ಅಂಕಣಗಳು

ಲಡಾಖ್ ಬೇಡಿಕೆಗೆ ಕೇಂದ್ರ ವಿಮುಖವಾಗಬಾರದು

ದೆಹಲಿ ಕಣ್ಣೋಟ

ಶಿವಾಜಿ ಗಣೇಶನ್‌

ಹಿಮಾಲಯ ಪರ್ವತ ಶ್ರೇಣಿಯಲ್ಲಿ ವಿಪರೀತ ಮಳೆ, ಹಿಮಪಾತ, ನೀರ್ಗಲ್ಲು ಕುಸಿತದಿಂದಾಗಿ ಹಿಮಾಲಯ ಪರ್ವತ ಪ್ರದೇಶ ಕರಗುತ್ತಿದೆಯೇನೋ ಎನ್ನುವ ಆತಂಕ ತಂದೊಡ್ಡುತ್ತಿದೆ. ವಾತಾವರಣದಲ್ಲಾಗುತ್ತಿರುವ ಬದಲಾವಣೆ ಒಂದು ಕಡೆಯಾದರೆ ಈ ಪರ್ವತ ಶ್ರೇಣಿಯ ಸುತ್ತಮುತ್ತಲಿನ ರಾಷ್ಟ್ರಗಳಲ್ಲಿನ ಅರಾಜಕತೆ ಭಾರತದಂತಹ ದೊಡ್ಡ ದೇಶಕ್ಕೆ ತಲೆನೋವಾಗಿರುವುದು ವಿಪರ್ಯಾಸ. ಮಯನ್ಮಾರ್ (ಬರ್ಮಾ), ಬಾಂಗ್ಲಾ ದೇಶ ಮತ್ತು ನೇಪಾಳದಲ್ಲಿ ನಡೆದ ಆತಂರಿಕ ಕ್ಷೋಭೆ ನಮ್ಮ ನಿದ್ದೆಗೆಡಿಸಿದೆ. ಮಣಿಪುರ ರಾಜ್ಯ ಕಳೆದ ಎರಡು ವರ್ಷಗಳಿಂದ ಜನಾಂಗೀಯ ದ್ವೇಷದಿಂದ ಹೊತ್ತಿ ಉರಿಯುತ್ತಿದ್ದರೆ, ಬಹುತೇಕ ಈಶಾನ್ಯ ರಾಜ್ಯಗಳಲ್ಲಿ ಆಂತರಿಕ ಅಸಮಾಧಾನದ ಬುಗ್ಗೆ ಆಗಾಗ್ಗೆ ಕಾಣಿಸಿಕೊಳ್ಳುತ್ತಲೇ ಇದೆ. ಈ ಏಳು ರಾಜ್ಯಗಳನ್ನು ಶಾಂತಿಯಿಂದ ಹಿಡಿದಿಟ್ಟುಕೊಳ್ಳುವುದೇ ಕೇಂದ್ರ ಸರ್ಕಾರಕ್ಕೆ ಮೊದಲಿನಿಂದಲೂ ತಲೆ ಬಿಸಿ ತಂದಿಟ್ಟಿದೆ. ಬಾಹ್ಯ ಮತ್ತು ಆಂತರಿಕ ಸಮಸ್ಯೆಗಳಿಂದ ನಿರಂತರವಾಗಿ ನಲುಗುತ್ತಿರುವ ಈ ರಾಜ್ಯಗಳನ್ನು ಕಾಪಾಡಿಕೊಂಡು ಬಂದಿರುವ ಕೇಂದ್ರ ಸರ್ಕಾರ ಹಾಗೂ ಗೃಹ ಸಚಿವಾಲಯ ಶುಕ್ರವಾರ ಮಣಿಪುರ, ಅರುಣಾಚಲ ಪ್ರದೇಶ ಮತ್ತು ನಾಗಾಲ್ಯಾಂಡ್ ರಾಜ್ಯಗಳ ಬಹುತೇಕ ಪ್ರದೇಶಗಳಲ್ಲಿ ಜಾರಿಯಲ್ಲಿರುವ ಸೇನೆಗಳಿಗೆ ನೀಡಿರುವ ೧೯೫೮ರ ವಿಶೇಷ ಅಧಿಕಾರ ಕಾಯ್ದೆಯನ್ನು ಮತ್ತೆ ಆರು ತಿಂಗಳವರೆಗೆ ವಿಸ್ತರಿಸಿದೆ.

ಈ ವಿಶೇಷ ಕಾಯ್ದೆಯು ಕೇಂದ್ರದ ಸಶಸ್ತ್ರ ಪಡೆಗಳಿಗೆ ನೀಡಿರುವ ಅಧಿಕಾರದಿಂದ ಪ್ರಕ್ಷುಬ್ಧ ಪ್ರದೇಶಗಳಲ್ಲಿ ಭಯೋತ್ಪಾದನೆ ಮತ್ತು ಸಂಚು ನಡೆಸುವವರನ್ನು ಯಾವುದೇ ಮುನ್ಸೂಚನೆ ನೀಡದೆ ಬಂಧಿಸಬಹುದು, ಯಾವುದೇ ವಾರಂಟ್ ನೀಡದೆ ಶಂಕಿತ ಪ್ರದೇಶಗಳು ಮತ್ತು ಮನೆಗಳನ್ನು ಶೋಧಿಸಬಹುದು, ಅವಶ್ಯಕತೆ ಕಂಡು ಬಂದಾಗ ಕೇಂದ್ರ ಸರ್ಕಾರದ ಅನುಮತಿ ಪಡೆಯದೇ ನುಸುಳುಕೋರರು ಮತ್ತು ಹಿಂಸೆಯನ್ನು ಹುಟ್ಟುಹಾಕುವವರನ್ನು ಗುಂಡಿಟ್ಟು ಕೊಲ್ಲುವ ಮೂಲಕ ಅವರ ಹುಟ್ಟಡಗಿಸಬಹುದು.

ಏತನ್ಮಧ್ಯೆ ಕಳೆದ ವಾರದಿಂದ ಲಡಾಖ್ ಕೇಂದ್ರಾಡಳಿತ ಪ್ರದೇಶದಲ್ಲಿ ಆಂತರಿಕ ಕ್ಷೋಭೆ ತಲೆ ಎತ್ತಿದೆ. ಕೇಂದ್ರ ಸರ್ಕಾರವು ಜಮ್ಮು ಮತ್ತು ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನದ ಸಂವಿಧಾನಬದ್ಧ ೩೭೦ನೇ ವಿಧಿಯನ್ನು ೨೦೧೯ರ ಫೆಬ್ರುವರಿಯಲ್ಲಿ ರದ್ದು ಮಾಡಿ ಜಮ್ಮು, ಕಾಶ್ಮೀರ ಮತ್ತು ಲಡಾಖ್ ಪ್ರದೇಶಗಳನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿತು. ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಒಡೆದು ಪಾಕಿಸ್ತಾನದ ಭಯೋತ್ಪಾದನೆಯನ್ನು ನಿಗ್ರಹಿಸಲು ಕೇಂದ್ರ ಸರ್ಕಾರ ತನ್ನ ಆಡಳಿತದ ವಶಕ್ಕೆ ತೆಗೆದುಕೊಂಡಿತು. ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ಹೆಚ್ಚಾಗಿ ಹಿಂದೂ ಧರ್ಮೀಯರಿರುವ ಜಮ್ಮು ಮತ್ತು ಬೌದ್ಧರು ಅಧಿಕ ಸಂಖ್ಯೆಯಲ್ಲಿರುವ ಲಡಾಖ್ ಜನರು ಸ್ವಾಗತಿಸಿದರು. ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯ ಅಸ್ತಿತ್ವವನ್ನು ಉಳಿಸಿರುವ ಕೇಂದ್ರ ಸರ್ಕಾರ ಈ ರಾಜ್ಯಕ್ಕಿದ್ದ ಸ್ಥಾನಮಾನವನ್ನು ಕಿತ್ತುಕೊಂಡಿತಾದರೂ ಕಾಶ್ಮೀರದ ವಿಧಾನಸಭೆಗೆ ಚುನಾವಣೆ ನಡೆಸಿ ಜನರ ಆಯ್ಕೆಯ ಸರ್ಕಾರವನ್ನು ತರುವಲ್ಲಿ ಯಶಸ್ವಿಯಾಗಿದೆ.

ಆದರೆ ಹಿಂದಿನಂತೆ ಇದ್ದ ಅಧಿಕಾರ ಈಗ ಕಾಶ್ಮೀರಕ್ಕೆ ಇಲ್ಲದಿರುವುದು ಸಹಜವಾಗಿಯೇ ಆ ಪ್ರದೇಶದ ಜನರಲ್ಲಿ ವಿಶೇಷವಾಗಿ ರಾಜಕಾರಣದಿಂದ ಅನಿಯಂತ್ರಿತ ಅಧಿಕಾರವನ್ನು ಅನುಭವಿಸಿದ ರಾಜಕಾರಣಿಗಳಿಗೆ ಅಸಮಾಧಾನ ಉಂಟಾಗಿದೆ. ಕೆಲವು ತಿಂಗಳ ಹಿಂದೆ ಕಾಶ್ಮೀರ ವಿಧಾನಸಭೆಯ ನಿರ್ಣಯವೊಂದನ್ನು ಅಂಗೀಕರಿಸಿ ಹಿಂದಿನಂತೆ ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ನೀಡಬೇಕೆಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿದೆ. ಕಾಶ್ಮೀರದ ಈ ಆಗ್ರಹವನ್ನು ಕೇಂದ್ರ ಸರ್ಕಾರ ಪರಿಶೀಲಿಸುತ್ತಿದೆಯಾದರೂ, ಮೊದಲಿದ್ದ ವಿಶೇಷ ಸ್ಥಾನಮಾನ ನೀಡುವ ಬೇಡಿಕೆಯನ್ನು ಸಾರಾಸಗಟಾಗಿ ತಳ್ಳಿಹಾಕಿದೆ. ಕಾಶ್ಮೀರ ಪಾಕಿಸ್ತಾನದ ಭಯೋತ್ಪಾದನೆಯ ಚಟುವಟಿಕೆಯಿಂದ ನಿತ್ಯವೂ ನರಳುತ್ತಿದ್ದರೆ, ಲಡಾಖ್ ಜನರು ನೆರೆಯ ಚೀನಾದ ಭಯದಿಂದ ಬದುಕುತ್ತಿದ್ದಾರೆ. ಲಡಾಕ್ ಬಹುತೇಕ ಗುಡ್ಡಗಾಡು ಜನರಿರುವ ಪ್ರದೇಶ.

ಬೌದ್ಧರು ಮತ್ತು ಮುಸ್ಲಿಮರು ಇರುವ ಪ್ರಾಂತ್ಯ. ಇತಿಹಾಸದ ಪುಟಗಳನ್ನು ತೆರೆದರೆ ಇದು ಕುಶಾನ ದೊರೆಯ ಆಡಳಿತದಿಂದ ಪ್ರಾರಂಭವಾಗಿ ಹತ್ತನೇ ಶತಮಾನದಿಂದ ಒಂದು ಪ್ರತ್ಯೇಕ ಪುಟ್ಟ ದೇಶವಾಗಿತ್ತು. ಪಂಜಾಬ್ ಮತ್ತು ಸೆಂಟ್ರಲ್ ಏಷಿಯಾ ನಡುವೆ ವಾಣಿಜ್ಯ ಉತ್ಪನ್ನಗಳ ರಫ್ತು ಮಾರ್ಗವಾಗಿ ಜವಳಿ ವಿಶೇಷವಾಗಿ ಉಣ್ಣೆ ಬಟ್ಟೆ ತಯಾರಿಕೆ ಮತ್ತು ಮಾರಾಟಕ್ಕೆ ಪ್ರಸಿದ್ಧಿಯಾಗಿತ್ತು. ೧೯೩೦ರಲ್ಲಿ ಮಹಾರಾಜ ಗುಲಾಬ್ ಸಿಂಗ್ ಆಡಳಿತದಲ್ಲಿದ್ದ ಜಮ್ಮುವಿನ ಡೋಗ್ರಾ ಸೇನೆಯನ್ನು ಲಡಾಖ್‌ಗೆ ನುಗ್ಗಿಸಿ ಆ ಪ್ರದೇಶವನ್ನು ಆಕ್ರಮಿಸಿಕೊಂಡ. ನಂತರ ಬ್ರಿಟಿಷರ ಆಳ್ವಿಕೆಯಲ್ಲಿ ಲಡಾಖ್ ಪ್ರದೇಶ ಜಮ್ಮು ಮತ್ತು ಕಾಶ್ಮೀರದ ಒಂದು ಭಾಗವಾಗಿ ಸೇರಿಕೊಂಡಿತು. ಲಡಾಖ್ ಮೇಲೆ ಪಾಕಿಸ್ತಾನ ಮತ್ತು ಚೀನಾ ಸೇನೆಗಳು ಅನೇಕ ಬಾರಿ ದಾಳಿ ಮಾಡಿದ ಇತಿಹಾಸವಿದೆ. ಚೀನಾ ೧೯೬೨ರಲ್ಲಿ ಲಡಾಖ್‌ನ ಆಕ್ಸೈಚಿನ್ ಪ್ರದೇಶವನ್ನು ತನ್ನ ವಶಪಡಿಸಿಕೊಂಡಿತು.

ಲಡಾಖ್‌ನ ಒಟ್ಟು ಜನಸಂಖ್ಯೆ ಸುಮಾರು ಮೂರು ಲಕ್ಷದಷ್ಟಿದೆ ಎಂದು ೨೦೧೧ರ ಜನಗಣತಿ ಹೇಳುತ್ತದೆ. ಲಡಾಖ್ ಮುಖ್ಯವಾಗಿ ಲೆಹ್ ಮತ್ತು ಕಾರ್ಗಿಲ್ ಪ್ರಮುಖ ಜಿಲ್ಲಾ ಕೇಂದ್ರಗಳನ್ನು ಹೊಂದಿದೆ. ಲೆಹ್‌ನಲ್ಲಿ ಬೌದ್ಧರು ಅಧಿಕ ಸಂಖ್ಯೆಯಲ್ಲಿದ್ದು ಕಾರ್ಗಿಲ್ ಜಿಲ್ಲಾ ಪ್ರದೇಶದಲ್ಲಿ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಲೆಹ್ ಪರ್ವತ ಪ್ರದೇಶದ ಎತ್ತರದಲ್ಲಿದ್ದರೆ ಅದಕ್ಕಿಂತ ಕೆಳಗೆ ಕಾರ್ಗಿಲ್ ಪ್ರದೇಶವಿದೆ. ಕೇಂದ್ರ ಸರ್ಕಾರವು ಲಡಾಖ್ ಪ್ರದೇಶವನ್ನು ಕೇಂದ್ರಾಡಳಿತದ ವಶಕ್ಕೆ ತೆಗೆದುಕೊಂಡ ಬಳಿಕ ಈ ಎರಡು ಸ್ಥಳಗಳನ್ನು ಆಡಳಿತ ಪ್ರದೇಶಗಳನ್ನಾಗಿ ಪರಿವರ್ತಿಸಿದೆ.

ಲಡಾಖ್ ಪ್ರಾಂತ್ಯದ ಇತಿಹಾಸ, ಸಂಸ್ಕೃತಿ, ಗುಡ್ಡಗಾಡು ಜನರ ಬದುಕು ಬವಣೆ ಮತ್ತು ಈಗಿನ ವಾಸ್ತವ ಸ್ಥಿತಿಗತಿಯನ್ನು ಹೇಳುತ್ತಾ ಹೋಗುವುದು ಕಷ್ಟದ ಕೆಲಸವೇ. ಹೆಚ್ಚು ಜನರಿರುವ ಗುಡ್ಡಗಾಡು ಎಂದ ಮೇಲೆ ಅಲ್ಲಿನ ಬದುಕಿನ ಜೊತೆ ಸಂಸ್ಕೃತಿ ಮತ್ತು ಜಾನಪದ ಕಲೆ ಬೆರೆತುಹೋಗಿರುತ್ತದೆ. ಈ ವೈಶಿಷ್ಠ್ಯವೇ ಲಡಾಖ್ ಪ್ರಾಂತ್ಯದ ಮಹತ್ವವನ್ನು ಉಳಿಸಿಕೊಂಡು ಬಂದಿದೆ. ಈ ಎಲ್ಲ ಮಹತ್ವದ ನಡುವೆ ಲಡಾಖ್ ಈಗ ದೇಶದಲ್ಲಿ ಸುದ್ದಿಯಲ್ಲಿದೆ. ಕಳೆದೆರಡು ವರ್ಷಗಳಿಂದ ನಿತ್ಯವೂ ಒಂದಲ್ಲ ಒಂದು ಹಿಂಸಾಚಾರ ಘಟನೆ ನಡೆಯುತ್ತಿರುವ ಮಣಿಪುರ ದೇಶದ ಗಮನ ಸೆಳೆದಿತ್ತು. ಕೆಲವು ತಿಂಗಳ ಹಿಂದೆ ಬಾಂಗ್ಲಾ ದೇಶ ಮತ್ತು ಮೂರು ವಾರಗಳ ಹಿಂದೆ ನೇಪಾಳದಲ್ಲಿ ಆಡಳಿತ ವ್ಯವಸ್ಥೆಯ ವಿರುದ್ಧ ಅನಿರೀಕ್ಷಿತವಾಗಿ ನಡೆದ ಯುವಜನತೆಯ ಸಂಘಟಿತ ಚಳವಳಿಯ ನಂತರ ಲಡಾಖ್‌ನಲ್ಲಿ ಕಳೆದ ಐದು ದಿನಗಳ ಹಿಂದೆ ಕಾಣಿಸಿಕೊಂಡ ಪ್ರತಿಭಟನೆಗಳು ಸಹಜವಾಗಿ ಕೇಂದ್ರ ಸರ್ಕಾರದ ಕಣ್ಣುತೆರೆಸಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಮೂರು ಭಾಗಗಳಾಗಿ ವಿಂಗಡಿಸಿ ಲಡಾಖ್ ಪ್ರಾಂತ್ಯವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿದ್ದನ್ನು ಲಡಾಖಿಯರು ಸ್ವಾಗತಿಸಿದ್ದೇನೋ ಸರಿ. ಆದರೆ ಲಡಾಖ್ ಪ್ರದೇಶವನ್ನು ಕೇಂದ್ರಾಡಳಿತದಿಂದ ವಿಮೋಚನೆಗೊಳಿಸಿ ಪ್ರತ್ಯೇಕ ರಾಜ್ಯ ಮಟ್ಟದ ಸ್ಥಾನಮಾನ ನೀಡಬೇಕೆಂಬ ಬೇಡಿಕೆಯನ್ನು ಆ ಜನರು ಕೇಂದ್ರದ ಮುಂದಿಟ್ಟಿದ್ದಾರೆ.

ಸೆಪ್ಟೆಂಬರ್ ೨೪ರಂದು ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಪೊಲೀಸರ ಗುಂಡಿಗೆ ನಾಲ್ವರು ಬಲಿಯಾಗಿದ್ದು, ಸುಮಾರು ೯೦ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ತಮ್ಮ ಈ ಬೇಡಿಕೆಗೆ ಕೇಂದ್ರ ಸರ್ಕಾರವು ಸ್ಪಂದಿಸುತ್ತಿಲ್ಲ ಎಂದು ಯುವಕರು ನಡೆಸಿದ ಪ್ರತಿಭಟನೆಯಲ್ಲಿ ಬಿಜೆಪಿಯ ಕಚೇರಿಗೆ ಬೆಂಕಿ ಹಚ್ಚಿ ಮತ್ತು ಲಡಾಕ್ ಸ್ವಾಯತ್ತ ಗುಡ್ಡಗಾಡು ಅಭಿವೃದ್ಧಿ ಮಂಡಳಿಯ ಕಚೇರಿಯನ್ನು ದ್ವಂಸ ಮಾಡಿ ಪ್ರತಿಭಟನಾಕಾರರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಲಡಾಖ್‌ಗೆ ರಾಜ್ಯಮಟ್ಟದ ಸ್ಥಾನಮಾನ ನೀಡುವ ಜೊತೆಗೆ ಸಂವಿಧಾನದ ೬ನೇ ಪರಿಚ್ಛೇದಕ್ಕೆ ಸೇರಿಸಿ ಲಡಾಖ್ ಪ್ರದೇಶವನ್ನು ಸುರಕ್ಷಿತ ರಾಜ್ಯವನ್ನಾಗಿ ರಕ್ಷಿಸಬೇಕೆನ್ನುವುದು ಲಡಾಖ್ ಜನರ ಬಹುದಿನದ ಬೇಡಿಕೆ. ಈ ಬೇಡಿಕೆಗೆ ಬೆಂಬಲವಾಗಿ ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಪರಿಸರ ರಕ್ಷಣೆಗಾಗಿ ಹೋರಾಟ ಮಾಡಿಕೊಂಡು ಬಂದ ಸೋನಮ್ ವಾಂಗ್ಚುಕ್ ಕಳೆದ ೧೦ರಿಂದ ಸತ್ಯಾಗ್ರಹ ನಡೆಸುತ್ತಾ ಬಂದರು. ಈ ಸತ್ಯಾಗ್ರಹ ಸಹಜವಾಗಿ ಲಡಾಖ್ ಜನರ ಹೋರಾಟಕ್ಕೆ ಶಕ್ತಿ ನೀಡಿದ್ದನ್ನು ಅಲ್ಲಗಳೆಯಲಾಗದು.

ಲಡಾಖ್‌ನಲ್ಲಿ ಜನ ಚಳವಳಿ ನಡೆಯಬಹುದೆಂಬ ಶಂಕೆಯಿಂದ ಕೇಂದ್ರ ಸರ್ಕಾರವು ಶುಕ್ರವಾರ ಸೋನಮ್ ವಾಂಗ್ಚುಕ್ ಅವರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆ ಅನ್ವಯ ಬಂಧನ ಮಾಡಿದೆ. ಸೋನಮ್ ವಾಂಗ್ಚುಕ್ ತಮ್ಮ ಭಾಷಣದಲ್ಲಿ ೨೦೧೦ರಲ್ಲಿ ಮಧ್ಯೆ ಏಷಿಯಾ ಮತ್ತು ಉತ್ತರ ಆಫ್ರಿಕಾದಲ್ಲಿ ನಡೆದ ಅರಬ್ ಸ್ಪಿಂಗ್ ಹೆಸರಿನ ದಿಢೀರ್ ಚಳವಳಿ ಮತ್ತು ನೇಪಾಳದಲ್ಲಿ ಮೂರು ವಾರಗಳ ಹಿಂದೆ ಭುಗಿಲೆದ್ದ ಜೆನ್ -ಝಡ್ ಹೋರಾಟದ ಚಳವಳಿಗಳನ್ನು ಪ್ರಸ್ತಾಪಿಸಿ ಜನರನ್ನು ವಿಶೇಷವಾಗಿ ಯುವಜನರನ್ನು ಬಡಿದೆಬ್ಬಿಸುವ ವಿಷಯವನ್ನು ಪ್ರಸ್ತಾಪಿಸಿದ್ದಾರೆ ಎಂದು ಕೇಂದ್ರ ಸರ್ಕಾರ ಗಂಭೀರವಾಗಿ ತೆಗೆದುಕೊಂಡು ಲಡಾಖ್ ಹೋರಾಟ ಮತ್ತೆ ಹಬ್ಬದಂತೆ ಕ್ರಮಕೈಗೊಂಡಿದೆ. ಅಂತಾರಾಷ್ಟ್ರೀಯ ಖ್ಯಾತಿಯ ಸೋನಮ್ ವಾಂಗ್ಚುಕ್ ಹೋರಾಟದ ಹಿನ್ನೆಲೆಯಲ್ಲಿ ವಿದೇಶಿ ಕೈವಾಡ ಇರುವುದಾಗಿ ಕೇಂದ್ರ ಗೃಹ ಸಚಿವಾಲಯ ಶಂಕಿಸಿರುವುದಾಗಿ ಅವರ ಮೇಲೆ ಚಟುವಟಿಕೆ ಮತ್ತು ಸಂಪರ್ಕದ ಮೇಲೆ ತೀವ್ರ ನಿಗಾ ವಹಿಸಲಾಗಿತ್ತು.

ಇದನ್ನೂ ಓದಿ:-ಅಂಬಾರಿ ಮುಗಿದ ಮೇಲೆಯೇ ಮೈಸೂರಿಗರ ದಸರಾ ಸಂಭ್ರಮ

ಲಡಾಖ್ ಜನರು ಕೇಂದ್ರ ಸರ್ಕಾರದ ಮುಂದಿಟ್ಟಿರುವ ಬೇಡಿಕೆಗಳ ಬಗ್ಗೆ ಕೇಂದ್ರ ಗೃಹ ಸಚಿವಾಲಯ ಒಂದೆರಡು ಬಾರಿ ಮಾತುಕತೆ ನಡೆಸಿದೆಯಾದರೂ ಅವರ ಬೇಡಿಕೆಗೆ ಸ್ಪಂದಿಸುವ ಸ್ಪಷ್ಟ ಸೂಚನೆ ಇಲ್ಲವಾಗಿರುವುದು ಈಗಿನ ಯುವಜನರ ಹೋರಾಟಕ್ಕೆ ಕಾರಣ ಎನ್ನಲಾಗಿದೆ. ಲಡಾಖ್‌ನ ನಾಲ್ಕು ಬೇಡಿಕೆಗಳಾದ ಪ್ರತ್ಯೇಕ ರಾಜ್ಯದ ಸ್ಥಾನಮಾನ ಮತ್ತು ಸಂವಿಧಾನದ ೬ನೇ ಪರಿಚ್ಛೇದಕ್ಕೆ ಸೇರಿಸಬೇಕೆನ್ನುವ ಜೊತೆಗೆ ಶೇ.೩೩ ಮಹಿಳಾ ಪ್ರಾತಿನಿಧ್ಯದಡಿ ಗುಡ್ಡಗಾಡು ಪ್ರದೇಶಾಭಿವೃದ್ಧಿ ಮಂಡಳಿಗೆ ನೇಮಕ ಮತ್ತು ಸ್ಥಳೀಯ ಭೋಟಿ, ಪುರ್ಗಿ, ಬಾಲ್ಟಿ ಮತ್ತು ಶಿನ್ಹಾ ಸ್ಥಳೀಯ ಭಾಷೆಗಳಿಗೆ ಮಾನ್ಯತೆ ನೀಡಬೇಕೆನ್ನುವುದು ಸೇಅರಿದೆ. ಯುವಕರ ಈ ಮುಂಚೂಣಿ ಹೋರಾಟಕ್ಕೆ ಬೌದ್ಧರ ಹೆಚ್ಚಿನ ಪ್ರಾತಿನಿಧ್ಯವಿರುವ ಲೆಹ್ ಅಪೆಕ್ಸ್ ಮಂಡಳಿ ಮತ್ತು ಮುಸ್ಲಿಮರ ಪ್ರಾಬಲ್ಯವಿರುವ ಕಾರ್ಗಿಲ್ ಡೆಮಾಕ್ರಟಿಕ್ ಅಲಯನ್ಸ್ ಬೆಂಬಲವಿದೆ. ಚೀನಾ ಮತ್ತು ಪಾಕಿಸ್ತಾನದ ಗಡಿಗೆ ಹೊಂದಿಕೊಂಡಂತಿರುವ ಈ ಲಡಾಖ್ ಕೇಂದ್ರಾಡಳಿತ ಪ್ರದೇಶಕ್ಕೆ ರಾಜ್ಯಸ್ಥಾನಮಾನ ನೀಡುವ ಸಾಧ್ಯತೆಗಳು ಕಮ್ಮಿ. ಅಂತಾರಾಷ್ಟ್ರೀಯ ಗಡಿ ಪ್ರದೇಶವನ್ನು ತನ್ನ ವಶದಲ್ಲಿಟ್ಟುಕೊಂಡಿದ್ದರೆ ಭಾರತ ಈ ಭಾಗವನ್ನು ಸುರಕ್ಷಿತವಾಗಿ ಕಾಪಾಡಿಕೊಳ್ಳಲು ಸಾಧ್ಯ ಎನ್ನುವುದು ಕೇಂದ್ರ ಸರ್ಕಾರದ ಉದ್ದೇಶ. ಈ ಉದ್ದೇಶದಿಂದ ಕೇಂದ್ರ ವಿಮುಖಗೊಳ್ಳುವ ಸಾಧ್ಯತೆ ಕಮ್ಮಿ. ಪಾಕಿಸ್ತಾನದ ಗಡಿ ಭಾಗಕ್ಕೆ ಹೊಂದಿಕೊಂಡಂತಿರುವ ಕಾರ್ಗಿಲ್ ಪ್ರದೇಶಕ್ಕೆ ೨೬ ವರ್ಷಗಳ ಹಿಂದೆ ಪಾಕಿಸ್ತಾನ ಸೇನೆ ಅಕ್ರಮವಾಗಿ ನುಸುಳಿಕೊಂಡು ೧೯೯೯ರಲ್ಲಿ ಕಾರ್ಗಿಲ್ ಯುದ್ಧಕ್ಕೆ ಕಾರಣವಾಗಿದ್ದರಿಂದ ಲಡಾಖ್ ಪ್ರದೇಶಕ್ಕೆ ರಾಜ್ಯದ ಸ್ಥಾನಮಾನ ನೀಡುವ ಸಾಧ್ಯತೆಯನ್ನು ನಿರೀಕ್ಷಿಸಲಾಗದು. ಪಾಕಿಸ್ತಾನ ಮತ್ತು ಚೀನಾದಂತಹ ಶತ್ರು ರಾಷ್ಟ್ರಗಳಿಂದ ಲಡಾಖ್ ಪ್ರದೇಶವನ್ನು ರಕ್ಷಿಸಬೇಕಾದರೆ ಕೇಂದ್ರದ ನೇರ ಆಡಳಿತ ಕ್ರಮದಿಂದ ಮಾತ್ರ ಸಾಧ್ಯ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಲಡಾಕ್ ಅತಿಸೂಕ್ಷ್ಮ ಪ್ರದೇಶವಾಗಿರುವುದರಿಂದ ಅಲ್ಲಿನ ಜನರು ವ್ಯಕ್ತಪಡಿಸಿರುವ ಆಶಯಗಳನ್ನು ಕೇಂದ್ರ ಸರ್ಕಾರ ನಿರ್ಲಕ್ಷಿಸಬಾರದು. ಬಿಸಿ ರಕ್ತದ ಯುವಜನರ ಆಕ್ರೋಶವನ್ನು ನಿಯಂತ್ರಿಸುವುದು ಕಷ್ಟ ಎನ್ನುವುದನ್ನು ನೆರೆಯ ಬಾಂಗ್ಲಾ ದೇಶ ಮತ್ತು ನೇಪಾಳದಲ್ಲಿ ನಡೆದ ದಿಢೀರ್ ಹೋರಾಟಗಳನ್ನು ಕೇಂದ್ರ ಸರ್ಕಾರ ಗಮನದಲ್ಲಿಟ್ಟುಕೊಳ್ಳುವುದು ಹಿಂದೆಂದಿಗಿಂತಲೂ ಈಗ ಅವಶ್ಯ.

” ಲಡಾಖ್ ಜನರು ಕೇಂದ್ರ ಸರ್ಕಾರದ ಮುಂದಿಟ್ಟಿರುವ ಬೇಡಿಕೆಗಳ ಬಗ್ಗೆ ಕೇಂದ್ರ ಗೃಹ ಸಚಿವಾಲಯ ಒಂದೆರಡುಬಾರಿ ಮಾತುಕತೆ ನಡೆಸಿದೆಯಾದರೂ ಅವರ ಬೇಡಿಕೆಗೆ ಸ್ಪಂದಿಸುವ ಸ್ಪಷ್ಟ ಸೂಚನೆ ಇಲ್ಲವಾಗಿರುವುದು ಈಗಿನ ಯುವಜನರ ಹೋರಾಟಕ್ಕೆ ಕಾರಣ ಎನ್ನಲಾಗಿದೆ.”

ಆಂದೋಲನ ಡೆಸ್ಕ್

Recent Posts

ಮುಡಾ ಮಾಜಿ ಆಯುಕ್ತ ದಿನೇಶ್‌ ಕುಮಾರ್‌ ಲೋಕಾ ಪೊಲೀಸ್‌ ಕಸ್ಟಡಿಗೆ : ಕೋರ್ಟ್‌ ಆದೇಶ

ಮೈಸೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ನಡೆದಿದೆ ಎನ್ನಲಾದ ಹಗರಣದ ಸಂಬಂಧ ಹೆಚ್ಚಿನ ವಿಚಾರಣೆಗಾಗಿ ಮಾಜಿ ಆಯುಕ್ತ ದಿನೇಶ್‌…

4 hours ago

ಅನಾರೋಗ್ಯ ಹಿನ್ನಲೆ ದುಬಾರೆ ಸಾಕಾನೆ ʻತಕ್ಷʼ ಸಾವು

ಮಡಿಕೇರಿ : ದುಬಾರೆ ಶಿಬಿರದ ಸಾಕಾನೆ ತಕ್ಷ ಅನಾರೋಗ್ಯದಿಂದ ಸೋಮವಾರ ರಾತ್ರಿ ಮೃತಪಟ್ಟಿದೆ. ಡಿ.೮ರಂದು ರಾತ್ರಿ ೯.೩೦ರ ಸಮಯದಲ್ಲಿ ತಕ್ಷ…

6 hours ago

ಮೈಸೂರು | ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನಿಗೇ ಚಾಕು ಇರಿತ

ಮೈಸೂರು : ಕೇಳಿದ ತಕ್ಷಣ ಹಣ ಕೊಡಲಿಲ್ಲ ಎಂಬ ಕಾರಣಕ್ಕಾಗಿ ಸ್ನೇಹಿತನ ಮೇಲೆ ಯುವಕನೊಬ್ಬ ಚಾಕುವಿನಿಂದ ಇರಿದಿರುವ ಘಟನೆ ನಗರದಲ್ಲಿ…

7 hours ago

ಮಹಿಳಾ ಉದ್ಯೋಗಿಗೆ ಕಿರುಕುಳ : ಕಾರ್ಖಾನೆ ಮಾಲೀಕನ ವಿರುದ್ದ ದೂರು

ಮೈಸೂರು : ಲೈಂಗಿಕವಾಗಿ ಸಹಕರಿಸಿದಲ್ಲಿ ಚೆನ್ನಾಗಿ ನೋಡಿಕೊಳ್ಳುತ್ತೀನಿ ಎಂದು ಮಹಿಳಾ ಉದ್ಯೋಗಿಗೆ ಕಿರುಕುಳ ನೀಡಿದ ಖಾಸಗಿ ಕಾರ್ಖಾನೆ ಮಾಲೀಕನ ವಿರುದ್ದ…

7 hours ago

ಚಾಮುಂಡೇಶ್ವರಿ ದರ್ಶನ : ಸೇವಾ ಶುಲ್ಕ ಏರಿಕೆಗೆ ಖಂಡನೆ

ಮೈಸೂರು : ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ದೇವಿಯ ದರ್ಶನ ಹಾಗೂ ಸಮೂಹ ದೇವಾಲಯಗಳ ಸೇವೆಗಳ ಶುಲ್ಕಗಳನ್ನು ಏರಿಸಿರುವ ರಾಜ್ಯ…

7 hours ago

ಮೂರು ತಿಂಗಳಲ್ಲಿ ಪಿಎಸ್‌ಐ ಖಾಲಿ ಹುದ್ದೆ ಭರ್ತಿ : ಗೃಹ ಸಚಿವ ಪರಮೇಶ್ವರ್‌

ಬೆಳಗಾವಿ : ರಾಜ್ಯದಲ್ಲಿ 545 ಪಿಎಸ್‌ಐ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದು, ಈಗಾಗಲೇ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ. ಮೂರು ತಿಂಗಳ…

7 hours ago