ಇಂದು ನಮ್ಮ ದೇಶದ ಆರೋಗ್ಯ ಕ್ಷೇತ್ರದಲ್ಲಿ ಒಂದು ‘ನಿಶ್ಯಬ್ದ ಕ್ರಾಂತಿ’ ಸಂಭವಿಸುತ್ತಿದೆ. ಒಂದು ಕಾಲದಲ್ಲಿ ಪ್ಲೇಗ್, ಕಾಲರಾದಂತಹ ಸಾಂಕ್ರಾಮಿಕ ರೋಗಗಳು ನಡುಕ ಹುಟ್ಟಿಸುತ್ತಿದ್ದವು. ಆದರೆ ಇಂದು ನಮ್ಮ ಅರಿವಿಗೇ ಬರದಂತೆ, ನಮ್ಮ ಬದಲಾದ ದಿನಚರಿ ಮತ್ತು ಹವ್ಯಾಸಗಳಿಂದ ಮೈಯೊಳಗೇ ಮೌನವಾಗಿ ಬೇರೂರುತ್ತಿರುವ ಅಸಾಂಕ್ರಾಮಿಕ ರೋಗಗಳು (ಎನ್‌ಸಿಡಿಎಸ್) ನಮ್ಮ ಆರೋಗ್ಯಕ್ಕೆ ದೊಡ್ಡ ಸವಾಲಾಗಿವೆ.
ಈ ಬದಲಾದ ಆರೋಗ್ಯ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ಸೆಪ್ಟೆಂಬರ್ ೮ರಂದು ಆಚರಿಸಲಾಗುವ ವಿಶ್ವ ಫಿಸಿಯೋಥೆರಪಿ ದಿನದ ೨೦೨೬ರ ಸಂದೇಶವು ವಿಶೇಷ ಪ್ರಸ್ತುತತೆಯನ್ನು ಪಡೆಯುತ್ತದೆ. ಈ ವರ್ಷದ ಸಂದೇಶವು ಹೃದಯರೋಗ ಮತ್ತು ಪಾರ್ಶ್ವವಾಯುವಿನ ತಡೆ, ನಿರ್ವಹಣೆ ಹಾಗೂ ಪುನರ್ವಸತಿಯಲ್ಲಿ ಫಿಸಿಯೋಥೆರಪಿ ಮತ್ತು ದೈಹಿಕ ಚಟುವಟಿಕೆಯ ಪಾತ್ರವನ್ನು ಒತ್ತಿಹೇಳುತ್ತದೆ.
ಹೃದಯರಕ್ತನಾಳದ ಕಾಯಿಲೆಗಳು ಮತ್ತು ಪಾರ್ಶ್ವವಾಯುವಿನಂತಹ ಗಂಭೀರ ಆರೋಗ್ಯ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡಲು ಕೇವಲ ರೋಗ ಬಂದ ನಂತರದ ಚಿಕಿತ್ಸೆ ಸಾಕಾಗುವುದಿಲ್ಲ. ನಮ್ಮ ಜೀವನಶೈಲಿ ಮತ್ತು ದೈಹಿಕ ಚಟುವಟಿಕೆಯ ಅಭ್ಯಾಸಗಳತ್ತಲೂ ಗಮನಹರಿಸಬೇಕು. ತಂಬಾಕು ಸೇವನೆ, ಕಳಪೆ ಆಹಾರ ಪದ್ಧತಿ, ಮದ್ಯಪಾನ ಹಾಗೂ ವಿಶೇಷವಾಗಿ ದೈಹಿಕ ನಿಷ್ಕ್ರಿಯತೆ ಅಸಾಂಕ್ರಾಮಿಕ ರೋಗಗಳಿಗೆ ಪ್ರಮುಖ ಅಪಾಯಕಾರಿ ಅಂಶಗಳಾಗಿವೆ.
ದೈಹಿಕ ಚಟುವಟಿಕೆಯ ಮಾರ್ಗಸೂಚಿಗಳಲ್ಲಿ, ಹೆಚ್ಚು ಹೊತ್ತು ಕುಳಿತುಕೊಳ್ಳುವ ಸಮಯವನ್ನು ಕಡಿಮೆ ಮಾಡುವುದಕ್ಕೆ ಒತ್ತು ನೀಡಲಾಗಿದೆ. ವಯಸ್ಕರಿಗೆ ದಿನಕ್ಕೆ ೩೦-೪೦ ನಿಮಿಷಗಳ (ವಾರಕ್ಕೆ ೧೫೦-೩೦೦ ನಿಮಿಷಗಳ) ಏರೋಬಿಕ್ ಚಟುವಟಿಕೆ ಹಾಗೂ ಕನಿಷ್ಠ ೨ ದಿನ ಸ್ನಾಯುಬಲವರ್ಧಕ ಚಟುವಟಿಕೆಗಳು, ವಯೋವೃದ್ಧರಿಗೆ ವಾರಕ್ಕೆ ಕನಿಷ್ಠ ೩ ದಿನ ಸಮತೋಲನ ಮತ್ತು ಸ್ನಾಯುಬಲ ಚಟುವಟಿಕೆಗಳು ಹಾಗೂ ಮಕ್ಕಳಿಗೆ ಪ್ರತಿದಿನ ಸುಮಾರು ೬೦ ನಿಮಿಷಗಳ ದೈಹಿಕ ಚಟುವಟಿಕೆಯನ್ನು ಶಿಫಾರಸು ಮಾಡಲಾಗಿದೆ. ಆದರೆ ‘ನಾನು ಪ್ರತಿದಿನ ವಾಕಿಂಗ್ ಹೋಗುತ್ತೇನೆ, ಅಷ್ಟೇ ಸಾಕು’ ಎನ್ನುವುದು ಎಲ್ಲರಿಗೂ ಸರಿಯಾದ ಉತ್ತರವಾಗುವುದಿಲ್ಲ.
ಫಿಸಿಯೋಥೆರಪಿಯಲ್ಲಿ ಎನ್‌ಸಿಡಿಗಳ ತಡೆ ಮತ್ತು ನಿರ್ವಹಣೆಗೆ ವ್ಯಾಯಾಮವು ಕೇವಲ ವಾಕಿಂಗ್‌ಗೆ ಸೀಮಿತವಲ್ಲ. ವ್ಯಕ್ತಿಯ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಸ್ನಾಯುಬಲ ಮತ್ತು ಸಹನಶಕ್ತಿ ಹೆಚ್ಚಿಸುವುದು, ಹೃದಯ ಮತ್ತು ಶ್ವಾಸಕೋಶಗಳ ಕಾರ್ಯಕ್ಷಮತೆಯನ್ನು ಸುಧಾರಿಸುವುದು, ಸಮತೋಲನ ಮತ್ತು ಚಲನೆಯನ್ನು ಉತ್ತಮಗೊಳಿಸುವುದು ಹಾಗೂ ದೈನಂದಿನ ಚಟುವಟಿಕೆಗಳಲ್ಲಿ ಸ್ವತಂತ್ರತೆಯನ್ನು ಬೆಂಬಲಿಸುವ ವಿವಿಧ ವ್ಯಾಯಾಮಗಳನ್ನು ಆಯ್ಕೆ ಮಾಡಲಾಗುತ್ತದೆ. ಇವುಗಳ ತೀವ್ರತೆ, ಆವರ್ತನ ಮತ್ತು ಅವಧಿಯನ್ನು ವ್ಯಕ್ತಿಯ ವಯಸ್ಸು, ದೈಹಿಕ ಸಾಮರ್ಥ್ಯ ಮತ್ತು ಆರೋಗ್ಯ ಸ್ಥಿತಿಗೆ ಅನುಗುಣವಾಗಿ ನಿರ್ಧರಿಸುವುದು ಮುಖ್ಯ.
ಅಸಮರ್ಪಕ ಅಥವಾ ಅವೈಜ್ಞಾನಿಕ ವ್ಯಾಯಾಮ ಹಾನಿಕಾರಕವಾಗಬಹುದು; ಸೂಕ್ತವಾಗಿ ರೂಪಿಸಿದ ನಿಯಮಿತ ವ್ಯಾಯಾಮವು ದೇಹದ ಸ್ವಾಭಾವಿಕ ಚೇತರಿಕೆ ಪ್ರಕ್ರಿಯೆಗಳಿಗೆ ಪೂರಕವಾಗಿ ಆರೋಗ್ಯಕರ ಬದಲಾವಣೆಗಳನ್ನು ಉತ್ತೇಜಿಸುತ್ತದೆ. ಫಿಸಿಯೋಥೆರಪಿ ಕೇವಲ ಗಾಯದ ನಂತರದ ಚಿಕಿತ್ಸೆ ಅಥವಾ ಶಸ್ತ್ರಚಿಕಿತ್ಸೆಯ ನಂತರದ ವ್ಯಾಯಾಮಕ್ಕೆ ಸೀಮಿತವಲ್ಲ. ಚಲನೆಯ ವಿಜ್ಞಾನದ ಆಧಾರದ ಮೇಲೆ ವ್ಯಕ್ತಿಯ ದೈಹಿಕ ಸಾಮರ್ಥ್ಯವನ್ನು ಸುಧಾರಿಸುವುದು, ಆರೋಗ್ಯವನ್ನು ಕಾಪಾಡುವುದು, ರೋಗದ ಪರಿಣಾಮಗಳನ್ನು ಕಡಿಮೆ ಮಾಡುವುದು ಮತ್ತು ಪುನರ್ವಸತಿಗೆ ನೆರವಾಗುವುದು ಫಿಸಿಯೋಥೆರಪಿಯ ಪ್ರಮುಖ ಪಾತ್ರಗಳಾಗಿವೆ. ಅಂತಿಮವಾಗಿ, ಆರೋಗ್ಯವು ಕೇವಲ ಆಸ್ಪತ್ರೆಯ ಗೋಡೆಗಳ ನಡುವೆ ದೊರೆಯುವ ಚಿಕಿತ್ಸೆಯಲ್ಲ; ಅದು ನಮ್ಮ ದೈನಂದಿನ ಚಲನೆಯಲ್ಲಿಯೂ ಇದೆ. ಹೃದಯರೋಗ ಮತ್ತು ಪಾರ್ಶ್ವವಾಯುವಿನ ಅಪಾಯವನ್ನು ಕಡಿಮೆ ಮಾಡುವುದರಿಂದ ಹಿಡಿದು, ಕಾಯಿಲೆಯ ನಂತರ ಸ್ವತಂತ್ರವಾಗಿ ಬದುಕುವ ಸಾಮರ್ಥ್ಯವನ್ನು ಮರಳಿ ಪಡೆಯುವವರೆಗೆ, ದೈಹಿಕ ಚಟುವಟಿಕೆ ಮತ್ತು ಫಿಸಿಯೋಥೆರಪಿ ಮಹತ್ವದ ಪಾತ್ರ ವಹಿಸುತ್ತವೆ.
* ಅಸಾಂಕ್ರಾಮಿಕ ರೋಗಗಳಿರುವವರಿಗೆ ವೈಯಕ್ತಿಕ ಅಗತ್ಯಕ್ಕೆ ತಕ್ಕ ವ್ಯಾಯಾಮದ ಕುರಿತು ಉಚಿತ ಫಿಸಿಯೋಥೆರಪಿ ಮಾರ್ಗದರ್ಶನ
* ಸೆಪ್ಟೆಂಬರ್ ೮, ೯ ಮತ್ತು ೧೦, ೨೦೨೬
* ಕಾಲೇಜು ಒ.ಪಿ.ಡಿ., ಕಮ್ಯುನಿಟಿ ಹೆಲ್ತ್ ವಿಭಾಗ, ಜೆ.ಎಸ್.ಎಸ್. ಫಿಸಿಯೋಥೆರಪಿ ಕಾಲೇಜು, ಮೈಸೂರು
” ಈ ವಿಶ್ವ ಫಿಸಿಯೋಥೆರಪಿ ದಿನದಂದು, ಚಲನೆಯನ್ನು ಕೇವಲ ವ್ಯಾಯಾಮವೆಂದುನೋಡದೆ, ಆರೋಗ್ಯದ ಶಕ್ತಿಯನ್ನಾಗಿ ಸ್ವೀಕರಿಸೋಣ. ಇಂದುಚಲಿಸೋಣ, ನಾಳೆಯ ಆರೋಗ್ಯವನ್ನು ಕಾಪಾಡೋಣ”
ಮೊದಲ ವಿಶ್ವಕನ್ನಡ ಸಮ್ಮೇಳನದ ಸಿದ್ಧತೆಯ ಸಂದರ್ಭ. ಬರಗಾಲದ ವೇಳೆ ದುಬಾರಿ ವೆಚ್ಚದ ಇಂತಹ ಸಮ್ಮೇಳನ ಅಗತ್ಯ ಇಲ್ಲ ಎಂದು ಇದರ…
ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ ಮಾಜಿ ಮುಖ್ಯಮಂತ್ರಿ ದೇವರಾಜ ಅರಸರನ್ನು ಇತಿಹಾಸ ಪದೇ ಪದೇ ಸ್ಮರಿಸುತ್ತದೆ. ಅಂದ ಹಾಗೆ ಮುಖ್ಯಮಂತ್ರಿಗಳಾದವರು…
ಎಚ್.ಡಿ.ಕೋಟೆ : ಪ್ರಭಾವಿಗಳು ಮತ್ತು ಅಧಿಕಾರಿಗಳು ನಕಲಿ ದಾಖಲೆ ಸೃಷ್ಟಿಸಿ, ಮುಗ್ಧ ಆದಿವಾಸಿ ಜನರ ೮ ಎಕರೆ ಜಮೀನು ಕಬಳಿಸಲು…
ಮೈಸೂರು : ಸಿಎಆರ್, ಡಿಎಆರ್ ಪೇದೆಗಳ ನೇಮಕಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಭಾನುವಾರ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯು ಸುಗಮವಾಗಿ ನಡೆಯಿತು.…
ದೆಹಲಿ : ನೈಋತ್ಯ ದೆಹಲಿಯ ಸತ್ಯ ನಿಕೇತನದಲ್ಲಿ ಇಂದು ಮಧ್ಯಾಹ್ನ ಆರು ಅಂತಸ್ತಿನ ಕಟ್ಟಡ ಕುಸಿದು ಹಲವರು ಅವಶೇಷಗಳಡಿ ಸಿಲುಕಿರುವ…