ಹಾಡು ಪಾಡು

ಈ ಕಾಲಕ್ಕೂ ಅಚ್ಚರಿಯೇ ಹುಲಿಕೆರೆಯ ಈ ಸುರಂಗ ನಾಲೆ

ಕಾಲಾನುಕಾಲದಲ್ಲಿ ಕನ್ನಡನಾಡಿನ ವಿವಿಧ ಸಂಸ್ಥಾನಗಳನ್ನು ಹಲವು ರಾಜಮನೆತನಗಳು ಆಳಿವೆ. ಎಲ್ಲ ರಾಜಮನೆತನಗಳೂ ಕೂಡ ಇಂದಿಗೂ ನೆನಪಿನಲ್ಲಿರುವಂತಹ ಅಸಂಖ್ಯಾತ ಕೊಡುಗೆಗಳನ್ನು ನೀಡಿದ್ದರೂ ಮೈಸೂರು ಸಂಸ್ಥಾನ ಮಾತ್ರ ಈ ವಿಷಯದಲ್ಲಿ ಎಲ್ಲಕ್ಕಿಂತ ಹೆಚ್ಚು ಹೆಗ್ಗಳಿಕೆ ಪಡೆದಿದೆ.

ಏಕೆಂದರೆ ಒಡೆಯರ್ ರಾಜಮನೆತನ ಮೈಸೂರು ಸಂಸ್ಥಾನವನ್ನು ಆಳುತ್ತಿದ್ದ ಸಂದರ್ಭದಲ್ಲಿ ರಾಜ್ಯದಲ್ಲಿ ಅದೆಷ್ಟೋ ಸಂಸ್ಥೆಗಳು ಆರಂಭವಾದವು. ನೂರಾರು ಅಭಿವೃದ್ಧಿ ಕಾರ್ಯಗಳು ನಡೆದವು. ದಿವಾನರು ಹಾಗೂ ಅಂದಿನ ರಾಜರ ದೂರದೃಷ್ಟಿಯ ಫಲವಾಗಿ ಮೈಸೂರು ಮಾದರಿ ಸಂಸ್ಥಾನ ಎನಿಸಿಕೊಂಡಿತು. ಆಗ ದಕ್ಷಿಣ ಕರ್ನಾಟಕದ ಬಹುಪಾಲು ಭಾಗ ಮೈಸೂರು ಸಂಸ್ಥಾನವಾಗಿತ್ತು. ಸಂಸ್ಥಾನದ ಶ್ರೇಯೋಭಿವೃದ್ಧಿಗಾಗಿ ಈ ಎಲ್ಲ ಸ್ಥಳಗಳಲ್ಲೂ ವಿವಿಧ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಎಲ್ಲಕ್ಕಿಂತ ಪ್ರಮುಖವಾಗಿ ನೀರಾವರಿ ಕ್ಷೇತ್ರದಲ್ಲಿ ಬಹಳಷ್ಟು ಕೆಲಸಗಳು ನಡೆದಿವೆ.

ಕೃಷಿಕರಿಗೆ ಅನುಕೂಲ ಮಾಡಿಕೊಡಲು, ನೀರಾವರಿ ವ್ಯವಸ್ಥೆಯನ್ನು ಸುಸಜ್ಜಿತಗೊಳಿಸಲು ಕನ್ನಂಬಾಡಿ ಮಾತ್ರವಲ್ಲದೆ, ವಿವಿಧ ಪ್ರದೇಶಗಳಲ್ಲಿ ವಿವಿಧ ನಾಲೆಗಳನ್ನು ನಿರ್ಮಿಸಲಾಗಿದೆ. ಹುಲ್ಲಹಳ್ಳಿ ಅಣೆಕಟ್ಟೆ, ಬಂಗಾರದೊಡ್ಡಿ ನಾಲೆ… ಹೀಗೆ ವಿವಿಧ ನಾಲೆಗಳನ್ನು ನಿರ್ಮಾಣ ಮಾಡಿ ಆಯಾ ಭಾಗದ ರೈತರಿಗೆ ಅನುಕೂಲ ಮಾಡಿಕೊಟ್ಟ ಕೀರ್ತಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಹಾಗೂ ಅವರ ತಂಡಕ್ಕೆ ಸಲ್ಲುತ್ತದೆ. ಇಂತಹ ಸ್ಥಳಗಳ ಪೈಕಿ ಪ್ರಮುಖ ಸ್ಥಳ ಎಂದರೆ ಮಂಡ್ಯದ ಹುಲಿಕೆರೆಯಲ್ಲಿರುವ ಸುರಂಗ ನಾಲೆ.

ಮಂಡ್ಯ ಜಿಲ್ಲೆಯಿಂದ ಹದಿನಾಲ್ಕು ಕಿ.ಮೀ. ಒಳಗೆ ಹೋದರೆ ಹುಲಿಕೆರೆಯ ಬಳಿ ಈ ಸುರಂಗವನ್ನು ನಾವು ನೋಡಬಹುದು. ಇದರ ಮೊಟ್ಟಮೊದಲ ವಿಶೇಷತೆ ಏನೆಂದರೆ ಇದು ಏಷ್ಯಾ ಖಂಡದ ಮೊದಲ ಸುರಂಗ ನಾಲೆ. ನೀರಾವರಿಯ ಪರಿಕಲ್ಪನೆಯೇ ಇಲ್ಲದಿದ್ದ ಕಾಲದಲ್ಲಿ ಇಂತಹ ಇಂಜಿನಿಯ ರಿಂಗ್ ಅದ್ಭುತ ನಿರ್ಮಾಣವಾಗಿತ್ತು ಎಂಬುದೇ ಅತ್ಯಂತ ಆಶ್ಚರ್ಯಕರ ಸಂಗತಿ. ಅದರಲ್ಲೂ ಇಂತಹದ್ದೊಂದು ಯೋಜನೆ ನಮ್ಮ ಭಾಗದಲ್ಲಿ ನಡೆದಿತ್ತು ಎಂದರೆ ಅದು ಅತ್ಯಂತ ಹೆಮ್ಮೆಯ ಸಂಗತಿ.

ಮಂಡ್ಯದ ಹುಲಿಕೆರೆಯಿಂದ ಒಂದೂವರೆ ಕಿ.ಮೀ. ದೂರ ಬಂದರೆ ಈ ಸುರಂಗವನ್ನು ನಾವು ತಲುಪಬಹುದು. ಈ ಸುರಂಗ ನಾಲೆ ೧೫ ಅಡಿ ಅಗಲ ಇದ್ದು, ೧೮ ಅಡಿ ಉದ್ದ ಇದೆ. ೧೯೨೮ರ ಜೂನ್‌ನಲ್ಲಿ ಇದರ ನಿರ್ಮಾಣ ಆರಂಭವಾಗುತ್ತದೆ. ನಿರ್ಮಾಣ ಕಾರ್ಯ ಮುಗಿಯುವುದು ೧೯೩೧ರ ಅಕ್ಟೋಬರ್‌ನಲ್ಲಿ. ಅಂದರೆ ಭರ್ತಿ ಮೂರು ವರ್ಷ ನಾಲ್ಕು ತಿಂಗಳುಗಳ ಕಾಲ ಈ ಸುರಂಗ ನಾಲೆಯ ನಿರ್ಮಾಣ ಕೆಲಸ ನಡೆದಿದೆ.

ಇಲ್ಲಿ ಪುರಾತನ ಕಾಲದ ದೊಡ್ಡದೊಂದು ಫಲಕ ಇದ್ದು, ಅದರಲ್ಲಿ ಈ ನಾಲೆ ಬಗೆಗಿನ ಎಲ್ಲ ವಿವರಗಳನ್ನೂ ನಮೂದಿಸಲಾಗಿದೆ. ಹೆಚ್ಚೂಕಡಿಮೆ ನಲವತ್ತೈದು ಲಕ್ಷ ರೂ. ವೆಚ್ಚದಲ್ಲಿ ಇದರ ನಿರ್ಮಾಣ ಕೆಲಸ ನಡೆಯಿತು ಎನ್ನುತ್ತಾರೆ ಇತಿಹಾಸ ತಜ್ಞರು. ಇಂತಹ ಕಡಿದಾದ ಸ್ಥಳದಲ್ಲಿ ದೊಡ್ಡ ಬಂಡೆಗಳನ್ನು ಕೊರೆದು ಸುರಂಗ ನಿರ್ಮಾಣ ಮಾಡುವುದು ಸುಲಭದ ಕೆಲಸವಲ್ಲ. ಇಂತಹ ಕಷ್ಟದ ಕೆಲಸವನ್ನು ಮಾಡಿರುವ ಕೀರ್ತಿ ಸಾವಿರಾರು ಕಾರ್ಮಿಕರಿಗೆ ಸಲ್ಲುತ್ತದೆ. ಆಗಿನ ಕಾಲದಲ್ಲೇ ಲಂಡನ್‌ನಿಂದ ವಿಶೇಷವಾದ ಯಂತ್ರಗಳನ್ನು ಇದಕ್ಕೆಂದೇ ತರಿಸಿಕೊಂಡು ಇಲ್ಲಿ ಸುರಂಗ ಕೊರೆಯಲಾಗಿದೆ.

ಅಲ್ಲದೆ ಇದಕ್ಕಾಗಿ ಕೆಲಸ ಮಾಡಿದವರೆಲ್ಲಾ ಮಹಾರಾಷ್ಟ್ರ, ಪಂಜಾಬ್ ಹಾಗೂ ಆಫ್ಘಾನಿಸ್ತಾನದ ಕಾರ್ಮಿಕರು. ಜೊತೆಗೆ ಸುರಕಿ ಗಾರೆಯನ್ನು ಸಾಗಿಸಲು ಕತ್ತೆಗಳನ್ನು ಸಹ ಬಳಸಿಕೊಳ್ಳಲಾಗಿತ್ತಂತೆ. ಈ ಸುರಂಗ ನಿರ್ಮಾಣ ಮಾಡುವ ವೇಳೆಗಾಗಲೇ ಹಲವರು ತಮ್ಮ ಜೀವವನ್ನೂ ತ್ಯಜಿಸಿದ್ದರು ಎನ್ನುತ್ತದೆ ಇತಿಹಾಸ.

ಇಲ್ಲಿರುವ ಬಳಪದ ಕಲ್ಲಿನ ಫಲಕದಲ್ಲಿ ನಾಲೆಯ ಬಗೆಗಿನ ಎಲ್ಲ ವಿವರಗಳನ್ನೂ ನಮೂದಿಸಲಾಗಿದೆ. ಈ ಸುರಂಗ ಕಟ್ಟಿದ್ದು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಾಲದಲ್ಲಿ. ಆಗ ದಿವಾನರಾಗಿದ್ದವರು ಸರ್ ಮಿರ್ಜಾ ಇಸ್ಮಾಯಿಲ್ ಅವರು. ಈ ಸುರಂಗದ ನಿರ್ಮಾಣಕ್ಕೆ ಚೀಫ್ ಇಂಜಿನಿಯರ್ ಆಗಿ ಕೆಲಸ ಮಾಡಿದವರು ಕೆ.ಆರ್.ಶೇಷಾಚಾರ್ ಅವರು.

ಇದರೊಂದಿಗೆ ವಿವಿಧ ಮೇಧಾವಿಗಳಾದ ಎಸ್.ಶ್ರೀನಿವಾಸ ಅಯ್ಯಂಗಾರ್, ಕೃಷ್ಣಸ್ವಾಮಿ ಅಯ್ಯಂಗಾರ್, ರಾಮರಾವ್, ನರಸಿಂಹಯ್ಯ ಅಯ್ಯಂಗಾರ್, ಕೃಷ್ಣಮೂರ್ತಿ, ಲಕ್ಷ್ಮಣರಾವ್ ಮುಂತಾದವರ ಹೆಸರು ಇಲ್ಲಿ ಉಲ್ಲೇಖವಾಗಿದೆ. ಇಷ್ಟೂ ಕಾಮಗಾರಿ ನಡೆದಿರುವುದು ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರ ಮೇಲುಸ್ತುವಾರಿಯಲ್ಲಿ. ಈ ಫಲಕದ ಮೇಲೆ ಹಸಿರು ಬಣ್ಣದಲ್ಲಿ ಗಂಡಭೇರುಂಡ ಚಿಹ್ನೆ ಸಹ ಇದೆ. ಈ ಚಿಹ್ನೆ ಆಗಿನ ಕಾಲದ ರಾಜಲಾಂಛನ.

ಅಂದಹಾಗೆ ಈ ಸುರಂಗ ವಿಸಿ ನಾಲೆ ಅಥವಾ ವಿಶ್ವೇಶ್ವರಯ್ಯ ಚಾನೆಲ್‌ನ ಭಾಗ. ಕನ್ನಂಬಾಡಿ ಕಟ್ಟೆಯಿಂದ ಇಲ್ಲಿಗೆ ಕಾವೇರಿ ನೀರು ಹರಿದು ಬರುತ್ತದೆ. ಈ ಸುರಂಗ ದಾಟಿಹೋಗುವ ನೀರು ಹುಲಿಕೆರೆಯಿಂದ ಮುಂದೆ ಹೋಗಿ ಎರಡು ಭಾಗ ಆಗುತ್ತದೆ. ಒಂದು ಭಾಗ ಮದ್ದೂರು ಶಾಖೆಯಾದರೆ, ಮತ್ತೊಂದು ಭಾಗ ಕಾವೇರಿ ಶಾಖೆ. ಮದ್ದೂರು ಭಾಗ ಮುಂದೆ ಶಿಂಷಾ, ಕೌಡ್ಲೆ, ಕೆರಗೋಡು, ಹೊಸ ಮದ್ದೂರು ಶಾಖೆಗಳಾಗಿ ೧.೬ ಲಕ್ಷ ಎಕರೆಗಳಿಗೆ ನೀರು ಪೂರೈಕೆ ಮಾಡಿದರೆ ಕಾವೇರಿ ಶಾಖೆ ಹೆಬ್ಬಗವಾಡಿ, ತುರುಗನೂರು ಉಪಶಾಖೆಗಳಾಗಿ ಮೂವತ್ತಾರು ಸಾವಿರ ಎಕರೆಗಳಿಗೆ ನೀರು ಪೂರೈಕೆ ಮಾಡುತ್ತದೆ. ಸ್ಥಳೀಯರು ಹೇಳುವ ಪ್ರಕಾರ ೧,೮೦೦ ಕ್ಯೂಸೆಕ್ಸ್ ನೀರು ಇಲ್ಲಿಗೆ ಬರುತ್ತದೆ.

ಈ ಸುರಂಗದ ಒಳಗೆ ಹೋಗಲು ಹಲವಾರು ದಾರಿಗಳಿವೆ. ಸುರಂಗದಿಂದ ಮೇಲೆ ಬಂದು ನೋಡಿದರೆ ಹುಲುಸಾದ ಗದ್ದೆಗಳನ್ನು ನೋಡಬಹುದು. ಇವೆಲ್ಲವೂ ಜೀವಂತವಾಗಿರುವುದು ಇದೇ ಸುರಂಗ ನಾಲೆಯಿಂದ. ಜಲಾಶಯದ ಉತ್ತರ ಭಾಗದಲ್ಲಿ ನದಿ ಪಾತ್ರದಿಂದ ೬೦ ಅಡಿ ಎತ್ತರದಲ್ಲಿ ಕವಾಟಗಳನ್ನು ಇರಿಸಿ ಈ ನಾಲೆಗೆ ನೀರು ಧುಮುಕುವಂತೆ ಮಾಡಲಾಗಿದೆ. ಆರು ಅಡಿ ಅಗಲ, ಹನ್ನೆರಡು ಅಡಿ ಎತ್ತರ ಇರುವ ಮೂರು ತೂಬುಗಳ ಮೂಲಕ ಜಲಾಶಯದ ನೀರು ನಾಲೆಗೆ ಹರಿಯುತ್ತದೆ. ಈ ನಾಲೆ ಮೊದಲ ಇಪ್ಪತ್ತಾರು ಮೈಲಿ ದೂರ ಹಳ್ಳ, ದಿಣ್ಣೆ ದಾಟಿ ಮಂಡ್ಯದ ಹುಲಿಕೆರೆಯಲ್ಲಿ ಸುರಂಗ ಪ್ರವೇಶಿಸುತ್ತದೆ. ಆಶ್ಚರ್ಯವೆಂದರೆ ಈ ಸುರಂಗ ನೆಲದಿಂದ ನೂರು ಅಡಿ ಆಳದಲ್ಲಿದೆ. ನೀರು ಈ ಸುರಂಗದಲ್ಲಿ ೨.೮ ಕಿ.ಮೀ. ದೂರ ಕ್ರಮಿಸಿ ಇನ್ನೊಂದು ಭಾಗದಲ್ಲಿ ಹೊರಬಂದು ಮುಂದೆ ಹರಿಯುತ್ತದೆ.

ಈ ಸುರಂಗವನ್ನು ಕಬ್ಬಿಣ, ಸೈಜುಗಲ್ಲು, ಸುರಕಿ ಗಾರೆಯಿಂದ ನಿರ್ಮಿಸಲಾಗಿದೆ. ಸುರಂಗದ ಒಳಗೆ ಸಡಿಲ ಇರುವ ಸ್ಥಳಗಳಲ್ಲಿ ಕಮಾನು ರಚಿಸಿ ಸುರಂಗ ಕುಸಿಯದಂತೆ ಜಾಗ್ರತೆ ವಹಿಸಲಾಗಿದೆ. ಇದು ಶಿಥಿಲಾವಸ್ಥೆಯಲ್ಲಿದ್ದ ಕಾರಣ ಒಮ್ಮೆ ೧೯೯೦ರಲ್ಲಿ ಹಾಗೂ ಮತ್ತೊಮ್ಮೆ ೨೦೧೨ರಲ್ಲಿ ಇದರ ದುರಸ್ತಿ ಕಾರ್ಯ ನಡೆದಿತ್ತು. ಇತಿಹಾಸ ಪ್ರಸಿದ್ಧವಾದ ಈ ಸ್ಥಳವನ್ನು ಉಳಿಸಿಕೊಳ್ಳಲು ಸ್ಥಳೀಯರು ಹೋರಾಟ ಮಾಡಿ ಸರ್ಕಾರದ ವತಿಯಿಂದ ರಿಪೇರಿ ಕೆಲಸ ಮಾಡಿಸಿದ್ದರು.

ಇಲ್ಲಿನ ರೈತರ ಜೀವಾಳವಾಗಿರುವ ಈ ಸುರಂಗ ನಾಲೆಯನ್ನು ಈಗಲೂ ಇಲ್ಲಿನ ನೂರಾರು ರೈತರು ಕಾಪಾಡುತ್ತಾ ಬಂದಿದ್ದಾರೆ. ಸುರಂಗದ ಒಳಗಿರುವ ಪೈಪ್‌ಗಳನ್ನು ನೋಡಿಕೊಳ್ಳುವುದು, ಒಳಗೆ ಏನೂ ಅಚಾತುರ್ಯವಾಗದಂತೆ ಕಾಪಾಡುವುದು ಇವರ ಕೆಲಸ. ನೂರು ವರ್ಷಗಳ ಹಿಂದೆಯೇ ನಿರ್ಮಾಣವಾಗಿರುವ ಈ ಇಂಜಿನಿಯರಿಂಗ್ ಅದ್ಭುತ.

ಹಲವಾರು ಜನರನ್ನು ಈಗಲೂ ತನ್ನತ್ತ ಸೆಳೆಯುತ್ತಿದೆ. ಈ ಸುರಂಗದ ರಚನೆ, ಇದು ಕಾರ್ಯನಿರ್ವಹಿಸುವ ರೀತಿಯನ್ನು ತಿಳಿದುಕೊಳ್ಳಲು ಅದೆಷ್ಟೋ ಜನರು ಇಲ್ಲಿಗೆ ಬಂದು ಹೋಗಿದ್ದಾರೆ. ಇದರ ಬಗ್ಗೆ ಲೇಖನಗಳು ಪ್ರಕಟವಾಗಿವೆ, ಕಾರ್ಯಕ್ರಮಗಳು ಪ್ರಸಾರವಾಗಿವೆ. ಒಂದು ಶತಮಾನದ ಇತಿಹಾಸ ಹೊಂದಿರುವ ಈ ಸ್ಥಳ ಈಗಲೂ ಎಲ್ಲರ ಮನೆಮಾತಾಗಿದೆ ಎಂದರೆ, ಇದನ್ನು ನಿರ್ಮಾಣ ಮಾಡಿದವರ ಪರಿಶ್ರಮದ ಪ್ರತಿಫಲ ಇದು. ಇಲ್ಲಿಗೆ ಪ್ರವಾಸಿಗರು, ಸಾಮಾನ್ಯ ಜನರು ಎಲ್ಲರೂ ಬರಬಹುದು. ಸು

ರಂಗ ನಾಲೆಯನ್ನು ನೋಡಿ ಖುಷಿಪಡಬಹುದು. ನೀರು ಕಡಿಮೆ ಇದ್ದರೆ ನೀರಿನಲ್ಲಿ ಆಟವಾಡಬಹುದು. ಆದರೆ ನೀರಿನ ಮಟ್ಟ ಹೆಚ್ಚಾಗಿರುವಾಗ, ಅಂದರೆ ಮಳೆಗಾಲದಲ್ಲಿ ಇಲ್ಲಿ ಹೋಗುವವರು ಜಾಗೃತವಾಗಿರಬೇಕು. ಆಗ ನೀರಿನ ಪ್ರಮಾಣ ಹೆಚ್ಚಾಗುವ ಕಾರಣ ಅಪಾಯವಾಗುವ ಸಾಧ್ಯತೆ ಇರುತ್ತದೆ. ಇನ್ನು ಇಲ್ಲಿಗೆ ಸಂಶೋಧನೆಗೆಂದು ಬರುವವರು ಸುರಂಗದ ಒಳಗೂ ಹೋಗುತ್ತಾರೆ. ಅಲ್ಲಿ ನೂರಾರು ಪೈಪ್‌ಗಳು ನಡುವೆ, ಬಾವಲಿಗಳನ್ನು ಭೇಟಿ ಮಾಡಿ ಆನಂತರ ಮುಂದುವರಿಯಬೇಕು.

ಸುರಂಗದಲ್ಲಿ ಸುತ್ತಾಡಿದ ನಂತರ ಹೊರಬಂದರೆ ಹಸಿರು ಹುಲ್ಲುಗಾವಲುಗಳು, ಗದ್ದೆಗಳು ಕಾಣುತ್ತವೆ. ಮಂಡ್ಯದ ಪ್ರಶಾಂತ ವಾತಾವರಣ, ಗ್ರಾಮಸ್ಥರ ಆತ್ಮೀಯ ಮಾತು ಎಲ್ಲವನ್ನೂ ಅನುಭವಿಸಬಹುದು. ಈ ಸುರಂಗದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿಯಬೇಕೆಂದರೆ ಇಲ್ಲಿನ ಸ್ಥಳೀಯರನ್ನು ಕೇಳಬಹುದು. ಇಲ್ಲಿರುವ ರೈತರು, ಗ್ರಾಮಸ್ಥರಿಗೆ ಈ ನಾಲೆಯ ಬಗ್ಗೆ ಹೆಚ್ಚಿನ ಮಾಹಿತಿ ಇದೆ. ಆಸಕ್ತಿಯಿಂದ ಬಂದವರಿಗೆ ಪೂರ್ಣ ಮಾಹಿತಿ ಪಡೆಯಲು ಎಲ್ಲ ರೀತಿಯ ವ್ಯವಸ್ಥೆಗಳೂ ಇಲ್ಲಿವೆ.

ವಿಜ್ಞಾನ, ತಂತ್ರಜ್ಞಾನದ ಪರಿಕಲ್ಪನೆಯೇ ಇಲ್ಲದ ಆ ಕಾಲದಲ್ಲಿ ಇಷ್ಟು ಅದ್ಭುತವಾಗಿ ಸುರಂಗ ನಾಲೆಯೊಂದನ್ನು ನಿರ್ಮಾಣ ಮಾಡಿರುವುದು, ಆ ಸುರಂಗ ಒಂದು ಶತಮಾನವಾದರೂ ಸುಸಜ್ಜಿತವಾಗಿರುವುದು, ಈಗಲೂ ಇಲ್ಲಿನ ರೈತರು ಆಸ್ಥೆಯಿಂದ ಇದನ್ನು ನೋಡಿಕೊಳ್ಳುತ್ತಿರುವುದು… ಇವೆಲ್ಲವೂ ನಮ್ಮ ನಾಡಿನ ಭವ್ಯ ಇತಿಹಾಸದ ಕುರುಹುಗಳು. ಇಂತಹ ಇನ್ನೂ ಅದೆಷ್ಟು ನಿಗೂಢ ಸ್ಥಳಗಳಿವೆಯೋ… ಯಾರಿಗೂ ತಿಳಿಯದು. ಇದನ್ನು ಹುಡುಕುವುದು, ಕಾಪಾಡಿಕೊಳ್ಳುವುದು ಹಾಗೂ ನಮ್ಮ ನೆಲದ ಇತಿಹಾಸವನ್ನು ಪ್ರಚುರಪಡಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ.

” ನೂರು ವರ್ಷಗಳ ಹಿಂದೆಯೇ ನಿರ್ಮಾಣವಾಗಿರುವ ಈ ಇಂಜಿನಿಯರಿಂಗ್ ಅದ್ಭುತ ಹಲವಾರು ಜನರನ್ನು ಈಗಲೂತನ್ನತ್ತ ಸೆಳೆಯುತ್ತಿದೆ. ಈ ಸುರಂಗದ , ಇದು ಕಾರ್ಯನಿರ್ವಹಿಸುವ ರೀತಿಯನ್ನುತಿಳಿದುಕೊಳ್ಳಲು ಅದೆಷ್ಟೋ ಜನರು ಇಲ್ಲಿಗೆ ಬಂದು ಹೋಗುತ್ತಿದ್ದಾರೆ”

-ಸಿರಿ ಮೈಸೂರು

ಆಂದೋಲನ ಡೆಸ್ಕ್

Recent Posts

ಸರ್ಕಾರಿ ಶಾಲೆಗಳಿಗೆ ಗುಡ್‌ನ್ಯೂಸ್‌ : ಶಾಲಾ ಕೊಠಡಿ ದುರಸ್ಥಿಗೆ ರೂ.360 ಕೋಟಿ ಬಿಡುಗಡೆ

ಬೆಳಗಾವಿ : ರಾಜ್ಯದಲ್ಲಿ ಹೊಸ ಶಾಲಾ ಕೊಠಡಿಗಳ ನಿರ್ಮಾಣಕ್ಕೆ 360 ಕೋಟಿ ರೂ. ಬಿಡುಗಡೆ ಮಾಡಲಾಗುವುದು ಎಂದು ಶಾಲಾ ಶಿಕ್ಷಣ…

13 mins ago

ಹೊಸ ತಾಲ್ಲೂಕುಗಳಿಗೆ ಸದ್ಯಕ್ಕಿಲ್ಲ ಆಸ್ಪತ್ರೆ ಭಾಗ್ಯ

ಬೆಳಗಾವಿ : ರಾಜ್ಯದಲ್ಲಿ ಹೊಸ ತಾಲ್ಲೂಕುಗಳಲ್ಲಿ ಸದ್ಯಕ್ಕೆ ತಾಲ್ಲೂಕು ಮಟ್ಟದ ಆಸ್ಪತ್ರೆಗಳ ಮಂಜೂರಾತಿ ಇಲ್ಲ ಎಂದು ಆರೋಗ್ಯ ಮತ್ತು ಕುಟುಂಬ…

18 mins ago

ಸಾಮಾಜಿಕ ಬಹಿಷ್ಕಾರ ಹಾಕಿದ್ರೆ 3 ವರ್ಷ ಜೈಲು ಜೊತೆಗೆ ದಂಡ : ಮಸೂದೆ ಮಂಡಿಸಿದ ರಾಜ್ಯ ಸರ್ಕಾರ

ಬೆಳಗಾವಿ : ಅನಿಷ್ಟ ಪದ್ಧತಿಯಾಗಿ ಇನ್ನೂ ಉಳಿದುಕೊಂಡಿರುವ ಸಾಮಾಜಿಕ ಬಹಿಷ್ಕಾರ ನಿಷೇಧಕ್ಕೆ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಈ…

26 mins ago

ಹನಗೂಡಿನಲ್ಲಿ ಹುಲಿ ದರ್ಶನ : ಭೀಮನೊಂದಿಗೆ ಕೂಂಬಿಂಗ್‌ ಆರಂಭ

ಹುಣಸೂರು : ಹನಗೋಡು ಹೋಬಳಿ ನಾಗಮಂಗಲ ಮತ್ತು ಮುತ್ತುರಾಯನಹೊಸಹಳ್ಳಿ ಭಾಗದಲ್ಲಿ ಹುಲಿ ಕಾಣಿಸಿಕೊಂಡಿದ್ದು, ಈ ಸಂಬಂಧ ಅರಣ್ಯ ಇಲಾಖೆ ಬುಧವಾರ…

33 mins ago

ಬೋನಿಗೆ ಬಿದ್ದ ಗಂಡು ಚಿರತೆ : ಗ್ರಾಮಸ್ಥರ ಆತಂಕ ದೂರ

ತಿ.ನರಸೀಪುರ : ತಾಲ್ಲೂಕಿನ ಬೂದಹಳ್ಳಿ ಗ್ರಾಮದಲ್ಲಿ ಗುರುವಾರ 6 ವರ್ಷದ ಗಂಡು ಚಿರತೆಯೊಂದು ಅರಣ್ಯಾಧಿಕಾರಿಗಳು ಇಟ್ಟಿದ್ದ ಬೋನಿಗೆ ಸಿಕ್ಕಿ ಬಿದ್ದಿದೆ.…

37 mins ago

ಗೋವಾ ಅವಘಡ : ಭಾರತದಿಂದ ಪರಾರಿಯಾದ ಲುತ್ರಾ ಸೋದರರು ಥಾಯ್ಲೆಂಡ್‌ನಲ್ಲಿ ವಶಕ್ಕೆ

ಪಣಜಿ : ಗೋವಾ ಬೆಂಕಿ ಅವಘಡ ಪ್ರಕರಣದಲ್ಲಿ ಭಾರತದಿಂದ ಪರಾರಿಯಾಗಿದ್ದ ನೈಟ್ ಕ್ಲಬ್ ಮಾಲೀಕರಾದ ಸೌರಭ್ ಲುತ್ರಾ ಮತ್ತು ಗೌರವ್…

1 hour ago