ಅಂಕಣಗಳು

ಶಿವಾಜಿ ಗಣೇಶನ್‌ ಅವರ ವಾರದ ಅಂಕಣ | ಜನಸಂಖ್ಯೆ ಏರುಪೇರು : ಆಂಧ್ರದ ನೀತಿ ಅನುಕರಣೀಯವೇ?

ದೇಶದ ಜನಸಂಖ್ಯೆಯಲ್ಲಾಗುತ್ತಿರುವ ಏರುಪೇರು ರಾಷ್ಟ್ರೀಯ ಜನಸಂಖ್ಯೆ ನಿರ್ವಹಣೆಯ ನೀತಿಯ ದಿಕ್ಕನ್ನೇ ಬದಲಿಸುತ್ತಿದೆ. ಉತ್ತರ ಭಾರತದ ಜನಸಂಖ್ಯೆ ಪ್ರಮಾಣ ಲಂಗು ಲಗಾಮಿಲ್ಲದೆ ಹೆಚ್ಚುತ್ತಿದ್ದರೆ ಈಶಾನ್ಯ ರಾಜ್ಯಗಳಲ್ಲಿ ಒಂದಾದ ನಾಗಾಲ್ಯಾಂಡ್ ಮತ್ತು ದಕ್ಷಿಣದ ಐದು ರಾಜ್ಯಗಳಲ್ಲಿನ ಮಕ್ಕಳ ಜನನ ಪ್ರಮಾಣದಲ್ಲಿ ರಾಷ್ಟ್ರೀಯ ಫಲವಂತಿಕೆಯ ಸರಾಸರಿ ಶೇ. ೨. ೧ಕ್ಕಿಂತ ಇಳಿಮುಖವಾಗುತ್ತಿರುವುದು ಆತಂಕಕಾರಿಯಾಗಿದೆ.

ಒಂದು ಕಡೆ ಭಾರತವೀಗ ಚೀನಾವನ್ನೂ ಹಿಂದಿಕ್ಕಿ ಇಡೀ ವಿಶ್ವದಲ್ಲಿಯೇ ಜನಸಂಖ್ಯೆಯಲ್ಲಿ ಮೊದಲ ಸ್ಥಾನಕ್ಕೆ ಜಿಗಿದಿದೆ. ಕಳೆದ ವರ್ಷ ಚೀನಾದ ಜನಸಂಖ್ಯೆ ೧೪೨ ಕೋಟಿ ಇದ್ದರೆ ಭಾರತದ ಜನಸಂಖ್ಯೆ ಪ್ರಮಾಣ ೧೪೫ ಕೋಟಿ ದಾಟಿತು. ದೇಶದಲ್ಲಿ ಅತಿವೃಷ್ಟಿ ಮತ್ತು ಅನಾವೃಷ್ಟಿಯ ಪರಿಣಾಮಗಳಿಂದ ಆಹಾರ ಉತ್ಪಾದನೆ ಮೇಲಾಗುವ ದುಷ್ಪರಿಣಾಮದಿಂದ ಆಹಾರದ ಕೊರತೆ ಉಂಟಾದರೆ ಮತ್ತೊಂದು ಕಡೆ ತೈಲ ಮತ್ತು ಅಡುಗೆ ಅನಿಲದ ಉತ್ಪನ್ನ ಮತ್ತು ರಫ್ತು ಮಾಡುವ ಕೊಲ್ಲಿ ರಾಷ್ಟ್ರಗಳನ್ನೇ ಅವಲಂಬಿಸಿರುವ ಭಾರತದ ಜನಜೀವನ ಮತ್ತು ಆರ್ಥಿಕ ಪರಿಸ್ಥಿತಿಯು ಪಶ್ಚಿಮ ಏಷ್ಯಾದಲ್ಲಿನ ಯದ್ಧದ ಪರಿಣಾಮ ಆತಂಕಕಾರಿ ಪರಿಸ್ಥಿತಿಯನ್ನು ಎದುರಿಸುವಂತಾಗಿದೆ.

‘ವಿಕಸಿತ ಭಾರತ’ದ ಘೋಷವಾಕ್ಯವನ್ನು ನಿತ್ಯವೂ ಪಠಿಸುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಈಗ ಯುದ್ಧ ಹೀಗೆಯೇ ಮುಂದುವರಿದರೆ ಭಾರತ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳು ಬಡತನದತ್ತ ಜಾರುವ ಸ್ಥಿತಿ ಎದುರಾಗಲಿದೆ ಎಂದು ಎಚ್ಚರಿಸಿದ್ದಾರೆ. ಇದರಿಂದ ಇಡೀ ವಿಶ್ವವೇ ಸುರಕ್ಷಿತವಾಗಿದ್ದರೆ ನಾವೂ ಸುರಕ್ಷಿತ ಎನ್ನುವ ಸಂದೇಶವನ್ನು ಈ ಯುದ್ಧದ ಪಾಠದಿಂದ ಕಲಿಯಬೇಕಾಗಿದೆ.

ಕಳೆದ ಒಂದು ವರ್ಷದಿಂದ ಜನಗಣತಿ ಸದ್ದು ಮಾಡುತ್ತಿದೆ. ೨೦೨೧ರಲ್ಲಿ ನಡೆಯಬೇಕಿದ್ದ ಜನಗಣತಿ ಈಗ ಆರಂಭವಾಗಿದೆ. ರಾಜ್ಯಗಳ ಜನಸಂಖ್ಯೆಯ ಆಧಾರದ ಮೇಲೆ ಲೋಕಸಭೆ ಮತ್ತು ರಾಜ್ಯಗಳ ವಿಧಾನ ಸಭೆಗಳ ಸದಸ್ಯರ ಸಂಖ್ಯೆಯೂ ಹೆಚ್ಚಳವಾಗುತ್ತಿರುವ ವಿಷಯ ಹಲವು ವಿವಾದಗಳನ್ನು ಹುಟ್ಟುಹಾಕಿದೆ. ಹೆಚ್ಚು ಬಡತನ ಮತ್ತು ಹೆಚ್ಚು ಜನಸಂಖ್ಯೆ ಹೊಂದಿರುವ ಉತ್ತರ ಭಾರತದ ರಾಜ್ಯಗಳು ದಕ್ಷಿಣ ರಾಜ್ಯಗಳಿಗಿಂತ ಲೋಕಸಭೆಯಲ್ಲಿ ಹೆಚ್ಚು ಪ್ರಾತಿನಿಧ್ಯ ಪಡೆಯುವ ಸಂಗತಿ ಈಗ ಗಂಭೀರ ಚರ್ಚೆಗೆ ಎಡೆಮಾಡಿಕೊಟ್ಟಿದೆ. ಇದರ ಜೊತೆಗೆ ಮಹಾರಾಷ್ಟ್ರ, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳು ಬೇರೆಲ್ಲಾ ರಾಜ್ಯಗಳಿಗಿಂತ ಹೆಚ್ಚಿನ ಜಿಎಸ್‌ಟಿ ನೀಡುತ್ತಿದ್ದರೂ, ಕೇಂದ್ರ ಸರ್ಕಾರದ ಅನುದಾನದಲ್ಲಿ ಕಡಿಮೆ ಮೊತ್ತ ನೀಡಲಾಗುತ್ತಿರುವ ವಿಷಯವೂ ಕೇಂದ್ರ ಮತ್ತು ದಕ್ಷಿಣ ರಾಜ್ಯಗಳ ನಡುವೆ ತಾರತಮ್ಯ ನೀತಿಯ ವಿರುದ್ಧ ವಾದ ವಿವಾದ ನಡೆಯುತ್ತಲೇ ಇದೆ. ಈ ತಾರತಮ್ಯ ನೀತಿಯ ವಿರುದ್ಧ ಕರ್ನಾಟಕವಂತು ಕೇಂದ್ರದ ಜೊತೆ ಜಟಾಪಟಿ ನಡೆಸುತ್ತಿರುವುದನ್ನು ಮುಂದುವರಿಸಿದೆ.

ಒಂದು ಕಡೆ ಜನನ ಪ್ರಮಾಣದಲ್ಲಾಗುತ್ತಿರುವ ಏರುಪೇರು ದೇಶದಲ್ಲಿ ಅಸಮಾನತೆಯನ್ನು ತಂದೊಡ್ಡುತ್ತಿದೆ. ದಕ್ಷಿಣ ಭಾರತದ ಮಹಿಳೆಯರಲ್ಲಿ ಮಕ್ಕಳನ್ನು ಹೆರುವ ಫಲವಂತಿಕೆಯ ಇಳಿಮುಖ, ಮತ್ತೊಂದು ಕಡೆ ಜನಸಂಖ್ಯೆ ಆಧಾರಿತ ಲೋಕಸಭೆಯಲ್ಲಿ ಉಂಟಾಗುವ ಪ್ರಾತಿನಿಧ್ಯದ ಕೊರತೆ ಹಾಗೂ ಕೇಂದ್ರ ಸರ್ಕಾರದ ಅನುದಾನದ ತಾರತಮ್ಯದ ಹಿನ್ನೆಲೆಯಲ್ಲಿ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹೆಚ್ಚು ಮಕ್ಕಳನ್ನು ಹೆರುವ ಮಹಿಳೆಯರಿಗೆ ವಿಶೇಷ ಉತ್ತೇಜನಕಾರಿ ಕಾರ್ಯಕ್ರಮಗಳನ್ನು ಘೋಷಿಸಿರುವುದು ಇತರೆ ದಕ್ಷಿಣ ರಾಜ್ಯಗಳ ಕಣ್ಣುತೆರೆಸುವಂತೆ ಮಾಡಿದೆ.

ಜನಸಂಖ್ಯೆಯ ನಿಯಂತ್ರಣದಲ್ಲಾಗುತ್ತಿರುವ ಬದಲಾವಣೆಯಲ್ಲಿ ಸಮತೋಲನ ಕಾಪಾಡಲು ಆಂಧ್ರ ಪ್ರದೇಶ ಸರ್ಕಾರ ಜನಸಂಖ್ಯೆ ನಿರ್ವಹಣೆ ಕುರಿತಂತೆ ಕರಡು ನೀತಿಯನ್ನು ಸಿದ್ಧಪಡಿಸುತ್ತಿದೆ. ರಾಷ್ಟ್ರೀಯ ಜನನ ಪ್ರಮಾಣವು ಸರಾಸರಿ ಶೇ. ೨. ೧ ಇರಬೇಕು. ಆದರೆ ಆಂಧ್ರ ಪ್ರದೇಶದಲ್ಲಿ ಮಹಿಳೆಯರ ಫಲವಂತಿಕೆ ಸಾಮರ್ಥ್ಯ ಈಗ ಕಡಿಮೆ ಆಗಿದ್ದು, ಜನನ ಪ್ರಮಾಣವು ಶೇ. ೧. ೫ಕ್ಕೆ ಇಳಿದಿರುವುದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ಇನ್ನು ಮುಂದೆ ಎರಡು ಮಕ್ಕಳನ್ನು ಹೆರುವ ಮಹಿಳೆಗೆ ರೂ. ೨೫ ಸಾವಿರ, ಮೂರು ಮಕ್ಕಳನ್ನು ಪಡೆಯುವ ಮಹಿಳೆಗೆ ರೂ. ೩೦ ಸಾವಿರ ಮತ್ತು ನಾಲ್ಕನೇ ಮಗು ಹೆತ್ತರೆ ೪೦ ಸಾವಿರ ರೂಪಾಯಿ ನಗದು ನೆರವು ನೀಡುವುದನ್ನು ಚಂದ್ರ ಬಾಬು ನಾಯ್ಡು ಘೋಷಿಸಿರುವುದು ಹಲವರ ಹುಬ್ಬೇರಿಸಿದೆ. ಒಂದು ಕಡೆ ದೇಶದ ಜನಸಂಖ್ಯೆ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದ್ದು ೧೪೫ ಕೋಟಿ ಜನರಿಗೆ ಊಟ ಬಟ್ಟೆ, ಶಿಕ್ಷಣ, ವಸತಿ ಮತ್ತು ಆರೋಗ್ಯದಂತಹ ಮೂಲಭೂತ ಸೌಕರ್ಯ ಒದಗಿಸುವುದೇ ಕಷ್ಟ ಎನ್ನುವ ಸ್ಥಿತಿಯಲ್ಲಿ ಜನಸಂಖ್ಯೆಯ ಹೆಚ್ಚಳಕ್ಕೆ ಸರ್ಕಾರವೇ ಉತ್ತೇಜಿಸುವ ನೀತಿ ಮತ್ತೊಂದು ಕಡೆ ಕಳವಳಕಾರಿ ಎನ್ನಲಾಗಿದೆ.

ಹೀಗಾಗಿ ಎಪ್ಪತ್ತರ ದಶಕದ ‘ಚಿಕ್ಕ ಕುಟುಂಬ ಚೊಕ್ಕ ಕುಟುಂಬ’ ,‘ಚಿಕ್ಕ ಕುಟುಂಬ ಸುಖೀ ಕುಟುಂಬ’, ‘ನಾವಿಬ್ಬರು ನಮಗಿಬ್ಬರು’ ಎನ್ನುವ ಘೋಷಣೆಗೆ ತಿಲಾಂಜಲಿ ಇಟ್ಟು ನಮ್ಮ ಪೂರ್ವಿಕರು ನಂಬಿದ್ದ ‘ಮಕ್ಕಳಿರಲವ್ವ ಮನೆ ತುಂಬ’, ‘ಮಕ್ಕಳೇ ಆಸ್ತಿ’ ಎನ್ನುವ ನಂಬಿಕೆಗೆ ಹಿಂತಿರುಗುವಂತಾಗಿದೆ. ನಮ್ಮ ಈಗಿನ ಪೀಳಿಗೆಯು ಇದಕ್ಕೆ ತದ್ವಿರುದ್ಧ. ಕೆಲವರು ಮದುವೆಯೇ ಬೇಡ ಎಂದರೆ ಮತ್ತೆ ಕೆಲವರು ಮಕ್ಕಳೇ ಬೇಡ ಎನ್ನುವವರಿದ್ದಾರೆ. ಬಹುತೇಕ ಮಂದಿ ಹೆಣ್ಣಾಗಲಿ ಗಂಡಾಗಲಿ ಒಂದು ಮಗು ಸಾಕು ಎನ್ನುವ ನೀತಿಗೆ ಬದ್ಧರಾಗಿದ್ದಾರೆ. ಇದಕ್ಕೆ ಇಂದಿನ ನಮ್ಮ ಆರ್ಥಿಕ ಪರಿಸ್ಥಿತಿ ಮತ್ತು ದುಬಾರಿ ಜೀವನ ನಿರ್ವಹಣೆ ಹೀಗೆ ಹತ್ತು ಹಲವಾರು ಸಮಸ್ಯೆಗಳು ಮುಖ್ಯ ಕಾರಣವಾಗಿರುವುದು ಸಹಜ.

ಜನಸಂಖ್ಯೆ ಮತ್ತು ಸಂಪನ್ಮೂಲದ ಬಗೆಗೆ ಪ್ರಪಂಚದಲ್ಲಿ ಮೊದಲ ಬಾರಿಗೆ ಕಣ್ಣು ತೆರೆಸಿದ ಥಾಮಸ್ ರಾಬರ್ಟ್ ಮಾಲ್ತೂಸ್ ೧೭೯೮ರಲ್ಲಿ ಜನಸಂಖ್ಯೆ ಮತ್ತು ನಮ್ಮ ಆರ್ಥಿಕ ಸಂಪನ್ಮೂಲ ಕುರಿತಂತೆ ಸಿದ್ಧಾಂತವೊಂದನ್ನು ಪ್ರತಿಪಾದಿಸಿದರು. ಜನಸಂಖ್ಯೆಯು ಅಂದರೆ ಜನನ ಮತ್ತು ಮರಣವು ನೈಸರ್ಗಿಕ ಕ್ರಿಯೆಗೆ ತಳುಕುಹಾಕಿಕೊಂಡಿದೆ. ಜನಸಂಖ್ಯೆ ಹೆಚ್ಚಳವು ಆಗಿಂದಾಗ್ಗೆ ಸಂಭವಿಸುವ ನೈಸರ್ಗಿಕ ಬರ, ಕ್ಷಾಮ, ನಿಸರ್ಗದಲ್ಲಾಗುವ ಬದಲಾವಣೆಯಿಂದ ಆಹಾರದ ಕೊರತೆ , ಬಡತನ ಮತ್ತು ರೋಗರುಜಿನವು ನಮ್ಮನ್ನು ಕಾಡುತ್ತವೆ. ಇದರಿಂದಾಗಿ ಪ್ರತಿಯೊಂದು ದೇಶವೂ ಪ್ರತಿ ೨೫ ವರ್ಷಗಳಿಗೊಮ್ಮೆ ತನ್ನ ಜನಸಂಖ್ಯೆಯ ನೀತಿಯನ್ನು ರೂಪಿಸಿಕೊಳ್ಳುತ್ತಾ ಹೋಗಬೇಕು ಎನ್ನುತ್ತಾರೆ ಮಾಲ್ತೂಸ್. ನಂತರ ಬಂದ ಅನೇಕ ಅರ್ಥ ತಜ್ಞರು ಮಾಲ್ತೂಸ್ ಸಿದ್ಧಾಂತವನ್ನು ಒಪ್ಪಲಿಲ್ಲ. ಕೈಗಾರಿಕಾ ಬೆಳವಣಿಗೆ ಮುಂತಾದವನ್ನು ಮಾಲ್ತೂಸ್ ಭವಿಷ್ಯದ ಬೆಳವಣಿಗೆ ಬಗೆಗೆ ಮನಗಾಣಲಿಲ್ಲ ಎಂದು ವಾದಿಸಿದ್ದು ಅಧ್ಯಯನಕ್ಕೆ ಯೋಗ್ಯವಾದ ವಿಷಯ.

೨೦೨೧ರಲ್ಲಿ ರಿಜಿಸ್ಟ್ರಾರ್ ಆಫ್ ಜನರಲ್ ಸೆನ್ಸಸ್ ಕಮೀಷನ್ ಬಿಡುಗಡೆ ಮಾಡಿದ ಸ್ಯಾಂಪಲ್ ಸಮೀಕ್ಷೆಯ ಪ್ರಕಾರ, ದಕ್ಷಿಣದ ಐದು ರಾಜ್ಯಗಳಲ್ಲಿನ ಮಹಿಳೆಯ ಸಂತಾನಶಕ್ತಿ ಅಥವಾ ಫಲವಂತಿಕೆ ಪ್ರಮಾಣವು ಶೇ. ೧. ೬ ಮತ್ತು ಶೇ. ೧. ೫ಕ್ಕೆ ಇಳಿದಿದೆ. ಜನಸಂಖ್ಯೆ ಪ್ರಮಾಣದ ಸಮತೋಲನವನ್ನು ಕಾಪಾಡಿಕೊಳ್ಳಲು ಮಹಿಳೆಯ ಫಲವಂತಿಕೆ ಪ್ರಮಾಣವು ಶೇ. ೨. ೧ ಇರಬೇಕೆನ್ನುವುದು ಭಾರತದ ಜನಸಂಖ್ಯೆಯ ನೀತಿ. ಈ ವರದಿಯ ಪ್ರಕಾರ ತಮಿಳುನಾಡಿನಲ್ಲಿ ಮಹಿಳೆಯ ಫಲವಂತಿಕೆ ಶೇ. ೧. ೮ರಿಂದ ಶೇ. ೧. ೫ಕ್ಕೆ ಇಳಿದಿದೆ. ಆಂಧ್ರದಲ್ಲಿ ಶೇ. ೨. ೧೦ರಿಂದ ಶೇ. ೧. ೫ಕ್ಕೆ ಇಳಿದಿದೆ. ಕರ್ನಾಟಕದಲ್ಲಿ ಶೇ. ೧. ೬ರಿಂದ ಶೇ. ೧. ೫ಕ್ಕೆ ಇಳಿದಿದೆ. ತೆಲಂಗಾಣದಲ್ಲಿ ಶೇ. ೧. ೮೨ರಿಂದ ಶೇ. ೧. ೬ಕ್ಕೆ ಕುಸಿದಿದೆ. ಕೇರಳದಲ್ಲಿ ಶೇ. ೧. ೭ರಿಂದ ಶೇ. ೧. ೬ಕ್ಕೆ ಕುಸಿತ ಕಂಡು ಬಂದಿದೆ. ಅಚ್ಚರಿ ಎಂದರೆ ದೇಶದಲ್ಲೇ ಎಲ್ಲ ನೈಸರ್ಗಿಕ ಸಂಪನ್ಮೂಲಗಳಿದ್ದರೂ ಕಿತ್ತು ತಿನ್ನುತ್ತಿರುವ ಬಡತನದ ಬಿಹಾರದಲ್ಲಿ ಮಹಿಳೆಯರ ಫಲವಂತಿಕೆ ಹೆಚ್ಚಾಗಿದ್ದು ಉತ್ತರ ಭಾರತದ ರಾಜ್ಯಗಳ ಜನಸಂಖ್ಯೆ ಪ್ರಮಾಣವು ಏರುಮುಖವಾಗಿದೆ. ಬಿಹಾರದಲ್ಲಿ ಮಹಿಳೆಯ ಫಲವಂತಿಕೆ ಪ್ರಮಾಣವು ಶೇ. ೩. ೦ ಇದ್ದರೆ ಉತ್ತರ ಪ್ರದೇಶದಲ್ಲಿ ಅದರ ಪ್ರಮಾಣ ಶೇ. ೨. ೭, ಮಧ್ಯ ಪ್ರದೇಶದಲ್ಲಿ ಶೇ. ೨. ೬ ಜಾರ್ಖಂಡ್ ಮತ್ತು ರಾಜಸ್ತಾನದಲ್ಲಿ ಕ್ರಮವಾಗಿ ಶೇ. ೨. ೩ ಫಲವಂತಿಕೆ ಮಹಿಳೆಯರಲ್ಲಿದೆ.

ಉತ್ತರ ಮತ್ತು ದಕ್ಷಿಣ ರಾಜ್ಯಗಳಲ್ಲಿನ ಈ ಏರುಪೇರಿಗೆ ಜನರಲ್ಲಿರುವ ಸಾಕ್ಷರತೆ, ಶಿಕ್ಷಣ, ಸಾಮಾಜಿಕ ಪರಿಸ್ಥಿತಿಯ ಅರಿವು ಮತ್ತು ಆರ್ಥಿಕ ಪರಿಸ್ಥಿತಿಗೆ ತಕ್ಕಂತೆ ಪ್ರತಿಯೊಬ್ಬರೂ ತಮ್ಮ ವೈಯಕ್ತಿಕ ಜೀವನದಲ್ಲಿ ಅಳವಡಿಸಿಕೊಂಡು ಬಂದಿರುವ ಕೌಟುಂಬಿಕ ಶಿಸ್ತು ಪ್ರಮುಖ ಕಾರಣ ಎಂದು ಜನಸಂಖ್ಯೆ ಸಮೀಕ್ಷೆಯಲ್ಲಿ ಅಭಿಪ್ರಾಯಪಡಲಾಗಿದೆ.

ಜನಸಂಖ್ಯೆ ನಿಯಂತ್ರಣದ ಬಗೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸರಿಯಾಗಿ ಗಮನವಹಿಸಬೇಕು. ದೇಶದ ಒಂದು ಭಾಗದಲ್ಲಿ ಜನಸಂಖ್ಯೆಯು ಮಿತಿಮೀರಿ ಬೆಳೆಯುವುದು, ಮತ್ತೊಂದು ಭಾಗದಲ್ಲಿ ಜನಸಂಖ್ಯೆಯ ಪ್ರಮಾಣದಲ್ಲಿ ಕುಸಿತ ಕಂಡು ಬಂದಿರುವುದು ಸಾಮಾಜಿಕ ಮತ್ತು ಆರ್ಥಿಕ ಏರುಪೇರಿಗೆ ಕಾರಣವಾಗುತ್ತದೆ. ಜನಸಂಖ್ಯೆ ಕುಸಿತ ಕಂಡು ಬಂದಿರುವ ದಕ್ಷಿಣ ರಾಜ್ಯಗಳಲ್ಲಿ ದುಡಿಯುವ ಕೈಗಳು ಕಡಿಮೆ ಆಗುವ ಪರಿಣಾಮ ಆಯಾ ರಾಜ್ಯಗಳ ಅಭಿವೃದ್ಧಿಯ ಮೇಲೆ ದುಷ್ಪರಿಣಾಮ ಬೀರಲಿದೆ. ಹೆಚ್ಚು ಜನಸಂಖ್ಯೆ ಹೊಂದಿರುವ ಉತ್ತರ ಭಾರತದ ಜನರು ಹೊಟ್ಟೆಪಾಡಿಗಾಗಿ ದಕ್ಷಿಣ ರಾಜ್ಯಗಳಿಗೆ ಉದ್ಯೋಗ ಹುಡುಕಲು ವಲಸೆ ಪ್ರಮಾಣ ಹೆಚ್ಚಾಗಲಿದೆ ಎನ್ನುವ ಎಚ್ಚರವನ್ನು ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಮುಂದಾಲೋಚನೆಯಲ್ಲಿ ಕಾಣಬಹುದಾಗಿದೆ.

 

ಆಂದೋಲನ ಡೆಸ್ಕ್

Recent Posts

ಮೆಲೊಡಿ ಖಾವೋ ; ಕುಚ್‌ ಜಾನ್‌ ಜಾವೋ!

ರಾಜಾರಾಂ ತಲ್ಲೂರು ಬೆಳಿಗ್ಗೆ ಎದ್ದ ತಕ್ಷಣ ಹಲ್ಲು ತಿಕ್ಕಿ ಮುಖ ತೊಳೆಯಬೇಕು ಎಂದು ದೇಶದ ಸಂವಿಧಾನದಲ್ಲಿ ಬರೆದಿದೆಯೇನ್ರಿ? . .…

2 hours ago

ಭಾನುವಾರದ ಹಾಡುಪಾಡು | ಈ ಮೋಹ, ಈ ಬಯಕೆ ಮತ್ತು ಇದೆಲ್ಲಾ ಯಾಕೆ ಹೀಗೆ?

ಮೋಹಿತ್‌ ಎಸ್‌ ಗೌಡ ನಾನು ಪ್ರಾಥಮಿಕ ಶಾಲೆಯಲ್ಲಿ ಓದುವಾಗ ಪರೀಕ್ಷೆಯ ಪ್ರಶ್ನೆಪತ್ರಿಕೆಗಳಲ್ಲಿ ‘ಲಿಂಗ ಬದಲಿಸಿ ಬರೆಯಿರಿ’ ಅಥವಾ ‘ವಿರುದ್ಧ ಪದ…

2 hours ago

ಭಾನುವಾರದ ಹಾಡುಪಾಡು | ಒಂದು ಸುಂದರ ಸಂಸಾರ ಮುರಿದುಹೋದ ಕಥೆ

ರೇಣುಕಾ ನಿಡಗುಂದಿ  ಕಾಲೇಜಿನ ದಿನಗಳಲ್ಲಿ ಅವರಿಬ್ಬರೂ ಭೇಟಿಯಾದಾಗಲೇ ಆಕೆ ತಾನು ಬೈ ( Bisexual) ಎಂದು ಹೇಳಿಕೊಂಡಿದ್ದಳು. ಹೊಸತಲೆಮಾರಿನ ಹುಡುಗ…

2 hours ago

ಒಬ್ಬ ಹುಡುಗ ಯಾವ ಕಾರಣಕ್ಕೆ ʼಗೇʼ ಆಗುತ್ತಾನೆ?

ವಸುಧೇಂದ್ರ ಹುಡುಗನೊಬ್ಬನಿಗೆ ಮತ್ತೊಬ್ಬ ಹುಡುಗನ ಮೇಲೆ ಅದು ಹೇಗೆ ಆಕರ್ಷಣೆ ಮೂಡುತ್ತದೆ? ಅದು ಅವನ ಆಯ್ಕೆಯೆ? ಕಲಿತ ದುಶ್ಚಟವೆ? ವಿಷಮ…

2 hours ago

ಮ.ಬೆಟ್ಟ | ಬಾಲಕನ ಮೇಲೆ ದಾಳಿ ಮಾಡಿದ್ದ ಚಿರತೆ ಸೆರೆ

ಹನೂರು : ಶ್ರೀ ಕ್ಷೇತ್ರ ನಾಗಮಲೆಗೆ ತೆರಳುತ್ತಿದ್ದ ಬಾಲಕನ ಮೇಲೆ ದಾಳಿ ಮಾಡಿ ಸಾವಿಗೆ ಕಾರಣವಾಗಿದ್ದ ಚಿರತೆಯನ್ನು ಸೆರೆ ಹಿಡಿಯುವಲ್ಲಿ…

4 hours ago

ಶ್ವೇತಭವನದ ಸಮೀಪ ಗುಂಡಿನ ಚಕಮಕಿ : ಬಂದೂಕುಧಾರಿಯ ಹತ್ಯೆ

ವಾಷಿಂಗ್ಟನ್‌ : ಅಮೆರಿಕದ ಶ್ವೇತ ಭವನದ ಭದ್ರತಾ ತಪಾಸಣಾ ಕೇಂದ್ರದ ಬಳಿ ಶನಿವಾರ ಸಂಜೆ ಭೀಕರ ಗುಂಡಿನ ದಾಳಿ ನಡೆದಿದ್ದು…

4 hours ago