ರಾಜ್ಯ

​ಮೈಸೂರು ವಿ.ವಿ | ಸಂಶೋಧಕರ ಶಿಷ್ಯವೇತನ ಬಿಕ್ಕಟ್ಟು ಬಗೆಹರಿಸಿದ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ

ಬೆಂಗಳೂರು : ಮೈಸೂರು ವಿಶ್ವವಿದ್ಯಾನಿಲಯದಲ್ಲಿ 2026-27ನೇ ಸಾಲಿನಲ್ಲಿ ಸಂಶೋಧನೆ ಕೈಗೊಂಡಿರುವ ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡದ (ST) ಸಂಶೋಧನಾ ವಿದ್ಯಾರ್ಥಿಗಳ ಶಿಷ್ಯವೇತನದ (ಸ್ಕಾಲರ್ಶಿಪ್) ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ನಗರಾಭಿವೃದ್ಧಿ ಸಚಿವರಾದ ಡಾ.ಯತೀಂದ್ರ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಮಹತ್ವದ ಅಧಿಕಾರಿಗಳ ಸಭೆ ಜರುಗಿತು.

​ಸಚಿವರ ಗೃಹ ಕಛೇರಿ “ಕಾವೇರಿ”ಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ವಿದ್ಯಾರ್ಥಿಗಳ ಪ್ರಮುಖ ಬೇಡಿಕೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದ ಸಚಿವರು, ಈ ಸಮಸ್ಯೆಯನ್ನು ತಕ್ಷಣವೇ ಬಗೆಹರಿಸಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

​ತಲಾ 58 ವಿದ್ಯಾರ್ಥಿಗಳಿಗೆ ಹಂಚಿಕೆ
​ಪ್ರವೇಶ ಪರೀಕ್ಷೆಯಲ್ಲಿ (ಎಂಟ್ರೆನ್ಸ್) ಉತ್ತೀರ್ಣರಾಗಿರುವ ಒಟ್ಟು 116 ವಿದ್ಯಾರ್ಥಿಗಳಿಗೂ ಪ್ರವೇಶಾತಿ ನೀಡಬೇಕು ಎಂದು ಸಚಿವರು ಅಧಿಕಾರಿಗಳಿಗೆ ತಿಳಿಸಿದರು.

ಆದರೆ, ಮಂಡ್ಯ ಮತ್ತು ಚಾಮರಾಜನಗರ ವಿಶ್ವವಿದ್ಯಾಲಯಗಳು ಪ್ರತ್ಯೇಕಗೊಂಡಿರುವುದರಿಂದ ಮೈಸೂರು ವಿಶ್ವವಿದ್ಯಾಲಯಕ್ಕೆ ಆರ್ಥಿಕ ಸಂಪನ್ಮೂಲಗಳ ಕೊರತೆ ಎದುರಾಗಿದೆ. ಈ ಕಾರಣದಿಂದಾಗಿ ಇಷ್ಟೊಂದು ದೊಡ್ಡ ಮಟ್ಟದ ಆರ್ಥಿಕ ಹೊರೆಯನ್ನು ಸಂಪೂರ್ಣವಾಗಿ ಭರಿಸಲು ಹಾಗೂ ಇಷ್ಟು ಸಂಖ್ಯೆಯ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ನೀಡಲು ವಿಶ್ವವಿದ್ಯಾಲಯಕ್ಕೆ ಸಾಧ್ಯವಾಗುವುದಿಲ್ಲ ಎಂದು ಮೈಸೂರು ವಿ.ವಿ ಕುಲಪತಿಗಳು ಸಭೆಯಲ್ಲಿ ಅಸಹಾಯಕತೆ ವ್ಯಕ್ತಪಡಿಸಿದರು.

​ಇದಕ್ಕೆ ಪರ್ಯಾಯ ಮಾರ್ಗ ಸೂಚಿಸಿದ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರು, ಒಟ್ಟು ವಿದ್ಯಾರ್ಥಿಗಳಲ್ಲಿ 58 ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಹಾಗೂ ಉಳಿದ 58 ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದ ವತಿಯಿಂದ ಸ್ಕಾಲರ್ಶಿಪ್ ಹಂಚಿಕೆ ಮಾಡಿ ನೀಡುವಂತೆ ಜಂಟಿ ತೀರ್ಮಾನಕ್ಕೆ ಬರಲು ಸೂಚಿಸಿದರು. ಸಚಿವರ ಈ ಸೂಕ್ತ ನಿರ್ಧಾರಕ್ಕೆ ಸಮಾಜ ಕಲ್ಯಾಣ ಇಲಾಖೆ ಮತ್ತು ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಗಳು ಪೂರಕವಾಗಿ ಪ್ರತಿಕ್ರಿಯಿಸಿದರು.

​ಮಾರ್ಗದರ್ಶಕರು ಸಾಮರ್ಥ್ಯ ಮೀರಿ ವಿದ್ಯಾರ್ಥಿಗಳ ಆಯ್ಕೆ ; ಸಚಿವರ ಕಿವಿಮಾತು
​ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ಹಾಗೂ ಸಂಶೋಧಕ ವಿದ್ಯಾರ್ಥಿಗಳ ಸಂಘದ ಮುಖಂಡರೊಂದಿಗೆ ಮಾತನಾಡಿದ ಸಚಿವರು, “ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಗೈಡ್‌ಗಳು (ಮಾರ್ಗದರ್ಶಕರು) ತಮ್ಮ ಸಾಮರ್ಥ್ಯ ಮೀರಿ ವಿದ್ಯಾರ್ಥಿಗಳನ್ನು ಸಂಶೋಧನೆಗೆ ತಗೆದುಕೊಂಡಿದ್ದಾರೆ. ಆ ಕಾರಣದಿಂದಾಗಿಯೇ ಪ್ರಸ್ತುತ ಈ ಸಮಸ್ಯೆ ಉದ್ಭವಿಸಿದೆ. ಮುಂದಿನ ವರ್ಷಗಳಲ್ಲಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಆದ್ದರಿಂದ ವಿದ್ಯಾರ್ಥಿಗಳು ಸಹ ಪರಿಸ್ಥಿತಿಯನ್ನು ಅರ್ಥೈಸಿಕೊಂಡು ಸಹಕಾರ ನೀಡಬೇಕು” ಎಂದು ತಿಳಿಸಿದರು.

ಸಚಿವರ ಈ ಸಕಾಲಿಕ ಮಧ್ಯಸ್ಥಿಕೆ ಹಾಗೂ ಸೂಕ್ತ ನಿರ್ಧಾರದಿಂದಾಗಿ ಸಂಶೋಧಕ ವಿದ್ಯಾರ್ಥಿಗಳ ಶಿಷ್ಯವೇತನದ ಗೊಂದಲಕ್ಕೆ ಸುಖದಾಂತ್ಯ ಸಿಕ್ಕಂತಾಗಿದೆ. ಸಭೆಯಲ್ಲಿ ​ಉನ್ನತ ಶಿಕ್ಷಣ ಇಲಾಖೆಯ ಸರ್ಕಾರದ ಕಾರ್ಯದರ್ಶಿ ತುಳಸಿ ಮದ್ದಿನೇನಿ, ​ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಾದ ಮೋಹನ್ ರಾಜ್, ​ಮೈಸೂರು ವಿಶ್ವವಿದ್ಯಾಲಯದ ಕುಲಪತಿಗಳು ಡಾ. ಲೋಕನಾಥ್ ಸೇರಿದಂತೆ ​ಮತ್ತಿತರರು ಉಪಸ್ಥಿತರಿದ್ದರು.

ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

Recent Posts

ಓದುಗರ ಪತ್ರ: ಅರಳುವ ಪ್ರತಿಭೆಗಳಿಗೆ ಸಮಯ ಹೆಚ್ಚು ಸಿಗಲಿ

ಖ್ಯಾತನಾಮರಿಗೆ ವೇದಿಕೆಯ ಕಾರ್ಯಕ್ರಮದಲ್ಲಿ ಸ್ವಲ್ಪ ಕಡಿಮೆ ಸಮಯ ದೊರೆತರೂ ಪರವಾಗಿಲ್ಲ. ಅರಳುವ ಪ್ರತಿಭೆಗಳಿಗೆ ಸಾಕಷ್ಟು ಸಮಯ ಸಿಗಬೇಕೆಂಬ ಆಶಯ ಇರಬೇಕೆಂದು…

1 hour ago

ಅಗಲಿದ ದೃಶ್ಯಬ್ರಹ್ಮ ಸಿಂಗೀತಂ, ‘ನಟಸಮ್ರಾಟ್’ ನಾನಾ

ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ   ಜಲಸಂರಕ್ಷಣೆಯ ಬೃಹತ್ ಕ್ರಾಂತಿಯನ್ನೇ ಮಾಡಿದ ಪಾಟೇಕರ್ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಕೆಲವೊಮ್ಮೆ ಕಾಲವು ತರುವ…

1 hour ago

ಮಹಾಲಯ ಅಮಾವಾಸ್ಯೆಗೆ ಮ.ಬೆಟ್ಟ ಸಜ್ಜು

ಮಹಾದೇಶ್ ಎಂ.ಗೌಡ ೩ ದಿನಗಳ ಜಾತ್ರೆಗೆ ಲಕ್ಷಾಂತರ ಭಕ್ತರ ಆಗಮನ ನಿರೀಕ್ಷೆ; ಪ್ರಾಧಿಕಾರದಿಂದ ಸಕಲ ಸಿದ್ಧತೆ  ಹನೂರು: ಮಹಾಲಯ ಅಮಾವಾಸ್ಯೆ…

2 hours ago

ಮಹೇಂದ್ರನ ಸುತ್ತ ಅನುಮಾನದ ಹುತ್ತ!

ಚಿರಂಜೀವಿ ಸಿ.ಹುಲ್ಲಹಳ್ಳಿ ಕಬಿನಿ ಕಿಂಗ್ ಮಹೇಂದ್ರ ತಾಲೀಮು ಅರ್ಧಕ್ಕೆ ಮೊಟಕು ಆತಂಕದಲ್ಲಿ ದಸರಾ ಗಜಪಡೆಯ ಅಭಿಮಾನಿಗಳು ಮೈಸೂರು: ಮಹಾಭಾರತದ ಭೀಮನ…

2 hours ago

ನಲ್ಲೂರು ಅಮಾನಿ ಕೆರೆಗೆ ಹರಿದು ಬಂದ ನೀರು

ಮಹೇಂದ್ರ ಹಸಗೂಲಿ ಗುಂಡ್ಲುಪೇಟೆ ವ್ಯಾಪ್ತಿಯಲ್ಲಿ ಕೃಪೆ ತೋರಿದ ವರುಣ ಮಳೆ ಮುಂದುವರಿದರೆ ತಾಲ್ಲೂಕಿನ ದೊಡ್ಡ ಕೆರೆ ತುಂಬುವುದು ಖಚಿತ  ಗುಂಡ್ಲುಪೇಟೆ:…

2 hours ago

ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಲು ಯತ್ನಿಸಿದ್ದರು: ಸಿಎಂ ಡಿಕೆಶಿ ಬಾಂಬ್

ಬೆಂಗಳೂರು: ತಮ್ಮ ವಿರುದ್ಧವೂ ಸ್ಟಿಂಗ್ ಆಪರೇಷನ್ ನಡೆಸಲು ಸಂಚು ರೂಪಿಸಲಾಗಿತ್ತು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.…

16 hours ago