ಚಾಮರಾಜನಗರ

ಹನೂರು ತಾಲ್ಲೂಕಿನಲ್ಲಿ ಕೇಂದ್ರ ಬರ ಅಧ್ಯಯನ ತಂಡದಿಂದ ಎರಡನೇ ದಿನದ ಸಮಗ್ರ ಪರಿಶೀಲನೆ

ಹನೂರು: ತಾಲ್ಲೂಕಿನಾದ್ಯಂತ ತೀವ್ರ ಬರಗಾಲ ಆವರಿಸಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಬರ ಅಧ್ಯಯನ ತಂಡವು ಎರಡನೇ ದಿನವಾದ ಇಂದು ಹನೂರು ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬರದ ತೀವ್ರತೆಯನ್ನು ಸಮಗ್ರವಾಗಿ ಅಧ್ಯಯನ ನಡೆಸಿತು.

ಕೇಂದ್ರ ತಂಡದ ಮುಖ್ಯಸ್ಥ ಡಾ. ಸುದಾಮ್ ಭಾಗ್ ನೇತೃತ್ವದಲ್ಲಿ ಆಗಮಿಸಿದ್ದ ಅಧಿಕಾರಿಗಳ ತಂಡವು ಮೊದಲಿಗೆ ಹನೂರು ತಾಲೂಕಿನ ಹುಲ್ಲೇಪುರ ಗ್ರಾಮದ ರೈತ ಮಹಿಳೆ ರಾಜಮ್ಮಣ್ಣಿ ಅವರ ಜಮೀನಿಗೆ ಭೇಟಿ ನೀಡಿತು.

2.42 ಎಕರೆಯಲ್ಲಿ ಮೆಕ್ಕೆಜೋಳ ಸಂಪೂರ್ಣ ಒಣಗಿ ಹಾಳು: ರಾಜಮ್ಮಣ್ಣಿ ಅವರು 2.42 ಎಕರೆ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಿದ್ದರು. ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಬೆಳೆ ಮೊಳಕೆಯೊಡೆದ ಕೆಲವೇ ದಿನಗಳಲ್ಲಿ ಒಣಗಿ ಸಂಪೂರ್ಣ ಹಾನಿಗೀಡಾಗಿದೆ. ಕಣ್ಣೀರು ಹಾಕುತ್ತಾ ಕೇಂದ್ರ ತಂಡದ ಮುಂದೆ ತಮ್ಮ ಅಳಲನ್ನು ತೋಡಿಕೊಂಡ ರೈತ ಮಹಿಳೆ, ಬಿತ್ತನೆಗಾಗಿ ಮಾಡಿದ ಸಾಲ ತೀರಿಸಲು ಆಗುತ್ತಿಲ್ಲ. ಜೀವನೋಪಾಯಕ್ಕಾಗಿ ಕೇಂದ್ರ ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸಬೇಕು ಎಂದು ಮನವಿ ಮಾಡಿದರು.

300 ಹಸುಗಳ ಡೇರಿಗೆ ಭೇಟಿ – ಮೇವಿಗೆ ಹಾಹಾಕಾರ: ನಂತರ ತಂಡವು ಹುಬ್ಬೆಹುಣಸೆ ಗ್ರಾಮದಲ್ಲಿ ರೈತ ಪ್ರಕಾಶ್ ಅವರ ಡೇರಿಗೆ ಭೇಟಿ ನೀಡಿತು. ಇಲ್ಲಿ ಸುಮಾರು 300 ಹಸುಗಳನ್ನು ಸಾಕಾಣಿಕೆ ಮಾಡಲಾಗುತ್ತಿದ್ದು, ದಿನವೊಂದಕ್ಕೆ 2,500 ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ.

ಕೇಂದ್ರ ತಂಡದೊಂದಿಗೆ ಮಾತನಾಡಿದ ರೈತ ಪ್ರಕಾಶ್, ಕಳೆದ ಮೂರು ತಿಂಗಳಿನಿಂದ ಮೇವಿನ ಬೆಲೆ ದುಪ್ಪಟ್ಟಾಗಿದೆ. ಹಸುಗಳಿಗೆ ಮೇವು ಪೂರೈಸಲು ಹರಸಾಹಸ ಪಡಬೇಕಾಗಿದೆ. ಕುಡಿಯುವ ನೀರಿಗೂ ತೀವ್ರ ಅಭಾವ ಎದುರಾಗಿದ್ದು, ಟ್ಯಾಂಕರ್ ಮೂಲಕ ನೀರು ತರಿಸಬೇಕಾಗಿದೆ. ಬರಗಾಲ ಮುಂದುವರಿದರೆ ದನಕರುಗಳನ್ನು ಉಳಿಸಿಕೊಳ್ಳುವುದು ಕಷ್ಟ ಎಂದು ತಮ್ಮ ಸಂಕಷ್ಟವನ್ನು ವಿವರಿಸಿದರು. ಮೇವಿನ ಲಭ್ಯತೆ ಮತ್ತು ಕುಡಿಯುವ ನೀರಿನ ಪೂರೈಕೆ ಬಗ್ಗೆ ಅಧಿಕಾರಿಗಳು ಮಾಹಿತಿ ಸಂಗ್ರಹಿಸಿದರು.

ಅಜ್ಜೀಪುರದಲ್ಲಿ ಅರಿಶಿನ ಬೆಳೆ ಸಂಪೂರ್ಣ ನಾಶ – ರೈತನಿಗೆ 2 ಲಕ್ಷ ನಷ್ಟ: ಮಧ್ಯಾಹ್ನದ ವೇಳೆಗೆ ತಂಡವು ಅಜ್ಜೀಪುರ ಗ್ರಾಮದ ರೈತ ಮಲ್ಲೇಗೌಡ ಅವರ ಅರಿಶಿನದ ಜಮೀನಿಗೆ ಭೇಟಿ ನೀಡಿತು.

ಎರಡು ಎಕರೆ ಪ್ರದೇಶದಲ್ಲಿ ಅರಿಶಿನ ಬಿತ್ತನೆ ಮಾಡಿದ್ದ ರೈತ ಮಲ್ಲೇಗೌಡ ಅವರು, ಬಿತ್ತನೆ ಬೀಜ, ಗೊಬ್ಬರ, ಕೂಲಿ ಸೇರಿ ಸುಮಾರು 2 ಲಕ್ಷ ರೂ. ಖರ್ಚು ಮಾಡಿದ್ದೇನೆ. ಆದರೆ ಮಳೆ ಇಲ್ಲದೆ ಗೆಡ್ಡೆಗಳು ಕೊಳೆತು ಬೆಳೆ ಸಂಪೂರ್ಣ ಹಾನಿಯಾಗಿದೆ. ಜೊತೆಗೆ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಯೂ ತೀವ್ರವಾಗಿದೆ ಎಂದು ಅಧಿಕಾರಿಗಳಿಗೆ ತಿಳಿಸಿದರು.

ಈ ವೇಳೆ ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿ, ಹನೂರು ತಾಲೂಕಿನಲ್ಲಿ ಒಂದರಲ್ಲೇ ಸುಮಾರು 1,800 ಹೆಕ್ಟೇರ್ ಪ್ರದೇಶದಷ್ಟು ಅರಿಶಿನ ಬೆಳೆ ಹಾನಿಯಾಗಿದೆ. ಮೆಕ್ಕೆಜೋಳ, ರಾಗಿ ಸೇರಿದಂತೆ ಒಟ್ಟು ಶೇ. 70ಕ್ಕೂ ಹೆಚ್ಚು ಬೆಳೆ ನಾಶವಾಗಿದೆ ಎಂದು ವಿವರಿಸಿದರು.

ಬರದ ತೀವ್ರತೆಯನ್ನು ಕಂಡ ಕೇಂದ್ರ ತಂಡವು ಎಲ್ಲಾ ಮಾಹಿತಿಗಳನ್ನು ಕ್ರೋಢೀಕರಿಸಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ತಿಳಿಸಿದೆ.

ಕೇಂದ್ರ ತಂಡದ ಜೊತೆ ಹನೂರು ಶಾಸಕ ಎಂ.ಆರ್. ಮಂಜುನಾಥ್, ಚಾಮರಾಜನಗರ ಜಿಲ್ಲಾಧಿಕಾರಿ ಶ್ರೀರೂಪಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೋನಾ ರೋತ್, ಹನೂರು ತಹಶೀಲ್ದಾರ್ ಚೈತ್ರ, ಕೃಷಿ, ತೋಟಗಾರಿಕೆ, ಪಶುಸಂಗೋಪನೆ ಮತ್ತು ಗ್ರಾಮೀಣ ಕುಡಿಯುವ ನೀರು ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಆಂದೋಲನ ಡೆಸ್ಕ್

Recent Posts

ಬಿರುಗಾಳಿ ಮಳೆಗೆ ಬಾಳೆ ಬೆಳೆ ನೆಲಕಚ್ಚಿ:ರೈತರಿಗೆ ಲಕ್ಷಾಂತರ ರೂ. ನಷ್ಟ!

ಯಳಂದೂರು: ತಾಲ್ಲೂಕಿನ ಕೆಸ್ತೂರು ಗ್ರಾಮದಲ್ಲಿ ರಾತ್ರಿ ಸುರಿದ ಬಿರುಗಾಳಿ ಸಹಿತ ಭಾರಿ ಮಳೆಗೆ ಕಟಾವಿಗೆ ಬಂದಿದ್ದ ಬಾಳೆ ಬೆಳೆ ಸಂಪೂರ್ಣ…

52 mins ago

ಕಾಡುಪ್ರಾಣಿಗಳ ಹಾವಳಿ ತಡೆಗೆ ಸ್ಟೀಲ್ ರೋಪ್ ಬ್ಯಾರಿಕೇಡ್

ಮಂಜು ಕೋಟೆ ಕೋಟೆ: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಯಿಂದ ಅಳವಡಿಕೆ  ಎಚ್.ಡಿ.ಕೋಟೆ: ತಾಲ್ಲೂಕಿನ ಕಾಡಂಚಿನಲ್ಲಿ ಕಾಡು ಪ್ರಾಣಿಗಳು…

2 hours ago

ದಸರೆಯಲ್ಲಿ ಹೊಸ ಸಂಪ್ರದಾಯಕ್ಕೆ ಮುನ್ನುಡಿ ಬರೆದ ಮುಖ್ಯಮಂತ್ರಿ

ಮುಂದಿನ ಭಾನುವಾರದಿಂದ ನವರಾತ್ರಿ ಆರಂಭ. ಐತಿಹಾಸಿಕ ಮೈಸೂರು ದಸರಾ ಮಹೋತ್ಸವಕ್ಕೆ ಚಾಲನೆ. ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವದಲ್ಲಿ ಈ ಬಾರಿ…

2 hours ago

ಪೌರಕಾರ್ಮಿಕರಿಗೆ ಉಚಿತ ಸಾಬೂನು ಗ್ಯಾರಂಟಿ ಕೊಡಿ

ವಸಂತಕುಮಾರ್ ಮೈಸೂರು ಮಠ ಮೈಸೂರಿನ ಸ್ವಚ್ಛತೆ ಜವಾಬ್ದಾರಿ ಪೌರಕಾರ್ಮಿಕರ ಹೆಗಲ ಮೇಲಿದೆ ಇದು ನಮ್ಮ ಕಸ, ಇದರ ನಿರ್ವಹಣೆ ನಮ್ಮ…

2 hours ago

ಅಸ್ತ್ರಗಳು, ಅಂಧಕಾರ, ಆತಂಕ

ಬೆಂಗಳೂರು ಡೈರಿ: ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ   ಪ್ರಯೋಗಕೆ ಸಜ್ಜಾಗುತ್ತಿರುವ ರಾಜಕೀಯ ಪಕ್ಷಗಳು ಕರ್ನಾಟಕದ ರಾಜಕಾರಣ ಎಷ್ಟು ಆತಂಕದ ಮಟ್ಟಕ್ಕೆ…

2 hours ago

ಡೋರ್ನಹಳ್ಳಿ ರೈಲ್ವೆ ಅಂಡರ್‌ಪಾಸ್‌ನಲ್ಲಿ ನಿತ್ಯ ಸವಾರರಿಗೆ ಕಿರಿಕಿರಿ

ಭೇರ್ಯ ಮಹೇಶ್ ವಾಹನ ದಟ್ಟಣೆ ಹೆಚ್ಚಳವಾಗಿರುವುದರಿಂದ ಮೇಲ್ಸೇತುವೆ ನಿರ್ಮಿಸಬೇಕೆನ್ನುವುದು ಸ್ಥಳೀಯರ ಬೇಡಿಕೆ   ಕೆ.ಆರ್.ನಗರ: ತಾಲ್ಲೂಕಿನ ಡೋರ್ನಹಳ್ಳಿ ರೈಲ್ವೆ ಅಂಡರ್…

2 hours ago