ಭಾರತೀಯ ಚಿತ್ರೋದ್ಯಮದ ಉತ್ತೇಜನಕ್ಕಾಗಿ, ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಮುಂದಾಗಿರುವ ಸುದ್ದಿ. ಚಿತ್ರರಂಗಕ್ಕೆ ಸಂಬಂಧಿಸಿದಂತೆ, ಚಿತ್ರಗಳನ್ನು ವರ್ಗೀಕರಿಸಿ, ಪ್ರಮಾಣಪತ್ರ ನೀಡುವುದರ ಹೊರತಾಗಿ, ಉಳಿದ ಹೊಣೆ ಎಲ್ಲವೂ ಆಯಾ ರಾಜ್ಯ ಸರ್ಕಾರಗಳವು. ಹಾಗಾಗಿ ಕೇಂದ್ರವು ಭಾರತೀಯ ಭಾಷಾ ಚಿತ್ರೋದ್ಯಮಗಳ ಉತ್ತೇಜನಕ್ಕಾಗಿ ಕೈಗೊಳ್ಳಬೇಕಾದ ಕ್ರಮಗಳ ಕುರಿತಂತೆ ಅಧ್ಯಯನ ಮಾಡಿ ಶಿಫಾರಸ್ಸನ್ನು ಮಾಡಲು ಸಮಿತಿಯೊಂದನ್ನು ಪ್ರಸೂನ್ ಜೋಶಿ ಅವರ ಅಧ್ಯಕ್ಷತೆಯಲ್ಲಿ ರಚಿಸಿದೆ.
ಇದರಲ್ಲಿ ಚಿತ್ರರಂಗದ ತಜ್ಞರು ಪರಿಣತರು ಇರುತ್ತಾರೆ. ಇತ್ತೀಚೆಗೆ ಕೇಂದ್ರ ವಾರ್ತಾ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಮೂಲಗಳ ಪ್ರಕಾರ ಈ ತಂಡವು, ಭಾರತೀಯ ಚಿತ್ರರಂಗದ ಮುಂದಿರುವ ಅವಕಾಶಗಳು ಮತ್ತು ಸವಾಲುಗಳನ್ನು ಅಧ್ಯಯನ ಮಾಡಲಿದೆ. ಚಲನಚಿತ್ರ ಕ್ಷೇತ್ರವನ್ನು ಬಲಪಡಿಸಲು ಇದು ಮಾರ್ಗಗಳನ್ನು ಸೂಚಿಸಲಿದೆ. ಹಾಗೆಯೇ, ಭಾರತೀಯ ಚಲನಚಿತ್ರಗಳು ಜಗತಿಕ ಮಟ್ಟದಲ್ಲಿ ಹೆಚ್ಚು ಸ್ಪರ್ಧಾತ್ಮಕವಾಗಲು ಅಗತ್ಯವಿರುವ ಕ್ರಮಗಳನ್ನು ಶಿಫಾರಸು ಮಾಡಲಿದೆ.
ಜೊತೆಗೆ ರಾಜ್ಯ ಸರ್ಕಾರಗಳು ಮತ್ತು ಇತರ ಪಾಲುದಾರರೊಂದಿಗೆ ಜೊತೆಗೂಡಿ ಕೆಲಸ ಮಾಡಿ, ಅತ್ಯುತ್ತಮ ಕಾರ್ಯವಿಧಾನಗಳನ್ನು ಗುರುತಿಸಬೇಕು. ಅಷ್ಟೇ ಅಲ್ಲ, ಜೊತೆಗೆ ಭಾರತೀಯ ಚಿತ್ರರಂಗದ ದೀರ್ಘಕಾಲದ ಬೆಳವಣಿಗೆಗಾಗಿ ಸಂಪೂರ್ಣ ನೀತಿ ಚೌಕಟ್ಟನ್ನು ಮೂರು ತಿಂಗಳ ಒಳಗಾಗಿ ಶಿಫಾರಸು ಮಾಡಬೇಕು. ಚಿತ್ರಮಂದಿರಗಳು ಮತ್ತು ಚಿತ್ರಗಳ ನಿಯಂತ್ರಣವು ರಾಜ್ಯಕ್ಕೆ ಸಂಬಂಧಪಟ್ಟ ವಿಷಯ. ಒಂದೊಂದು ರಾಜ್ಯ ಈ ವಿಷಯದಲ್ಲಿ ಒಂದೊಂದು ರೀತಿ ಕಾರ್ಯ ನಿರ್ವಹಿಸುತ್ತದೆ, ವಿವಿಧ ಅನುಮತಿಗಳಿಗಾಗಿ ಬೇರೆ ಬೇರೆ ರಾಜ್ಯಗಳು ವಿಭಿನ್ನ ನಿಯಮಗಳನ್ನು ಅನುಸರಿಸುತ್ತವೆ. ಇದು ಚಲನಚಿತ್ರ ಮೂಲಸೌಕರ್ಯಗಳ ಬೆಳವಣಿಗೆಗೆ, ವಿಶೇಷವಾಗಿ ಸಣ್ಣ ಪಟ್ಟಣಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ದೊಡ್ಡ ಅಡ್ಡಿಯಾಗಿದೆ ಎಂದಿರುವ ಸಚಿವಾಲಯ, ಚಲನಚಿತ್ರ ಮೂಲಸೌಕರ್ಯಗಳನ್ನು ವೇಗಗೊಳಿಸಲು ಮಾದರಿ ನಿಯಮಗಳನ್ನು ಸಂಬಂಧಪಟ್ಟವರೊಂದಿಗೆ ಚರ್ಚಿಸಿ ನಿಯಮಮಗಳನ್ನು ರೂಪಿಸಿದೆಯಂತೆ. ಈ ಮಾದರಿ ರಾಜ್ಯ ಚಲನಚಿತ್ರ ನಿಯಮಾವಳಿಗಳನ್ನು ಎಲ್ಲ ರಾಜ್ಯ ಸರ್ಕಾರಗಳಿಗೂ ಕಳುಹಿಸಿದ್ದು, ಅವುಗಳನ್ನು ಅಳವಡಿಸಿಕೊಳ್ಳುವಂತೆ ರಾಜ್ಯಗಳನ್ನು ವಿನಂತಿಸಲಾಗಿದೆ ಎನ್ನುತ್ತಿವೆ ಮೂಲಗಳು. ಚಿತ್ರೋದ್ಯಮದ ಬೆಳವಣಿಗೆಗಾಗಿ ತಜ್ಞರ ಸಮಿತಿಯನ್ನು ರಚಿಸುವುದು ಹೊಸದೇನೂ ಅಲ್ಲ. ೧೯೮೦ರಲ್ಲಿ ಕೇಂದ್ರ ಸರ್ಕಾರ eನಪೀಠ ಪ್ರಶಸ್ತಿ ಪ್ರರಸ್ಕೃತರಾದ ಕೋಟ ಶಿವರಾಮ ಕಾರಂತರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ಇದೇ ರೀತಿಯಲ್ಲಿ ನೇಮಿಸಿತ್ತು. ಮೂಕಿ ಚಿತ್ರಗಳ ದಿನಗಳ ಈ ಮಾಧ್ಯಮದ ಬೆನ್ನು ಹತ್ತಿದ್ದ ಕಾರಂತರು ‘ಡೊಮಿಂಗೊ’ ಮತ್ತು ‘ಭೂತರಾಜ್ಯ’ ಚಿತ್ರಗಳನ್ನು ತಾವೇ ನಿರ್ಮಿಸಿ, ನಿರ್ದೇಶಿಸಿದ್ದರು. ಮುಂದೆ ಅವರ ‘ಚೋಮನ ದುಡಿ’ ಸೇರಿದ ಹಾಗೆ ಹಲವು ಕೃತಿಗಳು ತೆರೆಗೆ ಬಂದವು. ಶಿವರಾಮ ಕಾರಂತರ ಅಧ್ಯಕ್ಷತೆಯ ತಜ್ಞರ ಸಮಿತಿಯಲ್ಲಿ ಮೃಣಾಲ್ ಸೇನ್, ಶ್ಯಾಮ್ ಬೆನೆಗಲ, ಅಡೂರ್ ಗೋಪಾಲಕೃಷ್ಣನ್, ರಮಾನಂದ ಸಾಗರ್, ಮನೋಜ್ ಕುಮಾರ್, ತರುಣ್ ಮಜುಂದಾರ್, ತಾರಾಚಂದ್ ಬಜತ್ಯ, ಡಿ.ವಿ.ಎಸ್. ರಾಜು, ವಿಜಯಾ ಮುಳೆ ಸೇರಿದಂತೆ ಚಿತ್ರರಂಗದ ಗಣ್ಯರು ಸದಸ್ಯರಾಗಿದ್ದರು. ಮೂಲಗಳ ಪ್ರಕಾರ ಆ ಸಮಿತಿಯು ೨೩೧ ಶಿಫಾರಸುಗಳನ್ನು ಮಾಡಿತ್ತು.
ಹೊಸದಾಗಿ ರಚನೆಯಾದ ಸಮಿತಿ ಇದರ ಅಂಶಗಳನ್ನು ಗಮನಿಸಬಹುದು. ರಾಜ್ಯವು ಕೂಡಾ ಈ ಶಿಫಾರಸುಗಳನ್ನು ಪರಿಗಣಿಸಬಹುದು. ಸಮಗ್ರ ರಾಷ್ಟ್ರೀಯ ಚಲನಚಿತ್ರ ನೀತಿಯನ್ನು ರೂಪಿಸಬೇಕು. ಚಿತ್ರೋದ್ಯಮವನ್ನು ಕೇವಲ ಮನರಂಜನಾ ಕ್ಷೇತ್ರವಾಗಿ ಅಲ್ಲ, ಸಾಂಸ್ಕೃತಿಕ ಮತ್ತು ಕೈಗಾರಿಕಾ ಕ್ಷೇತ್ರ ಎಂದು ಪರಿಗಣಿಸಬೇಕು. ಕೇಂದ್ರ ಸಾಹಿತ್ಯ ಅಕಾಡೆಮಿ ಇರುವಂತೆ ಕೇಂದ್ರ ಚಲನಚಿತ್ರ ಅಕಾಡೆಮಿ ಸ್ಥಾಪಿಸಬೇಕು. ಚಲನಚಿತ್ರ ನಿರ್ಮಾಣವನ್ನು ಕೈಗಾರಿಕೆ ಎಂದು ಅಧಿಕೃತವಾಗಿ ಘೋಷಿಸಿ, ಬ್ಯಾಂಕ್ ಸಾಲ, ಹಣಕಾಸು ಮತ್ತು ಸಾಂಸ್ಥಿಕ ನೆರವು ಸಿಗುವಂತೆ ಆಗಬೇಕು, ದೇಶದ ವಿವಿಧ ಭಾಗಗಳಲ್ಲಿ ಚಲನಚಿತ್ರ ಮತ್ತು ದೂರದರ್ಶನ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಬೇಕು. ಚಿತ್ರಕಥೆ, ಛಾಯಾಗ್ರಹಣ, ಧ್ವನಿ, ಸಂಕಲನ, ನಿರ್ದೇಶನ ಮುಂತಾದ ವಿಭಾಗಗಳಲ್ಲಿ ವೃತ್ತಿಪರ ತರಬೇತಿ ವಿಸ್ತರಿಸಬೇಕು. ಭಾರತೀಯ ಚಲನಚಿತ್ರ ಪರಂಪರೆಯ ಸಂರಕ್ಷಣೆಗಾಗಿ ಸಂಶೋಧನಾ ಕೇಂದ್ರಗಳು, ಚಲನಚಿತ್ರ ದಾಖಲೆಗಳು, ಚಲನಚಿತ್ರ ಸಂಗ್ರಹಾಲಯಗಳು, ರಾಷ್ಟ್ರೀಯ ಪ್ರಾಚ್ಯಾಗಾರಗಳನ್ನು ಬಲಪಡಿಸಬೇಕು. ಸೆನ್ಸಾರ್ ಮಂಡಳಿಯನ್ನು ರಾಜಕೀಯ ಹಸ್ತಕ್ಷೇಪದಿಂದ ಮುಕ್ತಗೊಳಿಸಬೇಕು, ಕತ್ತರಿಸುವ ವ್ಯವಸ್ಥೆಗಿಂತ ವರ್ಗೀಕರಣ ವ್ಯವಸ್ಥೆಗೆ ಆದ್ಯತೆ ನೀಡಬೇಕು.
ಭಾರತೀಯ ಭಾಷೆಗಳ ಚಿತ್ರಗಳಿಗೆ ಸಮಾನ ಅವಕಾಶ ನೀಡಬೇಕು, ವಿತರಣೆಯಲ್ಲಿ ಹಿಂದಿ ಚಿತ್ರಗಳಿಗೆ ಮಾತ್ರ ಆದ್ಯತೆ ನೀಡುವ ಪ್ರವೃತ್ತಿ ಕಡಿಮೆಯಾಗಬೇಕು. ಸರ್ಕಾರಗಳು ತಮ್ಮ ಭಾಷಾ ಚಿತ್ರೋದ್ಯಮಕ್ಕೆ ವಿಶೇಷ ನೀತಿಗಳನ್ನು ರೂಪಿಸಬೇಕು. ಚಿತ್ರಸಮಾಜ ಚಳವಳಿಯನ್ನು ಬೆಳೆಸಿ, ಉತ್ತಮ ವಿಶ್ವಚಿತ್ರಗಳ ಪ್ರದರ್ಶನ ಮತ್ತು ಚಲನಚಿತ್ರ ಸಾಕ್ಷರತೆಯನ್ನು ಬೆಳೆಸಬೇಕು ಎಂಬಿತ್ಯಾದಿ ಶಿ-ರಸುಗಳನ್ನು ಆ ಸಮಿತಿ ಮಾಡಿತ್ತು. ಅದರೊಂದಿಗೆ ಮಕ್ಕಳಿಗಾಗಿ ಗುಣಮಟ್ಟದ ಚಿತ್ರಗಳ ನಿರ್ಮಾಣಕ್ಕೆ ವಿಶೇಷ ಪ್ರೋತ್ಸಾಹ ನೀಡಬೇಕು, ಶಾಲಾ ಶಿಕ್ಷಣದಲ್ಲಿ ಉತ್ತಮ ಚಿತ್ರಗಳನ್ನು ಬಳಸಬೇಕು ಎಂದೂ ಹೇಳಲಾಗಿತ್ತು. ಕಾರಂತ ಸಮಿತಿ ಸಲ್ಲಿಸಿದ ವರದಿಯಲ್ಲಿ ಕೆಲವು ಕಾರ್ಯಗತವಾಗಿವೆ. ರಾಷ್ಟ್ರೀಯ ಚಲನಚಿತ್ರ ನೀತಿಯಾಗಲಿ, ಅಕಾಡೆಮಿ ಆಗಲಿ ಕೇಂದ್ರ ಸರ್ಕಾರ ಮಾಡಿಲ್ಲ. ವಿಶೇಷ ಎಂದರೆ ಕರ್ನಾಟಕ ಸರ್ಕಾರ ಮಾಡಿದೆ. ಇಲ್ಲಿ ರಾಜಕೀಯ ಹಸ್ತಕ್ಷೇಪ ಕೂಡದು ಎನ್ನುವ ಮಾತು ಈಗ ಕೇಂದ್ರಕ್ಕಾಗಲೀ, ರಾಜ್ಯಕ್ಕಾಗಲೀ ಪಥ್ಯ ಅಲ್ಲ.
ಅವರ ಶಿಫಾರಸುಗಳಲ್ಲಿ ರಾಷ್ಟ್ರೀಯ ಚಲನಚಿತ್ರೋದಯಮ ಅಭಿವೃದ್ಧಿ ನಿಗಮವನ್ನು ಕೇವಲ ಕಲಾತ್ಮಕ ಚಿತ್ರಗಳ ನಿರ್ಮಾಣಕ್ಕೆ ಸೀಮಿತಗೊಳಿಸದೆ, ಚಲನಚಿತ್ರ ನಿರ್ಮಾಣ, ವಿತರಣೆ, ಅಂತಾರಾಷ್ಟ್ರೀಯ ಮಾರುಕಟ್ಟೆ, ಸಹ-ನಿರ್ಮಾಣ, ಹೊಸ ನಿರ್ಮಾಪಕರಿಗೆ ನೆರವು ಇತ್ಯಾದಿಗಳ ಕೇಂದ್ರ ಸಂಸ್ಥೆಯನ್ನಾಗಿ ರೂಪಸಬೇಕು ಎನ್ನುವುದಿತ್ತು. ನಂತರದ ಸಮಿತಿಯೊಂದು, ಕೇಂದ್ರ ಸರ್ಕಾರದ ಅಧೀನದಲ್ಲಿದ್ದ ಎಲ್ಲ ಚಲನಚಿತ್ರ ಸಂಬಂಧಿತ ಸಂಸ್ಥೆಗಳನ್ನೂ ನಿಗಮದ ತೆಕ್ಕೆಗೆ ಕೊಟ್ಟಿತು. ಅದನ್ನು ಶಿಫಾರಸು ಮಾಡಿದವರು, ಅಲ್ಲೂ ಉದ್ಯಮದ ತಜ್ಞರು ಇರಬೇಕು ಎಂದಿದ್ದರು. ಆದರೆ ಹಾಗಾಗಲಿಲ್ಲ.
ಹೊಸ ತಜ್ಞರ ಸಮಿತಿಗೆ ಬದಲಾದ ಚಲನಚಿತ್ರ ಮಾಧ್ಯಮ, ಕೃತಕ ಬುದ್ಧಿಮತ್ತೆಯ ಬಳಕೆಯ ಸವಾಲು, ಕೇಂದ್ರ ಸರ್ಕಾರ ಮನರಂಜನೋದ್ಯಮದಿಂದ ನಿರೀಕ್ಷಿಸುತ್ತಿರುವ ಆರೆಂಜ್ ಎಕಾನಮಿ ಸೇರಿದಂತೆ ಹಲವು ನೆಲೆಗಳಲ್ಲಿ ಅಧ್ಯಯನ ಮಾಡಬೇಕಾದ ಅಗತ್ಯ ಇದೆ. ರಾಜ್ಯದಲ್ಲೂ ಇಂತಹದೊಂದು ತಜ್ಞರ ಸಮಿತಿಯನ್ನು ರಚಿಸಿ, ಶಿಫಾರಸುಗಳನ್ನು ಪಡೆದ ನಂತರ ಹೊಸ ಚಲನಚಿತ್ರ ನೀತಿಯತ್ತ ಗಮನ ಹರಿಸುವುದು ಉತ್ತಮವೇನೋ. ಇಂತಹ ಸಮಿತಿಗಳ ಮೂಲಕವೇ ಉದ್ಯಮದ ವಿವಿಧ ವಿಭಾಗಗಳ ಕುರಿತು ತಿಳಿಯುವುದು ಸಾಧ್ಯ. ೧೯೯೩-೯೪, ಕನ್ನಡ ಚಿತ್ರರಂಗ ವಜ್ರಮಹೋತ್ಸವ ವರ್ಷಕ್ಕೆ ಕಾಲಿಟ್ಟ ಸಂದರ್ಭದಲ್ಲಿ ಇಂತಹ ದೊಂದು ಸಮಿತಿಯನ್ನು ಹಿರಿಯ ಪತ್ರಕರ್ತ ವಿ. ಎನ್. ಸುಬ್ಬರಾಯರ ಅಧ್ಯಕ್ಷತೆಯಲ್ಲಿ, ಉದ್ಯಮದ ತಜ್ಞರನ್ನು ಒಳಗೊಂಡ ಸರ್ಕಾರ ನೇಮಿಸಿತ್ತು. ರಾಜ್ಯ ಚಲನಚಿತ್ರ ಅಕಾಡೆಮಿಯ ಸ್ಥಾಪನೆಯೇ ಮೊದಲಾದವು ಅಲ್ಲಿನ ಶಿಫಾರಸು.
ಸೆನ್ಸಾರ್ ಮಂಡಳಿಯಲ್ಲಿ ಏನೇನು ಬದಲಾವಣೆಗಳಾಗಬೇಕು ಎನ್ನುವುದನ್ನು ಶಿಫಾರಸು ಮಾಡಲು ಶ್ಯಾಮ್ ಬೆನಗಲ್ ಅಧ್ಯಕ್ಷತೆಯ ಸಮಿತಿಯನ್ನು ವರ್ಷಗಳ ಹಿಂದೆ ನೇಮಿಸಲಾಗಿತ್ತು. ಅದು ನೀಡಿದ ಶಿಫಾರಸುಗಳಲ್ಲಿ ಒಂದೆರಡನ್ನು ತೀರಾ ಇತ್ತೀಚೆಗೆ ಜರಿಗೆ ತರಲಾಗಿದೆ. ಯು/ಎಯನ್ನು ಯು/ಎ ೭+. ಯು/ಎ ೧೩+. ಯು/ಎ ೧೬ + ಇದು ಅವರ ಶಿ-ರಸು. ಇದೀಗ ಒಟಿಟಿ ತಾಣಗಳಲ್ಲಿ ಪ್ರಸಾರವಾಗುವ ಚಿತ್ರಗಳಿಗೂ ಪ್ರಮಾಣಪತ್ರ ಪಡೆಯಬೇಕು ಎನ್ನುವ ನಿಟ್ಟಿನಲ್ಲಿ ಸರ್ಕಾರ ಯೋಚಿಸುತ್ತಿದೆ. ಇತ್ತೀಚೆಗೆ ಅಲ್ಲಿ ಪ್ರಸಾರ ಆರಂಭಿಸಿ, ಎರಡು ದಿನಗಳಲ್ಲಿ ಸರ್ಕಾರದ ಆದೇಶದ ಮೇಲೆ ತೆಗೆದು ಹಾಕಿದ, ದಿಲ್ಜಿತ್ ದೋಸಾಂಜ್ ಅಭಿನಯದ ಸತ್ಲುಜ ಚಿತ್ರದ ವಿವಾದದ ಬಳಿಕ ಈ ಬೆಳವಣಿಗೆ. ೨೦೨೧ರ ಮಾಹಿತಿ ತಂತ್ರeನ ನಿಯಮಗಳಿಗೆ (ಐಟಿ ರೂಲ್ಸ್ ೨೦೨೧) ತಿದ್ದುಪಡಿ ತರಲು ಸರ್ಕಾರ ಪರಿಶೀಲನೆ ನಡೆಸುತ್ತಿದೆ. ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಆ ಚಿತ್ರ ಪ್ರಮಾಣೀಕರಣ ಮಂಡಳಿಗೆ ಅರ್ಜಿ ಸಲ್ಲಿಸಿತ್ತು. ಆದನ್ನು ವೀಕ್ಷಿಸಿದ ಪ್ರಮಾಣೀಕರಣ ಮಂಡಳಿ ಹಲವು ಕಡೆ ಕತ್ತರಿಸಲು ಹೇಳಿತ್ತು. ಅದನ್ನು ನಿರಾಕರಿಸಿದ ಚಿತ್ರತಂಡ, ನೇರವಾಗಿ ಜುಲೈ ೩ರಂದು ಜೀ೫ನಲ್ಲಿ ಬಿಡುಗಡೆ ಮಾಡಿತ್ತು. ರಾಷ್ಟ್ರೀಯ ಭದ್ರತೆಯ ಕಾರಣ ನೀಡಿ ಕೇವಲ ೪೮ ಗಂಟೆಗಳ ವೇದಿಕೆಯಿಂದ ಆ ಚಿತ್ರವನ್ನು ತೆಗೆದುಹಾಕಲಾಗಿತ್ತು. ಪ್ರಮಾಣೀಕರಣ ಮಂಡಳಿಯು ಹೇಳಿದ ಯಾವುದೇ ತಿದ್ದುಪಡಿ ಇಲ್ಲದ ಆವೃತ್ತಿಯನ್ನೇ ಒಟಿಟಿಯಲ್ಲಿ ಪ್ರಸಾರ ಮಾಡಲಾಗಿದೆ ಎನ್ನುವ ಆರೋಪದ ಮೇಲೆ ಒಟಿಟಿಯ ಮೇಲೂ ಕೇಂದ್ರ ಕ್ರಮ ಕೈಗೊಳ್ಳಬಹುದು ಎನ್ನುವ ಮಾತೂ ಕೇಳಿಬರುತ್ತಿದೆ. ಈಗಿರುವಂತೆ, ಈ ನಿಟ್ಟಿನಲ್ಲಿ ಯಾವುದೇ ರೀತಿಯ ಸುದ್ದಿ ಬಂದಿಲ್ಲ.
ಹ್ಞಾಂ, ಪ್ರಮಾಣೀಕರಣ ಮಂಡಳಿಯಿಂದ ತಿಂಗಳುಗಳ ನಂತರ ಹೊರಬಿದ್ದ ‘ಜನನಾಯಕನ್’ ಚಿತ್ರ ಅದರ ನಾಯಕ ವಿಜಯ್ ನಿಜ ಜನನಾಯಕನಾದ ನಂತರ ಮುಂದಿನ ವಾರ ತೆರೆಗೆ ಬರಲಿದೆ! ಕೆವಿಎನ್ ನಿರ್ಮಾಣದ ಚಿತ್ರ. ಆ ಸಂಸ್ಥೆ ವಿತರಿಸಲಿರುವ ‘ಕರಾವಳಿ’ಯೂ ಮುಂದಿನ ವಾರವೇ ತೆರೆಗೆ ಬರಲಿದೆ. ಕುತೂಹಲಕರ ಬೆಳವಣಿಗೆ!
” ಭಾರತೀಯ ಭಾಷೆಗಳ ಚಿತ್ರಗಳಿಗೆ ಸಮಾನ ಅವಕಾಶ ನೀಡಬೇಕು, ವಿತರಣೆಯಲ್ಲಿ ಹಿಂದಿ ಚಿತ್ರಗಳಿಗೆ ಮಾತ್ರ ಆದ್ಯತೆ ನೀಡುವ ಪ್ರವೃತ್ತಿ ಕಡಿಮೆಯಾಗಬೇಕು. ಸರ್ಕಾರಗಳು ತಮ್ಮ ಭಾಷಾ ಚಿತ್ರೋದ್ಯಮಕ್ಕೆ ವಿಶೇಷ ನೀತಿಗಳನ್ನು ರೂಪಿಸಬೇಕು.”
ಈ ವರ್ಷ ನಾಡ ಹಬ್ಬ ದಸರಾದಲ್ಲಿ ಕಂಬಳ ಕ್ರೀಡೆಯನ್ನು ಆಯೋಜಿಸಲು ಸರ್ಕಾರ ಹಠಕ್ಕೆ ಬಿದ್ದಂತೆ ವರ್ತಿಸುತ್ತಿದೆ. ಈಗಾಗಲೇ ಸಾರ್ವಜನಿಕರು ಹಾಗೂ…
ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನೆಲೆಸಿರುವ ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆಯಲು ಪ್ರತಿ ವರ್ಷ ಆಷಾಢ ಮಾಸದ ಶುಕ್ರವಾರಗಳಂದು…
ನವೀನ್ ಡಿಸೋಜ ತ್ವರಿತಗತಿಯಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಕಾರ್ಯ; ಒಟ್ಟು ೪,೬೮,೬೫೭ ನಮೂನೆ ವಿತರಣೆ ಮೂಲಕ ಶೇ.೧೦೦ ಪ್ರಗತಿ…
ಹನೂರು: ತಾಲ್ಲೂಕಿನ ಬೈಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರೆಕಾಡುವಿನದೊಡ್ಡಿ ಮತ್ತು ಅರ್ಧನಾರೀಪುರ ಗ್ರಾಮಗಳಿಗೆ ಗುರುವಾರ ಗ್ರಾಮ ಪಂಚಾಯಿತಿ ವತಿಯಿಂದ ಟ್ಯಾಂಕರ್…
ರಾಜೇಶ್ ಬೆಂಡರವಾಡಿ ಯಾರೂ ಹೆಚ್ಚು, ಯಾರೂ ಕಮ್ಮಿ ಇಲ್ಲ ಎಂಬಂತೆ ಚಾ.ನಗರದ ಈ ಇಬ್ಬರ ಹೆಸರು ಹೈಕಮಾಂಡ್ ಅಂಗಳದಲ್ಲಿ ಚಾಮರಾಜನಗರ:…
ಎಸ್.ಎಸ್.ಭಟ್ ಮೈಸೂರು: ರಾಜ್ಯದಲ್ಲಿ ಸಾಕಷ್ಟು ಹೆಸರು ಮಾಡಿ ಆದರ್ಶವಾಗಿದ್ದ ಆದರ್ಶ ಪ್ರೌಢ ಶಾಲೆಗಳನ್ನು ಉನ್ನತೀಕರಿಸಿ ಪ್ರೌಢಶಾಲೆಗಳೊಂದಿಗೆ ೭೪ ಪದವಿ ಪೂರ್ವ…