ಮೈಸೂರಿನ ನೃತ್ಯ ಪರಂಪರೆಯ ವೈಭವಕ್ಕೆ ಪ್ರೇರಕ ಶಕ್ತಿ ಹಲವು
ಕೆ.ರಾಮಮೂರ್ತಿ ರಾವ್
ಮೈಸೂರು ಪ್ರಾಚೀನ ಕಾಲದಿಂದಲೂ ಲಲಿತಕಲೆಗಳಿಗೆ ನೆಲೆಯಾಗಿದ್ದ ಸ್ಥಳ. ಈ ಪ್ರಾಂತ್ಯವನ್ನಾಳಿದ ಒಡೆಯರುಗಳೆಲ್ಲರೂ ನೃತ್ಯ, ಕಲಾಬೆಂಬಲಿಗರು ಆಗಿದ್ದು, ವಿವಿಧ ಕಲೆಗಳಲ್ಲಿ ಪಾಂಡಿತ್ಯವನ್ನು ಹೊಂದಿದ್ದರು. ಸಂಗೀತ, ನೃತ್ಯ, ಚಿತ್ರಕಲೆ ಮುಂತಾದ ಎ ಕಲಾಪ್ರಕಾರಗಳನ್ನು ಮತ್ತು ಕಲೆಗಳನ್ನು ಪೋಷಿಸಿಕೊಂಡು ಬಂದರು. ಸಂಗೀತ ಕ್ಷೇತ್ರದಂತೆಯೇ, ಅಂದಿನ ಮೈಸೂರಿನ ಒಡೆಯರುಗಳ ಪ್ರೋತ್ಸಾಹದಿಂದಾಗಿ ದೂರದ ಮೂಲೆ ಮೂಲೆಗಳಲ್ಲಿದ್ದ ನೃತ್ಯಕಲಾವಿದರುಗಳೂ ರಾಜಧಾನಿಗೆ ಬರುವಂತಾಯ್ತು.
೧೬೩೮-೧೬೫೯ರಲ್ಲಿ ಆಳ್ವಿಕೆ ಮಾಡಿದ ರಣಧೀರ ಕಂಠೀರವ ನರಸರಾಜರ ಕಾಲದಲ್ಲಿ ಮೈಸೂರು ಸಂಸ್ಥಾನದ ಆಗಿನ ರಾಜಧಾನಿ ಆಗಿದ್ದ ಶ್ರೀರಂಗಪಟ್ಟಣದಲ್ಲಿ ನೃತ್ಯಕಲಾವಿದರಿಗಾಗಿಯೇ ಒಂದು ಪ್ರತ್ಯೇಕ ಬಡಾವಣೆ ಇದ್ದು, ಅಲ್ಲಿ ಕಲಾಸಕ್ತ ಯುವತಿಯರಿಗೆ ನೃತ್ಯ ತರಬೇತಿ ಕೊಡಿಸುವ ವ್ಯವಸ್ಥೆ ಇತ್ತಂತೆ.
೧೬೭೨-೧೭೦೪ರ ಸುಮಾರಿನಲ್ಲಿ ಆಳಿದ ಚಿಕ್ಕದೇವರಾಯ ಒಡೆಯರ್ ‘ಗೀತಗೋಪಾಲ’ ಮತ್ತು ‘ಚಿಕ್ಕದೇವರಾಯ ಸಪ್ತಪದಿ’ ಎಂಬ ಎರಡು ನೃತ್ಯ ನಾಟಕಗಳನ್ನು ರಚಿಸಿದ್ದರೆಂದು ಕೆಲವು ಮೂಲಗಳಿಂದ ತಿಳಿದುಬರುತ್ತದೆ. ಮೈಸೂರಿನ ನೃತ್ಯ ಪರಂಪರೆಯು ವೈಭವಯುತವಾಗಿ ಸಾಗಲು ಇವರ ರಚನೆಗಳೂ ಪ್ರೇರಕ ಶಕ್ತಿ ಆಗಿದ್ದವು. ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಅಂದರೆ ೧೮೧೧ರಿಂದ ೧೮೬೯ರ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೃತ್ಯಕೋವಿದರು ಮೈಸೂರಿನ ಆಸ್ಥಾನದಲ್ಲಿ ಆಶ್ರಯ ಪಡೆದರು.
ಈ ಅವಧಿಯ ಮೈಸೂರಿನ ರಾಜಧಾನಿ ಶ್ರೀರಂಗಪಟ್ಟಣದಿಂದ ಮೈಸೂರಿಗೆ ಬದಲಾಯಿತು. ಆ ಸಂದರ್ಭದ ಶ್ರೀರಂಗಪಟ್ಟಣ, ಹೊಸೂರು, ಮೂಗೂರು, ಟಿ. ನರಸೀಪುರ, ಹಲಸೂರು, ಚಿಕ್ಕನಾಯಕನಹಳ್ಳಿ, ಹಾಸನ, ಹೊಳೆನರಸೀಪುರ, ನಾಗಮಂಗಲ ಮುಂತಾದ ಮೂಲೆ ಮೂಲೆಗಳಿಂದಲೂ ನಾಟ್ಯ ಸರಸ್ವತಿಯ ಉಪ ನದಿಗಳಂತೆ ನೃತ್ಯ ಕಲಾವಿದರು ಮೈಸೂರಿಗೆ ಬಂದು ಸೇರಿದರು.
ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಅರಮನೆಯ ಒಳಗೂ ನೃತ್ಯಗಾತಿಯರಿಗೆ ತಮ್ಮ ನೃತ್ಯಪ್ರದರ್ಶನಗಳಿಗೆ ಒಳ್ಳೆಯ ಅವಕಾಶಗಳಿದ್ದವು. ಅರಮನೆಯಲ್ಲಿ ಐದು ತಂಡಗಳಿಗೆ ಅವಕಾಶ ಲಭಿಸಿತ್ತು. ಅವರೆಂದರೆ ಮೂಗೂರು ತಾಯಕ್ಕ, ಬಳ್ಳಾಪುರದ ಭವಾನಮ್ಮ, ಲಕ್ಷ್ಮಣಮ್ಮ, ಚಂದ್ರವದನಮ್ಮನ ಮಗಳು ಜಯಮ್ಮ ಮತ್ತು ಲಕ್ಷ್ಮಮ್ಮ. ಲಕ್ಷ್ಮಮ್ಮನವರ ನಿಧನದಿಂದ ತೆರವಾದ ಸ್ಥಾನಕ್ಕೆ ಆಗ ಮೈಸೂರಿನಲ್ಲಿದ್ದ ಕಡೂರು ವೆಂಕಟಲಕ್ಷ್ಮಮ್ಮನವರನ್ನು ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದ ನೇಮಿಸಲಾಗಿತ್ತು. ‘ಸಾಹಿತ್ಯ ಸಂಸ್ಕೃತಿ’ ಬಿರುದಾಂಕಿತೆಯಾಗಿದ್ದ ಜಟ್ಟಿ ತಾಯಮ್ಮನವರ ಅಂದಿನ ಕಾಲದ ಶಿಷ್ಯೆ ಹೆಚ್. ವೆಂಕಟಲಕ್ಷ್ಮಮ್ಮನವರು ಆಸ್ಥಾನ ನರ್ತಕಿ ಆಗಿದ್ದುದು ಮಾತ್ರವೇ ಅಲ್ಲದೆ ಮುಂದೆ ಹಲವು ವರ್ಷಗಳ ಕಾಲ ಮೈಸೂರಿನ ಲಲಿತಕಲೆಗಳ ಕಾಲೇಜಿನಲ್ಲಿ ನೃತ್ಯ ವಿಭಾಗದ ರೀಡರ್ ಆಗಿ ಸೇವೆ ಸಲ್ಲಿಸಿ ತಮ್ಮ ದೊಡ್ಡ ಶಿಷ್ಯ ಪರಂಪರೆಯನ್ನೇ ಸೃಷ್ಟಿಸಿ ‘ಮೈಸೂರು ನೃತ್ಯ ಶೈಲಿ’ ಎಂಬ ಮೈಸೂರು ಶೈಲಿಯ ಪರಂಪರೆಗೆ ಬೀಜಂಕುರ ಮಾಡಿದವರಾಗಿದ್ದಾರೆ ಎಂದರೆ ತಪ್ಪಾಗಲಾರದು.
ಮೈಸೂರಿನ ನೃತ್ಯ ಶಾಲಾ ಪರಂಪರೆ ನಡೆದು ಬಂದ ದಾರಿಯ ಬಗ್ಗೆ ಹೇಳುವಾಗ ಮೈಸೂರು ಅರಮನೆಯಲ್ಲಿ ನಡೆಯುತ್ತಿದ್ದ ನೃತ್ಯ ಸೇವೆಯ ಬಗ್ಗೆಯೂ ಕೊಂಚ ಬೆಳಕು ಚೆಲ್ಲಲೇಬೇಕಾಗುತ್ತದೆ. ಆಗ ಸಾಮಾನ್ಯವಾಗಿ ಮಹಾರಾಜರ ವರ್ಧಂತಿ ಮತ್ತು ಗಣಪತಿ ವಿಸರ್ಜನೆ, ಈ ಎರಡೂ ಸಂದರ್ಭಗಳಲ್ಲಿ ಮಾತ್ರ ಮಹಾರಾಜರ ಮುಂದೆ ನೃತ್ಯ ಪ್ರದರ್ಶನ ನಡೆಯುತ್ತಿತ್ತಂತೆ. ಮಹಾರಾಜರ ವರ್ಧಂತಿ ದರ್ಬಾರು ಸಾಮಾನ್ಯವಾಗಿ ಬೆಳಿಗ್ಗೆ ೧೦-೧೧ ಗಂಟೆಗೆ ಅಂಬಾವಿಲಾಸದ ಮುಂದಿರುವ ಚೌಕದಲ್ಲಿ ನಡೆಯುತ್ತಿತ್ತಂತೆ. ಇದರ ವಿಶೇಷತೆ ಏನೆಂದರೆ, ಮಹಾರಾಜರ ಮುಂದೆ ಎಡ ಹಾಗೂ ಬಲ ಪಕ್ಕಗಳಲ್ಲಿ ಎರಡು ಪ್ರತ್ಯೇಕ ನೃತ್ಯ ತಂಡದವರು ನೃತ್ಯ ಪ್ರದರ್ಶನ ನೀಡಬೇಕಾಗಿರುತ್ತಿತ್ತು. ಇಲ್ಲಿನ ವೈಶಿಷ್ಟ್ಯತೆ ಏನೆಂದರೆ ಈ ಎರಡೂ ತಂಡಗಳವರದ್ದೂ ಹಾಡು, ಅಭಿನಯ ಎಲ್ಲವೂ ಒಂದೇ ತರನಾಗಿ ಇರಬೇಕಾಗಿದ್ದು, ಅದರಲ್ಲಿ ಸ್ವಲ್ಪ ಆಚೆ-ಈಚೆ ಆದರೂ ಕೂಡ ಅದು ಮಹಾರಾಜರ ಗಮನಕ್ಕೆ ಬರುತ್ತಿತ್ತಂತೆ. ಮರುದಿನ ಅರಮನೆಯ ಅಧಿಕಾರಿಗಳು ಈ ಬಗ್ಗೆ ಕಲಾವಿದರಿಂದ ಕಾರಣ, ಜವಾಬ್ದಾರಿ ಕೇಳುತ್ತಿದ್ದರಂತೆ. ಅಷ್ಟರ ಮಟ್ಟಿಗೆ ಕಲಾವಿದರ ಕಲಾಮಟ್ಟವನ್ನು ಕಾಪಾಡಲು ಒಡೆಯರು ಗಮನಹರಿಸುತ್ತಿದ್ದರಂತೆ.
ಇನ್ನು ದಸರಾ ಹಬ್ಬದ ಸಮಯದ ದರ್ಬಾರಿನಲ್ಲಿ ಯಾವತ್ತೂ ಕೂಡ ನೃತ್ಯ ಕಾರ್ಯಕ್ರಮ ಇರುತ್ತಿರಲಿಲ್ಲ. ಆಗ ಸಾಮಾನ್ಯವಾಗಿ ಆಸ್ಥಾನ ಸಂಗೀತ ವಿದ್ವಾಂಸರಿಂದ ೧೫-೨೦ ನಿಮಿಷಗಳ ಕಾಲ ಸಂಗೀತ ಮಾತ್ರ ನಡೆಯುತ್ತಿತ್ತು.
ಆದರೆ, ಈ ನವರಾತ್ರಿಯ ಒಂಬತ್ತೂ ದಿನಗಳೂ ಬೆಳಿಗ್ಗೆ ಅರಮನೆಯ ಕನ್ನಡಿ ತೊಟ್ಟಿ ಎಂಬಲ್ಲಿ ಶ್ರೀ ಚಾಮುಂಡೇಶ್ವರಿಯ ಉತ್ಸವ ಮೂರ್ತಿಗೆ ನಡೆಯುತ್ತಿದ್ದ ಶಾಸೋಕ್ತ ಪೂಜೆ ಆದ ತಕ್ಷಣ ಇಲ್ಲಿ ನೃತ್ಯ ಸೇವೆ ವಿಧಿ ಇರುತ್ತಿತ್ತು. ಅರಮನೆಯಲ್ಲಿದ್ದ ನೃತ್ಯಗಾರ್ತಿಯರ ಐದೂ ತಂಡಗಳವರು ಸರದಿಯಂತೆ ಇಲ್ಲಿ ನೃತ್ಯ ಪ್ರದರ್ಶನ ನೀಡುತ್ತಿದ್ದರು. ಇಲ್ಲಿ ಮುಖ್ಯವಾಗಿ ಸಂಸ್ಕೃತ ಶ್ಲೋಕಗಳು ಮತ್ತು ಚಾಮುಂಡೇಶ್ವರಿಯ ಕೀರ್ತನೆಗಳಿಗೆ ಮಾತ್ರ ನೃತ್ಯ ಮಾಡಲಾಗುತ್ತಿತ್ತು.
ಹೀಗೆ ಒಡೆಯರುಗಳ ಪ್ರೋತ್ಸಾಹ ಹಾಗೂ ನೃತ್ಯಕಲೆಯ ಶ್ರೇಷ್ಠತೆಯಿಂದಾಗಿ ಭರತನಾಟ್ಯ ಕ್ಷೇತ್ರದಲ್ಲಿ ಮೈಸೂರು ಶೈಲಿ ಎಂಬ ಒಂದು ಹೊಸ ಶೈಲಿಯೇ ರೂಪುಗೊಳ್ಳಲು ಸಾಧ್ಯವಾಯಿತು. ಆಸ್ಥಾನದ ಸ್ಥೂರ್ತಿ, ಪ್ರೋತ್ಸಾಹದಿಂದ ಅಂಕುರಗೊಂಡ ಈ ಶೈಲಿಯನ್ನು ಉಳಿಸಿ ಬೆಳೆಸಿ ಅದನ್ನೊಂದು ಪರಂಪರೆಯನ್ನಾಗಿ ಬೆಳೆಸಿದ ಕೀರ್ತಿ ನಾಟ್ಯ ಸರಸ್ವತಿ ಜಟ್ಟಿ ತಾಯಮ್ಮ ಹಾಗೂ ಅವರ ಶಿಷ್ಯೆ ಕೆ. ವೆಂಕಟಲಕ್ಷ್ಮಮ್ಮ ಅವರಿಗೆ ಸಲ್ಲುತ್ತದೆ.
ಮೈಸೂರು ಸಂಪ್ರದಾಯದ ಭರತನಾಟ್ಯದ ಬಗ್ಗೆ ಮಾತನಾಡುವಾಗ ನಾವು ಮುಖ್ಯವಾಗಿ ಎರಡು ಗುರು ಪರಂಪರೆಗಳನ್ನು ಗಮನಿಸಬೇಕಾಗುತ್ತದೆ. ಒಂದು ಜಟ್ಟಿ ತಾಯಮ್ಮನವರ ಪರಂಪರೆ, ಇನ್ನೊಂದು ಮೂಗೂರು ಅಮೃತಪ್ಪನವರ ಪರಂಪರೆ. ಜಟ್ಟಿ ತಾಯಮ್ಮನವರ ಪರಂಪರೆ ಅಭಿನಯಕ್ಕೆ ಹೆಸರಾಗಿದ್ದರೆ, ಮೈಸೂರು ಅರಸರ ಆಸ್ಥಾನದಲ್ಲಿನ ಇತಿಹಾಸದಲ್ಲಿ ಏಕೈಕ ನಟುವಾಂಗದವರಾಗಿದ್ದ ಮುಗೂರು ಅಮೃತಪ್ಪನವರ ನಾಟ್ಯಶೈಲಿ ವೈವಿಧ್ಯಪೂರ್ಣ ಹಾಗೂ ಖಚಿತವಾದ ಪಾದವಿನ್ಯಾಸಗಳಿಗೆ ಹೆಸರಾದದ್ದು. ಆದರೆ ಇಂದಿನ ನೃತ್ಯಕ್ಷೇತ್ರದಲ್ಲಿ ಹೆಚ್ಚು ಉಳಿದುಬಂದಿರುವುದು, ಜಟ್ಟಿ ತಾಯಮ್ಮನವರ ಪರಂಪರೆಯಿಂದಲೇ ಎಂದರೆ ತಪ್ಪಾಗಲಿಕ್ಕಿಲ್ಲ. ಹಾಗೆಯೇ, ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದಲ್ಲಿದ್ದ ತಮಿಳುನಾಡಿನ ತಂಜವೂರು ಸಹೋದರರೆಂದೇ ಖ್ಯಾತಿಗಳಿಸಿದ್ದ ಪೊನ್ನಯ್ಯ, ಚಿನ್ನಯ್ಯ, ವಡಿವೇಲು ಮತ್ತು ಶಿವಾನಂದಂ ಅವರುಗಳ ಪೈಕಿ ಚಿನ್ನಯ್ಯ ಎಂಬವವರು ಚಿರಕಾಲ ಮೈಸೂರಿನ ಆಸ್ಥಾನ ವಿದ್ವಾಂಸರಾಗಿದ್ದರೆಂದು ಹೇಳಲಾಗುತ್ತದೆ.
ಈಗ್ಗೆ ಸುಮಾರು ನೂರು ವರ್ಷಗಳ ಹಿಂದೆ, ಮೈಸೂರಿನ ಸುತ್ತಮುತ್ತಲಿನ ಪ್ರದೇಶಗಳಾದ ಎಡತೊರೆ, ರಾವಂದೂರು, ಬಸವಾಪಟ್ಟಣ ಮೊದಲಾದ ಕಡೆಗಳಲ್ಲಿದ್ದ ಪಾಳೇಗಾರರು, ಶ್ಯಾನುಭೋಗರು, ಜಮೀನ್ದಾರರು, ಸಾಹುಕಾರರು ಮುಂತಾದ ಧನಿಕರು ಕೂಡ ನಮ್ಮ ನೃತ್ಯಕಲಾ ಪರಂಪರೆ ಉಳಿದುಬರಲು ಪ್ರೋತ್ಸಾಹ ನೀಡಿರುತ್ತಾರೆ. ತಮ್ಮ ಮನೆಗಳಲ್ಲಿ ನಡೆಯುವ ಶುಭ ಸಮಾರಂಭಗಳ ಸಂದರ್ಭಗಳಲ್ಲಿ ನೃತ್ಯ ಕಾರ್ಯಕ್ರಮಗಳನ್ನೇರ್ಪಡಿಸುವ ಮೂಲಕ ಕಲೆಗೆ ಪೋಷಣೆ ನೀಡಿದ್ದಾರೆ. ಇಂತಹ ಸಂದರ್ಭಗಳಲ್ಲಿ ನೃತ್ಯ ಕಲಾವಿದರು ‘ರಾಜಶೇಖರ ವಿಲಾಸ, ಅಮರು ಶತಕ, ಕೃಷ್ಣ ಕರ್ಣಾಮೃತದ ಶ್ಲೋಕಗಳು, ತೆಲುಗು ಪದಂ, ಜವಳಿ ಮತ್ತು ಆಯ್ದ ವಚನಗಳಿಗೆ ಅಭಿನಯಿಸುವ ಮೂಲಕ ನೃತ್ಯ ಪರಂಪರೆಯನ್ನು ಬೆಳೆಸಿಕೊಂಡು ಬಂದಿರುತ್ತಾರೆ.
ಇನ್ನು ಶಾಸ್ತ್ರೀಯ ನೃತ್ಯ ಶೈಲಿಯನ್ನು ಒಂದು ಶೈಕ್ಷಣಿಕ ಹಾಗೂ ವೃತ್ತಿಪರ ಅಧ್ಯಯನದ ವಿಷಯವಾಗಿ ಪರಿಗಣಿಸಿ ಅದನ್ನು ದಿನನಿತ್ಯದಲ್ಲಿ ಬಳಸಿ ಈ ಕಲಾಪರಂಪರೆಯನ್ನು ಇಂದಿನ ಜನಾಂಗಕ್ಕೂ ಸಿಗುವಂತೆ ಮಾಡಿದ ಕೆಲವು ಪ್ರಮುಖರಾದ ಕೀರ್ತಿಶೇಷ ನೃತ್ಯ ಗುರುಗಳ ಸ್ಮರಣೆ ಈ ಸಂದರ್ಭದಲ್ಲಿ ಪ್ರಮುಖವೆನಿಸುತ್ತದೆ. ಅವರುಗಳ ಪೈಕಿ ಮೊದಲ ಹೆಸರೆಂದರೆ ನಾಟ್ಯ ಸರಸ್ವತಿ ಬಿರುದಾಂಕಿತ ಜಟ್ಟಿ ತಾಯಮ್ಮನವರದ್ದನ್ನಬಹುದು (೧೮೫೭-೧೯೪೭). ಮಧುರ ಕಲಾಮಂದಿರ’ ಎಂಬ ಹೆಸರಿನಡಿಯಲ್ಲಿ ಆಸಕ್ತರಿಗೆ ನೃತ್ಯ ಪಾಠ ಹೇಳಲು ಆರಂಭಿಸಿದ್ದ ಇವರು ಮೈಸೂರಿನ ನೃತ್ಯ ಕಲಾ ಪರಂಪರೆಯ ಉಳಿವಿಗೆ ಭದ್ರಬುನಾದಿ ಹಾಕಿಕೊಟ್ಟಿದ್ದಾರೆ.
ಈಗಿನ ಸಮಕಾಲೀನ ಈ ಸಂದರ್ಭದಲ್ಲಿ ಮೈಸೂರಿನಲ್ಲಿ ಬಹುಶಃ ಸುಮಾರು ೩೦-೪೦ ರಷ್ಟು ನೃತ್ಯ ಕಲಾ ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು ನಮ್ಮ ಭವ್ಯ ನೃತ್ಯ ಕಲಾ ಪರಂಪರೆಯನ್ನು ಉಳಿಸಿ ಬೆಳೆಸಲು ಶ್ರಮಿಸುತ್ತಿವೆ ಎನ್ನಲು ಸಂತೋಷವಾಗುತ್ತದೆ.
ಪ್ರತ್ಯಕ್ಷ ವರದಿ ಕೆ.ಪಿ.ನಾಗರಾಜ್ ಪಬ್ಲಿಕ್ ಟಿವಿ ಕೇರಳ ರಾಜ್ಯದ ವಯನಾಡಿನಲ್ಲಿ ಮತ್ತೆ ಬೆಟ್ಟ ಕುಸಿದಿದೆ. ಸುದ್ದಿ ವಾಹಿನಿಗಳು ಇದನ್ನು ‘ಭೂ…
ವಿಚಾರಣೆ ಇಲ್ಲದೆ ಆರು ವರ್ಷಗಳಿಂದ ಜೈಲುವಾಸದಲ್ಲಿರುವ ಉಮರ್ ಖಾಲಿದ್ ಪ್ರಥಮ ಸಂದರ್ಶನ ಈಶಾನ್ಯ ದೆಹಲಿ ಗಲಭೆಗಳಿಗೆ ಸಂಬಂಧಿಸಿದಂತೆ ೨೦೨೦ರಲ್ಲಿ ಜೈಲು…
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮಳೆಯ ಅಬ್ಬರ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಬ್ರಹ್ಮಗಿರಿ ತಪ್ಪಲಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವ ಪರಿಣಾಮ ಭಾಗಮಂಡಲ…
ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಐದು ದಿನಗಳಿಂದ ಭದ್ರತಾ ಪಡೆಗಳ ಕಣ್ಣಿಗೆ ಮಣ್ಣೆರಚಿ ತಪ್ಪಿಸಿಕೊಳ್ಳುತ್ತಿದ್ದ ಶಂಕಿತ ಲಷ್ಕರ್ ಎ ತೊಯ್ಬಾ ಉಗ್ರನನ್ನು ಭದ್ರತಾ…
ಹಾಸನ: ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಭಾರೀ ಗಾಳಿಯೊಂದಿಗೆ ಮಳೆಯಾಗುತ್ತಿದೆ. ಧಾರಾಕಾರ ಮಳೆಯಾಗುತ್ತಿರುವ ಪರಿಣಾಮ ಗೊರೂರಿನಲ್ಲಿರುವ ಹೇಮಾವತಿ ಜಲಾಶಯಕ್ಕೆ 16,593…