ಅಂಕಣಗಳು

ಆರ್‌.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ ; ಕವಲು ದಾರಿಯಲ್ಲಿ ಕರ್ನಾಟಕದ ಮುಸ್ಲಿಂ ರಾಜಕಾರಣ

ತಮ್ಮ ಮುಂದಿನ ದಾರಿಯ ಬಗ್ಗೆ ಗಂಭೀರ ಆಲೋಚನೆಯಲ್ಲಿರುವ ಮುಸ್ಲಿಂ ಮತದಾರರು

ಇತ್ತೀಚೆಗೆ ನಡೆದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ನಂತರ ಆಡಳಿತಾರೂಢ ಕಾಂಗ್ರೆಸ್ ಪಾಳೆಯದಲ್ಲಿ ಸಂಭವಿಸುತ್ತಿರುವ ಬೆಳವಣಿಗೆಗಳನ್ನು ನೋಡಿದರೆ ಈ ಮಾತು ಸ್ಪಷ್ಟವಾಗುತ್ತದೆ. ಅಂದ ಹಾಗೆ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆಯಾದ ನಂತರ ಈ ಕ್ಷೇತ್ರದ ಟಿಕೆಟ್ ತಮಗೆ ಬೇಕು ಎಂದು ಮುಸ್ಲಿಂ ನಾಯಕರು ಪಟ್ಟು ಹಿಡಿದಿದ್ದರು. ಹೀಗೆ ಅವರು ಪಟ್ಟು ಹಿಡಿಯಲು ಕ್ಷೇತ್ರದಲ್ಲಿದ್ದ ಮುಸ್ಲಿಂ ಮತದಾರರ ಸಂಖ್ಯೆ ಹೆಚ್ಚಿದ್ದುದೇ ಕಾರಣ.

ಸುಮಾರು ಎರಡು ಲಕ್ಷ ಮೂವತ್ತು ಸಾವಿರದಷ್ಟು ಮತದಾರರನ್ನು ಹೊಂದಿರುವ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಎಂಬತ್ತು ಸಾವಿರಕ್ಕೂ ಅಧಿಕ ಮುಸ್ಲಿಂ ಮತದಾರರಿದ್ದಾರೆ. ಹೀಗೆ ಕ್ಷೇತ್ರದ ಅತ್ಯಂತ ದೊಡ್ಡ ಮತ ಬ್ಯಾಂಕ್ ತಮ್ಮದಾದುದರಿಂದ ತಮಗೇ ಟಿಕೆಟ್ ಕೊಡಬೇಕು ಎಂಬುದು ಮುಸ್ಲಿಂ ನಾಯಕರ ವಾದವಾಗಿತ್ತು.

ಆದರೆ ಇದುವರೆಗೆ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಶಾಮನೂರು ಶಿವಶಂಕರಪ್ಪನವರ ನಿಧನದ ನಂತರ ತೆರವಾಗಿರುವ ಕ್ಷೇತ್ರದಲ್ಲಿ ಶಾಮನೂರು ಕುಟುಂಬದವರಿಗೇ ಟಿಕೆಟ್ ನೀಡಬೇಕು ಎಂದು ಅವರ ಕುಟುಂಬ, ಅದರಲ್ಲೂ ಮುಖ್ಯವಾಗಿ ಗಣಿ ಖಾತೆ ಸಚಿವರಾದ ಎಸ್. ಎಸ್. ಮಲ್ಲಿಕಾರ್ಜುನ್ ಪಟ್ಟು ಹಿಡಿದರು ಮತ್ತು ಟಿಕೆಟ್‌ಗಾಗಿ ತಮ್ಮ ಪುತ್ರ ಸಮರ್ಥ್ ಅವರ ಹೆಸರನ್ನು ಮುಂದೆ ಮಾಡಿದರು.

ಹೀಗೆ ಟಿಕೆಟ್‌ಗಾಗಿ ಶಾಮನೂರು ಕುಟುಂಬ ಮತ್ತು ಮುಸ್ಲಿಂ ನಾಯಕರ ಮಧ್ಯೆ ಪೈಪೋಟಿ ಶುರುವಾದಾಗ ಕಾಂಗ್ರೆಸ್ ವರಿಷ್ಠರು ಮುಸ್ಲಿಮರ ಮನವೊಲಿಸಿ ಶಾಮನೂರು ಶಿವಶಂಕರಪ್ಪನವರ ಮೊಮ್ಮಗ ಸಮರ್ಥ್ ಅವರಿಗೇ ಟಿಕೆಟ್ ಕೊಡಲು ನಿರ್ಧರಿಸಿದರು.

ಆದರೆ ಮನವೊಲಿಕೆಯ ಕಾರ್ಯ ಮುಗಿದ ನಂತರವೂ ಮುಸ್ಲಿಂ ನಾಯಕರು ಸುಮ್ಮನೆ ಕೂರಲಿಲ್ಲ. ಬದಲಿಗೆ ಸಾದಿಕ್ ಪೈಲ್ವಾನ್ ಅವರನ್ನು ಕಣಕ್ಕಿಳಿಯುವಂತೆ ನೋಡಿಕೊಂಡರು ಮತ್ತು ಅವರನ್ನು ಸ್ವತಃ ಮುಖ್ಯಮಂತ್ರಿ ಸಿದ್ದರಾಮ್ಮಯ್ಯನವರು ತಟಸ್ಥರಾಗಿರುವಂತೆ ಮಾಡಿದಾಗ ಬೇರೆ ದಿಕ್ಕಿಗೆ ಹೊರಳಿದರು ಎಂಬುದು ಮುಸ್ಲಿಂ ನಾಯಕರ ಮೇಲಿನ ಸದ್ಯದ ಆರೋಪ.

ಮೂಲಗಳ ಪ್ರಕಾರ ವಸತಿ ಸಚಿವ ಜಮೀರ್ ಅಹ್ಮದ್, ವಿಧಾನಪರಿಷತ್ ಸದಸ್ಯರಾದ ಅಬ್ದುಲ್ ಜಬ್ಬಾರ್ ಮತ್ತು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಜೀರ್ ಅಹ್ಮದ್ ಅವರು ದಾವಣಗೆರೆಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿ ಸಮರ್ಥ್ ಸೋಲಿಗೆ ಖೆಡ್ಡಾ ತೋಡಿದರು ಎಂಬುದು ಈ ಆರೋಪದ ಭಾಗ. ಈ ಮೂಲಗಳು ಹೇಳುವ ಪ್ರಕಾರ, ವಸತಿ ಸಚಿವ ಜಮೀರ್ ಅಹ್ಮದ್ ಅವರು ದಾವಣಗೆರೆ ದಕ್ಷಿಣ ಕ್ಷೇತ್ರದ ವಿಷಯದಲ್ಲಿ ಸ್ವಂತ ಹಿತಾಸಕ್ತಿ ಹೊಂದಿದ್ದರು. ಏಕೆಂದರೆ ಈ ಕ್ಷೇತ್ರದಲ್ಲಿ ವಿಧಾನಪರಿಷತ್ ಸದಸ್ಯರಾದ ಅಬ್ದುಲ್ ಜಬ್ಬಾರ್ ಅವರಿಗೆ ಟಿಕಟ್ ಕೊಡಿಸಿ ಗೆಲ್ಲಿಸಿದರೆ, ಸದ್ಯದಲ್ಲೇ ವಿಧಾನಪರಿಷತ್ ಸದಸ್ಯತ್ವದಿಂದ ನಿವೃತ್ತರಾಗಲಿರುವ ನಜೀರ್ ಅಹ್ಮದ್ ಅವರಿಗೆ ಅಬ್ದುಲ್ ಜಬ್ಬಾರ್ ಅವರು ತೆರವು ಮಾಡಲಿರುವ ವಿಧಾನಪರಿಷತ್ ಸದಸ್ಯತ್ವವನ್ನು ಕೊಡಿಸಬಹುದು. ಹಾಗೆಯೇ ದಾವಣಗೆರೆಯಲ್ಲಿ ಅಬ್ದುಲ್ ಜಬ್ಬಾರ್ ಅವರನ್ನು ಗೆಲ್ಲಿಸಿದರೆ ಮುಂದಿನ ಚುನಾವಣೆಯ ಹೊತ್ತಿಗೆ ಅವರು ನಿವೃತ್ತರಾಗಿ, ತಮ್ಮ ಪುತ್ರನಿಗೆ ಕ್ಷೇತ್ರ ಬಿಟ್ಟುಕೊಡಬಹುದು ಎಂಬುದು ವಸತಿ ಸಚಿವ ಜಮೀರ್ ಅಹ್ಮದ್ ಅವರ ಲೆಕ್ಕಾಚಾರ.

ಆದರೆ ಯಾವಾಗ ತಮ್ಮ ಲೆಕ್ಕಾಚಾರಕ್ಕೆ ಪೂರಕವಾಗಿ ಕಾಂಗ್ರೆಸ್ ವರಿಷ್ಠರು ಅಬ್ದುಲ್ ಜಬ್ಬಾರ್ ಅವರಿಗೆ ಟಿಕೆಟ್ ಕೊಡಲಿಲ್ಲವೋ ಆಗ ಕನಲಿದ ಜಮೀರ್ ಅಹ್ಮದ್ ಅವರು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಎಸ್. ಡಿ. ಪಿ. ಐ. ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅಪ್ಸರ್ ಎಂಬ ಮುಸ್ಲಿಂ ನಾಯಕರಿಗೆ ಶಕ್ತಿ ತುಂಬಿದರು ಮತ್ತು ಅವರಿಗೆ ಶಕ್ತಿ ತುಂಬಿದ ಪರಿಣಾಮವಾಗಿ ಉಪಚುನಾವಣೆಯಲ್ಲಿ ಮುಸ್ಲಿಂ ಮತಗಳು ದೊಡ್ಡ ಸಂಖ್ಯೆಯಲ್ಲಿ ಕಾಂಗ್ರೆಸ್ ವಿರುದ್ಧ ಚಲಾವಣೆಯಾದವು ಎಂಬುದು ಈ ಆರೋಪದ ಮತ್ತೊಂದು ಭಾಗ.

ಆದರೆ ಹೀಗೆ ವಸತಿ ಸಚಿವ ಜಮೀರ್ ಅಹ್ಮದ್ ಅವರೇ ಇರಬಹುದು, ಅಬ್ದುಲ್ ಜಬ್ಬಾರ್ ಮತ್ತು ನಜೀರ್ ಅಹ್ಮದ್ ಅವರೇ ಇರಬಹುದು ಇವರೆಲ್ಲರ ಮೇಲೆ ಇವತ್ತು ಕಾಂಗ್ರೆಸ್ ಪಾಳೆಯದಲ್ಲಿ ಕೇಳಿ ಬರುತ್ತಿರುವ ಆರೋಪಗಳೇನಿವೆ ಇವು ಎಷ್ಟರ ಮಟ್ಟಿಗೆ ನಿಜವೋ ಗೊತ್ತಿಲ್ಲ. ಆದರೆ ಇಂತಹ ಆರೋಪಗಗಳು ತಲೆ ಎತ್ತಿದ ತಕ್ಷಣ ಪಕ್ಷದ ಅಲ್ಪಸಂಖ್ಯಾತರ ಘಟಕದ ನಾಯಕರಾಗಿದ್ದ ಅಬ್ದುಲ್ ಜಬ್ಬಾರ್ ಅವರನ್ನು ಆ ಸ್ಥಾನದಿಂದ ಕೈ ಬಿಡಲಾಯಿತು. ಇದೇ ರೀತಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿದ್ದ ನಜೀರ್ ಅಹ್ಮದ್ ಅವರನ್ನು ವಜಾ ಮಾಡಲಾಯಿತು. ಇದಾದ ಮುಂದಿನ ಭಾಗದಲ್ಲಿ ವಸತಿ ಸಚಿವ ಜಮೀರ್ ಅಹ್ಮದ್ ಅವರೇ ಸಂಕಷ್ಟ ಎದುರಿಸುವವರು ಎಂಬ ಸದ್ಯದ ಮಾತುಗಳೇನಿವೆ ಈ ಮಾತುಗಳೇ ಕರ್ನಾಟಕದ ಮುಸ್ಲಿಂ ರಾಜಕಾರಣ ಕವಲು ದಾರಿಯಲ್ಲಿದೆ ಎಂಬುದರ ಸಂಕೇತವಾಗಿ ಕಾಣುತ್ತಿದೆ.

ಅಂದ ಹಾಗೆ ಕರ್ನಾಟಕದ ಮುಸ್ಲಿಂ ರಾಜಕಾರಣ ಹಿಂದಿನಂತಿಲ್ಲ. ಹಿಂದೆ ಮುಸ್ಲಿಂ ರಾಜಕಾರಣವನ್ನು ಅಜೀಜ್ ಸೇಠ್, ಜಾಫರ್ ಷರೀಫ್, ಸಿ. ಎಂ. ಇಬ್ರಾಹಿಂ ಮತ್ತು ರೋಷನ್ ಬೇಗ್ ಅವರಂತಹ ನಾಯಕರು ಪವರ್ ಫುಲ್ಲಾಗಿಸಿದ್ದರು.

ಅಜೀಜ್ ಸೇಠ್ ಅವರು ಎಷ್ಟು ಖದರಿನಲ್ಲಿ ಮುಸ್ಲಿಂ ಮತ ಬ್ಯಾಂಕನ್ನು ಮುನ್ನಡೆಸಿದರು ಎಂದರೆ ಏಕಕಾಲಕ್ಕೆ ಜಾತ್ಯತೀತ ಮನೋಭಾವದ ನಾಯಕರಾಗಿದ್ದ ಅಜೀಜ್ ಸೇಠ್ ಮತ್ತೊಂದು ಕಡೆಯಿಂದ ಮುಸ್ಲಿಮರ ಹಿತಾಸಕ್ತಿಗೆ ಯಾವುದೇ ಧಕ್ಕೆಯಾಗದಂತೆ ನೋಡಿಕೊಳ್ಳುತ್ತಿದ್ದರ ಮತ್ತು ಇದನ್ನು ಮಾಡಲು ಅವರಿಗೆ ಸಶಕ್ತವಾದ ಧ್ವನಿಯಿತ್ತು. ಮುಂದೆ ಕೇಂದ್ರದ ರೈಲ್ವೆ ಸಚಿವರಾದ ಜಾಫರ್ ಷರೀಫ್ ಅವರು ಕೂಡ ಮುಸ್ಲಿಂ ಕೋಟೆಯನ್ನು ವ್ಯವಸ್ಥಿತವಾಗಿ ನೋಡಿಕೊಂಡು ಬಂದರು. ಇಂದಿರಾ ಗಾಂಧಿ, ರಾಜೀವ್ ಗಾಂಧಿಯವರಂತಹ ನಾಯಕರಿಗೆ ಅತ್ಯಾಪ್ತರಾಗಿದ್ದ ಜಾಫರ್ ಷರೀಫ್ ಅವರು ರಾಜ್ಯ ರಾಜಕಾರಣದ ನಿರ್ಣಾಯಕ ಸನ್ನಿವೇಶಗಳಲ್ಲಿ ಪ್ರಮುಖ ಪಾತ್ರ ವಹಿಸುವ ಶಕ್ತಿ ಹೊಂದಿದ್ದರು. ಇನ್ನು ಮುಸ್ಲಿಂ ಕೋಟೆಯ ಮುಂದೆ ಬಂದು ನಿಂತ ಸಿ. ಎಂ. ಇಬ್ರಾಹಿಂ ಅವರು ಮಾಸ್ ಫುಲ್ಲರ್ ಖ್ಯಾತಿಯ ನಾಯಕ. ಅವರಿಗೆ ಮುಸ್ಲಿಮರ ಹಿತಾಸಕ್ತಿ ಕಾಪಾಡುವುದು ಹೇಗೆ ಗೊತ್ತಿತ್ತೋ ಹಾಗೆಯೇ ಮುಸ್ಲಿಂ ರಾಜಕಾರಣಕ್ಕೆ ಒಂದು ಜಾತ್ಯತೀತ ಚೌಕಟ್ಟನ್ನು ಹಾಕಿಕೊಡುವ ಜಾಣ್ಮೆಯೂ ಇತ್ತು. ಕರ್ನಾಟಕದಲ್ಲಿ ಬಿಜೆಪಿಯ ಮತ ಬ್ಯಾಂಕ್ ಬಲಿಷ್ಠವಾಗಲು ನೆರವಾದ ಹುಬ್ಬಳ್ಳಿಯ ಈದ್ಗಾ ಮೈದಾನದ ವಿವಾದ ಬಹುಕಾಲ ಮುಂದುವರಿದಿದ್ದರೆ ಕರ್ನಾಟಕ ಪದೇ ಪದೇ ಕೋಮುಗಲಭೆಗಳನ್ನು ನೋಡುವ ಸನ್ನಿವೇಶ ಉದ್ಭವವಾಗುತ್ತಿತ್ತು.

ಆದರೆ1994 ರಲ್ಲಿ ಹೆಚ್. ಡಿ. ದೇವೇಗೌಡ ನೇತೃತ್ವದ ಜನತಾದಳ ಸರ್ಕಾರ ಅಸ್ತಿತ್ವಕ್ಕೆ ಬಂದ ಕಾಲದಲ್ಲಿ ಸಿ. ಎಂ. ಇಬ್ರಾಹಿಂ ಅವರು ಜನತಾದಳದ ರಾಜ್ಯಾಧ್ಯಕ್ಷರಾಗಿದ್ದರು. ಆ ಸಂದರ್ಭದಲ್ಲಿ ಅವರು ಕಾಂಗ್ರೆಸ್ ಪಕ್ಷದ ನಾಯಕ ಎ. ಎಂ. ಹಿಂಡಸಗೇರಿ ಅವರ ನೆರವನ್ನು ಪಡೆದು ಹುಬ್ಬಳ್ಳಿಯ ಈದ್ಗಾ ಮೈದಾನದ ವಿವಾದವನ್ನು ಎಷ್ಟು ಸೂಕ್ಷ್ಮವಾಗಿ ಬಗೆಹರಿಸಿದರೆಂದರೆ ಮುಂದೆ ಕೋಮುಗಲಭೆಗಳ ನಾಡಾಗುವ ಅಪಾಯದಿಂದ ಕರ್ನಾಟಕ ಬಚಾವಾಯಿತು.

ಅರ್ಥಾತ್ ಅಲ್ಲಿ ಈದ್ಗಾ ಮೈದಾನದ ಜಾಗದ ಮೇಲಿನ ಸ್ವಾಮ್ಯಕ್ಕಾಗಿ ಮುಸ್ಲಿಮರು ಮತ್ತು ಹಿಂದೂಗಳ ನಡುವೆ ವೈಮನಸ್ಯ ಶುರು ಮಾಡಿದ ರಾಜಕೀಯ ಸನ್ನಿವೇಶವಿದ್ದಾಗ ಮೈದಾನದಲ್ಲಿ ಮಸ್ಲಿಮರೇ ರಾಷ್ಟ್ರಧ್ವಜ ಹಾರಿಸುವಂತೆ ನೋಡಿಕೊಂಡಿದ್ದರು ಸಿ. ಎಂ. ಇಬ್ರಾಹಿಂ.

ಇದಾದ ನಂತರ ಮುಸ್ಲಿಂ ಮತ ಕೋಟೆಯನ್ನು ಹೀಗೆಯೇ ಜಾತ್ಯತೀತ ಚೌಕಟ್ಟಿಗೆ ಪೂರಕವಾಗಿ ನಡೆಸಿಕೊಂಡು ಬಂದವರು ರೋಷನ್ ಬೇಗ್. ಆದರೆ ಇವತ್ತು ಮುಸ್ಲಿಂ ಮತ ಕೋಟೆಯ ಮುಂದೆ ಅಜೀಜ್ ಸೇಠ್, ಜಾಫರ್ ಷರೀಫ್, ಸಿ. ಎಂ. ಇಬ್ರಾಹಿಂ, ರೋಷನ್ ಬೇಗ್ ಅವರಂತಹ ನಾಯಕರಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಈಗ ಕಾಂಗ್ರೆಸ್‌ನಲ್ಲಿ ಉದ್ಭವಿಸಿರುವ ಗೊಂದಲವನ್ನು ನಿವಾರಿಸುವ ವಿಧಾನ ಯಾರಿಗೂ ಗೊತ್ತಾಗದಂತಾಗಿದೆ. ವಸ್ತುಸ್ಥಿತಿ ಎಂದರೆ ಜಮೀರ್ ಅಹ್ಮದ್, ಮತ್ತವರ ಪಡೆಯ ಪತನವನ್ನು ಕಾಂಗ್ರೆಸ್ ಪಾಳೆಯದಲ್ಲಿರುವ ಇತರ ಮುಸ್ಲಿಂ ಮುಖಂಡರು ಬಯಸುತ್ತಿದ್ದಾರೆ. ಹೀಗೆ ಅವರು ಬಯಸುತ್ತಿರುವುದಕ್ಕೆ ಪೂರಕವಾಗಿ ಜಮೀರ್ ಅಹ್ಮದ್, ಮತ್ತವರ ಆಪ್ತರು ಆರೋಪಕ್ಕೆ ಸಿಲುಕಿದ್ದಾರೆ.

ಹೀಗಾಗಿ ಇವತ್ತಿನ ಸ್ಥಿತಿಯಲ್ಲಿ ಮುಸ್ಲಿಂ ಕೋಟೆಯಲ್ಲಿ ಬಣ ರಾಜಕೀಯ ತೀವ್ರವಾಗುವ ಲಕ್ಷಣಗಳು ಕಾಣುತ್ತಿದ್ದು,ಇದು ಯಾವ ಹಂತಕ್ಕೆ ಹೋದರೂ ಕಾಂಗ್ರೆಸ್ ಪಕ್ಷ ಘಾಸಿ ಅನುಭವಿಸುವುದಂತೂ ನಿಶ್ಚಿತ. ಆದರೆ ಇವತ್ತು ದೇಶದ ಮುಸ್ಲಿಂ ರಾಜಕಾರಣ ಎಷ್ಟು ಕವಲು ದಾರಿಯಲ್ಲಿದೆ ಎಂದರೆ ಅದಕ್ಕೀಗ ಬಿಜೆಪಿ ಬೇಕಿಲ್ಲ, ಕಾಂಗ್ರೆಸ್ ಬೇಕಿದ್ದರೂ ಅಲ್ಲಿ ತಲ್ಲಣಗಳು ಶುರುವಾಗಿವೆ. ಹೀಗಾಗಿ ತಮ್ಮ ದಾರಿ ಮುಂದೆ ಹೇಗಿರಬೇಕು ಎಂಬ ವಿಷಯದಲ್ಲಿ ಮುಸ್ಲಿಂ ಮತದಾರರು ಗಂಭೀರ ಯೋಚನೆಯಲ್ಲಿದ್ದಾರೆ. ಅವರ ಈ ಯೋಚನೆಯೇ ಮುಸ್ಲಿಂ ರಾಜಕಾರಣವನ್ನು ಕವಲು ದಾರಿಯಲ್ಲಿ ನಿಲ್ಲಿಸಿದೆ. ಮುಂದೇನಾಗುತ್ತದೋ ಕಾದು ನೋಡಬೇಕು.

ಆಂದೋಲನ ಡೆಸ್ಕ್

Recent Posts

ಕೈಬೀಸಿ ಕರೆಯುತ್ತಿದೆ ಕುರಹಟ್ಟಿ ವಾಟರ್‌ಫಾಲ್ಸ್‌

ಕೆ.ಆರ್.ಎಸ್. ಅಣೆಕಟ್ಟೆಯಿಂದ ಹರಿಯುವ ವಿಶ್ವೇಶ್ವರಯ್ಯ ನಾಲೆಯ ಆಕರ್ಷಣೆ ಹೇಮಂತ್‌ಕುಮಾರ್‌ ಮಂಡ್ಯ : ಸುಡುವ ಬಿಸಿಲಿನಿಂದ ಕಂಗಾಲಾದ ಜನರು ತಂಪನ್ನೆರೆಯುವ ಜಲಪಾತಗಳತ್ತ…

4 mins ago

ಓದುಗರ ಪತ್ರ | ಬಿಸಿಲ ಬೇಗೆ ಮತ್ತು ನಕಲಿ ಮಾವಿನ ರಸದ ಹಾವಳಿ

ಬೇಸಿಗೆಯ ಸುಡು ಬಿಸಿಲು ಮತ್ತು ಅಸಹನೀಯ ಧಗೆಯಿಂದಾಗಿ ಜನರು ತಂಪು ಪಾನೀಯಗಳ ಮೊರೆ ಹೋಗುವುದು ಅನಿವಾರ್ಯ ವಾಗಿದೆ. ಇದನ್ನೇ ಬಂಡವಾಳ…

18 mins ago

ಓದುಗರ ಪತ್ರ | ಹೆಚ್ಚಿನ ಬಸ್ ಸೌಲಭ್ಯ ಕಲ್ಪಿಸಿ

ಮೈಸೂರು ಜಿಲ್ಲೆಯ ತಿ.ನರಸೀಪುರದಿಂದ ಮಂಡ್ಯ ನಗರಕ್ಕೆ ಬೆಳಗಿನ ಸಮಯದಲ್ಲಿ ಬಸ್ ಸೌಲಭ್ಯಗಳಿಲ್ಲದ್ದರಿಂದ ಈ ಮಾರ್ಗದಲ್ಲಿ ತೆರಳುವ ಅನೇಕ ಶಾಲಾ ಕಾಲೇಜು…

26 mins ago

ಓದುಗರ ಪತ್ರ | ಅವೈಜ್ಞಾನಿಕ ಆಸ್ತಿ ತೆರಿಗೆ ಪದ್ಧತಿ ಕೊನೆಗೊಳ್ಳಲಿ

ಮೈಸೂರು ಮಹಾನಗರ ಪಾಲಿಕೆಯು ಸಾರ್ವಜನಿಕರು ಆಸ್ತಿ ತೆರಿಗೆಯನ್ನು ಕಟ್ಟಲು ಏಪ್ರಿಲ್ ತಿಂಗಳಿನಲ್ಲಿ ಮಾತ್ರ ಶೇ.5ರಷ್ಟು ರಿಯಾಯಿತಿಯನ್ನು ನೀಡಿದೆ. ನಂತರದ ಮೇ…

30 mins ago

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಏಪ್ರಿಲ್‌ 21 ಮಂಗಳವಾರ  

3 hours ago

ಕೊಳ್ಳೇಗಾಲ| ಹಳೆ ವೈಷಮ್ಯ ಓರ್ವನ ಕೊಲೆ

ಕೊಳ್ಳೇಗಾಲ: ರಾತ್ರಿ ಕಂಠಪೂರ್ತಿ ಕುಡಿದ ಇಬ್ಬರ ನಡುವೆ ಹಳೇ ವೈಷಮ್ಯದಿಂದ ಕಲಹ ನಡೆದು ಓರ್ವನನ್ನು ಕೊಲೆ ಮಾಡಿ ಪೊಲೀಸರಿಗೆ ಶರಣಾಗಿರುವ…

12 hours ago