Andolana originals

ಮಡಿಕೇರಿ ದಸರಾ ಶೋಭಾಯಾತ್ರೆ ದಿನಾಂಕ ಗೊಂದಲ

ನವೀನ್ ಡಿಸೋಜ

ಅ.೨೦, ೨೧ರ ಕುರಿತು ಭಿನ್ನ ನಿರ್ಧಾರ; ದೇವಪ್ರಶ್ನೆ ಮೂಲಕ ಪರಿಹಾರಕ್ಕೆ ಕರಗ ಸೇವೆದಾರರ ಮನವಿ

ಮಡಿಕೇರಿ: ಐತಿಹಾಸಿಕ ಮಡಿಕೇರಿ ದಸರಾ ಉತ್ಸವದ ಪ್ರಮುಖ ಆಕರ್ಷಣೆಯಾಗಿರುವ ನಾಲ್ಕು ಕರಗಗಳ ಉತ್ಸವ ಹಾಗೂ ದಶಮಂಟಪಗಳ ಶೋಭಾಯಾತ್ರೆಯ ದಿನಾಂಕ ನಿಗದಿ ವಿಚಾರದಲ್ಲಿ ಗೊಂದಲ ಮುಂದುವರಿದಿದೆ.

ದಶಮಂಟಪ ಸಮಿತಿ ಹಾಗೂ ನಾಲ್ಕು ಕರಗ ಸಮಿತಿಗಳ ಸಭೆಯಲ್ಲಿ ಅ.೨೦ರಂದು ದಶಮಂಟಪಗಳ ಶೋಭಾಯಾತ್ರೆ ನಡೆಸಲು ನಿರ್ಧರಿಸಲಾಗಿದ್ದರೆ, ಶ್ರೀ ಕಂಚಿ ಕಾಮಾಕ್ಷಿಯಮ್ಮ ದೇವಾಲಯದ ಆಡಳಿತ ಮಂಡಳಿ ಅ.೨೧ರಂದು ವಿಜಯದಶಮಿಯಂದು ಕರಗಗಳ ಶೋಭಾಯಾತ್ರೆ ನಡೆಸಲು ತೀರ್ಮಾನಿಸಿರುವುದಾಗಿ ತಿಳಿಸಿದೆ. ಮತ್ತೊಂದೆಡೆ, ಕರಗ ಸೇವೆದಾರರು ದಿನಾಂಕದ ಗೊಂದಲಕ್ಕೆ ದೇವಪ್ರಶ್ನೆ ಮೂಲಕ ಪರಿಹಾರ ಕಂಡುಕೊಳ್ಳು ವಂತೆ ಮನವಿ ಮಾಡಿರುವುದು ಚರ್ಚೆಗೆ ಕಾರಣವಾಗಿದೆ.

ನಗರದ ಶಕ್ತಿ ದೇವತೆಗಳಲ್ಲಿ ಒಂದಾದ ಶ್ರೀ ಕುಂದುರು ಮೊಟ್ಟೆ ಚೌಟಿ ಮಾರಿಯಮ್ಮ ದೇವಾಲಯದ ಆವರಣದಲ್ಲಿ ದಶಮಂಟಪ ಸಮಿತಿ ಹಾಗೂ ನಾಲ್ಕು ಕರಗ ಸಮಿತಿಗಳ ಸಭೆಯಲ್ಲಿ ದಸರಾ ಶೋಭಾಯಾತ್ರೆಯ ದಿನಾಂಕ ಕುರಿತು ಚರ್ಚೆ ನಡೆಸಿ, ಅ.೨೦ರಂದು ದಶ ಮಂಟಪಗಳ ಶೋಭಾಯಾತ್ರೆ ನಡೆಸಲು ತೀರ್ಮಾನಿ ಸಲಾಗಿತ್ತು. ಅ.೨೦ರಂದು ದಶಮಂಟಪಗಳ ಶೋಭಾಯಾತ್ರೆ ನಡೆಸಿದ ಬಳಿಕ, ಅ.೨೧ರಂದು ಬೆಳಿಗ್ಗೆ ಬನ್ನಿ ಕಡಿಯುವ ಮೂಲಕ ದಸರಾ ಆಚರಣೆಗೆ ಮಂಗಳ ಹಾಡಲು ಸಭೆಯಲ್ಲಿ ನಿರ್ಧರಿಸಲಾಗಿತ್ತು.

ಇದರ ನಡುವೆ ನಗರದ ಗೌಳಿ ಬೀದಿಯ ಶ್ರೀ ಕಂಚಿ ಕಾಮಾಕ್ಷಿಯಮ್ಮ ದೇವಾಲಯದಲ್ಲಿ ನಡೆದ ಆಡಳಿತಮಂಡಳಿ ಸಭೆಯಲ್ಲಿ ಅ.೧೧ರಿಂದ ಕರಗ ಸೇವೆ ಆರಂಭಿಸಿ, ವಿಜಯದಶಮಿಯಾದ ಅ.೨೧ರಂದು ಕರಗಗಳ ಶೋಭಾಯಾತ್ರೆ ನಡೆಸಲು ನಿರ್ಧರಿಸಲಾಗಿದೆ. ದಿನಾಂಕ ನಿಗದಿ ಬಗ್ಗೆ ಭಿನ್ನ ಅಭಿಪ್ರಾಯ ವ್ಯಕ್ತವಾದ ಹಿನ್ನೆಲೆಯಲ್ಲಿ ದಸರಾ ಆಚರಣೆ ಬಗ್ಗೆ ಗೊಂದಲ ಏರ್ಪಟ್ಟಿದೆ.

ಈ ಎಲ್ಲಾ ಬೆಳವಣಿಗೆಗಳ ನಡುವೆ ದಿನಾಂಕ ನಿಗದಿ ವಿಚಾರದಲ್ಲಿ ಎರಡು ವಿಭಿನ್ನ ನಿರ್ಧಾರಗಳು ಹೊರಬಂದಿರುವ ಹಿನ್ನೆಲೆಯಲ್ಲಿ ಕರಗ ಸೇವೆದಾರರು ಹಾಗೂ ನಿತ್ಯ ಪೂಜಾರಿಗಳು ದೇವಪ್ರಶ್ನೆ ಮೂಲಕ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದ್ದಾರೆ. ಈ ವರ್ಷ ಅ.೧೦ರಂದು ಮಹಾಲಯ ಅಮಾವಾಸ್ಯೆ ಇರುವ ಹಿನ್ನೆಲೆಯಲ್ಲಿ ಅ.೧೧ರಿಂದ ಕರಗ ಸೇವೆ ಆರಂಭವಾಗಲಿದೆ. ಅ.೨೦ರಂದು ಮಧ್ಯಾಹ್ನದ ಬಳಿಕ ಕರಗೋತ್ಸವದ ಪ್ರಮುಖ ವಿಧಿವಿಧಾನಗಳು ನಡೆಯಲಿದ್ದು, ಅ.೨೧ರಂದು ಮಧ್ಯಾಹ್ನದೊಳಗೆ ವಿಜಯದಶಮಿ ಆಚರಣೆ ನಡೆಯಬೇಕಿದೆ ಎಂದು ತಿಳಿಸಿದ್ದಾರೆ.

ಆದರೆ, ಕಂಚಿ ಕಾಮಾಕ್ಷಿಯಮ್ಮ ದೇವಾಲಯದ ಸಮಿತಿಯಿಂದ ಅ.೧೧ರಿಂದ ಅ.೨೨ರವರೆಗೆ ಕರಗ ಆಚರಣೆ ನಡೆಸುವ ತೀರ್ಮಾನ ಪ್ರಕಟವಾಗಿರುವುದು ಗೊಂದಲಕ್ಕೆ ಕಾರಣವಾಗಿದೆ. ದೇವಾಲಯದ ಸಭೆಯಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರೂ ಸೂಕ್ತ ಸ್ಪಂದನೆ ದೊರೆತಿಲ್ಲ ಎಂಬುದು ಕರಗ ಸೇವೆದಾರರ ಅಸಮಾಧಾನವಾಗಿದೆ.

ದಸರಾ ಕರಗೋತ್ಸವದ ದಿನಾಂಕ ಹಾಗೂ ಸಮಯದ ಕುರಿತು ಮುಂದಿನ ದಿನಗಳಲ್ಲಿ ಯಾವುದೇ ಗೊಂದಲ ಉಂಟಾಗದಂತೆ ನಾಲ್ಕು ಶಕ್ತಿ ದೇವಾಲಯಗಳಅರ್ಚಕರು, ಕರಗ ಸೇವೆದಾರರು ಹಾಗೂ ಸಂಬಂಧಿಸಿದ ಸಮಿತಿಗಳ ಸಮ್ಮುಖದಲ್ಲಿ ದೇವಪ್ರಶ್ನೆ ನಡೆಸಿ ಅಂತಿಮ ದಿನಾಂಕ ಹಾಗೂ ಸಮಯ ನಿಗದಿಪಡಿಸಬೇಕು ಎಂದು ಮನವಿ ಮಾಡಲಾಗಿದೆ.

” ದಸರಾ ಆಚರಣೆ ಸಂಬಂಧ ಗೊಂದಲ ಏರ್ಪಟ್ಟಿರುವ ಹಿನ್ನೆಲೆಯಲ್ಲಿ ಕರಗ ಹೊರುವವರು ಹಾಗೂ ಅರ್ಚಕರು ದಶಮಂಟಪ ಸಮಿತಿಗೆ ಮನವಿ ನೀಡಿದ್ದು, ಅ.೨೦ರಂದೇ ಆಚರಿಸಬೇಕು ಹಾಗೂ ದೇವ ಪ್ರಶ್ನೆ ಮೂಲಕ ಗೊಂದಲ ನಿವಾರಣೆಗೆ ಮನವಿ ಮಾಡಲಾಗಿದೆ. ಈ ಸಂಬಂಧ ಹಿರಿಯರೊಂದಿಗೆ ಚರ್ಚಿಸಿ ದಿನಾಂಕ ನಿಗದಿಗೆ ಕ್ರಮ ಕೈಗೊಳ್ಳಲಾಗುವುದು.”

-ಪಾಂಡೀರ ಸಜನ್ ಪೂಣಚ್ಚ, ದಶಮಂಟಪ ಸಮಿತಿ ಅಧ್ಯಕ್ಷರು

” ದಿನಾಂಕ ಗೊಂದಲದಿಂದ ನಮಗೆಲ್ಲರಿಗೂ ಬೇಸರವಾಗಿದೆ. ಇಲ್ಲಿಯವರೆಗೆ ಹೀಗೆ ಆಗಿರಲಿಲ್ಲ. ಅ.೧೦ರಂದು ಮಹಾಲಯ ಅಮಾವಾಸ್ಯೆ ಇರುವುದರಿಂದ ೧೧ರಿಂದ ಕರಗ ಆರಂಭಿಸಿ ೨೦ರಂದು ದಶಮಿ ಬರಲಿದೆ. ಮರುದಿನ ಸೂರ್ಯೋದಯಕ್ಕೂ ಮುನ್ನ ಬನ್ನಿ ಕಡಿಯಬೇಕಿದೆ. ಇದನ್ನು ಬದಲಾಯಿಸುವುದು ಸರಿಯಲ್ಲ. ೨೧ಕ್ಕೆ ದಶಮಿ ಆಚರಿಸಿದರೆ ಏಕಾದಶಿ ಆಗಿರುವ ೨೨ರಂದು ಬನ್ನಿ ಕಡಿಯಬೇಕಾಗುತ್ತದೆ. ಇದು ತಪ್ಪು. ಇದನ್ನು ಸರಿಪಡಿಸಿ ಒಳ್ಳೆಯ ರೀತಿಯಲ್ಲಿ ದಸರಾ ಆಚರಿಸುವಂತಾಗಬೇಕು.”

-ಜಿ.ಉಮೇಶ್, ಅರ್ಚಕರು, ದಂಡಿನ ಮಾರಿಯಮ್ಮ ದೇವಾಲಯ

” ಶ್ರೀ ಕಂಚಿ ಕಾಮಾಕ್ಷಿಯಮ್ಮ ದೇವಾಲಯದಲ್ಲಿ ಸೆ.೧೬ರಂದು ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಐತಿಹಾಸಿಕ ಮಡಿಕೇರಿ ದಸರಾ ಕರಗೋತ್ಸವ ಹಾಗೂ ಶೋಭಾಯಾತ್ರೆಯನ್ನುಅ.೨೧ ರಂದು ನಡೆಸಲು ದಿನ ನಿಗದಿಪಡಿಸಲಾಗಿದೆ. ಸಭೆಯಲ್ಲಿ ಗೌಳಿ ಸಮುದಾಯದ ಹಿರಿಯರು, ಆಡಳಿತ ಮಂಡಳಿ ಸದಸ್ಯರು ಹಾಗೂ ನಾಲ್ಕು ಶಕ್ತಿ ದೇವಾಲಯಗಳ ಅರ್ಚಕರು ಉಪಸ್ಥಿತರಿದ್ದು, ಚರ್ಚೆ ನಡೆಸಿ, ಅ.೧೧ರಿಂದ ಕರಗಗಳ ಆರಂಭ ಹಾಗೂ ವಿಜಯದಶಮಿಯಂದು ಅಂದರೆ ಅ.೨೧ರಂದು ಕರಗಗಳ ಶೋಭಾಯಾತ್ರೆ ನಡೆಸಲು ತೀರ್ಮಾನಿಸಲಾಗಿದೆ.”

-ಜಿ.ವಿ.ರವಿಕುಮಾರ್, ಕಂಚಿಕಾಮಾಕ್ಷಿಯಮ್ಮ ದೇವಾಲಯ ಸಮಿತಿ ಗೌರವಾಧ್ಯಕ್ಷ 

 

 

 

ಆಂದೋಲನ ಡೆಸ್ಕ್

Recent Posts

ಕಣ್ಣಿಲ್ಲದ ತಮ್ಮ, ದಿಕ್ಕಿಲ್ಲದ ಅಕ್ಕ

ಮಧುಕರ ಎಮ್.ಎಲ್. ಯಳಂದೂರಿನಲ್ಲೊಂದು ಅಪರೂಪದ ಜೋಡಿ ಅದು ಬೇಸಿಗೆ ಕಾಲ, ಬೆಳಗಿನ ವೇಳೆಯಲ್ಲಿ ವಾಕಿಂಗ್ ಮಾಡುವ ಜನರ ಸಂಖ್ಯೆ ಹೆಚ್ಚು,…

1 min ago

ಯರಿಯೂರಿನ ಸೋಬಾನೆ ಮಾಳಗರಸಮ್ಮ ಮತ್ತು ಸೋದರಿಯರು

ಪ್ರಕಾಶ್ ಪುಟ್ಟಪ್ಪ ಸುತ್ತಮುತ್ತ ಹಳ್ಳಿಗಳಿಗೆಲ್ಲ ಸೋಬಾನೆ ಮಾಳಗರಸಮ್ಮ ಎಂದೇ ಪ್ರಖ್ಯಾತಿ ಗಳಿಸಿರೋ ಈ ಹಿರಿ ತಾಯಿಯ ವೈಯಕ್ತಿಕ ಬದುಕು ನಿಜಕ್ಕೂ…

6 mins ago

2026ರ ಮೈಸೂರು ದಸರಾಗೆ ಡಿಜಿಟಲ್ ಸ್ಪರ್ಶ!

ಕೆ.ಎಸ್.ಚಂದ್ರಶೇಖರ್‌ಮೂರ್ತಿ ಅರಮನೆಯಿಂದ ಪಂಜಿನ ಕವಾಯತುವರೆಗೂ ಅಂಗೈಯ ವೀಕ್ಷಣೆಗೆ ಅವಕಾಶ  ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ೨೦೨೬ರ ವರ್ಷದಲ್ಲಿ ಹತ್ತು ಹಲವು…

11 mins ago

ಮೈಸೂರು ದಸರಾ | ಯುವ ಸಂಭ್ರಮ ಉದ್ಘಾಟನೆಗೆ ವಿಜಯಪ್ರಕಾಶ್‌

ಮೈಸೂರು : ದಸರಾ ಮಹೋತ್ಸವಕ್ಕೆ ಆರಂಭದ ಮುನ್ನುಡಿಯಂತಿರುವ ಯುವ ಸಂಭ್ರಮಕ್ಕೆ ಈ ಬಾರಿ ಮೈಸೂರಿನ ಮನೆ ಮಗ ಖ್ಯಾತ ಗಾಯಕ…

11 hours ago

ಕೊಡಗು: ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆ ದಾಳಿ

ಕೊಡಗು: ಜಿಲ್ಲೆಯ ನೆಲ್ಯಹುದಿಕೇರಿ ಸಮೀಪದ ಅತ್ತಿಮಂಗಲದಲ್ಲಿ ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆ ದಾಳಿ ನಡೆಸಿದೆ. ಸ್ಕೂಟರ್‌ನಲ್ಲಿ ತೆರಳುತ್ತಿದ್ದ 60…

17 hours ago