ಅಂಕಣ

ಮೆಲೊಡಿ ಖಾವೋ ; ಕುಚ್‌ ಜಾನ್‌ ಜಾವೋ!

ರಾಜಾರಾಂ ತಲ್ಲೂರು

ಬೆಳಿಗ್ಗೆ ಎದ್ದ ತಕ್ಷಣ ಹಲ್ಲು ತಿಕ್ಕಿ ಮುಖ ತೊಳೆಯಬೇಕು ಎಂದು ದೇಶದ ಸಂವಿಧಾನದಲ್ಲಿ ಬರೆದಿದೆಯೇನ್ರಿ? . . . ಮತ್ತೆ ಯಾಕೆ ಅದನ್ನ ಮಾಡ್ತಾರೆ ಜನ?!!

ಪ್ರಧಾನಿಯಾದವರು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತಾಡಲೇಬೇಕಾ? ಎಂಬ ಪ್ರಶ್ನೆ ಎದ್ದಿದೆ. ಅದೂ ಒಬ್ಬರು ಸೀಸನ್ಡ್ ಪತ್ರಕರ್ತರಿಂದ. ಈ ಪ್ರಶ್ನೆಗೆ ಉತ್ತರ ಹುಡುಕುತ್ತಾ, ಸಾಂವಿಧಾನಿಕ ಸ್ಥಾನಗಳಲ್ಲಿ ಹೊಕ್ಕಿ ಕುಳಿತ ಬಳಿಕ ಒಳಗಿನಿಂದಲೇ ಅದನ್ನು ಕೊರೆದು ಶಿಥಿಲಗೊಳಿಸುವ ಕೆಲಸಗಳು ಹೇಗೆ ನಡೆಯುತ್ತವೆ ಎಂಬುದನ್ನು ನನಗೆ ನಾನೇ ಮಗದೊಮ್ಮೆ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತೇನೆ.

ಪ್ರಜಾತಾಂತ್ರಿಕ ವ್ಯವಸ್ಥೆಯೊಂದರಲ್ಲಿ ‘ಉತ್ತರದಾಯಿತ್ವ’ ಬಹಳ ಮೂಲಭೂತ ಆವಶ್ಯಕತೆ. ಇದನ್ನು ಸಂವಿಧಾನ ಕೂಡ ಸ್ಪಷ್ಟವಾಗಿ ಹೇಳಿದೆ. ದೇಶದ ಸಚಿವ ಸಂಪುಟವು ರಾಷ್ಟ್ರಪತಿಗೆ, ಸಂಸತ್ತಿಗೆ ಉತ್ತರದಾಯಿ (ಆರ್ಟಿಕಲ್ ೭೫, ೭೮). ಸರ್ಕಾರದ ಲೆಕ್ಕಪತ್ರಗಳೆಲ್ಲ ಸ್ವತಂತ್ರ ಆಡಿಟ್‌ಗೆ ಉತ್ತರದಾಯಿ (ಆರ್ಟಿಕಲ್ ೧೪೮-೧೫೧). ಸಾಂವಿಧಾನಿಕ ಆಶಯಗಳನ್ನು ಕಾಪಾಡಿಕೊಳ್ಳುವುದು ನ್ಯಾಯಾಂಗದ ಹೊಣೆ. ಹೀಗೆ ಪ್ರತಿಯೊಂದಕ್ಕೂ ‘ಚೆಕ್ಸ್ ಅಂಡ್ ಬ್ಯಾಲೆನ್ಸಸ್’ ನಮ್ಮ ಸಂವಿಧಾನದ ‘ಸ್ಪಿರಿಟ್.’

ಹಲವು ಬಾರಿ, ಈ ರೀತಿಯ ವ್ಯವಸ್ಥೆಯ ಒಳಗೆ ‘ಉತ್ತರದಾಯಿತ್ವ’ವನ್ನು ತೋರಿಸುವುದು ಸಂಕೀರ್ಣವೆನ್ನಿಸಿದಾಗ, ನೇರವಾಗಿ ಆ ಸಂಗತಿಗಳನ್ನು ಚರ್ಚೆಯ ನಿಕಷಕ್ಕೆ ಒಡ್ಡಿಕೊಳ್ಳುವುದಕ್ಕೆ ದೇಶದ ನಾಯಕರು “ಮಾಧ್ಯಮ”ಗಳನ್ನು ಬಳಸುವುದು, ಸ್ವಾತಂತ್ರ್ಯೋತ್ತರ ಭಾರತದಲ್ಲಿ ಇಲ್ಲಿಯ ತನಕವೂ ನಡೆದುಬಂದಿರುವ ಸತ್ಸಂಪ್ರದಾಯ. ಇದು ಯಾಕೆ ಹೀಗೆ ಎಂದರೆ, ನಮ್ಮ ಸಂವಿಧಾನ “ಅಭಿವ್ಯಕ್ತಿ ಸ್ವಾತಂತ್ರ್ಯ”ವನ್ನು ಕೊಟ್ಟಿದೆ (ಆರ್ಟಿಕಲ್ ೧೯(೧)a). ಜೊತೆಗೆ, ದೇಶದ ಸುಪ್ರೀಂ ಕೋರ್ಟ್ ಈ ಅಭಿವ್ಯಕ್ತಿ ಸ್ವಾತಂತ್ರ್ಯದಲ್ಲಿ ಮಾಧ್ಯಮ ಸ್ವಾತಂತ್ರ್ಯ ಕೂಡ ಮೂಲಭೂತ ಹಕ್ಕು ಎಂದು ಈಗಾಗಲೇ ಸ್ಪಷ್ಟಪಡಿಸಿದೆ.

ಸಾರ್ವಜನಿಕ ಬದುಕಿನಲ್ಲಿ ಮುಚ್ಚಿಟ್ಟುಕೊಳ್ಳುವುದಕ್ಕೆ ಹೆಚ್ಚೇನೂ ಇಲ್ಲದಿದ್ದವರು, ಸಂವಿಧಾನದ ಅಕ್ಷರಗಳಿಗಿಂತ ಅದರ ಆಶಯಗಳಿಗೆ ಹೆಚ್ಚಿನ ಮಹತ್ವ ಕೊಡುವವರು, ಇಲ್ಲಿಯ ತನಕ ತಮ್ಮನ್ನು ಸಾರ್ವಜನಿಕ ನಿಕಷಕ್ಕೆ (ಪತ್ರಿಕಾಗೋಷ್ಠಿಗಳಿಗೆ) ಒಡ್ಡಿಕೊಳ್ಳುತ್ತಾ ಬಂದಿದ್ದಾರೆ. ದೇಶದ ಮಾಧ್ಯಮಗಳು ಸಾಕಷ್ಟು ಜವಾಬ್ದಾರಿಯಿಂದಲೇ ಈ ಉತ್ತರದಾಯಿತ್ವವನ್ನು ಹೊಳಪುಗೊಳಿಸುವ ನಿಕಷದ ಹೊಣೆಗಾರಿಕೆಯನ್ನು ನಿರ್ವಹಿಸುತ್ತಾ ಬಂದಿದ್ದವು. ಆದರೆ ಈಗ ಏನಾಗಿದೆ?

೧. ಮಾಧ್ಯಮಗಳನ್ನು ಬಹುಪಾಲು ಸರ್ಕಾರ ತನ್ನ ಕ್ರೋನಿಗಳ ಮೂಲಕ ಸಾರಾಸಗಟು ಖರೀದಿ ಮಾಡಿ, ತನ್ನ ಪರೋಕ್ಷ ಹತೋಟಿಗೆ ತೆಗೆದುಕೊಂಡು, ತನ್ನದೇ ತುತ್ತೂರಿ ಮಾಡಿಕೊಂಡಿದೆ. ಜೊತೆಗೆ, ಇಂತಹ ಮಾಧ್ಯಮ ಸುದ್ದಿಕೋಣೆಗಳಲ್ಲಿರಬಹುದಾದ ಸರ್ಕಾರದ ವಿಮರ್ಶಕರನ್ನೆಲ್ಲ ಅಲ್ಲಿಂದ ಹೊರದಬ್ಬಲಾಗಿದೆ.

೨. ಹೀಗೆ ಬಹುಪಾಲು ಪತ್ರಕರ್ತ ಮುಕ್ತ ಮತ್ತು ಗುಮಾಸ್ತಗಿರಿ ಶಕ್ತ ಮಾಧ್ಯಮಗಳು, ಜನರ ಆಸಕ್ತಿಯನ್ನು ಹಿಡಿದಿಟ್ಟುಕೊಳ್ಳಲು ಸಿಕ್ಕಸಿಕ್ಕ ಬೆಡ್ ರೂಂಗಳನ್ನು ಹಣಕಿಕ್ಕಿ ನೋಡುವ, ಸಿ. ಡಿ. – ಪೆನ್‌ಡ್ರೈವ್ ಪತ್ರಿಕೋದ್ಯಮಕ್ಕೆ, ವಸೂಲಿ ಬಾಜಿಗೆ, ರಾಜಕೀಯ ತಲೆಹಿಡಿಯುವ ಕೆಲಸಗಳಿಗೆ ತಮ್ಮನ್ನು ಸೀಮಿತಗೊಳಿಸಿಕೊಂಡಿವೆ. ಹಾಗಿಲ್ಲ ಎಂದಾದರೆ, ಈಗಲೂ ಮತ್ತೊಮ್ಮೆ ಕೇಳುತ್ತೇನೆ: ಕಳೆದ ೧೨ ವರ್ಷಗಳಲ್ಲಿ ದೇಶದ ಹಿತಾಸಕ್ತಿ ಕಾಪಾಡುವ ಮತ್ತು ದೇಶದಾದ್ಯಂತ ಕಂಪನ ಹುಟ್ಟಿಸಿದ ಒಂದು ತನಿಖಾ ವರದಿಯನ್ನು ತೋರಿಸಿ.

ದೇಶದ ಪ್ರಧಾನಮಂತ್ರಿಯವರು ತಮ್ಮ ಸಂವಹನಗಳನ್ನು “ವನ್ ವೇ ಟ್ರಾಫಿಕ್” ಮಾಡಿಕೊಂಡಿದ್ದಾರೆ ಎಂಬುದು ಉದ್ದೇಶಪೂರ್ವಕ ನಡೆ ಎಂಬುದನ್ನು ಬಹುತೇಕ ಎಲ್ಲರೂ ಈಗಾಗಲೇ ಅರ್ಥೈಸಿಕೊಂಡಿದ್ದಾರೆ. ಆದರೆ, ಮಾಧ್ಯಮಗಳ ಆಯಕಟ್ಟಿನ ಜಾಗಗಳಲ್ಲಿರುವವರು ಕೂಡ ಇದನ್ನು ಈಗ ಬಹಿರಂಗವಾಗಿ ಸಮರ್ಥಿಸಿಕೊಂಡು, ಅದಕ್ಕೊಂದು ಮೌಲ್ಯ ತಂದುಕೊಡಲಾರಂಭಿಸಿರುವುದು ಹೊಸ ಬೆಳವಣಿಗೆ. ಇಂತಹ “ಏನು ಬೇಕಾದರೂ ಸಮರ್ಥಿಸಿಕೊಳ್ಳುವ” ಸ್ಥಿತಿ ಬರುವುದು, ಸಾಮಾನ್ಯವಾಗಿ ಒಳಕೊರೆತ ಸಾಕಷ್ಟು ಶಿಥಿಲಗೊಳಿಸಿದೆ ಎಂಬುದು ಖಚಿತ ಆದಬಳಿಕ. ಪ್ರಧಾನಿಯವರು ಮನ್ ಕೀ ಬಾತ್, ಪತ್ರಿಕಾ ಲೇಖನಗಳು, ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಗಳ ಮೂಲಕ, ಟೌನ್ ಹಾಲ್‌ಗಳ ಮೂಲಕ, ಮಾಧ್ಯಮಗಳ ಎನ್‌ಕ್ಲೇವ್‌ಗಳ ಮೂಲಕ, ಪ್ರಾಯೋಜಿತ ಸಂದರ್ಶನಗಳ ಮೂಲಕ ಏನೆಲ್ಲ ಹೇಳಿದ್ದಾರೆ ಎಂಬುದನ್ನು ಕಳೆದ ೧೨ ವರ್ಷಗಳಲ್ಲಿ ಕಂಡಿದ್ದೇವೆ. ಹಾಗೆಯೇ ಆಡಳಿತದ ಕಡೆಯಿಂದ “ಡಿಯರ್”ಮಾಧ್ಯಮಗಳನ್ನು ಛೂ ಬಿಟ್ಟು ೧೨ ವರ್ಷಗಳಿಂದ ಪ್ರತಿಪಕ್ಷಗಳಲ್ಲಿರುವವರನ್ನು ಇಕ್ಕಟ್ಟಿಗೆ ಸಿಲುಕಿಸಲು ಏನೆಲ್ಲ ಸರ್ಕಸ್‌ಗಳನ್ನು ಮಾಡಲಾಗಿದೆ, ಎಲ್ಲೆಲ್ಲಿ ತಮಗಿಲ್ಲದ “ಫಿಲ್ಟರ್”ಗಳನ್ನು ಪ್ರತಿಪಕ್ಷದವರ ಸಂದರ್ಭದಲ್ಲಿ ಅಳವಡಿಸಲಾಗಿದೆ ಎಂಬುದನ್ನೂ ದೇಶ ಕಂಡಿದೆ.

ಒಂದು ಸರಳ ಉದಾಹರಣೆಯ ಮೂಲಕ ಸದ್ಯದ ಸನ್ನಿವೇಶವನ್ನು ಒಟ್ಟಾರೆಯಾಗಿ ಗ್ರಹಿಸಿಕೊಳ್ಳಲು ಹಾದಿ ತೆರೆಯುತ್ತೇನೆ. ದೇಶದಲ್ಲಿ ಕೋವಿಡ್ ಸಾವು-ನೋವುಗಳ ಸಂಖ್ಯೆಯ ಕುರಿತು ಕೇಂದ್ರ ಸರ್ಕಾರಕ್ಕೆ ಸಂಸತ್ತಿನಲ್ಲಿ ಹಲವಾರು ಪ್ರಶ್ನೆಗಳನ್ನು ಕೇಳಲಾಗಿದೆ. ಅದಕ್ಕೆ ಸುತ್ತುಬಳಸಿ ಉತ್ತರ ಏನಿರುತ್ತಿತ್ತು ಗೊತ್ತೇ? Health is a state subject, Government of support and has also supported the states through logistic and financial support to further strengthen the existing health infrastructure (Eg: Loksabha unstarred question 774 dated ೨೩-೦೭-೨೦೨೧. ) ಆದರೆ, ರಾಜ್ಯಗಳ ಅಽಕಾರದಲ್ಲಿ ಸಾಕಷ್ಟು ಹಸ್ತಕ್ಷೇಪ ಮಾಡಿ, ಕೋವಿಡ್ ನಿರ್ವಹಣೆ ಮಾಡಿದವರು ಯಾರು? ಎಂಬುದು ಬಹಿರಂಗ ಸತ್ಯ. ಇದರ ಜೊತೆಗೆ, ಕೋವಿಡ್ ಕಾಲದಲ್ಲಿ ಏಕಮುಖ ಸಂವಹನದ ಮೂಲಕ ತಟ್ಟೆ ಬಡಿಯುವ, ಚಪ್ಪಾಳೆ ಹೊಡೆಸುವ, ದೀಪ ಹಚ್ಚುವ ಸಾಮೂಹಿಕ ವ್ಯಾಯಾಮಗಳನ್ನೆಲ್ಲ ಮಾಡಿಸಲಾಯಿತು. ಇಷ್ಟೆಲ್ಲ ಆದರೂ ಈವತ್ತಿನ ತನಕ ಕೋವಿಡ್ ಕಾಲದಲ್ಲಿ ದೇಶದ ಒಳಗೆ ನಿಜಕ್ಕೂ ಏನಾಗಿತ್ತು ಎಂಬುದನ್ನು ದೇಶದ ಎದುರು ಹೇಳುವುದು ಸರ್ಕಾರಕ್ಕೆ ಸಾಧ್ಯ ಆಗಿಲ್ಲ, ಸರ್ಕಾರದಿಂದ ಆ ಮಾಹಿತಿಯನ್ನು ಪಡೆದು ಸಾರ್ವಜನಿಕರಿಗೆ ತಿಳಿಸುವ ಜವಾಬ್ದಾರಿಯನ್ನು ನಿರ್ವಹಿಸುವುದು ಮಾಧ್ಯಮಗಳಿಗೂ ಸಾಧ್ಯ ಆಗಿಲ್ಲ. ಎಲ್ಲಕ್ಕಿಂತ ಮೇಲಾಗಿ ದೇಶದ ಜನತೆಗೆ ಇನ್ನೂ ಕೋವಿಡ್ ಕಾಲದಲ್ಲಿ ನಿಜಕ್ಕೂ ಏನಾಗಿದೆ ಎಂಬ ವಾಸ್ತವ ಗೊತ್ತಾಗಿಲ್ಲ. ಇದು ಸದ್ಯಕ್ಕೆ ನಮ್ಮ “ಉತ್ತರದಾಯಿತ್ವದ” ಸ್ಥಿತಿ.

ಇಂತಹದೊಂದು ಸನ್ನಿವೇಶದಲ್ಲಿ ಒಬ್ಬರು ಪ್ರಧಾನಮಂತ್ರಿ ಮಾಧ್ಯಮಗಳಿಗೆ ತೆರೆದುಕೊಂಡು, ಎಲ್ಲ ಪ್ರಶ್ನೆಗಳಿಗೆ ಉತ್ತರಿಸಲು ಬಹಳ ಉನ್ನತ ಮಟ್ಟದ ಇಚ್ಛಾಶಕ್ತಿ, ತನ್ನಲ್ಲಿ ಮುಚ್ಚಿಟ್ಟುಕೊಳ್ಳಲು ಏನೂ ಇಲ್ಲ ಎಂಬ ಪ್ರಾಮಾಣಿಕತೆ ಬೇಕಾಗುತ್ತದೆ. ಜನ ಅದನ್ನು ನಿರೀಕ್ಷಿಸುವುದು ತಪ್ಪಲ್ಲ.

ದೇಶದಲ್ಲಿ ಕಳೆದ ೧೨ ವರ್ಷಗಳಲ್ಲಿ ಇಂತಹ ಹಲವು ಸನ್ನಿವೇಶಗಳು ಎದುರಾಗಿವೆ. ಆದರೆ, ಎಲ್ಲೂ ನಮ್ಮ ಪ್ರಧಾನಮಂತ್ರಿಗಳ “ವನ್ ವೇ” ಈ ಕಠಿಣ ಜಂಕ್ಷನ್‌ಗಳ ಮೂಲಕ ಹಾದುಹೋದದ್ದಿಲ್ಲ. ಸಚಿವ ಸಂಪುಟದ ಸದಸ್ಯರೂ ಪತ್ರಿಕಾಗೋಷ್ಠಿ ಮಾಡಿದಾಗ, ಶಾಲೆ ಮಕ್ಕಳಂತೆ ಹಾಜರಾತಿ ಕರೆದು, ಪ್ರಶ್ನೆಗೆ ಮಿತಿ ಹೇರಿ, ಸರಿಯಾಗಿ ಉತ್ತರಿಸದೇ ತಟ್ಟಿಹಾರಿಸುವುದು ಒಟ್ಟು ವ್ಯವಸ್ಥೆ ಆಗಿಬಿಟ್ಟಿದೆ. ಯಾವುದೇ ಮಾಧ್ಯಮಗಳಿಗೆ ಈ ಬಗ್ಗೆ ಆಕ್ಷೇಪ ಇಲ್ಲ. ಬದಲಾಗಿ, ಸಿಕ್ಕಿದ್ದನ್ನೇ ಮಹಾಪ್ರಸಾದ ಎಂದು ಸ್ವೀಕರಿಸುತ್ತಿವೆ.

ಹೀಗಿರುವಾಗ, ಪ್ರಧಾನಿಯವರು ಮಾಧ್ಯಮಗಳಿಗೆ ಉತ್ತರಿಸದಿರುವುದರ ಕುರಿತು ನಡೆಯುವ ಚರ್ಚೆಗಳನ್ನು ದೇಶದ ಸಾಂವಿಧಾನಿಕ ಚೌಕಟ್ಟಿನೊಳಗಿನ ಜನಸಾಮಾನ್ಯರ ಆತಂಕ ಎಂದು ಪರಿಭಾವಿಸಬೇಕೇ ಹೊರತು, ಪ್ರಧಾನಿಯವರ ವಿರುದ್ಧ ದ್ವೇಷ ಎಂದಲ್ಲ. ಇದು ದ್ವೇಷ, ಹಗೆ ಸಾಧನೆ ಎಂಬ ನೆರೇಟಿವ್ ಹುಟ್ಟಿದರೆ ಅಥವಾ ಇಂತಹದೆಲ್ಲ ಅಪ್ರಸ್ತುತ ಎಂಬ “ನೆರೇಟಿವ್” ಹುಟ್ಟತೊಡಗಿದರೆ, ಅದು ಹುಟ್ಟಿದ ಮೂಲ ಯಾವುದು ಎಂಬುದನ್ನು ನೋಡಿದರೆ ಸಾಕು. ನಡೆಯುತ್ತಿರುವುದು ಏನು ಎಂಬುದು ಅರ್ಥ ಆಗಿಬಿಡುತ್ತದೆ

ಆಂದೋಲನ ಡೆಸ್ಕ್

Recent Posts

ಶಿವಾಜಿ ಗಣೇಶನ್‌ ಅವರ ವಾರದ ಅಂಕಣ | ಜನಸಂಖ್ಯೆ ಏರುಪೇರು : ಆಂಧ್ರದ ನೀತಿ ಅನುಕರಣೀಯವೇ?

ದೇಶದ ಜನಸಂಖ್ಯೆಯಲ್ಲಾಗುತ್ತಿರುವ ಏರುಪೇರು ರಾಷ್ಟ್ರೀಯ ಜನಸಂಖ್ಯೆ ನಿರ್ವಹಣೆಯ ನೀತಿಯ ದಿಕ್ಕನ್ನೇ ಬದಲಿಸುತ್ತಿದೆ. ಉತ್ತರ ಭಾರತದ ಜನಸಂಖ್ಯೆ ಪ್ರಮಾಣ ಲಂಗು ಲಗಾಮಿಲ್ಲದೆ…

19 mins ago

ಭಾನುವಾರದ ಹಾಡುಪಾಡು | ಈ ಮೋಹ, ಈ ಬಯಕೆ ಮತ್ತು ಇದೆಲ್ಲಾ ಯಾಕೆ ಹೀಗೆ?

ಮೋಹಿತ್‌ ಎಸ್‌ ಗೌಡ ನಾನು ಪ್ರಾಥಮಿಕ ಶಾಲೆಯಲ್ಲಿ ಓದುವಾಗ ಪರೀಕ್ಷೆಯ ಪ್ರಶ್ನೆಪತ್ರಿಕೆಗಳಲ್ಲಿ ‘ಲಿಂಗ ಬದಲಿಸಿ ಬರೆಯಿರಿ’ ಅಥವಾ ‘ವಿರುದ್ಧ ಪದ…

57 mins ago

ಭಾನುವಾರದ ಹಾಡುಪಾಡು | ಒಂದು ಸುಂದರ ಸಂಸಾರ ಮುರಿದುಹೋದ ಕಥೆ

ರೇಣುಕಾ ನಿಡಗುಂದಿ  ಕಾಲೇಜಿನ ದಿನಗಳಲ್ಲಿ ಅವರಿಬ್ಬರೂ ಭೇಟಿಯಾದಾಗಲೇ ಆಕೆ ತಾನು ಬೈ ( Bisexual) ಎಂದು ಹೇಳಿಕೊಂಡಿದ್ದಳು. ಹೊಸತಲೆಮಾರಿನ ಹುಡುಗ…

1 hour ago

ಒಬ್ಬ ಹುಡುಗ ಯಾವ ಕಾರಣಕ್ಕೆ ʼಗೇʼ ಆಗುತ್ತಾನೆ?

ವಸುಧೇಂದ್ರ ಹುಡುಗನೊಬ್ಬನಿಗೆ ಮತ್ತೊಬ್ಬ ಹುಡುಗನ ಮೇಲೆ ಅದು ಹೇಗೆ ಆಕರ್ಷಣೆ ಮೂಡುತ್ತದೆ? ಅದು ಅವನ ಆಯ್ಕೆಯೆ? ಕಲಿತ ದುಶ್ಚಟವೆ? ವಿಷಮ…

1 hour ago

ಮ.ಬೆಟ್ಟ | ಬಾಲಕನ ಮೇಲೆ ದಾಳಿ ಮಾಡಿದ್ದ ಚಿರತೆ ಸೆರೆ

ಹನೂರು : ಶ್ರೀ ಕ್ಷೇತ್ರ ನಾಗಮಲೆಗೆ ತೆರಳುತ್ತಿದ್ದ ಬಾಲಕನ ಮೇಲೆ ದಾಳಿ ಮಾಡಿ ಸಾವಿಗೆ ಕಾರಣವಾಗಿದ್ದ ಚಿರತೆಯನ್ನು ಸೆರೆ ಹಿಡಿಯುವಲ್ಲಿ…

3 hours ago

ಶ್ವೇತಭವನದ ಸಮೀಪ ಗುಂಡಿನ ಚಕಮಕಿ : ಬಂದೂಕುಧಾರಿಯ ಹತ್ಯೆ

ವಾಷಿಂಗ್ಟನ್‌ : ಅಮೆರಿಕದ ಶ್ವೇತ ಭವನದ ಭದ್ರತಾ ತಪಾಸಣಾ ಕೇಂದ್ರದ ಬಳಿ ಶನಿವಾರ ಸಂಜೆ ಭೀಕರ ಗುಂಡಿನ ದಾಳಿ ನಡೆದಿದ್ದು…

3 hours ago