ಶಭಾನ ಮೈಸೂರು
ವರ್ಣ, ಜಾತಿ, ವರ್ಗ, ಲಿಂಗ ಮುಂತಾದ ಕಾರಣಗಳಿಂದ ಹಲವು ಮಂದಿ ಸಾಹಿತ್ಯ ವಲಯ ದಿಂದ ದೂರವೇ ಉಳಿದ ಕಾಲ ಒಂದಿತ್ತು. ಈ ಎಲ್ಲ ನಿರ್ಬಂಧಗಳನ್ನೂ ದಾಟಿ ಬರಹವನ್ನು ಅಭಿವ್ಯಕ್ತಿಯ ಮಾಧ್ಯಮವನ್ನಾಗಿಸಿಕೊಂಡ ಅನೇಕ ಉದಾಹರಣೆಗಳು ನಮ್ಮ ಮುಂದಿವೆ. ಈ ಸಾಲಿಗೆ ಹೊಸ ಸೇರ್ಪಡೆಯೇ ಲಿಂಗತ್ವ ಅಲ್ಪಸಂಖ್ಯಾತ ಮಹಿಳೆಯ ಅನುಭವಾಭಿವ್ಯಕ್ತಿ. ಕನ್ನಡ ಸಾಹಿತ್ಯದಲ್ಲಿ ಇದುವರೆಗೂ ದಾಖಲಾಗದ ಈ ಸಮುದಾಯದವರ ಅನುಭವಗಳನ್ನು ‘ಮನದ ಕಣ್ಣು’ ಕವನ ಸಂಕಲನದ ಮೂಲಕ ಮೊಟ್ಟಮೊದಲಿಗೆ ನಿರೂಪಿಸಿರುವವರು ಮೈಸೂರು ಜಿಲ್ಲೆ, ತಿ. ನರಸೀಪುರದ ಚಾಂದಿನಿ.
‘ಕ್ಷಮಿಸಿ ನನ್ನ ಬಗೆಗೆ ಯಾರೂ ಬರೆಯದ ಕಾರಣ, ನನ್ನ ಬಗ್ಗೆ ನಾನೇ ಬರೆದುಕೊಂಡೆ. . . ’ ಎನ್ನುತ್ತ ಲೇಖನಿ ಹಿಡಿಯುವ ಕವಯಿತ್ರಿ ತಮ್ಮ ಅಂತರಂಗವನ್ನೆಲ್ಲ ಬಯಲು ಮಾಡುತ್ತಾರೆ. ಮಲ್ಲಿಕಾರ್ಜುನನಿಂದ ಚಾಂದಿನಿಯಾಗಿ ಬದಲಾದ ಇಡೀ ಪ್ರಕ್ರಿಯೆಯನ್ನು, ಬದುಕು ತಂದೊಡ್ಡಿದ ಸಾಲು ಸವಾಲುಗಳನ್ನು ಆಪ್ತವಾಗಿ ಕವಿತೆಯಾಗಿ ಕಟ್ಟಿಕೊಡುತ್ತಾರೆ. ಇಲ್ಲಿ ಕೇವಲ ಚಾಂದಿನಿ ಮಾತ್ರ ಮಾತಿಗಿಳಿಯುವುದಿಲ್ಲ. ಬದಲಿಗೆ ಇಡೀ ಸಮುದಾಯದ ಧ್ವನಿಯೇ ತೆರೆದುಕೊಳ್ಳುತ್ತದೆ.
ಸಾಮಾಜಿಕ-ಕೌಟುಂಬಿಕ, ಆಂತರಿಕ ಸಂಘರ್ಷಗಳೊಂದಿಗೆ ಗುದ್ದಾಡುತ್ತಲೇ ತಮ್ಮ ಇರುವಿಕೆಯನ್ನು ಸಾಬೀತುಪಡಿಸಲು ಹೊರಡುವ ಕವಯಿತ್ರಿಯ ಹೋರಾಟ ಘನತೆವೆತ್ತ ಬದುಕಿಗಾಗಿ ಮಾತ್ರ. ಎಲ್ಲರಂತೆ ತಮ್ಮ ಸಮುದಾಯದವರೂ ಬದುಕು ಸಾಗಿಸಬೇಕೆಂಬ ಆಸೆ ಹೊತ್ತಿರುವ ಚಾಂದಿನಿ ‘ಇದು ಒಂಟಿ ದನಿಯಲ್ಲ, ಸಾವಿರ ಜನರ ಪ್ರತಿಧ್ವನಿ. . . ’ ಎನ್ನುತ್ತಾರೆ. ‘ಬದಲಾಗದ ಈ ಲೋಕ, ಬಯಲಾದ ಈ ಸತ್ಯಗಳ ನಡುವೆ ಸಿಲುಕಿದ ತೊಳಲಾಟವ ಕೇಳುವರಾರು? ’ ಆದರೂ ಜನ ಈ ಸತ್ಯವನ್ನು ಅರಿಯಲೇಬೇಕು ಎಂಬ ಒತ್ತಾಯದೊಂದಿಗೆ ಎಲ್ಲವನ್ನೂ ಹೇಳಹೊರಡುತ್ತಾರೆ.
‘ನಾನು ಅವಳಾಗಲು ಟವಲನ್ನು ದಾವಣಿ ಮಾಡಿದ್ದೆ, ಲುಂಗಿಯನ್ನೇ ಲಂಗ ಮಾಡಿದ್ದೆ, ಗೊಬ್ಬಳಿಯ ಬೀಜವನ್ನು ಕಾಲಿಗೆ ಚೈನು ಮಾಡಿ ನಡೆಯುವಾಗ ಬರುವ ಶಬ್ದವನ್ನು ಕೇಳಿ ಆನಂದಿಸುತ್ತಿದ್ದೆ.. ’ ಎಂಬ ಇವರ ಕವಿತೆಯ ಸಾಲಿನಲ್ಲಿ ಒಂದು ಆತ್ಮತೃಪ್ತಿ ಇದೆ. ಅದು ತನಗೆ ಬೇಕಾದುದು ದಕ್ಕಿತೆಂಬ ನೆಮ್ಮದಿಯ ಭಾವವನ್ನೂ ತಂದಿದೆ. ಆದರೆ ಸಾಮಾಜಿಕ ತಿರಸ್ಕಾರ ಇವೆಲ್ಲವನ್ನು ಕ್ಷಣ ಮಾತ್ರದಲ್ಲಿ ನುಚ್ಚು ನೂರಾಗಿಸುತ್ತದೆ.
‘ನಾನು ಗಂಡು ಮಗ ನಮ್ಮಪ್ಪ ಅಮ್ಮನಿಗೆ ನಮ್ಮೂರಿನವರಿಗೆ ಮಾತ್ರ, ನಾನು ಹೆಣ್ಣು, ನನ್ನೊಳಗಿನ ಬಸಿಯಲಾಗದ ತುಮುಲಗಳಿಗೆ ಮಾತ್ರ’ ಇವರ ಈ ತುಮುಲಗಳನ್ನು ಅರ್ಥೈಸಿ ಕೊಳ್ಳದ ಜನ ಇವರನ್ನು ಹಂಗಿಸುವ ರೀತಿ ಯಂತು ಅಮಾನವೀಯ. ಕೇವಲ ಪ್ರೀತಿಯ ನ್ನಷ್ಟೇ ಹುಡುಕುತ್ತ ಪಯಣ ಬೆಳೆಸುವ ಕವಯಿತ್ರಿಗೆ ಜನರು ತೋರುವ ಪುಕ್ಕಟೆ ಕರುಣೆಯ ಅಗತ್ಯವಿಲ್ಲ. ಬದಲಿಗೆ ತಮ್ಮ ಅಸ್ತಿತ್ವ ವನ್ನು ಒಪ್ಪುತ್ತಾ, ಸಿಗಬೇಕಾದ ಹಕ್ಕುಗಳನ್ನು ಸಮಾಜ ನೀಡಿದರೆ ಸಾಕು ಎನ್ನುತ್ತ ಆಕ್ರೋಶದ ನುಡಿಗಳನ್ನಾಡುತ್ತಾರೆ.
ರೌಡಿಯಿಂದ ಬೆದರಿಕೆಗೆ ಒಳಗಾಗಿದ್ದು, ಪೊಲೀಸರಿಂದ ಲಾಠಿ ಏಟು ತಿಂದದ್ದು, ಸುಳ್ಳು ಕೇಸುಗಳಿಗೆ ಬಲಿಯಾಗಿ ಕೋರ್ಟಿಗೆ ಅಲೆ ದದ್ದು, ಜನರ ಅಪಹಾಸ್ಯಕ್ಕೆ ಗುರಿಯಾಗಿದ್ದು, ಬದುಕ ನೂಕಲು ಭಿಕ್ಷೆ ಬೇಡಿದ್ದು, ಸೆಕ್ಸ್‌ವರ್ಕ್ ಮಾಡಿದ್ದು ಎಲ್ಲವನ್ನು ಮುಕ್ತವಾಗಿ ಬಿಚ್ಚಿಟ್ಟಿರುವ ಚಾಂದಿನಿ ಅವರು ಕ್ಷಣ ಕ್ಷಣವೂ ಹಂಬಲಿಸು ವುದು ನಿರುಮ್ಮಳ ಜೀವನಕ್ಕಾಗಿ. ತನ್ನಂತೆ ತನ್ನ ಇಡೀ ಸಮುದಾಯ ಅಭದ್ರತೆಯಲ್ಲೇ ಬದುಕು ನೂಕುತ್ತಿರುವ ಹೊತ್ತಲ್ಲಿ, ಸಾಮಾನ್ಯರಂತೆ ತಮ್ಮನ್ನೂ ಮನುಷ್ಯರಂತೆ ಕಾಣಿ ಎಂದು ಕಳಕಳಿಯಾಗಿ ವಿನಂತಿಸಿಕೊಳ್ಳುವ ಕವಯಿತ್ರಿಗೆ ಒಂದು ಭರವಸೆ ಇದೆ. ಎಲ್ಲೆಲ್ಲೂ ತಮ್ಮನ್ನು ಹೀಯಾಳಿಸುವ ಜಗತ್ತು ಮುಂದೊಂದು ದಿನ ತಮ್ಮ ಕುರಿತ ಧೋರಣೆಯನ್ನು ಬದಲಿಸಿಕೊಳ್ಳುತ್ತದೆ ಎಂಬ ಆಶಾಭಾವನೆ ಇದೆ. ಅದಕ್ಕಾಗಿ ಅವರು ‘ಕಾಲ ಬದಲಾವಣೆಗಾಗಿ ಕಾಯುತ್ತಿರುವೆ ಕಲ್ಲಾಗಿ’ ಎನ್ನುತ್ತಾರೆ.
ತಮ್ಮ ಕವಿತೆಗಳ ಮೂಲಕ ಇಡೀ ಲಿಂಗತ್ವ ಅಲ್ಪಸಂಖ್ಯಾತ ಸಮುದಾಯವರ ದನಿಯಾಗಿ, ಅವರ ಬದುಕಿನ ಮಜಲುಗಳನ್ನು ಯಾವ ಮುಜುಗರವೂ ಇಲ್ಲದೆ ಎಳೆ ಎಳೆಯಾಗಿ ತೆರೆದಿಡುವ ಚಾಂದಿನಿ ಅವರ ‘ಮನದ ಕಣ್ಣು’ ಓದುಗರ ಕಣ್ಣು ತೆರೆಸುವ ಒಂದು ವಿಶೇಷವಾದ ಕವನ ಸಂಕಲನ. ಪದ ಬಳಕೆ, ಕಾವ್ಯ ಲಾಲಿತ್ಯ, ಪ್ರಾಸ ಇತ್ಯಾದಿ ಕಾರಣಗಳಿಗಿಂತ ಅಂತರಂಗದ ತುಮುಲಗಳನ್ನು, ಹಸಿ ಹಸಿ ಅನುಭವಗಳನ್ನು ಯಥಾವತ್ತಾಗಿ ನಿರೂಪಿಸಿರುವ ಕಾರಣಕ್ಕೆ ಈ ಕಾವ್ಯಕಟ್ಟು ಸಾಹಿತ್ಯ ಚರಿತ್ರೆಯಲ್ಲಿ ವಿಶೇಷ ಗೌರವಕ್ಕೆ ಪಾತ್ರವಾಗುತ್ತದೆ.
ಸುಂಟಿಕೊಪ್ಪದಲ್ಲಿ ೧೮ ಲಕ್ಷ ರೂ. ವೆಚ್ಚದ ಮಂಟಪ ನಿರ್ಮಾಣ ೩ ದಿನಗಳ ಧಾರ್ಮಿಕ ಕಾರ್ಯಕ್ರಮ ಸುಂಟಿಕೊಪ್ಪ: ಇಲ್ಲಿನ ಶ್ರೀ ಪುರಂ…
ಪಿರಿಯಾಪಟ್ಟಣ: ದೇಸಿ ಬೀಜಗಳನ್ನು ಉಳಿಸಿದರೆ ಮಾತ್ರ ಮುಂದಿನ ಯುವ ಜನಾಂಗಕ್ಕೆ ವಿಷಮುಕ್ತ ಆಹಾರ ನೀಡಲು ಸಾಧ್ಯ ಎಂದು ಸಾವಯವ ರೈತ…
ಮೈಸೂರು: ಕ್ರಿಸ್‌ಮಸ್ ಆಚರಣೆಗೆ ಕ್ಷಣಗಣನೆ ಶುರುವಾಗಿದ್ದು, ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಜೋರಾಗಿದ್ದರೆ, ಚರ್ಚ್‌ಗಳ ಅಂಗಳವನ್ನು ವಿದ್ಯುತ್ ದೀಪಗಳಿಂದ ಸಿಂಗರಿಸುವ ಕಾರ್ಯ…
ಕೆ.ಬಿ.ರಮೇಶನಾಯಕ ಟಿಎಚ್‌ಒ ಹುದ್ದೆಗೆ ಡಿಎಚ್‌ಒ ವರ್ಗಾವಣೆ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ತಡೆ ಮೈಸೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ…
ಮಂಡ್ಯ: ಆಸ್ತಿಗಾಗಿ ತಂದೆಯನ್ನೇ ಪಾಪಿ ಮಗನೋರ್ವ ಕೊಲೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ದಳವಾಯಿಕೋಡಿಯಲ್ಲಿ ನಡೆದಿದೆ. ಗ್ರಾಮದ…