ಪ್ರಕಾಶ್ ಪುಟ್ಟಪ್ಪ
ಸುತ್ತಮುತ್ತ ಹಳ್ಳಿಗಳಿಗೆಲ್ಲ ಸೋಬಾನೆ ಮಾಳಗರಸಮ್ಮ ಎಂದೇ ಪ್ರಖ್ಯಾತಿ ಗಳಿಸಿರೋ ಈ ಹಿರಿ ತಾಯಿಯ ವೈಯಕ್ತಿಕ ಬದುಕು ನಿಜಕ್ಕೂ ಸಂಕಟಕರ. ಕಲೆಯನ್ನೇ ತನ್ನ ಮತ್ತು ತನ್ನ ಕುಟುಂಬದ ಆಧಾರವಾಗಿಸಿಕೊಂಡಿರುವ ಈಕೆಯ ಕುಟುಂಬದ್ದು ಅದೊಂದು ಕಣ್ಣೀರಿನ ಕಥೆ.
ಏಳು ಜನ ಹೆಣ್ಣು ಮಕ್ಕಳು, ಇಬ್ಬರು ಗಂಡು ಮಕ್ಕಳು, ಒಟ್ಟು ಒಂಬತ್ತು ಜನರ ತುಂಬು ಕುಟುಂಬದಲ್ಲಿ ಹುಟ್ಟಿದರೂ ತಂದೆಯ ಮತ್ತು ಅವರ ಅಣ್ಣಂದಿರಿಬ್ಬರ ಅಕಾಲಿಕ ಸಾವು ಅವರ ಕುಟುಂಬವನ್ನು ತೀವ್ರವಾಗಿ ಕಾಡಿತು. ಹೀಗೆ ಮೂವರ ಏಕಾಏಕಿ ಸಾವನ್ನು ಕಣ್ಣಾರೆ ಕಂಡ ಅವರ ತಾಯಿ ಒಮ್ಮೆಗೇ ದಿಗ್ಭ್ರಾಂತಳಾಗಿ ಹೋದಳು. ಇರುವ ಹೆಣ್ಣು ಮಕ್ಕಳನ್ನು ಹೇಗೋ ಕೂಲಿನಾಲಿ ಮಾಡಿ ಬೆಳೆಸಿದಳು.
ತಾಯಿ ಹೊಲದಲ್ಲಿ ಕಳೆ ಕೀಳುವಾಗಲೋ, ಆಡು ಕುರಿಗಳನ್ನು ಮೇಯಿಸುವಾಗಲೋ ಅಥವಾ ಮನೆಗೆಲಸ ಮಾಡುವಾಗಲೋ ಗುನುಗುತ್ತಿದ್ದ ಜಾನಪದ ಹಾಡುಗಳು, ಸೋಬಾನೆ ಗೀತೆಗಳು ಈ ಅಕ್ಕ-ತಂಗಿಯರ ಮೇಲೆ ಅತ್ಯಂತ ದೊಡ್ಡ ಪ್ರಭಾವ ಬೀರಲಾರಂಭಿಸಿದವು. ತನ್ನ ತಾಯಿಯೊಟ್ಟಿಗೆ ಸೇರಿಕೊಂಡು ತನ್ನ ತಂಗಿಯರ ಸಂಘ ಕಟ್ಟಿಕೊಂಡು ಮಾಳಗರಸಮ್ಮ ಹಾಡುವ ಕಲೆಯನ್ನು ಮೈಗೂಡಿಸಿಕೊಂಡಳು. ಇಡೀ ಊರಿನಲ್ಲಿ ಮದುವೆಗಳಲ್ಲಿ, ಹೆಣ್ಣು ಮಕ್ಕಳು ಋತುಮತಿಯಾದ ಸಂದರ್ಭದಲ್ಲಿ ಸೋಬಾನೆ ಹಾಡುವುದು, ಹಬ್ಬ ಹರಿದಿನಗಳಲ್ಲಿ ದೇವಸ್ಥಾನಗಳಲ್ಲಿ ಮಹದೇಶ್ವರ, ಮಂಟೇಸ್ವಾಮಿ, ಬಿಳಿಗಿರಿ ರಂಗನಾಥನ ಹಾಡುಗಳನ್ನು ಹಾಡುವುದು ಇವರ ಕಾಯಕವಾಗತೊಡಗಿತು. ಊರಲ್ಲೆಲ್ಲಾ ಸೋಬಾನೆ ತಂಗಿಯರು ಎಂದೇ ಪ್ರಸಿದ್ಧವಾಗಿ ನೆಮ್ಮದಿಯ ಜೀವನ ನಡೆಸುತ್ತಿದ್ದವರಿಗೆ ಅವರ ತಾಯಿಯ ಮತ್ತು ಜೊತೆಜೊತೆಗೆ ಮೂರು ಜನ ಅಕ್ಕಂದಿರ ಅಕಾಲಿಕ ಸಾವು ಜೀವನದಲ್ಲಿ ಮತ್ತೊಂದು ಬಿರುಗಾಳಿ ಎಬ್ಬಿಸಿ ಹೋಯಿತು.
ದಿಕ್ಕಿಲ್ಲದ ಮನೆಯಲ್ಲಿ ಈಗ ಎಲ್ಲ ಜವಾಬ್ದಾರಿಗಳು ಮೆಲ್ಲಗೆ ಇದೇ ಮಾಳಗರಸಮ್ಮನ ಹೆಗಲೇರಿಕೊಂಡಿತು. ತನ್ನನ್ನು ಸೇರಿ ಮೂರು ಜನ ತಂಗಿಯರು ಅವಿವಾಹಿತರಾದ ಕಾರಣ ಅವರನ್ನೆಲ್ಲ ದಡ ಸೇರಿಸುವ ದೊಡ್ಡ ಜವಾಬ್ದಾರಿ ಕಣ್ಣ ಮುಂದಿದ್ದರೂ ಎದೆಗುಂದದೆ ಎಲ್ಲವನ್ನು ನಿಭಾಯಿಸಿ ಜೀವನವನ್ನು ಕಟ್ಟಿದ್ದು ಮಾತ್ರ ಅದೊಂದು ಅದ್ಭುತ. ಒಬ್ಬ ತಂಗಿಯನ್ನು ಕುಮಾರನಪುರಕ್ಕೂ ಇನ್ನೊಬ್ಬರನ್ನು ಚಾಮರಾಜನಗರಕ್ಕೂ ತಾನೇ ಮುಂದೆ ನಿಂತು ಮದುವೆ ಮಾಡಿದರು. ಚಾಮರಾಜನಗರಕ್ಕೆ ಮದುವೆಯಾದ ಇವರ ತಂಗಿ ಜಯಲಕ್ಷ್ಮೀಯವರ ಗಂಡನ ಅಕಾಲಿಕ ಮರಣವಾದ್ದರಿಂದ ಮಗನೊ ಟ್ಟಿಗೆ ಮಾಳಗರಸಮ್ಮನ ಮನೆಗೆ ಸೇರಬೇಕಾಯಿತು. ದಿಕ್ಕಿಲ್ಲದ ಮನೆಗೆ ಹೇಗೋ ಆಸರೆಯಂತೆ ಜಯಲಕ್ಷ್ಮೀಯವರ ಮಗ ಬೆಳೆದು ಕುಟುಂಬ ನಿರ್ವಹಣೆಯ ಜವಾಬ್ದಾರಿ ಹೊತ್ತುಕೊಂಡು ಮಾಳಗರಸಮ್ಮ ಮತ್ತು ಅವರಿಬ್ಬರ ತಂಗಿಯರನ್ನು ನೋಡಿಕೊಳ್ಳುತ್ತಿದ್ದನು.
ಮಾಳಗರಸಮ್ಮ ಮತ್ತವರ ತಂಗಿಯರಿಬ್ಬರು ಇವನನ್ನೇ ತಮ್ಮ ಮಗನೆಂದು ಬಹಳ ಅಸ್ತೆಯಿಂದ ಸಾಕಿ ಬೆಳೆಸಿದ್ದರಿಂದ ಆತನಿಗೂ ಇವರು ಮೂವರ ಮೇಲೆ ಎಲ್ಲಿಲ್ಲದ ಪ್ರೀತಿ. ತಾಯಿ ಒಬ್ಬರಾದರೂ ಇನ್ನಿಬ್ಬರನ್ನು ತಾಯಂದಿರಂತೆ ನೋಡಿಕೊಂಡು ಕುಟುಂಬಕ್ಕೆ ಆಸರೆಯಾಗಿದ್ದ ಅವನೂ ಅಕಾಲ ಸಾವಿಗೆ ತುತ್ತಾದಾಗ ಕುಟುಂಬ ಅಲ್ಲೋಲ ಕಲ್ಲೋಲವಾಯಿತು. ಬೆಂಕಿ ಬಿರುಗಾಳಿ ಒಟ್ಟಿಗೆ ಬಂದ ಅನುಭವ ಮಾಳಗರಸಮ್ಮ ಮತ್ತು ಅವರ ತಂಗಿಯರನ್ನು ಕುಗ್ಗಿಸಿಬಿಟ್ಟಿತು. ಜೀವನವೇ ಸಾಕೆನಿಸಿದಾಗಲೂ ಕಲೆ ಅವರನ್ನು ಎಂದಿಗೂ ಕೈ ಬಿಡಲಿಲ್ಲ. ಬದುಕಿನ ಬಂಡಿ ಸಾಗಬೇಕಾದರೆ ಈಗ ಕಲೆಯ ಬೆನ್ನೇರಬೇಕಾದ ದೊಡ್ಡ ಅನಿವಾರ್ಯತೆ ಅವರ ಬದುಕನ್ನು ಮತ್ತೊಂದು ಮಜಲಿಗೆ ಎಳೆದುಕೊಂಡು ಹೋಯಿತು.
ಅಲ್ಲಿಯವರೆಗೆ ಕೇವಲ ಹಳ್ಳಿಗಳಲ್ಲಿ ಸೋಬಾನೆ ಪದಗಳನ್ನು, ದೇವರ ಜಾನಪದ ಹಾಡುಗಳನ್ನು ಹಾಡಿಕೊಂಡಿದ್ದ ಅಕ್ಕ ತಂಗಿಯರನ್ನು ಗುರುತಿಸಿ ಪಕ್ಕದ ಮಾಂಬಳ್ಳಿ ಸರಕಾರಿ ಶಾಲೆಯ ಶಿಕ್ಷಕರು ತಮ್ಮ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮೊದಲಿಗೆ ಒಂದು ಕಛೇರಿ ಏರ್ಪಡಿಸಿದರು. ಅದೇ ಇವರ ಮುಂದಿನ ಏಳ್ಗೆಗೆ ದಾರಿದೀಪವಾಯಿತು. ನಂತರ ಮಹದೇಶ್ವರ ಬೆಟ್ಟದಲ್ಲಿ ನಡೆದ ಜಿಲ್ಲಾ ಜಾನಪದ ಉತ್ಸವದಲ್ಲಿ ಈ ಸೋದರಿಯರ ತಂಡ ಸೋಬಾನೆ ಪದಗಳನ್ನು ಹಾಡಿ ಜನರಿಂದ ಅಪಾರವಾದ ಮೆಚ್ಚುಗೆಯನ್ನು ಗಳಿಸಿತು. ‘ಸೋಬಾನೆ ಸೋದರಿಯರು’ ಎಂದೇ ಇವರನ್ನು ಈಗ ಜನ ಗುರುತಿಸಲಾರಂಭಿಸಿದರು. ಮೈಸೂರು ಆಕಾಶವಾಣಿಯಲ್ಲಿ ಅಕ್ಕತಂಗಿಯರ ಸೋಬಾನೆ ಪದಗಳು ಬಿತ್ತರವಾದದ್ದು ಇವರ ಖ್ಯಾತಿಯನ್ನು ಮತ್ತಷ್ಟು ಹೆಚ್ಚಿಸಿತು. ‘ಆಕಾಶ್ ವಾಣೀಲಿ ಸೋಬಾನೆ ಪದ್ಗೋಳು ಬಂದ್ಮಾ ಕೆ ನಮ್ ಜೀವ್ನವು ಸುದಾರುಸ್ತು ಸಾ.. ಅವಕಾಶ ಕೊಟ್ಟಿ ನಾಕ್ಕಾಸು ಬರು ಅಂಗ್ ಮಾಡ್ದ್ರು.. ಅವರ ಹೊಟ್ಟೆನ ತಣ್ಣಗಿಟ್ಟರ‍್ಲಿ ಆ ಶಿವ’ ಎಂದರು ಮಾಳಗರಸಮ್ಮ. ಇಷ್ಟೆಲ್ಲ ಆದಮೇಲೆ ಇವರ ಹಾಡುಗಾರಿಕೆಗೆ ಅನೇಕ ಅವಕಾಶಗಳು ಅರಸಿ ಬಂದವು. ಮೈಸೂರಿನ ಪ್ರಖ್ಯಾತ ದಸರಾ ಮಹೋತ್ಸವದಲ್ಲಿ ಈ ಸೋದರಿಯರ ಕಛೇರಿಗಳಿಗೆ ಅವಕಾಶ ದೊರೆಯಿತು. ಚಾಮರಾಜನಗರ ಜಿಲ್ಲಾ ದಸರಾ ಮಹೋತ್ಸವದಲ್ಲಿ, ಚಾಮರಾಜನಗರದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ, ಹನೂರಿನಲ್ಲಿ ನಡೆದ ಗಡಿನಾಡು ಸಾಂಸ್ಕ ತಿಕಉತ್ಸವದಲ್ಲಿ, ಕನ್ನಡ ಮತ್ತು ಸಂಸ್ಕ ತಿ ಇಲಾಖೆ ಚಾಮರಾಜನಗರ ಇವರು ನಡೆಸುವ ‘ಜನಪರ’ ಉತ್ಸವದಲ್ಲಿ, ಕನ್ನಡ ಸಂಸ್ಕ ತಿ ಇಲಾಖೆ ನಡೆಸುವ ‘ಸುಗ್ಗಿಹುಗ್ಗಿ’ ಕಾರ್ಯಕ್ರಮದಲ್ಲಿ, ಗುಂಡ್ಲುಪೇಟೆಯಲ್ಲಿ ನಡೆದ ‘ಸಾಂಸ್ಕ ತಿಕ ಸೌರಭ’ದಲ್ಲಿ, ಯಳಂದೂರಿನಲ್ಲಿ ನಡೆದ ‘ಗ್ರಾಮೀಣ ಉತ್ಸವ’ದಲ್ಲಿ, ಕನ್ನಡ ಸಂಸ್ಕ ತಿ ಇಲಾಖೆ ನಡೆಸುವ ‘ಹಾಡಿರೇ ರಾಗಗಳ ತೂಗಿರೆ ದೀಪಗಳ’ಸಾಂಸ್ಕ ತಿಕ ಕಾರ್ಯಕ್ರಮದಲ್ಲಿ, ಯಳಂದೂರಿನಲ್ಲಿ ನಡೆದ ‘ಜಾನಪದ ವೈಭವ’ದಲ್ಲಿ, ಬೊಪ್ಪೇಗೌಡನಪುರದ ಮಠದಲ್ಲಿ, ಬಿಳಿಗಿರಿರಂಗನ ಬೆಟ್ಟದ ಜಾತ್ರೆಯಲ್ಲಿ, ಮಾದಪ್ಪನ ಬೆಟ್ಟದ ಜಾತ್ರೆಗಳಲ್ಲಿ ಹೀಗೆ ಇನ್ನೂ ಹತ್ತಾರು ಕಡೆಕಾರ್ಯಕ್ರಮಗಳನ್ನು ನೀಡಿದ ಕೀರ್ತಿ ಈ ಸಹೋದರಿಯರದ್ದು. ಸಹೋದರಿಯರ ತಂಡಕ್ಕೆ ಕರ್ನಾಟಕ ರೈತರ ಮತ್ತು ಕಲಾವಿದರ ಸೌಹಾರ್ದ ಪ್ರತಿಷ್ಠಾನ ನೀಡುವ ‘ಕರ್ನಾಟಕ ಕಲಾರತ್ನ ಪ್ರಶಸ್ತಿ’ ಮತ್ತು ವಿಶ್ವ ವಿನೂತನ ರಾಷ್ಟ್ರೀಯ ಕಲೆ ಮತ್ತು ಸಾಂಸ್ಕ ತಿಕ ಅಕಾಡೆಮಿ ಹಾವೇರಿ ಇವರು ನೀಡುವ ‘ಸುವರ್ಣ ಕರ್ನಾಟಕ ಕಲಾರತ್ನ ಪ್ರಶಸ್ತಿ’ ಮುಂತಾದ ಪ್ರಶಸ್ತಿಗಳುಮುಡಿಗೇರಿಕೊಂಡಿವೆ.
ಮಗನನ್ನು ಕಳೆದುಕೊಂಡ ನೋವು ಎದೆಯಲ್ಲಿದ್ದರೂ ಜೀವನೋಪಾಯಕ್ಕಾಗಿ ಹಾಡುಗಾರಿಕೆಯನ್ನೇ ಕಾಯಕವಾಗಿಸಿಕೊಂಡು ಬದುಕು ಸಾಗಿಸಿದ ಈ ಮಾಳಗರಸಮ್ಮನ ಜೀವನ ಈಗ ಅಷ್ಟು ಸುಲಭವಾಗಿಲ್ಲ. ಎಂಬತ್ತರ ಆಸುಪಾಸು ತಲುಪಿರುವ ಆಕೆಗೆ ಮೊದಲಿನಂತೆ ಈಗ ತಂಡ ಕಟ್ಟಿಕೊಂಡು ಹಾಡುವುದು ಅಷ್ಟು ಸಲೀಸಲ್ಲ. ‘ನೀವು ಬರೀ ಸೋಬಾನೆ ಪದ, ಜಾನಪದ ಪದಗಳನ್ನ ಮಾತ್ರ ಹಾಡ್ತೀರೋ ಅಥವಾ ಬೇರೆ ಏನಾದರೂ ಹಾಡ್ತಿರೋ’ ಎಂದೆ..
‘ನಾನೇ ಪದ ಕಟ್ತೀನಿ ಸಾ, ಸರಸ್ವತವ್ವ ಹೊಟ್ಟೆಯಿಂದ ಏನ್ ಬುಟ್ಟಾಳೋ ಅದನ್ನೇ ಹಾಡ್ತೀನಿ’ ಎಂದು ಸರಸ್ವತಿ ಸ ಅನ್ನೋವ್ಳೆ ನಗೆ ಮೊಗದ ಕರ ಚೆಲುವೆ ಹೀಗೆ ಹಾಡು ಕಟ್ಟಿ ಅಕ್ಕತಂಗಿಯರು ಹಾಡಲಾರಂಭಿಸಿದರು. ಅಂದ ಹಾಗೆ ಎಂಬತ್ತರ ಆಸುಪಾಸು ತಲುಪಿರುವ ಮಾಳಗರಸಮ್ಮ ಈಗ ಕಛೇರಿಗಳನ್ನು ನೀಡಿ ಅದರಿಂದ ಜೀವನ ನಡೆಸುವುದು ತ್ರಾಸದಾಯಕವಾದ ಕೆಲಸ. ಸರ್ಕಾರ ಕೊಡುವ ಅಕ್ಕಿ, ಪೆನ್ಷನ್ ಹಣ ಇದರಿಂದಲೇ ಜೀವನದ ಬಂಡಿ ಸಾಗಬೇಕು. ‘ಕೊನೆಗಾಲ್ದಲ್ಲಿ ನಮ್ ಸ್ಥಿತಿ ಯಾನಾದ್ದೋ ಆ ದ್ಯಾವ್ರೆ ಬಲ್ಲ ಸಾ, ಎಲ್ಲ ಅವನಿಚ್ಛೆ ನಮ್ದೇನಿದ್ದು’ ಎಂದು ಕಣ್ಣೀರು ಕಚ್ಚಿಕೊಂಡು ತಮ್ಮ ಭಾರದ ಎದೆಯಿಂದ ನನಗೂ ಒಂದು ಬಾಳೆಹಣ್ಣು ಕೊಟ್ಟು ‘ನಮ್ ಹಟ್ಟೀಗ್ ಬಂದೂರು ಯಾರೂ ಹಂಗೇ ಹೋಗ್ಬಾರ‍್ದು.. ಚೆಂದಾಗಿರು ನನಪ್ನೆ’ ಎಂದು ಬೀಳ್ಕೊಟ್ಟರು. ಯಾಕೋ ನನ್ನ ಕಣ್ಣುಗಳು ಗೊತ್ತಿಲ್ಲದಂತೆ ಒದ್ದೆಯಾಗಿ ಹೋಗಿದ್ದವು.
” ಜೀವನವೇ ಸಾಕೆನಿಸಿದಾಗಲೂ ಕಲೆ ಅವರನ್ನು ಎಂದಿಗೂ ಕೈ ಬಿಡಲಿಲ್ಲ. ಬದುಕಿನ ಬಂಡಿ ಸಾಗಬೇಕಾದರೆ ಹಾಡಲೇಬೇಕಾದ ಅನಿವಾರ್ಯತೆ”
ಮಧುಕರ ಎಮ್.ಎಲ್. ಯಳಂದೂರಿನಲ್ಲೊಂದು ಅಪರೂಪದ ಜೋಡಿ ಅದು ಬೇಸಿಗೆ ಕಾಲ, ಬೆಳಗಿನ ವೇಳೆಯಲ್ಲಿ ವಾಕಿಂಗ್ ಮಾಡುವ ಜನರ ಸಂಖ್ಯೆ ಹೆಚ್ಚು,…
ಕೆ.ಎಸ್.ಚಂದ್ರಶೇಖರ್‌ಮೂರ್ತಿ ಅರಮನೆಯಿಂದ ಪಂಜಿನ ಕವಾಯತುವರೆಗೂ ಅಂಗೈಯ ವೀಕ್ಷಣೆಗೆ ಅವಕಾಶ ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ೨೦೨೬ರ ವರ್ಷದಲ್ಲಿ ಹತ್ತು ಹಲವು…
ನವೀನ್ ಡಿಸೋಜ ಅ.೨೦, ೨೧ರ ಕುರಿತು ಭಿನ್ನ ನಿರ್ಧಾರ; ದೇವಪ್ರಶ್ನೆ ಮೂಲಕ ಪರಿಹಾರಕ್ಕೆ ಕರಗ ಸೇವೆದಾರರ ಮನವಿ ಮಡಿಕೇರಿ: ಐತಿಹಾಸಿಕ…
ಮೈಸೂರು : ದಸರಾ ಮಹೋತ್ಸವಕ್ಕೆ ಆರಂಭದ ಮುನ್ನುಡಿಯಂತಿರುವ ಯುವ ಸಂಭ್ರಮಕ್ಕೆ ಈ ಬಾರಿ ಮೈಸೂರಿನ ಮನೆ ಮಗ ಖ್ಯಾತ ಗಾಯಕ…
ಕೊಡಗು: ಜಿಲ್ಲೆಯ ನೆಲ್ಯಹುದಿಕೇರಿ ಸಮೀಪದ ಅತ್ತಿಮಂಗಲದಲ್ಲಿ ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆ ದಾಳಿ ನಡೆಸಿದೆ. ಸ್ಕೂಟರ್‌ನಲ್ಲಿ ತೆರಳುತ್ತಿದ್ದ 60…