ಆಂದೋಲನ ಪುರವಣಿ

ದಸರಾ ಕಳೆದು ನಿರಾಳ ಮೈಸೂರು

ಅಂತೂ ಇಂತೂ ದಸರಾ  ಮುಗಿದಿದೆ. ಹಿರಿಯರು-ಕಿರಿಯರು ಎಲ್ಲರೂ ಮೈಸೂರಿನ ಊರ ತುಂಬಾ ರಾತ್ರಿಯಿಡೀ ಓಡಾಡಿದ್ದಾರೆ.
ನಾನೂ ನನ್ನವಳ ಕೈಹಿಡಿದು ಓಡಾಡಿದ್ದೇನೆ. ಸೆಲ್ಛಿ ಎಂದರೆ ಮುಖ ಗಂಟುಹಾಕುವ ನಾನು, ನನ್ನವಳ ಪ್ರೀತಿಯ ಆದೇಶದ ಮೇರೆಗೆ ಹಲ್ಲುಕಿರಿದು ನೂರಾರು ಜೋಡಿ-ಸೆಲ್ಛಿಗಳನ್ನು ಕ್ಲಿಕ್ಕಿಸಿದ್ದೇನೆ!

ಆರ್. ಸದಾನಂದ
ನಾನು ಮೊದಲ ಬಾರಿಗೆ ದಸರಾ ನೋಡಿದ್ದು ೧೯೯೬ರಲ್ಲಿ. ಮಾನಸ ಗಂಗೋತ್ರಿಯಲ್ಲಿ ಓದುತ್ತಿದ್ದ ನಾನು ಬೋಗಾದಿಯಲ್ಲಿ ರೂಂ ಒಂದರಲ್ಲಿ ಬಾಡಿಗೆಗೆ ಇದ್ದೆ. ಬೋಗಾದಿಯಿಂದ ಇಳಿ ಸಂಜೆಯಲ್ಲಿ ಸೈಕಲ್ ತುಳಿಯುತ್ತಾ ಅರಮನೆ ಪ್ರದೇಶವನ್ನು ತಲುಪುವುದೇ ಒಂದು ವಿಶೇಷ ಅನುಭವ. ಜನರಿಂದ ದೂರವಿರಲು ಸದಾ ತುಡಿಯುತ್ತಿದ್ದ ನನ್ನನ್ನು ಅರಮನೆಯ ದೀಪದ ವ್ಯವಸ್ಥೆ ಜನರ ನಡುವೆ ನಿಲ್ಲುವಂತೆ ಮಾಡುತ್ತಿತ್ತು. ಜೊತೆಗೆ ಬಲ್ಬುಗಳ ಹಳದಿ ಮಿಶ್ರಿತ ಬೆಳಕಿನಲ್ಲಿ ಮಿಂದಿರುತ್ತಿದ್ದ ಸಯ್ಯಾಜಿರಾವ್ ರಸ್ತೆಯಲ್ಲಿ ಸೈಕಲ್ ತುಳಿಯುವ ಖುಷಿಯೇ ಬೇರೆ. ಸೈಕಲ್ ಹೊಡೆಯುತ್ತಾ, ನಾಲ್ಕು ಬಾರಿಯಾದರೂ ಚುರುಮುರಿ ತಿಂದು ವಾಪಸ್ ರೂಂಗೆ ಬಂದು ಅಡ್ಡಾದರೆ, ಮರು ದಿನ ಏಳುತ್ತಿದ್ದೇ ಹತ್ತರ ವೇಳೆಗೆ.

ಹೀಗೆ ಅಲೆದಾಡುವ ಸಂತೋಷದ ನಡುವೆ ಒಂದಿಷ್ಟು ದುಃಖವನ್ನೂ, ಸಿಟ್ಟನ್ನೂ ದಸರಾ ನನ್ನಲ್ಲಿ ತರುತಿತ್ತು. ಹತ್ತನೇ ತರಗತಿ ಮುಗಿಸೋ ವೇಳೆಗಾಗಲೇ ಪರಿಸರ ನಾಶ ಮತ್ತು ಹೆಚ್ಚುತ್ತಿರುವ ಭೂಮಿಯ ತಾಪಮಾನದ ಕುರಿತು ಅಷ್ಟಿಷ್ಟು ಜ್ಞಾನ ಪಡೆದಿದ್ದ ನನಗೆ ಅರಮನೆಯನ್ನು ಅಲಂಕರಿಸುತ್ತಿದ್ದ ಬುರುಡೆ ಬಲ್ಬುಗಳನ್ನು ನೋಡಿ ವಿಷಾದ ಮೂಡುತ್ತಿತ್ತು – ಎಷ್ಟೊಂದು ಕರೆಂಟ್ ಖರ್ಚಾಗುತ್ತಿದೆ. ಇಷ್ಟು ಖುಷಿಪಡಲು ಎಷ್ಟೆಲ್ಲಾ ಕಾಡನ್ನು ಮುಳುಗಿಸಿ, ಅಣೆಕಟ್ಟೆ ಕಟ್ಟಿ, ಕರೆಂಟ್‌ಉತ್ಪಾದಿಸಿ- ಜೊತೆಗೆ ಇದರ ಕುರಿತು ಏನನ್ನೂ ಮಾಡದ ಸರ್ಕಾರ. ಇದ್ಯಾವುದರ ಬಗ್ಗೆಯೂ ತಲೆಕೆಡಸಿಕೊಳ್ಳದ ಜನರು ವಿರಾಮವಾಗಿ ಓಡಾಡುವುದನ್ನು ಕಂಡು ಸಿಟ್ಟು ಬರುತ್ತಿತ್ತು.

ಆದರೆ ಈಗ ಬೆಳಕಲ್ಲಿ ಹೊಳೆಯುವ ರಸ್ತೆಗಳಲ್ಲಿ ಓಡಾಡಲು ವೈಯಕ್ತಿಕವಾಗಿ ಬೇಸರಿಸದಂತೆ ಎಲ್‌ಇಡಿ ದೀಪಗಳು ಮಾಡಿವೆ. ಬುರುಡೆ ಬಲ್ಬುಗಳು ಅರಮನೆಯನ್ನು ದೀಪದಿಂದ ಬೆಳಗಲು ಬಳಸುತ್ತಿದ್ದಷ್ಟೇ ವಿದ್ಯುತ್‌ನ್ನು ಬಳಸಿಕೊಂಡು ಮೈಸೂರಿನ ಬಹುತೇಕ ಬೀದಿಗಳನ್ನು ಅಲಂಕರಿಸಲು ಎಲ್‌ಇಡಿ ಬಲ್ಬುಗಳು ಅವಕಾಶ ನೀಡಿರುವುದನ್ನು ನೆನೆದಾಗಲೆಲ್ಲ ವಿಜ್ಞಾನದ ಬಗ್ಗೆ ಹೆಮ್ಮೆ ಎನಿಸುತ್ತದೆ. ಪ್ರತೀ ಬಾರಿ ಎಲ್‌ಇಡಿ ದೀಪಗಳ ಸರಮಾಲೆಯನ್ನು ನೋಡಿದಾಗಲೆಲ್ಲಾ ಸ್ವಲ್ಪ ಗರ್ವದಿಂದಲೇ ಅವುಗಳತ್ತ ಮುಖ ಮಾಡಿ ನಿಲ್ಲುತ್ತೇನೆ.

ಮಹಾರಾಜ ಕಾಲೇಜಿನ ಸಮೀಪದಲ್ಲೇ ವಾಸವಿರುವ ನನಗೆ ದಸರಾ ಕಾಣಲು ಮನೆಯ ಬಾಗಿಲು ದಾಟಿದರೆ ಸಾಕೀಗ. ಸಂಜೆಯಾದೊಡನೇ ಹೊಳೆಯುವ ರಸ್ತೆಗಳು. ರಸ್ತೆ ತುಂಬಾ ಓಡಾಡುವ ವಾಹನಗಳು. ಆಗಾಗ ಕಿರುಚುತ್ತಾ ಓಡಾಡುವ ಯುವಕರು. ಮಹಾರಾಜ ಕಾಲೇಜಿನ ಆವರಣದಲ್ಲಿ ನಡೆಯುವ ಯುವ ದಸರಾ ಕಾರ್ಯಕ್ರಮದ ಜೋರಾದ ಶಬ್ದ ಕೇಳಿದಾಗ ರೇಜಿಗೆ ಅನ್ನಿಸುವುದಾದರೂ, ಈ ಗಲಾಟೆ-ಗದ್ದಲಗಳೇ ದಸರಾ ಅನ್ನಿಸಿ ಸುಮ್ಮನಾಗುತ್ತೇನೆ. ಹುಡುಗರಿಗಿಂತ ನಾವೇನು ಕಡಿಮೆ ಎನ್ನುವಂತೆ ಕೆಲವು ಹುಡುಗಿಯರು ಅರಚುತ್ತಾ ಬೈಕ್-ಸ್ಕೂಟರ್ ಏರಿ ಸಾಗುವುದನ್ನು ಕಂಡಾಗ ಭೇಷ್‌ಮಕ್ಕಳೆ ಅನ್ನಿಸಿದರೂ, ಹುಡುಗರು ಮಾಡುವ ಎಲ್ಲಾ ಹುಚ್ಚು ಸಾಹಸಗಳನ್ನು ಇವರೂ ಮಾಡ ಹೊರಟರೆ ಅನ್ನಿಸಿ ಪೆಚ್ಚಾಗುವುದೂ ಇದೆ. ಒಮ್ಮೊಮ್ಮೆ ಹುಡುಗರ ಹುಡುಗಾಟ ದೊಡ್ಡವರನ್ನು ಫಜೀತಿಗೆ ಸಿಲುಕಿಸುತ್ತದೆ. ಇದೇ ದಸರಾ ಒಮ್ಮೆ ನನ್ನನ್ನು ಫಜೀತಿಗೆ ಈಡು ಮಾಡಿತ್ತು.

ಜಾರು ಪ್ಯಾಂಟಿನ ಡ್ಯಾನ್ಸ್ ಮೇಷ್ಟರು

ನಾನೋ ವೃತ್ತಿಯಲ್ಲಿ ಪಿಯು ಕಾಲೇಜಿನ ಉಪನ್ಯಾಸಕ. ಮೈಸೂರು ಪಕ್ಕದ ದೊಡ್ಡದೊಂದು ಊರಿನಲ್ಲಿ ನನ್ನ ಕಾಲೇಜು. ಕೋವಿಡ್ಗೂ ಮುನ್ನ ಎಲ್ಲವೂ ಸರಿಯಾಗಿದ್ದ ಆ ಕಾಲದ ಒಂದು ವರ್ಷ, ನನ್ನ ಕಾಲೇಜಿನ ಪ್ರಿನ್ಸಿಪಾಲರು ಮೀಟಿಂಗ್ ಕರೆದು ಯುವ ಸಂಭ್ರಮದಲ್ಲಿ ಡಾನ್ಸ್ ಮಾಡಲು ಸರ್ಕಾರದವರು ಹಣ ನೀಡುತ್ತಾರೆ. ಕಲಿಸಲು ಕೊರಿೋಂಗ್ರಾಫರ್ ಬರುತ್ತಾರೆ. ಮೈಸೂರಿಗೆ ಹೋಗಿ ಬರೋ ಖರ್ಚು ಕೂಡ ಕೊಡುತ್ತಾರೆ. ಉಸ್ತುವಾರಿ ನೋಡಿಕೊಳ್ಳುವವರು ಬೇಕು. ಯಾರು ತಗೋತೀರಿ? ಎಂದಾಗ ಒಂದು ನಿಮಿಷದ ಮೌನ ಸ್ಟಾಫ್‌ರೂಂಮಿನಲ್ಲಿ. ‘‘ಯಾವ ಮೋಹನ ಮುರಳಿ ಕರೆಯಿತೋ?’’ ಅಂತಾ ಗುನುಗುತಾ ಮೂಲೆಯಲ್ಲಿ ಕುಳಿತಿದ್ದ ನನ್ನೆಡೆಗೆ ತಮ್ಮ ದಿವ್ಯ ದೃಷ್ಟಿಯನ್ನು ಬೀರಿದ ಅವರು  ‘‘…ನಂದರೆ’’ ಎಂದಾಗ, ಕಾಲೇಜಿನ ಮುಖ್ಯಸ್ಥರ ಮಾತಿಗೆ ಮರುಳಾದವನಂತೆ ‘‘ಆಗಲಿ ಸರ್’’ ಎಂದು ಬಿಟ್ಟೆ! ಇಲ್ಲಿಂದ ಆರಂಭವಾಯಿತು ನೋಡಿ – ನನ್ನ ಪಾಲಿನ ಯುವ ಸಂಭ್ರಮದ ದಸರಾ- ಮಕ್ಕಳಿಗೋ ಹಬ್ಬ. ನನ್ನ ಪಾಲಿಗೆ ಎಲ್ಲ ಎಲ್ಲವೂ ಹೊಸತು ಅಬ್ಬಾ!

ಮಾರನೇ ದಿನ ಹನ್ನೊಂದಕ್ಕೆ ಡ್ಯಾನ್ಸ್ ಕಲಿಸುವ ಶಿಕ್ಷಕ ಉರುಫ್ ಕೊರಿೋಂಗ್ರಾಫರ್ ಬಂದ. ಬಂದವ ‘‘ಸಾ, ನಾನು ಡ್ಯಾನ್ಸ್ ಮಾಸ್ಟರ್’’ ಎಂದು ಪರಿಚಯಿಸಿಕೊಂಡ. ಅಲ್ಲಲ್ಲಿ ಹರಿದ ಜೀನ್ಸ್ ಪ್ಯಾಂಟ್ ಅವನ ಸೊಂಟದಿಂದ ‘‘ನಾನೀಗಲೇ ಉದುರುವೇ’’ ಎಂದು ಹಠಕ್ಕೆ ಬಿದ್ದಂತೆ ನೇತಾಡುತ್ತಿತ್ತು. ತಲೆಯ ಮೇಲಿನ ಉದ್ದದ ಕೂದಲನ್ನು ಉಪೇಂದ್ರನ ಸ್ಟೈಲ್ನಲ್ಲಿ ಕಟ್ಟಿ ಹಾಕಿದ್ದರೂ, ಈಗೀಗಲೇ ಜಾರಿ ಬಿಡುವೆ ನಾನು ಎಂದು ಸಾರಿ ಹೇಳುತ್ತಿತ್ತು. ‘‘ಡ್ಯಾನ್ಸ್ ಮಾಡಲು ಲೈಕ್ ಇರುವ ಸ್ಟೂಡೆಂಟ್ಸ್‌ನ ಫೀಲ್ಡ್‌ನಲ್ಲಿ ಅಸೆಂಬಲ್ ಮಾಡ್ಸಿ ಸಾರ್’’ ಎಂದು ಆದೇಶಿಸಿ ಫೀಲ್ಡ್‌ೆುಂಡೆಗೆ ಹೊರಟ ಎನ್ನುವುದಕ್ಕಿಂತ ಡ್ಯಾನ್ಸ್ ಮಾಡುತ್ತಾ ಸಾಗಿದ ಎನ್ನಬೇಕು. ಅವನನ್ನು ನೋಡುತ್ತಾ ನಿಂತ ನನಗೆ ಅವನ ಪ್ಯಾಂಟ್ ಕಡೆೆುೀಂ ಗಮನ. ಹೇಳಿ ಕೇಳಿ ಹೆಣ್ಮಕ್ಕಳ ಕಾಲೇಜು! ಇವನ ಪ್ಯಾಂಟ್ ಉದುರಿ… ಅದು ಗುಲ್ಲಾಗಿ, ಆಮೇಲೆ ಸುದ್ದಿಯಾಗಿ, ಯಾರ್ರೀ ಅದು ಯುವ ಸಂಭ್ರಮ ಪ್ರೋಗ್ರಾಂನ ಕೋ-ಆರ್ಡಿನೇಟರ್‌ಅಂತ ಮೇಲಧಿಕಾರಿಗಳು ಕೇಳಿ… ಸೆಪ್ಟೆಂಬರ್‌ನಲ್ಲೂ ಏಪ್ರಿಲ್‌ನಲ್ಲಿ ಬೆವರುವಂತೆ ಬೆವರಿದ್ದೆ!

ಬಿಳಿ ಹಾಳೆಯ ಮೇಲೆ ಯುವ ಸಂಭ್ರಮದಲ್ಲಿ ಡ್ಯಾನ್ಸ್ ಮಾಡಲು ಆಸಕ್ತಿಯಿರುವ ವಿದ್ಯಾರ್ಥಿನಿಯರು ಕೂಡಲೇ ಫೀಲ್ಡ್‌ನಲ್ಲಿ ಬಂದು ಸೇರುವುದೆಂದು ಬರೆದು ಎಲ್ಲ ತರಗತಿಗೂ ಅಟೆಂಡರ್‌ಮೂಲಕ ಕಳುಹಿಸಿದೆ. ಕಳುಹಿಸಿ ಐದೂ ನಿಮಿಷವೂ ಆಗಿಲ್ಲ. ಅರ್ಧ ಕಾಲೇಜು ಗ್ರೌಂಡ್ಸ್‌ನಲ್ಲಿ! ಗಾಬರಿಯಾದ ನನ್ನೊಳಗಿನ ಇಂಗ್ಲೀಷ್ ಮಾಸ್ಟರ್, ಡ್ಯಾನ್ಸ್ ಮಾಸ್ಟರ್‌ಕಡೆ ನೋಡಿದಾಗ ‘‘ಡೋಂಟ್‌ವರಿ ಸಾ. ಐ ಮ್ಯಾನೇಜ್’’ ಎಂದವ ‘‘ಏ ಬಾಯ್ಸ್ ಕಮ್ ಹಿಯರ್’’ ಎಂದು ಕೂಗಿದ. ಪಟ್ ಅಂತ ಅವನದೇ ರೀತಿಯ ಪ್ಯಾಂಟು ಧರಿಸಿದ ನಾಲ್ವರು ಹಾಜರಾದರು. ‘‘ಸಾ, ಇವರೆಲ್ಲಾ ನನ್ನ ಅಸಿಸ್ಟೆಂಟ್ಸ್’’ ಎಂದ. ಒಂದು ಉದುರುವ ಪ್ಯಾಂಟೇ ನನ್ನನ್ನು ಕಾಡುತ್ತಿರುವಾಗ, ಇನ್ನೂ ನಾಲ್ಕು ಪ್ಯಾಂಟುಗಳನ್ನು ನಿಭಾಯಿಸಬೇಕಲ್ಲಾ ಅನ್ನೋ ಆತಂಕದ ನಡುವೆ ತಲೆಯಾಡಿಸಿದೆ. ‘‘ಗರ್ಲ್ಸ್ ವಾಚ್ ಮಿ. ಡೂ ಯಾಸ್ ಐ ಡೂ’’ ಎಂದವ ಒಂದೆರಡು ಸ್ಟೆಪ್ಸ್ ಹಾಕಿ ತೋರಿಸಿದ. ಕಮಾನ್… ೧೨೩ ಎಂದ… ಗರ್ಲ್ಸ್ ಸ್ಟೆಪ್ಸ್ ಹಾಕಿದರು. ಯೂ ಔಟ್… ಯೂ ಔಟ್… ಎನ್ನುತ್ತಾ ಹೋದರು ಅವನ ಶಿಷ್ಯಂದಿರು. ಎರಡು ಗಂಟೆ ಮುಗಿದ ಮೇಲೆ ‘‘ಸಾ, ಇವರೆಲ್ಲಾ ಸೆಲೆಕ್ಟ್ ಆಗಿರೋರು ಸಾ. ಇದರಲ್ಲಿ ಯಾವುದೇ ಚೇಂಚ್ ಇಲ್ಲ ಸಾ. ನಾನು ಇವರಿಗೇ ಟ್ರೇನ್ ಕೋಡೋದು. ನನ್ನ ಪ್ರೆಸ್ಟೇಜ್ ವಿಷಯ ಸಾ’’ ಅಂದ. ಅರವತ್ತು ಡ್ಯಾನ್ಸರ್‌ಗಳ ತಂಡ ರೆಡಿಯಾಗಿತ್ತು.

ಆ ಅರವತ್ತು ಜನರ ಹೆಸರನ್ನು ಒಂದೆಡೆ ಲಿಸ್ಟ್ ಮಾಡಿ ನನಗೆ ನೀಡಿದ ಡಾ-ಮಾಸ್ಟರ್, ‘‘ನಾಳೆ ಹತ್ತು ಗಂಟೆಗೆ ಪ್ರಾಕ್ಟೀಸ್ ಸಾ. ಯಾರೂ ಮಿಸ್ಸಾಗಬಾರದು’’ ಎಂದು ಆದೇಶಿಸಿ ನಿಂತ. ಆಗ ಅವನ ಮೊಬೈಲ್ ರಿಂಗಾಯಿತು – ಶಿವಾ ಅಂತಾ ಹೋಗುತ್ತಿದ್ದೆ ಬೈಕಿನಲಿ…’ ಎಕ್ಸಕ್ಯೂಜಮಿ ಸಾ… ಎಂದವ ‘‘ಹಾಯ್, ಬ್ರೋ…’’ ಅನ್ನುತ್ತಾ ಅಲ್ಲಿಂದ ಹೊರಟ. ಅಂದಿನಿಂದ ಶಿವಾ ಅಂತ ಹೋಗುತ್ತಿದ್ದೆ… ಅನ್ನೋ ಗಾನ ನನ್ನ ತುಟಿಗೆ ಅಂಟಿಕೊಂಡೇ ಬಿಟ್ಟಿತು.
ಸಂಗಮ… ಸಂಗಮ… ಡ್ಯಾನ್ಸಾಗಾ ಎಲ್ಲಾ ಸಂಗಮ

ಯುವ ಸಂಭ್ರಮದ ನೃತ್ಯ ತರಬೇತಿಯ ವೇಳೆ ಡಾ-ಮಾಸ್ಟರ್ ಮತ್ತವನ ಮರಿ ಮಾಸ್ಟರ್‌ಗಳ ಪ್ಯಾಂಟ್‌ಬಿದ್ದು ಹೋದರೆನ್ನುವ ಆತಂಕದಲ್ಲಿ ಅವರೊಡನೆ ಯಾವಾಗಲೂ ಇರುತ್ತಿದ್ದ ನಾನು ಒಂದು ದಿನ ಅಡುಗೆ ಮನೆಯಲ್ಲಿ ‘‘ಸಂಭ್ರಮ… ಸಂಭ್ರಮ… ಅನುರಾಗ ಸಂಭ್ರಮ’’ ಎಂದು ಗುನುಗಿದ್ದು ಕೇಳಿದ ಹೋಂಮಿನಿಷ್ಟ್ರ್ರೀ ಇಂಗ್ಲೀಷ್ ಮೇಷ್ಟ್ರೇ? ಅದು ಸಂಗಮ. ಸಂಭ್ರಮ ಅಲ್ಲ’’ ಎಂದು ಕರೆಕ್ಟ್ ಮಾಡಿದ್ದೂ ಅಲ್ಲದೆ, ‘‘ಆ ಚಾಮಯ್ಯ ಮೇಷ್ಟ್ರು ಶಿಷ್ಯ ರಾಮಾಚಾರಿ ಥರ ಯಾರೂ ಶಿಷ್ಯರು ಇಲ್ಲವೇ ಈ ಮೇಷ್ಟ್ರಿಗೇ’’ ಎಂದು ಕೇಳಿದ್ದೂ ಆಯಿತು.

ಡ್ಯಾನ್ಸ್ ಕಲಿಸುವ ಕಾರ್ಯದ ಉಸ್ತುವಾರಿಯಲ್ಲಿ ನಾನು ಗುನುಗುವ ಹಾಡುಗಳ ಪದಗಳು ಬೇಕಾಬಿಟ್ಟಿ ಡ್ಯಾನ್ಸ್‌ಮಾಡುತ್ತಿವೆ ಅಂತ ಅರಿವಾದ ಮೇಲೆ ಮನೆೊಂಳಗೆ ಗುನುಗದಿರುವ ವ್ರತ ಕೈಗೊಂಡೆ. ಈ ವ್ರತವೂ ಯಾವುದೇ ಅಡಚಣೆಯಿಲ್ಲದೆ ಸಾಂಗವಾಗಿ ಸಾಗುತ್ತಲೇ ಇತ್ತು – ಶಿವಾ ಅಂತ ಹೋಗುತ್ತಿದ್ದೆ… ಹಾಡನ್ನು ಅಂದು ಅಡುಗೆ ಮನೆಯಲ್ಲಿ- ಅದು ಮನೆಯ ಯಜಮಾನಿಯ ಪಕ್ಕದಲ್ಲಿ ನಿಂತು ಹಾಡುವವರೆಗೆ! ನಮ್ಮ ಯುವ ಸಂಭ್ರಮದ ಡಾನ್ಸ್‌ನೊಂದಿಗೆ ವಿದ್ಯಾರ್ಥಿನಿೋಂರ್ವಳ ಎಡವಟ್ಟಿನ ಕತೆಯ ಸಂಗಮವಾಗದೇ ಹೋಗಿದ್ದಲ್ಲಿ ನನ್ನ ವ್ರತ ಭಂಗ ಆಗುತ್ತಲೇ ಇರಲಿಲ್ಲ.

ಉದ್ದ ಕತೆಯನ್ನು ಸ್ವಲ್ಪ ಚಿಕ್ಕದಾಗಿಸಿ ಹೇಳುವುದಾದರೆ – ನಮ್ಮ ವಿದ್ಯಾರ್ಥಿನಿಯರು ಡ್ಯಾನ್ಸ್ ಕಲಿತು, ಯುವ ಸಂಭ್ರಮ ವೇದಿಕೆಯಲ್ಲಿ ಕುಣಿದು, ಚಪ್ಪಾಳೆ ಗಿಟ್ಟಿಸಿ, ನೆನಪಿನ ಕಾಣಿಕೆ ಪಡೆದುಕೊಂಡು, ಊರಿಗೆ ಹಿಂತಿರುಗಿ ಹೊರಟರು. ಉಸ್ತುವಾರಿ ಹೊಣೆ ಹೊತ್ತ ನಾನು ಅವರೊಟ್ಟಿಗೆ ಪಯಣಿಸಿ, ಕಾಲೇಜು ತಲುಪಿದೆ. ಮೊದಲೇ ನಿಗದಿಯಾದಂತೆ ಯಾರು-ಯಾರೊಂದಿಗೆ ಹೋಗಬೇಕೆಂಬ ಪಟ್ಟಿಯನ್ನು ಹಿಡಿದು (ಪ್ರಿನ್ಸಿಪಾಲರೇ ಖುದ್ದು ಸಿದ್ಧಪಡಿಸಿದ್ದ ಪಟ್ಟಿ – ನಿರ್ದಿಷ್ಟ ವಿದ್ಯಾರ್ಥಿನಿಯರನ್ನು ಕರೆದೊಯ್ಯುವವರ ಹೆಸರು, ಫೋನ್ ನಂಬರ್ ಇತ್ಯಾದಿ) ಎಲ್ಲರನ್ನೂ ಕಳುಹಿಸಿಕೊಟ್ಟು, ಬಸ್ಸು ಹಿಡಿದು ಮೈಸೂರು ತಲುಪಿದಾಗ ರಾತ್ರಿ ಒಂದಾಗಿತ್ತು. ರಾಮಸ್ವಾಮಿ ಸರ್ಕಲ್‌ನಲ್ಲಿ ಬಸ್ಸು ಇಳಿಯುವುದಕ್ಕೂ, ಜೇಬಿನಲ್ಲಿದ್ದ ಫೋನ್ ಬಡಿದುಕೊಳ್ಳುವುದಕ್ಕೂ ಒಂದೇ ಆಯಿತು. ನೋಡಿದರೆ, ಯಾವುದೋ ಲ್ಯಾಂಡ್‌ಲೈನ್ ನಂಬರ್ ಬೇರೇ!

ರೀಸಿವ್ ಮಾಡಿದ ಕೂಡಲೇ ‘‘ರೀ ಮಾಸ್ಟ್ರೇ, ಸ್ವಲ್ಪನೂ ಜವಾಬ್ದಾರಿ ಬೇಡವೇನ್ರೀ? ಹೆಣ್ಮಕ್ಕಳನ್ನ ಕರೆದುಕೊಂಡು ಹೋದ್ಮೇಲೆ, ಅವರನ್ನ ಮನೇ ತಲುಪಿಸಬೇಕು ಅನ್ನೋ ಎಚ್ಚರ ಬೇಡ್ವೇನ್ರೀ ನಿಮಗೆ?’’ ಬಸ್ಸಿನಲ್ಲಿ ಬಂದಿದ್ದ ತೂಕಡಿಕೆ ಒಟ್ಟಿಗೆ ಹಾರಿ ಹೋಯಿತು. ಯಾರು ಮಾತನಾಡುತ್ತಿರುವುದು ಅಂದ ಕೂಡಲೇ ‘‘ಟೌನ್ ಪೊಲೀಸ್ ಸ್ಟೇಷನ್ನಿಂದ ಕಣ್ರೀ. ಮಗಳು ಬಂದಿಲ್ಲ ಅಂತ ತಾಯಿ ಬಂದು ದೂರು ನೀಡಿದ್ದಾರೆ. ಎಲ್ಲಿದ್ದೀರಿ ನೀವು? ಬೇಗ ಸ್ಟೇಷನ್ಗೆ ಬನ್ನಿ’’ ಎಂದು ಜೋರು ಮಾಡಿದಾಗ, ನನ್ನೆಲ್ಲಾ ಪೀಪಲ್ ಮ್ಯಾನೇಜ್ಮೆಂಟ್ ಬುದ್ಧಿ ಖರ್ಚು ಮಾಡಿ ವಿದ್ಯಾರ್ಥಿನಿಯ ಹೆಸರು ತಿಳಿದುಕೊಂಡು, ಪಟ್ಟಿಯಲ್ಲಿ ಚೆಕ್ ಮಾಡಿ, ಯಾರೊಂದಿಗೆ ಹೋಗಿದ್ದಾಳೆ, ಅವರ ಹೆಸರು, ದೂರವಾಣಿ ಸಂಖ್ಯೆಯನ್ನು ಕರೆ ಮಾಡಿದ ಪೊಲೀಸನವರಿಗೆ ನೀಡಿದೆ. ಈಗಲೇ ಹೊರಟು ಬರುವುದಾಗಿ ಹೇಳಿ, ನನ್ನ ಪರಿಚಯವಿದ್ದ ಹಿರಿಯ ಪೊಲೀಸ್ ಅಧಿಕಾರಿಗೆ ಕೂಡಲೆ ವಿಷಯ ತಿಳಿಸಿ ಸಹಾಯ ಮಾಡುವಂತೆ ಕೋರಿದೆ. ಮನೆಗೆ ಹೋಗಲೂ ಮನಸ್ಸಾಗದೆ, ಸರ್ಕಲ್‌ನ ಅಂಗಡಿೊಂಂದರ ಮೆಟ್ಟಿಲ ಮೇಲೆ ಶಿವಾ ಅಂತ… ಗುನುಗುತಾ ಕುಳಿತೆ. ಇಪ್ಪತ್ತು ನಿಮಿಷಗಳು ಉರುಳಿದ ಮೇಲೆ ಬಂದ ಕರೆ – ‘‘ಸಾರ್, ನೀವು ಕೊಟ್ಟ ನಂಬರಿಗೆ ಫೋನ್ ಮಾಡಿದೆವು. ಹುಡುಗಿ ಅವಳ ಅಜ್ಜಿ ಮನೇಲಿ ಇದ್ದಾಳಂತೆ. ಅವಳ ಸೋದರ ಮಾವನೆ ಕರೆದುಕೊಂಡು ಹೋಗಿದ್ದಂತೆ.

ನಿಮ್ಮದೇನೂ ತಪ್ಪಿಲ್ಲ. ನೀವು ಬರುವುದು ಬೇಡಿ ಸಾರ್’’ ಅಂತ ಉಲಿಯಿತು. ಉಸ್ಸೋ ಎಂದು ಉಸಿರು ಬಿಟ್ಟ ನಾನು ಗುಟುರು ಹಾಕುತ್ತಿದ್ದ ಕರೆಯನ್ನು ಉಲಿಯುವಂತೆ ಮಾಡಿದ ಹಿರಿಯ ಅಧಿಕಾರಿ ಮಿತ್ರರಿಗೆ ಕರೆ ಮಾಡಿ ಧನ್ಯವಾದ ಹೇಳಿ ಮನೆಗೆ ತಲುಪಿ ನಿದ್ರಿಸಿದೆ. ಬೆಳಿಗ್ಗೆ ಅದೇ ಖುಷಿಯಲ್ಲಿ ಎದ್ದು ಅಡುಗೆ ಮನೆಗೆ ಧಾವಿಸಿ ಶಿವಾ… ಅಂತ ಗುನುಗುವ ತಪ್ಪು ಮಾಡಿ ವ್ರತ ಭಂಗ ಮಾಡಿಕೊಂಡಿದ್ದೆ. ಎಲ್ಲವೂ ದಸರಾಯ ತಸ್‌ಮೈ ನಮಃ.

ತಪ್ಪೂ ಮಾಫಿಯಾಗುವ ಕಾಲ ದಸರಾ
ಈ ವಿಜಯದಶಮಿಯ ದಿನ ದಸರಾದ ಅಲಂಕೃತ ರಸ್ತೆಗಳಲ್ಲಿ ಅಡ್ಡಾಡಿಕೊಂಡು ಮನೆ ತಲುಪಿದಾಗ ಮಗ ಸ್ಕೂಟರ್ ಹತ್ತಿ ಹೊರಟಿರುವುದು ಕಂಡಿತು. ಜೊತೆಗೊಬ್ಬ ಗೆಳೆಯ ಬೇರೆ. ಹೊರಡಲು ಸ್ಕೂಟರ್ ಹತ್ತಿ ಕುಳಿತಿರುವ ಇಬ್ಬರ ತಲೆಯೂ ಖಾಲಿ! ಶಿರಸ್ತ್ರಾಣವಿಲ್ಲದ ಶಿರ ಸ್ಕೂಟರ್ ಮೇಲೆ ಸವಾರಿ ಮಾಡುವುದೆಂದರೆ ಏನು? ನಾನು ಅಪ್ಪನ ಪೋಜ್‌ಅನ್ನು ತುಸು ಗಂಭೀರವಾಗೇ ನೀಡುತ್ತಾ – ‘‘ಹೆಲ್ಮೆಟ್ ಇಲ್ಲದೇ ಹೋಗುವುದು ಬೇಡ. ಪೊಲೀಸರು ದಂಡ ಹಾಕುತ್ತಾರೆ. ಜೊತೆಗೆ ಅಪಾಯಕಾರಿ’’ ಎಂದೆ. ‘‘ಏ ಅಪ್ಪಾ, ಇದು ದಸರಾ ಟೈಂ. ಪೊಲೀಸರು ಹೆಲ್ಮೆಟ್ಟೂ ಕೇಳಲ್ಲ. ಲೈಸೆನ್ಸೂ ಕೇಳಲ್ಲ. ಬೈ’’ ಎನ್ನುತ್ತಾ ಎಕ್ಸಲೇಟರ್‌ಒತ್ತಿ ಅವ ಜಾಗ ಖಾಲಿ ಮಾಡೇ ಬಿಟ್ಟ. ಅಂದರೆ ದಸರಾ ಆರಂಭವಾದಾಗಿನಿಂದಲೂ ಇವನು ಶಿರಸ್ತ್ರಾಣವಿಲ್ಲದೇ ಓಡಾಡಿದ್ದಾನೆ! ಅದೂ ಕಿಲೋಮೀಟರ್‌ಗಟ್ಟಲೆ! ಅ್ಂಯೋ, ಇದೇನಿದು ಎಂದು ಚಿಂತಿಸುತ್ತಿರುವಾಗ, ಬಾಗಿಲಲ್ಲೇ ಇದ್ದ ಹೋಂ ಮಿನಿಷ್ಟ್ರು – ‘‘ಮೇಷ್ಟ್ರೇ, ಇದು ದಸರಾ ಟೈಂ. ಸುಮ್ಮನೆ ಬನ್ನಿ, ಒಳಕ್ಕೆ’’ ಅಂತ ಹೇಳುತ್ತಾ ಒಳ ನಡೆದಳು. ನಡೆದವಳ ಹಿಂದೆ ಮೌನದ ಆಭರಣವನ್ನು ಧರಿಸಿ ಹೆಜ್ಜೆ ಮೇಲೆ ಹೆಜ್ಜೆ ಇಡುತ್ತಾ ಹೊರಟ ನನ್ನ ಒಳ ಕೋಣೆಯಲ್ಲಿ ಮೌನದ ಮಾತುಕತೆ ಸಾಗಿತ್ತು-

ಅಂತೂ ಇಂತೂ ದಸರಾ ಮುಗಿದಿದೆ. ಹಿರಿಯರು-ಕಿರಿಯರು ಎಲ್ಲರೂ ಮೈಸೂರಿನ ಊರ ತುಂಬಾ ರಾತ್ರಿಯಿಡೀ ಓಡಾಡಿದ್ದಾರೆ. ನಾನೂ ನನ್ನವಳ ಕೈಹಿಡಿದು ಓಡಾಡಿದ್ದೇನೆ. ಸೆಲ್ಛಿ ಎಂದರೆ ಮುಖ ಗಂಟುಹಾಕುವ ನಾನು ನನ್ನವಳ ಪ್ರೀತಿಯ ಆದೇಶದ ಮೇರೆ ಹಲ್ಲುಕಿರಿದು ನೂರಾರು ಜೋಡಿ-ಸೆಲ್ಛಿಗಳನ್ನು ಕ್ಲಿಕ್ಕಿಸಿದ್ದೇನೆ! ಇದೇ ನಾನು ತರಗತಿಯಲ್ಲಿ ಪಾಠ ಕೇಳುವಾಗಲೂ ಸೆಲ್ಛಿ ಕ್ಲಿಕ್ಕಿಸುವ ಸಾಹಸ ಮಾಡುವವರನ್ನು ಗಕ್ಕನೆ ಹಿಡಿದು, ಪ್ರಿನ್ಸಿಪಾಲರ ಮುಂದೆ ಹಾಜರುಪಡಿಸಿ ಹೆಮ್ಮೆಪಟ್ಟಿದ್ದೂ ಇದೆ.

ಆದರೆ, ಮೈಸೂರಿನ ಬೀದಿಬೀದಿಗಳಲ್ಲಿರುವ ದೀಪಾಲಂಕಾರದ ಮುಂದೆ ಸೆಲ್ಛಿ ಕ್ಲಿಕ್ಕಿಸಿಕೊಳ್ಳುವ ಯುವಜನರ ಮುಖದಲ್ಲಿರುವ ಸಂತಸವನ್ನು ಕಂಡು ನಾನು ಸಂತೋಷಪಟ್ಟಿದ್ದೇನೆ. ಓದುವ ಇಲ್ಲವೇ ಉದ್ಯೋಗದ ಸ್ಪರ್ಧೆಯಲ್ಲಿ ಮುಳುಗಿ ಹೋಗುವ ಈ ಯುವಕ-ಯುವತಿಯರು ಈ ನೆಪದಲ್ಲಾದರೂ ಸಂತಸವಾಗಿರುವರಲ್ಲಾ ಎಂದುಕೊಂಡಿದ್ದೇನೆ. ಜೊತೆಗೆ ಅನಗತ್ಯ ಸಾಹಸಕ್ಕೆ ಮುಂದಾಗಿ, ರೋಚಕತೆಯ ಆಮಿಷಕ್ಕೆ ಒಳಗಾಗಿ ಅಪಾಯ ತಂದುಕೊಳ್ಳುವ ಮತ್ತು ಇತರರಿಗೂ ಅಪಾಯ ತರುವ ಇವರ ಪ್ರವೃತ್ತಿ ಪೂರ್ಣವಾಗಿ ಇಲ್ಲವಾಗಲೀ ಎಂದೂ ಬಯಸಿದ್ದೇನೆ.

ಮೈಸೂರು ನಗರ ಬೆಳಕನ್ನೇ ಹೊದ್ದುಕೊಂಡು ಶೃಂಗರಿಸಿಕೊಂಡಿರುವಾಗ, ಅದರ ರಸ್ತೆಗಳಲ್ಲಿ ವಿರಾಮವಾಗಿ ಓಡಾಡುತ್ತಾ ಎಲ್ಲರೂ ಕಣ್ಣುತುಂಬಿಕೊಂಡಿರುವುದನ್ನು ನೆನೆದಾಗ ಖುಷಿಯಾಗುತ್ತದೆ. ಕಾರ್ಯಕ್ರಮಗಳು ನಡೆದ ಸ್ಥಳಗಳಲ್ಲಿ ಸೃಷ್ಟಿಯಾಗುವ ಪ್ಲಾಸ್ಟಿಕ್ ಕಸದ ರಾಶಿಯನ್ನು ನೋಡಿದಾಗ ನೋವಾಗುತ್ತದೆ. ಒಂಬತ್ತು ದಿನಗಳ ಕಾಲ ಜಗಮಗಿಸಿದ ಮೈಸೂರು, ದಸರಾ ಮುಗಿದೊಡನೆ ಬೆಳಕನ್ನು ನೀಡಿದ ದೀಪಗಳನ್ನು ಕಳಚಿ ರಸ್ತೆಯ ಅಂಚಿನಲ್ಲಿ ರಾಶಿ ಹಾಕಿಕೊಂಡಿರುವುದನ್ನು ಕಂಡಾಗ – ‘‘ಆಡಿಸಿದಾತ ಬೇಸರ ಮೂಡಿ ಆಟ ಮುಗಿಸಿದ’’ ಹಾಡು ತುಟಿಯ ಅಂಚಿನಲ್ಲಿ ಮೂಡಿದರೂ, ಮರುಕ್ಷಣವೇ ‘‘ಮೈಸೂರು ದಸರಾ, ಎಷ್ಟೊಂದು ಸುಂದರ’’ ಹಾಡನ್ನು ಹಠಕ್ಕೆ ಬಿದ್ದಂತೆ ಗುನುಗುತ್ತೇನೆ.
andolana

Recent Posts

ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…

11 mins ago

ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ – ಡಾ. ಪಿ ಶಿವರಾಜ್

ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…

39 mins ago

ನಗರದ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ: ಜಿ ಟಿ ದೇವೇಗೌಡ

ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…

2 hours ago

ಹನೂರು: ಗುಂಡಿಮಯವಾದ ರಸ್ತೆ, ಸಾಮಾಜಿಕ ಜಾಲತಾಣ ಮೂಲಕ ಯುವಕ ವ್ಯಂಗ್ಯ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…

2 hours ago

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

3 hours ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

4 hours ago