ಅಂಕಣಗಳು

ಜನಪರ ಪತ್ರಕರ್ತರೆಂಬುವರು ಹೇಗಿದ್ದರೆ ಚೆಂದ?

ಡಿ. ಉಮಾಪತಿ

ಮುಖ್ಯಧಾರೆಯ ಮಾಧ್ಯಮ (Mainstream Media) ಎಂದರೇನು? ಪತ್ರಕರ್ತರು ಕೇವಲ ಸಂದೇಶವಾಹಕರೇ (Messengers)?

ಸಮೂಹ ಮಾಧ್ಯಮಗಳು ಜನಜೀವನವನ್ನು ಆಳುತ್ತಿರುವ ಸಮಾಜವಿದು. ಇಂತಹ ಸಮಾಜದಲ್ಲಿ ಜನತೆಯ ಮಿದುಳು ತೊಳೆಯುವ ಮೋಸ ಎಡೆಬಿಡದೆ ಜರುಗುತ್ತಲೇ ಇರುತ್ತದೆ. ಪ್ರಭುತ್ವ ಮತ್ತು ಕಾರ್ಪೊರೇಟ್ ಶಕ್ತಿಗಳ ಜೊತೆ ಅಪವಿತ್ರ ಮೈತ್ರಿ ಮಾಡಿಕೊಂಡಿರುವ ಸಮೂಹಮಾಧ್ಯಮಗಳ ದುಷ್ಟ ಕೆಲಸವಿದು. ಪ್ರಭುತ್ವ ಮತ್ತು ಕಾರ್ಪೊರೇಟ್ ಶಕ್ತಿಗಳ ಅಗತ್ಯಗಳು ಮತ್ತು ಸುಳ್ಳುಗಳ ಜರಡಿಯಲ್ಲಿ ಜನಸಾಮಾನ್ಯರ ಗ್ರಹಿಕೆಯನ್ನು ಸೋಸಿ ರೂಪಿಸಲಾಗುತ್ತಿದೆ.

ನೋಮ್ ಚಾಮ್‌ ಮತ್ತು ಎಡ್ವರ್ಡ್ ಹರ್ಮನ್ ಅವರ ‘ಮ್ಯಾನ್ಯುಫ್ಯಾಕ್ಚರಿಂಗ್ ಕನ್ಸೆಂಟ್’ ಕೃತಿ ನೆನಪಿಗೆ ಬರುತ್ತಿದೆಯಲ್ಲವೇ?

ಚಾಮ್ ಸ್ಕಿ ಚಿಂತನೆಯ ಜಾಡಿನಲ್ಲೇ ನಡೆದ ಜಾನ್ ಪಿಲ್ಟರ್ ಎಂಬ ಮಾನವ ಕಾಳಜಿಯ ವಿರಳ ಪತ್ರಕರ್ತ ಆಡಿದ ಮಾತುಗಳು ಮತ್ತು ಎತ್ತಿದ ಪ್ರಶ್ನೆಗಳಿವು. ಇತ್ತೀಚೆಗೆ ಕೊನೆಯುಸಿರೆಳೆದ. ಮಾನವ ಕಾರುಣ್ಯವನ್ನು ವೃತ್ತಿ ಧೈಯ ಮಾಡಿಕೊಂಡಿದ್ದ. 84 ವರ್ಷದ ಈತನ ನಿಧನ ಮಾನವೀಯ ಪತ್ರಿಕಾವೃತ್ತಿಗೆ ಉಂಟಾದ ಮಹಾನಷ್ಟ.

ಈ ಪತ್ರಕರ್ತ-ಬರೆಹಗಾರ-ವಿದ್ವಾಂಸ ಹಾಗೂ ಸಾಕ್ಷ್ಯಚಿತ್ರಗಳ ತಯಾರಕ ಆಸ್ಟ್ರೇಲಿಯಾ ಮೂಲದವನು. ಬ್ರಿಟಿನ್ನಿನಲ್ಲೇ ಬದುಕಿ ಬಾಳಿದ.

ಆಳುವ ವರ್ಗಗಳ ಪರವಾಗಿ ಜನರ ಸಮ್ಮತಿಯನ್ನು ತಯಾರಿಸುವ ಕಾರ್ಖಾನೆಗಳಾಗಿ ಅಪಾರ ಬಂಡವಾಳದ ಸಮೂಹ ಮಾಧ್ಯಮಗಳು ಕೆಲಸ ಮಾಡುವ ಪರಿಯನ್ನು Edward Herman ಮತ್ತು Noam Chomsky 1988ರಷ್ಟು ಹಿಂದೆಯೇ ಬಯಲು ಮಾಡಿದ್ದಾರೆ.

ಪತ್ರಕರ್ತರು ತಮ್ಮನ್ನು ಕೇವಲ ಸಂದೇಶ ತಲುಪಿಸುವವರನ್ನಾಗಿ ನೋಡಿದರೆ ಸಾಲದು. ತಾವು ಸಾಗಿಸುವ ಸಂದೇಶದ ಗುಪ್ತಕಾರ್ಯಸೂಚಿಗಳು ಮತ್ತು ಆ ಸಂದೇಶವನ್ನು ಸುತ್ತುವರೆದಿರುವ ಸುಳ್ಳುಗಳನ್ನೂ ತಿಳಿದಿರಬೇಕು ಎಂಬ ಮಹತ್ವದ ಮಾತುಗಳನ್ನು ಹೇಳಿದ್ದ.

‘ಮುಖ್ಯಧಾರೆ’ ಮಾಧ್ಯಮ ಎಂದು ಕರೆಯಲಾಗುವ ಮಾಧ್ಯಮವು ಆಧಿಕಾರಿಕ ಅಥವಾ ಸರ್ಕಾರಿ ಸತ್ಯವನ್ನು ಹರಿಸುವ ಕಾಲುವೆ ಇಲ್ಲವೇ ಪ್ರತಿಧ್ವನಿ ಎಂದು ಟೀಕಿಸುತ್ತಿದ್ದ. ಮುಖ್ಯಧಾರೆಯ ಪತ್ರಿಕಾ ವೃತ್ತಿಯು ಜನತೆಯ ಹಿತಕ್ಕಿಂತ ಮಿಗಿಲಾಗಿ ಕಾರ್ಪೊರೇಟ್ ಹಿತಾಸಕ್ತಿಗಳನ್ನೇ ಪ್ರತಿನಿಧಿಸುತ್ತದೆ ಎಂದಿದ್ದ.

ಶೀತಲಯುದ್ಧ ಕಾಲದ ಅಮೆರಿಕೆಯ ಒಂದು ಮೀಡಿಯಾ ಸನ್ನಿವೇಶ- ರಷ್ಯನ್ ಪತ್ರಕರ್ತರ ತಂಡವೊಂದು ಅಮೆರಿಕೆಯ ಪ್ರವಾಸ ಮಾಡಿತು. ಕಟ್ಟಕಡೆಯ ದಿನ ಈ ತಂಡದ ವಕ್ತಾರನೊಬ್ಬ ಆತಿಥೇಯರ ಸಭೆಯನ್ನು ಉದ್ದೇಶಿಸಿ ಮಾತಾಡಿದ- ನಿಮ್ಮ ಎಲ್ಲ ಟಿವಿ ಮತ್ತು ಸುದ್ದಿಪತ್ರಿಕೆಗಳನ್ನು ನೋಡಿ ಸೋಜಿಗವೆನಿಸಿತು. ಇವುಗಳೆಲ್ಲದರ ಅಭಿಮತ ಹೆಚ್ಚ ಕಡಿಮೆ ಒಂದೇ. ಇಂತಹ ಫಲಿತಾಂಶ ಬರಬೇಕಿದ್ದರೆ ನಮ್ಮ ದೇಶದಲ್ಲಿ ಜನರನ್ನು ಜೈಲಿಗೆ ಹಾಕುತ್ತೇವೆ, ಅವರ ಉಗುರುಗಳನ್ನು ಕೀಳುತ್ತೇವೆ. ಆದರೆ ನೀವುಗಳು ಅಂಥದ್ದೇನನ್ನೂ ಮಾಡುತ್ತಿಲ್ಲ. ಗುಟ್ಟೇನು?

ಕಾಲದೇಶಗಳನ್ನು ಮೀರಿ ಮಾರ್ದನಿಸುವ ಮಾತುಗಳಿವು.

ಯುದ್ಧಗಳನ್ನು ಸೃಷ್ಟಿಸಿ ಪರಸ್ಪರ ಕಾದಾಡಿಸುವಲ್ಲಿ ಮೀಡಿಯಾದ ಪಾತ್ರವನ್ನು ಪರಿಶೀಲಿಸುವ ಪಿಲ್ಟ‌ ಸಾಕ್ಷ್ಯಚಿತ್ರ The War You Don’t See (2010). ‘ನೀವು ಕಂಡೂ ಕಾಣದ ಸಮರ’ ಎಂಬ ಶೀರ್ಷಿಕೆಯೇ ಅತ್ಯಂತ ಧ್ವನಿಪೂರ್ಣ. ಅಫ್ಘಾನಿಸ್ತಾನ, ಇರಾಕ್ ಯುದ್ಧಗಳು ಮತ್ತು ಪ್ಯಾಲೆಸ್ತೀನ್ ಮೇಲೆ ಇಸ್ರೇಲ್ ಆಕ್ರಮಣದ ಸೀಳುನೋಟದ ಪ್ರಯತ್ನವಿದು. ಒಂದೆಡೆ ಸಿಐಎ ಸಾರ್ವಜನಿಕ ಅಭಿಪ್ರಾಯವನ್ನು ಉತ್ಪಾದಿಸಿದರೆ, ಈ ದಿಸೆಯಲ್ಲಿ ಸರ್ಕಾರಿ ನಿಲುವನ್ನು ಹಿಂಬಾಲಿಸಿ ತಾನೂ ಶಾಮೀಲಾಗುತ್ತದೆ ಮೀಡಿಯಾ. ‘ಪ್ರಾಪಗ್ಯಾಂಡವು (ಪ್ರಚಾರಸಮರ) ಮೀಡಿಯಾವನ್ನು ಅವಲಂಬಿಸುತ್ತದೆ. ದೂರದ ದೇಶಗಳು ಒತ್ತಟ್ಟಿಗಿರಲಿ, ದೇಶದ ಪ್ರಜೆಗಳಾದ ನಿಮ್ಮನ್ನೇ ಠಕ್ಕಿನ ಗುರಿಯಾಗಿಸುತ್ತದೆ’ ಎಂಬ ನಿಜವನ್ನು ಹೇಳುವ ಅದೆಷ್ಟು ಪತ್ರಕರ್ತರು ಕಾಣಸಿಗುತ್ತಾರೆ?

ಸರ್ಕಾರಿ ಆರೋಗ್ಯ ಸೇವೆಗಳ ಮೇಲೆ ಸರ್ಕಾರಗಳು ಸಾರುವ ಗುಪ್ತಸಮರ ಕುರಿತ ಸಾಕ್ಷ್ಯಚಿತ್ರ The Dirty War on the National Health Services (2019). ತೆವಳಿ ತಡವರಿಸಿ ಕದ್ದುಮುಚ್ಚಿ ಈ ಸೇವೆಗಳನ್ನು ಖಾಸಗೀಕರಿಸುವ ಈ ಕ್ರಿಯೆಯು ಹೆಚ್ಚು ಹೆಚ್ಚು ಬಡತನವನ್ನು ಮತ್ತು ಸೂರು ರಹಿತರನ್ನು ಸೃಷ್ಟಿಸುತ್ತದೆ. ಆಗ ಸೃಷ್ಟಿಯಾಗುವ ಅಸ್ತವ್ಯಸ್ತ ಸ್ಥಿತಿಯನ್ನು ಮತ್ತಷ್ಟು ಸುಧಾರಣೆಗಳನ್ನು ತರಲು ಉಪಯೋಗಿಸಿಕೊಳ್ಳಲಾಗುತ್ತದೆ ಎಂಬುದು ಪಿಲ್ಟರ್ ಪ್ರತಿಪಾದಿಸುವ ಘೋರ ನಿಷ್ಠುರ ಸತ್ಯ.

ಅಮೆರಿಕೆ, ಆಸ್ಟ್ರೇಲಿಯಾ ಹಾಗೂ ಬ್ರಿಟಿಷ್ ವಿದೇಶಾಂಗ ನೀತಿಯ ಕಟು ವಿಮರ್ಶಕ. ಈ ಮೂರೂ ದೇಶಗಳ ವಿದೇಶಾಂಗ ನೀತಿಯು ಸಾಮ್ರಾಜ್ಯಶಾಹಿ ಮತ್ತು ವಸಾಹತುಶಾಹಿ ಚಾಲಿತ ಎಂಬುದು ಆತನ ಪ್ರತಿಪಾದನೆಯಾಗಿತ್ತು.
ತಮ್ಮ ಹುಟ್ಟುದೇಶ ಆಸ್ಟ್ರೇಲಿಯಾ ತನ್ನ ಮೂಲನಿವಾಸಿಗಳನ್ನು ಗುಲಾಮರಾಗಿ ನಡೆಸಿಕೊಂಡ ಜನಾಂಗೀಯ ವರ್ಣಭೇದ ನೀತಿಯನ್ನೂ, ಅದರ ಕ್ರೌರ್ಯವನ್ನೂ ಆತ ಪುರಾವೆಗಳ ಸಹಿತ ಟೀಕಿಸಿದ. The Secret Country: The First Australians Fight Back (1985) and Welcome to Australia (1999) ಮುಂತಾದ ಏಳು ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿದ.

‘ಮೂಲನಿವಾಸಿಗಳು ನೆಲೆಸಿರುವ ನೆಲಗಳು ಗಣಿಗಾರಿಕೆ ಕಾರ್ಪೊರೇಷನ್ ಗಳ ಬೋರ್ಡ್ ರೂಮುಗಳ ಬಾಯಿಗಳಲ್ಲಿ ನೀರೂರಿಸುವಂತಹ ಹೇರಳ ಖನಿಜ ಸಂಪತ್ತಿನ ಸೀಮೆಗಳು ಎಂಬುದು ಬೆರಗುಬಡಿಸುವ ಸತ್ಯ’ ಎನ್ನುತ್ತಾನೆ ಬ್ರಿಟಿಷ್ ಲೇಖಕ ಮತ್ತು ಸಿನೆಮಾ ವಿಮರ್ಶಕ ಪೀಟರ್ ಬ್ರಾಡ್ ಶಾ. ಮಧ್ಯಭಾರತದ ಆದಿವಾಸಿ ಸೀಮೆಗಳ ಸುಡುವಾಸ್ತವ ಕೂಡ ಇದೇ ಆಗಿದೆಯಲ್ಲವೇ?

‘ವಿಷಯ ಮತ್ತು ವಸ್ತುಗಳು ತಮ್ಮಲ್ಲಿ ತಾವೇ ಮಾತಾಡಿಕೊಳ್ಳಲು ಬಿಟ್ಟಾಗ (ಪಿಲ್ಟರ್ ನಡುವೆ ನಿಂತು ಉಪದೇಶ ಮಾಡದೆ ಇದ್ದಾಗ) ಅನ್ಯಾಯಗಳು ಹಸಿ ಗಾಯಗಳಂತೆ ಡವಡವಿಸುತ್ತವೆ’ ಎನ್ನುತ್ತದೆ ಮತ್ತೊಂದು ವಿಮರ್ಶೆ.

ಜಗತ್ತಿನ ಮುಂಚೂಣಿ ಆರ್ಥಿಕ ಶಕ್ತಿಯಾಗಿ ಚೀನಾದ ಉದಯವು ಇಳೆಯ ಮೇಲಿನ ಸರ್ವಮಾನವ ವ್ಯವಹಾರಗಳನ್ನು ನಿಯಂತ್ರಿಸಿ ಆಳುವ ಅಮೆರಿಕೆಯ ದೈವಿಕ ಹಕ್ಕುಗಳಿಗೆ ಒದಗಿದ ಗಂಡಾಂತರ ಎಂಬ ವ್ಯಂಗ್ಯವು The Coming War on China (2016) ಸಾಕ್ಷಚಿತ್ರದಲ್ಲಿ ಅನುರಣಿಸಿದೆ. ಪೋಲ್ ಪಾಟ್ ಎಂಬ ತೀವ್ರ ಎಡಪಂಥೀಯ ಆಡಳಿತಗಾರನ ಬಿಗಿ ಮುಷ್ಠಿಯಲ್ಲಿ ಗಾಯಗೊಂಡ ಕಾಂಬೋಡಿಯಾದ ನರಮೇಧಗಳ ಕುರಿತ ಆತನ ವಿಶೇಷ ವರದಿಗಳು ಮತ್ತು ಸಾಕ್ಷ್ಯಚಿತ್ರ Year Zero: the Silent Death of Cambodia ವಿಶ್ವದ ಗಮನ ಸೆಳೆದಿದ್ದವು.

Stealing a Nation (ದೇಶವೊಂದರ ಕಳವು) ಎಂಬ ಸಾಕ್ಷ್ಯಚಿತ್ರ ಹಿಂದೂ ಮಹಾಸಾಗರದಲ್ಲಿನ ಚಾಗಸ್ ದ್ವೀಪ ವಾಸಿಗಳನ್ನು ತಮ್ಮ ಹುಟ್ಟು ನೆಲದಿಂದ ಹೊರದಬ್ಬಿ ಬ್ರಿಟನ್ ಮತ್ತು ಅಮೆರಿಕೆ ನಡೆಸಿದ ದೌರ್ಜನ್ಯಗಳ ಕುರಿತದ್ದಾಗಿತ್ತು. The War on Democracy ಅಮೆರಿಕೆಯ ವಿದೇಶಾಂಗ ನೀತಿಯ ಮೇಲೆ ಆತ ನಡೆಸಿದ ನಿರಂತರ ಪ್ರಹಾರವಾಗಿತ್ತು. ದಕ್ಷಿಣ ಅಮೆರಿಕಾ ಎಂಬ ತನ್ನ ಹಿತ್ತಲಿನಲ್ಲಿ ಅಮೆರಿಕೆಯು ತನಗೆ ಬೇಡವಾದ ಸರ್ಕಾರಗಳನ್ನು ಉರುಳಿಸಿ, ತನ್ನ ಕೈಗೊಂಬೆ ಸರ್ವಾಧಿಕಾರಿ ದೊಣ್ಣೆನಾಯಕರನ್ನು ಅಧಿಕಾರದಲ್ಲಿ ಪ್ರತಿಷ್ಠಾಪಿಸುತ್ತಿತ್ತು.

ಚಿಲಿಯ ಜನನಾಯಕ ಸಾಲ್ವಡರ್ ಅಲ್ಲೆಂಡೆ ಈ ಕೃತ್ಯಕ್ಕೆ ದೊಡ್ಡ ನಿದರ್ಶನ. ಈತನ ಸರ್ಕಾರವನ್ನು ಕಿತ್ತು ಹಾಕಿ ಜನರಲ್ ಅಗಸ್ಟೋ ಪಿನೋಸೆ ಎಂಬ ಮಿಲಿಟರಿ ಸರ್ವಾಧಿಕಾರಿಯನ್ನು ಅಧಿಕಾರಕ್ಕೆ ತಂದಿತ್ತು. ಇಂತಹ ದುಷ್ಟ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಹಲವು ನಿವೃತ್ತ ಸಿಐಎ ಏಜೆಂಟರನ್ನು ಈ ಸಾಕ್ಷ್ಯಚಿತ್ರಕ್ಕಾಗಿ ಪಿಲ್ಟರ್ ಸಂದರ್ಶಿಸಿದ್ದ. 2002ರಲ್ಲಿ ವೆನಿಜುವೆಲಾದ ಅಧ್ಯಕ್ಷ ಹೂಗೋ ಶಾವಝ್ ಅವರ ಸರ್ಕಾರವನ್ನು ಉರುಳಿಸುವ ಪ್ರಯತ್ನವೂ ಈ ಚಿತ್ರದಲ್ಲಿ ದಾಖಲಾಯಿತು. ದಕ್ಷಿಣ ಅಮೆರಿಕೆಯ ಉದ್ದಗಲಕ್ಕೆ ಜನಪ್ರಿಯ ಸರ್ಕಾರಗಳು ತಲೆಯೆತ್ತುವುದು ಮತ್ತು ದಕ್ಷಿಣ ಅಮೆರಿಕೆಯ ನಿಸರ್ಗ ಸಂಪತ್ತಿನ ಸಮಾನ ಹಂಚಿಕೆ ಕುರಿತ ಈ ಸರ್ಕಾರಗಳ ವಾದಕ್ಕೆ ಸ್ಪಂದಿಸಿರುವ ಸಾಕ್ಷ್ಯಚಿತ್ರವಿದು.

Palestine is Still an Issue’ ಎಂಬ ಆತನ ಮತ್ತೊಂದು ಸಾಕ್ಷ್ಯಚಿತ್ರ 2002ರಲ್ಲೇ ಬಿಡುಗಡೆಯಾಗಿತ್ತು. ಪ್ಯಾಲೆಸ್ತೀನಿ ಜನತೆಗೆ ಐತಿಹಾಸಿಕ ದ್ರೋಹ ಬಗೆಯಲಾಗಿದೆ. ಇಸ್ರೇಲಿನ ಈ ಅಕ್ರಮ ಮತ್ತು ಪಾಶವೀಯ ಆಕ್ರಮಣ ಕೊನೆಗೊಳ್ಳುವ ತನಕ ಯಾರಿಗೂ ಶಾಂತಿ ದಕ್ಕುವುದಿಲ್ಲ, ಇಸ್ರೇಲಿಗಳೂ ಸೇರಿದಂತೆ ಎಂದು ಸಾರಿದ್ದ.

ಪಿಲ್ಡರ್‌ನಂತಹವರು ಪತ್ರಕರ್ತರಿಗೆ ಮಾಧ್ಯಮ ಸಂಸ್ಥೆಗಳಿಗೆ ಮಾದರಿ ಆಗಬೇಕಾದ ಜರೂರತ್ತಿದೆ ಜಗತ್ತಿಗೆ.

andolanait

Recent Posts

911 ಅಕ್ರಮ ವಿದೇಶಿ ನುಸುಳುಕೋರರು ಪತ್ತೆ : ಗೃಹ ಸಚಿವ ಖರ್ಗೆ

ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಅಕ್ರಮ ವಲಸಿಗರ ಸಂಖ್ಯೆ ಹೆಚ್ಚುತ್ತಿದ್ದು, ನಗರದಲ್ಲಿ 911 ಅಕ್ರಮ ವಿದೇಶ ನುಸುಳುಕೋರರು ಇರೋದಾಗಿ ಖುದ್ದು…

10 hours ago

ಕಾವೇರಿ ವನ್ಯಧಾಮದಲ್ಲಿ 8 ಕಳ್ಳಬೇಟೆ ಶಿಬಿರ ಧ್ವಂಸ : ಎಫ್‌ಐಆರ್ ದಾಖಲು, ತನಿಖೆ ಚುರುಕು

ಹನೂರು : ಕಾವೇರಿ ವನ್ಯಜೀವಿ ವಿಭಾಗದ ಹನೂರು ವಲಯ ವ್ಯಾಪ್ತಿಯಲ್ಲಿ ಆಗಸ್ಟ್ 15ರಿಂದ 19ರವರೆಗೆ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದಾರೆ. ಇಲಾಖಾ…

11 hours ago

1984 ಸಿಖ್‌ ವಿರೋಧಿ ದಂಗೆ ಪ್ರಕರಣ; ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಸಜ್ಜನ್‌ ಕುಮಾರ್‌ ನಿಧನ

ಹೊಸದಿಲ್ಲಿ : ಸಾವಿರಾರು ಜನರ ಸಾವಿಗೆ ಕಾರಣವಾದ 1984ರ ಸಿಖ್ ವಿರೋಧಿ ಗಲಭೆಯ ಸಂದರ್ಭದಲ್ಲಿ ಐವರು ವ್ಯಕ್ತಿಗಳ ಹತ್ಯೆ ಪ್ರಕರಣದಲ್ಲಿ…

13 hours ago

ನಾರಾಯಣಸ್ವಾಮಿಗೆ ಕಮಾಂಡೆಂಟ್‌ ಬೆಳ್ಳಿ ಪದಕ

ಮೈಸೂರು: ನಗರದ ಸಂತ ಮರಿಯಾ ದಿ ಮಥಿಯಾಸ್ ಶಾಲೆಯ ಶಿಕ್ಷಕ ನಾರಾಯಣಸ್ವಾಮಿ ಅವರು ಮೈಸೂರು ೩ ಕರ್ನಾಟಕ ರಾಷ್ಟ್ರೀಯ ಕೆಡೆಟ್…

13 hours ago

ಹನೂರು ಎನ್‌ಕೌಂಟರ್‌ ಬೆನ್ನಲ್ಲೇ ಕಳ್ಳಬೇಟೆ ಕಡಿವಾಣಕ್ಕೆ ಸರ್ಕಾರದ ಚಿಂತನೆ

ಬೆಂಗಳೂರು: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿ ನಡೆದ ಎನ್‌ಕೌಂಟರ್‌ ಪ್ರಕರಣದ ಬೆನ್ನಲ್ಲೇ ಆ ಭಾಗದಲ್ಲಿ ನಡೆಯುತ್ತಿರುವ ಕಳ್ಳಬೇಟೆ ಪ್ರಕರಣಗಳನ್ನು ರಾಜ್ಯ…

17 hours ago

ಟೋಲ್ ಬಳಿ ಸೈನ್ ಬೋರ್ಡ್‌ಗೆ ಖಾಸಗಿ ಬಸ್ ಡಿಕ್ಕಿ; ಇಬ್ಬರು ದುರ್ಮರಣ, 20ಕ್ಕೂ ಹೆಚ್ಚು ಜನರಿಗೆ ಗಾಯ

ಮಂಡ್ಯ: ಟೋಲ್‌ ಬಳಿಯ ಸೈನ್ ಬೋರ್ಡ್‌ಗೆ ಅತಿ ವೇಗವಾಗಿ ಬಂದ ಬಸ್ ಡಿಕ್ಕಿ ಹೊಡೆದ ಪರಿಣಾಮ ಬಸ್‌ನಲ್ಲಿದ್ದ ಇಬ್ಬರು ಸ್ಥಳದಲ್ಲೇ…

17 hours ago