ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ
ತೋಳ ಬಂತು ತೋಳ ಕತೆಯನ್ನು ನೆನಪಿಸುವಂತಿರುವ ರಾಜ್ಯ ಸಚಿವ ಸಂಪುಟ ವಿಸ್ತರಣೆ ಪ್ರಕ್ರಿಯೆ ಕಾಂಗ್ರೆಸ್ ಪಕ್ಷವನ್ನು ತಲ್ಲಣಕ್ಕೆ ದೂಡಲಿದೆಯೇ?
ಹಾಗೆಂಬ ಪ್ರಶ್ನೆ ಕಳೆದ ಕೆಲ ದಿನಗಳಿಂದ ನಿರಂತರವಾಗಿ ಕೇಳಿ ಬರುತ್ತಲೇ ಇದೆ. ಅಂದ ಹಾಗೆ ಇವತ್ತು ಸಂಪುಟ ವಿಸ್ತರಣೆಯಾಗುತ್ತದೆ ಎಂಬ ಮಾತು ನಿಜವಾಗಬಹುದಾದರೂ, ಕಳೆದ ಅರವತ್ತು ದಿನಗಳಿಂದ ನಡೆಯುತ್ತಾ ಬಂದ ತೋಳ ಬಂತು ತೋಳ ಮಾದರಿಯ ಕತೆಯನ್ನು ಗಮನಿಸಿದರೆ ಇಂತಹ ಅನುಮಾನ ಸಹಜ ಅನ್ನಿಸುತ್ತದೆ.
ಅಂದ ಹಾಗೆ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸಂದರ್ಭದಲ್ಲಿ ಹದಿಮೂರು ಮಂದಿ ಅವರ ಸಹೋದ್ಯೋಗಿಗಳಾಗಿ ಸಂಪುಟಕ್ಕೆ ಸೇರ್ಪಡೆಯಾದರೂ ನಂತರದ ಅರವತ್ತು ದಿನಗಳ ಕಾಲ ನಡೆದಿದ್ದು ಅಕ್ಷರಶಃ ತೋಳ ಬಂತು ತೋಳ ಕತೆ. ಏಕೆಂದರೆ ರಾಜ್ಯ ಸಚಿವ ಸಂಪುಟದ ಎರಡನೇ ಕಂತಿನ ವಿಸ್ತರಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಒಂದಲ್ಲ, ಎರಡಲ್ಲ, ಮೂರು ಬಾರಿ ರಾಜ್ಯದ ನಾಯಕರನ್ನು ದಿಲ್ಲಿಗೆ ಕರೆಸಿಕೊಂಡರು.
ರಾಹುಲ್ ಗಾಂಧಿಯವರು ಕರೆದಾಗಲೆಲ್ಲ ಮುಖ್ಯಮಂತ್ರಿ ಡಿ.ಕೆ.ಶಿವ ಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ರಾದ ಬಿ.ಕೆ.ಹರಿಪ್ರಸಾದ್ ಅವರು ದಿಲ್ಲಿಗೆ ದೌಡಾಯಿಸುತ್ತಲೇ ಇದ್ದರು. ಆದರೆ, ಈ ಮೂರು ಬಾರಿಯೂ ರಾಹುಲ್ ಗಾಂಧಿಯವರು ಕರ್ನಾಟಕದ ಸಂಪುಟ ವಿಸ್ತರಣೆಯ ವಿಷಯದಲ್ಲಿ ಖಚಿತ ತೀರ್ಮಾನವೊಂದಕ್ಕೆ ಬರಲೇ ಇಲ್ಲ. ಜುಲೈ ಹದಿನಾಲ್ಕರ ಮಂಗಳವಾರ ಎರಡನೇ ಬಾರಿಗೆ ರಾಜ್ಯದ ನಾಯಕರು ದಿಲ್ಲಿಗೆ ಹೋದರಲ್ಲ ಅವತ್ತು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರ ನಿವಾಸದಲ್ಲಿ ಸಭೆ ಶುರುವಾಗಬೇಕು.ಅಷ್ಟರ ತಮಗ ಬಂದ ಸಂದೇಶವೊಂದಕ್ಕೆ ಕಿವಿಗೊಟ್ಟ ರಾಹುಲ್ ಗಾಂಧಿಯವರು ಮೇಲೆದ್ದು ಹೊರಗೆ ಹೋಗಿಯೇ ಬಿಟ್ಟರು.
ಹೀಗೆ ಅವರು ಹೋಗಿದ್ದು ನೀಟ್ ಹಗರಣದ ಹಿನ್ನೆಲೆಯಲ್ಲಿ ಕಾಕ್ರೋಚ್ ಜನತಾ ಪಕ್ಷ ನಡೆಸುತ್ತಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಎಂಬುದು ರಹಸ್ಯವೇನಲ್ಲ. ಆದರೆ ಹೀಗೆ ಹೋಗುವಾಗ ರಾಹುಲ್ ಗಾಂಧಿಯವರು ಸಭೆಯಲ್ಲಿ ಕುಳಿತಿದ್ದ ರಾಜ್ಯದ ನಾಯಕರಿಗೆ ಪುನಃ ಇಂತಿಷ್ಟು ಹೊತ್ತಿಗೆ ಸಭೆ ಸೇರೋಣ ಎಂದೂ ಹೇಳಲಿಲ್ಲ. ಪರಿಣಾಮ ರಾಜ್ಯ ಕಾಂಗ್ರೆಸ್ ನಾಯಕರು ಗೊಣಗಾಡುತ್ತಲೇ ದಿಲ್ಲಿಯಿಂದ ಕರ್ನಾಟಕಕ್ಕೆ ವಾಪಸ್ಸಾಗಬೇಕಾಯಿತು.
ಇದಾದ ನಂತರ ಮೂರನೇ ಬಾರಿ ದಿಲ್ಲಿಗೆ ಹೋದಾಗ, ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಮತ್ತು ಬಿ.ಕೆ.ಹರಿಪ್ರಸಾದ್ ಅವರ ಬಳಿ ಯಾರು ಸಚಿವ ಸಂಪುಟಕ್ಕೆ ಸೇರಬೇಕು ಎಂಬ ಸಂಬಂಧ ಪ್ರತ್ಯೇಕ ಪಟ್ಟಿಗಳನ್ನು ಸ್ವೀಕರಿಸಿದ ರಾಹುಲ್ ಗಾಂಧಿಯವರು ಆಗಸ್ಟ್ ಎರಡರ ಭಾನುವಾರ ನೂತನ ಸಚಿವರ ಪಟ್ಟಿ ಕಳುಹಿಸಿಕೊಡುತ್ತೇನೆ ಎಂದು ಹೇಳಿ ಕಳಿಸಿದರು. ಈಗ ಅವರ ಮಾತು ನಿಜವಾಗುವ ಘಳಿಗೆ ಹತ್ತಿರ ಬಂದಿದೆಯಾದರೂ ಸಚಿವ ಸಂಪುಟದ ಎರಡನೇ ಕಂತಿನ ವಿಸ್ತರಣೆಗೆ ಸಂಬಂಧಿಸಿದಂತೆ ಅವರು ತೆಗೆದುಕೊಂಡ ಕಾಲಾವಧಿ ಇದೆಯಲ್ಲ ಅದು ಹಲವು ಅನುಮಾನಗಳನ್ನು ಮೂಡಿಸುತ್ತದೆ.
ಮೊದಲನೆಯದಾಗಿ, ರಾಜ್ಯ ಸಚಿವ ಸಂಪುಟವನ್ನು ವಿಸ್ತರಿಸುವಾಗ ಎಲ್ಲ ನಾಯಕರ ಮನವಿ ಏನಿದೆ ಅದನ್ನು ಈಡೇರಿಸುವ ಸ್ಥಿತಿಯಲ್ಲಿ ರಾಹುಲ್ ಗಾಂಧಿ ಅವರಲ್ಲಿರಲಿಲ್ಲ. ಏಕೆಂದರೆ ರಾಜ್ಯ ಸಚಿವ ಸಂಪುಟದಲ್ಲಿ ತಮ್ಮ ಬೆಂಬಲಿಗರು ಹೆಚ್ಚಾಗಿರಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಹಜವಾಗಿಯೇ ಬಯಸುತ್ತಾರೆ.
ದಿಲ್ಲಿ ಮೂಲಗಳ ಪ್ರಕಾರ, ಇಪ್ಪತ್ತು ಮಂದಿಯ ಪಟ್ಟಿ ರಚಿಸಲು ಸರ್ಕಸ್ಸು ನಡೆಸುತ್ತಿದ್ದ ದಿಲ್ಲಿಯ ಕಾಂಗ್ರೆಸ್ ನಾಯಕರ ಕೈಗೆ ಡಿ.ಕೆ. ಶಿವಕುಮಾರ್ ಅವರ ಇಷ್ಟದ ಹತ್ತಕ್ಕೂ ಹೆಚ್ಚು ಮಂದಿಯ ಹೆಸರುಗಳಿದ್ದವು. ಈ ಮಧ್ಯೆ ಮೂರು ವರ್ಷ ಮುಖ್ಯಮಂತ್ರಿಯಾಗಿ ಆಳ್ವಿಕೆ ನಡೆಸಿದ ಸಿದ್ದರಾಮಯ್ಯಅವರು ಈ ವಿಷಯದಲ್ಲಿ ಸುಮ್ಮನಿರಲು ಸಾಧ್ಯವೇ? ಹೀಗಾಗಿ ಅವರು ಕೂಡಾ ಎಂಟು ಮಂದಿಯ ಹೆಸರುಗಳನ್ನು ಕೊಟ್ಟು ಇವರು ಮಂತ್ರಿಯಾಗಲೇಬೇಕು. ಏಕೆಂದರೆ ಈ ಪಟ್ಟಿಯಲ್ಲಿರುವ ಬಹುತೇಕರು ಅಹಿಂದ ವರ್ಗಗಳಿಗೆ ಸೇರಿದವರು. ಮೂರು ವರ್ಷಗಳ ಹಿಂದೆ ಕರ್ನಾಟಕದಲ್ಲಿ ಪಕ್ಷ ಅಧಿಕಾರಕ್ಕೆ ಬರಲು ಅಹಿಂದ ವರ್ಗಗಳು ನೀಡಿದ ಕೊಡುಗೆ ಬಹುದೊಡ್ಡದು. ಹೀಗಾಗಿ ಅವರ ಮನಸ್ಸನ್ನು ತೃಪ್ತಿಪಡಿಸುವಂತಹ ಹೆಜ್ಜೆಯನ್ನು ಹೈಕಮಾಂಡ್ ವರಿಷ್ಠರು ಇಡಬೇಕು ಎಂದು ಸ್ಪಷ್ಟವಾಗಿ ಹೇಳಿದ್ದರು.
ಹೀಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಟ್ಟು ಹಿಡಿದ ಮೇಲೆ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಸುಮ್ಮನಿರಲು ಸಾಧ್ಯವೇ? ಹೀಗಾಗಿ ಅವರು ಗುಲ್ಬರ್ಗ ಉತ್ತರ ಕ್ಷೇತ್ರದ ಶಾಸಕರಾದ ಖನೀಜ್ ಫಾತಿಮಾ ಸೇರಿದಂತೆ ಆರೇಳು ಮಂದಿಯ ಹೆಸರುಗಳನ್ನು ಸಚಿವ ಸಂಪುಟಕ್ಕೆ ಪ್ರಪೋಸ್ ಮಾಡಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ ಸಚಿವ ಸಂಪುಟದಲ್ಲಿ ಶೇಕಡಾ ಎಪ್ಪತ್ತೈದರಷ್ಟು ಯುವ ಮುಖಗಳಿರಬೇಕು ಎಂಬ ರಾಹುಲ್ ಗಾಂಧಿಯವರ ಮಾತಿಗೆ ವ್ಯತಿರಿಕ್ತವಾಗಿ ಸಚಿವ ಸಂಪುಟದಲ್ಲಿ ಯುವಕರಿದ್ದರೆ ಸಾಲದು,ಏಕೆಂದರೆ ಸರ್ಕಾರ ಮುನ್ನಡೆಸಿಕೊಂಡು ಹೋಗಲು ಹಿರಿಯರ ಬಲ ಇರಬೇಕು ಎಂಬುದು ಮಲ್ಲಿಕಾರ್ಜುನ ಖರ್ಗೆಯವರ ಮುಖ್ಯ ವಾದವಾಗಿತ್ತು. ಹಾಗಂತಲೇ ಅವರು ಹಿರಿಯ ನಾಯಕರಾದ ಹೆಚ್. ಸಿ.ಮಹದೇವಪ್ಪ, ಟಿ.ಬಿ.ಜಯಚಂದ್ರ, ಹೆಚ್.ಕೆ.ಪಾಟೀಲ್ ಅವರಂತವರ ಹೆಸರುಗಳನ್ನು ಪ್ರಸ್ತಾಪ ಮಾಡಿದ್ದರು.
ಇನ್ನು ಈ ನಾಯಕರು ಹೇಗೆ ಪಟ್ಟಿಗಳನ್ನು ಕೊಟ್ಟರೋ ಅದೇ ರೀತಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವಹಿಸಿಕೊಂಡಿರುವ ರಣದೀಪ್ ಸಿಂಗ್ ಸುರ್ಜೇವಾಲ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರೂ ತಮ್ಮದೇ ಪಟ್ಟಿಗಳನ್ನು ಕೊಟ್ಟರು. ದಿಲ್ಲಿಯ ಕಾಂಗ್ರೆಸ್ ಮೂಲಗಳ ಪ್ರಕಾರ, ಹೀಗೆ ರಾಹುಲ್ ಗಾಂಧಿ ಅವರ ಕೈಗೆ ಸಚಿವರಾಗಬೇಕಾದ ನಾಯಕರ ಪಟ್ಟಿ ಸಲ್ಲಿಕೆಯಾಯಿತಲ್ಲ ಅದನ್ನು ನೋಡಿ ರಾಹುಲ್ ಗಾಂಧಿಯವರೇ ಕಂಗಾಲಾದರು. ಕಾರಣ ಇಂತಿಂತಹವರನ್ನು ಮಂತ್ರಿ ಮಂಡಲಕ್ಕೆ ತೆಗೆದುಕೊಳ್ಳದೆ ಹೋದರೆ ಅವರು ಪಕ್ಷ ಮತ್ತು ಸರ್ಕಾರಕ್ಕೆ ಭಾರವಾಗಬಹುದು ಎಂದು ಎಲ್ಲ ನಾಯಕರೂ ಅವರಿಗೆ ಹೇಳಿದ್ದರು.
ಪರಿಣಾಮ ಸಚಿವ ಸಂಪುಟ ವಿಸ್ತರಣೆ ಪ್ರಕ್ರಿಯ ಸುಮಾರು ಎರಡು ತಿಂಗಳುಗಳಿಂದ ನಡೆಯುತ್ತಲೇ ಬಂತು.ಈಗ ಆ ನಿರೀಕ್ಷೆಗೆ ಅಂತ್ಯ ಹೇಳುವ ಸಮಯ ಬಂದಿದೆಯಾದರೂ ಮಂತ್ರಿ ಮಂಡಲ ರಚನೆಗೆ ಮಾಡಿದ ಕಸರತ್ತು ಮತ್ತು ಹೊರಬರಲಿರುವ ಅಂತಿಮ ಪಟ್ಟಿ ರಾಜ್ಯ ಕಾಂಗ್ರೆಸ್‌ನ ಬಹುತೇಕ ನಾಯಕರಲ್ಲಿ ಅಸಮಾಧಾನ ಸೃಷ್ಟಿಸುವುದು ಬಹುತೇಕ ನಿಶ್ಚಿತವಾಗಿದೆ. ಕಾರಣ ದಿಲ್ಲಿಯ ವರಿಷ್ಠರು ನೀಡುವ ಸಂದೇಶ ಮಂತ್ರಿ ಪದವಿ ಆಕಾಂಕ್ಷಿಗಳೆಲ್ಲರನ್ನೂ ಸಮಾಧಾನ ಪಡಿಸಲು ಸಾಧ್ಯವಿಲ್ಲ. ಅರ್ಥಾತ್, ಕಳೆದ ಎರಡು ತಿಂಗಳಷ್ಟು ಕಾಲದಿಂದ ಡಿ.ಕೆ.ಶಿವಕುಮಾರ್ ಅವರ ಸಚಿವ ಸಂಪುಟಕ್ಕೆ ಸೇರಲು ಹಾತೊರೆದು ಕುಳಿತಿದ್ದ ನಾಯಕರು, ತಮಗೆ ಅವಕಾಶ ಸಿಗದೆ ಹೋದಾಗ ಕಿರಿಕಿರಿ ಮಾಡಿಕೊಳ್ಳುತ್ತಾರೆ. ಅಷ್ಟೇ ಅಲ್ಲ, ಬಂಡಾಯಕ್ಕೆ ಅಣಿಯೂ ಆಗುತ್ತಾರೆ.
ಮೂಲಗಳ ಪ್ರಕಾರ, ಮಂತ್ರಿ ಮಂಡಲದಲ್ಲಿ ಸೇರ್ಪಡೆಯಾಗಲು ನಿರಂತರವಾಗಿ ಕಸರತ್ತು ನಡೆಸುತ್ತಾ ಬಂದ ಹಲವು ನಾಯಕರು ಈಗ ಭ್ರಮನಿರಸನಗೊಂಡಿzರೆ.ಹೀಗಾಗಿ ಇಂತಹವರ ಪೈಕಿ ಹಲವರು ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜಾ.ದಳ ಪಕ್ಷಗಳ ಮೊರೆ ಹೋಗಬಹುದು. ಸದ್ಯಕ್ಕಿರುವ ಮಾಹಿತಿಯ ಪ್ರಕಾರ ಹಲವು ಮಂದಿ ಕಾಂಗ್ರೆಸ್ ಶಾಸಕರು ಬಿಜೆಪಿ ಮತ್ತು ಜಾ.ದಳ ಮಿತ್ರಪಕ್ಷಗಳ ನಾಯಕರ ಸಂಪರ್ಕದಲ್ಲಿದ್ದಾರೆ. ಪರಿಣಾಮ ಎರಡನೇ ಕಂತಿನ ಸಚಿವ ಸಂಪುಟ ವಿಸ್ತರಣೆಯ ಬೆನ್ನ ಒಂದು ಬಂಡಾಯದ ಬಿರುಗಾಳಿಯನ್ನು ರಾಜ್ಯ ಕಾಂಗ್ರೆಸ್ ಎದುರಿಸ ಬಹುದು ಮತ್ತು ರಾಜ್ಯದ ನಾಯಕರು ಒಮ್ಮನಸ್ಸಿನಿಂದ ಇದನ್ನು ತಹ ಬಂದಿಗೆ ತರಲು ಯತ್ನಿಸದಿದ್ದರೆ ಅದರ ಬಿಸಿ ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರವನ್ನು ತಟ್ಟಬಹುದು. ಹಾಗಾಗುತ್ತದಾ ಅಂತ ನೋಡಬೇಕು.
ಆಕಾಂಕ್ಷಿಗಳು ಭ್ರಮನಿರಸನ: ಮಂತ್ರಿ ಮಂಡಲದಲ್ಲಿ ಸೇರ್ಪಡೆಯಾಗಲು ನಿರಂತರವಾಗಿ ಕಸರತ್ತು ನಡೆಸುತ್ತಾ ಬಂದ ಹಲವು ನಾಯಕರು ಈಗ ಭ್ರಮನಿರಸನಗೊಂಡಿzರೆ. ಹೀಗಾಗಿ ಇಂತಹವರ ಪೈಕಿ ಹಲವರು ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜಾ.ದಳ ಪಕ್ಷಗಳ ಮೊರೆ ಹೋಗಬಹುದು.
ಶತಮಾನದ ಹಿಂದೆ ಮೈಸೂರು ಸಂಸ್ಥಾನದ ಮಹಾರಾಣಿಯವರಾಗಿದ್ದ ಕೆಂಪನಂಜಮ್ಮಣ್ಣಿ ಅವರು ಮೈಸೂರಿನ ಹೆಣ್ಣುಮಕ್ಕಳಿಗಾಗಿ ಸ್ಥಾಪಿಸಿದ್ದ ‘ಮಹಾರಾಣಿಯವರ ಹೊಸ ಮಾದರಿ (ಎನ್‌ಟಿಎಂ) ಶಾಲೆ’…
ನವೀನ್ ಡಿಸೋಜ ಮನೆಮನೆಗಳಲ್ಲಿ ಘಮಘಮಿಸಲಿದೆ ಮದ್ದುಸೊಪ್ಪಿನ ಖಾದ್ಯ; ವಿಭಿನ್ನ ಹಬ್ಬದಾಚರಣೆಗೆ ಜಿಲ್ಲೆಯಲ್ಲಿ ಸಿದ್ಧತೆ ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಸೋಮವಾರ (ಆ.೩)ಕಕ್ಕಡ…
ಪಂ.ಪುಟ್ಟರಾಜ ಗವಾಯಿ ಕ್ರೀಡಾಂಗಣದಲ್ಲಿನ ಶೌಚಾಲಯದಲ್ಲಿ ಅಶುಚಿತ್ವ ತಾಂಡವ ಮೈಸೂರು: ವಾಯುವಿಹಾರಿಗಳು ಹಾಗೂ ಕ್ರೀಡಾಸಕ್ತರ ನೆಚ್ಚಿನ ತಾಣವಾಗಿರುವ ಪಂ.ಪುಟ್ಟರಾಜ ಗವಾಯಿ ಕ್ರೀಡಾಂಗಣದಲ್ಲಿ…
ಕೆ.ಬಿ.ರಮೇಶನಾಯಕ ಪ್ರಗತಿಯಲ್ಲಿ ಹಿಂದೆ ಬಿದ್ದಿರುವ ಗ್ರಾಪಂಗಳನ್ನು ಹುರಿದುಂಬಿಸಲು ಜಿಪಂ ಹೊಸ ಯೋಜನೆ ಪ್ರಶಸ್ತಿಗೆ ನಾಲ್ಕು ಕಾರ್ಯಸೂಚಿಯಲ್ಲಿ ಪ್ರಗತಿ ಸಾಧಿಸಿದ ಗ್ರಾಪಂಗಳ…
ಮಹೇಂದ್ರ ಹಸಗೂಲಿ ಗುಂಡ್ಲುಪೇಟೆ: ತಾಲ್ಲೂಕಿನ ಗುಂಡ್ಲುಪೇಟೆ- ಕೇರಳ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಕೇರಳ ಮೂಲದ ಅಶ್ರಫ್ ಎಂಬವರು ಮಾಡಿರುವ ಒಂದು…
ಪ್ರತಿ ಆಷಾಢ ಶುಕ್ರವಾರಗಳಂದು ಚಾಮುಂಡಿ ಬೆಟ್ಟದಲ್ಲಿ ವಿಪರೀತ ಜನಸಂದಣಿ ಉಂಟಾಗುತ್ತಿದೆ. ಇದಕ್ಕೆ ಇತ್ತೀಚಿನ ಕೆಲವು ವರ್ಷಗಳಲ್ಲಿ ಮಾಡಲ್ಪಟ್ಟ ಅವೈಜ್ಞಾನಿಕ ಮಾರ್ಪಾಡುಗಳೇ…