Andolana originals

ನಾಳೆಯಿಂದ ರಾಜ್ಯಮಟ್ಟದ ಜಾನಪದ ಕಲಾಮೇಳ

ಚುಂಚಶ್ರೀ ಪ್ರಶಸ್ತಿ ಪ್ರದಾನ; ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ ವಾರ್ಷಿಕ ಪಟ್ಟಾಭಿಷೇಕ

ನಾಗಮಂಗಲ: ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ ವಾರ್ಷಿಕ ಪಟ್ಟಾಭಿಷೇಕದ ಅಂಗವಾಗಿ ಸೆ.೨೪ ಮತ್ತು ೨೫ರಂದು ತಾಲ್ಲೂಕಿನ ಆದಿಚುಂಚನಗಿರಿಯಲ್ಲಿ ರಾಜ್ಯಮಟ್ಟದ ಜಾನಪದ ಕಲಾಮೇಳ ನಡೆಯಲಿದೆ.

ಜಾನಪದ ಕಲೆಯನ್ನು ಸಂರಕ್ಷಿಸಿ ಅದರ ಶ್ರೇಯೋಭಿವೃದ್ಧಿಗಾಗಿ ಚಿಂತಿಸುತ್ತಿದ್ದ ಭೈರವೈಕ್ಯ ಶ್ರೀ ಬಾಲಗಂಗಾಧರನಾಥ ಶ್ರೀಗಳು ಜನಪದ ಕಲೆ, ಸಾಹಿತ್ಯವನ್ನು ರಕ್ಷಿಸಿ, ಉಳಿಸಿ ಬೆಳೆಸುವುದರ ಜತೆಗೆ ಕಲಾವಿದರ ಬದುಕನ್ನು ಹಸನುಗೊಳಿಸುವ ಉದ್ದೇಶದಿಂದ ತಮ್ಮ ಪಟ್ಟಾಭಿಷೇಕದ ವಾರ್ಷಿಕ ಮಹೋತ್ಸವವನ್ನು ನಾಡಿನ ಜಾನಪದ ಕಲಾವಿದರಿಗೆ ಅರ್ಪಿಸುವ ಸಲುವಾಗಿ ಶ್ರೀ ಕ್ಷೇತ್ರದಲ್ಲಿ ಜಾನಪದ ಕಲಾಮೇಳ ನಡೆಸಲು ಚಿಂತಿಸಿದ್ದರು. ಅದರಂತೆ ಆದಿಚುಂಚನಗಿರಿಯಲ್ಲಿ ರಾಜ್ಯಮಟ್ಟದ ಜಾನಪದ ಕಲಾಮೇಳವನ್ನು ನಡೆಸುತ್ತಾ ಬಂದಿದ್ದು, ಶ್ರೀಗಳು ನಿಧನರಾದ ನಂತರವೂ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿಯವರ ನೇತೃತ್ವದಲ್ಲಿ ಮುಂದುವರಿದಿದೆ.

ಇದುವರೆಗೂ ೪೫ ಜಾನಪದ ಕಲಾಮೇಳಗಳು ಮೇಳೈಸಿದ್ದು, ೪೬ನೇ ಶ್ರೀ ಕಾಲಭೈರವೇಶ್ವರ ಜಾನಪದ ಕಲಾಮೇಳವನ್ನು ನಡೆಸಲು ಶ್ರೀ ಮಠ ಸಜ್ಜಾಗಿದೆ. ಈ ವೇಳೆ ಚುಂಚಶ್ರೀ ಪ್ರಶಸ್ತಿ ಪ್ರದಾನ ಹಾಗೂ ಶ್ರೀ ಬಾಲಗಂಗಾಧರನಾಥ ಶ್ರೀಗಳ ಗುರು ಸಂಸ್ಮರಣೋತ್ಸವ ಸಮಾರಂಭವೂ ನಡೆಯಲಿದೆ. ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಹೊರ ರಾಜ್ಯಗಳಿಂದಲೂ ಕಲಾವಿದರು ಮೇಳದಲ್ಲಿ ಭಾಗವಹಿಸಲಿದ್ದಾರೆ. ಸುಮಾರು ೧೫ ಸಾವಿರಕ್ಕೂ ಹೆಚ್ಚು ಮಂದಿ ಜಾನಪದ ಕಲಾವಿದರು ಸಮ್ಮೇಳನದಲ್ಲಿ ಭಾಗವಹಿಸಿ ತಮ್ಮ ಕಲೆಯನ್ನು ಪ್ರದರ್ಶಿಸುವ ನಿರೀಕ್ಷೆ ಇದೆ.

ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ನಡೆಯುವ ರಾಜ್ಯಮಟ್ಟದ ಜಾನಪದ ಕಲಾಮೇಳವನ್ನು ಸೆ.೨೪ರ ಬೆಳಿಗ್ಗೆ ೧೦ ಗಂಟೆಗೆ ಶ್ರೀಗಳ ಜತೆಗೂಡಿ ಗಣ್ಯರು ಉದ್ಘಾಟಿಸಲಿದ್ದಾರೆ. ಇದೇ ದಿನ ಸಂಜೆ ೮ ಗಂಟೆಗೆ ಕ್ಷೇತ್ರದ ಬಿಜಿಎಸ್ ವೃತ್ತದಿಂದ ಜೋಡಿ ರಸ್ತೆಯಲ್ಲಿ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ಸರ್ವಾಲಂಕೃತ ಮುತ್ತಿನ ಪಲ್ಲಕ್ಕಿ ಉತ್ಸವ ಹಾಗೂ ಜಾನಪದ ಕಲಾವಿದರ ವರ್ಣರಂಜಿತ ಮೆರವಣಿಗೆ ನಡೆದ ಬಳಿಕ ಸರ್ವಾಲಂಕೃತ ಶ್ರೀ ಕಾಲಭೈರವೇಶ್ವರಸ್ವಾಮಿ ಪುಷ್ಕರಣೆಯಲ್ಲಿ ತೆಪ್ಪೋತ್ಸವ ಜರುಗಲಿದೆ.

ಚುಂಚಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ಚುಂಚಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಸೆ.೨೫ರ ಬೆಳಿಗ್ಗೆ ೯.೩೦ ಗಂಟೆಗೆ ಶ್ರೀ ಬಾಲಗಂಗಾಧರನಾಥ ಶ್ರೀಗಳ ೫೨ನೇ ವಾರ್ಷಿಕ ಪಟ್ಟಾಭಿಷೇಕ, ಶ್ರೀ ಗುರು ಸಂಸ್ಮರಣೋತ್ಸವಮತ್ತು ರಾಜ್ಯಮಟ್ಟದ ೪೬ನೇ ಶ್ರೀ ಕಾಲಭೈರವೇಶ್ವರ ಜಾನಪದ ಕಲಾಮೇಳದ ಸಮಾರೋಪ ಸಮಾರಂಭ ನಡೆಯಲಿದ್ದು, ಜಾನಪದ ಕ್ಷೇತ್ರದ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ.

” ಜಾನಪದ ಕಲಾಮೇಳದಲ್ಲಿ ಭಾಗವಹಿಸುವ ಎಲ್ಲಾ ಕಲಾವಿದರಿಗೆ ವಸ್ತ್ರ, ಪ್ರಯಾಣ ಭತ್ಯೆ ಹಾಗೂ ಉಚಿತ ಊಟ, ವಸತಿ ಸೌಲಭ್ಯ ಕಲ್ಪಿಸಲಾಗುವುದು. ಜಾನಪದ ಕಲಾಮೇಳದಲ್ಲಿ ಭಾಗವಹಿಸಲು ಇಚ್ಛಿಸುವ ಕಲಾವಿದರು ಸೆ.೨೩ರ ಬೆಳಿಗ್ಗೆ ೯ ಗಂಟೆಗೆ ಆಗಮಿಸಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು. ನಂತರ ಬಂದವರನ್ನು ನೋಂದಣಿ ಮಾಡಿಕೊಳ್ಳುವುದಿಲ್ಲ. ಪ್ರತಿಯೊಬ್ಬರೂ ತಮ್ಮ ಆಧಾರ್ ಕಾರ್ಡ್ ಜತೆಗೆ ತಮ್ಮ ಜಿಲ್ಲೆಯ ಆದಿಚುಂಚನಗಿರಿ ಶಾಖಾ ಮಠಗಳು ಅಥವಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಭಾಗವಹಿಸುವಿಕೆಯ ಪತ್ರವನ್ನು ಕಡ್ಡಾಯವಾಗಿ ತರತಕ್ಕದ್ದು. ಉತ್ತಮ ಪ್ರದರ್ಶನ ನೀಡಿದವರಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಗುವುದು. ಜಾನಪದ ಹಾಡುಗಾರರ ತಂಡದಲ್ಲಿ ಕನಿಷ್ಠ ೫ ಮಂದಿ, ಗರಿಷ್ಟ ೧೨ ಮಂದಿ ಇರಬೇಕು. ಕಲಾ ಪ್ರದರ್ಶನ ನೀಡುವ ತಂಡದಲ್ಲಿ ಕನಿಷ್ಠ ೯ ರಿಂದ ೩೦ ಮಂದಿ ಕಲಾವಿದರು ಇರಬೇಕು.”

– ಶ್ರೀ ಪ್ರಸನ್ನನಾಥ ಸ್ವಾಮೀಜಿ, ಪ್ರಧಾನ ಕಾರ್ಯದರ್ಶಿ, ಆದಿಚುಂಚನಗಿರಿ ಮಠ

ಆಂದೋಲನ ಡೆಸ್ಕ್

Recent Posts

‘ನಾನು ತೆರಿಗೆ ಕಟ್ಟುವುದನ್ನು ನಿಲ್ಲಿಸಬೇಕೇ?’ ಬಂಧನ, ಭದ್ರತೆಗೆ ₹2 ಕೋಟಿ ವೆಚ್ಚ ಎಂದ ವಾಂಗ್‌ಚುಕ್‌

 ನವದೆಹಲಿ: ‘ನಾನು ತೆರಿಗೆ ಕಟ್ಟುವುದನ್ನು ನಿಲ್ಲಿಸಬೇಕೇ?’ ಹೀಗೊಂದು ಪ್ರಶ್ನೆ ಎತ್ತಿದ್ದಾರೆ ಲಡಾಖ್‌ನ ಪರಿಸರ ಹೋರಾಟಗಾರ ಸೋನಮ್‌ ವಾಂಗ್‌ಚುಕ್‌. ತಮ್ಮ ಬಂಧನ…

2 hours ago

‘ಭಾರತ ಆರ್ಥಿಕ ವಿಪತ್ತಿನ ಅಂಚಿನಲ್ಲಿದೆ’ — ಅಮೆರಿಕದಲ್ಲಿ ರಾಹುಲ್‌ ಗಾಂಧಿ ಆರೋಪ

ನ್ಯೂಯಾರ್ಕ್‌: ಭಾರತ ಆರ್ಥಿಕ ವಿಪತ್ತಿನ ಅಂಚಿನಲ್ಲಿದೆ ಎಂದು ಲೋಕಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ. ನವೆಂಬರ್‌ 17ರಂದು ನ್ಯೂಯಾರ್ಕ್‌ನ…

3 hours ago

ಕಾಡಾನೆಯನ್ನು ಕೆಣಕಿದ ಸವಾರ, ಕಠಿಣ ಕ್ರಮಕ್ಕೆ ಸಚಿವ ರಾಮಲಿಂಗಾರೆಡ್ಡಿ ಆದೇಶ

 ನಾಗರಹೊಳೆ: ರಸ್ತೆ ಬದಿಯಲ್ಲಿ ಕಾಡಾನೆ ಕಾಣುತ್ತಿದ್ದಂತೆ ಸ್ಕೂಟರ್‌ ನಿಲ್ಲಿಸಿದ ಇಬ್ಬರು ಸವಾರರಲ್ಲಿ ಓರ್ವ ಹಿಂಬದಿ ಸವಾರ ಕೆಳಗಿಳಿದು ಆನೆಯತ್ತ ಕಲ್ಲೆಸೆದಿದ್ದಾನೆ.…

4 hours ago

ಕಾಡಾನೆಗಳ ದಾಳಿ: ಜೋಳ, ತೆಂಗು ಸೇರಿದಂತೆ ಅನೇಕ ಬೆಳೆ ನಾಶ, ರೈತರಲ್ಲಿ ಆತಂಕ

ಹನೂರು: ತಾಲೂಕಿನ ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯ ಲಾದರ್ ದೊಡ್ಡಿ ಗ್ರಾಮದಲ್ಲಿ ಕಾಡಾನೆಗಳ ಹಿಂಡು ದಾಳಿ ನಡೆಸಿ ಅಪಾರ ಪ್ರಮಾಣದ ಬೆಳೆ…

5 hours ago

20 ವರ್ಷಗಳಿಂದ ಮುಚ್ಚಳಕ್ಕಾಗಿ ಕಾಯುತ್ತಿದೆ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಡಿಯುವ ನೀರಿನ ಟ್ಯಾಂಕ್!

ಹನೂರು: ತಾಲೂಕಿನ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಏರಿಕಾಡು ಗ್ರಾಮದಲ್ಲಿ ಕಳೆದ 20 ವರ್ಷಗಳಿಂದ ಕುಡಿಯುವ ನೀರಿನ ಟ್ಯಾಂಕ್‌ಗೆ ಮುಚ್ಚಳವೇ…

6 hours ago

ಓದುಗರ ಪತ್ರ: ಮೇಕೆದಾಟು ಯೋಜನೆ ಶೀಘ್ರ ಜಾರಿಯಾಗಲಿ

ಬೆಂಗಳೂರಿನಿಂದ ಸುಮಾರು ೯೦ ಕಿ.ಮೀ. ದೂರದಲ್ಲಿರುವ ಕಾವೇರಿ ಮತ್ತು ಅರ್ಕಾವತಿ ಸಂಗಮದಲ್ಲಿ ನಿರ್ಮಿಸಲು ಉದ್ದೇಶಿಸಿರುವ ೯,೦೦೦ ಕೋಟಿ ರೂ. ವೆಚ್ಚದ…

7 hours ago