ದೇವಕೀ ಧರ್ಮಿಷ್ಠೆ
ಮೆಜಾಕ್ ಟಲ್ಬಾ (Majok Tulba) ಸೌತ್ ಸುಡಾನ್ ಮೂಲದ ಆಸ್ಟ್ರೇಲಿಯಾದ ಲೇಖಕ, ಕವಿ ಮತ್ತು ಚಲನಚಿತ್ರ ನಿರ್ಮಾಪಕ. ಅವನ ಬದುಕು ಮತ್ತು ಬರಹ ಕಡು ಕಠಿಣ ಪರಿಸ್ಥಿತಿಗಳಿಂದ ಹೊರಹೊಮ್ಮಿದ ಚೈತನ್ಯ ಮತ್ತು ಸೃಜನಶೀಲತೆಯ ಪ್ರತಿಬಿಂಬವಾಗಿದೆ.
ದೀರ್ಘಕಾಲದ ಅಂತರ್ಯುದ್ಧದ ಸಮಯದಲ್ಲಿ ಸುಡಾನ್‌ನಲ್ಲಿ ಜನಿಸಿದ ಮಜಾಕ್ ಬಹಳ ಚಿಕ್ಕ ವಯಸ್ಸಿನಲ್ಲೇ ಯುದ್ಧ, ಸ್ಥಳಾಂತರ ಮತ್ತು ಅನಿಶ್ಚಿತತೆಯ ಛಾಯೆಯಲ್ಲಿ ಬದುಕು ದೂಡಬೇಕಾಯಿತು.
ಹುಡುಗನಾಗಿದ್ದಾಗ ಅವನನು ಬಾಲ ಸೈನಿಕನನ್ನಾಗಿ ಆಯ್ಕೆ ಮಾಡಲಾಗಿತ್ತು. ಆದರೆ ‘ಏಕೆ – ೪೭ ಗಿಂತ ಒಂದು ಇಂಚು ಉದ್ದ ಕಡಿಮೆ ಇದ್ದಿದ್ದರಿಂದ ಬಚಾವಾದೆ, ಮತ್ತಿದು ನನ್ನ ಬದುಕಿನ ದಿಕ್ಕನ್ನೇ ಬದಲಿಸಿದ ವಿಚಿತ್ರ ಘಟನೆ’ ಎನ್ನುತ್ತಾನೆ ಮೆಜಾಕ್. ಸಾಮಾನ್ಯ ಅನಿಸುವ ಈ ಘಟನೆ ಮುಂದೊಂದು ದಿನ ಯುದ್ಧ ಭೂಮಿಯಿಂದ ಬಹುದೂರದಲ್ಲಿ ಬದುಕು ಕಟ್ಟಿಕೊಳ್ಳಲು ಆತನಿಗೆ ಸಹಾಯ ಮಾಡಿತು.
ನೈಲ್ ನದಿಯ ದಡದಲ್ಲಿದ್ದ ಅವನ ಹಳ್ಳಿ ಪೆಕಾಂಗ್‌ಗೆ ಬೆಂಕಿ ಹಚ್ಚಿ, ಮಹಿಳೆಯರನ್ನು ಅತ್ಯಾಚಾರಕ್ಕೊಳಪಡಿಸಿ ಮಕ್ಕಳು ಮರಿಗಳನ್ನು ಬಡಿದು ಗುಂಡಿಟ್ಟು ಕೊಲ್ಲುವುದನ್ನು ನೋಡುನೋಡುತ್ತಲೇ ಜೀವ ಉಳಿಸಿಕೊಳ್ಳಲು ಸೌತ್ ಸುಡಾನ್‌ನಿಂದ ಓಡಲು ಆರಂಭಿಸಿದಾಗ ಅವನಿಗೆ ಕೇವಲ ಒಂಬತ್ತು ವರ್ಷ ವಯಸ್ಸು.
ಯುದ್ಧ ಮತ್ತು ಹಿಂಸೆಯಿಂದ ಪಾರಾಗಲು ಬಯಸಿದ ಸುಡಾನ್‌ನ ನೂರಾರು ಜನರಂತೆ ಮೆಜಾಕ್ ಕೂಡ ವಲಸೆಯ ಯಾತನೆಗಳನ್ನು ಅನುಭವಿಸಿದ. ಪೆಕಾಂಗ್‌ಗೆ ಬೆಂಕಿ ಬಿದ್ದಾಗ ಕುಟುಂಬದವರಿಂದ ಬೇರ್ಪಟ್ಟಿದ್ದ ಅವನು ಒಬ್ಬಂಟಿಯಾಗಿ ಪಯಣಿಸಬೇಕಾಯಿತು. ಭಯ, ಹಸಿವು ಮತ್ತು ತೀವ್ರ ಬಳಲಿಕೆಯ ಜೊತೆ ಜೊತೆಗೆ ಜೀವ ಉಳಿಸಿಕೊಳ್ಳುವ ಅವನ ಪ್ರಯಾಣ ಒಂದು ನಿರಾಶ್ರಿತರ ಶಿಬಿರದಿಂದ ಮತ್ತೊಂದಕ್ಕೆ ಭವಿಷ್ಯದ ಗುರಿಯಿಲ್ಲದೆ ಸಾಗುತ್ತಿತ್ತು. ಕೆಲವು ಸಲ ತಲೆಯ ಮೇಲೆ ಸೂರು ಸಿಗದೆ ಹಗಲಿನ ಸುಡುವ ಬಿಸಿಲು ಮತ್ತು ರಾತ್ರಿಯ ಕೊರೆವ ಚಳಿಯನ್ನು ಎದುರಿಸಬೇಕಿತ್ತು. ಊಟ, ಕುಡಿಯಲು ನೀರು ಸಿಗುತ್ತಿದ್ದದ್ದು ಅಪರೂಪ, ಜೊತೆಗೆ ಕಿಕ್ಕಿರಿದು ತುಂಬಿದ ಶಿಬಿರಗಳಲ್ಲಿ ಸಾಮಾನ್ಯವಾದ ಜೀವ ಹಿಂಡುವ ಕಾಯಿಲೆಗಳು ಬದುಕುವ ಆಸೆಯನ್ನು ಕಮರಿಸುತ್ತಿದ್ದ ದಿನಗಳವು. ಹೀಗೆ ಏಳು ವರ್ಷಗಳ ಕಾಲ ನೆಲೆಯಿಲ್ಲದೆ ಆತ ಅಲೆಯುತ್ತಿದ್ದ. ಅಂತಹ ದಿನಗಳಲ್ಲಿ ಕಥೆಗಳು ಮತ್ತು ಹಾಡುಗಳು ಸುತ್ತಲಿನ ನಿರಾಶೆಯಿಂದ ಪಾರಾಗಲು ಇದ್ದ ಏಕೈಕ ಆಶ್ರಯವಾಗಿದ್ದವು ಎಂದು ಮೆಜಾಕ್ ನೆನಪಿಸಿಕೊಳ್ಳುತ್ತಾನೆ.
ಕಡೆಗೆ ಆಸ್ಟ್ರೇಲಿಯಾದಲ್ಲಿ ಅವನಿಗೆ ಆಶ್ರಯ ಸಿಗುತ್ತದೆ. ಆಸ್ಟ್ರೇಲಿಯ ತಲುಪಿದಾಗ ಕೃಶವಾದ ದೇಹ, ಕ್ಷೋಭಿತ ಮನಸ್ಸು, ಯುದ್ಧ ಮತ್ತು ಶಿಬಿರದ ಭಯಾನಕ ನೆನಪುಗಳನ್ನು ಬಿಟ್ಟರೆ ತನ್ನ ಬಳಿ ಮತ್ತೇನೂ ಇರಲಿಲ್ಲ ಅನ್ನುತ್ತಾನೆ ಮೆಜಾಕ್. ಪುನರ್ವಸತಿಯ ಪ್ರಕ್ರಿಯೆಯು ಸುಲಭದ್ದಾಗಿರಲಿಲ್ಲ. ಭಾಷೆಯ ತೊಡಕು, ಸಾಂಸ್ಕ ತಿಕ ಭಿನ್ನತೆ ಮತ್ತು ಹೊಸ ನೆಲದಲ್ಲಿ ಅಸ್ಮಿತೆಯನ್ನು ಮತ್ತೆ ಕಟ್ಟಿಕೊಳ್ಳಬೇಕಾದ ಹೋರಾಟ ಎಲ್ಲವೂ ಸೇರಿ ದೊಡ್ಡ ಭಾರವೊಂದು ಅವನ ಬೆನ್ನಿಗೆ ಬಿದ್ದಿತ್ತು. ಆದರೂ, ಮೆಜಾಕ್ ಬದುಕುಳಿಯುವ ಸಾಧನವಾಗಿ, ಆತ್ಮಾಭಿವ್ಯಕ್ತಿಯ ಮಾರ್ಗವಾಗಿ ಮತ್ತು ಮರೆತುಹೋಗುವಿಕೆಯ ವಿರುದ್ಧ ಪ್ರತಿರೋಧದ ಸಾಧನವಾಗಿ ಕಥನ ಕಲೆಯತ್ತ ತಿರುಗುತ್ತಾನೆ. ಸ್ಥಳಾಂತರದ ತನ್ನ ವೈಯಕ್ತಿಕ ಮತ್ತು ಭಯಾನಕ ಇತಿಹಾಸವನ್ನು ಸೃಜನಶೀಲ ಕಲೆಗೆ ಅಡಿಪಾಯ ಮಾಡಿಕೊಳ್ಳುತ್ತಾನೆ.
ಮಜಾಕ್ ನ ಮೊದಲ ಕಾದಂಬರಿ ‘Beneath the Darkening Sky’, ಅವನು ಒಂದು ಇಂಚು ಉದ್ದ ಇದ್ದಿದ್ದರೆ ಅವನ ಸ್ಥಿತಿ ಏನಾಗುತ್ತಿತ್ತು ಎಂಬುದನ್ನು ಕಟ್ಟಿಕೊಡುತ್ತದೆ. ಯುದ್ಧದ ಭೀಕರತೆಹಾಗೂ ಬಾಲ ಸೈನಿಕರ ಜೀವನದ ಮನಕಲುಕುವ ಈ ಕಥನ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯಿತು. ಸ್ವ ಅನುಭವಗಳಿಂದ ಕಟ್ಟಲ್ಪಟ್ಟ ಈಕಾದಂಬರಿ ಮೌನಗೊಳಿಸಿದ ಕತೆಗಳಿಗೆ ದನಿಯಾಗುತ್ತದೆ. ಅದರಲ್ಲೂ ವಿಶೇಷವಾಗಿ ಯುದ್ಧಭೂಮಿಗಳಲ್ಲಿ ನಿರ್ದಯವಾಗಿ ಬಾಲ್ಯ ಕಸಿಯಲ್ಪಟ್ಟ ಮಕ್ಕಳ ಕಥೆಗಳನ್ನು ಪರಿಚಯಿಸುತ್ತದೆ. ತನ್ನ ಕಾವ್ಯ ಕಥನ ಮತ್ತು ಭಾವನಾತ್ಮಕ ಶಕ್ತಿಯ ಕಾರಣಕ್ಕೆ ವಿಮರ್ಶಕರ ಮೆಚ್ಚುಗೆ ಪಡೆದ ಈ ಕಾದಂಬರಿ ಮೆಜಾಕ್‌ನನ್ನು ನಿರಾಶ್ರಿತ ಮತ್ತು ಡಯಾಸ್ಪೋರಿಕ್ ಸಾಹಿತ್ಯದ ಗಟ್ಟಿ ದನಿಯಾಗಿ ಪರಿಚಯಿಸಿತು.
ಅವನ ಎರಡನೇ ಕಾದಂಬರಿ When Elephants Fight, ಅವನದೇ ಬದುಕಿನ ನೇರ ಅನುಭವಗಳ ಜೊತೆ ರಚಿತವಾಗಿದೆ. ಯುದ್ಧ, ಸ್ಥಳಾಂತರ ಮತ್ತು ಹಿಂಸೆ ಮನಸ್ಸಿನ ಮೇಲೆ ಶಾಶ್ವತವಾಗಿ ಉಳಿಸಿಬಿಡುವ ಗಾಯಗಳ ಬಗೆ ಹೇಳುತ್ತಲೇ ಮನುಷ್ಯನ ಪುಟಿದೇಳುವ ಸಾಮರ್ಥ್ಯದ ಬಗ್ಗೆಯೂ ಈ ಕಾದಂಬರಿ ಮಾತನಾಡುತ್ತದೆ. “ಆನೆಗಳು ಹೊಡೆದಾಡಿಕೊಂಡರೆ ನಾಶವಾಗುವುದು ಮಾತ್ರ ಹುಲ್ಲು” ಎಂಬ ರೂಪಕದ ಮೂಲಕ ಬಲಿಷ್ಠರ ಜಗಳಕ್ಕೆ ನಲುಗುತ್ತಿರುವ ಸಾಮಾನ್ಯ ಜನರ ಜೀವನವನ್ನು ಇದು ಅನಾವರಣಗೊಳಿಸುತ್ತದೆ.
ಈಗ ಮೆಜಾಕ್ ತನ್ನ ಕುಟುಂಬದ ಜೊತೆ ಪಶ್ಚಿಮ ಸಿಡ್ನಿಯಲ್ಲಿ ನೆಲೆಸಿದ್ದಾನೆ. ಸತತವಾಗಿ ನಿರಾಶ್ರಿತರ ಕತೆಗಳಿಗೆ ಧ್ವನಿ ತುಂಬುತ್ತಾ ಅವುಗಳನ್ನು ಮಾನವೀಯತೆಯಲ್ಲಿ ನೆಲೆಗೊಳಿಸುವ ಕಥನಗಳನ್ನು ರೂಪಿಸುತ್ತಾನೆ. ಜೊತೆಗೆ ಸುಡಾನ್ ಕೇರ್ ಎಂಬ ಸಂಸ್ಥೆಯನ್ನು ನಿರಾಶ್ರಿತರಿಗೆಂದೇ ಕಟ್ಟಿ ಮುನ್ನಡೆಸುತ್ತಿದ್ದಾನೆ.
” ಏಳು ವರ್ಷಗಳ ಕಾಲ ನೆಲೆಯಿಲ್ಲದೆ ಆತ ಅಲೆಯುತ್ತಿದ್ದ. ಅಂತಹ ದಿನಗಳಲ್ಲಿ ಕಥೆಗಳು ಮತ್ತು ಹಾಡುಗಳು ಸುತ್ತಲಿನ ನಿರಾಶೆಯಿಂದ ಪಾರಾಗಲು ಇದ್ದ ಏಕೈಕ ಆಶ್ರಯವಾಗಿದ್ದವು ಎಂದು ಮೆಜಾಕ್ ನೆನಪಿಸಿಕೊಳ್ಳುತ್ತಾನೆ.”
ನವದೆಹಲಿ: ದೇಶಾದ್ಯಂತ ಇಂಡಿಗೋ ವಿಮಾನದ ಹಾರಾಟದಲ್ಲಿ ಭಾರೀ ವ್ಯತ್ಯಯ ಉಂಟಾದ ಬೆನ್ನಲ್ಲೇ ಕೇಂದ್ರ ನಾಗರಿಕ ವಿಮಾನಯಾನ ನಿರ್ದೇಶನಾಲಯ ಪೈಲಟ್‌ಗಳ ರಜಾ…
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆಯಾಗಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ…
ನವದೆಹಲಿ: ಕಾಲಾತೀತ, ಮೌಲ್ಯಾಧರಿತ ಆದರ್ಶಗಳನ್ನು ಒಳಗೊಂಡಿರುವ ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲು ಪಠ್ಯದಲ್ಲಿ ಸೇರಿಸಬೇಕು ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು…
ನಂಜನಗೂಡು: ಸೋಲು, ಗೆಲುವಿಗಿಂತ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ ಎಂದು ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು ಹೇಳಿದರು. ನಂಜನಗೂಡು ನಗರದ ಕಾಲೇಜೊಂದರಲ್ಲಿ ಆಯೋಜಿಸಿದ್ದ…
ಮಂಡ್ಯ: ಮಂಡ್ಯ, ಮೈಸೂರು, ಕೊಡಗು, ಚಾಮರಾಜನಗರ ಭಾಗದ ರೈತರನ್ನು ಆರ್ಥಿಕವಾಗಿ ಅಭಿವೃದ್ಧಿ ಮಾಡಲು ಮಂಡ್ಯದ ವಿ.ಸಿಫಾರಂನಲ್ಲಿ ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾನಿಲಯವನ್ನು…
ಬೆಂಗಳೂರು: ಆರ್.ಅಶೋಕ್ ಅವರನ್ನು ವಿಪಕ್ಷ ನಾಯಕನ ಸ್ಥಾನದಿಂದ ಇಳಿಸದೇ ಹೋದರೆ ಬಿಜೆಪಿ ಶಾಶ್ವತವಾಗಿ ವಿಪಕ್ಷದಲ್ಲಿ ಇರುತ್ತದೆ ಎಂದು ಸಚಿವ ಎಂ.ಬಿ.ಪಾಟೀಲ್…