್ರಾಪಂ, ತಾಪಂ ಹಾಗೂ ಜಿಪಂ ಆಡಳಿತದಲ್ಲಿ ಈಗ ಗ್ರಾಮ ಪಂಚಾಯಿತಿಗೆ ಹೆಚ್ಚಿನ ಬಲ ನೀಡಿದೆ. ಗ್ರಾಮಸಭೆಗಳ ಮೂಲಕವೇ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯು ನಡೆಯಬೇಕೆಂಬ ಆದೇಶ ಜಾರಿಯಾದ ಮೇಲೆ ಸಾಕಷ್ಟು ಬದಲಾವಣೆಗೆ ಕಾರಣವಾಗಿದೆ. ಹಾಗಾಗಿಯೇ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸಂಪೂರ್ಣ ಅಧಿಕಾರವನ್ನು ನೀಡಲಾಗಿದೆ. ಆದ್ದರಿಂದ ನಿರೀಕ್ಷಿತ ಪ್ರಗತಿ ಸಾಧಿಸದೆ ಇರುವ ಗ್ರಾಪಂಗಳಿಗೆ ಬಿಸಿಮುಟ್ಟಿಸಲು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಸ್.ಯುಕೇಶ್‌ಕುಮಾರ್ ಪ್ರಾರಂಭಿಸಿರುವ ವಿನೂತನ ಪ್ರಯತ್ನ ಸಾಕಷ್ಟು ಬದಲಾವಣೆಗೆ ಎಡೆಮಾಡಿಕೊಟ್ಟಿದೆ.
ಯಾವ್ಯಾವ ವಿಚಾರಗಳಲ್ಲಿ ಪ್ರಗತಿ ಆಯ್ಕೆ: ನಾಲ್ಕು ಅಂಶಗಳ ಕಾರ್ಯಸೂಚಿಯಲ್ಲಿ ೧೦೦ ಅಂಕಗಳಿಗೆ ಆಯಾಯ ತಿಂಗಳಲ್ಲಿ ಅತಿ ಹೆಚ್ಚಿನ ಅಂಕಗಳನ್ನು ಪಡೆಯುವ ಗ್ರಾಪಂಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ. ಪಂಚಾಯತ್‌ರಾಜ್ ವಿಷಯಗಳಲ್ಲಿ ಮಹಿಳಾ ಗ್ರಾಮಸಭೆ, ಡಿಸಿಬಿ, ಸಕಾಲ, ಇ-ಸ್ವತ್ತು, ಗ್ರಾಪಂ ಸಿಬ್ಬಂದಿಗಳ ಸಂಬಳ, ಮಹಾತ್ಮಗಾಂಧೀ ಉದ್ಯೋಗ ಖಾತರಿ ಯೋಜನೆಯಡಿ ಮಾನವ ದಿನಗಳ ಸೃಜನೆ, ಇ-ಕೆವೈಸಿ, ಎನ್‌ಎಂಎಂಎಸ್, ಕಾಮಗಾರಿಗಳ ಮುಕ್ತಾಯ ವರದಿ, ಸಾಮಾಜಿಕ ಲೆಕ್ಕ ನಿರೋಧಕ ಕಂಡಿಕೆಗಳನ್ನು ಮುಕ್ತಾಯಗೊಳಿಸುವುದು, ಸ್ವಚ್ಛಭಾರತ್ ಮಿಷನ್‌ನಡಿ ಮಾಡಲ್ ಡಿಕ್ಲರೇಷನ್, ವಸತಿ ಯೋಜನೆಯಡಿ ಎಂಪಿಕ್, ಪ್ರಗತಿಯಲ್ಲಿರುವ ಮನೆಗಳ ಜಿಪಿಎಸ್ ಮಾಡುವುದು ಸೇರಿದೆ. ಈ ನಾಲ್ಕು ಕಾರ್ಯಸೂಚಿಯಲ್ಲಿ ಒಂದೊಂದು ವಿಷಯಕ್ಕೂ ಅಂಕಗಳನ್ನು ಕೊಡಲಾಗುತ್ತದೆ. ತೆರಿಗೆ ವಸೂಲಿಯಲ್ಲಿ ಪ್ರಗತಿ ಸಾಧೀಸಿ, ಇ-ಸ್ವತ್ತು ಕೊಡುವುದರಲ್ಲಿ ಹಿಂದೆ ಬಿದ್ದಿದ್ದರೆ ಅಂಕದಲ್ಲಿ ಕಡಿಮೆಯಾಗಲಿದೆ. ಅದೇ ರೀತಿ ಪ್ರಗತಿಯಲ್ಲಿ ಮನೆಗಳ ಜಿಪಿಎಸ್ ಮಾಡಿ ಸುಮ್ಮನಾಗುವ ಬದಲಿಗೆ ಅದನ್ನು ಅಪ್‌ಲೋಡ್ ಮಾಡದಿದ್ದರೆ ಅಂಕ ಬರುವುದಿಲ್ಲ. ಹಾಗಾಗಿ, ನಾಲ್ಕು ರೀತಿಯ ವಿಷಯಗಳಲ್ಲೂ ಅಂಕಗಳನ್ನು ಪಡೆದುಕೊಂಡು ಅತಿ ಹೆಚ್ಚಿನ ನಿರೀಕ್ಷೆ ಮಾಡಿದವರಿಗೆ ಅಂಕ ಕೊಟ್ಟು ಉತ್ತಮ ಪ್ರಗತಿ ಸಾಧಿಸಿದ ಗ್ರಾಪಂ ಪ್ರಶಸ್ತಿ ಕೊಡಲಾಗುತ್ತದೆ.
” ಗ್ರಾಪಂಗಳಲ್ಲಿ ಅತ್ಯುತ್ತಮವಾಗಿ ಪ್ರಗತಿ ಸಾಧನೆ ಮಾಡುವುದರಿಂದ ಸರ್ಕಾರದ ಯೋಜನೆಗಳು ವೇಗವಾಗಿ ಅನುಷ್ಠಾನವಾಗುತ್ತಿವೆ. ಇಂತಹದೊಂದು ವಿನೂತನ ಪ್ರಯತ್ನ ಮಾಡಿರುವುದ ರಿಂದ ಮೊದಲ ತಿಂಗಳು ಸಫಲವಾ ಗಿದೆ. ಈಗ ಉಳಿದ ಪಂಚಾಯಿತಿಗಳಲ್ಲೂ ಪ್ರಗತಿಯಾಗುತ್ತಿರುವುದು ಕಂಡು ಬಂದಿದೆ. ಆಯಾಯ ದಿನದಂದು ನಡೆಯುವ ಕೆಲಸಗಳನ್ನು ಜಿಪಂನಿಂದ ರೂಪಿಸಿರುವ ವೆಬ್ ಸೈಟ್‌ಗೆ ಅಪ್‌ಡೇಟ್ ಮಾಡಬೇಕಾಗುತ್ತದೆ.”
-ಎಸ್.ಯುಕೇಶ್‌ಕುಮಾರ್, ಜಿಪಂ ಸಿಇಒ
” ಜಿಲ್ಲೆಯಲ್ಲಿ ಸಿಇಒ ಅವರು ತಂದಿರುವ ಶ್ರೇಷ್ಠತೆ ಆಪ್‌ನಿಂದ ಗ್ರಾಪಂನಲ್ಲಿ ಸಾಕಷ್ಟುಬದಲಾವಣೆಗೆ ಕಾರಣವಾಗಿದೆ. ಯಾವ ಗ್ರಾಪಂಗಳಲ್ಲಿ ಏನೇನು ಕೆಲಸ ನಡೆಯುತ್ತಿದೆ ಎಂಬುದನ್ನು ಅಲ್ಲಿಯೇ ನೋಡಲು ಅವಕಾಶವಿದೆ. ನಾವು ಯಾವುದರಲ್ಲಿ ಹಿಂದೆ ಬಿದ್ದಿದ್ದೇವೆ ಎಂಬುದನ್ನು ಗಮನಿಸಿ ಮರುದಿನ ಸರಿಪಡಿಸಿಕೊಳ್ಳಲು ಅವಕಾಶವಿದೆ. ಪ್ರಗತಿ ಸಾಧಿಸಲು ಉತ್ತಮ ಮಾರ್ಗವಾಗಿದೆ.”
-ಮಾಯಪ್ಪ, ಪಿಡಿಒ, ನಾಗವಾಲ ಪಂಚಾಯಿತಿ
ಅಧಿಕಾರಿಗಳ ನಡುವೆ ಪೈಪೋಟಿ:
ಜಿಲ್ಲೆಯಲ್ಲಿ ವಿನೂತನ ಪ್ರಯತ್ನ ಜಾರಿಯಾದ ಮೇಲೆ ಈಗ ಗ್ರಾಪಂ ಹಾಗೂ ತಾಪಂಗಳಲ್ಲಿ ಪರಸ್ಪರ ಪೈಪೋಟಿಗೆ ಕಾರಣವಾಗುವ ಜತೆಗೆ ಪ್ರಗತಿ ಹೆಚ್ಚಳವಾಗಿದೆ. ಆಯಾಯ ತಿಂಗಳು ೫೦ ಗ್ರಾಪಂಗಳನ್ನು ಆಯ್ಕೆ ಮಾಡಿಕೊಂಡು, ಆ ಪೈಕಿ ಅತ್ಯುತ್ತಮವಾದ ಪಂಚಾಯಿತಿಗಳ ಪ್ರಗತಿಯನ್ನು ನೋಡಿ ಅದರಲ್ಲಿ, ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನವನ್ನು ಆಯ್ಕೆ ಮಾಡಲಾಗುತ್ತದೆ. ಅದೇ ರೀತಿ ಪ್ರತಿ ತಿಂಗಳು ಕೆಳ ಕ್ರಮಾಂಕದಲ್ಲಿರುವ ಗ್ರಾಪಂಗಳಿಗೆ ಪೈಪೋಟಿ ನೀಡುವಂತೆ ಮಾಡಲಾಗುತ್ತದೆ. ಒಂದು ಪಂಚಾಯಿತಿ ಮಾಡಿರುವ ಸಾಧನೆಯನ್ನೇ ಮುಂದಿಟ್ಟುಕೊಂಡು ತಮ್ಮ ಪಂಚಾಯಿತಿಯಲ್ಲೂ ಅದನ್ನೇ ಅನುಸರಿಸುವ ಕೆಲಸ ಮಾಡುತ್ತಿರುವುದರಿಂದ ೫೦ ಅಂಕಗಳ ಒಳಗಿದ್ದ ಗ್ರಾಪಂಗಳು ಮೈಕೊಡವಿ ಪ್ರಗತಿಯತ್ತ ಹೆಜ್ಜೆ ಇಟ್ಟಿರುವುದು ಗಮನಾರ್ಹ ಸಾಧನೆಯಾಗಿದೆ
ಬೆಂಗಳೂರು : ಕರ್ನಾಟಕದಲ್ಲಿ ಮುಂಗಾರು ಮಳೆ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಬರ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುತ್ತಿದ್ದು, ಮೊದಲ ಹಂತದಲ್ಲಿ ಘೋಷಿಸಲಾದ 101…
ಹನೂರು : ಕೆಲಸಕ್ಕೆ ಹೋಗಿ ವಾಪಸ್ ಬರುವಾಗ ಮಳೆಯ ನೀರಿನಲ್ಲಿ ಕೊಚ್ಚಿ ಹೋಗಿ ಗಾರೆ ಕಾರ್ಮಿಕರೊಬ್ಬರು ಮೃತಪಟ್ಟಿರುವ ಘಟನೆ ಹನೂರು…
ನಂಜನಗೂಡು : ಗ್ರಾಮದ ಸ್ವಚ್ಛತೆಯ ಜವಾಬ್ದಾರಿ ಹೊತ್ತವರೇ ಪಂಚಾಯಿತಿ ಆವರಣವನ್ನೆ ಮೂತ್ರಾಲಯವಾಗಿಸಿ ಅನೈರ್ಮಲ್ಯಕ್ಕೆ ಕಾರಣರಾದರೆ ಬೇರೆಯವರಿಗೆ ಸ್ವಚ್ಚತೆ ಕಾಪಾಡುವ ಬಗ್ಗೆ…
ಕಠ್ಮಂಡು: ಮಹಾ ಪ್ರವಾಹಕ್ಕೆ ನೇಪಾಳ ತತ್ತರಿಸಿದೆ. ಪ್ರವಾಹ ಹಾಗೂ ಭೂಕುಸಿತದಿಂದ ನಾಪತ್ತೆಯಾದವರ ಸಂಖ್ಯೆ 6,100ಕ್ಕೆ ಏರಿಕೆಯಾಗಿದೆ. ಇದೀಗ ಹೈಡ್ರೋ ಪವರ್…
ತಿ.ನರಸೀಪುರ ಪಟ್ಟಣದಲ್ಲಿ ನಡೆದ ಗಣೇಶೋತ್ಸವ ಪೂರ್ವಭಾವಿ ಸಭೆಯಲ್ಲಿ ಇನ್ಸ್ ಪೆಕ್ಟರ್ ಧನಂಜಯ ಅವರು ಪ್ರಚೋದನಕಾರಿಯಾಗಿ ಮಾತನಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ…
ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ದಿನಗಣನೆ ಆರಂಭವಾಗಿದ್ದು, ಈ ನಿಟ್ಟಿನಲ್ಲಿ ಜಿಲ್ಲಾ ಆಡಳಿತ ಸಕಲ ಸಿದ್ಧತೆಗಳನ್ನೂ ಮಾಡುತ್ತಿದೆ. ದಸರಾ ಆನೆಗಳು ಅರಮನೆ…