Andolana originals

ಸೈನ್ಯ ಯುದ್ಧ ಮಾಡುತ್ತದೆ, ತೀರ್ಮಾನ ಸರ್ಕಾರ ಮಾಡಬೇಕು…!

ಅತ್ಯಂತ ಅಪಾಯಕಾರಿ ಪರಿಸ್ಥಿತಿಯೊಂದನ್ನು ನನಗೆ ಹಸ್ತಾಂತರಿಸಲಾಗಿತ್ತು: ನರವಣೆ

‘ಜವಾಬ್ದಾರಿಯಿಂದ ಸಂಪೂರ್ಣವಾಗಿ ದೂರವೇ ಉಳಿದಿದ್ದ ಪ್ರಧಾನಿ’

‘ಇಂದಿರಾ ಗಾಂದಿ, ವಾಜಪೇಯಿ ಪ್ರಧಾನಿಗಳಾಗಿದ್ದಾಗ ಸ್ಪಷ್ಟ ನಿರ್ದೇಶನ ಸಿಗುತ್ತಿತ್ತು’

‘ಅತ್ಯಂತ ಕಠಿಣವಾದ, ಸವಾಲಿನ ಮತ್ತು ಅಪಾಯಕಾರಿ ಪರಿಸ್ಥಿತಿಯೊಂದನ್ನು ನನಗೆ ಹಸ್ತಾಂತರಿಸಲಾಗಿತ್ತು, ಪರಿಸ್ಥಿತಿಯನ್ನು ನಿರ್ವಹಿಸುವುದಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಂಪೂರ್ಣ ಸ್ವಾತಂತ್ರ್ಯ ಹಾಗೂ ಅಧಿಕಾರಗಳೆರಡೂ ನನ್ನ ಬಳಿಯೇ ಇದ್ದುದರಿಂದ ಈ ಬಿಕ್ಕಟ್ಟಿನ ಫಲಿತಾಂಶದ ಜವಾಬ್ದಾರಿ ಮತ್ತು ಉತ್ತರದಾಯಿತ್ವವೂ ನನ್ನ ಹೆಗಲ ಮೇಲೆರಿದ್ದವು. ನಾನು ಏಕಾಂಗಿ ಭಾವ ಅನುಭವಿಸುತ್ತಿದ್ದೆ’ ಎಂದು ಜನರಲ್ ನರವಣೆ ಪುಸ್ತಕದಲ್ಲಿ ಸ್ಮರಿಸುತ್ತಾರೆ.

‘ಒಂದು ಗೋಡೆಯ ಮೇಲೆ ಜಮ್ಮು-ಕಾಶ್ಮೀರ ಮತ್ತು ಲಡಾಖ್‌ನ ನಕ್ಷೆ, ಇನ್ನೊಂದು ಗೋಡೆಯ ಮೇಲಿದ್ದ ಈಸ್ಟರ್ಸ್ ಕಮಾಂಡ್‌ನ ವಿವರಗಳನ್ನು ದಿಟ್ಟಿಸುತ್ತ ಕುಳಿತಿದ್ದೆ. ನಕ್ಷೆಯ ಮೇಲೆ ಗುರುತು ಹಾಕದಿದ್ದರೂ ಪ್ರತಿಯೊಂದೂ ಸ್ಥಳ, ಆಯಾ ಸ್ಥಳದಲ್ಲಿ ನಿಯೋಜಿತವಾಗಿರುವ ಸೇನಾ ಘಟಕಗಳ ಸಂರಚನೆ ಮತ್ತು ಆ ಎಲ್ಲ ಪ್ರದೇಶಗಳಲ್ಲಿನ ಸಂಭವನೀಯ ಅಪಾಯವನ್ನು ಊಹಿಸುವುದು, ಕಣ್ಮುಂದೆ ತಂದುಕೊಳ್ಳುವುದು ನನಗೆ ಅಸಾಧ್ಯವಾಗಿರಲಿಲ್ಲ, ನನ್ನ ಮನಸ್ಸಿನಲ್ಲಿ ನೂರೆಂಟು ಆಲೋಚನೆಗಳು ಸುಳಿದಾಡುತ್ತಿದ್ದವು’ ಎಂದೂ ವಿವರಿಸುತ್ತಾರೆ.

‘ಇಡೀ ದೇಶ ಕೋವಿಡ್ ಮಹಾಮಾರಿಯ ಹೊಡೆತಕ್ಕೆ ಸಿಕ್ಕು ತತ್ತರಿಸಿತ್ತು. ಆರ್ಥಿಕ ಪರಿಸ್ಥಿತಿಯೂ ಬಿಗಡಾಯಿಸುತ್ತಿತ್ತು, ಜಾಗತಿಕ ಸರಬರಾಜಿನ ಕೊಂಡಿಗಳು ಕಳಚುತ್ತಿದ್ದವು. ದೀರ್ಘ ಕಾಲದ ಸಂಘರ್ಷ ನಡೆದರೆ ಇಂಥ ಕಠಿಣ ಪರಿಸ್ಥಿತಿಯಲ್ಲಿ ನಾವು ಯುದ್ಧಕ್ಕೆ ಅಗತ್ಯವಿರುವ ಬಿಡಿ ಭಾಗಗಳ ನಿರಂತರ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಸಾಧ್ಯವೇ? ಜಾಗತಿಕವಾಗಿ ನಮ್ಮ ಪರವಾಗಿ ಗಟ್ಟಿಯಾಗಿ ನಿಲ್ಲುವಂತಹವರು ಯಾರು? ಚೀನಾ ಮತ್ತು ಪಾಕಿಸ್ತಾನಗಳು ಜಂಟಿಯಾಗಿ ಬೆದರಿಕೆಯೊಡ್ಡಿದರೆ ಪರಿಸ್ಥಿತಿ ನಿಭಾಯಿಸುವುದು ಹೇಗೆ? ಅವರಿಗೇನೋ ಅಗತ್ಯವಿರುವ ಮೀಸಲು ವ್ಯವಸ್ಥೆಗಳಿವೆ.’ ಹೀಗೆ ನೂರೆಂಟು ವಿಚಾರಗಳ ಗುಣಾಕಾರ, ಭಾಗಾಕಾರ ತಲೆಯಲ್ಲಿ ಗಿರಕಿ ಹೊಡೆಯುತ್ತಿದ್ದವು. ‘ನಾವು ಎಂಥದೇ ಪರಿಸ್ಥಿತಿಯನ್ನು ಎದುರಿಸಲು ಸನ್ನದ್ಧರಾಗಿದ್ದೆವು’ ಎಂದು ಜನರಲ್ ನರವಣೆ ಪುಸ್ತಕದಲ್ಲಿ ಬರೆದಿದ್ದಾರೆ.

‘ನಾನು ನಿಜವಾಗಿಯೂ ಯುದ್ಧ ಪ್ರಾರಂಭಿಸಲು ಬಯಸಿದ್ದೆನಾ?’, ‘ಯುದ್ಧಕ್ಕೆ ಹೋಗುವುದು ಎಂದಿಗೂ ಸೈನ್ಯ ಪಡೆಗಳ ನಿರ್ಧಾರ ಆಗಿರುವುದಿಲ್ಲ. ಪ್ರಜಾತಾಂತ್ರಿಕವಾಗಿ ಆಯ್ಕೆಯಾಗಿ ಆಡಳಿತ ನಡೆಸುವ ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಳ್ಳಬೇಕು. ೧೯೯೯ರ ಕಾರ್ಗಿಲ್ ಕದನದ ಸಮಯದಲ್ಲಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಅಧ್ಯಕ್ಷತೆಯ ಭದ್ರತೆಯ ಕುರಿತಾದ ಕ್ಯಾಬಿನೆಟ್ ಸಮಿತಿ (ಸಿಸಿಎಸ್) ಸಭೆಯಲ್ಲಿ ಸೈನ್ಯ ಪಡೆಗಳ ಪ್ರತಿಯೊಂದು ನಡೆಯನ್ನೂ ಸುದೀರ್ಘವಾಗಿ ಚರ್ಚಿಸಿ ಅನುಮೋದಿಸಲಾಗುತ್ತಿತ್ತು. ದೇಶದ ಸುರಕ್ಷತೆ, ಭದ್ರತೆಯ ಕುರಿತು ಅಂತಿಮ ತೀರ್ಮಾನ ತೆಗೆದುಕೊಳ್ಳುವ ಅತ್ಯುನ್ನತ ಮಟ್ಟದ ಸಮಿತಿಯದು. ‘ಆ ಅವಧಿಯಲ್ಲಿ ಪ್ರಕಟವಾಗಿರುವ ಹಲವು ಆತ್ಮಚರಿತ್ರೆಗಳು ಸಿಸಿಎಸ್ ಹೇಗೆ ತನ್ನ ನಿರ್ಧಾರಗಳನ್ನು ಕೈಗೊಳ್ಳುತ್ತಿತ್ತು ಮತ್ತು ಸೇನಾ ಕಮಾಂಡರ್‌ಗಳಿಗೆ ಸ್ಪಷ್ಟ ನಿರ್ದೇಶನಗಳನ್ನು ಕೊಡುತ್ತಿತ್ತು ಎಂಬುದನ್ನು ವಿವರಿಸಿವೆ’, ‘ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ಬಾಂಗ್ಲಾದೇಶದ ಹುಟ್ಟಿಗೆ ಕಾರಣವಾದ ೧೯೭೧ರ ಯುದ್ಧದ ಸಮಯದಲ್ಲೂ ಹೀಗೇ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತಿತ್ತು’ ಎಂದೂ ಅವರು ಪುಸ್ತಕದಲ್ಲಿ ಹೇಳಿದ್ದಾರೆ.

ಆದರೆ, ‘೨೦೨೦ರ ಆಗಸ್ಟ್ ತಿಂಗಳಲ್ಲಿ ಚೀನಾದ ಗಡಿಯಲ್ಲಿ ಉಂಟಾಗಿದ್ದ ಸಂಘರ್ಷದ ಸ್ಥಿತಿಯನ್ನು ನಿಭಾಯಿಸುವ ಅಂತಿಮ ಜವಾಬ್ದಾರಿಯನ್ನು ಸೇನೆಗೆ ಹಸ್ತಾಂತರಿಸುವ ಮೂಲಕ ಪ್ರಧಾನ ಮಂತ್ರಿಗಳು ಚೀನಾದೊಂದಿಗೆ ಮಿಲಿಟರಿ ಸಂಘರ್ಷವನ್ನು ಪ್ರಾರಂಭಿಸುವ ಅಥವಾ ತಪ್ಪಿಸುವ ಜವಾಬ್ದಾರಿಯಿಂದ ಸಂಪೂರ್ಣವಾಗಿ ದೂರವೇ ಉಳಿದಿದ್ದರು.’ ‘ಭಾರತದ ರಾಜಕೀಯ ಮತ್ತು ಆರ್ಥಿಕ ಪರಿಸ್ಥಿತಿಯ ಸಮೀಕ್ಷೆ ನಡೆಸುವುದು, ಅಮೆರಿಕದ ಸಂಭಾವ್ಯ ರಾಜತಾಂತ್ರಿಕ ಬೆಂಬಲವನ್ನು ನಿರ್ಣಯಿಸುವುದು, ಕೋವಿಡ್ ಮಹಾಮಾರಿಯ ಬಿಕ್ಕಟ್ಟು ಎದುರಿಸುವ ಬಗ್ಗೆ ತೀರ್ಮಾನ ಕೈಗೊಳ್ಳುವುದು ಮತ್ತು ಚೀನಾ, ಪಾಕಿಸ್ತಾನಗಳ ನಡುವಿನ ಸಮನ್ವಯದಿಂದ ಎದುರಾಗುವ ಅಪಾಯಗಳನ್ನು ಲೆಕ್ಕ ಹಾಕುವುದು ಸೇನಾ ಮುಖ್ಯಸ್ಥರ ಕೆಲಸವಾಗಿರಲಿಲ್ಲ, ಆ ಮೌಲ್ಯಮಾಪನವನ್ನು ಮಾಡುವುದು ಸರ್ಕಾರದ ಜವಾಬ್ದಾರಿಯಾಗಿರುತ್ತದೆ, ಈ ಎಲ್ಲ ಜವಾಬ್ದಾರಿಗಳನ್ನು ದೇಶದ ರಾಜಕೀಯ ನಾಯಕತ್ವವೇ ನಿರ್ವಹಿಸಬೇಕು’ ಎಂದೂ ಜನರಲ್ ನರವಣೆ ತಮ್ಮ ಪುಸ್ತಕದಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ.

” ‘ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ’ ಪುಸ್ತಕ ಬರೆದಿರುವುದು ನನಗೆ ಸಮಾಧಾನ ತಂದಿದೆ. ಈ ಪುಸ್ತಕ ಬರೆಯುವ ಮೂಲಕ ನಾನು ನನ್ನ ಕೆಲಸ ಮಾಡಿದ್ದೇನೆ. ಆ ಪುಸ್ತಕ ಇನ್ನೂ ಪ್ರಕಾಶನಗೊಳ್ಳದ ಬಗ್ಗೆ ಹೆಚ್ಚು ಪ್ರತಿಕ್ರಿಯೆ ವ್ಯಕ್ತಪಡಿಸಲು ಇಷ್ಟಪಡುವುದಿಲ್ಲ ಎಂದು ಜನರಲ್ ಎಂ.ಎಂ.ನರವಣೆ ಕೆಲ ತಿಂಗಳುಗಳ ಹಿಂದೆ ಸಂದರ್ಶನವೊಂದರಲ್ಲಿ ಹೇಳಿದ್ದರು. ಪುಸ್ತಕ ಬರೆಯುವುದಷ್ಟೇ ನನ್ನ ಕೆಲಸ. ಆ ಪುಸ್ತಕ ಪಬ್ಲಿಷ್ ಮಾಡುವುದು ಪ್ರಕಾಶನ ಸಂಸ್ಥೆಯ ಜವಾಬ್ದಾರಿ. ನನ್ನ ಪುಸ್ತಕವನ್ನು ಪಬ್ಲಿಷ್ ಮಾಡುತ್ತಿರುವ ಪೆಂಗ್ವಿನ್ ಪಬ್ಲಿಷಿಂಗ್ ಹೌಸ್ ಆ ಜವಾಬ್ದಾರಿ ನಿರ್ವಹಿಸಲಿದೆ ಎಂಬ ವಿಶ್ವಾಸವಿದೆ ಎಂದಿದ್ದ ಅವರು, ಪುಸ್ತಕವನ್ನು ಸಮೀಕ್ಷೆಗಾಗಿ ರಕ್ಷಣಾ ಸಚಿವಾಲಯಕ್ಕೆ ಪೆಂಗ್ವಿನ್ ಕಳಿಸಿಕೊಟ್ಟಿದೆ. ರಕ್ಷಣಾ ಇಲಾಖೆ ಪುಸ್ತಕದ ಸಮೀಕ್ಷೆ ನಡೆಸಿ ಪ್ರಕಟಣೆಗೆ ಅನುಮತಿ ಕೊಡುತ್ತದೆ ಎಂಬ ನಿರೀಕ್ಷೆಯಲ್ಲಿ ಪೆಂಗ್ವಿನ್ ಸಂಸ್ಥೆ ಇದೆ ಎಂದೂ ತಿಳಿಸಿದ್ದರು. ‘ರಕ್ಷಣಾ ಇಲಾಖೆ ಬಳಿ ಪುಸ್ತಕವಿದ್ದು ಈಗಾಗಲೇ ಹದಿನೈದು ತಿಂಗಳಿಗಿಂತ ಹೆಚ್ಚು ಸಮಯ ಕಳೆದಿದೆ, ಇನ್ನೂ ಸಮೀಕ್ಷೆ ಮುಗಿದಿಲ್ಲವಾ? ಇಷ್ಟು ವಿಳಂಬಕ್ಕೆ ಕಾರಣಗಳೇನಿರಬಹುದು?’ ಎಂಬ ಪ್ರಶ್ನೆಗೆ, ರಕ್ಷಣಾ ಇಲಾಖೆ ಪುಸ್ತಕದ ಸಮೀಕ್ಷೆ ನಡೆಸುವುದರಲ್ಲಿ ಏನೂ ತಪ್ಪಿಲ್ಲ. ಆದರೆ, ಸಮೀಕ್ಷೆಗೆ ಕಾಲಮಿತಿ ಇದ್ದರೆ ಚೆನ್ನಾಗಿರುತ್ತಿತ್ತು. ಒಂದು ವರ್ಷಕ್ಕಿಂತ ಹೆಚ್ಚು ಕಾಲ ವಿಳಂಬವಾಗಿರುವುದಕ್ಕೆ ನನಗೆ ಬೇಸರವಿದೆ ಎಂದೂ ಜನರಲ್ ನರವಣೆ ತಿಳಿಸಿದ್ದರು. ಇನ್ನೊಂದು ಸಂದರ್ಶನದಲ್ಲಿ ಪುಸ್ತಕ ಬಿಡುಗಡೆ ವಿಳಂಬವಾಗುತ್ತಿರುವುದಕ್ಕೆ ಹೆಚ್ಚು ಕಾವ್ಯಾತ್ಮಕವಾಗಿ ಪ್ರತಿಕ್ರಿಯಿಸಿದ್ದ ಜನರಲ್ ನರವಣೆ, ‘ಹಳೆಯ ವೈನ್‌ನಂತೆ ನನ್ನ ಪುಸ್ತಕವೂ ಪಕ್ವವಾಗುತ್ತಿದೆ ಎಂದು ನಾನು ಭಾವಿಸುತ್ತೇನೆ. ರಕ್ಷಣಾ ಇಲಾಖೆಯಲ್ಲಿ ಹೆಚ್ಚು ಸಮಯ ಇದ್ದಷ್ಟು ಅದು ಹೆಚ್ಚು ಹಳೆಯದಾಗುತ್ತದೆ ಮತ್ತು ಹಳೆಯದಾದಷ್ಟೂ ಅದರ ಮೌಲ್ಯವೂ ಹೆಚ್ಚಾಗುತ್ತದೆ’ ಎಂದು ಹೇಳಿದ್ದರು. ‘ದಿ ಕ್ಯಾರವಾನ್’ ಮ್ಯಾಗಝೀನ್‌ನಲ್ಲಿ ಪ್ರಕಟವಾದ ಪುಸ್ತಕದ ಆಯ್ದ ಭಾಗವನ್ನು ಸಂಸತ್ತಿನಲ್ಲಿ ಓದಲು ರಾಹುಲ್ ಗಾಂಧಿ ಮುಂದಾಗಿದ್ದು ಬಹಳ ದೊಡ್ಡ ವಿವಾದಕ್ಕೆ ಈಗ ಕಾರಣವಾಗಿದೆ. ‘ಪುಸ್ತಕದಲ್ಲಿ ಸತ್ಯಕ್ಕೆ ದೂರವಾದ ಸಂಗತಿಗಳು ಇರುವುದರಿಂದ ಅದರ ಬಿಡುಗಡೆಗೆ ಅನುಮತಿ ನೀಡಲಾಗಿಲ್ಲ’ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಂಸತ್ತಿನಲ್ಲಿ ಹೇಳಿದ್ದಾರೆ. ಆದರೆ, ‘ದಿ ಕ್ಯಾರವಾನ್’ನಲ್ಲಿ ಪ್ರಕಟವಾದ ವರದಿಯಲ್ಲಿರುವ ಅಂಶಗಳನ್ನು ಜನರಲ್ ನರವಣೆ ನಿರಾಕರಿಸಿಲ್ಲ.”

ಸರ್ಕಾರಕ್ಕೆ ಮುಜುಗರದ ಸ್ಥಿತಿ:  ‘ಇಂಥ ಮಹತ್ವದ ಮತ್ತು ಸವಾಲಿನ ಪರಿಸ್ಥಿತಿಯಲ್ಲಿ ಅತ್ಯಂತ ನಿಖರವಾದ ಮತ್ತು ಗೊಂದಲಕ್ಕೆ ಅವಕಾಶವಿಲ್ಲದಂತಹ ರೀತಿಯಲ್ಲಿ ಸೇನೆಗೆ ರಾಜಕೀಯ ನಾಯಕತ್ವದಿಂದ ಸೂಚನೆಗಳು ಬರಬೇಕು. ಆದರೆ, ಚೀನಾದೊಂದಿಗಿನ ಸಂಘರ್ಷದ ಸ್ಥಿತಿಯಲ್ಲಿ ಕೈಗೊಳ್ಳಬೇಕಾದ ನಿರ್ಧಾರದಿಂದ ಪ್ರಧಾನಿ ನರೇಂದ್ರ ಮೋದಿ ಅವರು ದೂರವೇ ಉಳಿದಿದ್ದು, ೨೦೧೪ರಿಂದ ಅವರು ಬೆಳೆಸಿಕೊಂಡು ಬಂದಿರುವ ಇಮೇಜ್‌ಗೆ ತದ್ವಿರುದ್ಧವಾಗಿತ್ತು. ಪಾಕಿಸ್ತಾನದ ಮೇಲೆ ನಡೆದ ಸರ್ಜಿಕಲ್ ಸ್ಟ್ರೈಕ್ ನಂತರ ನಿರ್ಮಾಣವಾದ ಚಲನಚಿತ್ರಗಳು, ವೆಬ್ ಸೀರಿಸ್‌ಗಳು ಮೋದಿ ಅವರನ್ನು ದಿಟ್ಟ ಮತ್ತು ನಿರ್ಣಾಯಕ ನಾಯಕ ಎಂದು ಬಿಂಬಿಸಿವೆ, ಭಾರತದ ಮಾಧ್ಯಮಗಳೂ ಅಂಥದೇ ಚಿತ್ರಣವನ್ನು ಕಟ್ಟಿಕೊಟ್ಟಿವೆ’ ಎಂದು ಜನರಲ್ ನರವಣೆ ಅವರ ಪುಸ್ತಕದಲ್ಲಿರುವ ಅಂಶಗಳನ್ನು ಆಧರಿಸಿ ‘ದಿ ಕ್ಯಾರವಾನ್’ ಪತ್ರಿಕೆ ಬರೆದಿದೆ. ‘ಫೆಬ್ರವರಿ ೧೯, ೨೦೧೯ರಲ್ಲಿ ಪ್ರತಿಕೂಲ  ಹವಾಮಾನದ ಹೊರತಾಗಿಯೂ ಬಾಲಾಕೋಟ್ ವೈಮಾನಿಕ ದಾಳಿಯನ್ನು ತಾವೇ ಸ್ವತಃ ಮಾನಿಟರ್ ಮಾಡಿರುವುದಾಗಿಯೂ ಮೋದಿ ಅವರು ತಿಳಿಸಿದ್ದಾರೆ. ‘ಮೋಡದ ಹೊದಿಕೆಯ ಲಾಭ ಪಡೆದು ಶತ್ರು ರಾಷ್ಟ್ರದ ರಡಾರ್‌ನಿಂದ ಹೇಗೆ ತಪ್ಪಿಸಿಕೊಳ್ಳಬಹುದು’ ಎಂಬುದನ್ನು ಭಾರತದ ವಾಯುಸೇನೆಗೆ ನಿರ್ದೇಶನ ನೀಡಿರುವುದಾಗಿಯೂ ಸ್ವತಃ ಮೋದಿ ಹೇಳಿಕೊಂಡಿದ್ದಾರೆ’, ‘ಪುಲ್ವಾಮಾ ದಾಳಿಯಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) ಯೋಧರು ಹುತಾತ್ಮರಾದ ಸಂಗತಿಯನ್ನು ಅತ್ಯಂತ ಯಶಸ್ವಿಯಾಗಿ ಚುನಾವಣೆಯಲ್ಲಿ ಪ್ರಚಾರ ಮಾಡುವ ಮೂಲಕ ದೇಶದಲ್ಲಿ ಎರಡನೇ ಅವಧಿಗೆ ಅಧಿಕಾರಕ್ಕೇರುವುದಕ್ಕೆ ಬಳಸಿಕೊಳ್ಳಲಾಯಿತು’ ಎಂದು ಬರೆದಿರುವ ‘ದಿ ಕ್ಯಾರವಾನ್’, ‘ಜನರಲ್ ನರವಣೆ ಅವರು ಈ ಪುಸ್ತಕದಲ್ಲಿ ಬರೆದಿರುವ ಅಂಶಗಳು ಕೇಂದ್ರ ಸರ್ಕಾರದ ಬಗೆಗೆ ಗಂಭೀರವಾದ ಪ್ರಶ್ನೆಗಳನ್ನು ಹುಟ್ಟು ಹಾಕುತ್ತವೆ’ ಎಂದೂ ವಿಶ್ಲೇಷಿಸಿದೆ”

ಆಂದೋಲನ ಡೆಸ್ಕ್

Recent Posts

ಮೈಸೂರು | ನಾಲ್ಕೇ ದಿನಕ್ಕೆ ಮುರಿದು ಬಿದ್ದ ದಸರಾ ದೀಪಾಲಂಕಾರ ಕಟೌಟ್

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ದೀಪಾಲಂಕಾರ ಕಾಮಗಾರಿಯಲ್ಲೇ ಯಡವಟ್ಟಾಗಿದ್ದು, ನಗರದ ಗನ್ ಹೌಸ್ ವೃತ್ತದಲ್ಲಿ ಕಟ್ಟಲಾಗಿದ್ದ ದಸರಾ ದೀಪಾಲಂಕಾರದ…

6 hours ago

ಕಮಿಷನ್ ಆರೋಪ ಸುಳ್ಳು, ಎಸ್‌ಐಆರ್ ರದ್ದಾಗಬೇಕು: ಸಚಿವ ಪುಟ್ಟರಂಗಶೆಟ್ಟಿ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಶಾಸಕರು ಕಮಿಷನ್ ಕೇಳುತ್ತಿದ್ದಾರೆ ಎಂಬ ಗುತ್ತಿಗೆದಾರರ ಆರೋಪ ಸುಳ್ಳು,ಮತದಾರರ ಪಟ್ಟಿಯ…

6 hours ago

ಯಳಂದೂರು ತಾಲ್ಲೂಕಿನಲ್ಲಿ ವರುಣನ ಕೃಪೆ: ಭತ್ತದ ನಾಟಿಗೆ ಮುಂದಾದ ರೈತರು

ಯಳಂದೂರು: ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಕಳೆದ ಕೆಲ ದಿನಗಳಿಂದ ಸತತವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ರೈತರು ಭತ್ತದ ನಾಟಿ ಕಾರ್ಯದಲ್ಲಿ…

6 hours ago

ಕಾವೇರಿ ತೀರ್ಥೋದ್ಭವಕ್ಕೆ ದಿನಗಣನೆ: ಕಾವೇರಿ ನೀರಾವರಿ ನಿಗಮದಿಂದ 2 ಕೋಟಿ ರೂ ಬಿಡುಗಡೆ

ಮಡಿಕೇರಿ: ನಾಡಿನ ಜೀವನದಿ ಕಾವೇರಿ ಉಗಮಸ್ಥಾನ ತಲಕಾವೇರಿಯಲ್ಲಿ ನಡೆಯಲಿರುವ ಪವಿತ್ರ ತೀರ್ಥೋದ್ಭವಕ್ಕೆ ದಿನಗಣನೆ ಶುರುವಾಗಿದ್ದು, ಇನ್ನೇನು ಕೇವಲ 15 ದಿನಗಳಷ್ಟೇ…

7 hours ago

ಮಂಡ್ಯ | ಕೇಂದ್ರದ ಬರ ಅಧ್ಯಯನ ತಂಡದಿಂದ ಕೆಆರ್‌ಎಸ್‌ ಹಾಗೂ ಬರಪೀಡಿತ ಹಳ್ಳಿಗಳ ಪರಿಶೀಲನೆ

ಮಂಡ್ಯ: ರಾಜ್ಯದಲ್ಲಿ ಕಂಡು ಕೇಳರಿಯದ ಬರಗಾಲ ಆವರಿಸಿರುವ ಹಿನ್ನೆಲೆಯಲ್ಲಿ ಇಂದು ಕೇಂದ್ರ ಬರ ಅಧ್ಯಯನ ಸಮಿತಿ ಸದಸ್ಯರು ಮಂಡ್ಯಕ್ಕೆ ಆಗಮಿಸಿ…

7 hours ago

ಓದುಗರ ಪತ್ರ: ಐತಿಹಾಸಿಕ ಸಂಗತಿ!

ಐತಿಹಾಸಿಕ ಸಂಗತಿ! ಸರ್ಕಾರದ ನಿರ್ದೇಶನದ ಮೇರೆಗೆ ಬೆಳಗಾವಿ ನಗರಪಾಲಿಕೆ ‘ಗಡಿ ವಿಷಯದಲ್ಲಿ ಮಹಾಜನ್ ವರದಿಯೇ ಅಂತಿಮ’ಎಂಬ ನಿರ್ಣಯ ಅಂಗೀಕರಿಸಿರುವುದು ಐತಿಹಾಸಿಕ…

11 hours ago