ದೆಹಲಿ ಕಣ್ಣೋಟ: ಶಿವಾಜಿ ಗಣೇಶನ್ ಅವರ ವಾರದ ಅಂಕಣ
ಜನಗಣತಿಯ ಜನಸಂಖ್ಯೆ ಗಣನೆ ಬದಲಿಗೆ ಎಲ್ಲ ರಾಜ್ಯಗಳ ಲೋಕಸಭೆ ಮತ್ತು ವಿಧಾನಸಭೆಗಳ ಸ್ಥಾನಗಳನ್ನು ಶೇ. ೫೦ರಷ್ಟು ಹೆಚ್ಚಿಸುವ ತೀರ್ಮಾನ
ಲೋಕಸಭೆ ಮತ್ತು ರಾಜ್ಯ ವಿಧಾನಸಭೆ ಕ್ಷೇತ್ರಗಳ (ಸ್ಥಾನ) ಪುನರ್ ವಿಂಗಡಣೆಯ ಸಂವಿಧಾನದ ೧೩೨ನೇ ತಿದ್ದುಪಡಿ ಮಸೂದೆ ಮಂಡನೆಗಾಗಿ ಸೋಮವಾರ ( ೩೦.೧೧.೨೦೨೬)ಮೂರು ದಿನಗಳ ವಿಶೇಷ ಅಧಿವೇಶನ ಆರಂಭವಾಗುತ್ತಿದ್ದು, ಕಳೆದ ಏಪ್ರಿಲ್ನಲ್ಲಿ ಸೋಲಾಗಿದ್ದ ತಿದ್ದುಪಡಿ ಮಸೂದೆಯನ್ನು ಕೆಲವು ಬದಲಾವಣೆಗಳೊಡನೆ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಈಗ ಮತ್ತೆ ಮಂಡಿಸಿ ಉಭಯ ಸದನಗಳ ಅಂಗೀಕಾರ ಪಡೆಯಲು ಮುಂದಾಗಿದೆ. ಕಳೆದ ಅಧಿವೇಶನದಲ್ಲಿ ಮುಖಭಂಗ ಅನುಭವಿಸಿದ್ದ ಎನ್ಡಿಎ ಸರ್ಕಾರ ಪ್ರತಿಪಕ್ಷಗಳ ವಿಶ್ವಾಸ ಪಡೆಯುವ ಬದಲಿಗೆ ವಿರೋಧ ಪಕ್ಷಗಳನ್ನು ಒಡೆಯುವ ಮತ್ತು ಅವರ ಬೇಡಿಕೆಗಳನ್ನು ಪೂರೈಸುವ ಭರವಸೆಯಿಂದ ಮತ್ತೆ ಸದನದ ಮುಂದೆ ಬಂದಿದೆ. ಈ ಬಾರಿ ಈ ತಿದ್ದುಪಡಿ ಮಸೂದೆಯು ಅಂಗೀಕಾರವಾಗಲು ಎನ್ಡಿಎ ಸರ್ಕಾರ ಹತ್ತಾರು ಕಸರತ್ತುಗಳನ್ನು ನಡೆಸುತ್ತಿದೆ.
ಕಳೆದ ಬಾರಿ ೨೦೨೩ರಲ್ಲಿಯೇ ಅಂಗೀಕಾರವಾಗಿದ್ದ ಶೇ. ೩೩ರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡುವ ಕಾಯ್ದೆಯನ್ನು ಮತ್ತೆ ಕ್ಷೇತ್ರಪುನರ್ ವಿಂಗಡಣೆ ಮಸೂದೆಯಲ್ಲಿ ಸೇರಿಸುವ ಮೂಲಕ ಪ್ರತಿಪಕ್ಷಗಳ ಟೀಕೆ ಮತ್ತು ವಿರೋಧ ಕಾರಣವಾಗಿತ್ತು.
ಸಂವಿಧಾನ ತಿದ್ದುಪಡಿ ಮೂಸೂದೆಯು ಲೋಕಸಭೆಯ ಅಂಗೀಕಾರ ಪಡೆಯಲು ಎರಡನೇ ಮೂರರಷ್ಟು ಬಹುಮತ ಪಡೆಯಲು ೩೫೨ ಸದಸ್ಯ ಬಲಬೇಕಾಗಿತ್ತು. ಆಗ ಎನ್ ಡಿ ಎ ಸರ್ಕಾರ ಮಸೂದೆ ಪರ ಪಡೆದದ್ದು ೨೯೮ ಮತಗಳು ಮತ್ತು ವಿರೋಧವಾಗಿ ೨೩೦ ಮತಗಳ ಚಲಾವಣೆ ಆಗಿ ಮಸೂದೆ ಹಳ್ಳಹಿಡಿಯುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಮುಖಭಂಗ ಅನುಭವಿಸಬೇಕಾಯಿತು.
ಉತ್ತರ ಭಾರತದ ರಾಜ್ಯಗಳಲ್ಲಿ ಇತಿಮಿತಿ ಇಲ್ಲದೆ ಹೆಚ್ಚುತ್ತಿರುವ ಜನಸಂಖ್ಯೆಯಿಂದ ಅವುಗಳ ಸ್ಥಾನಗಳು ಹೆಚ್ಚಾಗಿ ಉತ್ತರ ಭಾರತದ ರಾಜಕಾರಣವೇ ಕೇಂದ್ರ ಸರ್ಕಾರವನ್ನು ಆಳುವುದಕ್ಕೆ ಅವಕಾಶ ನೀಡುವ ಬಗೆಗೆ ದಕ್ಷಿಣ ರಾಜ್ಯಗಳಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು. ಜನಸಂಖ್ಯೆಯನ್ನು ನಿಯಂತ್ರಣದಲ್ಲಿಟ್ಟುಕೊಂಡಿರುವ ದಕ್ಷಿಣ ರಾಜ್ಯಗಳು ಕಡಿಮೆ ಪ್ರಾತಿನಿಧ್ಯ ಹೊಂದುವ ಬಲವಾದ ಕಾರಣದಿಂದ ಮುಖ್ಯವಾಗಿ ತಮಿಳುನಾಡು ಡಿಎಂಕೆ ಸರ್ಕಾರ ದೊಡ್ಡದನಿಯಲ್ಲಿ ಅಪಸ್ವರ ತೆಗೆಯಿತು. ಆದ್ದರಿಂದ ಈ ಮಸೂದೆಯ ಆಳ ಅಗಲವನ್ನು ವಿಶ್ಲೇಷಿಸುವ ಮೂಲಕ ಅದರಿಂದಾಗುವ ಅನಾಹುತವನ್ನು ಡಿಎಂಕೆ ಯಶಸ್ವಿಯಾಗಿ ತಡೆದದ್ದು ಈಗ ಇತಿಹಾಸ.
ಇದೇ ಅಂದಿನ ೧೩೧ನೇ ಸಂವಿಧಾನ ತಿದ್ದುಪಡಿ ಮಸೂದೆಗೆ ಸೋಲಾಗಲು ಪ್ರಮುಖ ಕಾರಣವಾಗಿತ್ತು. ಹಾಗಾಗಿ ಜನಗಣತಿಯ ಜನಸಂಖ್ಯೆಯನ್ನು ಗಣನೆಗೆ ತೆಗೆದುಕೊಳ್ಳುವ ಬದಲಿಗೆ ಎಲ್ಲ ರಾಜ್ಯಗಳ ಲೋಕಸಭೆ ಮತ್ತು ವಿಧಾನಸಭೆಗಳ ಸ್ಥಾನಗಳನ್ನು ಶೇ. ೫೦ರಷ್ಟು ಹೆಚ್ಚಿಸುವ ತೀರ್ಮಾನ ಕೈಗೊಳ್ಳುವಮೂಲಕ ಎನ್ಡಿಎ ಸರ್ಕಾರ ೧೩೨ನೇ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಮಂಡಿಸಿ ಅಂಗೀಕಾರ ಪಡೆಯುವ ವಿಶ್ವಾಸವನ್ನು ಹೊಂದಿದೆ.
ಈಗಾಗಲೇ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಪಕ್ಷದ ಲೋಕಸಭೆ ಮತ್ತು ರಾಜ್ಯಸಭೆಗಳ ಸದಸ್ಯರಲ್ಲಿ ಒಡಕು ಉಂಟುಮಾಡಲಾಗಿದೆ. ಲೋಕಸಭೆಯಲ್ಲಿ ಸುದೀಪ್ ಬಂಡೋಪಾಧ್ಯಾಯ ನೇತೃತ್ವದಲ್ಲಿ ೨೦ ಮಂದಿ ನ್ಯಾಷನಲಿಸ್ಟ್ ಸಿಟಿಜನ್ ಪಾರ್ಟಿ ಆಫ್ ಇಂಡಿಯಾ (ಎನ್ಸಿಪಿಐ) ಜೊತೆ ಸೇರಿಕೊಂಡಿದ್ದಾರೆ.
ಪಕ್ಷವನ್ನು ಒಡೆದು ಬೇರೊಂದು ಪಕ್ಷದ ಜೊತೆ ಸೇರಿರುವ ಇವರದ್ದು ಪಕ್ಷಾಂತರವಾಗಿದ್ದು, ಪಕ್ಷಾಂತರ ವಿರೋಧಿ ಕಾಯ್ದೆಯನ್ವಯ ಇವರ ಸದಸ್ಯತ್ವವನ್ನು ರದ್ದು ಮಾಡಬೇಕೆಂದು ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿಯ ಲೋಕಸಭೆಯ ನಾಯಕ ಅಭಿಷೇಕ್ ಬ್ಯಾನರ್ಜಿ, ಸ್ಪೀಕರ್ ಓಂ ಪ್ರಕಾಶ್ ಬಿರ್ಲಾ ಅವರಿಗೆ ಅರ್ಜಿ ಸಲ್ಲಿಸಿದ್ದು ಅದಿನ್ನೂ ತೀರ್ಮಾನವಾಗಬೇಕಿದೆ. ಆದರೆ ಈ ೨೦ ಮಂದಿ ಸದಸ್ಯರು ಲೋಕಸಭೆಯಲ್ಲಿ ಮತಚಲಾಯಿಸುವ ಅಧಿಕಾರವನ್ನು ಹೊಂದಿರುವುದಾಗಿ ಸ್ಪೀಕರ್ ಕಾರ್ಯಾಲಯದ ಮೂಲಗಳು ಹೇಳುತ್ತಿವೆ. ಹೀಗಾಗಿ ಎನ್ಡಿಎಗೆ ಈ ೨೦ ಮಂದಿ ಸದಸ್ಯರ ಬೆಂಬಲ ಈಗ ಅನಾಯಾಸವಾಗಿ ಸಿಗಲಿದೆ.
ದಕ್ಷಿಣ ರಾಜ್ಯಗಳ ವಿಶೇಷವಾಗಿ ೨೨ ಸದಸ್ಯ ಬಲ ಹೊಂದಿರುವ ಡಿಎಂಕೆಯ ಬೆಂಬಲ ಪಡೆಯಲು ಕೇಂದ್ರ ಸರ್ಕಾರ ಜನಸಂಖ್ಯೆ ಬದಲಿಗೆ ಎಲ್ಲ ರಾಜ್ಯಗಳ ಪ್ರಾತಿನಿಧ್ಯವನ್ನು ಶೇ. ೫೦ರಷ್ಟು ಹೆಚ್ಚಿಸುವ ಭರವಸೆಯೊಂದಿಗೆ ತಿದ್ದುಪಡಿ ಮಸೂದೆಯನ್ನು ಮಂಡಿಸಲು ಸಜ್ಜಾಗಿದೆ. ಡಿಎಂಕೆಯು ತನ್ನ ಬೇಡಿಕೆಯನ್ನು ಈಡೇರಿಸುವುದಾದರೆ ಮಾತ್ರ ತಿದ್ದುಪಡಿ ಮಸೂದೆಗೆ ಬೆಂಬಲ ನೀಡುವುದಾಗಿ ಪಟ್ಟು ಹಿಡಿದಿರುವ ಕಾರಣ ಪ್ರಧಾನಿ ಮೋದಿ ಅವರು ತಮ್ಮ ನಿಲುವನ್ನು ಬದಲಾಯಿಸಿಕೊಳ್ಳುವ ಮೂಲಕ ಡಿಎಂಕೆಯ ಬೇಡಿಕೆಯ ಮುಂದೆ ಮಂಡಿಯೂರಿದ್ದಾರೆ ಎಂದರೆ ತಪ್ಪಾಗಲಾರದು.
ಇದರ ಜೊತೆಗೆ ಶರದ್ ಪವಾರ್ ನೇತೃತ್ವದ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷವು (ಎನ್ ಸಿ ಪಿಫ್ ಎಸ್ಪಿ) ೮ ಮಂದಿ ಸದಸ್ಯರಿದ್ದು, ಆ ಪಕ್ಷದ ರಹಸ್ಯ ಬೇಡಿಕೆಯನ್ನು ಒಪ್ಪಿ ಅದರ ಬೆಂಬಲ ಪಡೆಯುವ ಎಲ್ಲ ಸಾಧ್ಯತೆಗಳು ಈಗ ಬಹಿರಂಗಗೊಂಡಿದೆ. ಹೀಗಾಗಿ ಎನ್ಸಿಪಿಯ ನಾಯಕಿ ಸುಪ್ರಿಯಾ ಸುಳೆ, ಶನಿವಾರ ನಡೆದ ಇಂಡಿಯಾ ಮೈತ್ರಿಕೂಟದ ಸಭೆಗೆ ಗೈರಾಗಿದ್ದರು. ಇಂಡಿಯಾ ಮೈತ್ರಿಕೂಟದಲ್ಲಿ ಸಕ್ರಿಯರಾಗಿದ್ದ ಸುಪ್ರಿಯಾ ಸುಳೆ ಅವರು ತಮ್ಮ ತಂದೆ ಪವಾರ್ ಅವರು ಅಸ್ವಸ್ಥರಾಗಿ ಆಸ್ಪತ್ರೆಯಲ್ಲಿರುವುದರ ಕಾರಣ ನೀಡಿ ಆ ಮೈತ್ರಿಕೂಟದಿಂದ ದೂರವುಳಿಯುವ ಮೂಲಕ ಮೋದಿ ಸರ್ಕಾರದ ಬೆಂಬಲಕ್ಕೆ ನಿಂತಿರುವುದು ಸ್ಪಷ್ಟವಾಗಿದೆ. ಎನ್ಸಿಪಿಯ ಬೆಂಬಲ ದೊರೆತು ಈ ಉದ್ದೇಶಿತ ತಿದ್ದುಪಡಿ ಮಸೂದೆಯು ಅಂಗೀಕಾರವಾದರೆ ಕೇಂದ್ರ ಸಂಪುಟಕ್ಕೆ ಸುಪ್ರಿಯಾ ಸುಳೆ ಅವರನ್ನು ತೆಗೆದುಕೊಳ್ಳುವ ಮತ್ತು ಡಿಎಂಕೆಗೂ ಪ್ರಾತಿನಿಧ್ಯ ನೀಡುವ ಸುದ್ದಿ ಹರಿದಾಡುತ್ತಿದೆ.
ಆದರೆ ಪವಾರ್ ಅವರು ಪ್ರಧಾನಿ ಮೋದಿ ಅವರ ಜೊತೆ ಮಾತನಾಡಿ, ತಮ್ಮ ಬೆಂಬಲ ಬೇಕಾದರೆ ತಮ್ಮ ಮಗಳನ್ನು ಮಹಾರಾಷ್ಟ್ರದ ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂಬ ಬೇಡಿಕೆಯನ್ನು ಮುಂದಿಟ್ಟಿದ್ದಾರೆ ಎನ್ನಲಾಗಿದೆ. ಆದರೆ ಈ ವರದಿಗಳನ್ನು ಯಾವುದೇ ಪಕ್ಷವು ಅಧಿಕೃತವಾಗಿ ಘೋಷಿಸಿಲ್ಲ.
ಕಳೆದ ಮೇ ತಿಂಗಳಲ್ಲಿ ನಡೆದ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಡಿಎಂಕೆಯನ್ನು ದೂರವಿಟ್ಟು ಸರ್ಕಾರ ರಚಿಸಲು ಬೆಂಬಲದ ಕೊರತೆ ಎದುರಿಸುತ್ತಿದ್ದ ಟಿವಿಕೆಯನ್ನು ಬೆಂಬಲಿಸಿದ್ದರಿಂದ ಡಿಎಂಕೆಯು ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟದಿಂದ ದೂರವೇ ಉಳಿಯಿತು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈ ವಿಷಯದಲ್ಲಿ ತಮ್ಮನ್ನು ಸಂಪರ್ಕಿಸದೆ ಮತ್ತು ತಮ್ಮ ಮೈತ್ರಿಯನ್ನೂ ಕಡೆಗಣಿಸಿ ಟಿವಿಕೆ ಬೆಂಬಲಕ್ಕೆ ನಿಲ್ಲುವ ಮೂಲಕ ತಮ್ಮ ಬೆನ್ನಿಗೆ ಚೂರಿಹಾಕಿದರು ಎನ್ನುವುದು ಸ್ಟಾಲಿನ್ ಕೋಪಕ್ಕೆ ಕಾರಣವಾಗಿದ್ದು ಆ ಕಹಿ ಇನ್ನೂ ಮಾಯವಾಗಿಲ್ಲ.
ಈ ವಿಶ್ವಾಸದ್ರೋಹದ ಆರೋಪವನ್ನು ಬಗೆಹರಿಸಿಕೊಳ್ಳುವ ಯಾವುದೇ ಪ್ರಯತ್ನವನ್ನೂ ರಾಹುಲ್ ಗಾಂಧಿ ಇದುವರೆಗೂ ಮಾಡಿಲ್ಲದಿರುವುದು ಅವರ ಅಪ್ರಬುದ್ಧ ರಾಜಕೀಯ ನಡೆಯಾಗಿದೆ ಎಂದೇ ದೂರಲಾಗುತ್ತಿದೆ. ಸಂವಿಧಾನ ತಿದ್ದುಪಡಿ ಮಸೂದೆಯಂತಹ ವಿಷಯದಲ್ಲೂ ಆಳುವ ಮತ್ತು ಪ್ರತಿಪಕ್ಷಗಳ ಸಹಮತ ಪಡೆಯುವಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾಮಾಣಿಕ ಪ್ರಯತ್ನ ಮಾಡಿದಂತೆ ಕಾಣುತ್ತಿಲ್ಲ. ಸರ್ವಪಕ್ಷಗಳ ಸಭೆಗಳಿಗೆ ಪ್ರಧಾನಿ ಮೋದಿ ಹಾಜರಾಗುವ ಬದಲಿಗೆ ತಪ್ಪಿಸಿಕೊಳ್ಳುವುದೇ ಹೆಚ್ಚಾಗಿದೆ. ಇದೇ ಚಾಳಿ ಲೋಕಸಭೆಯಲ್ಲಿನ ವಿರೋಧಿ ನಾಯಕ ರಾಹುಲ್ ಗಾಂಧಿ ಅವರದ್ದು ಸಹಾ. ದೇಶದ ಅನೇಕ ಅನಾಹುತಗಳಿಗೆ ಪಂಡಿತ್ ಜವಾಹರ್ ಲಾಲ್ ನೆಹರೂ ಅವರ ನೀತಿ ಮತ್ತು ಕೌಟುಂಬಿಕ ರಾಜಕಾರಣವೇ ಕಾರಣ ಎಂದು ತಾವು ಪ್ರಧಾನಿಯಾದಾಗಿನಿಂದ ನಿರಂತರವಾಗಿ ದೂಷಿಸಿಕೊಂಡು ಬಂದ ಕಾರಣ ಕಾಂಗ್ರೆಸ್ ಸಹಾ ಬಿಜೆಪಿಯ ನಾಯಕರ, ವಿಶೇಷವಾಗಿ ಮೋದಿ ಮತ್ತು ಅಮಿತ್ ಶಾ ವಿರುದ್ಧ ಪ್ರತಿಕಾರವಾಗಿ ನಿಂತಿದೆ.
ಹೀಗಾಗಿ ಪ್ರಧಾನಿ ಮೋದಿ ಮತ್ತು ವಿರೋಧಿ ನಾಯಕ ರಾಹುಲ್ ಗಾಂಧಿ ಯಾವುದೇ ಸಂದರ್ಭದಲ್ಲಿಯೂ ಕೈ ಕುಲುಕಿ ನಗೆ ಬೀರಿ ಮಾತನಾಡಿದ ಸಂದರ್ಭಗಳಿಲ್ಲದಿರುವುದು ವಿಪರ್ಯಾಸ. ಉಭಯ ನಾಯಕರಲ್ಲಿಯೂ ಪರಸ್ಪರ ಗೌರವಿಸುವ ಮತ್ತು ಜನತಂತ್ರ ವ್ಯವಸ್ಥೆಯಲ್ಲಿ ದೊಡ್ಡತನದಿಂದ ನಡೆದುಕೊಳ್ಳುವ ಪ್ರಯತ್ನ ಇಬ್ಬರು ನಾಯಕರಲ್ಲಿಯೂ ಇದುವರೆಗೂ ಕಂಡು ಬಂದಿಲ್ಲ. ಹೀಗಾಗಿ ಅನೇಕ ಸಂದರ್ಭದಲ್ಲಿ ಆಳುವ ಮತ್ತು ವಿರೋಧ ಪಕ್ಷಗಳಲ್ಲಿರಬೇಕಾದ ಜನತಾಂತ್ರಿಕ ನಡೆ ಮಾಯವಾಗಿರುವುದು ಹಲವು ಸಮಸ್ಯೆಗಳನ್ನು ಗಟ್ಟಿಗೊಳಿಸುತ್ತಿದೆ.
ಈಗಿನ ತಿದ್ದುಪಡಿ ಮಸೂದೆಯ ಪ್ರಕಾರ ಲೋಕಸಭೆಯ ಸದಸ್ಯ ಬಲ ೫೪೩ರಿಂದ ೮೫೦ಕ್ಕೆ ಹೆಚ್ಚಲಿದೆ. ಹಾಗೆಯೇ ರಾಜ್ಯ ವಿಧಾನಸಭೆಗಳ ಕ್ಷೇತ್ರಗಳ ಸಂಖ್ಯೆಯೂ ಹೆಚ್ಚಲಿದೆ. ಜೊತೆಯಲ್ಲಿಯೇ ಶೇ. ೩೩ರಷ್ಟು ಸ್ಥಾನಗಳು ಮಹಿಳೆಯರಿಗೆ ಮೀಸಲಿಡಲಾಗುವುದು. ಈ ತಿದ್ದುಪಡಿ ಮಸೂದೆಯು ೨೦೨೯ರಲ್ಲಿ ನಡೆಯುವ ಲೋಕಸಭೆ ಚುನಾವಣೆಯಲ್ಲಿ ಜರಿಗೆ ಬರಲಿದೆ. ಈ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಅಂಗೀಕಾರವಾಗಲು ೩೬೦ ಸದಸ್ಯರ ಬೆಂಬಲ ಬೇಕಿದೆ. ಎನ್ಡಿಎ ಸಂಖ್ಯಾಬಲ ಈಗ ೩೨೦ ಇದ್ದು, ಈಗಾಗಲೇ ಡಿಎಂಕೆ, ಎನ್ಸಿಪಿ ಮತ್ತು ಜಗನ್ಮೋಹನ ರೆಡ್ಡಿಯವರ ವೈಎಸ್ಆರ್ಪಿ ಬೆಂಬಲ ದೊರೆತಿದೆ. ಉಳಿದ ಸಂಖ್ಯಾಬಲವನ್ನು ಪಡೆಯಲು ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ನಡೆಸಿರುವ ಕಾರ್ಯಾಚರಣೆ ಇನ್ನೂ ರಹಸ್ಯವಾಗಿಯೇ ಉಳಿದಿದೆ.
” ಸಂವಿಧಾನ ತಿದ್ದುಪಡಿ ಮಸೂದೆಯಂತಹ ವಿಷಯದಲ್ಲೂ ಆಳುವ ಮತ್ತು ಪ್ರತಿಪಕ್ಷಗಳ ಸಹಮತ ಪಡೆಯುವಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾಮಾಣಿಕ ಪ್ರಯತ್ನ ಮಾಡಿದಂತೆ ಕಾಣುತ್ತಿಲ್ಲ. ಸರ್ವಪಕ್ಷಗಳ ಸಭೆಗಳಿಗೆ ಪ್ರಧಾನಿ ಮೋದಿ ಹಾಜರಾಗುವ ಬದಲಿಗೆ ತಪ್ಪಿಸಿಕೊಳ್ಳುವುದೇ ಹೆಚ್ಚಾಗಿದೆ.”
ಕರ್ನಾಟಕ ವಿಧಾನಸಭೆಯ ಅತ್ಯಂತ ಕಿರಿಯ ಶಾಸಕ, ನಂಜನಗೂಡು ಮೀಸಲು ಕ್ಷೇತ್ರವನ್ನು ಪ್ರತಿನಿಧಿಸುವ ದರ್ಶನ್ ಧ್ರುವನಾರಾಯಣರ ಸರಳ ‘ಮಂತ್ರ ಮಾಂಗಲ್ಯ’ ಮದುವೆ…
ಮೈಸೂರಿನಲ್ಲಿ ಸುಮಾರು ವರ್ಷಗಳಿಂದ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಾನೂನು ಉಲ್ಲಂಘನೆಯಾದ ಕಟ್ಟಡಗಳು ಪೂರ್ಣಗೊಂಡಿದ್ದರೂ ಸಿ.ಆರ್. (ಕಟ್ಟಡ ಪ್ರಮಾಣ ಪತ್ರ )…
ರಾಜ್ಯದ ಪ್ರಮುಖ ೧೪ ಜಲಾಶಯಗಳಲ್ಲಿ ಕಳೆದ ವರ್ಷಕ್ಕಿಂತ ೧೩೫ ಟಿಎಂಸಿ ನೀರಿನ ಕೊರತೆಯಿದ್ದು, ಕೇವಲ ೬೫ ಟಿಎಂಸಿ ನೀರು ಮಾತ್ರ…
ಅಕ್ಷತಾ “ದೇವಸ್ಥಾನದಲ್ಲಿ ಪೂಜೆ ಮಾಡಲು ಅರ್ಚಕರಿಲ್ಲ. ದೀಪ ಹಚ್ಚಲು ಎಣ್ಣೆ ತಂದುಕೊಡುವವರಿಲ್ಲ. ದೇವಸ್ಥಾನವನ್ನು ಸ್ವಚ್ಛಗೊಳಿಸಲು ಯಾರೂ ಮುಂದೆ ಬರುವುದಿಲ್ಲ. ದೇವಸ್ಥಾನದ…
ಸೂರ್ಯಪುತ್ರ ಹೆಗ್ಗಡದೇವನಕೋಟೆ ಎಲಚಿಕಟ್ಟೆ ಹಾಡಿಯ ಬೆಟ್ಟಕುರುಬರ ಪುಟ್ಟಮ್ಮನ ಕುಟುಂಬ ಬಹಳ ಹಿಂದಿನಿಂದಲೂ ಕಾಡನ್ನೇ ನೆಚ್ಚಿ ಬದುಕಿದವರು. ಕಾಡಿನಲ್ಲೇ ಹುಟ್ಟಿ ಬೆಳೆದ…
ಗೋಳೂರು ನಾರಾಯಣಸ್ವಾಮಿ ನಾವು ಅಣ್ಣ-ತಮ್ಮಂದಿರು ಓದು-ಬರಹ ಮುಗಿಸಿ ಕೆಲಸಕ್ಕೆ ಅಂತ ನಂಜನಗೂಡು-ಮೈಸೂರು ಅಲೆದು, ದುಡಿದು ತಿನ್ನುತ್ತಿದ್ದ ಕಾಲದಲ್ಲಿ ನಮ್ಮನ್ನು ಇನ್ನಿಲ್ಲದಂತೆ…