ಅಂಕಣ

ಹಿಜಾಬ್‌ ವಿವಾದ : ಹೊಸ ಆದೇಶ ಸಕಾರಾತ್ಮಕ ಬೆಳವಣಿಗೆಗೆ ಸಹಾಯ

ಸಂವಿಧಾನಾತ್ಮಕ ಹಕ್ಕು ಅನುಷ್ಠಾನದಲ್ಲಿ ಎಚ್ಚರಿಕೆ ಅಗತ್ಯ

  • ನಿರಂಜನಾರಾಧ್ಯ ವಿ.ಪಿ.ಅಭಿವೃದ್ಧಿ ಶಿಕ್ಷಣ ತಜ್ಞ

ಹಿಂದೆ ೨೦೨೨ರಲ್ಲಿ ಹಿಜಾಬ್ ನಿಷೇಧಿಸಿ ಬಿಜೆಪಿ ನೇತೃತ್ವದ ಸರ್ಕಾರ ಹೊರಡಿಸಿದ್ದ ಆದೇಶವನ್ನು ಈಗಿನ ಸರ್ಕಾರ ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆದಿದ್ದು ಹೊಸ ಆದೇಶವನ್ನು ಹೊರಡಿಸಿದೆ. ಈ ಆದೇಶವು ವಿದ್ಯಾರ್ಥಿಗಳು ಸಾಂಪ್ರದಾಯಿಕ ಹಾಗೂ ನಂಬಿಕೆ ಆಧಾರಿತ ಸಂಕೇತಗಳಾದ ಪೇಟ/ಟರ್ಬನ್, ಜನಿವಾರ/ಪವಿತ್ರದಾರ, ಶಿವದಾರ, ರುದ್ರಾಕ್ಷಿ, ತಲೆವಸ/ಹಿಜಾಬ್ ಅಥವಾ ಇತರೆ ಯಾವುದೇ ಸಮಾನ ಸ್ವರೂಪದ ಸಾಂಪ್ರದಾಯಿಕ ಹಾಗೂ ಪದ್ಧತಿ ಆಧಾರಿತ ಸಂಕೇತಗಳನ್ನು ಉಪಯೋಗಿಸಲು ಅನುಮತಿಸಿದೆ. ಇದೇ ಸಂದರ್ಭದಲ್ಲಿ ಸರ್ಕಾರ ಇದಾವುದು ಶಿಸ್ತು, ಸುರಕ್ಷತೆ ಮತ್ತು ವಿದ್ಯಾರ್ಥಿಯ ಗುರುತಿಸುವಿಕೆಗೆ ಅಡ್ಡಿಯಾಗಬಾರದೆಂಬ ಸೂಕ್ಷ್ಮ ಎಚ್ಚರಿಕೆಯನ್ನೂ ಹೇಳಿದೆ. ಸರ್ಕಾರದ ಈ ಆದೇಶ ವಿದ್ಯಾರ್ಥಿಗಳ ಶೈಕ್ಷಣಿಕ ದೃಷ್ಟಿಯಿಂದ ಸ್ವಾಗತಾರ್ಹ ಮತ್ತು ಸಾಂವಿಧಾನಿಕವಾಗಿ ತಾರತಮ್ಯ ರಹಿತ ನಿರ್ಧಾರವಾಗಿದೆ.

ವಿವಾದದ ಸಂಕ್ಷಿಪ್ತ ಹಿನ್ನೆಲೆ
ಈ ವಿವಾದದ ಸಂಕ್ಷಿಪ್ತ ಇತಿಹಾಸ ವನ್ನುನೋಡುವುದಾದರೆ, ಡಿಸೆಂಬರ್ ೨೦೨೧ರಲ್ಲಿ ಉಡುಪಿಯ ಸರ್ಕಾರಿ ಪದವಿಪೂರ್ವ ಕಾಲೇಜಿನ ಕೆಲವು ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್ ಆಧರಿಸಿ ತರಗತಿಗೆ ಪ್ರವೇಶ ನಿರಾಕರಿಸಲಾಯಿತು. ಕಾಲೇಜು ಆಡಳಿತ ಮಂಡಳಿ ‘ಸಮವಸ್ತ್ರ ನೀತಿ‘ ಕಾರಣ ನೀಡಿತು. ವಿದ್ಯಾರ್ಥಿನಿಯರು ಪ್ರತಿಭಟನೆ ಆರಂಭಿಸಿದರು. ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ, ಕರ್ನಾಟಕ ಶಿಕ್ಷಣ ಕಾಯ್ದೆ ೧೯೮೩ರ ಸೆಕ್ಷನ್೧೩೩ರ ಅನ್ವಯ ಲಭ್ಯವಿರುವ ಅಧಿಕಾರವನ್ನು ಬಳಸಿಕೊಂಡು ೨೦೨೨ರ ಫೆಬ್ರವರಿ ೫ರಂದು ಸರ್ಕಾರಿ ಆದೇಶ ಹೊರಡಿಸಿತ್ತು. ‘ಸಮಾನತೆ, ಸಮಗ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರುವ ಯಾವುದೇ ಉಡುಗೆ’ಗೆ ಅವಕಾಶ ಇಲ್ಲ’ ಎಂದಿತು. ಹಿಜಾಬ್ ಪದವನ್ನು ನೇರವಾಗಿ ಬಳಸದಿದ್ದರೂ, ಆದೇಶ ಹಿಜಾಬ್ ನಿಷೇಧಕ್ಕೆ ಕಾರಣವಾಯಿತು.

ರಾಜ್ಯಾದ್ಯಂತ ಹರಡಿದ ಸಂಘರ್ಷ:
ಈ ಹೋರಾಟ ಉಡುಪಿಯಿಂದ ಚಿಕ್ಕಮಗಳೂರು, ಮಂಡ್ಯ, ಕೊಡಗು, ಬಾಗಲಕೋಟೆ, ಬೆಳಗಾವಿ, ಶಿವಮೊಗ್ಗ ಸೇರಿದಂತೆ ಹಲವು ಜಿಲ್ಲೆಗಳ ಕಾಲೇಜುಗಳಿಗೆ ಹಬ್ಬಿತು. ಹಿಜಾಬ್ ವಿರೋಧಿಸಿ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಪ್ರತಿಭಟನೆ ಮಾಡಿದರು. ಮಂಡ್ಯದಲ್ಲಿ ಬುರ್ಖಾ ಧರಿಸಿದ ವಿದ್ಯಾರ್ಥಿನಿಯನ್ನು ಕೇಸರಿ ಶಾಲುಧಾರಿಗಳು ಸುತ್ತುವರಿದ ಘಟನೆಯೂ ನಡೆಯಿತು. ಕಲ್ಲು ತೂರಾಟವೂ ವರದಿಯಾಯಿತು. ಸರ್ಕಾರ ಮೂರು ದಿನಗಳ ಶಾಲಾ-ಕಾಲೇಜು ಬಂದ್ ಮಾಡಿತು.

ಕಾನೂನು ಹೋರಾಟ
ಈ ವಿಷಯ ಕುರಿತಂತೆ ವಿದ್ಯಾರ್ಥಿಗಳು ಕಾನೂನು ಹೋರಾಟದ ಮೊರೆ ಹೋದರು. ವಿದ್ಯಾರ್ಥಿನಿಯರು ಸಂವಿಧಾನದ ೧೪, ೧೯, ೨೫ನೇ ವಿಧಿಯಡಿ ಮೂಲಭೂತ ಹಕ್ಕು ಎಂದು ೨೦೨೨ರ ಮಾರ್ಚ್‌ನಲ್ಲಿ ಅರ್ಜಿ ಹಾಕಿದರು. ಆದರೆ ಇದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ‘ಹಿಜಾಬ್‌ಇಸ್ಲಾಂನ ಅತ್ಯಗತ್ಯ ಧಾರ್ಮಿಕ ಆಚರಣೆ ಅಲ್ಲ’ ಎಂದು ತೀರ್ಪು ನೀಡಿ ನಿಷೇಧ ಎತ್ತಿಹಿಡಿಯಿತು. ಶಿಕ್ಷಣ ಸಂಸ್ಥೆಗಳಿಗೆ ಸಮವಸ್ತ್ರ ಜಾರಿ ಮಾಡುವ ಅಧಿಕಾರ ಇದೆ ಎಂದಿತು.

ನಂತರ ವಿದ್ಯಾರ್ಥಿಗಳು ಕರ್ನಾಟಕ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋದರು. ೨೦೨೨ರ ಅಕ್ಟೋಬರ್‌ನಲ್ಲಿ ಸುಪ್ರೀಂ ಕೋರ್ಟ್ ನ ಇಬ್ಬರು ನ್ಯಾಯಾಧೀಶರ ಪೀಠ ಭಿನ್ನ ತೀರ್ಪು ನೀಡಿತು. ನ್ಯಾ. ಹೇಮಂತ್ ಗುಪ್ತ ರವರು ‘ಜಾತ್ಯತೀತ ಶಾಲೆಗಳಲ್ಲಿ ಧಾರ್ಮಿಕ ಚಿಹ್ನೆ ಬೇಡ. ಸಮವಸ್ತ್ರ ಸಮಾನತೆ ತರುತ್ತದೆ’ ಎಂದರೆ, ನ್ಯಾ. ಸುಧಾಂಶು ಧುಲಿಯಾ ‘ಜಾತ್ಯತೀತತೆ ಎಂದರೆ ವೈವಿಧ್ಯತೆಗೆ ಸಹನೆ. ಹಿಜಾಬ್ ಧರಿಸುವುದು ಆಯ್ಕೆಯ ವಿಷಯ’ ಎಂದರು. ಈಗ ಮೊಕದ್ದಮೆ ಹೆಚ್ಚುವರಿ ಪೀಠದ ಮುಂದೆ ಸಂವಿಧಾನಾತ್ಮಕ ಚರ್ಚೆಯ ಭಾಗವಾಗಿ ವಿಚಾರಣೆಯ ಹಂತದಲ್ಲಿದೆ.

ಹೊಸ ಆದೇಶ
ಈಗ ಮತ್ತೊಮ್ಮೆ ಹಿಂದಿನ ಮಾರ್ಗಸೂಚಿಯನ್ನು ಆದೇಶ ವನ್ನುರದ್ದುಪಡಿಸಿ ಹೊಸ ಮಾರ್ಗಸೂಚಿ ಆದೇಶ ಹೊರಡಿಸಿರುವ ಸರ್ಕಾರ ಸಮವಸ್ತ್ರದ ಮೂಲ ಉದ್ದೇಶಕ್ಕೆ ಧಕ್ಕೆಯಾಗದಂತೆ ಹಿಜಾಬ್ ಸೇರಿ ಹಲವು ಧಾರ್ಮಿಕ ಸಂಪ್ರದಾಯ ಅನುಸರಿಸಲು ಅನುಮತಿ ನೀಡಿದೆ. ಮೇ ೧೩, ೨೦೨೬ರಂದು ಕರ್ನಾಟಕ ಸರ್ಕಾರ ಹೊರಡಿಸಿರುವ ಹೊಸ ಆದೇಶದ ಪ್ರಕಾರ, ವಿದ್ಯಾರ್ಥಿಗಳು ಸಮವಸ್ತ್ರದ ಜೊತೆಗೆ ‘ಪೇಟ /ಟರ್ಬನ್, ಜನಿವಾರ/ಪವಿತ್ರದಾರ, ಶಿವದಾರ, ರುದ್ರಾಕ್ಷಿ, ತಲೆವಸ/ಹಿಜಾಬ್ ಅಥವಾ ಇತರೆ ಯಾವುದೇ ಸಮಾನ ಸ್ವರೂಪದ ‘ಸೀಮಿತ ಸಾಂಪ್ರದಾಯಿಕ ಮತ್ತು ಆಚರಣೆ-ಆಧಾರಿತ ಚಿಹ್ನೆಗಳನ್ನು’ ಧರಿಸಬಹುದು.

ಈ ಆದೇಶದ ೮ನೇ ಅಂಶ ಬಹಳ ಬಹುಮುಖ್ಯವೆನಿಸುತ್ತದೆ. ಅದರಂತೆ ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿ (ಎಸ್‌ಡಿಎಂಸಿ) ಮತ್ತು ಕಾಲೇಜು ಅಭಿವೃದ್ಧಿ ಮಂಡಳಿಗಳು ಯಾವುದೇ ವಿದ್ಯಾರ್ಥಿಯನ್ನು ‘ತಾರತಮ್ಯ ಧೋರಣೆಯಿಂದ, ಅವಮಾನಕಾರಿ ವರ್ತನೆಯ ಮೂಲಕ ಬಳಲುವಂತೆ ಮಾಡಬಾರದು’. ಬಸವಣ್ಣನವರ ವಿಶ್ವಮಾನವ ಸಂದೇಶದಂತೆ ʼಇವ ನಮ್ಮವʼ ಎಂಬ ಒಳಗೊಳ್ಳುವಿಕೆಯನ್ನು ಅಳವಡಿಸಿಕೊಳ್ಳಬೇಕು.

ಹಿಜಾಬ್‌ ಪ್ರಶ್ನೆಯನ್ನು ಬಂಧುತ್ವದ ನೆಲೆಯನ್ನು ನೋಡಬೇಕಿದೆ
ಸರ್ಕಾರದ ಈ ಆದೇಶವು ಶಾಲಾ-ಕಾಲೇಜುಗಳಲ್ಲಿ ಧಾರ್ಮಿಕ ಗುರುತು, ಸಮಾನತೆ, ಶಿಸ್ತು ಮತ್ತು ಸಂವಿಧಾನಾತ್ಮಕ ಹಕ್ಕುಗಳ ನಡುವಿನ ಸೂಕ್ಷ್ಮ ಸಮತೋಲನವನ್ನು ಮರು ಚರ್ಚೆಗೆ ತಂದಿದೆ. ಈ ಆದೇಶದಲ್ಲಿ ಸರ್ಕಾರವು ೨೦೨೨ರ ವಿವಾದಾತ್ಮಕ ಆದೇಶವನ್ನು ಹಿಂಪಡೆದು, ಶಾಲಾ ಅಭಿವೃದ್ಧಿ ಸಮಿತಿಗಳು, ಕಾಲೇಜು ಅಭಿವೃದ್ಧಿ ಸಮಿತಿಗಳು ಹಾಗೂ ಸಂಸ್ಥೆಗಳ ಆಡಳಿತ ಮಂಡಳಿಗಳಿಗೆ ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ಸಮವಸ್ತ್ರ ಮತ್ತು ಧಾರ್ಮಿಕ ಆಚರಣೆಗಳ ಕುರಿತು ತೀರ್ಮಾನ ಕೈಗೊಳ್ಳುವ ಅವಕಾಶ ನೀಡಿರುವುದು ಗಮನಾರ್ಹವಾಗಿದೆ. ಜೊತೆಗೆ, ವಿದ್ಯಾರ್ಥಿನಿಯರ ಶಿಕ್ಷಣದ ಹಕ್ಕು, ಧಾರ್ಮಿಕ ಸ್ವಾತಂತ್ರ್ಯ ಮತ್ತು ಸಾಮಾಜಿಕ ಸೌಹಾರ್ದತೆಯನ್ನು ಕಾಪಾಡುವ ಅಗತ್ಯವನ್ನೂ ಒತ್ತಿ ಹೇಳಲಾಗಿದೆ. ಈ ಹೊಸ ಆದೇಶದ ಹಲವು ಬಗೆಯ ಸಕಾರಾತ್ಮಕ ಬೆಳವಣಿಗೆಗೆ ಸಹಾಯವಾಗುತ್ತದೆ. ಅವುಗಳಲ್ಲಿ, ವಿದ್ಯಾರ್ಥಿನಿಯರು ಅನಗತ್ಯ ಕಾರಣಗಳಿಗಾಗಿ ಶಿಕ್ಷಣದಿಂದ ದೂರವಾಗುವ ಅಪಾಯ; ವಿದ್ಯಾರ್ಥಿಗಳ ನಡುವಿನ ಸಾಮರಸ್ಯ; ಸಮುದಾಯಗಳ ನಡುವೆ ವಿಶ್ವಾಸದ ಪುನರ್ ನಿರ್ಮಾಣಕ್ಕೆ; ಶೈಕ್ಷಣಿಕ ಸಂಸ್ಥೆಗಳಲ್ಲಿ ಸಂಘರ್ಷದ ವಾತಾವರಣವನ್ನು ತಗ್ಗಿಸುವ ಮತ್ತು ರಾಜ್ಯವು ವಿದ್ಯಾರ್ಥಿಗಳು ಹಾಗೂ ಸಮುದಾಯಗಳನ್ನು ಒಗ್ಗೂಡಿಸುವ ನಿಲುವು ತೆಗೆದುಕೊಂಡಿದೆ ಎಂಬ ಸಂದೇಶ ಇದರಲ್ಲಿ ಅಡಗಿದೆ.

ಇದೇ ಸಂದರ್ಭದಲ್ಲಿ ಕೆಳಹಂತದಲ್ಲಿ ಶಾಲಾ ಕಾಲೇಜುಗಳು ಈ ಆದೇಶವನ್ನು ಅತ್ಯಂತ ಎಚ್ಚರಿಕೆಯಿಂದ ಅನುಷ್ಠಾನಗೊಳಿಸುವ ಅಗತ್ಯವಿದೆ. ಕೆಲವು ರಾಜಕೀಯ ಪ್ರೇರಿತ ಶಿಕ್ಷಕರು-ವಿದ್ಯಾರ್ಥಿಗಳು ಇತರೆ ವಿದ್ಯಾರ್ಥಿಗಳನ್ನು ಪ್ರಚೋದಿಸಿ ಧಾರ್ಮಿಕ ಗುರುತುಗಳನ್ನು ರಾಜಕೀಯವಾಗಿ ಬಳಸಿಕೊಳ್ಳುವ ಪ್ರವೃತ್ತಿ ಹೆಚ್ಚಾಗಬಹುದು. ಶಿಕ್ಷಣ ಸಂಸ್ಥೆಗಳಲ್ಲಿ ಅದರಲ್ಲೂ ವಿಶೇಷವಾಗಿ ಕಾಲೇಜು ಹಂತದಲ್ಲಿ ಶಿಕ್ಷಣಕ್ಕಿಂತ ಮಿಗಿಲಾಗಿ ಕೋಮುವಾದಿ ರಾಜಕೀಯ ತಲೆದೋರಬಹುದು. ಆದ್ದರಿಂದ ಸರ್ಕಾರವು ಸ್ಪಷ್ಟ ಮಾರ್ಗಸೂಚಿಗಳನ್ನು ರೂಪಿಸಿ, ಯಾವುದೇ ವಿದ್ಯಾರ್ಥಿಯ ಶಿಕ್ಷಣ ಹಕ್ಕು ಹಾನಿಗೊಳಗಾಗದಂತೆ ನೋಡಿಕೊಳ್ಳಬೇಕು. ಶಿಕ್ಷಣ ಸಂಸ್ಥೆಗಳನ್ನು ದ್ವೇಷ ಬಿತ್ತುವ ಮತ್ತು ಸಾಮರಸ್ಯ ಹಾಳು ಮಾಡುವ ಕಾರ್ಯಗಳಿಗೆ ಬಳಸುವುದು ಕಂಡುಬಂದಲ್ಲಿ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಬೇಕು. ಶಾಲಾ-ಕಾಲೇಜುಗಳಲ್ಲಿ ಸಂವಾದ, ಸಂವಿಧಾನಾತ್ಮಕ ಮೌಲ್ಯಗಳು ಮತ್ತು ಪರಸ್ಪರ ಗೌರವದ ಸಂಸ್ಕ ತಿ ಬೆಳೆಸಬೇಕು. ಆಯಾ ಹಂತದಲ್ಲಿನ ನಿರ್ಧಾರ ಪ್ರಕ್ರಿಯೆಯಲ್ಲಿ ಪಾಲಕರು, ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಸಮುದಾಯ ಪ್ರತಿನಿಧಿಗಳ ಭಾಗವಹಿಸುವಿಕೆಯನ್ನು ಖಚಿತಪಡಿಸಬೇಕು. ಕಾನೂನು-ಸುವ್ಯವಸ್ಥೆ ಮತ್ತು ಸಾಮಾಜಿಕ ಸೌಹಾರ್ದತೆಯನ್ನು ಕಾಪಾಡಲು ರಾಜಕೀಯ ಧ್ರುವೀಕರಣವನ್ನು ದೂರವಿಡಬೇಕು. ಮುಖ್ಯವಾಗಿ, ಶಿಕ್ಷಣ ಸಂಸ್ಥೆಗಳ ಮೂಲ ಉದ್ದೇಶ ಮಕ್ಕಳ ಕಲಿಕೆ, ವೈಯಕ್ತಿಕ ಬೆಳವಣಿಗೆ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳ ನಿರ್ಮಾಣ ಎಂಬುದನ್ನು ಮರೆಯಬಾರದು. ಹಿಜಾಬ್ ಪ್ರಶ್ನೆಯನ್ನು ಗೆಲುವು-ಸೋಲಿನ ರಾಜಕೀಯ ಚರ್ಚೆಯಾಗಿ ನೋಡದೆ, ಸಂವಿಧಾನದ ಸಮಾನತೆ, ಸ್ವಾತಂತ್ರ್ಯ ಮತ್ತು ಬಂಧುತ್ವದ ಮೌಲ್ಯಗಳ ನೆಲೆಯಲ್ಲಿ ಸೂಕ್ಷ್ಮವಾಗಿ ನಿರ್ವಹಿಸಿದಾಗ ಮಾತ್ರ ಸಮಾಜದಲ್ಲಿ ದೀರ್ಘಕಾಲಿಕ ಶಾಂತಿ ಮತ್ತು ವಿಶ್ವಾಸ ನಿರ್ಮಾಣ ಸಾಧ್ಯವಾಗುತ್ತದೆ.

ಆಂದೋಲನ ಡೆಸ್ಕ್

Recent Posts

ಅಗತ್ಯ ಸುರಕ್ಷತಾ ಕ್ರಮಗಳೊಂದಿಗೆ ಬಂಡೀಪುರ-ನಾಗರಹೊಳೆ ಸಫಾರಿ ಆರಂಭಿಸಿ: ಸಿಎಂ ಡಿ.ಕೆ.ಶಿವಕುಮಾರ್‌ ಸೂಚನೆ

ಬೆಂಗಳೂರು: ಅಗತ್ಯ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಬಂಡೀಪುರ ಹಾಗೂ ನಾಗರಹೊಳೆ ಉದ್ಯಾನಗಳಲ್ಲಿ ಸಫಾರಿ ಆರಂಭಿಸಿ ಎಂದು ಸಿಎಂ ಡಿ.ಕೆ.ಶಿವಕುಮಾರ್‌…

4 hours ago

ವೆನೆಜುವೆಲಾ ಭೂಕಂಪ: ಮೃತರ ಸಂಖ್ಯೆ 1700ಕ್ಕೆ ಏರಿಕೆ

ವೆನೆಜುವೆಲಾ: ಇಲ್ಲಿ ಬುಧವಾರ ಸಂಜೆ ಸಂಭವಿಸಿದ ಎರಡು ಪ್ರಬಲ ಭೂಕಂಪಗಳಲ್ಲಿ ಮೃತಪಟ್ಟವರ ಸಂಖ್ಯೆ 1700ಕ್ಕೆ ಏರಿಕೆಯಾಗಿದೆ. ಈ ದುರಂತದಲ್ಲಿ 5000ಕ್ಕೂ…

5 hours ago

ರಾಜಸ್ಥಾನದಲ್ಲಿ ಪ್ಯಾರಾಮೆಡಿಕಲ್‌ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ: ನಾಲ್ವರು ಅರೆಸ್ಟ್‌

ಜೈಪುರ: ರಾಜಸ್ಥಾನ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಪ್ಯಾರಾಮೆಡಿಕಲ್‌ ಪರೀಕ್ಷೆಯಲ್ಲಿ ಸಾಮೂಹಿಕ ನಕಲು ನಡೆಯುತ್ತಿದ್ದ ವೇಳೆಯೇ ಪರೀಕ್ಷೆ ಹಾಲ್‌ ಮೇಲೆ ಪೊಲೀಸರು…

5 hours ago

ಎಸ್‌ಐಆರ್‌ ಬಗ್ಗೆ ಗಾಬರಿ ಬೇಡ: ಬಾನು ಮುಷ್ತಾಕ್‌

ಹಾಸನ: ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯು ಆರಂಭವಾಗಿದೆ. ಹಾಸನದಲ್ಲಿ ಬೂಕರ್‌ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್‌…

6 hours ago

ನಾಡಿನ ಖ್ಯಾತ ಕಲಾವಿದ ಕೆ.ಟಿ.ಶಿವಪ್ರಸಾದ್‌ ನಿಧನ

ಬೆಂಗಳೂರು: ನಾಡಿನ ಖ್ಯಾತ ಹಾಗೂ ಅಂತರಾಷ್ಟ್ರೀಯ ಖ್ಯಾತಿಯ ಕಲಾವಿದರಾದ, ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತ ‌ಕೆ.ಟಿ. ಶಿವಪ್ರಸಾದ್(77) ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.…

6 hours ago

ಕೈಕೊಟ್ಟ ಮುಂಗಾರು: 126 ವರ್ಷಗಳಲ್ಲೇ ಮೂರನೇ ಬಾರಿ ದೇಶದಲ್ಲಿ ಮಳೆ ಕೊರತೆ

ನವದೆಹಲಿ: ದೇಶದಲ್ಲಿ ಈ ಬಾರಿ ಮುಂಗಾರು ಮಳೆ ಸಂಪೂರ್ಣವಾಗಿ ಕೈಕೊಟ್ಟಿದ್ದು, ಕಳೆದ 126 ವರ್ಷಗಳ ಇತಿಹಾಸದಲ್ಲೇ ಜೂನ್‌ ತಿಂಗಳಿನಲ್ಲಿ ಮೂರನೇ…

7 hours ago