ಎಡಿಟೋರಿಯಲ್

ಕವಲು ದಾರಿಯಲ್ಲಿ ತಂಬಾಕು ಬೆಳೆಗಾರ

ಹೊಗೆಸೊಪ್ಪಿನ ಪೂರೈಕೆ ಹೆಚ್ಚಳ; ಕುಸಿಯುತ್ತಿರುವ ಬೇಡಿಕೆ

– ಪ್ರಕಾಶ್ ರಾವಂದೂರು

ಮೈಸೂರು-ಹಾಸನ ಭಾಗದಲ್ಲಿ ತಂಬಾಕು ಬೆಳೆಯುವ ರೈತ ಇಂದು ಕವಲು ದಾರಿಯಲ್ಲಿ ನಿಂತಿದ್ದಾನೆ. ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ, ಹುಣಸೂರು, ಕೆ.ಆರ್.ನಗರ ಮತ್ತು ಎಚ್.ಡಿ.ಕೋಟೆ, ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕುಗಳಲ್ಲಿ ವರ್ಜೀನಿಯಾ ಹೊಗೆಸೊಪ್ಪನ್ನು ಎಪ್ಪತ್ತರ ದಶಕಗಳಿಂದಲೂ ಬೆಳೆಯಲಾಗುತ್ತಿದೆ. ಇದಕ್ಕಿಂತ ಹಿಂದೆ ಈ ಪ್ರದೇಶಗಳಲ್ಲಿ ಬೀಡಿ ಹೊಗೆಸೊಪ್ಪನ್ನು ಬಿಸಿಲಿನಲ್ಲಿ ಒಣಗಿಸಿ ಹದಮಾಡಿ ಸಿದ್ಧಪಡಿಸುತ್ತಿದ್ದರೂ, ರೈತರಿಗೆ ಇದರಿಂದ ಬರುತ್ತಿದ್ದ ಆದಾಯ ಅಷ್ಟಕ್ಕಷ್ಟೇ. ಬಿಸಿಲಿನಲ್ಲಿ ಒಣಗಿದ್ದು, ಉಸಿರು ಬಗೆದದ್ದು, ಸಾಲದ ಶೂಲದಲ್ಲಿ ಸಿಲುಕಿದ್ದಷ್ಟೇ ಲಾಭ.
ರೈತರ ಬದುಕಿನಲ್ಲಿ ಒಂದು ಆಶಾಕಿರಣವಾಗಿ ಕಂಡದ್ದೇ ವರ್ಜೀನಿಯಾ ತಂಬಾಕು ಬೆಳೆ. 1970 ರ ದಶಕದಲ್ಲಿ ಐ.ಟಿ.ಸಿ. ಕಂಪೆನಿಯು ಈ ಬೆಳೆ ಬೆಳೆಯಲು ರೈತರನ್ನು ಪ್ರೋತ್ಸಾಹಿಸುತ್ತ, ಅದಕ್ಕೆ ಅಗತ್ಯವಾದ ಸೌಲಭ್ಯ, ಸಲಕರಣೆಗಳು, ತಂತ್ರಜ್ಞಾನಗಳನ್ನೂ ನೀಡುತ್ತಾ ಬಂದಿತು. ಉತ್ಪಾದನೆ ಹೆಚ್ಚಾದಂತೆ ಸೂಕ್ತ ಮಾರುಕಟ್ಟೆ ಒದಗಿಸುವ, ರಫ್ತು ಹೆಚ್ಚಿಸುವ, ಬೆಳೆ ನಿಯಂತ್ರಿಸುವ ಉದ್ದೇಶಗಳೊಂದಿಗೆ ಕೇಂದ್ರ ಸರ್ಕಾರದಿಂದ 1976ರಲ್ಲಿ ತಂಬಾಕು ಮಂಡಳಿ ಸ್ಥಾಪಿತವಾಯಿತು. 1984ರಲ್ಲಿ ತಂಬಾಕು ಮಂಡಳಿಯು ಆಂಧ್ರಪ್ರದೇಶ ಹಾಗೂ ಕರ್ನಾಟಕದಲ್ಲಿ ತಂಬಾಕು ಹರಾಜು ಮಾರುಕಟ್ಟೆಗಳನ್ನು ಪ್ರಾರಂಭಿಸಿತು.
ಮಾರಾಟದ ಹಣ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವರ್ಗಾವಣೆಯಾಗುತ್ತಿತ್ತು. ರೈತರಿಗೆ ಅವಶ್ಯಕವಾದ ರಸಗೊಬ್ಬರ, ಕೀಟನಾಶಕ ಹಾಗೂ ಇನ್ನಿತರ ಸಾಮಗ್ರಿಗಳನ್ನೂ ಒದಗಿಸುತ್ತಿತ್ತು. ಬ್ಯಾಂಕ್‌ಗಳು ರೈತರಿಗೆ ಕಡಿಮೆ ಬಡ್ಡಿಯಲ್ಲಿ ಸಾಲ ಒದಗಿಸಲು ಪ್ರಾರಂಭಿಸಿದವು. ಐಟಿಸಿ ಕಂಪೆನಿ ಹಾಗು ತಂಬಾಕು ಮಂಡಳಿ ರೈತರ ಮನೆಬಾಗಿಲಿನಲ್ಲೇ ಸಂಬಂಧಪಟ್ಟಂತೆ ಸಲಹೆ ಸೂಚನೆ ನೀಡುತ್ತಿದ್ದವು. ರೈತರ ಮುಖದಲ್ಲಿ ನಗು ಅರಳಿತ್ತು.
ಈಗ ಪರಿಸ್ಥಿತಿ ಪೂರ್ಣ ಬದಲಾಗಿದೆ. ಬರುವ ಆದಾಯದಲ್ಲಿ ಬ್ಯಾಂಕ್ ಸಾಲ ಮಗಳ ಮದುವೆ, ಮಕ್ಕಳ ವಿದ್ಯಾಬ್ಯಾಸ, ಮನೆಯ ಖರ್ಚುಗಳು ಮುಂದಿವೆ. ಯಾವುದನ್ನು ಆಯ್ಕೆ ಮಾಡಬೇಕು? ಮತ್ತೆ ರೈತನಿಗೆ ಸಂಕಷ್ಟ ಎದುರಾಗುವಂತಾಗಿದೆ.
ಕುಸಿಯುತ್ತಿರುವ ಬೇಡಿಕೆ: ರಾಜ್ಯದ ವರ್ಜೀನಿಯಾ ತಂಬಾಕಿನ ಶೇ.80 ವಿದೇಶಗಳಿಗೆ ರಫ್ತಾಗುತ್ತಿದ್ದರೂ, ವಿಶ್ವದೆಲ್ಲೆಡೆ ಸಿಗರೇಟ್ ಬಳಕೆ ಕಡಿಮೆಯಾಗುತ್ತಿದೆ. ಜನರಲ್ಲಿ ಆರೋಗ್ಯದ ಕಾಳಜಿ ಹೆಚ್ಚುತ್ತಿದೆ. ಹೊಗೆಸೊಪ್ಪಿನ ಪೂರೈಕೆ ಹೆಚ್ಚುತ್ತಿದ್ದರೂ ಮತ್ತೊಂದೆಡೆ ಬೇಡಿಕೆ ಕಡಿಮೆಯಾಗುತ್ತಿದೆ. ವಿಶ್ವದೆಲ್ಲೆಡೆ ಸರ್ಕಾರಗಳು ತಂಬಾಕು ಉತ್ಪನ್ನಗಳ ಮಾರಾಟದ ಮೇಲೆ ಹಲವು ರೀತಿುಂ ನಿಯಂತ್ರಣಗಳನ್ನು ಹೇರುತ್ತಿರುವುದರ ಜೊತೆಗೆ ಅದರ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗೆಗೂ ಜನರಲ್ಲಿ ಅರಿವನ್ನು ಮೂಡಿಸುತ್ತಿವೆ.
ಮೈಸೂರು ಹೊಗೆಸೊಪ್ಪನ್ನು ಆಮದು ಮಾಡಿಕೊಳ್ಳುವ ಕಂಪೆನಿಗಳಲ್ಲಿ, ಬ್ರಿಟಿಷ್ ಅಮೆರಿಕನ್ ಟೊಬ್ಯಾಕೊ, ಫಿಲಿಪ್ ಮೋರಿಸ್, ಜಪಾನ್ ಟೊಬ್ಯಾಕೊ ಇಂಟರ್ನ್ಯಾಷನಲ್, ಇಂಪೀರಿಯಲ್ ಟೊಬ್ಯಾಕೊ ಮುಖ್ಯವಾದವು. ಈ ಕಂಪೆನಿಗಳೇ ಮೈಸೂರು ತಂಬಾಕಿನ ಸಿಂಹಪಾಲನ್ನು ಖರೀದಿ ಮಾಡುತ್ತಿದ್ದವು. ಇವು ಬಿಟ್ಟ ತಂಬಾಕನ್ನು ವಿದೇಶಗಳ ಸಣ್ಣಪುಟ್ಟ ಕಂಪೆನಿಗಳು ಕೊಂಡರೂ ಅವು ಉತ್ತಮ ಬೆಲೆ ನೀಡುವುದಿಲ್ಲ. ಪರಿಣಾಮ ಉತ್ಪನ್ನದ ಪ್ರಮಾಣ ಹೆಚ್ಚಿದ ವರ್ಷಗಳಲ್ಲಿ ಬೆಲೆ ಕುಸಿಯುತ್ತಿದೆ.
ಸಮಸ್ಯೆಗಳ ಸರಮಾಲೆ: ಇಲ್ಲಿನ ಮುಖ್ಯ ಖರ್ಚೆಂದರೆ, ಇಂಧನ, ರಸಗೊಬ್ಬರ, ಕೂಲಿ ಹಾಗೂ ಸಲಕರಣೆಗಳು. ಇಂಧನಗಳಾದ ಸೌದೆ ಹಾಗೂ ಕಾಫಿ ಬೂಸದ ಬೆಲೆ ಹೆಚ್ಚಿನ ವೈಪರೀತ್ಯಗಳಿಂದ ಕೂಡಿರುತ್ತದೆ. ಮೊದಲೇ ಶೇಖರಿಸಿಟ್ಟುಕೊಂಡಲ್ಲಿ ಕಡಿಮೆ ಬೆಲೆಗೆ ಸಿಗುವ ಇವು, ತಂಬಾಕು ಹದ ವಾಡುವ ಪ್ರಕ್ರಿಯೆ ಮುಂದುವರಿದಂತೆ ಎರಡರಿಂದ ಮೂರುಪಟ್ಟು ದುಬಾರಿಯಾಗುತ್ತವೆ. ತಂಬಾಕಿಗೆ ಉತ್ತಮ ಬೆಲೆ ದೊರೆಯುತ್ತಿದ್ದಾಗ ಹೆಚ್ಚಾದ ಕೂಲಿಯು, ಬೆಲೆ ಕಡಿಮೆಯಾದರೂ ಕಡಿಮೆಯಾಗಲಿಲ್ಲ. ಇದು ಒಂದು ಪ್ರಮುಖ ಸಮಸ್ಯೆ ಇವುಗಳ ಜೊತೆಗೆ ಇನ್ನಿತರ ಖರ್ಚುಗಳು ಹಾಗೂ ಒತ್ತಡಗಳು.
ತಂಬಾಕು ಸ್ವಲ್ಪ ಮಟ್ಟಿಗಿನ ಉತ್ತಮ ಜೀವನ ನೀಡಿದ್ದು ಸುಳ್ಳಲ್ಲ. ಸಿರಿವಂತರಲ್ಲದಿದ್ದರೂ, ಬೈಕ್, ಟ್ರಾಕ್ಟರ್, ಟಿವಿಗಳ ಮಾರಾಟ ಹೆಚ್ಚಿದ್ದೂ ಸತ್ಯ. ಇದು ಅವರ ಬೆವರಿಗೆ ಸಿಕ್ಕ ಪ್ರತಿಫಲ.
ಇನ್ನೂ ಹವಾಮಾನ ವೈಪರೀತ್ಯದಿಂದ ಅಕಾಲಿಕ ಮಳೆಯಿಂದಾಗಿ ಬೆಳೆಯ ಇಳುವರಿ ಕೆಲವೊಮ್ಮೆ ಅರ್ಧಕ್ಕಿಂತಲೂ ಕಡಿಮೆಯಾಗುತ್ತಿದೆ. ಪ್ರಪಂಚದೆಲ್ಲೆಡೆ ತಂಬಾಕಿನ ಬಗ್ಗೆ ಕಠಿಣ ಕ್ರಮ ಹಾಗೂ ನೀತಿ, ಆರೋಗ್ಯದ ಬಗೆಗಿನ ಕಾಳಜಿಗಳಿಂದ ದಿನೇ ದಿನೇ ಬೇಡಿಕೆ ಕುಸಿಯುತ್ತಿದೆ. ಇಂತಹ ಸಂದರ್ಭದಲ್ಲಿ ಆದಾಯ ಇಳಿಮುಖವಾಗುತ್ತದೆ.


ಮುಂದಿನ ದಾರಿ?
ರೈತರು ತಂಬಾಕು ಜೊತೆಗೆ ಪರ್ಯಾಯ ಬೆಳೆಗಳತ್ತ ಗಮನ ಹರಿಸಬೇಕಾಗುತ್ತದೆ. ಇದಕ್ಕೆ ಸರ್ಕಾರದ ಸಹಾಯ ಮತ್ತು ನೆರವನ್ನೂ ಪಡೆಯಬೇಕು. ತಂಬಾಕು ಕಂಪೆನಿಗಳು, ತಂಬಾಕು ಬೆಳೆಯ ವಿಜ್ಞಾನಿಗಳ ಜೊತೆ ಚರ್ಚಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಮತ್ತೊಂದು ಅಂಶವೆಂದರೆ, ಉತ್ತಮ ಬೇಸಾಯ ಪದ್ಧತಿಗಳಿಂದ ಭೂಮಿಯು ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವುದು. ವೈಜ್ಞಾನಿಕ ಬೇಸಾಯ ಪದ್ಧತಿಗಳನ್ನು ಅನುಸರಿಸಬೇಕಿದೆ. ತಂಬಾಕು ಮಂಡಳಿಯು ತಂಬಾಕು ಬೆಳೆಯ ಅಗತ್ಯತೆಗಳಿಗೆ ಸಬ್ಸಿಡಿ ರೂಪದಲ್ಲಿ ನೆರವಾಗಬೇಕಾಗುತ್ತದೆ. ಯಂತ್ರೋಪಕರಣಗಳ ಬಳಕೆಯನ್ನೂ ಪ್ರೋತ್ಸಾಹಿಸಬೇಕಾಗುತ್ತದೆ. ಸೂಕ್ತ ಬೆಲೆ ನೀಡಬೇಕು.

andolanait

Recent Posts

ತಂತ್ರಜ್ಞಾನ ಶಸ್ತ್ರಾಸ್ತ್ರೀಕರಣದ ಬಗ್ಗೆ ಕಳವಳಗಳ ವ್ಯಕ್ತಪಡಿಸಿದ ಪ್ರಧಾನಿ ಮೋದಿ

ನವದೆಹಲಿ : ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಜಾಗತಿಕವಾಗಿ ಸಾಮಾನ್ಯ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಪ್ರಧಾನಿ…

14 hours ago

ಭಾನುವಾರದ ಹಾಡುಪಾಡು | ಹೊರಗೆ ನಗುವಿನ ಮೇಕಪ್‌, ಒಳಗೆ ಕುದಿಯುವ ಬೇಗುದಿ

ಮೇಘನ ಕೆ.ಆರ್‌ ಕೇರಳಿಗಳಾದ ನನಗೆ ವರ್ಷಕ್ಕೆರಡು ಹಬ್ಬ-ಓಣಂ, ವಿಶು ಮಾತ್ರ ತಿಳಿದಿತ್ತು. ದೀಪಾವಳಿಗೆ ದನಗಳಿಗೆ ಪೂಜೆ ಮಾಡಿ ಅಮ್ಮ ಕೆಲಸಕ್ಕೆ…

17 hours ago

ಭಾನುವಾರದ ಹಾಡುಪಾಡು | ಮಳೆ ತರುವ ತಾಯಯಿ ಈ ಪುಟ್ಟ ಗೌರಿ

ಡಾ. ಶಿಲಿನಾ ಕೋಟೆ ಎನ್.‌ ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳು ಕೇವಲ ಧಾರ್ಮಿಕ ಆಚರಣೆ ಗಳಲ್ಲ; ಅವು ಪ್ರಕೃತಿ, ಕೃಷಿ, ಮಳೆ,…

17 hours ago

ಗೌರಮ್ಮ ಭೂಮಿಗೆ ಬರುವ ದಿನ

ಶುಭಮಂಗಳ ರಾಮಾಪುರ ಗೌರಿಹಬ್ಬವೆಂದ ಕೂಡಲೇ ಸಂಭ್ರಮದ ನೆನಪು ಒಂದೆಡೆಯಾದರೆ ಕೆಲಸದ ಹೊರೆ ಮತ್ತೊಂದೆಡೆ. ನನ್ನೂರಿನಲ್ಲಂತೂ ಗೌರಿಹಬ್ಬಕ್ಕೆ ಮಡಿ ಮಾಡುವುದೇ ದೊಡ್ಡ…

17 hours ago

ಮಗಳು ಗೌರಿ, ದೇವತೆಯೂ ಗೌರಿ, ಮಳೆಯು ಗೌರಿ, ಬೆಂಕಿಯೂ ಗೌರಿ

ನಾಳಿನ ಗೌರಿ ಗಣೇಶ ಸಂಭ್ರಮಕ್ಕೆ ಬರಹಗಳ ಬಾಗಿನ ಡಾ.ಶುಭಶ್ರೀ ಪ್ರಸಾದ್‌, ಮಂಡ್ಯ ‘ಮಗಳು’ಎಂದ ಕ್ಷಣ ಕಣ್ಮುಂದೆ ಬರುವುದು ಜರಿ ಲಂಗ,…

18 hours ago

ಗೌರಿ-ಗಣೇಶ ಹಬ್ಬಕ್ಕೆ ಸಕಲ ಸಿದ್ಧತೆ

ಅರಮನೆ ನಗರಿಯ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರು ಸೇವಂತಿಗೆ ಹೂವು, ಏಲಕ್ಕಿ ಬಾಳೆಹಣ್ಣು ಸೇರಿ ಇನ್ನಿತರೆ ಹಣ್ಣುಗಳ ಬೆಲೆ ಹೆಚ್ಚಳ…

18 hours ago