ಡಿ ಉಮಾಪತಿ
ಸ್ವಯಂ ನಿವೃತ್ತಿ ತೆಗೆದುಕೊಂಡ ಮರುದಿನವೇ ಕೇಂದ್ರೀಯ ಮುಖ್ಯಚುನಾವಣಾ ಆಯುಕ್ತರನ್ನಾಗಿ ನೇಮಕ ಮಾಡಲಾಗುತ್ತದೆ! ಹೀಗೆ ನಡೆಯುವುದುಂಟೇ?
ಅರುಣ್ ಗೋಯಲ್ ಎಂಬ ಐ.ಎ.ಎಸ್. ಅಧಿಕಾರಿಯ ನೇಮಕ ೨೪ ತಾಸುಗಳಿಗೂ ಕಡಿಮೆ ಅವಧಿಯಲ್ಲಿ, ಅತಿ ತರಾತುರಿಯಲ್ಲಿ ನೇಮಕ ಮಾಡಲಾಗಿದೆ. ಈ ಕುರಿತ ಕಡತ ಮಿಂಚಿನ ವೇಗದಲ್ಲಿ ಚಲಿಸಿದೆ. ಆಯುಕ್ತರೊಬ್ಬರ ಸ್ಥಾನ ತೆರವಾದದ್ದು ಆರು ತಿಂಗಳ ಹಿಂದೆ ಕಳೆದ ಮೇ ೧೫ರಂದು. ಆಗಿನಿಂದ ಈ ಹುದ್ದೆ ಖಾಲಿ ಬಿದ್ದಿತ್ತು. ಈಗ ಹಠಾತ್ತನೆ ನವೆಂರ್ಬ ೧೮ರಂದು ಒಂದೇ ದಿನದಲ್ಲಿ ತರಾತುರಿಯಲ್ಲಿ ತುಂಬಲಾಗುತ್ತದೆ…ಈ ಸೂಪರ್ ಫಾಸ್ಟ್ ಪ್ರಕ್ರಿಯೆಯ ಅರ್ಥವೇನು…ಹುದ್ದೆ ಖಾಲಿ ಬಿದ್ದಿದೆಯೆಂಬ ಅಧಿಸೂಚನೆಯ ಪ್ರಕಟಣೆ, ಅಭ್ಯರ್ಥಿಯಿಂದ ಅರ್ಜಿ ಸ್ವೀಕಾರ ಹಾಗೂ ಅದರ ಅಂಗೀಕಾರ ಮತ್ತು ನೇಮಕಾತಿ ಒಂದೇ ದಿನ ಆಗಿ ಹೋಗುತ್ತದೆ. ಕಡತ ೨೪ ತಾಸು ಕೂಡ ಪಯಣಿಸಿಲ್ಲ…ಇದ್ಯಾವ ಸೀಮೆಯ ಮೌಲ್ಯಮಾಪನ ಮಾಡಲಾಗಿದೆ ಎಂದು ನ್ಯಾಯಮೂರ್ತಿ ಅಜಯ್ ರಸ್ತೋಗಿ ಹುಬ್ಬೇರಿಸಿದ್ದಾರೆ.
ಕೇಂದ್ರೀಯ ಚುನಾವಣಾ ಆಯುಕ್ತರ ನೇಮಕಾತಿ ವೈಖರಿಯ ಕುರಿತು ಕಳೆದ ಕೆಲ ದಿನಗಳಿಂದ ಸುಪ್ರೀಮ್ ಕೋರ್ಟ್ ವ್ಯಕ್ತಪಡಿಸುತ್ತಿರುವ ಕಳವಳ ಗಮನಾರ್ಹ. ಐವರು ಸದಸ್ಯರ ಈ ನ್ಯಾಯಪೀಠ ನೇಮಕಾತಿಯ ಜೊತೆಗೆ ಆಯೋಗದ ಬೆನ್ನುಮೂಳೆಯ ಕುರಿತು ಕೆಲ ಮೂಲಭೂತ ಪ್ರಶ್ನೆಗಳನ್ನು ಎತ್ತಿದೆ. ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯವರು ಸಿಇಸಿ ನೇಮಕಾತಿ ಸಮಿತಿಯಲ್ಲಿ ಇರಬೇಕು. ಈ ಸೇರ್ಪಡೆಯಿಂದ ರಾಜಕೀಯವಾಗಿ ತಟಸ್ಥ ನಿಲುವಿನ ಮತ್ತು ರಾಜಕೀಯ ಒತ್ತಡಗಳಿಗೆ ಸೊಪ್ಪು ಹಾಕದ ಸಿಇಸಿ ಆಯ್ಕೆ ಸಾಧ್ಯ ಎಂಬ ನ್ಯಾಯಪೀಠದ ಆಶಯದಲ್ಲಿ ಹುರುಳಿದೆ. ಆದರೆ ಸಿಬಿಐ ನಿರ್ದೇಶಕ ಹುದ್ದೆಗೆ ಅಭ್ಯರ್ಥಿ ಆಯ್ಕೆ ಸಮಿತಿಯಲ್ಲಿ ಮುಖ್ಯ ನ್ಯಾಯಮೂರ್ತಿಯವರು ಬಹಳ ಕಾಲದಿಂದ ಇದ್ದಾರೆ. ಆಳುವವರ ತಾಳಕ್ಕೆ ಕುಣಿಯುವ ಸಿಬಿಐ ಗುಲಾಮಗಿರಿ ಕೊನೆಯಾಗಿದೆಯೇ?
ಕೇಂದ್ರೀಯ ಚುನಾವಣಾ ಆಯೋಗ ಆಳುವವರ ಜೀತಕ್ಕೆ ಬೀಳುತ್ತ ಬಂದಿರುವುದು ಲಾಗಾಯ್ತಿನ ವಿದ್ಯಮಾನ. ಸರ್ಕಾರಗಳ ಮುಲಾಜಿಗೆ ಸಿಗದೆ ಅಕ್ರಮಗಳಿಗೆ ಸಿಂಹಸ್ವಪ್ನರಾಗಿ ಕೆಲಸ ಮಾಡಿದ ಮುಖ್ಯ ಚುನಾವಣಾ ಆಯುಕ್ತರನ್ನು ಹುಡುಕಿದರೆ ಅಲ್ಲಲ್ಲಿ ಒಬ್ಬ ಟಿ.ಎನ್.ಶೇಷನ್ ಮತ್ತೊಬ್ಬ ಜೆ.ಎಂ.ಲಿಂಗ್ಡೋ ಕಂಡಾರು. ಸದ್ದು ಮಾಡದೆ ತಟಸ್ಥರಾಗಿ ಕೆಲಸ ಮಾಡಿದವರೂ ಉಂಟು. ಆದರೆ ಆಳುವವರ ಮರ್ಜಿಯನ್ನು ಅನುಸರಿಸಿದವರೇ ಹೆಚ್ಚು. ಅತ್ಯುತ್ತಮವಾಗಿ ಕೆಲಸ ಮಾಡಿದ ಸಿಇಸಿಗಳ ಪೈಕಿ ಒಬ್ಬರೆನಿಸಿದ ಮನೋಹರಸಿಂಗ್ ಗಿಲ್ ಅವರು ನಿವೃತ್ತಿಯ ನಂತರ ರಾಜ್ಯಸಭೆಯ ಸದಸ್ಯತ್ವವನ್ನು ಒಪ್ಪಿಕೊಂಡು ತಮಗೆ ತಾವೇ ಕಪ್ಪು ಚುಕ್ಕೆ ಇಟ್ಟುಕೊಂಡರು.
ಆಯೋಗವು ಆಳುವವರ ಮರ್ಜಿಯನ್ನು ಅನುಸರಿಸುವ ಮತ್ತು ಸರ್ಕಾರಗಳು ತಮಗೆ ಬೇಕಾದವರನ್ನು ಆಯುಕ್ತರನ್ನಾಗಿ ಆರಿಸಿಕೊಳ್ಳುವ ಪ್ರವೃತ್ತಿಯ ಕುರಿತು ಕಾಲ ಕಾಲಕ್ಕೆ ಆತಂಕಗಳು ಪ್ರಕಟವಾಗಿವೆ. ವಿಶೇಷವಾಗಿ ೨೦೧೪ರಿಂದ ಚುನಾವಣಾ ಆಯೋಗ ಆಳುವವರ ಪಂಜರದ ಗಿಳಿಯಂತೆ ವರ್ತಿಸಿದೆ. ಒತ್ತಡಗಳಡಿ ಕುಸಿದಿದೆ. ಹೀಗೆ ಮಣಿಯಬಲ್ಲವರನ್ನೇ ನೇಮಕ ಮಾಡಿಕೊಳ್ಳುತ್ತ ಬರಲಾಗಿದೆ ಕೂಡ.
ವರ್ಷದ ಹಿಂದೆ ಸಿಇಸಿ ಮತ್ತು ಆಯೋಗದ ಇತರೆ ಇಬ್ಬರು ಆಯುಕ್ತರು ಪ್ರಧಾನಮಂತ್ರಿ ಕಾರ್ಯಾಲಯ ಕರೆದಿದ್ದ ಆನ್‌ಲೈನ್ ಸಂವಾದಕ್ಕೆ ಹಾಜರಾಗಿದ್ದರು. ಕೋವಿಡ್ ಮಹಾಸಾಂಕ್ರಾಮಿಕದ ಅಬ್ಬರ ತುತ್ತ ತುದಿಯಲ್ಲಿದ್ದಾಗ ಕೇಂದ್ರೀಯ ಚುನಾವಣಾ ಆಯೋಗ ಪಕ್ಷಪಾತದಿಂದ ವರ್ತಿಸಿತು.
ಪ್ರಧಾನಿಯವರ ಚುನಾವಣಾ ಪ್ರಚಾರ ರ್ಯಾಲಿಗಳು ಮುಗಿಯುವ ತನಕ ನಿರ್ಬಂಧಗಳನ್ನು ಹೇರಲಿಲ್ಲ. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಕೆಡವುವ ಬಿಜೆಪಿಯ ಕಾರ್ಯಾಚರಣೆ ತಾರ್ಕಿಕ ಅಂತ್ಯ ಕಾಣುವ ತನಕವೂ ಕಾಯಿತು. ಮಾದರಿ ಚುನಾವಣೆ ಸಂಹಿತೆಯ ಉಲ್ಲಂಘನೆಗೆ ಪ್ರತಿಪಕ್ಷಗಳನ್ನು ಬೆನ್ನು ಬಿದ್ದು ಬೇಟೆಯಾಡಿದರೆ, ಆಳುವ ಪಕ್ಷ ಕುರಿತು ಜಾಣ ಕುರುಡಿನ ಧೋರಣೆ ತಳೆಯಿತು. ತೀರಾ ಇತ್ತೀಚಿನ ಉದಾಹರಣೆಗಳನ್ನು ಗಮನಿಸಿದರೂ, ತನ್ನ ಕ್ರಿಯೆ ಮತ್ತು ನಿಷ್ಕ್ರಿಯೆಗಳೆರಡೂ ಆಳುವ ಪಕ್ಷದ ಪರವಾಗಿತ್ತು ಎಂಬ ಸಂದೇಹಕ್ಕೆ ದಾರಿ ಮಾಡಿಕೊಡುವಂತೆ ಆಯೋಗ ನಡೆದುಕೊಂಡಿದೆ.
ದೇಶದ ರಕ್ಷಣಾ ಪಡೆಗಳ ಕುರಿತು ಪ್ರಸ್ತಾಪ ಮಾಡಿದ್ದ ಮೋದಿ ಮತ್ತು ಅಮಿತ್ ಶಾ ಭಾಷಣಗಳಲ್ಲಿ ನೀತಿ ಸಂಹಿತೆಯ ಉಲ್ಲಂಘನೆಯತ್ತ ಆಯೋಗ ಕುರುಡುಗಣ್ಣು ಹರಿಸಿತು. ಇಬ್ಬರೂ ನಾಯಕರು ಏಪ್ರಿಲ್ ಮತ್ತು ಮೇ ತಿಂಗಳಿಡೀ ತಮ್ಮ ಭಾಷಣಗಳಲ್ಲಿ ಪುಲ್ವಾಮ, ಬಾಲಾಕೋಟ್, ಕುರಿತು ಧಾರಾಳ ಪ್ರಸ್ತಾಪ ಮುಂದುವರೆಸಿದರು. ಈ ಸಂಬಂಧದ ಬಿಜೆಪಿ ಭಿತ್ತಿಪತ್ರಗಳೂ ಆಕ್ಷೇಪಾರ್ಹ ಅಲ್ಲವೆಂದು ಸಾರಿಬಿಟ್ಟಿತು.
ಬಾಹ್ಯಾಕಾಶದಲ್ಲಿ ತನ್ನ ಕೃತಕ ಉಪಗ್ರಹವೊಂದನ್ನು ಹೊಡೆದು ಕೆಡವಿರುವ ಭಾರತ ತನ್ನ ರಕ್ಷಣಾ ಸಾಮರ್ಥ್ಯಗಳಿಗೆ ಗರಿ ಮೂಡಿಸಿಕೊಂಡಿದೆ ಎಂಬುದಾಗಿ ಮೋದಿಯವರು ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದ್ದೂ ತಪ್ಪಲ್ಲವೆಂದು ತೀರ್ಪು ನೀಡಿತು. ಅಮಿತ್ ಶಾ ಭಾಷಣದ ‘ಮೋದಿಯವರ ವಾಯುಸೇನೆ’ ಪ್ರಸ್ತಾಪವೂ ಆಯೋಗಕ್ಕೆ ತಪ್ಪೆನಿಸಲಿಲ್ಲ. ಆದರೆ ಇಂತಹುವೇ ಪ್ರಸ್ತಾಪಗಳಿಗಾಗಿ ಬಿಜೆಪಿಯ ಇತರೆ ನಾಯಕರಾದ ಆದಿತ್ಯನಾಥ ಮತ್ತು ಮುರ್ಖ್ತಾ ಅಬ್ಬಾಸ್ ನಖ್ವಿ ಅವರಿಗೆ ‘ಶಿಕ್ಷೆ’ ತಪ್ಪಲಿಲ್ಲ. ಮೂರು ದಿನಗಳ ‘ಮೌನ ಶಿಕ್ಷೆ’ಯ ಅವಧಿಯಲ್ಲಿ ಆದಿತ್ಯನಾಥ ಆಯೋಧ್ಯೆಯ ದೇವಾಲಯಕ್ಕೆ ತೆರಳಿ ಹನುಮಾನ್ ಭಜನೆಯಲ್ಲಿ ತೊಡಗಿದ ವಿಪರ್ಯಾಸ ಕುರಿತು ಆಯೋಗ ಮೌನ ತಳೆಯಿತು.
ಬಾಲಾಕೋಟ್ ದಾಳಿಯ ಕುರಿತು ಶೋಕ ಆಚರಿಸಿದ್ದು ಪಾಕಿಸ್ತಾನ ಮತ್ತು ರಾಹುಲ್ ಗಾಂಧೀ ಅವರ ಕಾಂಗ್ರೆಸ್ ಪಕ್ಷ ಮಾತ್ರ ಎಂಬ ಶಾ ಅವರ ಭಾಷಣ ಕುರಿತ ದೂರನ್ನೂ ಆಯೋಗ ತಳ್ಳಿ ಹಾಕಿತ್ತು. ಯಾವ ತಪ್ಪೂ ಇಲ್ಲವೆಂದು ಮಾತ್ರ ಹೇಳಿದ ಆಯೋಗ, ಯಾಕೆ ತಪ್ಪಲ್ಲ ಎಂಬ ವಿವರಣೆಗಳನ್ನು ನೀಡಲಿಲ್ಲ.
ಅಲ್ಪಸಂಖ್ಯಾತರು (ಮುಸಲ್ಮಾನರು) ಬಹುಸಂಖ್ಯೆಯಲ್ಲಿರುವ ಕಾರಣ ರಾಹುಲ್ ಗಾಂಧೀ ಕೇರಳದ ವಯನಾಡಿನಿಂದಿ ಸ್ಪರ್ಧಿಸಿದ್ದಾರೆಂಬುದಾಗಿ ಟೀಕಿಸಿದ ಮೋದಿ ಭಾಷಣಗಳ ವಿರುದ್ಧದ ದೂರುಗಳ ತೀರ್ಮಾನ ಹೇಳಲು ಆಯೋಗಕ್ಕೆ ವಾರದೊಪ್ಪತ್ತು ಸಾಕಿತ್ತು. ಆದರೆ ತಿಂಗಳು ಪೂರ್ತಿ ಹಿಡಿಯಿತು! ಪ್ರಧಾನಿಯವರಿಂದ ನೀತಿ ಸಂಹಿತೆಯ ಉಲ್ಲಂಘನೆ ಆಗಿಲ್ಲ ಎಂದು ಸಾರಿತು. ವಿಳಂಬವನ್ನು ಸುಪ್ರೀ ಕೋರ್ಟ್ ನಲ್ಲಿ ಪ್ರಶ್ನಿಸಿ ಗಡುವು ವಿಧಿಸಬೇಕಾಯಿತು.
ಮೋದಿ ಪ್ರಚಾರಕ್ಕೆಂದೇ ಮೀಸಲಾದ ನಮೋ ಟೀವಿಯನ್ನು ನಿರ್ಬಂಧಿಸಿ ತಾನು ಹೊರಡಿಸಿದ ಆದೇಶಗಳನ್ನು ಆಯೋಗ ಬಿಗಿಯಾಗಿ ಜಾರಿಗೊಳಿಸಲಿಲ್ಲ. ಮೇ ೧೯ರ ಕಡೆಯ ಹಂತದ ಮತದಾನದ ಮುನ್ನಾ ದಿನ ಮೋದಿಯವರು ಕೇದಾರನಾಥನ ಸನ್ನಿಧಾನಕ್ಕೆ ತೆರಳಿ ಗುಹೆಯಲ್ಲಿ ಧ್ಯಾನ ಮತ್ತು ತಪಸ್ಸಿನಲ್ಲಿ ಕಳೆದರು. ಹಿಂದುತ್ವದ ಜೊತೆಗೆ ನಿರ್ದಿಷ್ಟವಾಗಿ ಬಂಗಾಳ ಮತ್ತು ಹಿಮಾಚಲದ ಮತದಾರರಿಗೆ ಸಂದೇಶ ನೀಡುವಂತೆ ಹಿಮಾಚಲದ ಟೋಪಿಯನ್ನೂ, ರವೀಂದ್ರನಾಥ ಠಾಕೂರರು ಧರಿಸುತ್ತಿದ್ದ ನಿಲುವಂಗಿಯನ್ನೂ ಧರಿಸಿದರು. ಈ ಧಾರ್ಮಿಕ ಭೇಟಿಯನ್ನು ನಿರ್ಬಂಧಿಸುವ ಬದಲು ಅನುಮತಿ ನೀಡಿತ್ತು ಆಯೋಗ.
ಚುನಾವಣಾ ಕರ್ತವ್ಯದ ಭಾಗವಾಗಿ ಮೋದಿಯವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರಿನ ಶೋಧನೆ ನಡೆಸಿದ್ದಕ್ಕಾಗಿ ಐ.ಎ.ಎಸ್. ಅಧಿಕಾರಿ ಮಹಮ್ಮದ್ ಮೊಹ್ಸಿನ್ ಅವರಿಗೆ ಅಮಾನತಿನ ಶಿಕ್ಷೆ ವಿಧಿಸಿತು.
ಬಿಜೆಪಿ ಜಾರಿ ಮಾಡಿದ್ದ ಕಾಯಿದೆಯೊಂದು ಆದಿವಾಸಿಗಳ ಮೇಲೆ ಆಕ್ರಮಣ ನಡೆಸಿ ಅವರ ಜಮೀನು ಕಿತ್ತುಕೊಳ್ಳಲು ಅನುವು ಮಾಡಿಕೊಟ್ಟಿತು ಎಂಬ ರಾಹುಲ್ ಗಾಂಧೀ ಭಾಷಣದಲ್ಲಿನ ಪ್ರಸ್ತಾಪವನ್ನು ತಡವಿಲ್ಲದೆ ಗಮನಕ್ಕೆ ತೆಗೆದುಕೊಂಡ ಆಯೋಗ ನೋಟೀಸನ್ನೂ ನೀಡಿತು. ತನಗೆ ಮುಂಚಿತವಾಗಿಯೇ ಮಾಹಿತಿ ನೀಡದೆ ಪ್ರತಿಪಕ್ಷಗಳ ಮುಖಂಡರು ಮತ್ತು ನಾಯಕರ ಮೇಲೆ ತೆರಿಗೆ ದಾಳಿಗಳನ್ನು ನಡೆಸಬಾರದು ಎಂಬ ತನ್ನ ಸೂಚನೆಗೆ ಆದಾಯ ತೆರಿಗೆ ಇಲಾಖೆ ಸೊಪ್ಪು ಹಾಕದೆ ಹೋದಾಗಲೂ ಆಯೋಗ ತೆಪ್ಪಗಿತ್ತು.
ಹಾಲಿ ಪ್ರಕರಣದಲ್ಲಿ ಅರುಣ್ ಗೋಯಲ್ ಎಂಬ ಐ.ಎ.ಎಸ್. ಅಧಿಕಾರಿಯ ನೇಮಕ ೨೪ ತಾಸುಗಳಿಗೂ ಕಡಿಮೆ ಅವಧಿಯಲ್ಲಿ, ಅತಿ ತರಾತುರಿಯಲ್ಲಿ ನೇಮಕ ಮಾಡಲಾಗಿದೆ. ಈ ಕುರಿತ ಕಡತ ಮಿಂಚಿನ ವೇಗದಲ್ಲಿ ಚಲಿಸಿದೆ. ಆಯುಕ್ತರೊಬ್ಬರ ಸ್ಥಾನ ತೆರವಾದದ್ದು ಆರು ತಿಂಗಳ ಹಿಂದೆ ಕಳೆದ ಮೇ ೧೫ರಂದು. ಆಗಿನಿಂದ ಈ ಹುದ್ದೆ ಖಾಲಿ ಬಿದ್ದಿತ್ತು. ಈಗ ಹಠಾತ್ತನೆ ನವೆಂರ್ಬ ೧೮ರಂದು ಒಂದೇ ದಿನದಲ್ಲಿ ತರಾತುರಿಯಲ್ಲಿ ತುಂಬಲಾಗುತ್ತದೆ…ಈ ಸೂಪರ್ ಫಾಸ್ಟ್ ಪ್ರಕ್ರಿಯೆಯ ಅರ್ಥವೇನು…ಹುದ್ದೆ ಖಾಲಿ ಬಿದ್ದಿದೆಯೆಂಬ ಅಧಿಸೂಚನೆಯ ಪ್ರಕಟಣೆ, ಅಭ್ಯರ್ಥಿಯಿಂದ ಅರ್ಜಿ ಸ್ವೀಕಾರ ಹಾಗೂ ಅದರ ಅಂಗೀಕಾರ ಮತ್ತು ನೇಮಕಾತಿ ಒಂದೇ ದಿನ ಆಗಿ ಹೋಗುತ್ತದೆ. ಕಡತ ೨೪ ತಾಸು ಕೂಡ ಪಯಣಿಸಿಲ್ಲ…ಇದ್ಯಾವ ಸೀಮೆಯ ಮೌಲ್ಯಮಾಪನ ಮಾಡಲಾಗಿದೆ ಎಂದು ನ್ಯಾಯಮೂರ್ತಿ ಅಜಯ್ ರಸ್ತೋಗಿ ಹುಬ್ಬೇರಿಸಿದ್ದಾರೆ.
ಅರುಣ್ ಗೋಯಲ್ ಕೇಂದ್ರ ಸರ್ಕಾರದ ಕಾರ್ಯದರ್ಶಿ. ಶುಕ್ರವಾರ ಸ್ವಯಂನಿವೃತ್ತಿ ಪಡೆಯತ್ತಾರೆ. ಶನಿವಾರ ಚುನಾವಣಾ ಆಯೋಗದ ಆಯುಕ್ತರಾಗಿ ನೇಮಕಗೊಳ್ಳುತ್ತಾರೆ. ಸೋಮವಾರ ಅಧಿಕಾರ ಸ್ವೀಕರಿಸುತ್ತಾರೆ. ಚುನಾವಣಾ ಆಯುಕ್ತರ ನೇಮಕಾತಿ ಪ್ರಕ್ರಿಯೆಯನ್ನು ರಾಜಕೀಯ ಪ್ರಭಾವದಿಂದ ತಪ್ಪಿಸಿ, ಅದಕ್ಕಾಗಿ ಪಾರದರ್ಶಕವೂ ನ್ಯಾಯಯುತವೂ ಅದ ತಟಸ್ಥ ಮತ್ತು ಸ್ವತಂತ್ರ ವ್ಯವಸ್ಥೆ’ಯೊಂದನ್ನು ರೂಪಿಸುವ ಅಗತ್ಯ ಕುರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆಯನ್ನು ಸುಪ್ರೀಮ್ ಕೋರ್ಟ್ ವಿಚಾರಣೆ ಆರಂಭಿಸುತ್ತದೆ.
ಮರುದಿನ ಬೆಳಗಿನಿಂದ ಸಂಜೆಯ ತನಕ ಜರುಗಿರುವ ವಿದ್ಯಮಾನವಿದು. ಇಂದು ಸ್ವಂಯನಿವೃತ್ತಿ ತೆಗೆದುಕೊಳ್ಳುತ್ತಾರೆ, ಮರುದಿನ ಅವರನ್ನು ಆಯುಕ್ತರನ್ನಾಗಿ ನೇಮಕ ಮಾಡಲಾಗುತ್ತದೆ. ಹೀಗೆ ನಡೆಯುವುದುಂಟೇ ಎಂಬುದು ನ್ಯಾಯಮೂರ್ತಿ ಅನಿರುದ್ಧ ದೇಸಾಯಿ ಅವರ ಪ್ರಶ್ನೆ. ಅದಕ್ಕೆ ಕೇಂದ್ರದ ಪರವಾಗಿ ಅಟಾರ್ನಿ ಜನರಲ್ ರ್ಆ.ವೆಂಕಟರಮಣಿ ಅವರ ಉತ್ತರ- ಕಾಕತಾಳೀಯ ಇದ್ದೀತು.
ಕೇಂದ್ರ ಕಾನೂನು ಮಂತ್ರಿ ಸಲ್ಲಿಸಿದ ನಾಲ್ಕು ಹೆಸರುಗಳ ಪಟ್ಟಿಯಿಂದ ಗೋಯಲ್ ಅವರನ್ನು ಆರಿಸಿಕೊಳ್ಳಲಾಗಿದೆ. ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ (ಡಿಒಪಿಟಿ) ಇಡೀ ಮಾಹಿತಿ ನೆಲೆಯಿಂದ ಈ ನಾಲ್ಕು ಹೆಸರುಗಳನ್ನು ಪಟ್ಟಿ ಮಾಡಿದ್ದಾದರೂ ಯಾವ ಆಧಾರದ ಮೇಲೆ… ೪೦ ಮಂದಿ ಅರ್ಹರಿದ್ದರು. ಅವರ ಪೈಕಿ ನಾಲ್ವರ ಸಂಕ್ಷಿಪ್ತ ಪಟ್ಟಿ ತಯಾರಿಸಲು ಅನುಸರಿಸಿದ ಮಾನದಂಡಗಳಾದರೂ ಯಾವುವು…. ಎಲ್ಲ ನಿಗೂಢ ಎಂಬುದು ನ್ಯಾಯಮೂರ್ತಿ ಕೆ.ಎಂ.ಜೋಸೆಫ್ ಅವರ ಪ್ರಶ್ನೆ.
ಆಯೋಗದ ಆಯುಕ್ತ ಮತ್ತು ಮುಖ್ಯ ಆಯುಕ್ತರ ಸೇವಾವಧಿ ತಲಾ ಆರು ವರ್ಷಗಳೆದು ನಿಗದಿಯಾಗಿದೆ. ಆದರೆ ಆಯುಕ್ತರಾಗಲಿ, ಮುಖ್ಯ ಆಯುಕ್ತರಾಗಲಿ ಆರು ವರ್ಷಗಳ ಅವಧಿಯನ್ನು ಪೂರೈಸದಂತೆ ನೇಮಕ ಮಾಡಲಾಗುತ್ತದೆ. ಆಯುಕ್ತರಿಗೇ ಬಡ್ತಿ ನೀಡಿ ಮುಖ್ಯ ಆಯುಕ್ತರ ಹುದ್ದೆಯನ್ನು ಭರ್ತಿ ಮಾಡಲಾಗುತ್ತದೆ. ಆದರೆ ಸಂವಿಧಾನದ ಪ್ರಕಾರ ಮುಖ್ಯ ಆಯುಕ್ತರ ಹುದ್ದೆಗೆ ನೇರವಾಗಿ ನೇಮಕಾತಿ ನಡೆಯಬೇಕಿರುತ್ತದೆ. ಸಿಇಸಿ ಆದವರು ಆರು ವರ್ಷಗಳ ಪೂರ್ಣಾವಧಿಯನ್ನು ನೇರವಾಗಿ ಸ್ವತಂತ್ರವಾಗ ಹೊಂದಿರಬೇಕೆಂದು ಸಂವಿಧಾನವೇ ವಿಧಿಸಿದೆಯೇ ವಿನಾ ಬಡ್ತಿಯ ಮೂಲಕ ಅಲ್ಲ ಎಂದಿರುವ ನ್ಯಾಯಪೀಠ ತೀರ್ಪನ್ನು ಕಾಯ್ದಿರಿಸಿದೆ.
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…
ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…
ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟ ಪಡೆದಿದೆ. ಈ ಮೂಲಕ ಈಗ…
ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್ ಶಾಕ್ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…