ಎಂಟು ವರ್ಷಗಳ ನಂತರ ತಾಯಿಯಾದವಳ ಅಂತರಂಗ
ರಶ್ಮಿ ಎಂ. ಮಳವಳ್ಳಿ
ಎಂಟು ವರ್ಷಗಳ ಹಿಂದೆ ಮದುವೆಯಾದಾಗ ಖುಷಿಯೊಂದು ಚಿಗುರೊಡೆದು ಕನಸೆಂಬ ಎಲೆಗಳನ್ನು ಮೈ ತುಂಬಾ ತುಂಬಿಕೊಳ್ಳುತ್ತಾ ಬೆಳೆಯುತ್ತಾ ಬಂತು. ವರ್ಷ ತುಂಬುವುದರ ಒಳಗೆ ಆ ಚಿಗುರು ಬಾಡಲು ಶುರುವಿಟ್ಟಿತ್ತು. ಏನ್ ವಿಶೇಷ? ಏನೂ ಸಿಹಿ ಸುದ್ದಿ ಇಲ್ವಾ? ಎನ್ನುವ ಆತ್ಮೀಯರ, ಬಂಧುಗಳ ಮಾತುಗಳು, ಮನೆಯವರ ಮೌನಗಳು ಆವರಿಸಿಕೊಳ್ಳುತ್ತಾ ಆತಂಕ ಹೆಚ್ಚಿಸಿದ್ದವು.
ಹೆಣ್ಣಾದ ನನ್ನ ಮೇಲೆಯೇ ಪ್ರಶ್ನೆಗಳ ದಾಳಿ. ಅತ್ತ ಕಡೆ ಗಂಡಿಗೂ ಇದೇ ಪ್ರಶ್ನೆಗಳ ಶೂಲ ಇರಬಹುದೆನೋ ಅನ್ನಿಸುತ್ತಿತ್ತು ಅಂದಿಗೆ. ಇನ್ನೂ ಮಕ್ಕಳಾಗಿಲ್ಲ. ಮೊದಲು ಹೋಗಿ ಆಸ್ಪತ್ರೆಗೆ, ಆ ದೇವರಿಗೆ ಹೋಗಿ ಹರಕೆ ಕಟ್ಟಿ ಎಂಬಿತ್ಯಾದಿ ಸಾಲು ಸಾಲು ಸಲಹೆಗಳು. ಏನ್ ಫ್ಯಾಮಿಲಿ ಪ್ಲ್ಯಾನಿಂಗಾ? ಯಾಕೆ ಲೇಟು? ಎನ್ನುವ ಗೆಳತಿಯರ ಮಾತು. ಅದೇ ವೇಳೆಗೆ ನನ್ನ ವಾರಿಗೆಯಲ್ಲಿಯೇ ಮದುವೆಯಾದವರು ಮೂರು ತಿಂಗಳಾಯ್ತು, ಆರು ತಿಂಗಳಾಯ್ತು ಎನ್ನುವಾಗ ಒಡಲೊಳಗೆ ಸಂಕಟ.
ಇರಲಿ ಇಂದು ಒಂದು ವರ್ಷದ ಒಳಗಿನ ಮಾತು. ಎಲ್ಲರೂ ಇದು ಸಹಜ. ನಿಧಾನವಾಗಿ ಮಕ್ಕಳಾಗ್ತವೆ, ಸರಿಹೋಗ್ತದೆ ಎಂದು ಧೈರ್ಯ ಹೇಳಲು ಆರಂಭಿಸಿದ್ದರು. ಎರಡನೇ ವರ್ಷಕ್ಕೆ ಕಾಲಿಟ್ಟ ವೇಳೆಗೆ ಗಂಡನ ಮನೆಯವರಿಂದ ಇನ್ನು ಮಕ್ಕಳಾಗುವುದಿಲ್ಲ ಎಂಬ ನೇರವಾದ ಮಾತುಗಳು, ತಾಯಿ ಮನೆಯವರಿಂದ ಆಸ್ಪತ್ರೆ, ದೇವಸ್ಥಾನಗಳ ಸುತ್ತಾಟ. ನಾನೂ ಹರಕೆಗಳನ್ನು ಹೊರುವುದು, ಮನಸ್ಸಿನಲ್ಲಿಯೇ ದೇವರನ್ನು ಬೇಡುವುದು. ಹೀಗೆ ಸಾಗುತ್ತಲೇ ಮೂರು ವರ್ಷ ತುಂಬಿತು ಮದುವೆಯಾಗಿ.
ನಿಧಾನವಾಗಿ ನನಗೆ ಮಕ್ಕಳಾಗುವುದಿಲ್ಲ, ನಮ್ಮ ಹಣೆಯಬರಹ ಇಷ್ಟೆ ಎಂದು ಎಲ್ಲರ ಮನಸ್ಸು ಒಗ್ಗಿಕೊಳ್ಳುತ್ತಿತ್ತು. ಗಂಡನಿಗೆ ಮತ್ತೊಂದು ಮದುವೆ ಮಾಡಬೇಕು ಎನ್ನುವ ಚರ್ಚೆಗಳೂ ಆರಂಭ. ನನ್ನ ಭವಿಷ್ಯ ಎನ್ನುವ ಚಿಂತೆ. ಇದೆಲ್ಲದರ ನಡುವಲ್ಲಿ ಅಲ್ಲೆಲ್ಲೋ ಮದುವೆಯಾಗಿ ಹತ್ತು ವರ್ಷವಾದ ಮೇಲೆ ಮಕ್ಕಳಾದ್ವಂತೆ ಎನ್ನುವ ತಂಗಾಳಿ ತರಹದ ಸುದ್ದಿ. ನನ್ನಲ್ಲೂ ಚಿಗುರೊಂದು ಒಡೆದು, ನಂದನವನವೊಂದು ನಿರ್ಮಾಣವಾಗುತ್ತದೆ ಎನ್ನುವ ಆಶಾಭಾವನೆ.
ವೈದ್ಯರೆಲ್ಲವೂ ಏನೂ ತೊಂದರೆ ಇಲ್ಲ. ಇಂತಿಂಥ ಸಮಯದಲ್ಲಿ ಸೇರಬೇಕು, ಹೀಗಿಗೆ ಮಾಡಬೇಕು. ಈ ಟಾನಿಕ್, ಆ ಪೌಡರ್ ಎಂದೆಲ್ಲಾ ಸಲಹೆ ಕೊಡುತ್ತಾ ಹೋದರು. ಅವರು ಹೇಳಿದ್ದೆಲ್ಲಾ ಮಾಡಿದೆ. ಗಂಡನಿಗೂ ಸಾಕಷ್ಟು ಸಲಹೆಗಳು. ಅವರೂ ಅದನ್ನೆಲ್ಲಾ ಪಾಲಿಸುತ್ತಾ ಬಂದರು. ಈ ಬಾರಿ ಫಲ ನಿಲ್ಲಬಹುದು. ಈ ಬಾರಿ ಎಂದುಕೊಳ್ಳುತ್ತಾ ಐದು ವರ್ಷಗಳು ಕಳೆದು ಬದುಕು ಬರಡು ಎಂದುಕೊಂಡು ತಲೆಮೇಲೆ ಬಂಡೆ ಹೊತ್ತು ನಡೆಯುವ ಹಾಗೆ ಭಾರವಾದ ಹೆಜ್ಜೆಗಳ ಬದುಕನ್ನು ದೂಡುತ್ತಿದ್ದೆ.
ಆ ವೇಳೆಯಲ್ಲಿಯೇ ನನ್ನ ಬದುಕಲ್ಲಿ ಮಳೆಯಾಗಿದ್ದು. ಆಸೆಯನ್ನೇ ಬಿಟ್ಟ ಜೀವಕ್ಕೆ ಸಂತೋಷದ ಮಡುವೊಂದು ಕಾಣಿಸಿಕೊಂಡಿತ್ತು. ನನಗಾಗ ೨ ತಿಂಗಳು. ಇದೇ ಖುಷಿಯಲ್ಲಿ ಮೊದಲು ಹೋಗಿ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿ ಹೌದು ನೀವು ಗರ್ಭಿಣಿ ಎನ್ನುವ ಸುಂದರವಾದ ಮಾತುಗಳನ್ನು ಕೇಳಿದ ಮೇಲೆಯೇ ಗಾಳಿ ಸುದ್ದಿಯಂತೆಯೇ ಎಲ್ಲ ಕಡೆ ನಾನು ಗರ್ಭಿಣಿ ಎನ್ನುವ ಸತ್ಯವನ್ನು ನಾನಾಗಿಯೇ ತಿಳಿಸಿದೆ.
ಬಂಜೆ ಎನ್ನುವ ಮಾತುಗಳನ್ನು ಕೇಳಿ ಕೇಳಿ ಸಾಗಾಗಿ ಹುಟ್ಟಲಿರುವ ಮಗುವಿನ ಬಗ್ಗೆ ನೂರಾರು ಕನಸು ಕಟ್ಟಿದ್ದೆ. ಎಂಟು ವರ್ಷಗಳ ನಂತರ ತಾಯಿಯಾಗುವ ಭಾಗ್ಯ ಪಡೆದ ನನಗೋ ಎಲ್ಲಿಲ್ಲದ ಅಕ್ಕರೆ. ಹುಟ್ಟುವ ಮಗು ಯಾವುದಾದರೇನು, ಆರೋಗ್ಯವಾಗಿದ್ದರೆ ಸಾಕು, ಬದುಕಿನ ದೀಪವ ಹಚ್ಚುವ ಮಗುವೊಂದು ಬರಲಿರುವ ದಾರಿಗೆ ಎಲ್ಲರೂ ಕಾಯುತ್ತಾ ಕುಳಿತರು.
ತಿಂಗಳೊಂಭತ್ತು ತುಂಬಿ ಮಗ ಮಡಿಲು ಸೇರಿದ. ಸಂತೋಷ ಹಿಮ್ಮಡಿಯಾಯ್ತು. ಅವನ ಆರೈಕೆಯಲ್ಲಿಯೇ ಜೀವನದ ಸುಖ ಕಂಡವಳು ನಾನು. ಒಂದು ಜೀವ ಎಷ್ಟೆಲ್ಲಾ ಜೀವಗಳನ್ನು ಬೆಸೆಯಲು ಸಾಧ್ಯ ಎನ್ನುವ ಕನಿಷ್ಟ ಜ್ಞಾನವೂ ಇಲ್ಲದ ನನಗೆ ಸಾಕಷ್ಟು ಜೀವನಾನುಭವವಾಯ್ತು. ನನ್ನ ಕುಟುಂಬವೆಲ್ಲಾ ಆ ಕಂದನ ಸುತ್ತಲೇ ತಮ್ಮ ಸಂತೋಷವನ್ನು ಕಾಣುವಾಗ ನನ್ನ ಕಣ್ಣುಗಳಲ್ಲಿ ನೀರು. ದೇವರಿಗೆ ಕೈ ಮುಗಿಯುತ್ತಾ ಇಷ್ಟೊಂದು ಸಂತೋಷದ ಬುತ್ತಿಯನ್ನು ಉಣಿಸಲು ಎಂಟು ವರ್ಷಗಳ ಕಾಲ ಹಸಿವನ್ನು ದಯಪಾಲಿಸಿದ್ದೆಯಾ ಎಂದುಕೊಳ್ಳುತ್ತಲೇ ನಗೆ ಚೆಲ್ಲುತ್ತಿದ್ದ ದಿನಗಳವು.
ಈಗಲೂ ಆ ದಿನಗಳು, ಅದಕ್ಕೂ ಹಿಂದಿನ ದಿನಗಳು, ಮಗ ಬಂದ ಮೇಲಿನ ದಿನಗಳನ್ನು ಮೆಲುಕು ಹಾಕಿದರೆ ಈ ಬದುಕು ಏರಿಳಿತಗಳ ಸಾಲು ಎನ್ನಿಸುತ್ತದೆ..
ಬೆಂಗಳೂರು : ಕಿರಿಯ ಸ್ಟೇಷನ್ ಪರಿಚಾರಕ ಮತ್ತು ಕಿರಿಯ ಪವರ್‌ಮ್ಯಾನ್ ಹುದ್ದೆಗಳಿಗೆ ಪಾರದರ್ಶಕವಾಗಿ ಕೌನ್ಸೆಲಿಂಗ್ ನಡೆಸಿ ಕರ್ನಾಟಕ ವಿದ್ಯುತ್ ಪ್ರಸರಣ…
ಬೆಳಗಾವಿ : ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವ ದಿಸೆಯಲ್ಲಿ ಅರಣ್ಯ ಇಲಾಖೆಯಲ್ಲಿ ಶೇ. 3 ಪೊಲೀಸ್ ಇಲಾಖೆಯಲ್ಲಿ ಶೇ.3 ಹಾಗೂ ವಿವಿಧ…
ಬೆಳಗಾವಿ : ಆರ್ಥಿಕ ಇಲಾಖೆಯ ಅನುಮತಿ ಪಡೆದು ಖಾಲಿ ಹುದ್ದೆಗಳನ್ನು ಹಂತಹಂತವಾಗಿ ಭರ್ತಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.…
ಭಾರತೀಯ ಜಲಪ್ರದೇಶದಲ್ಲಿ ಅಕ್ರಮ ಮೀನುಗಾರಿಕೆಗಾಗಿ ಭಾರತೀಯ ಕೋಸ್ಟ್ ಗಾರ್ಡ್ ಪಾಕಿಸ್ತಾನಿ ದೋಣಿಯನ್ನು ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಂಧಿತ ವ್ಯಕ್ತಿಗಳನ್ನು…
ಮೈಸೂರು : ಡಿಸೆಂಬರ್ 21 ರಂದು ಜಿಲ್ಲೆಯಾದ್ಯಂತ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. 5 ವರ್ಷದೊಳಗಿನ ಪ್ರತಿ ಮಗುವಿಗೆ…
ಬೆಳಗಾವಿ : ರಾಜ್ಯದ ಸಮುದಾಯ ಆರೋಗ್ಯ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ಖಾಲಿ ಇರುವ ತಜ್ಞ…