Andolana originals

ಶೋಚನೀಯ ಸ್ಥಿತಿಯಲ್ಲಿ ಶತಮಾನ ದಾಟಿದ ಶಾಲೆ

ಎಸ್.ಎಸ್.ಭಟ್

ನಂಜನಗೂಡು: ಮೈಸೂರು ವಿಶ್ವವಿದ್ಯಾನಿಲಯಕ್ಕೆ ಪೂರಕವಾಗಿ ೧೯೨೪ರಲ್ಲೇ ಆರಂಭವಾದ ಈ ಪ್ರೌಢಶಾಲೆ ಪ್ರಸ್ತುತ ಉದುರಿಬೀಳುವ ಹಂತದ ಗೋಡೆ ಹಾಗೂ ಮಳೆ ಸುರಿದರೆ ಚಾವಣಿಯಿಂದ ನೀರು ಸೋರುವ ಸಂಕಷ್ಟದಲ್ಲಿ ಮುಳುಗಿದೆ.

ನಗರದ ಮಧ್ಯ ಭಾಗದಲ್ಲಿರುವ ಶತಮಾನ ದಾಟಿದ ಬಾಲಕರ ಸರ್ಕಾರಿ ಪ್ರೌಢಶಾಲೆಯ ಸ್ಥಿತಿ ಇದು. ಇಂದಿಗೂ ಈ ಶಾಲೆ ಕೇವಲ ಬಾಲಕರಿಗಾಗಿಯೇ ಮೀಸಲಾಗಿದೆ. ಚಾಮರಾಜನಗರ, ಗುಂಡ್ಲುಪೇಟೆ ಮತ್ತು ನಂಜನಗೂಡು ಭಾಗದ ಏಕೈಕ ಬಾಲಕರ ಶಾಲೆಯಾಗಿ ಕಾರ್ಯನಿರ್ವಹಿಸಿದ್ದ ವಿಶಾಲವಾದ ಕಟ್ಟಡ ಇಂದು ದುಸ್ಥಿತಿಗೆ ತಲುಪಿದೆ. ೧೦೨ ವರ್ಷಗಳ ಹಿಂದೆ ಅಂದರೆ ೧೯೨೪ರಲ್ಲಿ ೧೪ ಮಕ್ಕಳನ್ನು ಸೇರಿಸಿಕೊಂಡು ೮ನೇ ತರಗತಿಯೊಂದಿಗೆ ಶಾಲೆ ಆರಂಭವಾಯಿತು. ಮಹದೇವರಾವ್ ಅವರು ಮುಖ್ಯೋಪಾಧ್ಯಾಯರಾಗಿ ನೇಮಕಗೊಂಡಿದ್ದರು.

ನಗರದ ರಥಬೀದಿಯ ರಾಕ್ಷಸ ಮಂಟಪದ ಬಳಿ ಆರಂಭವಾದ ಈ ಪ್ರೌಢಶಾಲೆ ಕೆಲವೇ ವರ್ಷಗಳಲ್ಲಿ ಮೈಸೂರು ವಿಶ್ವವಿದ್ಯಾನಿಲಯಕ್ಕೆ ವಿದ್ಯಾರ್ಥಿಗಳನ್ನು ದಾಖಲಿಸುವ ಹೆಮ್ಮೆಯ ಪ್ರೌಢಶಾಲೆಯಾಗಿ ನಂಜನ ಗೂಡು ಉಪವಿಭಾಗದ ಶಿಕ್ಷಣ ಗಂಗೋತ್ರಿಯಾಗಿ ಬೆಳೆದು ಬಂದಿದ್ದು ಈಗ ಇತಿಹಾಸದ ಪುಟಗಳಲ್ಲಿ ಸೇರಿಕೊಂಡಿದೆ.

ಆರಂಭದಲ್ಲೇ ಶಿಕ್ಷಣದ ಜೊತೆ, ಕೃಷಿ, ಸಂಗೀತ, ನಾಟಕ ಮುಂತಾದ ಪಠ್ಯೇತರ ಚಟುವಟಿಕೆಗಳಿಗೂ ಈ ಶಾಲೆಯಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಈ ಶಾಲೆ ೧೯೭೦-೮೦ರ ದಶಕದಲ್ಲಿ ೨,೫೦೦ಕ್ಕೂ ಹೆಚ್ಚು ಮಕ್ಕಳನ್ನು ದಾಖಲಿಸಿಕೊಂಡು, ಕೊಠಡಿಗಳ ಕೊರತೆಯನ್ನು ಎದುರಿಸಿತ್ತು ಎಂಬುದು ಈಗ ಕೇವಲ ನೆನಪು. ಅಂದು ಸಹಸ್ರಾರು ಮಕ್ಕಳಿದ್ದರು ಕೊಠಡಿಗಳ ಬರ ಇತ್ತು. ಈಗ ಕೊಠಡಿಗಳಿವೆ ಮಕ್ಕಳ ಕೊರತೆ ಇದೆ. ೨೪ ಕೊಠಡಿಗಳಿರುವ ಈ ಮಲ್ಟಿ ಪರ್ಪಸ್ ಸರ್ಕಾರಿ ಪ್ರೌಢಶಾಲೆಯಲ್ಲಿ ಈಗ ಮೂರೂ ತರಗತಿಗ ಳಿಂದ ೨೬೯ ಮಕ್ಕಳು ಮಾತ್ರ ವ್ಯಾಸಂಗ ಮಾಡುತ್ತಿದ್ದಾರೆ!

ಬಾಲಕರ ಪ್ರೌಢಶಾಲೆಯಾಗಿ ನಂತರ ಕಿರಿಯ ಕಾಲೇಜಾಗಿ ಶೈಕ್ಷಣಿಕ ಸೇವೆಗೈದು, ಮತ್ತೆ ಕಾಲೇಜಿನಿಂದ ವಿಭಜನೆಯಾಗಿ ಪ್ರೌಢಶಾಲೆಯಾಗಿ ಮುಂದು ವರಿದಿದೆ. ಇಲ್ಲಿ ಅನೇಕ ದಶಕಗಳ ಕಾಲ ಪ್ರತಿದಿನ ಸಂಜೆ ೧,೦೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳ ಮಹಾಪ್ರವಾಹವೇ ರಸ್ತೆಯತ್ತ ಧುಮ್ಮಿಕ್ಕುತ್ತಿದ್ದ ಆ ವೈಭವ ಈಗ ಬರಿ ನೆನಪು.  ಸಹಸ್ರಾರು ಮಕ್ಕಳು ದಾಖಲಾಗಿದ್ದ ಶಾಲೆಯಲ್ಲಿ ಈಗ ವರ್ಷಕ್ಕೆ ೧೦೦ ವಿದ್ಯಾರ್ಥಿಗಳೂ ದಾಖಲಾಗುವುದು ದುಸ್ತರವಾಗಿದೆ.

ಖಾಸಗಿ ಶಾಲೆಗಳಿಗೆ ಡೊನೇಷನ್ ಕೊಡಲಾಗದವರು, ಖಾಸಗಿ ಶಾಲೆಗೆ ಸೇರಿದರೂ ಓದಿನಲ್ಲಿ ಹಿಂದೆ ಉಳಿಯುವ ಮಕ್ಕಳನ್ನು ಕಷ್ಟಪಟ್ಟು ೯ನೇ ತರಗತಿಯಲ್ಲಿ ಪಾಸ್ ಮಾಡಿಸಿಕೊಂಡು, ಆ ಶಾಲೆಯವರ ಚಿತಾವಣೆಯೊಂದಿಗೆ ೧೦ನೇ ತರಗತಿಗೆ ಈ ಶತಮಾನದ ಶಾಲೆಗೆ ಸೇರ್ಪಡೆಯಾಗುತ್ತಿರುವ ವಿದ್ಯಾರ್ಥಿಗಳ ಸಂಖ್ಯೆಯೇ ಹೆಚ್ಚಾಗಿದೆ. ಶಿಕ್ಷಕರಾದ ಜಿಎನ್‌ಕೆ, ಕೆಬಿಎಸ್, ಕೆ.ವಿ.ಸಿದ್ದರಾಜು ಅರಸ್ ಅವರ ಕಾಲದಲ್ಲಿ ಶಿಸ್ತಿಗೆ ಹೆಸರು ಮಾಡಿದ್ದ ಈ ಪ್ರೌಢಶಾಲೆ ಈಗ, ವಿದ್ಯಾರ್ಥಿ ಗಳನ್ನು ಒಳಗೇ ಹಿಡಿದಿಟ್ಟುಕೊಳ್ಳಲು ಮುಂಭಾಗದ ಬಾಗಿಲಿಗೆ ಬೀಗಹಾಕಿಕೊಳ್ಳಬೇಕಾದ ಅನಿವಾರ್ಯತೆ ಯಲ್ಲಿ ಸಾಗುತ್ತಿದೆ.

೨೪ಕ್ಕೂ ಹೆಚ್ಚು ಕೊಠಡಿಗಳನ್ನು ಹೊಂದಿರುವ ಕಟ್ಟಡದಲ್ಲೀಗ ಬೀಗ ಹಾಕಿದ ಕೊಠಡಿಗಳೇ ಅಧಿಕ. ಅವುಗಳೆಲ್ಲವೂ ದುರಸ್ತಿಯಾಗಬೇಕಿದೆ. ವಿಧಾನಸಭಾ ಅಧ್ಯಕ್ಷರಾಗಿದ್ದ ನೇರಳೆ ಮಾದಯ್ಯ, ಪಿ.ವೆಂಕಟರಮಣ, ಖ್ಯಾತ ವಕೀಲ ಬಿಳಿಗಿರಿ ರಂಗಯ್ಯ, ನಂಜನಗೂಡಿನ ಮೊದಲ ಶಾಸಕ ಹೆಜ್ಜಿಗೆ ಲಿಂಗಣ್ಣ, ಮೊದಲ ಸಚಿವ ಎಂ.ಮಹದೇವ್, ಮಾಜಿ ಶಾಸಕರಾದ ಡಿ.ಎಂ.ಸಿದ್ದಪ್ಪ, ಹೆಜ್ಜಿಗೆ ಶ್ರೀನಿವಾಸಯ್ಯ, ಚಾಮರಾಜ ನಗರದ ಶಾಸಕರಾಗಿದ್ದ ಗುರುಸ್ವಾಮಿ, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಬಿ.ವಿ.ಶ್ರೀಕಂಠನ್ ಕೇಂದ್ರ ಹಣಕಾಸು ಸಚಿವಾಲಯದ ಕಾರ್ಯದರ್ಶಿಯಾಗಿದ್ದ ಇ.ಆರ್. ಶ್ರೀಕಂಠಯ್ಯ, ಪೊಲೀಸ್ ಕಮಿಷನರ್ ಆಗಿದ್ದ ಎಸ್. ಎನ್.ಎಸ್.ಮೂರ್ತಿ, ಸುಧಾ ಸಂಪಾದಕರಾಗಿದ್ದ ಇ. ಆರ್.ಸೇತುರಾಮ್, ಬಿ.ವಿ.ಕೆ.ಶಾಸ್ತ್ರೀ, ಸಿನಿಮಾ ನಿರ್ದೇಶಕ ಎಚ್.ಎಲ್.ಎನ್.ಸಿಂಹ, ಖ್ಯಾತ ಕಾನೂನು ತಜ್ಞ ಸಿ.ಕೆ.ಎನ್.ರಾಜ, ಪ್ರೊ.ತೋಂಟದಪ್ಪ ಅವರಂತಹ ಅತಿರಥ-ಮಹಾರಥರು ಇಲ್ಲಿ ವ್ಯಾಸಂಗ ಮಾಡಿದ್ದಾರೆ.

ಹಿಂದೆ ವಾರ್ಷಿಕ ಹತ್ತಾರು ರ‍್ಯಾಂಕುಗಳನ್ನು ಪಡೆಯುತ್ತಿದ್ದ ಈ ಶಾಲೆ ಕೊನೆಗೆ, ಮೂರು ವರ್ಷಗಳ ಕಾಲ ಸತತ ಶೂನ್ಯ ಫಲಿತಾಂಶದ ದಾಖಲೆಯನ್ನೂ ಮಾಡಿದೆ.  ೯೦ರ ದಶಕದಲ್ಲಿ ರಾಜ್ಯ ನಂ.೧ ವಾಚನಾಲಯ ಎಂಬ ಪ್ರಶಸ್ತಿ ಪಡೆದ ಈ ಶಾಲೆಯ ವಾಚನಾಲಯದಲ್ಲಿ ೧೫೦೦ ಪುಸ್ತಕಗಳು ನಿರ್ವಹಣೆ ಇಲ್ಲದೆ ಗೆದ್ದಿಲು ಹಿಡಿದ ಘಟನೆಯೂ ನಡೆದಿದೆ

” ನಂಜನಗೂಡು ತಾಲ್ಲೂಕಿನಲ್ಲಿ ಪ್ರೌಢಶಾಲೆಗಳ ಸಂಖ್ಯೆ ಹೆಚ್ಚಳವಾಗಿದೆ. ಹಾಗಾಗಿ ನಮ್ಮ ಶಾಲೆಯಲ್ಲಿ ಮಕ್ಕಳ ದಾಖಲಾತಿ ಪ್ರಮಾಣ ಕಡಿಮೆಯಾಗಿದೆ. ನಮಗೆ ಕೊಠಡಿಗಳು ದುರಸ್ತಿಯಾಗಿ, ಮಳೆ ನೀರು ಸೋರುವುದು ನಿಂತರೆ ಸಾಕು.”

-ಜ್ಯೋತಿ, ಮುಖ್ಯೋಪಾಧ್ಯಾಯರು, ಬಾಲಕರ ಸರ್ಕಾರಿ ಪ್ರೌಢಶಾಲೆ

” ಆಗ ಪಾಠದೊಂದಿಗೆ ತಿಂಗಳಿಗೆ ಎರಡು ನಾಟಕಗಳು, ಎರಡು ಸಾಂಸ್ಕೃತಿಕ ಕಾಯಕ್ರಮ ಗಳನ್ನು ಈ ಶಾಲೆಯ ಅಂಗಳದಲ್ಲಿರುವ ಬೃಹತ್ ಆಲದ ಮರದ ಕೆಳಗಡೆ ಸಾದರಪಡಿಸಲಾಗುತ್ತಿತ್ತು. ಕೊಳ್ಳೇಗಾಲ, ಚಾಮರಾಜನಗರ, ತಿ.ನರಸಿಪುರ, ಗುಂಡ್ಲುಪೇಟೆಗಳಿಂದಲೂ ಮಕ್ಕಳು ಈ ಪ್ರೌಢಶಾಲೆಗೆ ಬರುತ್ತಿದ್ದರು.”

-ಹುಳಿಮಾವು ಮಾದಪ್ಪ, ನಿವೃತ್ತ ಪ್ರಾಧ್ಯಾಪಕ ೧೯೫೬ನೇ ಸಾಲಿನ ವಿದ್ಯಾರ್ಥಿ

” ಈ ಪ್ರೌಢಶಾಲೆಯಲ್ಲಿ ನಾವು ಓದುವಾಗ, ೧,೩೦೦ಕ್ಕೂ ಹೆಚ್ಚು ಮಕ್ಕಳು ವ್ಯಾಸಂಗ ಮಾಡುತ್ತಿದ್ದರು. ನಾವೆಲ್ಲ ಜೀವನದಲ್ಲಿ ಶಿಸ್ತು ಪ್ರಾಮಾಣಿಕತೆ ಕಲಿತಿದ್ದು ಇದೇ ಶಾಲೆಯಲ್ಲಿ. ಅಂದು ನಮಗೆ ಶಿಕ್ಷಣದ ಜೊತೆ ನಾಟಕ, ಸಂಗೀತ, ಕ್ರಿಕೆಟ್, ವಾಲಿಬಾಲ್, ಖೋ ಖೋ, ಫುಟ್‌ಬಾಲ್ ಹಾಗೂ ಕಬಡ್ಡಿ ಆಟಗಳನ್ನೂ ಕಲಿಸಲಾಗತ್ತಿತ್ತು. ನಾನು ಈ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಫುಟ್‌ಬಾಲ್, ಕ್ರಿಕೆಟ್ ಹಾಗೂ ವಾಲಿಬಾಲ್ ತಂಡಗಳು ಅತ್ಯಂತ ಬಲಿಷ್ಟ ತಂಡಗಳಾಗಿದ್ದವು.”

 -ಹೆಜ್ಜಿಗೆ ಶ್ರೀನಿವಾಸಯ್ಯ, ಮಾಜಿ ಶಾಸಕ (ಹಳೆಯ ವಿದ್ಯಾರ್ಥಿ)

” ಅಂದು ಕೊಠಡಿಗಳಿಲ್ಲದೆ ಪರದಾಟ, ಇಂದು ವಿದ್ಯಾರ್ಥಿಗಳಿಲ್ಲದೆ ಪೀಕಲಾಟ. ನಮ್ಮ ಶಿಕ್ಷಣದ ವ್ಯವಸ್ಥೆ ಬೆಳೆದು ಬಂದ ಪರಿ ಇದು. ಮುಂದಾಲೋಚನೆ ಇಲ್ಲದೆ ಕಂಡಕಂಡಲ್ಲಿ ಬೇಕು ಬೇಕಾದವರಿಗೆ ಪ್ರೌಢಶಾಲೆ ಆರಂಭಿಸಲು ಅನುಮತಿ ನೀಡಲಾಗಿದೆ. ಆ ಕಾರಣದಿಂದ ಇಂದು ಕೊಠಡಿಗಳು ಮಕ್ಕಳಿಲ್ಲದೆ ಪಾಳು ಬೀಳುವಂತಾಗಿದೆ.”

-ಎಮ್.ಎಸ್.ರಾಮಪ್ರಸಾದ್, ಅಧ್ಯಕ್ಷ, ನಂಜನಗೂಡು ಕೈಗಾರಿಕಾ ಸಂಘ (ಹಳೆಯ ವಿದ್ಯಾರ್ಥಿ)

 

 

ಆಂದೋಲನ ಡೆಸ್ಕ್

Recent Posts

ದಸರಾ ಚಿತ್ರೋತ್ಸವ ರದ್ದಾಗದಿರಲಿ

ಮೊದಲ ವಿಶ್ವಕನ್ನಡ ಸಮ್ಮೇಳನದ ಸಿದ್ಧತೆಯ ಸಂದರ್ಭ. ಬರಗಾಲದ ವೇಳೆ ದುಬಾರಿ ವೆಚ್ಚದ ಇಂತಹ ಸಮ್ಮೇಳನ ಅಗತ್ಯ ಇಲ್ಲ ಎಂದು ಇದರ…

4 hours ago

ಚಲನೆ ಕೇವಲ ವ್ಯಾಯಾಮವಲ್ಲ ಆರೋಗ್ಯದ ಶಕ್ತಿ

ಇಂದು ನಮ್ಮ ದೇಶದ ಆರೋಗ್ಯ ಕ್ಷೇತ್ರದಲ್ಲಿ ಒಂದು ‘ನಿಶ್ಯಬ್ದ ಕ್ರಾಂತಿ’ ಸಂಭವಿಸುತ್ತಿದೆ. ಒಂದು ಕಾಲದಲ್ಲಿ ಪ್ಲೇಗ್, ಕಾಲರಾದಂತಹ ಸಾಂಕ್ರಾಮಿಕ ರೋಗಗಳು…

4 hours ago

ಒಂದು ಸೈನ್ಯದ ಆತ್ಮಾಹುತಿ ತಡೆದಿದ್ದರು ಅರಸು

ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  ಮಾಜಿ ಮುಖ್ಯಮಂತ್ರಿ ದೇವರಾಜ ಅರಸರನ್ನು ಇತಿಹಾಸ ಪದೇ ಪದೇ ಸ್ಮರಿಸುತ್ತದೆ. ಅಂದ ಹಾಗೆ ಮುಖ್ಯಮಂತ್ರಿಗಳಾದವರು…

4 hours ago

ಜಮೀನು ಕಬಳಿಸಲು ಸಂಚು ; ಚಿಕ್ಕಕೆರೆಯೂರು ಹಾಡಿಯ ಗಿರಿಜನರಿಂದ ಆಹೋರಾತ್ರಿ ಪ್ರತಿಭಟನೆ

ಎಚ್.ಡಿ.ಕೋಟೆ : ಪ್ರಭಾವಿಗಳು ಮತ್ತು ಅಧಿಕಾರಿಗಳು ನಕಲಿ ದಾಖಲೆ ಸೃಷ್ಟಿಸಿ, ಮುಗ್ಧ ಆದಿವಾಸಿ ಜನರ ೮ ಎಕರೆ ಜಮೀನು ಕಬಳಿಸಲು…

15 hours ago

ಮೈಸೂರು | ಪೇದೆ ನೇಮಕಾತಿ ಪರೀಕ್ಷೆ ಸುಸೂತ್ರ ; 13,166 ಹಾಜರ್‌, 3,424 ಮಂದಿ ಗೈರು

ಮೈಸೂರು : ಸಿಎಆರ್, ಡಿಎಆರ್ ಪೇದೆಗಳ ನೇಮಕಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಭಾನುವಾರ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯು ಸುಗಮವಾಗಿ ನಡೆಯಿತು.…

16 hours ago