ಹಾಡು ಪಾಡು

ಪ್ರೇಮದಲ್ಲಿ ರಾಕ್ಷಸನೂ ಮಗುವೇ ತಾನೇ…

ಕೃಪಾ ದೇವರಾಜ್, ಮಡಿಕೇರಿ

ಒಮ್ಮೆ ಮನೆಗೆ ತಮ್ಮ ಬಂದಿದ್ದ, ‘ಒಂದು ನಾಯಿ ತಂದಿದ್ದೀನಿ ಕಣೇ… ಒಂದು ಲಕ್ಷದ ಹತ್ತು ಸಾವಿರ’ ಎಂದ. ನಿಂಗೇನು ಹುಚ್ಚಾ ಎಂಬಂತೆ ಅವನ ಮುಖ ನೋಡಿದೆ. ಅವನಿಗೇನು ಬೇಕಾದಷ್ಟು ದುಡ್ಡಿರುವವನಲ್ಲ. ಅವನಿಗೊಂದು ಕ್ರೇಜ್! ಆ ದುಡ್ಡಿದ್ದರೇ ಮತ್ತೇನೋ ತೋಟದ ಕೆಲಸಕ್ಕೆ ಆಗ್ತಿತ್ತಲ್ಲಾ ಎಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತಿರುವಂತೆಯೇ, ಅರಿತವನ ಹಾಗೆ, ‘ಮಮ್ಮಿಗೂ ಶಮ್ಮಿಗೂ ಹತ್ತು ಸಾವಿರ ಎಂದು ಹೇಳಿದ್ದೇನೆ’ ಎಂದಾಗ ಪಕಪಕನೆ ನಕ್ಕು ಬಿಟ್ಟೆ. ಅದೇ ಜಾಸ್ತಿಯಂತ ಖಂಡಿತ ಬೈದಿರುತ್ತಾರೆ.

ಒಮ್ಮೆ ಅಮ್ಮನ ಮನೆಗೆ ಹೋದಾಗ ಆ ನಾಯಿಯನ್ನು ಕಾಣುವ ಭಾಗ್ಯ ನನ್ನದಾಯಿತು. ಬಾಯಿ ಹತ್ತಿರ ಇಷ್ಟಿಷ್ಟು ಮಾಂಸಲ ಹೊರಬಿದ್ದಂತೆ ಬೀಭತ್ಸವಾಗಿ ಕಾಣುವ ಆ ಬಿಳಿ ನಾಯಿಯೇನು ನನಗೆ ಆಕರ್ಷಕವಾಗಿ ಕಾಣಲಿಲ್ಲ. ಇದಕ್ಕಿಂತ ಕಂತ್ರಿ ನಾಯಿಯೇ ಎಷ್ಟೋ ಚೆಂದ ಉಂಟು, ಇದಕ್ಕೆ ಇಷ್ಟು ದುಡ್ಡು ಕೊಡಬೇಕಾ ಎನ್ನುವಂತೆ ನೋಡಿದೆ. ‘ಈ ನಾಯಿಯ ತಳಿ ಡೋಗೋ ಅರ್ಜೆಂಟಿನೋ! ಅದರ ಕಿವಿಯನ್ನು ಕತ್ತರಿಸಬೇಕಂತೆ. ಅದಕ್ಕಾಗಿ ಮೈಸೂರಿಗೆ ಬಾಡಿಗೆ ಕಾರು ಮಾಡಿ ಕರೆದುಕೊಂಡು ಹೋಗ ಬೇಕು, ಅದಕ್ಕೊಂದು ಹದಿನೈದು ಇಪ್ಪತ್ತು ಸಾವಿರ ಖರ್ಚಿದೆ’ ಎಂದ ತಮ್ಮ. ಅಯ್ಯೋ ಪಾಪ ಎನಿಸಿತು. ಅವನ ಬಗ್ಗೆ ಅಲ್ಲ, ನಾಯಿಯ ಬಗ್ಗೆ. ನಂಗೆ ಈ ನಾಯಿಯ ಕಿವಿ, ಬಾಲ ಎಲ್ಲಾ ಕತ್ತರಿಸುವುದು ಇಷ್ಟ ಆಗೊಲ್ಲ. ಈ ಹಿಂಸೆ ಮಾಡೋಕೆ ನಾಯಿ ಸಾಕುವುದಾದರು ಏಕೆ?

ಇತ್ತೀಚೆಗೆ ಅಮ್ಮನ ಮನೆಗೆ ಹೋದವಳಿಗೆ, ಮನೆಯ ಸಿಟ್ ಔಟಿನ ಕಂಬಿಗೆ ಕಟ್ಟಿದ ಡೋಗೋ ಅರ್ಜೆಂಟಿನೋ ಬೊಗಳುತ್ತಾ ಸ್ವಾಗತ ಕೋರಿದಾಗ ಹೆದರಿ, ಕಾರಿನ ಇನ್ನೊಂದು ಬದಿಯಲ್ಲಿ ಇಳಿದು ಮೆಲ್ಲನೇ ಮೆಟ್ಟಿಲು ಹತ್ತಿ ಒಳ ಹೋದೆ. ‘ಅದು ಪಾಪ ಕಚ್ಚೊಲ್ಲ, ಪ್ರೀತಿಯಿಂದ ಬಾಯಿ ಹಾಕೋದಷ್ಟೇ’ ಎಂದ ತಾಯಿಗೆ, ‘ಪ್ರೀತಿಯಿಂದಲೋ, ಸಿಟ್ಟಿನಿಂದಲೋ ಕಚ್ಚಿದರೆ ನಮಗೆ ಅಷ್ಟೇ ಸಾಕಲ್ಲ, ಹದಿನಾಲ್ಕು ಇಂಜೆಕ್ಷನ್ ಹಾಕಿಸಿಕೊಳ್ಳೋಕೆ!’ ಎಂದೆ. ‘ಈಗ ಹದಿನಾಲಕ್ಕಿಲ್ಲ, ಕಮ್ಮಿಯಾಗಿದೆ’ ಎಂದರು. ಈಗಲೇ ಕಚ್ಚಿಸಿ, ಚುಚ್ಚಿಸಿಕೊಂಡ ಅಮ್ಮ ಹಾಗೂ ತಮ್ಮ. ಆ ಡಾಗಿಯ ಹೆಸರು ರಾಯ್!

ತಮ್ಮನ ಮಗಳು ಓಡಿ ಬಂದು ಕಾಲಿಗೆ ನಮಸ್ಕರಿಸಿದಾಗ, ರಾಯ್ ಕೂಡ ಕಂಬಿ ಒಳಗೆ ಕೈ ಚಾಚಿ ನನ್ನ ಕಾಲು ಮುಟ್ಟಲು ಮತ್ತೆ ಮತ್ತೆ ಪ್ರಯತ್ನಿಸುವುದ ನೋಡಿ ಮುದಗೊಂಡೆ. ಸಿಟೌಟಿನಲ್ಲಿಯೇ ಕುಳಿತು ತಮ್ಮನ ಹೆಂಡತಿ ನೀಡಿದ ಫಿಲ್ಟರ್ ಕಾಫಿ ಕಪ್ಪಿನ ಫೋಟೋ ಕ್ಲಿಕ್ಕಿಸಿ, ಅಂತರರಾಷ್ಟ್ರೀಯ ಕಾಫಿ ದಿನದ ಪ್ರಯುಕ್ತ ಒಂದು ಸ್ಟೇಟಸ್ ಹಾಕಿಕೊಂಡೆ. ಅಲ್ಲೇ ಕುಳಿತ ನನಗೂ ರಾಯ್ ಗೂ ಮೆಲ್ಲಗೆ ಸ್ನೇಹ ಶುರುವಾಯಿತು. ಅಂತರ ಕಾಪಾಡಿಕೊಂಡೇ ಅದರ ತಲೆಯನ್ನು ಬೆರಳಿನಲ್ಲಿ ನೇವರಿಸುತ್ತಾ, ಅದರ ಮುಖವನ್ನು ನನ್ನ ಬೊಗಸೆಗೆ ತೆಗೆದುಕೊಂಡಾಗ ಅದರ ಪ್ರೇಮಪೂರಿತ ಸೌಮ್ಯ ಮುಖವನ್ನು ಕಂಡು ಕರಗಿಹೋದೆ. ಎಂತಹ ರಾಕ್ಷಸನೂ ಪ್ರೇಮದ ಮುಂದೆ ಶಿಶುಬಾಲನೇ. ನನ್ನ ಪಾದವನ್ನು ನೆಕ್ಕಿ ತನ್ನ ತುಂಬು ಪ್ರೀತಿಯನ್ನು ತೋರಿತು. ಸಿಟೌಟ್ ಹಿಂದೆ ನಿಂತು ಪ್ರೀತಿಯಿಂದ ಬಾಗಿ ಅದರ ಜೊತೆ ಮುದ್ದಾಟವಾಡುವಾಗ ನನ್ನ ಉದ್ದನೆಯ ಜುಟ್ಟನ್ನು ಕಚ್ಚಿ ಹಿಡಿದು ಬಿಡದೆ ಆಟ ಆಡಿಸುತ್ತಾ, ಕೊನೆಗೆ ‘ಪ್ಲೀಸ್ ಪ್ಲೀಸ್ ಬಿಡು’ ಎಂದಾಗ ಬಿಟ್ಟಿದ್ದ ತುಂಟ. ಎದುರಿನ ತೋಟ ನೋಡಲು ತಮ್ಮನ ಮಗಳೊಂದಿಗೆ ಹೊರಟಾಗ ಎಷ್ಟೋ ಹೊತ್ತಿನವರೆಗೆ ಅತ್ತಿದ್ದ ರಾಯ್, ತನ್ನನ್ನೂ ಕರೆದುಕೊಂಡು ಹೋಗು ಎಂದು. ಅವನನ್ನು ಸ್ವತಂತ್ರವಾಗಿ ಬಿಟ್ಟು ಸುಧಾರಿಸುವಷ್ಟು ಧಾತು ನನಗಿಲ್ಲ, ಅಂತಹ ಬಲಾಢ್ಯ.

ಕಟ್ಟಿ ಹಾಕಿದ, ನೆಲದ ಮೇಲೆ ನಿಂತು ಮುದ್ದಿಸುವಾಗ ನನ್ನಷ್ಟೇ ಎತ್ತರ ಬರುವ ಅವನ ಭಾರಕ್ಕೆ, ಮುಂದೆ ಮುಗ್ಗರಿಸಿ ಎದುರಿನ ಕಂಬಿ ಹಿಡಿದುಕೊಳ್ಳಬೇಕಾಯಿತು. ತನ್ನ ಎರಡು ಕಾಲಿನ ಮೇಲೆ ನಿಂತು, ತನ್ನೆರಡು ಕೈಗಳಿಂದ ನನ್ನ ನಡುವನ್ನು ಬಳಸಿದ ರಾಯ್ ಕೇವಲ ನಾಯಿಯಾಗಿ ಕಾಣಲಿಲ್ಲ. ಮಗುವಿನಂತೆ ಎದೆಗಪ್ಪಿಕೊಂಡೆ. ಎಂತಹ ದೈತ್ಯನೂ ಪ್ರೇಮದ ಮುಂದೆ ದಾಸನಾಗಿ ಬಿಡುತ್ತಾನೆ. ಬಟ್ಟೆಯ ನುಣುಪಿಗೆ ಅದರ ಕೈ ಜಾರಿ ಕೆಳಗಿಳಿದಾಗ ಮತ್ತೆ ಹಿಂದಿನಿಂದ ಹಾರಿ ಅಪ್ಪಿಕೊಂಡ ರೋಯನನ್ನು ನೋಡಿದ ತಾಯಿ, ‘ಮಗು ತರ ಅಲ್ವಾ…’ ಎಂದಾಗ ನನಗೆ ಅಲ್ಲ ಎನ್ನಲಾಗಲಿಲ್ಲ.

” ಅಂತರ ಕಾಪಾಡಿಕೊಂಡೇ ಅದರ ತಲೆಯನ್ನು ಬೆರಳಿನಲ್ಲಿ ನೇವರಿಸುತ್ತಾ, ಅದರ ಮುಖವನ್ನು ನನ್ನ ಬೊಗಸೆಗೆ ತೆಗೆದುಕೊಂಡಾಗ ಅದರ ಪ್ರೇಮಪೂರಿತ ಸೌಮ್ಯ ಮುಖವನ್ನು ಕಂಡು ಕರಗಿಹೋದೆ”

 

 

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಹೆಚ್‌ಡಿಕೆಯವರೇ, ಟೀಕೆ ಮಾಡುವಾಗ ಎಚ್ಚರಿಕೆ ಇರಬೇಕಲ್ಲವೇ?

ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಯವರು ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಏಕವಚನ…

17 mins ago

ಓದುಗರ ಪತ್ರ: ಶಾಸಕ ಜಿ.ಟಿ.ದೇವೇಗೌಡರ ನಡೆ ಶ್ಲಾಘನಿಯ

ಮೈಸೂರಿನ ಕಳಸ್ಥವಾಡಿ ಸಮೀಪದ ವಿರಿಜ ನಾಲೆ ಸಮೀಪ ಇತ್ತೀಚೆಗೆ ನಡೆದ ಅವಘಡದಲ್ಲಿ ತೊಂದರೆಗೊಳಗಾದ ಕಬ್ಬು ಸಾಗಿಸುತ್ತಿದ್ದ ಚಂದ್ರು ಎಂಬ ರೈತನ…

19 mins ago

ಓದುಗರ ಪತ್ರ: ದನಗಳ ಪ್ರದರ್ಶನಕ್ಕೆ ಬಂದ ರೈತರೂ ಪ್ರತಿಭಟಿಸಬೇಕಾಯಿತಲ್ಲ…

ರೈತ ದಸರಾ ಅಂಗವಾಗಿ ಮೈಸೂರಿನ ಕುಕ್ಕರಹಳ್ಳಿಯ ಬೋಽಸತ್ವ ಹಾಸ್ಟೆಲ್ ಮುಂಭಾಗದಲ್ಲಿ ಏರ್ಪಡಿಸಲಾಗಿದ್ದ ಹಳ್ಳಿಕಾರ್ ತಳಿಯ ಜೋಡಿ ದನಗಳ ಪ್ರದರ್ಶನವನ್ನು ಗಮನಿಸಿದರೆ…

21 mins ago

ಜನತಂತ್ರ ಉಳಿಸುವ ಯುವಜನರ ನಾಳೆಗಳನ್ನು ಗೌರವಿಸೋಣ

ದೆಹಲಿ ಕಣ್ನೋಟ: ಶಿವಾಜಿ ಗಣೇಶನ್‌ ಅವರ ವಾರದ ಅಂಕಣ  ಪ್ರಶ್ನಿಸುವುದು ಮತ್ತು ಪ್ರತಿಭಟಿಸುವುದು ಜನತಂತ್ರದ ಜೀವಾಳ ಮತದಾರರ ಪಟ್ಟಿಯ ಪರಿಷ್ಕರಣೆಯಲ್ಲಿ…

27 mins ago

ಬಾಗೆಯ ಮರದಿಂದ ಕಂಡ ಜಂಬೂಸವಾರಿ

ಸ್ವಾಮಿ ಪೊನ್ನಾಚಿ ಕೆ.ಆರ್.ಸರ್ಕಲ್ಲಿನ ಪೊಲೀಸು ಆ ಪೆಂಡಾಲ್ ಕೆಳಗಿನಿಂದ ಆಚೆ ನೂಕುವವರೆಗೂ ದಸರಾ ಕಾರ್ಯಕ್ರಮ ಹತ್ತಿರದಿಂದ ನೋಡಲು ಒಂದು ಪಾಸ್…

1 hour ago

ಮಂಡ್ಯದ ಹುಡುಗಿ ಮಹಾರಾಜರಿಲ್ಲದ ಅಂಬಾರಿ ನೋಡಿದ್ದು

ಡಾ.ಶೋಭಾ ದಿನೇಶ್ ತಮಾಷೆ ವಿಷಯ ಗೊತ್ತಾ! ನಮ್ಮೂರು ಬೆಂಗಳೂರಿಗಿಂತ ಮೈಸೂರಿಗೆ ಹತ್ತಿರ ಇದ್ದರೂ ಕೂಡ ನಮ್ಮ ದರ್ಬಾರೆಲ್ಲಾ ಬೆಂಗಳೂರು ಕಡೆಗೇನೇ.…

1 hour ago