ಸ್ವಾಮಿ ಪೊನ್ನಾಚಿ
ಕೆ.ಆರ್.ಸರ್ಕಲ್ಲಿನ ಪೊಲೀಸು ಆ ಪೆಂಡಾಲ್ ಕೆಳಗಿನಿಂದ ಆಚೆ ನೂಕುವವರೆಗೂ ದಸರಾ ಕಾರ್ಯಕ್ರಮ ಹತ್ತಿರದಿಂದ ನೋಡಲು ಒಂದು ಪಾಸ್ ಕೊಡ್ತಾರೆ. ಅದನ್ನ ತಗೊಂಡು ಹೋಗಬೇಕು ಎಂದು ಗೊತ್ತೇ ಇರಲಿಲ್ಲ. ಆಗ ತಾನೆ ಮೈಸೂರಿನ ವಸಂತ ಮಹಲಿನಲ್ಲಿ ವ್ಯಾಸಂಗ ಮಾಡಲು ಸೇರಿದ್ದೆವು.
ದಸರಾ ಸಿದ್ಧತೆ ನಡೆಯುತ್ತಿದ್ದುದನ್ನು ಹೋಗಿ ಬರುವಾಗಲೆಲ್ಲ ಗಮನಿಸುತ್ತ ಈ ಸಲ ದಸರಾವನ್ನು ನೇರವಾಗಿ ನೋಡಿ ಕಣ್ತುಂಬಿಕೊಳ್ಳುವ ಎಂದುಕೊಂಡಿದ್ದೆವು. ಅದರಂತೆ ಜಂಬೂ ಸವಾರಿಯ ದಿನ ಸಿಟಿ ಬಸ್ ಸ್ಟಾಂಡ್ ಅಕ್ಕಪಕ್ಕ ಹಾಕಿರುವ ಪೆಂಡಾಲ್ ಕೆಳಗೆ ಮೆಲ್ಲನೆ ನುಸುಳಿ ನಿಂತುಕೊಂಡಿದ್ದೆವು.
ಅದು ಪಾಸ್ ತಗೊಂಡು ಬಂದವರಿಗಾಗಿ ಮಾಡಿದ ವ್ಯವಸ್ಥೆ ಆಗಿತ್ತು. ನಮಗೆ ಗೊತ್ತಿರಲಿಲ್ಲ. ಜಾಗ ಖಾಲಿ ಸಿಕ್ತು ಅಂತ ಹೋಗಿ ಕಂಬಿ ಹಿಡಿದು ನಿಂತುಕೊಂಡಿದ್ದೆವು. ಹಾಗೇ ರೌಂಡು ಬಂದ ಪೊಲೀಸಪ್ಪನಿಗೆ ನಮ್ಮ ಮೇಲೆ ಅನುಮಾನ ಬಂದು ಪಾಸ್ ಎಲ್ಲಿ ಎಂದು ಕೇಳಿದ. ಯಾವ ಪಾಸು ಎಂದೆವು. ‘ಹೇ ಅಷ್ಟೂ ಗೊತ್ತಾಗಲ್ವಾ ಇದು ಪಾಸ್ ಇರೋರಿಗೆ ಮಾತ್ರ. ನಿಮ್ಮಂಥವರಿಗಲ್ಲ.ನಡೀರಿ ಆಚೆ’ ಎಂದು ದಬ್ಬಿದರು. ಅದನ್ನೇನು ನಾವು ಅವಮಾನ ಅಂದುಕೊಳ್ಳಲಿಲ್ಲ. ಆಮೇಲೆ ಆ ಪೊಲೀಸಪ್ಪನನ್ನೇ ‘ನಾವು ಪಾಸಿಲ್ಲದವರು ಹೇಗೆ ನೋಡೋದು ಹಂಗಾದ್ರೆ?’ ಎಂದು ಕೇಳಿದೆವು.
‘ಸಯ್ಯಾಜಿರಾವ್ ರಸ್ತೆ ಕಡೆ ಎಲ್ಲಾದ್ರೂ ಜಾಗ ಇದ್ರೆ ನಿಂತ್ಕೊಳ್ಳಿ ಹೋಗಿ, ಅಲ್ಲೇ ಹೋಗೋದು ಜಂಬೂಸವಾರಿ’ ಎಂದ. ಮತ್ತೆ ನಮ್ಮ ಸವಾರಿ ಸಯ್ಯಾಜಿರಾವ್ ರಸ್ತೆ ಕಡೆ ಹೊರಟಿತು. ಆಯುರ್ವೇದ ಆಸ್ಪತ್ರೆಯ ಪಕ್ಕ ಇದ್ದ ಒಂದು ಮನೆಯ ಕಾಪೌಂಡ್ ಬಳಿ ಕುಳಿತುಕೊಳ್ಳುವುದಕ್ಕೆ ನೆರಳು ಇದೆ, ಸವಾರಿ ಬರೋದು ಎಷ್ಟೋತ್ತಾಗುತ್ತೋ ಎಂದು ಹತ್ತಿ ಆಯಕಟ್ಟು ನೋಡಿ ಕುಳಿತುಕೊಂಡೆವು. ನಾವು ಕುಳಿತದ್ದು ನೋಡಿ ನಮ್ಮಂತೆಯೇ ಮಂದಿ ಬಂದು ಇಡೀ ಕಾಂಪೌಂಡ್ ಆವರಿಸಿ ಕುಳಿತುಕೊಂಡರು.
ಸುಮ್ಮನೆ ಕುಳಿತಿದ್ದರೆ ಪರವಾಗಿಲ್ಲ. ಕೆಲವರು ಜೋರಾಗಿ ಹರಟೆ ಹೊಡೆದರೆ ಮತ್ತೆ ಕೆಲವರು ಸಿಗರೇಟು ಸೇದಿ ಹೊಗೆ ಬಿಡುತಿದ್ದರು. ಕೆಳಗಿನ ಗಲಾಟೆ ಕೇಳಿಸಿಕೊಂಡು ಮೇಲಿನ ಮಹಡಿಯಲ್ಲಿ ಇದ್ದ ವೃದ್ಧರೊಬ್ಬರು ‘ಗಲಾಟೆ ಮಾಡಬೇಡಿ ಸುಮ್ಮನೆ ನೋಡಿ’ ಎಂದು ವಾರ್ನ್ ಮಾಡಿದರು. ಸ್ವಲ್ಪ ಹೊತ್ತು ಸೈಲೆಂಟ್ ಆದ ಮಂದಿ ಮತ್ತೆ ಜೋರು ಗಲಾಟೆ ಶುರು ಮಾಡಿದರು. ಆತ ಮತ್ತೆ ಬಂದು ‘ಸುಮ್ಮನೆ ನೋಡಿ’ ಎಂದ. ಅಷ್ಟೊತ್ತಿಗೆ ಮೆರವಣಿಗೆ ಈ ಕಡೆಯೇ ಬರುತ್ತಿದ್ದುದು ನಮ್ಮ ಕುತೂಹಲ ಕೆರಳಿಸಿ ಜೋರಾಗಿ ಹೋ ಎಂದು ಕಿರುಚಿದೆವು. ಮೇಲಿನ ಮಹಡಿಯ ತಾತನಿಗೆ ಕೋಪ ಬಂದು ನೀರಿನ ಸಂಪಿನ ಮೋಟಾರ್ ಆನ್ ಮಾಡಿ ಟ್ಯಾಂಕ್ ತುಂಬಿದಾಗ ಬರುವ ಓವರ್ ಫ್ಲೋ ನೀರನ್ನು ನಮ್ಮ ಕಡೆಗೇ ತಿರುಗಿಸಿಬಿಟ್ಟ.
ಮೆರವಣಿಗೆ ಕಾತರದಲ್ಲಿ ಇದ್ದ ನಾವು‘ಮಟಮಟ ಮಧ್ಯಾಹ್ನ ಮಳೆ ಬಂತಲ್ಲ ಛೇ!’ ಎಂದು ನೋಡಿದರೆ ಅದು ತಾತಪ್ಪನ ಕಿತಾಪತಿಯಾಗಿತ್ತು. ಕಾಂಪೌಂಡಿನಿಂದ ಜೋರಾಗಿ ನೆಗೆಯಲು ಕೂಡ ಕಷ್ಟ. ಹೇಗೋ ಹೊಟ್ಟೆ ತರಚಿಕೊಂಡು ಕೆಳಕ್ಕೆ ಇಳಿದರೆ ಮುಂದೆ ಜನಸಂದಣಿ ನಡುವೆ ಏನೂ ಕಾಣಿಸುತ್ತಿಲ್ಲ. ಇನ್ನರ್ಧ ಗಂಟೆ ಆದ್ರೂ ತಾತಪ್ಪ ಸುಮ್ನೆ ಇರೋದಲ್ವಾ ಎಂದು ಒಳಗೇ ಶಾಪ ಹಾಕಿ ಒಳ ನುಗ್ಗಲು ಸಂದಿ ಸಿಗಬಹುದೇನೋ ಅಂತ ಓಡಾಡಿದೆವು. ಎಲ್ಲೂ ಜಾಗ ಬಿಡಲಿಲ್ಲ. ನಮ್ಮ ಪುಣ್ಯಕ್ಕೆ ಅಲ್ಲೇ ದೊಡ್ಡ ಬಾಗೇ ಮರ ಇತ್ತು. ಯಾರೂ ಹತ್ತಿರಲಿಲ್ಲ. ಮರ ಹತ್ತಿ ಅಭ್ಯಾಸ ಇದ್ದ ನಾವು ಚಕಚಕನೇ ಮರ ಏರಿ ಕುಳಿತೆವು. ನಾವು ಕೆಳಗಿಂದ ಯಾರಿಗೂ ಕಾಣಿಸುತ್ತಿರಲಿಲ್ಲ. ನಮಗೆ ಮೇಲಿನಿಂದ ಎಲ್ಲಾ ಕಾಣಿಸುತಿತ್ತು. ಅಲ್ಲಿ ಬಂದ ವೀರಗಾಸೆ, ನಂದಿಕಂಬದ ಕುಣಿತಗಳು. ಸ್ತಬ್ಧ ಚಿತ್ರಗಳು ಅಂಬಾರಿ ಹೊತ್ತ ಆನೆ, ಪೊಲೀಸ್ ಬ್ಯಾಂಡ್ ಎಲ್ಲವನ್ನೂ ಮನಸಾರೆ ನೋಡಿದೆವು.
ಬಹುಶಃ ನಮ್ಮಷ್ಟು ಚಂದವಾಗಿ ಯಾರಿಗೂ ಕಾಣಿಸಿಲ್ಲವೇನೋ. ವ್ಯಾಸಂಗ ಮುಗಿದು ಮೈಸೂರು ಬಿಟ್ಟ ಮೇಲೆ ದಸರಾ ನೋಡಿರಲಿಲ್ಲ. ಈಚೆಗೆ ಸಂಸಾರ ಸಮೇತ ಮೈಸೂರಿನಲ್ಲೇ ವಾಸ ಇದ್ದುದರಿಂದ ದಸರಾ ನೋಡುವ ಮನಸಾದರೂ ಅಲ್ಲಿನ ಜನಸಂದಣಿ ನೆನೆಸಿಕೊಂಡು ರಾತ್ರಿ ಹೊತ್ತು ಮಾತ್ರ ಬೆಳಕು ನೋಡಲು ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದೆ. ಅರಮನೆಯ ಉಸ್ತುವಾರಿಯಲ್ಲಿ ಕೆಲಸ ಮಾಡುವ ಸ್ನೇಹಿತನೊಬ್ಬ ಹೋದ ವರ್ಷ ಪಾಸು ಕೊಟ್ಟಿದ್ದರೂ ಯಾಕೋ ಹೋಗಬೇಕು ಅನ್ನಿಸಲಿಲ್ಲ. ಮತ್ತೊಮ್ಮೆ ಅವಕಾಶ ಸಿಕ್ಕರೆ ಹಾಗೇ ಕದ್ದು ಮರ ಏರಿ ಚಂದವಾಗಿ ದಸರಾ ನೋಡುವ ಆಸೆ. ಆದರೆ ಆಗ ಇದ್ದ ಹುಮ್ಮಸ್ಸು… ಕಾಯುವ ತಾಳ್ಮೆ ಈಗ ಇಲ್ಲ!
” ಮತ್ತೊಮ್ಮೆ ಅವಕಾಶ ಸಿಕ್ಕರೆ ಹಾಗೇ ಕದ್ದು ಮರ ಏರಿ ಚಂದವಾಗಿ ದಸರಾ ನೋಡುವ ಆಸೆ. ಆದರೆ ಆಗ ಇದ್ದ ಹುಮ್ಮಸ್ಸು… ಕಾಯುವ ತಾಳ್ಮೆ ಈಗ ಇಲ್ಲ!”
ಕೃಪಾ ದೇವರಾಜ್, ಮಡಿಕೇರಿ ಒಮ್ಮೆ ಮನೆಗೆ ತಮ್ಮ ಬಂದಿದ್ದ, ‘ಒಂದು ನಾಯಿ ತಂದಿದ್ದೀನಿ ಕಣೇ... ಒಂದು ಲಕ್ಷದ ಹತ್ತು ಸಾವಿರ’…
ಡಾ.ಶೋಭಾ ದಿನೇಶ್ ತಮಾಷೆ ವಿಷಯ ಗೊತ್ತಾ! ನಮ್ಮೂರು ಬೆಂಗಳೂರಿಗಿಂತ ಮೈಸೂರಿಗೆ ಹತ್ತಿರ ಇದ್ದರೂ ಕೂಡ ನಮ್ಮ ದರ್ಬಾರೆಲ್ಲಾ ಬೆಂಗಳೂರು ಕಡೆಗೇನೇ.…
ಪದ್ಮಾ ಶ್ರೀರಾಮ ಸುಮಾರು ೭೦-೭೨ ವರ್ಷಗಳ ಹಿಂದೆ ‘ದಸರಾ’ ಉತ್ಸವದ ಬಗ್ಗೆ ನಮಗಿದ್ದ ಆಕರ್ಷಣೆ, ಮೈಸೂರಿಗೆ ಹೋಗಬೇಕು, ಅಲ್ಲಿನ ಎಲ್ಲ…
ವರದಿ ರೂಪ: ರವಿಚಂದ್ರ ಚಿಕ್ಕೆಂಪಿಹುಂಡಿ ಬೇರೆಬೇರೆ ಆಂಗಲ್ಗಳಲ್ಲಿ ಸರಣಿ ಫೋಟೋಗಳ ಸೆರೆ ಪಟ್ಟಣಗೆರೆ ಶೆಡ್ನಲ್ಲಿ ಮಹಜರ್ ಮಾಡುವಾಗ ಪೊಲೀಸರು ಕೃತ್ಯ…
ಭೇರ್ಯ ಮಹೇಶ್ ಹೆಬ್ಬಾಳು ಗ್ರಾಮದ ಸುರೇಶ್ ಕಶ್ಯಪ್, ಅರ್ಚಕರಾದ ಶ್ರೀನಿವಾಸಭಟ್ ಅವರ ಮನೆಯಲ್ಲಿ ಆಯೋಜನೆ ಕೆ.ಆರ್.ನಗರ: ನಾಡಹಬ್ಬ ದಸರಾ ಸಂದರ್ಭದಲ್ಲಿ…