ಅಂಜಲಿ ರಾಮಣ್ಣ

ಐವತ್ತೈದು ವರ್ಷ ವಯಸ್ಸಿನ ಕಮಲಾಕ್ಷಿಗೆ ಮಕ್ಕಳಿಲ್ಲ. ಎರಡು ವರ್ಷಗಳ ಹಿಂದೆ ಗಂಡ ತೀರಿಕೊಳ್ಳುವವರೆಗೂ ಮಗುವನ್ನು ದತ್ತು ತೆಗೆದುಕೊಳ್ಳಲು ಪ್ರಯತ್ನಿಸಿದ್ದಷ್ಟೇ ಬಂತು. ಇವರ ಸರದಿ ಬರಲೇ ಇಲ್ಲ. ಆದರೀಗ ವಯಸ್ಸಿನ ಕಾರಣದಿಂದ ೧೮ ವರ್ಷ ವಯಸ್ಸಿನ ಒಳಗಿರುವ ಮಕ್ಕಳನ್ನು ಕಾನೂನು ರೀತ್ಯ ದತ್ತು ಪಡೆಯಲು ಆಗುವುದಿಲ್ಲ. ಆರ್ಥಿಕವಾಗಿ ಹೆಚ್ಚೇ ಎನ್ನುವಷ್ಟು ಅನುಕೂಲಸ್ಥೆ. ನಾಲ್ಕಾರು ಊರುಗಳಲ್ಲಿ ಸ್ಥಿರಾಸ್ತಿಯನ್ನೂ ಹೊಂದಿರುವ ಆಕೆಗೆ ದೂರದ ನೆಂಟರಲ್ಲೂ ವಾರಸುದಾರರು ಯಾರೂ ಇಲ್ಲ. ಒಂಟಿ ಜೀವಕ್ಕೀಗ ಜೊತೆಯಲ್ಲಿ ಯಾರಾದರೂ ಇರಬೇಕು. ತಮ್ಮ ಕೊನೆಯವರೆಗೂ ಜೊತೆಯಿರುವ ಯುವತಿ ಸಿಕ್ಕರೆ ಆಕೆಗೆ ತಮ್ಮೆಲ್ಲಾ ಆಸ್ತಿಯನ್ನು ಕೊಡಲೂ ತಯಾರಿದ್ದಾರೆ. ಆದರೆ ಹಣದ ಮೇಲಿನ ಆಸೆಗೆ ಬರುವವರಿಂದ ತಮ್ಮ ಜೀವಕ್ಕೆ ಅಪಾಯವಾದರೆ ಎನ್ನುವ ಸಹಜವಾದ ಆತಂಕವೂ ಆಕೆಗಿದೆ.

ಆರೋಗ್ಯರೇಖೆಯ ಗುಣಮಟ್ಟ ಮೇಲ್ಮುಖವಾಗಿರುವ ಈ ಕಾಲದಲ್ಲಿ ದುಡಿಯುವ ಸಾಮರ್ಥ್ಯವು ವೃದ್ಧಿಸಿ ಆರ್ಥಿಕ ಸಬಲತೆಯೂ ಹೆಚ್ಚಾಗಿದೆ. ಆಯ್ಕೆಯಿಂದಲೋ ಅನಿವಾರ್ಯತೆಯಿಂದಲೋ ಒಬ್ಬಂಟಿಗರಾಗಿ ಉಳಿಯುವುದು ಸಾಮಾನ್ಯವಾಗುತ್ತಿದೆ. ಆದರೂ ಮನುಷ್ಯನ ಮೂಲಭೂತ ಗುಣಲಕ್ಷಣದಂತೆ ಸಾಂಗತ್ಯವನ್ನು ಬಯಸುವುದೂ ಕಾಣುತ್ತಿದೆ. ಯಾವುದೋ ಕೊರತೆಯನ್ನು ತುಂಬಿಕೊಳ್ಳಲು ಹೋಗಿ ಅಪಾಯವನ್ನು ಖುದ್ದು ಆಹ್ವಾನಿಸಿದಂತಾದರೆ ಎನ್ನುವ ದ್ವಂದ್ವವೂ ಕಾಡುತ್ತಿದೆ.

ಮಾಲಾ ಮತ್ತು ಗುಣಶೇಖರ ದಂಪತಿಯದೂ ಇದೇ ಸಮಸ್ಯೆ. ೭೫ ವರ್ಷದ ಪತಿಗೆ ತಮ್ಮ ನಂತರ ಹೆಂಡತಿಯ ಗತಿಯೇನು ಎನ್ನುವ ಯೋಚನೆ. ತಾಯಿ ತಂದೆ ತೀರಿಕೊಂಡಿರುವ, ಬಂಧು ಬಳಗವೂ ಇಲ್ಲದೆ ಸಂಸ್ಥೆಯೊಂದರಲ್ಲಿ ಇರುವ ೨೦ ವರ್ಷದ ಶ್ವೇತಳ ಬಗ್ಗೆ ಇವರಿಗೆ ಸ್ನೇಹ, ವಿಶ್ವಾಸ ಬೆಳೆದಿದೆ. ಆಕೆಯನ್ನು ತಮ್ಮ ಮನೆಯಲ್ಲಿಯೇ ಇಟ್ಟುಕೊಂಡು ಸಾಕುವ, ಅವಳ ಮುಂದಿನ ಎಲ್ಲಾ ಆಗುಹೋಗುಗಳನ್ನು ನೋಡಿಕೊಳ್ಳುವ ಸಾತ್ವಿಕ ಇರಾದೆಯೂ ಇದೆ. ಆದರೆ ಹೀಗೆ ಮಾಡುವುದರಿಂದ ತಮ್ಮ ಕಾಲಿಗೇ ಕೊಡಲಿ ಪೆಟ್ಟು ಬಿದ್ದರೆ ಎನ್ನುವ ಭಯವೂ ಅವರಿಗಿದೆ. ಆಸ್ತಿವಂತರು ಇಂತಹ ಒಂಟಿತನವನ್ನು ನೀಗಿಕೊಳ್ಳಲು ಸಾಂಗತ್ಯ ಬಯಸಿದಾಗ ಸುರಕ್ಷತೆಗಾಗಿ ಯಾವ ಕ್ರಮವನ್ನು ಕೈಗೊಳ್ಳಬಹುದು.

ಅದಕ್ಕಾಗಿಯೇ Testamentary Trust WILL ಎನ್ನುವ ಒಂದು ಅವಕಾಶವನ್ನು ಕಾನೂನು ನೀಡಿದೆ. ಸಾಮಾನ್ಯ ಭಾಷೆಯಲ್ಲಿ ಉಯಿಲು ಎನಿಸಿಕೊಳ್ಳುವ ದಾಖಲೆಯಲ್ಲಿ ಉಯಿಲು ಮಾಡುವವರು ತಮ್ಮ ಮರಣ ಪತ್ರದಲ್ಲಿ ತಮ್ಮ ನಂತರ ೩ ಅಥವಾ ೫ ಜನರ ಒಂದು ಟ್ರಸ್ಟ್ ಮಾಡಿ ಆಸ್ತಿಯ ದೇಖರೇಖಿಯೆಲ್ಲಾ ಆ ಟ್ರಸ್ಟ್ ಮಾಡುತ್ತಿರಬೇಕು. ಅದರ ಲಾಭದ ಒಂದಂಶ ಅಥವಾ ತಮ್ಮ ಇಚ್ಛೆಯಂತೆ ಯಾವುದೇ ಆಸ್ತಿಯ ಲಾಭಾಂಶವನ್ನು ತಮ್ಮನ್ನು ಕೊನೆಯವರೆಗೂ ನೋಡಿಕೊಳ್ಳುವ ವ್ಯಕ್ತಿಗೆ ಕೊಡಬೇಕು ಎಂದು ಬರೆಯಬಹುದು. ಹೀಗೆ ಬರೆದ ಉಯಿಲು ಕೂಡ ಬರೆದ ವ್ಯಕ್ತಿಯ ಮರಣದ ನಂತರವೇ ಜಾರಿಗೆ ಬರುತ್ತದೆ ಮತ್ತು ಆ ಟ್ರಸ್ಟ್ ಮೂಲಕವೇ ಜಾರಿಗೆ ಬರುತ್ತದೆ. ಹಾಗೆ ಕೊನೆಯವರೆಗೂ ಆಸರೆಯಾದ ವ್ಯಕ್ತಿಯೂ ಇಲ್ಲವಾದಲ್ಲಿ ತಮ್ಮ ಆಸ್ತಿಯೆಲ್ಲವೂ ಮತ್ತ್ಯಾರಿಗೆ ಸೇರಬೇಕು ಎನ್ನುವುದನ್ನೂ ಅದರಲ್ಲಿ ನಮೂದಿಸಿರಬಹುದು. ಯಾವುದೇ ಉಯಿಲಿನಲ್ಲೂ ಸ್ವಯಾರ್ಜಿತ ಆಸ್ತಿಯನ್ನು ಮಾತ್ರ ವಿಲೇವಾರಿಗೆ ಬರೆಯಬಹುದು.

ಪಿತ್ರಾರ್ಜಿತ ಆಸ್ತಿಯನ್ನು ಉಯಿಲು ಮಾಡಲು ಆಗುವುದಿಲ್ಲ. ಉಯಿಲಿನಲ್ಲಿ ಕೃಷಿಭೂಮಿಯೂ ಸೇರಿದಂತೆ ಎಲ್ಲ ಸ್ಥಿರಾಸ್ತಿ ಹಾಗೂ ಒಡವೆ, ಮೋಟಾರು ವಾಹನಗಳೂ ಸೇರಿದಂತೆ ಎಲ್ಲಾ ಚರಾಸ್ತಿಯನ್ನು ಕಾಣಿಸಬಹುದು.  ತಮ್ಮಿಂದಲೇ ಜನಿಸಿದ ಮಕ್ಕಳು, ದತ್ತು ಮಕ್ಕಳು, ಬಾಡಿಗೆ ತಾಯಿಯಿಂದ ಪಡೆದ ಮಗು ಯಾರೂ ಇಲ್ಲದಾಗ ಸೋದರ ಬಾಂಧವ್ಯದಿಂದಾದ ವಾರಸುದಾರರು ಕೂಡ ಇಲ್ಲದಿದ್ದಾಗ ಅಥವಾ ಇದ್ದರೂ ಸ್ವಯಿಚ್ಛೆಯಿಂದ ಸ್ವಯಾರ್ಜಿತ ಆಸ್ತಿವಂತರು ಅವರು ಮದುವೆ ಯಾದವರು, ಸಂಗಾತಿಯನ್ನು ಕಳೆದುಕೊಂಡವರು, ಅವಿವಾಹಿತರು ಹೀಗೆ ಯಾರಾದರೂ ಇರಬಹುದು ಅವರು Testamentary Trust WILL ಅನ್ನು ಮಾಡಿ ನೋಂದಾವಣೆ ಮಾಡಬಹುದಾಗಿರುತ್ತದೆ. ಹಾಗೆ ಮಾಡಿದ ಟ್ರಸ್ಟ್ ತಮ್ಮ ಮರಣಾನಂತರ ಎಷ್ಟು ವರ್ಷಗಳ ಕಾಲ ಅಸ್ತಿತ್ವದಲ್ಲಿ ಇರಬೇಕು ಮತ್ತು ನಂತರ ತಮ್ಮ ಸಂಪತ್ತನ್ನು ಏನು ಮಾಡಬೇಕು ಎನ್ನುವುದನ್ನು ಆ ಉಯಿಲಿನಲ್ಲಿ ಕಾಣಿಸಿರಬೇಕು. ಉಯಿಲು ನೋಂದಾವಣೆ ಆಗದಿದ್ದರೂ ಕಾನೂನು ಮಾನ್ಯ ಮಾಡುವ ಏಕೈಕ ದಾಖಲೆಯಾಗಿದೆ. ಆದರೆ Testamentary Trust ವಿಲ್‌ಅನ್ನು ಕಡ್ಡಾಯವಾಗಿ ಸ್ಪಷ್ಟ ವಿವರಗಳೊಂದಿಗೆ ನೋಂದಾವಣೆ ಮಾಡಬೇಕಿರುತ್ತದೆ. ಇಂತಹ ಉಯಿಲು ಮಾಡಲು ಆಸ್ತಿಯ ಪರಿಮಾಣಕ್ಕೆ ಗರಿಷ್ಟ ಮಿತಿ ಅಂತೇನೋ ಇಲ್ಲ.

ಸಂಪತ್ತು ಮತ್ತು ಸಾಂಗತ್ಯ ಎರಡೂ ಸುರಕ್ಷಿತವಾಗಿರಬೇಕು ಎಂದಾದಲ್ಲಿ ಇದು ಅತ್ಯುತ್ತಮ ಆಯ್ಕೆಯಾಗಿರುತ್ತದೆ.

(ಲೇಖಕರು ಮಹಿಳೆಯರು ಮತ್ತು ಮಕ್ಕಳ ಹಕ್ಕುಗಳ ವಕೀಲರು)

ಆಂದೋಲನ ಡೆಸ್ಕ್

Recent Posts

ಮೈಸೂರು ದಸರಾ | ಯುವ ಸಂಭ್ರಮ ಉದ್ಘಾಟನೆಗೆ ವಿಜಯಪ್ರಕಾಶ್‌

ಮೈಸೂರು : ದಸರಾ ಮಹೋತ್ಸವಕ್ಕೆ ಆರಂಭದ ಮುನ್ನುಡಿಯಂತಿರುವ ಯುವ ಸಂಭ್ರಮಕ್ಕೆ ಈ ಬಾರಿ ಮೈಸೂರಿನ ಮನೆ ಮಗ ಖ್ಯಾತ ಗಾಯಕ…

4 hours ago

ಕೊಡಗು: ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆ ದಾಳಿ

ಕೊಡಗು: ಜಿಲ್ಲೆಯ ನೆಲ್ಯಹುದಿಕೇರಿ ಸಮೀಪದ ಅತ್ತಿಮಂಗಲದಲ್ಲಿ ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆ ದಾಳಿ ನಡೆಸಿದೆ. ಸ್ಕೂಟರ್‌ನಲ್ಲಿ ತೆರಳುತ್ತಿದ್ದ 60…

9 hours ago

ಓದುಗರ ಪತ್ರ: ಗ್ರಹಣ..!

ಗ್ರಹಣ..! ಸೂರ್ಯ-ಚಂದ್ರರ ನಡುವೆ ಭೂಮಿ ಬಂದರೆ ಚಂದ್ರ ಗ್ರಹಣ ! ಭಾರತ-ರಷ್ಯಾ ನಡುವೆ ಅಮೆರಿಕ ಬಂದರೆ ‘ಸುಂಕ ’ ಗ್ರಹಣ…

13 hours ago

ಓದುಗರ ಪತ್ರ: ಪೆಟ್ರೋಲ್ ಬಂಕ್‌ಗಳಲ್ಲಿ ಮೋಸ: ಗರಿಷ್ಟ ಕ್ರಮ ಕೈಗೊಳ್ಳಲಿ

ರಾಜ್ಯದ ೮೦೫ ಪೆಟ್ರೋಲ್ ಬಂಕ್‌ಗಳ ತಪಾಸಣೆಯಲ್ಲಿ ಬರೋಬ್ಬರಿ ೭೬೮ ಬಂಕ್‌ಗಳಲ್ಲಿ (ಶೇ. ೮೫ ರಷ್ಟು) ಅಳತೆಯಲ್ಲಿ ಮೋಸ ಕಂಡುಬಂದಿರುವುದು ಸಾರ್ವಜನಿಕರಿಗೆ…

13 hours ago

ಓದುಗರ ಪತ್ರ: ಉದ್ಯೋಗ ಸೃಷ್ಟಿ : ಫ್ಲಿಪ್‌ಕಾರ್ಟ್ ನಡೆ ಸ್ವಾಗತಾರ್ಹ

ಒಂದು ಕಡೆ ಒರಾಕಲನಂತಹ ಕಂಪೆನಿಗಳು ತಮ್ಮ ನೌಕರರನ್ನು ಯಾವುದೇ ಮುನ್ಸೂಚನೆ ನೀಡದೇ ಕೇವಲ ಒಂದೇ ಒಂದು ಇ ಮೇಲ್ ಸಂದೇಶದ…

13 hours ago

ಸುಗಮ ಸಂಗೀತದ ಅದ್ಬುತ ಗಾಯಕ ಮಡಿಕೇರಿ ನಾಗೇಂದ್ರ

ಡಾ.ಕೆ.ವಿ.ಲಕ್ಷ್ಮೀದೇವಿ, ಗುರುಕೃಪಾ ಸಂಗೀತ ಕೇಂದ್ರ, ಮೈಸೂರು ಇಂದು ಗುರು ನಮನ ಮಡಿಕೇರಿ ನಾಗೇಂದ್ರರೆಂದೇ ಪ್ರಖ್ಯಾತರಾದ ‘ಗುರು ಕೃಪಾ ಸಂಗೀತ ಕೇಂದ್ರ’ದ…

16 hours ago