ಹಾಡು ಪಾಡು

ದಸರಾ ಎಂಬ ದರ್ಶನ ಮತ್ತು ಪ್ರದರ್ಶನ

ದಸರಾ ಬರಿಯ ಧಾರ್ಮಿಕ ಆಚರಣೆ ಅಲ್ಲ, ಅದು ಸಾಮಾಜಿಕ ಆಚರಣೆಯೂ ಹೌದು. ಅದೊಂದು ಪ್ರಜಾಹಬ್ಬ ಮತ್ತು ನಾಡಹಬ್ಬ. ನಾಡಿನಲ್ಲಿ ಇರುವ ಎಲ್ಲ ಪ್ರಜೆಗಳ ಹಬ್ಬ. Abbe Dubois ಎಂಬ ಲೇಖಕನ ವಿವರಣೆಗಳಲ್ಲಿ ಅದು ಹಿಂದೂಗಳ ಹಬ್ಬವಾಗಿದ್ದಂತೆಯೇ ಮಹಮ್ಮದೀಯರ ಹಬ್ಬವೂ ಆಗಿತ್ತು ಎನ್ನುವುದಕ್ಕೆ ಪುರಾವೆಗಳು ದೊರಕುತ್ತವೆ. ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನರ ಕಾಲದಲ್ಲಿ (೧೭೬೧-೯೯) ಕೂಡ ಶ್ರೀರಂಗಪಟ್ಟಣದಲ್ಲಿ ದಸರಾ ನಡೆದ ಚಾರಿತ್ರಿಕ ಮಾಹಿತಿಯೂ ಇದೆ.

ದಸರಾ ಕೇವಲ ರಾಜಮನೆತನದ ಸಂಭ್ರಮವಲ್ಲ; ಅದು ಪ್ರಜೆಗಳ ಸಡಗರವೂ ಹೌದು. ತಮ್ಮನ್ನು ಕಾಪಾಡುವ ಒಡೆಯನನ್ನು ಕಾಣದಿರುವ ಸಾಮಾನ್ಯ ಮಂದಿಗೆ ಅದು ಆತ ಕಾಣಸಿಗುವ ಕಾಲ. ಹೊರಗೆ ಬರುವುದು ಆತನಷ್ಟೇ ಅಲ್ಲ, ಅರಮನೆಯ ವೈಭವವನ್ನೂ ಹೊರಗೆ ತಂದು ಪ್ರಜೆಗಳ ದರ್ಶನಕ್ಕೆ ಒಡ್ಡಲಾಗುತ್ತದೆ. ಅಲ್ಲಿ ರಾಜದರ್ಶನದಂತೆ ರಾಜಶಕ್ತಿಯ ಪ್ರದರ್ಶನವೂ ಇರಬೇಕು.

ದಸರಾ ಇಹಪರಗಳ ವಿಜೃಂಭಣೆಯೇ. ಸೂರ್ಯ ತಪ್ಪದೆ ಹುಟ್ಟುತ್ತಾನೆ, ಇಂದ್ರ ಮಂದಿಯನ್ನು ಶತ್ರುಗಳಿಂದ ಕಾಪಾಡುವುದರ ಜೊತೆಗೆ ಮಳೆಯನ್ನೂ ಸುರಿಸುತ್ತಾನೆ, ಭೂಮಿ-ಚೈತನ್ಯ ಬೆಳೆಯುತ್ತದೆ, ಸಮೃದ್ಧಿ ಹರಡುತ್ತದೆ, ಪ್ರಜೆಗಳು ತೆರಿಗೆ ಕಟ್ಟುತ್ತಾರೆ, ಕಪ್ಪ ಕಾಣಿಕೆ ನೀಡುತ್ತಾರೆ, ಹಾಗೆಯೇ ರಾಜನಾದವನು ಸಮಾಹಿತ ಚಿತ್ತದಿಂದ ತನ್ನ ಎಲ್ಲ ಪ್ರಜೆಗಳನ್ನೂ ಕಾಪಾಡಬೇಕು. ಜನರೊಂದಿಗೆ ಬೆರೆತು ಎಲ್ಲರಿಗೆ ಎಲ್ಲದಕೆ ಕೃತಜ್ಞತೆಯನ್ನು ಅರ್ಪಿಸಿ ಪ್ರಜೆಗಳನ್ನು ಹರಸಬೇಕು.

ಇಂದ್ರನಿಗೆ ಪೂಜೆ ಸಲ್ಲಿಸುವ ಕಾಲವಾಗಿ ಪ್ರಾರಂಭವಾದ ದಸರಾ ಕ್ರಮೇಣ ರಾಮನ ಗೆಲುವಿನ ಮತ್ತು ಪಾಂಡವರ ವಿಜಯದ ದಿನವಾಗಿಯೂ ಗುರುತಿಸಲ್ಪಟ್ಟಿತು. ಹಾಗೆಯೇ ವಿಶ್ವದ ಕಣಕಣದಲ್ಲೂ ನೆಲೆಸಿರುವ ಚೈತನ್ಯದ ಅಧಿದೇವತೆ ಶಕ್ತಿಯ ವಿಜೃಂಭಣೆಯೆಂದೂ ಆರಾಧಿಸಲ್ಪಟ್ಟಿತು.

ಧರ್ಮಶಾಸ್ತ್ರಗಳ ಪ್ರಕಾರ ವರ್ಷದಲ್ಲಿ ಕನಿಷ್ಠ ಎರಡು ಬಾರಿ ರಾಜರು ಮತ್ತು ಪ್ರಜೆಗಳಿಬ್ಬರೂ ನವರಾತ್ರಿಯನ್ನು ಆಚರಿಸಬೇಕು. ಮೊದಲು ವಸಂತ ಕಾಲದ ನಡು ಮಾರ್ಚ್-ನಡು ಮೇ ಕಾಲದಲ್ಲಿ. ಎರಡನೆಯದು ಶರತ್ಕಾಲದ ನಡು ಸೆಪ್ಟೆಂಬರ್-ನಡು ನವೆಂಬರ್ ಕಾಲದಲ್ಲಿ. ಮೊದಲನೆಯದು ರಾಮನವಮಿ; ಎರಡನೆಯದು ದುರ್ಗೆ ಅಥವಾ ವಿಷ್ಣು ಅಧಿದೇವತೆಗಳಾಗಿರುವ ಶರನ್ನವರಾತ್ರಿ.

ದಸರಾ ಅಥವಾ ದಶ-ಹರ ಆಶ್ವಯುಜ ಶುದ್ಧ ಮಾಸದ ಮೊದಲ ಒಂಬತ್ತು ರಾತ್ರಿಗಳ (ನವರಾತ್ರಿ) ಹಬ್ಬದ ನಂತರದ ಹತ್ತನೆಯ ದಿನದ ಉತ್ಸವವೂ ಸೇರಿದಂತೆ ಹತ್ತು ದಿನಗಳ ಹಬ್ಬ. ದುರ್ಗೆ ಇದರ ಅಽದೇವತೆ. ಈ ಆಚರಣೆ ಪ್ರಾರಂಭವಾಗಿದ್ದು ಹದಿನೈದು ಹದಿನಾರನೆಯ ಶತಮಾನಗಳ ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ. ಬೇಸಿಗೆಯ ಮುನ್ನಿನ ವಸಂತ ಕಾಲದಲ್ಲಿ ಮತ್ತು ಚಳಿಗಾಲದ ಮುಂಚೆಯ ಶರತ್ಕಾಲದಲ್ಲಿ ಹೆಚ್ಚು ಮಂದಿ ಕಾಯಿಲೆ ಬೀಳುತ್ತಾರೆ ಮತ್ತು ಸಾವಿಗೀಡಾಗುತ್ತಾರೆ ಎನ್ನುವುದು ನಂಬಿಕೆಯಷ್ಟೇ ವಾಸ್ತವವೂ ಹೌದು. ಅದಕ್ಕೆ ಅವುಗಳನ್ನು ಯಮದಂಷ್ಟ್ರಕಾಲ ಅಂತಲೂ ಕರೆಯಲಾಗುತ್ತದೆ. ಇವತ್ತಿಗೂ ಪಿಂಚಣಿದಾರರು ಅಕ್ಟೋಬರ್-ಡಿಸೆಂಬರ್ ಕಾಲದಲ್ಲಿ ತಾವು ಬದುಕಿರುವುದಕ್ಕೆ ಪುರಾವೆ ಒದಗಿಸಬೇಕು ಎಂದು ಸರ್ಕಾರದ ಕರಾರೇ ಇದೆಯಲ್ಲ?

ಅಂತಹ ಕಾಲದ ಕೇಡನ್ನು ದೂರವಿರಿಸಲು ಅಥವಾ ಪಾರಾಗಲು ರಾಜರು ಮತ್ತು ಪ್ರಜೆಗಳಿಬ್ಬರೂ ಕೆಲವು ವ್ರತ ನಿಯಮಗಳನ್ನು ಪಾಲಿಸುತ್ತಾ, ಯಮ-ಸ್ವಮೃ ದುರ್ಗೆ ಅಥವಾ ಯಮ-ರಿಪು ವಿಷ್ಣುವನ್ನು ಪೂಜಿಸಬೇಕು ಎನ್ನುವುದು ಸಂಪ್ರದಾಯ. ಮಹಾನವಮಿ ಬರುವುದು ಶರತ್ಕಾಲದಲ್ಲಿ.

ದಸರಾ ಆಚರಣೆಯ ಮೊದಲ ದಿನಗಳಲ್ಲಿ ವಿಷ್ಣುವಿನ ಕರಣವಾದ ಇಂದ್ರನಿಗೆ ಹೆಚ್ಚು ಪ್ರಾಶಸ್ತ್ಯವಿತ್ತು. ಸರಿಯಾದ ಕಾಲಕ್ಕೆ ಮಳೆ ಬಂದು, ಬೆಳೆ ಬೆಳೆದು ಬದುಕು ಸುಭಿಕ್ಷವಾಗಿರಲು ಇಂದ್ರನನ್ನು ಪೂಜಿಸಬೇಕು ಎನ್ನುವುದು ಪದ್ಧತಿ. ಮಹಾಭಾರತದಲ್ಲಿ ಹೇಳಿರುವ ಪ್ರಕಾರ ಇಂದ್ರ ರಾಜನಾದಾಗ ಮೋಡಗಳು ಧಾರಾಕಾರವಾಗಿ ಮಳೆ ಸುರಿಸಿ ಎಲ್ಲೆಲ್ಲೂ ಸುಭಿಕ್ಷ ಹರಡಿತ್ತು. ಈ ಸಮೃದ್ಧಿಯನ್ನು ಕಂಡ ಇಂದ್ರ ಸಂತುಷ್ಟನಾಗಿದ್ದ.

ಮೈಸೂರಿನ ದಸರಾದಲ್ಲಿ ಈ ಇಂದ್ರಾರ್ಚನೆಯ ಅಂಶಗಳು ಇಂದಿಗೂ ಮಹತ್ವವನ್ನು ಪಡೆದುಕೊಂಡಿವೆ. ರಾಜಕುದುರೆ (ಸಮುದ್ರಮಂಥನದ ಕಾಲದಲ್ಲಿ ಹೊಮ್ಮಿದ ಶ್ವೇತದೇಹ ಮತ್ತು ಕಪ್ಪು ಬಾಲವುಳ್ಳ ಉಚ್ಚೆ ಶ್ರವಸ್ಸು); ರಾಜಾನೆ (ಸ್ವರ್ಗದ ಬಾಗಿಲಲ್ಲಿ ನಿಂತಿರುವ ಐರಾವತ); ರಾಜಸಿಂಹಾಸನ (ಅಂಬಾರಿ); ಇಂದ್ರನ ರಥ (ದೇವರಥ); ಆಯುಧ ಪೂಜೆ; ಗೋಪೂಜೆ ಇತ್ಯಾದಿಗಳು ಇಲ್ಲಿಯ ರಾಜ ಇಂದ್ರನಿಗೆ ಸಲ್ಲಿಸುವ ಕೃತಜ್ಞತೆಯ ರೂಪ. ಅತಿವೃಷ್ಟಿ, ಅನಾವೃಷ್ಟಿಗಳನ್ನು ತಡೆದು ಸಕಾಲದಲ್ಲಿ ತಕ್ಕಷ್ಟು ಮಳೆ ಸುರಿಸಬೇಕಾದ ಇಂದ್ರ ಅತ್ಯಂತ ಪೂಜನೀಯ.

ದಸರಾ ಆಚರಣೆಯ ವಿಸ್ತೃತ ರೂಪುರೇಷೆಗಳನ್ನು ಹಾಕಿದವರು ರಾಜ ಒಡೆಯರ್ (೧೫೭೮-೧೬೧೭) ಎಂದು ಹೇಳಲಾಗುತ್ತದೆ. ೧೬೧೦ರಲ್ಲಿ ವಿಜಯನಗರ ಸಾಮ್ರಾಜ್ಯದ ತಿರುಮಲ ದೇವರಾಯರಿಂದ ರತ್ನಸಿಂಹಾಸನವನ್ನು ಪಡೆದುಕೊಂಡ ನಂತರ ಅವರ ರಾಜಧಾನಿಯಾಗಿದ್ದ ಶ್ರೀರಂಗಪಟ್ಟಣದಲ್ಲಿ ನಡೆಯುವ ದಸರಾದ ಪ್ರತಿಯೊಂದು ದಿನದ ಕಾರ್ಯಕ್ರಮವನ್ನು ರೂಪಿಸಿದ್ದು, ಈ ಆಚರಣೆ ಮೊದಲನೆಯ ಕಂಠೀರವ ನರಸರಾಜ ಒಡೆಯರ್ (೧೬೩೮-೫೯) ಮತ್ತು ಅವರ ನಂತರದವರ ಕಾಲದಲ್ಲಿ ಜನಪ್ರಿಯತೆಯನ್ನು ಪಡೆಯಿತು.

ಸುಮಾರು ೧೬೪೮ರಲ್ಲಿ ಬಂದ ಕಂಠೀರವ ವಿಜಯಂ ಕೃತಿಯಲ್ಲಿ ನರಸರಾಜ ಒಡೆಯರ ಆಳ್ವಿಕೆಯ ತುತ್ತ ತುದಿಯ ಕಾಲದ ೧೬೪೭ರ ವರ್ಷದ ದಸರಾ ಆಚರಣೆಯ ವಿವರಗಳು ಸಚಿತ್ರರೂಪದಲ್ಲಿಯೂ ದೊರಕುತ್ತವೆ. ಅಲ್ಲಿ ಬೇರೆಲ್ಲಾ ವಿವರಗಳ ಜೊತೆಯಲ್ಲಿ ರಾಜಧಾನಿಯ ಸಡಗರದ ಸಿದ್ಧತೆ, ರಾಜಮನೆತನದವರು ನಡೆಸಿದ ಚಂಡಿಕಾ ಹೋಮ, ಒಂಬತ್ತು ದಿನಗಳ ರಾಜ ದರ್ಬಾರು, ವಿಜಯದಶಮಿಯಂದು ನಡೆದ ಮೆರವಣಿಗೆ ಕೂಡ ಇವೆ.

೧೮೦೫ರಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರು ದಸರಾ ವೈಭವವನ್ನು ವೀಕ್ಷಿಸಲು ಯುರೋಪಿಯನ್ ಪ್ರವಾಸಿಗರಿಗೆ ಅನುವು ಮಾಡಿಕೊಟ್ಟರು. ೧೮೧೪ರಲ್ಲಿ ಅವರಿಗೋಸ್ಕರ ಒಂದು ದಿನದ ವಿಶೇಷ ದರ್ಬಾರು ನಡೆಯುವ ಹಾಗೂ ಕಾಣಿಕೆಗಳನ್ನು ಕೊಡುವ ಮತ್ತು ಪಡೆಯುವ ರೂಢಿ ಜಾರಿಗೆ ಬಂತು.

ದಸರಾದಂತಹ ಹಬ್ಬಕ್ಕೆ ಆಳವಾದ ಪ್ರಾಕೃತಿಕ, ಧಾರ್ಮಿಕ ಮತ್ತು ಸಾಮಾಜಿಕ ಅರ್ಥಗಳಿವೆ. ದಸರಾ ಒಂದು ಪ್ರದೇಶದೊಳಗಿನ ಚಾರಿತ್ರಿಕ ಮತ್ತು ಸಾಂಸ್ಕೃತಿಕ ನೆನಪನ್ನು ವರ್ಷಾನುವರ್ಷ ರಂಗದ ಮೇಲೆ ತಂದು ಪ್ರದರ್ಶಿಸುವ ಒಂದು ಅವಕಾಶ. ಅಲ್ಲಿ ರಾಜ ಪ್ರಭುತ್ವದ ನೆನಪು, ಜನ ಸಾಮಾನ್ಯರ ಬದುಕಿನ ಶೈಲಿಯ ನೆನಪು, ಆರ್ಥಿಕ ಸಾಧನೆಗಳ ನೆನಪು, ಕನ್ನಡ ನಾಡಿನ ಸಮುದಾಯಗಳ ಸಾಂಸ್ಕೃತಿಕ ನೆನಪು ಇತ್ಯಾದಿ ಇತಿಹಾಸ ಇರುವ ಹಾಗೆಯೇ ಪುರಾಣವೂ ಇರುತ್ತದೆ. ಭಾರತದಲ್ಲಿ ನಮಗೆ ಚೆನ್ನಾಗಿಳಿದಿರುವ ಹಾಗೆ ಇತಿಹಾಸ ಮತ್ತು ಪುರಾಣದ ನಡುವಿನ ಗೆರೆ ಬಲು ತೆಳುವಾಗಿರುತ್ತದೆ.

ಬ್ರಿಟಿಷ್ ನೇರ ಆಳ್ವಿಕೆಯ ಬದಲು ಪರೋಕ್ಷ ಆಡಳಿತದ ಮಾದರಿಗೆ ಒಡ್ಡಿಕೊಂಡಿದ್ದ ಮೈಸೂರಿನಂತಹ ರಾಜಪ್ರಭುತ್ವಗಳು ಆರ್ಥಿಕವಾಗಿ ತಮ್ಮ ಪ್ರಗತಿಪರ ಶಕ್ತಿಯನ್ನು ಮತ್ತು ಭಿನ್ನತೆಯನ್ನು ಪ್ರದರ್ಶಿಸಿಕೊಳ್ಳಲು ದಸರಾ ಒಂದು ಅವಕಾಶವಾಗಿತ್ತು. ಕಳೆದ ಶತಮಾನದಲ್ಲಿ ಅದು ತಳೆದ ಹಲವಾರು ರೂಪಗಳು ಚರಿತ್ರೆಯ ಹಾದಿಯಲ್ಲಿ ಅನಿವಾರ್ಯವಿರಬಹುದು. ಮೊದಮೊದಲು ವಿಶೇಷ ಬ್ರಿಟಿಷ್ ಅತಿಥಿಗಳು ನೋಡಲೆಂದು ಏರ್ಪಡಿಸಿದ್ದ ಪ್ರದರ್ಶನ ಕ್ರಮೇಣ ಜನಸಾಮಾನ್ಯರೂ ನೋಡಲೆಂದು ಬದಲಾಗಿದ್ದು ಅಂಥವೇ ಆದ ಐತಿಹಾಸಿಕ ಕಾರಣಗಳಿಗೆ.

ಬ್ರಿಟಿಷರ ಕಾಲದಲ್ಲಿ ರಾಜಮನೆತನಕ್ಕೆ ಇದ್ದ ಶಕ್ತಿಗೆ ಅರೆಕೊರೆಗಳು ಮೂಡಿದ್ದಿರಬಹುದು. ಹಾಗೆಯೇ ಇಂದಿನ ಪ್ರಜಾಪ್ರಭುತ್ವದ ಕಾಲದಲ್ಲಿ ಅದು ಕೇವಲ ನೆನಪಾಗಿ ಉಳಿದಿರಬಹುದು. ಆದರೂ ವಿದೇಶೀಯ ಪ್ರವಾಸಿಗರು ಈ ‘ಪೂರ್ವದ ಬೆರಗನ್ನು’ ವೀಕ್ಷಿಸಲು ಹಿಂಡುಹಿಂಡಾಗಿ ಬಂದಿಳಿಯುತ್ತಾರೆ. ಕನ್ನಡದ ಮತ್ತು ಭಾರತೀಯ ಮಂದಿ ಕಣ್ಣು ಕೋರೈಸುವ ರಾಜವೈಭವದ ಸಂಕೇತಗಳನ್ನು ಕಣ್ಣಾರೆ ನೋಡಲು ಮುಗಿಬೀಳುತ್ತಾರೆ. ಒಟ್ಟಿನಲ್ಲಿ ಮೈಸೂರಿನ ಮಂದಿ ಆ ತಿಂಗಳ ಮಟ್ಟಿಗೆ ಮನೆಯಲ್ಲಿ, ಬೀದಿಯಲ್ಲಿ, ಮನದಲ್ಲಿ ಸಂಭ್ರಮಿಸುವ ಕಾಲ.

” ದಸರಾದಂತಹ ಹಬ್ಬಕ್ಕೆ ಆಳವಾದ ಪ್ರಾಕೃತಿಕ, ಧಾರ್ಮಿಕ ಮತ್ತು ಸಾಮಾಜಿಕ ಅರ್ಥಗಳಿವೆ. ದಸರಾ ಒಂದು ಪ್ರದೇಶದೊಳಗಿನ ಚಾರಿತ್ರಿಕ ಮತ್ತು ಸಾಂಸ್ಕೃತಿಕ ನೆನಪನ್ನು ವರ್ಷಾನುವರ್ಷ ರಂಗದ ಮೇಲೆ ತಂದು ಪ್ರದರ್ಶಿಸುವ ಒಂದು ಅವಕಾಶ ”

-ಸುಕನ್ಯಾ ಕನಾರಳ್ಳಿ

ಆಂದೋಲನ ಡೆಸ್ಕ್

Recent Posts

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯಕ್ಕೆ 2 ತಿಂಗಳಲ್ಲಿ ದಾಖಲೆಯ ಆದಾಯ

ದಕ್ಷಿಣ ಕನ್ನಡ: ದಕ್ಷಿಣ ಭಾರತದ ನಾಗರಾಧನೆಯ ಹೆಸರಾಂತ ಪುಣ್ಯಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣು ದೇವಸ್ಥಾನದ ಆದಾಯ 2025ರ ನವೆಂಬರ್‌ ಹಾಗೂ…

1 hour ago

ಕಾಂಗ್ರೆಸ್ ಸರ್ಕಾರ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದೆ: ವಿಜಯೇಂದ್ರ ಆಕ್ರೋಶ

ಬೆಂಗಳೂರು: ಕಾಂಗ್ರೆಸ್ ಸರ್ಕಾರ ತನ್ನ ವೈಫಲ್ಯಗಳನ್ನು ಮುಚ್ಚಿಹಾಕಲು ಹಾಗೂ ದ್ವೇಷ ರಾಜಕಾರಣ ಮಾಡಲು ಸದನವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ರಾಜ್ಯ…

1 hour ago

ಜಾರ್ಖಂಡ್‌ನಲ್ಲಿ ಭದ್ರತಾ ಪಡೆಗಳಿಂದ ಎನ್‌ಕೌಂಟರ್:‌ 10 ಮಂದಿ ನಕ್ಸಲರ ಹತ್ಯೆ

ಜಾರ್ಖಂಡ್:‌ ಜಾರ್ಖಂಡ್‌ನ ಸಾರಂಡಾ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳು ಹಾಗೂ ಮಾವೋವಾದಿಗಳ ನಡುವಿನ ಗುಂಡಿನ ಚಕಮಕಿಯಲ್ಲಿ 10 ಮಂದಿ ನಕ್ಸಲರು…

2 hours ago

ಚಾಮುಂಡಿಬೆಟ್ಟದಲ್ಲಿ ನಡೆಯುತ್ತಿರುವ ಕಾಮಗಾರಿ ವಿರೋಧಿಸಿ ಮುಂದುವರಿದ ಪ್ರತಿಭಟನೆ

ಮೈಸೂರು: ಚಾಮುಂಡಿ ಬೆಟ್ಟದಲ್ಲಿ ನಡೆಯುತ್ತಿರುವ ಅವೈಜ್ಞಾನಿಕ ತೋಡಿಕೆ ಮತ್ತು ನಿರ್ಮಾಣ ಕಾರ್ಯಗಳ ವಿರುದ್ಧ ಮೈಸೂರಿನ ಹಲವು ನಾಯಕರು, ಚಿಂತಿತ ನಾಗರಿಕರು…

2 hours ago

ಸದನದಲ್ಲಿ ಅಗೌರವ ತೋರಿದ ಶಾಸಕರ ವಿರುದ್ಧ ಕ್ರಮ ಆಗಲಿ: ಆರ್.‌ಅಶೋಕ್‌

ಬೆಂಗಳೂರು: ಇಂದು ಕರಾಳ ದಿನ. ಕರಾಳ ರೀತಿಯಲ್ಲಿ ಈ ಅಧಿವೇಶನವನ್ನು ಕಾಂಗ್ರೆಸ್‌ ನಡೆಸಿದೆ ಎಂದು ವಿಪಕ್ಷ ನಾಯಕ ಆರ್.‌ಅಶೋಕ್‌ ಕಿಡಿಕಾರಿದ್ದಾರೆ.…

2 hours ago

ಜನವರಿ.28ರಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ

ಬೆಂಗಳೂರು: ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣ ಹಾಗೂ ಸದನದಲ್ಲಿ ಚರ್ಚಿಸಬಹುದಾದ ವಿಷಯಗಳಿಗೆ ಸಂಬಂಧಿಸಿದಂತೆ ಸಮಾಲೋಚನೆ ನಡೆಸಲು ಜನವರಿ.28ರಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ…

3 hours ago