ಆಂದೋಲನ ಪುರವಣಿ

ಯೋಗ ಕ್ಷೇಮ : ಅಲ್ಟ್ರಾಸ್ಕ್ಯಾನಿಂಗ್ ಸೇವೆಯಲ್ಲಿ ಹೊಸ ಪ್ರಯೋಗ

ಖಾಸಗಿ ಆಸ್ಪತ್ರೆಗಳಲ್ಲಿ ಜನರ ಸುಲಿಗೆಗೆ ಕಡಿವಾಣ
– ಕೆ.ಬಿ.ರಮೇಶ್ ನಾಯಕ್

ಮೈಸೂರು ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ರೇಡಿಯಾಲಜಿಸ್ಟ್‌ಗಳ ಕೊರತೆಯಿಂದಾಗಿ ಗರ್ಭಿಣಿಯರಿಗೆ ಅಲ್ಟ್ರಾಸ್ಕ್ಯಾನಿಂಗ್ ಹೆಸರಿನಲ್ಲಿ ಖಾಸಗಿ ಲ್ಯಾಬ್‌ಗಳಿಂದಾಗುವ ಸುಲಿಗೆ ಮತ್ತು ಗಂಟೆಗಟ್ಟಲೆ ಕಾಯಬೇಕಾದ ಸಮಯ ಉಳಿಸುವ ಉದ್ದೇಶದಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಸ್ತ್ರೀ ರೋಗ ತಜ್ಞರಿಗೆ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮಾಡುವ ಹೊಣೆ ನೀಡಲು ಮೊದಲ ಹೆಜ್ಜೆ ಇಟ್ಟಿದೆ.

ಮೈಸೂರು ಜಿಲ್ಲೆಯಲ್ಲಿ ಈ ಯೋಜನೆಯು ಸಫಲತೆ ಪಡೆದರೆ ಮುಂದಿನ ದಿನಗಳಲ್ಲಿ ರಾಜ್ಯದ ಇತರ ಜಿಲ್ಲೆಗಳಿಗೂ ವಿಸ್ತರಿಸಲು ಯೋಜಿಸಲಾಗಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಗರ್ಭಿಣಿಯರಿಗೆ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮಾಡಿ ತಾಯಿ ಮತ್ತು ಮಗುವಿನ ಆರೋಗ್ಯ ಗಮನಿಸಲು ಸುಲಭವಾಗಲಿದೆ. ಮೈಸೂರು ಜಿಲ್ಲೆಯಲ್ಲಿ ನಗರ ಮತ್ತು ಗ್ರಾಮಾಂತರ ಪ್ರದೇಶ ಸೇರಿದಂತೆ ಪ್ರತಿ ವರ್ಷ 40 ಸಾವಿರ ಹೆರಿಗೆಗಳಾಗುತ್ತಿವೆ. ಖಾಸಗಿ ನರ್ಸಿಂಗ್ ಹೋಂಗಳಲ್ಲಿ ವರ್ಷಕ್ಕೆ ಅಂದಾಜು 5 ಸಾವಿರ ಹೆರಿಗೆಗಳು ಸೇರಿದಂತೆ ಒಟ್ಟು ಸಂಖ್ಯೆ 45 ಸಾವಿರ ದಾಟಿವೆ. ಆದರೆ, ಸರ್ಕಾರಿ ಆಸ್ಪತ್ರೆಗಳಲ್ಲಿ ರೇಡಿಯಾಲಜಿಸ್ಟ್ ಗಳ ಕೊರತೆ ಉಂಟಾಗಿರುವುದರಿಂದ ಖಾಸಗಿ ಆಸ್ಪತ್ರೆಗಳು ಮತ್ತು ಸ್ಕ್ಯಾನಿಂಗ್ ಸೆಂಟರ್‌ಗಳಲ್ಲಿ ಎಕ್ಸರೇ, ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮಾಡಿಸಬೇಕಾದ ಪರಿಸ್ಥಿತಿ ಉಂಟಾಗಿದೆ. ಜಿಲ್ಲೆಯಲ್ಲಿ ಕೇವಲ ಐವರು ವಿಕಿರಣಶಾಸ್ತ್ರಜ್ಞರು ಇರುವುದರಿಂದಾಗಿ ಗರ್ಭಿಣಿಯರು ಖಾಸಗಿ ಲ್ಯಾಬ್‌ಗಳ ಮೊರೆ ಹೋಗಬೇಕಾದ ಸನ್ನಿವೇಶ ನಿರ್ಮಾಣವಾಗಿದೆ. ಅಲ್ಟ್ರಾಸೌಂಡ್ ಸ್ಕ್ಯಾನಿಂಗ್‌ಗೆ ಕನಿಷ್ಠ 1ರಿಂದ 3 ಸಾವಿರ ರೂ.ವರೆಗೆ ದರ ನಿಗದಿಪಡಿಸಲಾಗಿದ್ದು, ಹೆರಿಗೆಯಾಗುವ ತನಕ ಕನಿಷ್ಠ ಮೂರರಿಂದ ಐದು ಬಾರಿಯಾದರೂ ಸ್ಕ್ಯಾನಿಂಗ್ ಮಾಡಿಸಬೇಕಿರುವುದರಿಂದ ಖಾಸಗಿ ಆಸ್ಪತ್ರೆಗಳಿಗೆ ಸಾವಿರಾರು ರೂ. ತೆರಬೇಕಾಗಿದೆ. ಇದರಿಂದಾಗಿ ಬಡವರು ಮತ್ತು ಮಧ್ಯಮ ವರ್ಗದವರಿಗೆ ತುಂಬಾ ತೊಂದರೆಯಾಗುತ್ತಿರುವುದನ್ನು ಮನಗಂಡ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸ್ತ್ರೀರೋಗ ತಜ್ಞರಿಗೂ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ತರಬೇತಿ ಕೊಡಿಸಿ, ಗರ್ಭಿಣಿಯರು ಅಥವಾ ಅವರ ಕುಟುಂಬದವರಿಗೆ ಆಗುವ ಹೊರೆಯನ್ನು ತಪ್ಪಿಸಲು ಮಾರ್ಗೋಪಾಯವನ್ನು ಕಂಡುಕೊಂಡಿದೆ.

30 ಜನರಿಗೆ ತರಬೇತಿ: ಮೈಸೂರು ನಗರದಲ್ಲಿ ತುಳಸೀದಾಸ್ ದಾಸಪ್ಪ ಆಸ್ಪತ್ರೆ, ಜಯನಗರ ಹೆರಿಗೆ ಆಸ್ಪತ್ರೆ, ನಾಗಮ್ಮ ಪೆರುಮ್ಮಾಳ್ ಚೆಟ್ಟಿಯಾರ್ ಆಸ್ಪತ್ರೆ, ಜಯಲಕ್ಷ್ಮೀಪುರಂ ಲಕ್ಷ್ಮೀದೇವಮ್ಮ ಹೆರಿಗೆ ಆಸ್ಪತ್ರೆ ಹಾಗೂ ಜಿಲ್ಲಾ ಆಸ್ಪತ್ರೆಯಲ್ಲಿ ವಿಕಿರಣ ಶಾಸ್ತ್ರಜ್ಞರು ಇದ್ದಾರೆ. ಆದರೆ ತಾಲ್ಲೂಕು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಯಂತ್ರವಿದ್ದರೂ ವಿಕಿರಣ ಶಾಸ್ತ್ರಜ್ಞರ ಕೊರತೆ ಇದೆ. ಹೀಗಾಗಿ, ಮೈಸೂರು ನಗರದ ಜಿಲ್ಲಾ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ 30 ಮಂದಿ ಸ್ತ್ರೀರೋಗ ತಜ್ಞರಿಗೆ 15 ದಿನಗಳ ಕಾಲ ತರಬೇತಿ ನೀಡಲಾಗುತ್ತಿದೆ. ನುರಿತ ತಜ್ಞರು 15 ದಿನಗಳ ಕಾಲ ಸ್ತ್ರೀರೋಗ ತಜ್ಞರಿಗೆ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮಾಡುವ ಬಗ್ಗೆ ತರಬೇತಿ ಕೊಡಿಸಿ, ಅವರಿಂದ ಐದಾರು ದಿನಗಳ ಕಾಲ ಪ್ರಾಯೋಗಿಕವಾಗಿ ಗರ್ಭಿಣಿಯರಿಗೆ ಸ್ಕ್ಯಾನಿಂಗ್ ಮಾಡಿಸಿದ ಮೇಲೆ ಅವರಿಗೆ ಸಂಪೂರ್ಣ ಜವಾಬ್ದಾರಿಯನ್ನು ವಹಿಸಲು ಯೋಜಿಸಲಾಗಿದೆ.


ಜಿಲ್ಲೆಯಲ್ಲಿ ವಿಕಿರಣಶಾಸ್ತ್ರಜ್ಞರ ಕೊರತೆ ಇರುವುದರಿಂದ ಸ್ತ್ರೀರೋಗ ತಜ್ಞರಿಗೆ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮಾಡುವ ತರಬೇತಿ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ 30ರಿಂದ 40ಜನ ಸ್ತ್ರೀರೋಗ ತಜ್ಞರಿದ್ದು, ಅವರಲ್ಲಿ 30 ಜನರಿಗೆ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ತರಬೇತಿ ನೀಡಲಾಗುತ್ತದೆ. ಗರ್ಭಿಣಿಯರು ಸ್ಕ್ಯಾನಿಂಗ್ ಮಾಡಿಸಲು ಸಾವಿರಾರು ರೂ.ಕೊಡಬೇಕಿರುವುದರಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ವ್ಯವಸ್ಥೆ ಜತೆಗೆ ಪರಿಣತರನ್ನು ರೂಪಿಸಿದರೆ ಸಾರ್ವಜನಿಕರಿಗೆ ಅನುಕೂಲವಾಗಲಿದೆ.

–ಡಾ.ಕೆ.ಎಚ್.ಪ್ರಸಾದ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಮೈಸೂರು


ಏತಕ್ಕಾಗಿ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್

ಭ್ರೂಣ ಬೆಳವಣಿಗೆಯ ಬಗ್ಗೆ ಮಾಹಿತಿ ಪಡೆಯಲು ಗರ್ಭಿಣಿಯರಿಗೆ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಅಗತ್ಯವಿದೆ. ಆದ್ದರಿಂದ ಅದೇ ಸಮಯದಲ್ಲಿ, ಮಗುವಿನ ಎಲ್ಲಾ ಅಂಗಗಳ ಬೆಳವಣಿಗೆ ಸರಿಯಾಗಿದೆಯೋ ಇಲ್ಲವೋ ಅಥವಾ ಮಗು ಅವಳಿಯೋ ಎಂಬುದನ್ನು ತಿಳಿಯಲು ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಸಹಕಾರಿಯಾಗಲಿದೆ.


ಸರ್ಕಾರ ಸಾರ್ವಜನಿಕ ಆಸ್ಪತ್ರೆಗಳಿಗೆ ಏನೇ ಆಧುನಿಕ ವ್ಯವಸ್ಥೆ ಕಲ್ಪಿಸಿದರೂ ಪರಿಣತರ ಕೊರತೆಯಿಂದಾಗಿ ಅವುಗಳ ಸೇವೆ ಲಭ್ಯವಾಗದೆ ಆರ್ಥಿಕವಾಗಿ ಹಿಂದುಳಿದ ಜನತೆ ಪರಿತಪಿಸುವಂತಾಗಿದೆ. ಹೀಗಾಗಿ ಹಲವು ಆಸ್ಪತ್ರೆಗಳಲ್ಲಿ ಆಧುನಿಕ ಯಂತ್ರೋಪಕರಣಗಳು ಧೂಳುಹಿಡಿಯುತ್ತಿರುವ ನಿದರ್ಶನಗಳು ಸಾಕಷ್ಟಿವೆ. ಆದರೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ವಿಷಯದಲ್ಲಿ ಒಂದು ಹೆಜ್ಜೆ ಮುಂದಿಟ್ಟಿದ್ದು, ಬಡ ಜನತೆಗೆ ಸೇವೆ ಒದಗಿಸುವ ಸದುದ್ದೇಶದಿಂದ ಅಲ್ಟ್ರಾ ಸ್ಕ್ಯಾನಿಂಗ್ ತಜ್ಞರನ್ನು ರೂಪಿಸಲು ಮುಂದಾಗಿರುವುದು ಹೊಸ ಪ್ರಯತ್ನ.

 

andolanait

Recent Posts

ಶ್ರೀರಂಗಪಟ್ಟಣ ದಸರಾ ಜಂಬೂಸವಾರಿಗೆ ನಟ ರವಿಚಂದ್ರನ್‌ ಚಾಲನೆ

ಮಂಡ್ಯ: ಜಿಲ್ಲೆಯ ಐತಿಹಾಸಿಕ ಶ್ರೀರಂಗಪಟ್ಟಣದಲ್ಲಿ ದಸರಾ ಮಹೋತ್ಸವಕ್ಕೆ ವೈಭವದ ಚಾಲನೆ ದೊರೆತಿದೆ. ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಗೆ ಭಕ್ತಿಪೂರ್ವಕ ಪುಷ್ಪಾರ್ಚನೆ…

11 hours ago

ಅಭಿಮನ್ಯು ಆನೆ ಮಾವುತನ ಪತ್ನಿ ಸಾವು

ಮೈಸೂರು: ದಸರಾ ಗಜಪಡೆಯ ಆನೆ ಅಭಿಮನ್ಯುವಿನ ಮಾವುತ ವಸಂತ ಅವರ ಪತ್ನಿ ಅಂಬಿಕಾ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅವರಿಗೆ 35 ವರ್ಷ…

12 hours ago

ಮತದಾರರ ಹೆಸರು ಡಿಲೀಟ್‌ ವಿವಾದ: ಕೇಂದ್ರ ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್‌ ನೋಟಿಸ್‌

ನವದೆಹಲಿ: ಮತದಾರರ ಪಟ್ಟಿಯಿಂದ ಹೆಸರು ಅಳಿಸುವಿಕೆ ವಿವಾದ ಇದೀಗ ಸುಪ್ರೀಂಕೋರ್ಟ್‌ನಲ್ಲಿ ಮಹತ್ವದ ಹಂತ ತಲುಪಿದೆ. ರಾಹುಲ್‌ ಗಾಂಧಿ ಹಾಗೂ ‘ಇಂಡಿಯಾ’…

12 hours ago

ಹೆಣ ಇದ್ದ ಸ್ಕಾರ್ಪಿಯೋ ಓಡಿಸಲು ಯಾರೂ ಸಿದ್ಧರಿಲ್ಲ

ಶೆಡ್‌ನಿಂದ ಹೆಣ ಹಾಕಿಕೊಂಡು ಬಂದ ದೀಪಕ್, ಗೇಟ್ ತನಕ ಬಂದು ಮುಂದಕ್ಕೆ ಹೋಗಲು ಆಗಲ್ಲ ಎಂದು ನಿರಾಕರಣೆ ಹೆಣ ಬಿಸಾಡುವ…

14 hours ago

ರೇಣುಕಾಸ್ವಾಮಿಯ ಹೆಣ ಬಿಸಾಡಲು ಜಾಗ ಹುಡುಕಾಟ

ಮಾಗಡಿ ರಸ್ತೆಯಲ್ಲಿತ್ತು ದೊಡ್ಡ ಮೋರಿ, ಮರಗಳ ತೋಪು, ಸುತ್ತಲೂ ಕತ್ತಲಿನಿಂದ ಕೂಡಿದ್ದ ನಿರ್ಜನ ಪ್ರದೇಶ Sattva Apartment ಹಿಂದಿನ ಜನ…

14 hours ago

ನೋಟಿನ ಕಂತೆಗಳನ್ನು ತಂದಿಟ್ಟ ದರ್ಶನ್

ಸರೆಂಡರ್ ಆದವರಿಗೆ ಕೊಡಲು; ಖರ್ಚುವೆಚ್ಚಕ್ಕೆ ಪ್ರದೋಷ್, ವಿನಯ್, ನಾಗರಾಜು ಕೈಗೆ ಕೇಳಿದಷ್ಟು ಹಣ ಕೊಟ್ಟರು ಸಹಾಯ ಮಾಡಿ, ಇಲ್ಲದಿದ್ದರೆ ನೇಣು…

15 hours ago