Andolana originals

ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ : ಪೈರಸಿ ನಿಗ್ರಹಕ್ಕೆ ಟೆಲಿಗ್ರಾಮ್‌ ಆಪ್‌ಗೆ ಅವಧಿ ನೀಡಿದ ಕೇಂದ್ರ

ಮೂರು ವಾರಗಳ ಹಿಂದೆ ಈ ಅಂಕಣದಲ್ಲಿ ಪೈರಸಿ ಎನ್ನುವ ಪೆಡಂಭೂತದ ಬಗ್ಗೆ ಹೇಳಲಾಗಿತ್ತು. ನೀಟ್ ಪರೀಕ್ಷೆಯ ಅವಧಿಯ ಕೆಲವು ದಿನ ಟೆಲಿಗ್ರಾಮ್ ಆಪನ್ನು ತಾತ್ಕಾಲಿಕವಾಗಿ ಕೇಂದ್ರ ಸರ್ಕಾರ ಬ್ಯಾನ್ ಮಾಡಿತ್ತು. ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಪೈರಸಿ ಮಾಡುವ ಆಪ್ ಇದು ಎನ್ನುವ ಆರೋಪವಿದೆ. ವಿಶ್ವದ ಅತ್ಯಧಕ ಚಿತ್ರಗಳನ್ನು ನಿರ್ಮಿಸುತ್ತಿರುವ ಭಾರತದಲ್ಲಿ, ಪೈರಸಿಯಿಂದ ಚಿತ್ರೋದ್ಯಮಕ್ಕೆ ಪ್ರತಿ ವರ್ಷ ಸುಮಾರು ರೂ. ೨೦,೦೦೦ ಕೋಟಿಗೂ ಹೆಚ್ಚು ನಷ್ಟವಾಗುತ್ತಿದ್ದು, ಇದನ್ನು ತಡೆಯಲು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಚಿತ್ರೋದ್ಯಮ ಒತ್ತಾಯಿಸುತ್ತಿತ್ತು.

ಈಗಾಗಲೇ ಹೇಳಿದಂತೆ ಪೈರಸಿ ವಿರುದ್ಧ ಹೋರಾಡಲು ದಕ್ಷಿಣ ಭಾರತ ಚಲನಚಿತ್ರ ನಿರ್ಮಾಪಕರು ಒಂದಾಗಿದ್ದಾರೆ. ಹೊಸದಾಗಿ ಸ್ಥಾಪನೆಯಾಗಿರುವ ಈ ಸಂಘಟನೆ ದಕ್ಷಿಣ ಭಾರತದ ಎಲ್ಲ ಭಾಷೆಗಳ ಚಲನಚಿತ್ರ ನಿರ್ಮಾಪಕರ ಸಂಘಗಳ ಸಹಯೋಗ ಪಡೆದು, ಕೇಂದ್ರ ಸರ್ಕಾರದ ಜೊತೆ ಈ ನಿಟ್ಟಿನಲ್ಲಿ ಪತ್ರ ವ್ಯವಹಾರ ಮಾಡಿರುವುದರ ಪರಿಣಾಮ ತಕ್ಷಣ ಆಗಿದೆ. ಕಳೆದ ತಿಂಗಳು ಕೊಚ್ಚಿನ್‌ನಲ್ಲಿ ನಡೆದ ಈ ಸಂಘಟನೆಯ ಸಭೆಯಲ್ಲಿ ಈಗ ಕೇಂದ್ರ ಸಚಿವರೂ ಆಗಿರುವ ನಟ ಸುರೇಶ್ ಗೋಪಿ ಅವರು ನೇತೃತ್ವ ವಹಿಸಿದ್ದರು. ಮಾತ್ರವಲ್ಲ, ಕೂಡಲೇ ಈ ದಿಸೆಯಲ್ಲಿ ಆಗಬೇಕಾಗಿದ್ದ ತುರ್ತು ಕೆಲಸಗಳತ್ತ ಗಮನ ಹರಿಸಿದ್ದಾರೆ.

ಸಿನಿಮಾ ಮತ್ತು ಒಟಿಟಿ ಪೈರಸಿಯನ್ನು ತಡೆಯಲು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಅತ್ಯಂತ ಕಠಿಣ ಕ್ರಮಗಳನ್ನು ಕೈಗೊಂಡಿದೆ. ಕೇವಲ ಲಿಂಕ್‌ಗಳನ್ನು ನಿರ್ಬಂಽಸುವುದರ ಬದಲಾಗಿ, ಪೈರಸಿಗೆ ವೇದಿಕೆ ಮಾಡಿಕೊಡುವ ಡಿಜಿಟಲ್ ಸಂಸ್ಥೆಗಳನ್ನೇ ನೇರವಾಗಿ ಹೊಣೆಗಾರ ರನ್ನಾಗಿ ಮಾಡುವ ನಿಟ್ಟಿನಲ್ಲಿ ಸರ್ಕಾರ ಹೆಜ್ಜೆ ಇಟ್ಟಿದೆ.

ಮುಖ್ಯವಾಗಿ, ಟೆಲಿಗ್ರಾಮ್ ಆಪ್ ಭಾರತದಲ್ಲಿ ಪೈರಸಿ ಸಿನಿಮಾಗಳು ಮತ್ತು ವೆಬ್ ಸೀರೀಸ್‌ಗಳ ಅತಿ ದೊಡ್ಡ ತಾಣವಾಗಿ ಮಾರ್ಪಟ್ಟಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ, ಕಳೆದ ವಾರ ಅದಕ್ಕೆ ಕಠಿಣ ಕಾನೂನು ನೋಟಿಸ್ ಜರಿ ಮಾಡಿದೆ. ಅದರ ಪ್ರಕಾರ,ಪೈರಸಿ ತಡೆಯಲು ತನ್ನ ತಾಣದಲ್ಲಿ ಯಾವೆ ವ್ಯವಸ್ಥಿತ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬ ಬಗ್ಗೆ ೧೫ ದಿನಗಳ ಒಳಗಾಗಿ ಸಂಪೂರ್ಣ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.

ಇದುವರೆಗೆ ಯಾರಾದರೂ ದೂರು ನೀಡಿದಾಗ ಕೇವಲ ಆಯಾ ಚಾನೆಲ್ ಗಳನ್ನು ಮಾತ್ರ ರದ್ದು ಮಾಡುತ್ತಿದ್ದ ಟೆಲಿಗ್ರಾಮ್ ನೀತಿಯನ್ನು ಸರ್ಕಾರ ತರಾಟೆಗೆ ತೆಗೆದುಕೊಂಡಿದೆ. ಸರ್ಕಾರವೇ ಒಂದೊಂದಾಗಿ ಚಾನೆಲ್‌ಗಳನ್ನು ಹುಡುಕಿ ಕೊಡುವವರೆಗೆ ಕಾಯಬಾರದು, ಬದಲಿಗೆ ಸ್ವಯಂಚಾಲಿತವಾಗಿ ಪೈರಸಿ ತಡೆಯುವ ತಂತ್ರeನವನ್ನು ಅಳವಡಿಸಿಕೊಳ್ಳಬೇಕು ಎಂದು ಕಡಕ್ ಆಗಿ ಹೇಳಿದೆ. ಒಮ್ಮೆ ನಿರ್ಬಂಧಿಸಿದರೂ ಮತ್ತೆ ಬೇರೆ ಹೆಸರಿನಲ್ಲಿ ಹುಟ್ಟಿಕೊಳ್ಳುವ ಮಿರರ್ ಚಾನೆಲ್‌ಗಳು, ಗುಂಪುಗಳು ಹಾಗೂ ಆಟೋಮೇಟೆಡ್ ಬಾಟ್ ಗಳನ್ನು ಶಾಶ್ವತವಾಗಿ ಪತ್ತೆಹಚ್ಚಿ ನಿಷೇಧಿಸಲು ಕಠಿಣ ವ್ಯವಸ್ಥೆ ತರಲು ಆದೇಶಿಸಿದೆ.

ಬಾಟ್ ಎಂಬುದು ‘ರೋಬೋಟ್’ ಪದದ ಸಂಕ್ಷಿಪ್ತ ರೂಪ. ಇದು ಯಾರ ನೆರವೂ ಇಲ್ಲದೆ ತಾನಾಗಿಯೇ ಕೆಲಸ ಮಾಡುವ ಒಂದು ಕಂಪ್ಯೂಟರ್ ಪ್ರೋಗ್ರಾಂ ಅಥವಾ ಸಾ-ವೇರ್. ಪೈರಸಿ ಜಗತ್ತಿನಲ್ಲಿ ಈ ಬಾಟ್‌ಗಳನ್ನು ಲಿಂಕ್ ಗಳನ್ನು ಹಂಚಲು ಪ್ರೋಗ್ರಾಂ ಮಾಡಲಾಗಿರುತ್ತದೆ. ಅದು ಗ್ರಾಹಕ ಕೇಳಿದ ಯಾವುದೇ ಹೊಸ ಸಿನಿಮಾದ ಹೆಸರು ಹೇಳುತ್ತಲೇ ಹುಡುಕಿ ಡೌನ್ಲೋಡ್ ಕೊಂಡಿಯನ್ನು ತಂದುಕೊಡುತ್ತದೆ. ಒಂದು ಬಾಟ್‌ಗೆ ತಡೆ ನೀಡಿದರೆ, ಪೈರಸಿ ಮಾಡುವವರು ತಕ್ಷಣವೇ ಮತ್ತೊಂದು ಹೆಸರಿನಲ್ಲಿ ಹೊಸ ಬಾಟ್ ಕೋಡಿಂಗ್ ಸಿದ್ಧಪಡಿಸಿ ಆನ್‌ಲೈನ್‌ಗೆ ತರುತ್ತಾರೆ.

ಅದರಂತೆಯೇ ಮಿರರ್ ಚಾನೆಲ್‌ಗಳು. ಒಂದು ವಾಹಿನಿಯ ಸಂಪೂರ್ಣ ನಕಲಿನಂತೆ ಕೆಲಸ ಮಾಡುವ ಇನ್ನೊಂದು ಚಾನೆಲ್ ಅನ್ನು ‘ಮಿರರ್ ಚಾನೆಲ’ ಎನ್ನುತ್ತಾರೆ. ಪೈರೇಟೆಡ್ ಸಿನಿಮಾಗಳನ್ನು ಹೊಂದಿರುವ ಮುಖ್ಯ ಟೆಲಿಗ್ರಾಮ್ ಚಾನೆಲ್ ಒಂದರ ಜೊತೆ ಜೊತೆಗೇ ಬ್ಯಾಕಪ್ ಆಗಿ ಇನ್ನೂ ೪-೫ ಮಿರರ್ ಚಾನೆಲ್‌ಗಳನ್ನು ಮಾಡಿಡಲಾಗಿರುತ್ತದೆ. ಮುಖ್ಯ ಚಾನೆಲ್‌ನಲ್ಲಿ ಅಪ್‌ಲೋಡ್ ಆಗುವ ಪ್ರತಿಯೊಂದು ಸಿನಿಮಾ ಕೊಂಡಿ, ಸ್ವಯಂ ಈ ಮಿರರ್ ಚಾನೆಲ್ ಗಳಿಗೂ ಕಾಪಿ ಆಗುತ್ತಿರುತ್ತದೆ. ಚಲನಚಿತ್ರ ಸಂಸ್ಥೆಗಳು ಅಥವಾ ಸರ್ಕಾರ ಪತ್ತೆಹಚ್ಚಿ ಮುಖ್ಯ ವಾಹಿನಿಯನ್ನು ತೆಗೆದು ಹಾಕಿದರೆ, ಇಲ್ಲವೇ ತಡೆದರೆ, ತಕ್ಷಣ, ಆ ಚಾನೆಲ್ ತನ್ನ ಬಳಕೆದಾರರಿಗೆ ಮಿರರ್ ಚಾನೆಲ್‌ನ ಕೊಂಡಿ ನೀಡಿ ನಮ್ಮ ಹಳೆಯ ಚಾನೆಲ್ ಡಿಲೀಟ್ ಆಗಿದೆ, ಎಲ್ಲರೂ ಈ ಹೊಸ ಚಾನೆಲ್‌ಗೆ ಜಯಿನ್ ಆಗಿ ಎಂದು ಸಂದೇಶ ಕಳುಹಿಸುತ್ತದೆ. ಇದರಿಂದಾಗಿ ಪೈರಸಿ ಜಾಲ ಹಾಗೇ ಮುಂದುವರಿಯುತ್ತದೆ.

ಸರ್ಕಾರ, ಈಗ ಟೆಲಿಗ್ರಾಮ್ ಸಂಸ್ಥೆಗೆ ನೀಡಿರುವ ಆದೇಶದ ಪ್ರಕಾರ, ಇಂತಹ ಆಟೋಮೇಟೆಡ್ ಬಾಟ್‌ಗಳು ಕೆಲಸ ಮಾಡದಂತೆ ತಂತ್ರಜ್ಞಾನ ರೂಪಿಸಬೇಕು ಮತ್ತು ಒಂದು ಚಾನೆಲನ್ನು ನಿರ್ಬಂಧಿಸಿದಾಗ ಅದರ ಮಿರರ್ ಚಾನೆಲ್‌ಗಳು ತಾವಾಗಿಯೇ ಒಟ್ಟಿಗೆ ತಡೆಯಾಗುವಂತಹ ಕಠಿಣ ವ್ಯವಸ್ಥೆಯನ್ನು ಜರಿಗೆ ತರಬೇಕು. ಒಂದು ವೇಳೆ ಟೆಲಿಗ್ರಾಮ್ ಮೇಲ್ಕಂಡ ಆದೇಶಗಳನ್ನು ಸರಿಯಾಗಿ ಪಾಲಿಸದಿದ್ದರೆ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಮಧ್ಯವರ್ತಿ ಸಂಸ್ಥೆಗಳಿಗೆ ಸಿಗುವ ಕಾನೂನು ರಕ್ಷಣೆಯನ್ನು ಹಿಂಪಡೆಯಲಾಗುವುದರ ಜೊತೆಗೆ ಕೃತಿಸ್ವಾಮ್ಯ ಉಲ್ಲಂಘನೆಯ ಅಪರಾಧಕ್ಕಾಗಿ ಸಂಸ್ಥೆಯ ಮೇಲೆಯೇ ನೇರ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಲಾಗಿದೆ.

ಟೆಲಿಗ್ರಾಂ ಮಾತ್ರವಲ್ಲ, ಅದರಂತೆಯೇ ಟೊರೆಂಟ್ ಕೂಡಾ ಸಿನಿಮಾ ಪೈರಸಿ ಮಾಡುವುದು ಬಹಿರಂಗ ಗುಟ್ಟು. ಅವು ಮಾತ್ರವಲ್ಲದೆ ಇನ್ನೂ ಹಲವು ತಾಣಗಳು ಈ ಕೆಲಸ ಮಾಡುತ್ತವೆ. ಮುಂದಿನ ಅಧಿವೇಶನದಲ್ಲಿ ಈ ಕುರಿತಂತೆ ಮತ್ತೆ ಚರ್ಚೆಯಾಗುವ ಸಾಧ್ಯತೆ ಇದೆ. ಈ ಹಿಂದೆ ಸಂಸದ ನಟ ಜಗ್ಗೇಶ್ ಅವರು ಈ ಕುರಿತು ರಾಜ್ಯಸಭೆಯಲ್ಲಿ ಗಮನ ಸೆಳೆದಿದ್ದರು. ಇದೀಗ ಕೇಂದ್ರ ಸಚಿವ, ನಟ ಸುರೇಶ್ ಗೋಪಿ, ಈ ನಿಟ್ಟಿನಲ್ಲಿ ಅದಾಗಲೇ ಕಾರ್ಯಪ್ರವೃತ್ತರಾಗಿದ್ರೆ.

ಸಿನಿಮಾಟೊಗ್ರಫಿ ಕಾಯ್ದೆಗೆ ತಿದ್ದುಪಡಿ ತಂದು, ಪೈರಸಿ ಮಾಡುವ ವರ ವಿರುದ್ಧ ಕ್ರಿಮಿನಲ್ ದಾವೆ ಹೂಡುವ, ಪೈರಸಿ ಮಾಡಿದ್ದು ಸಾಬೀತಾದರೆ, ಜೈಲು ಶಿಕ್ಷೆ ಮತ್ತು ದಂಡದ ವಿವರ ಈ ಹಿಂದಿನ ಅಂಕಣದಲ್ಲಿ ಹೇಳಲಾಗಿತ್ತು.

ಸಾಮಾನ್ಯವಾಗಿ ಸಿನಿಮಾ ಪೈರಸಿ ಕೊಂಡಿಗಳನ್ನು ನಿರ್ಬಂಧಿಸಲು ನ್ಯಾಯಾಲಯದ ಒಪ್ಪಿಗೆ ಬೇಕಿತ್ತು. ಆದರೆ ಈಗ ಕೇಂದ್ರ ಸರ್ಕಾರವು ಪ್ರತ್ಯೇಕ ವ್ಯವಸ್ಥೆಯನ್ನು ಮಾಡಿದೆ. ವಾರ್ತಾ ಮತ್ತು ಪ್ರಸಾರ ಸಚಿವಾಲಯ ಹಾಗೂ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳಾಗಿ ನೇಮಿಸಲಾಗಿದೆ.

ಸಿನಿಮಾದ ಮೂಲ ಸ್ವಾಮ್ಯ ಪಡೆದವರು ಈ ನೋಡಲ್ ಅಧಿಕಾರಿಗಳಿಗೆ ಪೈರಸಿ ಕೊಂಡಿಗಳ ಕುರಿತು ದೂರು ನೀಡಿದರೆ, ಅಧಿಕಾರಿಗಳು ತಕ್ಷಣವೇ ಪರಿಶೀಲಿಸಿ ೪೮ ಗಂಟೆಗಳ ಒಳಗಾಗಿ ಆ ಜಲತಾಣ ಅಥವಾ ಆಪ್ ಲಿಂಕ್‌ಗಳನ್ನು ನಿರ್ಬಂಧಿಸಲು ಜಲತಾಣ ಸೇವಾ ಪೂರೈಕೆದಾರರಿಗೆ ಆದೇಶ ನೀಡುವ ಅಧಿಕಾರ ಹೊಂದಿದ್ದಾರೆ. ಈ ಪ್ರಕ್ರಿಯೆಯ ಮೂಲಕ ಈಗಾಗಲೇ ಪೈರಸಿ ಇದ್ದ ಸುಮಾರು ೮೦೦ಕ್ಕೂ ಹೆಚ್ಚು ಅನಧಿಕೃತ ಜಲತಾಣಗಳನ್ನು ಭಾರತದಲ್ಲಿ ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ ಎನ್ನುತ್ತಿವೆ ಮೂಲಗಳು.

ಕೇಂದ್ರ ಸರ್ಕಾರದ ಈ ಕಠಿಣ ನಿಲುವು ಸದ್ಯ ಸಿನಿಮಾ ರಂಗದ ಕೋಟ್ಯಂತರ ರೂಪಾಯಿ ನಷ್ಟವನ್ನು ತಪ್ಪಿಸಲು ಹಾಗೂ ಡಿಜಿಟಲ್ ತಾಣಗಳು ಹೆಚ್ಚು ಜವಾಬ್ದಾರಿಯುತವಾಗಿ ನಡೆದುಕೊಳ್ಳುವಂತೆ ಮಾಡಲು ಪ್ರಮುಖ ಪಾತ್ರ ವಹಿಸಲಿದೆ ಎನ್ನುವುದು ಚಿತ್ರೋದ್ಯಮಿಗಳ ಅಭಿಪ್ರಾಯ. ಬೇರೆ ಬೇರೆ ಭಾಷಾ ಚಿತ್ರೋದ್ಯಮಗಳ ಸಂಘಟನೆಗಳು ಇದೀಗ ಪೈರಸಿ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆಯ ಮಂತ್ರಿಗಳನ್ನು ಒತ್ತಾಯಿಸಿವೆ.

ಈ ಮೊದಲೇ ಹೇಳಿದಂತೆ, ಪೈರಸಿ ವಿರುದ್ಧ ರಾಜ್ಯ ಸರ್ಕಾರವೂ ಕ್ರಮ ತೆಗೆದುಕೊಳ್ಳಲು ಅನುಕೂಲ ಆಗುವಂತೆ, ಅದನ್ನು ಗೂಂಡಾ ಕಾಯ್ದೆಯ ಅಡಿಯಲ್ಲಿ ಸೇರಿಸಿತ್ತು. ಅಂದು, ಇಂದು ಘಟನೆ ಹೊರತುಪಡಿಸಿದರೆ, ಇದರ ವಿರುದ್ಧ ಅಂತಹ ಕ್ರಮವೇನೂ ನಡೆದಂತಿಲ್ಲ. ಈ ನಿಟ್ಟಿನಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ, ಹೆಚ್ಚು ಮುತುವರ್ಜಿ ವಹಿಸುವಂತೆ ಕೋರಿದೆ. ಆ ಬಗ್ಗೆ ಪೊಲೀಸ್ ಇಲಾಖೆ ಏನು ಕ್ರಮ ಕೈಗೊಂಡಿದೆ ಎನ್ನುವ ಮಾಹಿತಿ ಇನ್ನೂ ಬಂದಿಲ್ಲ. ನೆರೆಯ ರಾಜ್ಯದಲ್ಲಿ ಪೈರಸಿ ನಿಗ್ರಹ ಪಡೆಯೊಂದನ್ನು ಪೊಲೀಸ್ ಮತ್ತು ಉದ್ಯಮದ ಸಹಭಾಗಿತ್ವದಲ್ಲಿ ನೇಮಿಸಲಾಗಿದೆ. ಇಲ್ಲೂ ಅಂತಹದೇ ಪಡೆಯನ್ನು ನೇಮಿಸಿ, ಪೈರಸಿಯನ್ನು ತಡೆಯುವ ನಿಟ್ಟಿನಲ್ಲಿ ಕೆಲಸ ಮಾಡಬಹುದು. ಪೈರಸಿ ಚಿತ್ರಗಳನ್ನು ನೋಡುವ ಪ್ರೇಕ್ಷಕ ಅದರ ಬದಲಿಗೆ ಚಿತ್ರ ಮಂದಿರದ ಚಿತ್ರ ನೋಡುತ್ತೇನೆ ಎನ್ನುವ ನಿರ್ಧಾರ ಮಾಡಿದರೆ, ಈ ಪೆಡಂಭೂತ ತಾನೇತಾನಾಗಿ ಮಾಯವಾಗಬಹುದು.

 

 

 

 

ಆಂದೋಲನ ಡೆಸ್ಕ್

Recent Posts

ಮೂರು ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ ; ಉಭಯ ಸದನಗಳು ಅನಿರ್ದಿಷ್ಟಾವಧಿಗೆ ಮುಂದೂಡಿಕೆ

ಬೆಂಗಳೂರು : ವಾಲ್ಮೀಕಿ ನಿಗಮ ಹಗರಣ ಸಂಬಂಧ ಸಚಿವ ಬಿ. ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ವಿಪಕ್ಷಗಳ ತೀವ್ರ ಪ್ರತಿಭಟನೆಗೆ ಸಾಕ್ಷಿಯಾದ…

1 hour ago

ರಾಜ್ಯಕ್ಕೆ ಮತ್ತೆ ಕಾವೇರಿ ಆಘಾತ ; ತಮಿಳುನಾಡಿಗೆ 9,000 ಕ್ಯುಸೆಕ್‌ ನೀರು ಹರಿಸಲು ಆದೇಶ

ಬೆಂಗಳೂರು : ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೊಂದು ಸವಾಲು ಎದುರಾಗಿದೆ. ತಮಿಳುನಾಡಿಗೆ ಬಿಳಿಗುಂಡ್ಲುವಿನಲ್ಲಿ ಮುಂದಿನ 15 ದಿನಗಳ…

4 hours ago

ಮಳೆ ಕೊರತೆ ನೀಗಿಸಲು ಕೃತಕ ಮಳೆ ಅಸ್ತ್ರ : ಮೋಡ ಬಿತ್ತನೆಗೆ ಸರ್ಕಾರ ಗ್ರೀನ್ ಸಿಗ್ನಲ್

ಸಚಿವ ಚಲುವರಾಯಸ್ವಾಮಿ ನೇತೃತ್ವದಲ್ಲಿ ಮಹತ್ವದ ಸಭೆ ಜಲಾಶಯಗಳಲ್ಲಿ ನೀರು ಕುಸಿತ - ನಾಳೆಯೇ ಏಜೆನ್ಸಿ ಅಂತಿಮ ಬೆಂಗಳೂರು : ರಾಜ್ಯದ…

6 hours ago

ವರ್ಷಕ್ಕೆ ಮೂರು ಸಿಲಿಂಡರ್ ಉಚಿತ – ತಮಿಳುನಾಡು ಜನರಿಗೆ ವಿಜಯ್‌ ಸರ್ಕಾರದ ಬಂಪರ್‌ ಆಫರ್‌!

ಚೆನ್ನೈ: ತಮಿಳುನಾಡಿನ ಜನರಿಗೆ ವಿಜಯ್‌ ಸರ್ಕಾರದಿಂದ ಭರ್ಜರಿ ಗುಡ್‌ನ್ಯೂಸ್‌ ನೀಡಲಾಗಿದ್ದು, ಮನೆ ಬಳಕೆಯ ಅಡುಗೆ ಅನಿಲ ಸಿಲಿಂಡರ್‌ಗಳ ವಿಚಾರದಲ್ಲಿ ಮಹತ್ವದ…

11 hours ago

ತಮಿಳುನಾಡಿಗೆ ಕಾವೇರಿ ನೀರು: ಸೋಮವಾರಕ್ಕೆ ವಿಚಾರಣೆ ಮುಂದೂಡಿಕೆ

ನವದೆಹಲಿ: ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿವಾದಕ್ಕೆ ಸಂಬಂಧಿಸಿದ ಮಹತ್ವದ ಬೆಳವಣಿಗೆ ನಡೆದಿದೆ. ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಕರ್ನಾಟಕಕ್ಕೆ…

11 hours ago

ಕಲಾಪಗಳೇ ನಡೆಯದ ಅಧಿವೇಶನ

ಸಂಸತ್ತಿನಲ್ಲಾಗಲಿ ಅಥವಾ ರಾಜ್ಯಗಳ ವಿಧಾನಸಭೆ ಹಾಗೂ ವಿಧಾನಪರಿಷತ್ತುಗಳಲ್ಲಾಗಲಿ ಕೆಲವು ವರ್ಷಗಳಿಂದ ಕಲಾಪಗಳೇ ಸುಸೂತ್ರವಾಗಿ ನಡೆಯದೆ ಗದ್ದಲ, ಧರಣಿ, ಪ್ರತಿ ಭಟನೆಗಳು…

12 hours ago