ಕೇವಲ ಹತ್ತು ದಿನಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಮೂರು ಬಾರಿ ಹೆಚ್ಚಳವಾಗಿದೆ. ಇದು ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು, ಕೇರಳ ಮತ್ತು ಪುದುಚೇರಿ ರಾಜ್ಯಗಳ ಚುನಾವಣೆ ಮುಗಿಯುತ್ತಿದ್ದಂತೆ ಇಂಧನಗಳ ದರ ನಾಗಾಲೋಟದಿಂದ ಮುನ್ನುಗ್ಗಿದೆ. ತೈಲ ಮಾರಾಟ ಕಂಪೆನಿಗಳು ಪೆಟ್ರೋಲ್, ಡೀಸೆಲ್ ಬೆಲೆಯನ್ನು ಏರಿಕೆ ಮಾಡಿವೆ. ಆದರೆ, ಕೇಂದ್ರ ಸರ್ಕಾರ ಈ ಬಗ್ಗೆ ಸಾರ್ವಜನಿಕರಿಗೆ ಯಾವುದೇ ಮಾಹಿತಿ ನೀಡದೆ ಮೌನವಾಗಿ ಉಳಿಯುವ ಮೂಲಕ ಇಂಧನಗಳ ದರ ಹೆಚ್ಚಳವನ್ನು ಸಮರ್ಥನೆ ಮಾಡಿಕೊಂಡಂತೆ ವರ್ತಿಸಿದೆ. ಮೇ ೯, ಮೇ ೧೫ ಮತ್ತು ಮೇ ೨೩ರಂದು ಒಟ್ಟು ಮೂರು ಹಂತಗಳಲ್ಲಿ ಉಭಯ ಇಂಧನಗಳ ದರ ೫ ರೂ. ಗಳಷ್ಟು ಏರಿಕೆಯಾಗಿದೆ.
ಮಧ್ಯಮ ವರ್ಗದ ಜನರು ದ್ವಿಚಕ್ರ ವಾಹನಗಳನ್ನು ತಮ್ಮ ಜೀವನದ ನಿತ್ಯ ಕಾಯಕಗಳಿಗೆ ಬಳಸುತ್ತಾರೆ. ರೈತರು ಕೃಷಿ ಚಟುವಟಿಕೆಗಳಿಗೆ ಟ್ರಾಕ್ಟರ್ ಸೇರಿದಂತೆ ಹಲವು ಯಂತ್ರಗಳನ್ನು ಬಳಸುತ್ತಾರೆ. ಆಟೋರಿಕ್ಷಾಗಳಿಗೆ ಕೂಡ ಇನ್ನೂ ಹಲವರು ಪೆಟ್ರೋಲ್ ಅನ್ನೆ ಉಪಯೋಗಿಸುತ್ತಾರೆ. ಇಂಧನ ಬೆಲೆ ಹೆಚ್ಚಿಸು ತ್ತಿರುವುದು ಇವರೆಲ್ಲರ ಬದುಕಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಅಲ್ಲದೆ, ವಾಹನಗಳ ಸಹವಾಸ ಇಲ್ಲದ ಬಡವರಿಗೂ ಈ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಏಕೆಂದರೆ ಜೀವನಾವಶ್ಯಕ ವಸ್ತುಗಳ ದರವೂ ಗಗನ ಮುಖಿಯಾಗಿದೆ. ಅಡುಗೆ ಎಣ್ಣೆ, ಕಾಳು ಗಳು, ದವಸ ಇತ್ಯಾದಿ ಪದಾರ್ಥಗಳ ಬೆಲೆಯೂ ಹೆಚ್ಚಾಗಿದೆ.
ಮಧ್ಯಪ್ರಾಚ್ಯ ದೇಶಗಳಲ್ಲಿ ನಡೆಯುತ್ತಿರುವ ಇರಾನ್ ಯುದ್ಧದಿಂದ ದೇಶದಲ್ಲಿ ಇಂಧನ ಬೆಲೆ ನಿಯಂತ್ರಣವಿಲ್ಲದೆ ಏರು ಮುಖವಾಗಿದೆ ಎಂಬ ಅಭಿಪ್ರಾಯಗಳೂ ಇವೆ. ಆದರೆ, ಪಂಚ ರಾಜ್ಯಗಳ ಚುನಾವಣೆ ಮುಗಿಯುವವರೆಗೂ ಈ ದರಗಳು ಸ್ಥಿರವಾಗಿದ್ದದ್ದು ಆಶ್ಚರ್ಯವಾಗಿದೆ. ದರ ಹೆಚ್ಚಳ ಹೀಗೆಯೇ ಮುಂದುವರಿದರೆ ರೈಲು, ಬಸ್‌ಗಳ ಪ್ರಯಾಣ ದರದಲ್ಲಿಯೂ ಏರಿಕೆ ಆಗಲಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಪೆಟ್ರೋಲ್, ಡೀಸೆಲ್ ದರಗಳು ನಿಯಂತ್ರಣವಾಗದಿದ್ದರೆ ಬಸ್ ಪ್ರಯಾಣದ ದರ ಹೆಚ್ಚಳ ಅನಿವಾರ್ಯ ಎನ್ನುತ್ತಿದೆ.
ಜನಸಾಮಾನ್ಯರ ವಾಹನಗಳಿಗಾಗಿ ಬಂಕ್‌ಗಳಲ್ಲಿ ಪೆಟ್ರೋಲ್, ಡೀಸೆಲ್ ಮಾರಾಟಕ್ಕೆ ಅವಕಾಶ ಇರುವುದು. ಆದರೆ, ಕೆಲವು ಕೈಗಾರಿಕೆಗಳು, ದೂರಸಂಪರ್ಕ ನೆಟ್‌ವರ್ಕ್‌ಗಳು, ಮಾಲ್‌ಗಳಂತಹ ಸಾಂಸ್ಥಿಕ ಬಳಕೆದಾರರು ಬಂಕ್‌ಗಳಿಂದ ನೇರವಾಗಿ ಡೀಸೆಲ್ ಖರೀದಿ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದು ಕೂಡ ಡೀಸೆಲ್ ಅಭಾವಕ್ಕೆ ಕಾರಣ ಎನ್ನಲಾಗಿದೆ. ಸಾಂಸ್ಥಿಕ ಬಳಕೆದಾರರು ತೈಲ ಕಂಪೆನಿಗಳಿಂದಲೇ ನೇರವಾಗಿ ಡೀಸೆಲ್ ಕೊಳ್ಳಬೇಕು. ಆದರೆ, ಅವರು ಬಂಕ್‌ಗಳಲ್ಲಿ ಡೀಸೆಲ್ ಖರೀದಿಸಿದರೆ ಸುಮಾರು ೩೦ ರೂ. ಗಳಷ್ಟು ಉಳಿತಾಯವಾಗಲಿದೆ. ತೈಲ ಕಂಪೆನಿಗಳಿಂದ ಖರೀದಿಸಿದರೆ ಪ್ರತಿ ಲೀಟರ್‌ಗೆ ೧೨೭ ರೂ. ಗಳಿಂದ ೧೨೮ ರೂ. ಗಳವರೆಗೆ ದರ ಇರುತ್ತದೆ. ಈ ವಿಚಾರದಲ್ಲಿ ಮಧ್ಯಪ್ರವೇಶಿಸಿ, ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಇಂಡಿಯನ್ ಆಯಿಲ್ ಡೀಲರ್ಸ್ ಸಂಘವು ಪ್ರಧಾನಿ ಕಾರ್ಯಾಲಯಕ್ಕೆ ಪತ್ರ ಬರೆದಿದೆ.
ತೈಲ ಕಂಪೆನಿಗಳು ಸುಮಾರು ನಾಲ್ಕು ವರ್ಷಗಳವರೆಗೂ ಇಂಧನ ದರ ಹೆಚ್ಚಳ ಮಾಡಿರಲಿಲ್ಲ. ಈಗ ಅನಿಯಂತ್ರಿತವಾಗಿ ಬೆಲೆ ಏರಿಕೆಯಾಗುತ್ತಿದೆ. ಇದರಿಂದ ಬಡವರ ಜೀವನ ಮತ್ತಷ್ಟು ದುಸ್ಥಿತಿಗೆ ತಲುಪಲಿದೆ. ಇತ್ತೀಚೆಗೆ ವಾಣಿಜ್ಯ ಅನಿಲ ಸಿಲಿಂಡರ್ ದರ ಕೂಡ ಹೆಚ್ಚಳವಾಗಿದೆ. ಸಿಎನ್‌ಜಿ ದರ ಕೂಡ ಏರಿಕೆಯಾಗಿದೆ. ಸಾರ್ವಜನಿಕರ ಜೀವನ ಪಾತಾಳದತ್ತ ಸಾಗಿದೆ.
ಜನರ ಸಂವಿಧಾನಬದ್ಧ ಮೂಲ ಹಕ್ಕುಗಳಿಗೆ ಚ್ಯುತಿ ಬಾರದಂತೆ ಆಡಳಿತ ವ್ಯವಸ್ಥೆಯನ್ನು ರೂಪಿಸುವುದು ಯಾವುದೇ ಚುನಾಯಿತ ಸರ್ಕಾರದ ಆದ್ಯತೆಯಾಗಿರುತ್ತದೆ. ಆದರೆ, ಜೀವನ ಸಾಗಣೆಗೆ ಪ್ರತಿದಿನದ ಆವಶ್ಯಕವಾದ ವಸ್ತುಗಳು ಜನರ ಕೈಗೆಟುಕುವುದು ದುಸ್ತರವಾಗಿದೆ. ಕೇಂದ್ರ ಸರ್ಕಾರ ಈ ಬಗ್ಗೆ ಗಂಭೀರ ಯೋಚನೆ ಮಾಡಬೇಕಿದೆ. ಸದ್ಯಕ್ಕೆ ಚುನಾವಣೆಗಳು ಇಲ್ಲದಿರುವುದು ಜನಪರವಾದ ಚಿಂತನೆಗಳಿಗೆ ಕಡಿವಾಣ ಹಾಕಿರಬಹುದೇ ಎಂಬ ಪ್ರಶ್ನೆ ತಲೆಯೆತ್ತಿದೆ. ಹಳ್ಳಿಗಳಲ್ಲಿ ಕೂಡ ಈಗ ಅತಿ ಹೆಚ್ಚು ಜನರು ಅಡುಗೆಗೆ ಅನಿಲವನ್ನೇ ಬಳಸುತ್ತಾರೆ. ದೇಶದಲ್ಲಿ ಅತ್ಯಗತ್ಯ ವಸ್ತುಗಳ ಬೆಲೆ ಹೀಗೆಯೇ ಮುಂದುವರಿದರೆ ಅದೆಷ್ಟೋ ಬಡಕುಟುಂಬಗಳ ಮನೆಗಳಲ್ಲಿ ಒಲೆಯೇ ಉರಿಯುವುದಿಲ್ಲ. ಉಚಿತವಾಗಿ ಪಡಿತರ ಅಕ್ಕಿ ವಿತರಣೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಪಾಲಿದ್ದರೂ, ಅನಿಲ ವಿತರಣೆಗೆ ಕೇಂದ್ರವೊಂದೇ ಹೊಣೆ ಅಲ್ಲವೇ? ಸದ್ಯಕ್ಕೆ ಪೆಟ್ರೋಲ್, ಡೀಸೆಲ್ ದರ ಸಮರ ನಿಲ್ಲದಿದ್ದರೆ, ಅಡುಗೆ ಅನಿಲವೂ ದೊರೆಯದಂತಾಗುವುದರಲ್ಲಿ ಅನುಮಾನ ಇಲ್ಲ. ಯುದ್ಧದ ಹಿನ್ನೆಲೆಯಲ್ಲಿ ದೇಶದ ಹಲವೆಡೆ ಅಡುಗೆ ಅನಿಲವೂ ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ ಎಂಬ ದೂರುಗಳು ಕೇಳಿಬಂದಿವೆ. ಇಂತಹ ಸನ್ನಿವೇಶದಲ್ಲಿ ಕೇಂದ್ರವು ಜನಸ್ನೇಹಿಯಾದ ಕ್ರಮಗಳನ್ನು ಕೈಗೊಳ್ಳಬೇಕಾದ ತುರ್ತು ಅಗತ್ಯ ಇದೆ.
ಸುಪ್ರೀಂಕೋರ್ಟ್ ಗೆ ಮನವಿ ಸಲ್ಲಿಸಲು ಸಮಿತಿ ರಚನೆ: ಈಶ್ವರ ಖಂಡ್ರೆ ಕಾರ್ಕಳ : ಪರಿಭಾವಿತ (ಡೀಮ್ಡ್) ಅರಣ್ಯ ಪ್ರದೇಶದಲ್ಲಿ ಸರ್ಕಾರಿ…
ಆರ್‌ಎಸ್‌ಎಸ್ ಕಾರ್ಯಸೂಚಿಗಳು ಜಾರಿ ಬಿ.ಶ್ರೀಪಾದ ಭಟ್ 2026ರ ಮೇ ತಿಂಗಳಲ್ಲಿ ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು…
ಆರ್ಥಿಕ ಸಂಕಷ್ಟದ ಸಮಯದಲ್ಲಿ ಜಾಗ್ರತೆಯಿಂದ ಕಾರ್ಯನಿರ್ವಹಣೆ ಅಗತ್ಯ ಇದು ಇಪ್ಪತ್ತೈದು ವರ್ಷಗಳ ಹಿಂದೆ ನಡೆದ ಘಟನೆ. ಅವತ್ತು ಮುಖ್ಯಮಂತ್ರಿಯಾಗಿದ್ದ ಎಸ್.…
ನದಿಗೆ ಇಳಿದು ಕೊಚ್ಚಿ ಹೋದ ಕುಟುಂಬ ಭಟ್ಕಳ : ಭಟ್ಕಳದಲ್ಲಿ ಚಪ್ಪೆಕಲ್ಲು ಆರಿಸಲು ಹೋಗಿದ್ದ ಒಂದೇ ಕುಟುಂಬದ 8 ಜನರು…
ಪೇಶಾವರ : ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಸೇನಾ ಸಿಬ್ಬಂದಿ ಪ್ರಯಾಣಿಸುತ್ತಿದ್ದ ರೈಲನ್ನು ಗುರಿಯಾಗಿಸಿಕೊಂಡು ನಡೆಸಿದ ಸ್ಪೋಟದಲ್ಲಿ 24 ಮಂದಿ ಸಾವು ಸೇರಿದಂತೆ…