Andolana originals

ಪುನರುಜ್ಜೀವನಕ್ಕಾಗಿ ಕಾಯುತ್ತಿದೆ ಪುರಭವನ?

ಮೈಸೂರು : ಸಾಂಸ್ಕೃತಿಕ ನಗರದ ಹೃದಯ ಭಾಗದಲ್ಲಿ ರುವ ಐತಿಹಾಸಿಕ ರಂಗಾಚಾರ್ಲು ಪುರಭವನ ಇದೀಗ ನಿರ್ಲಕ್ಷ್ಯದ ಪರಿಣಾಮ ಶಿಥಿಲಾವಸ್ಥೆಯತ್ತ ಸಾಗುತ್ತಿದೆ.

ಸ್ವಾತಂತ್ರ್ಯ ಹೋರಾಟದಿಂದ ಹಿಡಿದು ಗೋಕಾಕ್ ಚಳವಳಿ, ರೈತರು, ದಲಿತರ ಹೋರಾಟ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳವರೆಗೆ ಅನೇಕ ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾದ ಪುರಭವನ ಈಗ ಪುನರುಜ್ಜೀವನಕ್ಕಾಗಿ ಕಾಯುತ್ತಿದೆ.

ಕಲಾಮಂದಿರ ನಿರ್ಮಾಣವಾಗುವ ಮೊದಲು ಮೈಸೂರಿನ ಬಹುತೇಕ ನಾಟಕ, ಸಂಗೀತ, ನೃತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೆಲ್ಲವೂ ಇದೇ ಭವನದಲ್ಲಿ ನಡೆಯುತ್ತಿದ್ದವು. ಹಲವು ಮಹನೀಯರು ಕಾಲಿಟ್ಟ ಈ ಕಟ್ಟಡವು ಮೈಸೂರಿನ ಸಾಂಸ್ಕೃತಿಕ ಹೆಗ್ಗುರುತಾಗಿಯೂ ಹೆಸರು ಪಡೆದಿತ್ತು. ಆದರೆ, ಇದೀಗ ಭವನದ ಸ್ಥಿತಿ ಶೋಚನೀಯವಾಗಿದೆ.

ವೇದಿಕೆಯ ಬಲಭಾಗದ ಕಾರಿಡಾರ್‌ನ ಮರದ ತಂಬೆಗಳು ದುರ್ಬಲಗೊಂಡಿದ್ದು, ಅವುಗಳಿಗೆ ಕಬ್ಬಿಣದ ಕಂಬಿಗಳನ್ನು ಆಸರೆಯಾಗಿ ನಿಲ್ಲಿಸಲಾಗಿದೆ. ಕಟ್ಟಡದ ಕೆಲ ಭಾಗಗಳು ಕುಸಿಯುವ ಭೀತಿಯೂ ಎದುರಾಗಿದೆ. ಹೀಗೆಯೇ ಮುಂದುವರಿದರೆ ಇಡೀ ಕಟ್ಟಡವೇ ಅಪಾಯಕ್ಕೀಡಾಗುವ ಆತಂಕ ವ್ಯಕ್ತವಾಗುತ್ತಿದೆ.

೧೮೮೪ರಲ್ಲಿ ದೊಡ್ಡಪೇಟೆ ಪ್ರದೇಶದ ಕಲ್ಯಾಣಿ ಮೈದಾನದಲ್ಲಿ ಶಾಶ್ವತ ರಂಗಮಂದಿರ ನಿರ್ಮಿಸಬೇಕೆಂಬ ಉದ್ದೇಶದಿಂದ ಸಾರ್ವಜನಿಕರ ದೇಣಿಗೆಯಲ್ಲಿ ಈ ಭವನ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. ಸುಮಾರು ೧೪೨ ವರ್ಷಗಳ ಇತಿಹಾಸ ಹೊಂದಿರುವ ಈ ಪಾರಂಪರಿಕ ಕಟ್ಟಡ ಮೈಸೂರಿನ ವಾಸ್ತುಶಿಲ್ಪ ವೈಭವಕ್ಕೂ ಸಾಕ್ಷಿಯಾಗಿದೆ. ಬೆಂಗಳೂರಿನ ಟೌನ್‌ಹಾಲ್ ನಿರ್ಮಾಣಕ್ಕೂ ಈ ಭವನವೇ ಮಾದರಿಯಾಗಿದೆ ಎನ್ನಲಾಗುತ್ತದೆ.

ಒಮ್ಮೆ ಹೂದೋಟಗಳಿಂದ ಕಂಗೊಳಿಸುತ್ತಿದ್ದ ಭವನದ ಆವರಣ ಈಗ ಅನೈರ್ಮಲ್ಯದ ಆಗರವಾಗಿದೆ. ಕೆಲವರು ಇಲ್ಲಿ ವಾಹನ ನಿಲುಗಡೆ ಮಾಡುತ್ತಿದ್ದು, ಕಟ್ಟಡ ಕಾಮಗಾರಿಗಳಿಗೆ ಬೇಕಾದ ಜಲ್ಲಿ, ಮರಳು ಸುರಿಯುವ ಸ್ಥಳವಾಗಿಯೂ ಬಳಕೆಯಾಗುತ್ತಿದೆ. ಶಾಂತಿ ವನವೆಂದು ಕರೆಯಲ್ಪಡುತ್ತಿದ್ದ ಭಾಗದಲ್ಲಿ ನಿರ್ಮಿಸಿರುವ ಸಾರ್ವಜನಿಕ ಶೌಚಾಲಯದ ಹಿಂಭಾಗದಲ್ಲಿ ಕಸ-ಕಡ್ಡಿಗಳ ರಾಶಿ ಕಂಡು ಬರುತ್ತಿದೆ.

ಒಳಾಂಗಣದಲ್ಲಿದ್ದ ಭವ್ಯತೆ ಕೂಡ ಈಗ ಮಂಕಾಗಿದೆ. ಸುರುಳಿ ಸುತ್ತುವ ಚಿತ್ರಿತ ಜಾರು ಪರದೆ, ಮರದ ವಿಶಾಲ ರಂಗಸ್ಥಳ, ಸೈಡ್ ವಿಂಗ್‌ಗಳು ಹಾಗೂ ಗ್ರೀನ್ ರೂಂಗಳು ಭವನದ ವಿಶೇಷವಾಗಿದ್ದವು. ೧೯೯೮ ಹಾಗೂ ೨೦೦೩-೦೪ರಲ್ಲಿ ನವೀಕರಣಗೊಂಡು ಆಸನ ಹಾಗೂ ಧ್ವನಿ ವ್ಯವಸ್ಥೆಯಲ್ಲಿ ಸುಧಾರಣೆ ಕಂಡಿದ್ದರೂ ಹಿಂದಿನ ವೈಭವ ಉಳಿದಿಲ್ಲ.

ಕನ್ನಡ ರಂಗಭೂಮಿಯ ಶತಮಾನೋತ್ಸವ ಕಾರ್ಯಕ್ರಮಕ್ಕೂ ಇದೇ ಪುರಭವನ ಸಾಕ್ಷಿಯಾಗಿತ್ತು. ಜಯಚಾಮರಾಜ ಒಡೆಯರ್, ಸಿ. ರಾಜಗೋಪಾಲಾಚಾರಿ, ಅಂಬಳೆ ವಿ. ಸುಬ್ರಹ್ಮಣ್ಯಂ, ಗುಬ್ಬಿ ವೀರಣ್ಣ, ಕೆ. ನಂದಿಬಸಪ್ಪ, ಎಂ. ಸಿ. ಮಹದೇವಸ್ವಾಮಿ ಸೇರಿದಂತೆ ಅನೇಕ ದಿಗ್ಗಜರು ಇಲ್ಲಿ ಭಾಗವಹಿಸಿದ್ದರು.

ರಂಗಾಚಾರ್ಲು ನೆನಪಿನ ಸ್ಮಾರಕ
೧೮೮೧ರಲ್ಲಿ ಬ್ರಿಟಿಷರು ಮೈಸೂರು ಸಂಸ್ಥಾನದ ಆಡಳಿತವನ್ನು ಮತ್ತೆ ಒಡೆಯರ್ ವಂಶಕ್ಕೆ ಹಸ್ತಾಂತರಿಸಿದಾಗ, ೧೦ನೇ ಚಾಮರಾಜ ಒಡೆಯರ್ ಅವರ ದಿವಾನರಾಗಿ ಸಿ.ವಿ. ರಂಗಾಚಾರ್ಲು ನೇಮಕಗೊಂಡರು. ಭೀಕರ ಬರಗಾಲದ ಪರಿಣಾಮ ಸಂಸ್ಥಾನವು ಸುಮಾರು ೮ ಲಕ್ಷ ರೂ. ಸಾಲದ ಹೊರೆ ಎದುರಿಸುತ್ತಿದ್ದ ಸಂದರ್ಭದಲ್ಲಿ ಆಡಳಿತ ಚಾತುರ್ಯದಿಂದ ಆರ್ಥಿಕ ಸ್ಥಿತಿಯನ್ನು ಸುಧಾರಿಸುವಲ್ಲಿ ಅವರು ಪ್ರಮುಖ ಪಾತ್ರವಹಿಸಿದರು. ಕೇವಲ ೨೨ ತಿಂಗಳ ಆಡಳಿತಾವಧಿಯಲ್ಲೇ ಹಲವು ಮಹತ್ವದ ಸುಧಾರಣೆಗಳನ್ನು ಜಾರಿಗೆ ತಂದ ರಂಗಾಚಾರ್ಲು, ಪ್ರಜಾಪ್ರತಿನಿಧಿ ಸಭೆಯನ್ನು ಸ್ಥಾಪಿಸುವ ಮೂಲಕ ಜನಾಭಿಪ್ರಾಯಕ್ಕೆ ಮಹತ್ವ ನೀಡಿದ ಮೊದಲ ದಿವಾನರಾಗಿ ಗುರುತಿಸಿಕೊಂಡರು. ರೈಲ್ವೆ ಜಾಲ ವಿಸ್ತರಣೆಗೂ ಅವರು ವಿಶೇಷ ಒತ್ತು ನೀಡಿದ್ದರು. ಆದರೆ, ತೀವ್ರ ಅನಾರೋಗ್ಯದ ಕಾರಣ ೧೮೮೨ರ ಕೊನೆಯಲ್ಲಿ ದಿವಾನ್ ಹುದ್ದೆಗೆ ರಾಜೀನಾಮೆ ನೀಡಿ ಮದ್ರಾಸ್‌ಗೆ ತೆರಳಿದರು. ೧೮೮೩ರ ಜನವರಿ ೨೦ರಂದು ಅವರು ನಿಧನರಾದರು. ಮೈಸೂರು ಸಂಸ್ಥಾನಕ್ಕೆ ಅವರು ಸಲ್ಲಿಸಿದ ಸೇವೆಯನ್ನು ಸ್ಮರಿಸುವ ಉದ್ದೇಶದಿಂದ ಜನರು ಹಾಗೂ ಚಾಮರಾಜ ಒಡೆಯರ್ ಅವರ ಸಹಕಾರದಲ್ಲಿ ನಿರ್ಮಿಸಲ್ಪಟ್ಟದ್ದೇ ಇಂದಿನ ಐತಿಹಾಸಿಕ ರಂಗಾಚಾರ್ಲು ಪುರಭವನ.

 

ಆಂದೋಲನ ಡೆಸ್ಕ್

Recent Posts

ಕೊಳ್ಳೇಗಾಲ: ಅಂಬೇಡ್ಕರ್ ಪ್ರತಿಮೆಗೆ ಸಿಎಂ ಡಿ.ಕೆ.ಶಿವಕುಮಾರ್ ಮಾಲಾರ್ಪಣೆ

ಹನೂರು : ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದಲ್ಲಿರುವ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು…

19 hours ago

ಶಿಕಾರಿಪುರದಿಂದ ‘ಭಾರತ್ ಜೋಡೋ 2.0’ ಪಾದಯಾತ್ರೆಗೆ ಚಾಲನೆ!

ಶಿವಮೊಗ್ಗ: ಕಾಂಗ್ರೆಸ್‌ ಸೋತಿರುವ 84 ವಿಧಾನಸಭಾ ಕ್ಷೇತ್ರಗಳನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್‌ ಸಂಘಟನೆ ಬಲಪಡಿಸಲು ಪಾದಯಾತ್ರೆ ಆರಂಭಿಸಲಾಗಿದೆ. ಕೆಪಿಸಿಸಿ ಅಧ್ಯಕ್ಷ ಬಿ.ಕೆ.…

19 hours ago

ಚಾಮರಾಜನಗರ ಎಂದರೆ ನನಗೆ ಬಲು ಪ್ರೀತಿ: ಸಿಎಂ ಡಿ.ಕೆ.ಶಿವಕುಮಾರ್‌

ಹನೂರು: ಚಾಮರಾಜನಗರ ಎಂದರೆ ನನಗೆ ಬಲು ಪ್ರೀತಿ, ನನ್ನ ಕ್ಷೇತ್ರದ ಪಕ್ಕದಲ್ಲೇ ಚಾಮರಾಜನಗರ ಜಿಲ್ಲೆ ಇದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್…

19 hours ago

ಹನೂರು ತಾಲೂಕಿನಲ್ಲಿ ಮುಂದುವರಿದ ಮಳೆ ಅವಾಂತರ: ಹಳ್ಳದಲ್ಲಿ ಗಣಪತಿ ದೇವಾಲಯ ಜಲಸಮಾಧಿ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕು ವ್ಯಾಪ್ತಿಯಲ್ಲಿ ಕಳೆದ ಎರಡು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವ…

20 hours ago

ಹನೂರಿನಲ್ಲಿ ಮಳೆಯ ಅಬ್ಬರ: 50ಕ್ಕೂ ಹೆಚ್ಚು ಮನೆಗಳು ಜಲಾವೃತ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಕಳೆದ ಎರಡು ದಿನಗಳಿಂದ ಹನೂರು ತಾಲೂಕಿನಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಮಳೆಗೆ…

21 hours ago

ಓದುಗರ ಪತ್ರ: ಜನರ ಹಿತ ಕಾಯಲಿ!

ಜನರ ಹಿತ ಕಾಯಲಿ! ನಕಲಿ ವೈದ್ಯರು, ಕಲಬೆರಿಕೆ ಔಷಧದ ಹಾವಳಿಯಿಂದ ಜನ ಬೇಸ್ತುಬಿದ್ದಿರುವಾಗ ನೈಜ ದರಕ್ಕಿಂತ ಅತ್ಯಧಿಕ ದರಕ್ಕೆ ಔಷಧಿ ಮಾರಾಟ…

1 day ago