ಸಿ.ಹರಕುಮಾರ್, ಲೇಖಕ
ಜನರ ನೆಮ್ಮದಿ ಕಸಿದುಕೊಂಡವರು, ನೆಮ್ಮದಿಯಿಂದಿರಲು ಸಾಧ್ಯವೆ?
ಸತ್ಯದ ಪ್ರತಿಪಾದನೆ ಆ ಕ್ಷಣಕ್ಕೆ ಇಷ್ಟವಾಗದಿರಬಹುದು, ಶತ್ರುಗಳನ್ನು ಹುಟ್ಟುಹಾಕಬಹುದು, ಜೀರ್ಣಿಸಿಕೊಳ್ಳಲು ಕಷ್ಟವಾಗಬಹುದು, ಆದರೆ, ಸತ್ಯದ ತೂಕವೇ ಬೇರೆ. ಒಂದಲ್ಲ ಒಂದು ದಿನ ಸತ್ಯದ ಪ್ರತಿಪಾದಕರು ಮಾತ್ರ ಬದುಕಿಗೆ ಆದರ್ಶವಾಗುತ್ತಾರೆ. ಹೋರಾಟದ ಚೇತನವಾಗುತ್ತಾರೆ. ಮಹಾತ್ಮರಾಗುತ್ತಾರೆ ಮತ್ತು ಅಜರಾಮರವಾಗಿರುತ್ತಾರೆ. ಹೊಸದಿಲ್ಲಿಯಲ್ಲಿ ಜರುಗಿದ ಯುವ ಸಮೂಹದ (ಜೆನ್- ಝೀ) ಚಳವಳಿಯಲ್ಲಿ ರಾರಾಜಿಸಿದ ‘ಜೈ ಭೀಮ್’ ಮತ್ತು ‘ಇಂಕ್ವಿಲಾಬ್ ಜಿಂದಾಬಾದ್’ ಘೋಷಣೆಗಳು ಮತ್ತು ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧೀಜಿಯವರ ಭಾವಚಿತ್ರಗಳೇ ಇದಕ್ಕೆ ಸಾಕ್ಷಿ.
ಗಾಂಧಿ ಅಹಿಂಸಾತ್ಮಕ ಮಾರ್ಗದಲ್ಲಿ ಹೋರಾಟ ಮಾಡಲು ಹೇಳಿಕೊಟ್ಟರು. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಾಪಾಡಿಕೊಳ್ಳಲು ಹೋರಾಟದ ಅನಿವಾರ್ಯತೆಯನ್ನು ಪ್ರತಿಪಾದಿಸಿಯೇ ಬ್ರಿಟಿಷರ ವಿರುದ್ಧ ಗೆದ್ದರು. ಅಂಬೇಡ್ಕರ್‌ರವರು ಅನ್ಯಾಯದ ವಿರುದ್ಧ ಪ್ರತಿಭಟಿಸಲು, ಹಕ್ಕುಗಳನ್ನು ಕಾಪಾಡಿಕೊಳ್ಳಲು, ಅವ್ಯವಸ್ಥೆಯನ್ನು ಪ್ರಶ್ನಿಸಲು ಹೇಳಿಕೊಟ್ಟರು. ಅದೇ ಮಂತ್ರ ದಂಡಗಳನ್ನು ಹಿಡಿದ ಎಲ್ಲಾ ಧರ್ಮದ, ಜಾತಿಯ ಯುವಶಕ್ತಿ ಯಾರ ಮಾತುಗಳಿಗೂ ಕಿವಿಗೊಡದೆ ದಿಲ್ಲಿಯ ಜಂತರ್ ಮಂಥರ್‌ನಲ್ಲಿ ಮತ್ತು ದೇಶದ ಉದ್ದಗಲಕ್ಕೂ ಮಹಾತ್ಮ ಗಾಂಧಿಯವರನ್ನು, ಬಾಬಾ ಸಾಹೇಬರನ್ನು ಆದರ್ಶವನ್ನಾಗಿಟ್ಟುಕೊಂಡು ಹೋರಾಟ ಮಾಡುತ್ತಿರುವುದು ‘ಸತ್ಯಕ್ಕಿರುವ ತಾಕತ್ತು’.
ಯಾವ ಯುವ ಸಮೂಹ ಆರು ದಶಕಗಳ ಕಾಂಗ್ರೆಸ್ ನೇತೃತ್ವದ ಆಡಳಿತಕ್ಕೆ ಬೇಸತ್ತು ನರೇಂದ್ರ ಮೋದಿಯ ಫೋಬಿಯಾಕ್ಕೆ ಸಮೂಹ ಸನ್ನಿಯಂತೆ ಒಳಗಾಯಿತೋ, ಅದೇ ಯುವ ಸಮುದಾಯ ಇಂದು ‘ಮೋದಿ ಹಠಾವೋ’ ಎಂಬ ಒಂದು ಸಾಲಿನ ನಿರ್ಣಯಕ್ಕೆ ಬರಲು ಹತ್ತು ವರ್ಷಗಳೇ ಬೇಕಾಯಿತು. ಇದೇ ಯುವ ಸಮುದಾಯದ ಕನಸುಗಳೇನಿದ್ದವು? ಪಾಶ್ಚಿಮಾತ್ಯ ರಾಷ್ಟ್ರಗಳ ರೀತಿಯಲ್ಲಿ ಭಾರತವನ್ನು ಅಭಿವೃದ್ಧಿಪಡಿಸುವುದು, ಲಭ್ಯವಿರುವ ತಾಂತ್ರಿಕತೆಯನ್ನು ಬಳಸಿಕೊಂಡು ಉದ್ಯೋಗ ಸೃಷ್ಟಿಸುವುದು, ಎಲ್ಲ ಹಂತಗಳಲ್ಲೂ ಭ್ರಷ್ಟಾಚಾರವನ್ನು ಕೊನೆಗೊಳಿಸುವುದು, ಆಡಳಿತದಲ್ಲಿ ಪಾರದರ್ಶಕತೆ ತರುವುದು, ಬಡತನವನ್ನು ಹಂತ ಹಂತವಾಗಿ ಕೊನೆಗೊಳಿಸುವುದು, ಧರ್ಮಾಧಾರಿತ ಮತ್ತು ಜಾತಿ ಆಧಾರಿತ ತಾರತಮ್ಯವಿಲ್ಲದೆ ಸಾಮಾಜಿಕ ಸ್ವಾಸ್ಥ್ಯ ಕಾಪಾಡುವುದು… ಹೀಗೆ ನೂರಾರು ಆಸೆಗಳನ್ನು ಇಟ್ಟುಕೊಂಡು ಈ ಯುವ ಸಮೂಹ ‘ಮೋದಿ ಮೋದಿ’ ಅಂತ ಹೋದೆಡೆಯೆಲ್ಲ ಕೂಗುತ್ತಾ, ಇತರೆ ರಾಜಕಾರಣಿಗಳನ್ನು ಹೀಯಾಳಿಸುತ್ತಾ ೨೦೧೪ರಲ್ಲಿ ಮೊದಲ ಬಾರಿಗೆ ಅಧಿಕಾರ ಕೊಟ್ಟರು.
ಕಳೆದ ಹತ್ತು ವರ್ಷಗಳಲ್ಲಿ ಯುವಜನರ ಈ ಒಂದಾದರೂ ಆಶೋತ್ತರ ಈಡೇರಿತೇ? ಎಂಬ ಪ್ರಶ್ನೆ ಹಾಕಿಕೊಂಡಾಗ ಉತ್ತರವನ್ನು ಇಂದಿನ ಯುವ ಜನರ ಆಕ್ರೋಶದಲ್ಲೇ ಕಂಡುಕೊಳ್ಳಬಹುದು. ವಿಶ್ವಗುರು ಎಂದು ತಮ್ಮ ಅಭಿಮಾನಿಗಳಿಂದ ಕರೆಸಿಕೊಂಡ ಮೋದಿಯವರು ಇಂದು ತಮ್ಮ ದೇಶದ ಮಕ್ಕಳೆದುರೇ ಮಂಡಿಯೂರಬೇಕಾದ ಪರಿಸ್ಥಿತಿ ಬಂದೊದಗಿದೆ. ಅವರು ಕೇಳಿದ ಎಲ್ಲ ಬೇಡಿಕೆಗಳಿಗೆ ಮರುಮಾತಿಲ್ಲದೇ ಒಪ್ಪಬೇಕಾದ ಪರಿಸ್ಥಿತಿಯನ್ನು ತಂದುಕೊಂಡಿದ್ದಾರೆ. ಕನಿಷ್ಠ ಒಂದು ಪರೀಕ್ಷೆಯನ್ನು ಸುಗಮವಾಗಿ ನಡೆಸಲಾಗದ ಅಸಮರ್ಥ ಸರ್ಕಾರ ಎಂಬ ಹಣೆಪಟ್ಟಿಯೊಂದಿಗೆ ಉದ್ಯೋಗಗಳನ್ನು ಸೃಷ್ಟಿಸಲುವಿಫಲವಾದದ್ದು, ಬಡಜನರ, ಮಧ್ಯಮ ವರ್ಗದವರ ದಿನನಿತ್ಯದ ಅವಶ್ಯಕತೆಗಳಾದ ಅಡುಗೆ ಅನಿಲ, ದಿನಸಿ, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ, ಜಿಎಸ್‌ಟಿ ಬರೆ, ಚುನಾವಣೆ ಗೆಲ್ಲಲು ಸೈನಿಕರ ಬಲಿ, ಕೃಷಿ ಕಾಯ್ದೆಗಳ ಮೂಲಕ ರೈತರಿಗೆ ಪೆಟ್ಟು… ಹೀಗೆ ಹಲವಾರು ವೈಫಲ್ಯಗಳಿಂದ ಆಕ್ರೋಶಗೊಂಡ ಯುವ ಸಮೂಹ ತನ್ನದೇ ೨೧ ವಿದ್ಯಾರ್ಥಿಗಳ ಆತ್ಮಹತ್ಯೆಯಿಂದ ಮನನೊಂದು ಹೋರಾಟಕ್ಕೆ ಇಳಿದೇ ಬಿಟ್ಟತು.
ವಿದ್ಯಾರ್ಥಿಗಳ ಹೋರಾಟವನ್ನು ಮತ್ತು ಸೋನಮ್ ವಾಂಗ್ಚುಕ್‌ರವರ ಉಪವಾಸ ಸತ್ಯಾಗ್ರಹವನ್ನು ಪ್ರಾರಂಭದಲ್ಲಿ ನರೇಂದ್ರ ಮೋದಿ ಸರ್ಕಾರ ಲಘುವಾಗಿ ಪರಿಗಣಿಸಿತು. ಯಾವಾಗ ಈ ಕಾಕ್ರೋಚ್‌ಗಳ ಹಾವಳಿ ದೇಶದಾದ್ಯಂತ ವ್ಯಾಪಿಸಲು ಆರಂಭವಾಯಿತೋ ಆಗ ಇಬ್ಬರು ಸಚಿವರ ಮೂಲಕ ಯುವ ಸಮೂಹದ ಮುಖಂಡರುಗಳನ್ನು ಮಾತುಕತೆಗೆ ಕರೆದರು ಮತ್ತು ಧರ್ಮೇಂದ್ರ ಪ್ರಧಾನರವರ ರಾಜೀನಾಮೆಯನ್ನು ಅತ್ತೂ ಕರೆದು ಪಡೆದರು. ಈ ಕೆಲಸವನ್ನು ಮೊದಲೇ ಮಾಡಿದ್ದರೆ ಇಷ್ಟೊಂದು ಅನಾಹುತವಾಗುತ್ತಿರಲಿಲ್ಲ ಭಿತ್ತಿಚಿತ್ರಗಳೇ ಎಲ್ಲ ಕಥೆಯನ್ನು ಹೇಳುತ್ತವೆ: ಜಂತರ್ ಮಂಥರ್ ಸಂಸತ್ ಚಲೋ ಪ್ರತಿಭಟನೆ ವೇಳೆ ಯುವಜನರು ಪ್ರದರ್ಶಿಸಿದ ಭಿತ್ತಿಚಿತ್ರಗಳೇ ಎಲ್ಲವನ್ನೂ ಹೇಳುತ್ತವೆ. ಇವುಗಳಿಗೆ ವ್ಯಾಖ್ಯಾನ, ವಿವರಣೆ ಬೇಕಿಲ್ಲ. ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ತಾವೇ ಕಸ ಗುಡಿಸುವುದು, ತ್ಯಾಜ್ಯಗಳನ್ನು ಎತ್ತಿ ಹಾಕುವುದು, ಆಹಾರ- ನೀರು ವಿತರಣೆ, ಅಷ್ಟೊಂದು ಜನಜಂಗುಳಿ ಮಧ್ಯೆ ಹೆಣ್ಣುಮಕ್ಕಳಿಗೆ ಯಾವುದೇ ರೀತಿಯ ಅನಾಹುತಗಳಿಗೆ ಎಡೆ ಮಾಡಿಕೊಡದಿರುವುದು, ಯುವ ವೈದ್ಯರು ಔಷಧಿ ಹಂಚಿದ್ದು, ಮುಸ್ಲಿಮರು, ಕ್ರಿಶ್ಚಿಯನ್ನರು, ಸಿಖ್ಖರು ತಮ್ಮ ಪ್ರಾರ್ಥನಾ ಕೇಂದ್ರಗಳಲ್ಲಿ ಯುವಜನರಿಗೆ ಆಶ್ರಯ ಕಲ್ಪಿಸಿ ಕೊಟ್ಟಿದ್ದು ಇತ್ಯಾದಿಗಳನ್ನು ನೋಡಿದಾಗ ಇಡೀ ಭಾರತವೇ ಅಲ್ಲಿ ಮೇಳೈಸಿತ್ತು.
ಇಂತಹ ಶಾಂತಿಪ್ರಿಯ ಪ್ರತಿಭಟನೆಯನ್ನು ಹತ್ತಿಕ್ಕಲು ದಿಲ್ಲಿ ಪೊಲೀಸರ ದಮನಕಾರಿ ನಡವಳಿಕೆಯು ಅಮಾನವೀಯ ದೌರ್ಜನ್ಯ, ಕ್ಷಮಿಸಲಾಗದ ಮತ್ತು ಎಂದೆಂದೂ ಮರೆಯಲಾಗದ ಘಟನಾವಳಿಗಳಾಗಿವೆ. ಮಕ್ಕಳ ಮೇಲಿನ ದೌರ್ಜನ್ಯ ಕಪ್ಪುಚುಕ್ಕೆಯಾಗಿಯೇ ಉಳಿಯಿತು. ಯುವ ಸಮೂಹದ ಚಳವಳಿ ಆರಂಭವಾದ ಕೂಡಲೇ ಸಂಬಂಧಿತ ಮಂತ್ರಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುವುದರ ಜೊತೆಗೆ ಎನ್‌ಟಿಎ ಮುಖ್ಯಸ್ಥರ ತಲೆದಂಡ ಮತ್ತು ಇದರ ಹಿಂದಿರುವ ಸೂತ್ರಧಾರರನ್ನು ಬಂಧಿಸಿ ಕಾನೂನಿನ ಶಿಕ್ಷೆಗೊಳಪಡಿಸುವ ಎಲ್ಲ ಕ್ರಮಗಳನ್ನು ವಹಿಸಬೇಕಾಗಿತ್ತಲ್ಲವೇ? ಇಡೀ ದೇಶ ಇಂದು ಒಬ್ಬ ವ್ಯಕ್ತಿಯ ಸಮೂಹ ಸನ್ನಿಗೆ ಒಳಗಾಗಿಬಿಟ್ಟಿದೆ. ಇವರನ್ನು ಪ್ರಶ್ನಿಸುವವರು ದೇಶದ್ರೋಹಿಗಳಾಗುತ್ತಾರೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಇವರ ಅಂಧಭಕ್ತರ ಅಶ್ಲೀಲ ನಿಂದನೆಗಳಿಗೆ ಗುರಿಯಾಗುತ್ತಾರೆ.
ಒಂದಂತೂ ನಿಜ. ಮೇಲೇರಿದವರು ಕೆಳಗಿಳಿಯಲೇಬೇಕು. ಶಾಶ್ವತವಾಗಿ ಅಧಿಕಾರ ನಡೆಸಲು ಯಾರಿಗೂ ಸಾಧ್ಯವಿಲ್ಲ. ತುರ್ತು ಪರಿಸ್ಥಿತಿ ಹೇರಿದ್ದ ಮತ್ತು ಅಧಿಕಾರವನ್ನು ಚೆನ್ನಾಗಿ ನಡೆಸಿದ್ದ ಇಂದಿರಾ ಗಾಂಧಿ ವಿರೋಧಿ ಅಲೆಗೆ ಕೊಚ್ಚಿ ಹೋಗಬೇಕಾಯಿತು. ತೃಣಮೂಲ ಕಾಂಗ್ರೆಸ್ ತನ್ನ ಮನೆಯವರನ್ನೆಲ್ಲಾ ಕಳೆದುಕೊಂಡು ನಿರ್ಗತಿಕವಾಗಿ ಬೀದಿಗೆ ಬಂತು. ರಾತ್ರೋರಾತ್ರಿ ಅಧಿಕಾರಕ್ಕೆ ಬಂದ ಆಮ್ ಆದ್ಮಿ ಪಕ್ಷ ನೆಲ ಕಚ್ಚಿದ್ದನ್ನು ನೋಡಿದ್ದೇವೆ. ಇಷ್ಟೆಲ್ಲ ಏಳು ಬೀಳುಗಳನ್ನು ಕಂಡ ಭಾರತೀಯರನ್ನು ಎಲ್ಲ ಕಾಲದಲ್ಲೂ ವಂಚಿಸಲು ಸಾಧ್ಯವಿಲ್ಲ. ಕೊನೆಯದಾಗಿ, ಇನ್ನೊಬ್ಬರ ನೆಮ್ಮದಿ ಕಸಿದುಕೊಂಡವರು ನೆಮ್ಮದಿಯಾಗಿರಲು ಸಾಧ್ಯವಿಲ್ಲವೆಂಬುದನ್ನು ಈ ಯುವ ಜನಾಂಗದ ಹೋರಾಟ ತೋರಿಸಿಕೊಟ್ಟಿದೆ. ಆಡಳಿತ ನಡೆಸುವವರು ಇನ್ನು ಮುಂದಾದರೂ ಬುದ್ಧಿ ಕಲಿಯಲಿ, ವಿವೇಕದಿಂದ ವರ್ತಿಸಲಿ.
” ಒಂದಂತೂ ನಿಜ. ಮೇಲೇರಿದವರು ಕೆಳಗಿಳಿಯಲೇಬೇಕು. ಶಾಶ್ವತವಾಗಿ ಅಧಿಕಾರ ನಡೆಸಲು ಯಾರಿಗೂ ಸಾಧ್ಯವಿಲ್ಲ. ತುರ್ತುಪರಿಸ್ಥಿತಿ ಹೇರಿದ್ದ ಮತ್ತು ಅಧಿಕಾರವನ್ನು ಚೆನ್ನಾಗಿ ನಡೆಸಿದ್ದ ಇಂದಿರಾ ಗಾಂಧಿ ವಿರೋಧಿ ಅಲೆಗೆ ಕೊಚ್ಚಿ ಹೋಗಬೇಕಾಯಿತು.”
ರಾಜ್ಯದ ಬಹಳಷ್ಟು ಜನರು ಆನ್‌ಲೈನ್ -ಆಫ್ಲೈನ್ ಮೂಲಕ ನೋಂದಣಿ ಮಾಡಿಸುವ ಮೂಲಕ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ. ಆದರೆ ಅನೇಕರಲ್ಲಿ ಗೊಂದಲ…
ಕನ್ನಡ ಒಗ್ಗಟ್ಟು ಕಾವೇರಿಯ ಹೆಸರಲ್ಲಿ ಕಂಡಿದೆ ಕನ್ನಡ ನಾಯಕರ ಒಗ್ಗಟ್ಟು ಆಳುವವರ ಜೊತೆ ಕೈ ಜೋಡಿಸಿದರೆ ಬಿಡಿಸಲಿವೆ ಹಲವು ಬಿಕ್ಕಟ್ಟು…
ರಾಜಕಾರಣದ ಸರಕು! ‘ನೀರಿಗಾಗಿ ತಮಿಳುನಾಡು ಸುಪ್ರೀಂಗೆ ಮೊರೆ!’ ನೀರಿzಗ ಹರಿಸಿದೆ ಕರ್ನಾಟಕ ಯಥೇಚ್ಛ ನೀರನು ಸಮುದ್ರ ತುಳುಕುವಷ್ಟು ಇಲ್ಲದಾಗ ಹರಿಸುವುದೆಂತು…
ರಾಜ್ಯದಲ್ಲಿ ದಿನೇ ದಿನೇ ಏರುತ್ತಿರುವ ಅಕ್ಕಿ ಬೆಲೆ ಸಾಮಾನ್ಯ ಜನರ ನಿದ್ದೆಗೆಡಿಸಿದೆ. ತುಂಗಭದ್ರಾ ಜಲಾಶಯದ ಗೇಟ್ ರಿಪೇರಿಯಿಂದಾಗಿ ಸುಮಾರು ೭…
ಪಂಜುಗಂಗೊಳ್ಳಿ ಅವರ ವಾರದ ಅಂಕಣ ಬಾಲಕಾರ್ಮಿಕರಿಗಾಗಿ ಏಕಲವ್ಯ ಟ್ರಸ್ಟ್ ಸ್ಥಾಪನೆ ಛತ್ತೀಸ್‌ಘಡದ ಭಿಲಾಯ್‌ಯ ವಿವೇಕ್ ಶಂಗಾರಿಯ ತಾಯಿ ತೀರಿಕೊಂಡಾಗ ಅವನಿಗೆ…
ಮಂಜು ಕೋಟೆ ಕೋಟೆ: ಕಂದಾಯ ಇಲಾಖೆಯಲ್ಲಿ ಭ್ರಷ್ಟಾಚಾರದಲ್ಲಿ ತೊಡಗಿರುವ ಅಧಿಕಾರಿ, ನೌಕರರಿಗೆ ನಡುಕ ಎಚ್.ಡಿ.ಕೋಟೆ: ಹುಣಸೂರು ಉಪವಿಭಾಗಾಧಿಕಾರಿ ಕಾವ್ಯರಾಣಿ ಅವರು…