ಡಾ.ಶೋಭಾ ದಿನೇಶ್
ತಮಾಷೆ ವಿಷಯ ಗೊತ್ತಾ! ನಮ್ಮೂರು ಬೆಂಗಳೂರಿಗಿಂತ ಮೈಸೂರಿಗೆ ಹತ್ತಿರ ಇದ್ದರೂ ಕೂಡ ನಮ್ಮ ದರ್ಬಾರೆಲ್ಲಾ ಬೆಂಗಳೂರು ಕಡೆಗೇನೇ. ನೆಂಟರಿಷ್ಟರು, ವ್ಯಾಪಾರ, ವಹಿವಾಟು ಎಲ್ಲಾ ಬೆಂಗಳೂರೇ, ಮೈಸೂರು ಅಂದರೆ ಬೇರೆ ದೇಶ ನಮಗೆ, ಪಿಯುಸಿ ವರೆಗೂ ಮೈಸೂರೇ ನೋಡದ ಜನ ನಾವು. ಇಂತಿಪ್ಪ ನಾವು ಮೈಸೂರಿಗೆ ಬಂದು ಅಂಬಾರಿ ನೋಡಿ, ಮಾರನೇ ದಿನ ಅರಮನೆಗೂ ಲಗ್ಗೆ ಇಟ್ಟು. ಇದೇ ವಿಷಯವನ್ನ ತಿಂಗಳುಗಟ್ಟಳೇ ಮಾತಾಡಿ ಬಂಧು ಬಳಗಕ್ಕೆಲ್ಲಾ ಕಿರಿ ಕಿರಿ ಮಾಡಿದ್ದು ಇವತ್ತಿಗೂ ರೋಚಕ ಕಥೆ. ನಮ್ಮನೆ ವರಾಂಡದಲ್ಲಿ ಒಂದು ಆಕರ್ಷಣೆ ಇತ್ತು, ನಮ್ಮ ತಂದೆ ಅಲ್ಲಿ ಸರಿ ಸುಮಾರು ೬೦ರಿಂದ ೭೦ ಫೋಟೋಗಳನ್ನು ನಾಲ್ಕು ಗೋಡೆಗೂ ತೂಗು ಹಾಕಿಸಿದ್ದರು, ಗಾಂಧಿಯಾದಿಯಾಗಿ ಎಲ್ಲ ಸ್ವಾತಂತ್ರ್ಯ ಹೋರಾಟಗಾರರ ಸಹಿತ ನಮ್ಮ ತಂದೆಗೆ ಬ್ಯಾಂಕಿನಲ್ಲಿ ಕೆಲಸ ಕೊಡಿಸಿದ ಮಂಡ್ಯದ ಚೌಡಯ್ಯನವರವರೆಗೂ ಫೋಟೋಗಳಿದ್ದವು. ಅದರಲ್ಲಿ ಇಂದಿರಾ ಗಾಂಧಿಯವರ ಫೋಟೋ ಪಕ್ಕದಲ್ಲಿ ಕುತ್ತಿಗೆಗೆ ಮೂರೆಳೆ ಮುತ್ತಿನ ಸರ ಧರಿಸಿ, ಕಣ್ಣಿಗೆ ತಂಪು ಕನ್ನಡಕ ಹಾಕಿಕೊಂಡು, ತಲೆಗೆ ಮೈಸೂರು ಪೇಟ ಹಾಕಿರುವ ವಿಶಿಷ್ಟ ವ್ಯಕ್ತಿಯ ಫೋಟೋ ಇತ್ತು. ಮಕ್ಕಳಾದ ನಮಗೆ ಆ ಪೋಟೋ ಮೇಲೆ ತೀವ್ರ ಕುತೂಹಲ!
ಅದು ಜಯಚಾಮರಾಜೇಂದ್ರ ಒಡೆಯರ್ ಫೋಟೋ. ನಮ್ಮ ತಂದೆ ತಾಯಿ ಇಬ್ಬರಿಗೂ ಮಹಾರಾಜರನ್ನು ನೋಡುವ ಅವಕಾಶ ಸಿಕ್ಕಿತಂತೆ, ಹಾಗಾಗಿ ಅವರ ಪೋಟೋ ತೋರಿಸಿ ಮೈಸೂರು ಸಂಸ್ಥಾನದ ರಾಜರುಗಳ ಕಥೆಗಳನ್ನು ರಸವತ್ತಾಗಿ ಹೇಳುತ್ತಿದ್ದರು. ಅವರ ಪೋಟೋದಲ್ಲಿ ಎಲ್ಲಕ್ಕಿಂತ ನನ್ನ ಸೆಳೆದಿದ್ದು ಅವರ ಕನ್ನಡಕ. ನಮ್ಕಡೆ ಕಣ್ಣಿನ ಆಪರೇಷನ್ ಆದವರು ಮಾತ್ರ ಅಂತಹ ಕನ್ನಡಕ ಹಾಕುತ್ತಾರೆ ಎಂದು ಗೊತ್ತಿದ್ದ ನನಗೆ, ‘ಮಹಾರಾಜರಿಗೆ ಕಣ್ಣು ಆಪರೇಷನ್ ಆಗಿತ್ತಾ?’ ಅಂತ ಕೇಳಿದಾಗ ಅಮ್ಮ ಗಾಬರಿಯಿಂದ ‘ಹಾಗೆಲ್ಲಾ ಮಾತನಾಡಬಾರದು’ ಅಂತ ಗದರಿಸುತ್ತಾ ಕನ್ನಡಕದ ಹಿಂದಿನ ಗುಟ್ಟನ್ನು ರಟ್ಟು ಮಾಡಿದ್ದರು.
ಮಹಾರಾಜರು ಬರೀ ಕಣ್ಣಿನಿಂದ ಪ್ರಜೆಗಳನ್ನು ನೋಡಬಾರದೆಂದೂ, ಅವರ ಕಣ್ಣಿನ ಪ್ರಭೆಯನ್ನು ಸಾಮಾನ್ಯ ಮನುಷ್ಯರಾದ ನಮಗೆ ತಡೆದುಕೊಳ್ಳುವ ಶಕ್ತಿ ಇಲ್ಲವೆಂದೂ ಹಾಗಾಗಿ ಮಹಾರಾಜರು ಸದಾ ಕಾಲ ಕಣ್ಣಿಗೆ ತಂಪು ಕನ್ನಡಕ ಧರಿಸುತ್ತಾರೆಂದೂ ಹೇಳಿದ್ದರು. ಇವತ್ತಿಗೂ ನಮ್ಮಮ್ಮ ಹೇಳಿದ ಆ ಮಾತು ಅಚ್ಚೊತ್ತಿದಂತೆ ಇದೆ. ಮಹಾರಾಜರನ್ನು, ಅವರ ಹೆಂಡತಿಯರನ್ನು ಒಮ್ಮೆಯಾ ದರೂ ನೋಡಬೇಕೆಂಬ ಆಸೆ ಇದ್ದರೂ, ಮೈಸೂರನ್ನೇ ನೋಡದ ಜನರಿಗೆ ದೂರದ ಮಾತಾಗಿತ್ತು. ಕೆಆರ್ಎಸ್ ಡ್ಯಾಮಿನಲ್ಲಿ ಅಧಿಕಾರಿಯಾಗಿದ್ದ ನಮ್ಮ ಸಂಬಂಧಿಕರ ದೆಸೆಯಿಂದಾಗಿ ನಮ್ಮ ಕುಟುಂಬ ಅಂಬಾರಿ ನೋಡುವ ದಿನ ಬಂದೇ ಬಿಟ್ಟಿತು.
ನಾನಾಗ ಪಿಯುಸಿ ಓದುತ್ತಿದ್ದೆ. ಅಮ್ಮ ಹೇಳಿದ್ದ ಕಥೆಗಳು, ಮೈಸೂರು ಮಹಾರಾಜರ ಕುರಿತು ಓದಿದ್ದು ಎಲ್ಲವೂ ಸೇರಿ ಇನ್ನಿಲ್ಲದಂತೆ ಮೈಸೂರು ನನ್ನನ್ನು ಆವರಿಸಿತ್ತು. ನಮ್ಮ ಅಂಕಲ್ನಮ್ಮನ್ನೆಲ್ಲಾ ಅವರ ಅಂಬಾಸಿಡರ್ ಕಾರಿನಲ್ಲಿ ಕೂರಿಸಿ ಕೊಂಡು ಮೈಸೂರಿನ ಮೂಲೆ ಮೂಲೆಯನ್ನು ಸುತ್ತಿಸಿ ದ್ದರು. ಮೂವತ್ತು ವರ್ಷದ ಹಿಂದಿನ ಮೈಸೂರು ಇಂದಿಗೂ ನನ್ನ ಕಣ್ಣಿಗೆ ಕಟ್ಟಿದಂತಿದೆ. ಅಗಲ ರಸ್ತೆಗಳೂ, ಜಟಕಾದಲ್ಲಿ ಊರು ಸುತ್ತುತ್ತಿರುವ ವಿದೇಶಿಯರು, ಚಕ್ಕಡಿ ಗಾಡಿಗಳಲ್ಲಿ ಬಂದಿರುವ ಅಕ್ಕಪಕ್ಕದೂರಿನ ಜನ, ಎಲ್ರನ್ನೂ ನೋಡಿ ನಮ್ಮಜ್ಜಿ ‘ರಸ್ತೆ ತುಂಬಾ ರಾಗಿ ಸುರಿದಂಗೆ ಜನ ಇದ್ದಾರಲ್ಲ’ ಅಂತ ಬೆರಗಾಗಿದ್ದರು. ಇಡೀ ಮೈಸೂರು ರಂಗುರಂಗಿನ ಬಣ್ಣದಲ್ಲಿ ಮುಳುಗಿತ್ತು. ನನಗೋ ಮಹಾರಾಜರನ್ನು ನೋಡುವ ತವಕ, ಅವರೆಲ್ಲಿ ಕನ್ನಡಕ ತೆಗೆದು ನಮ್ಮನ್ನು ನೋಡಿಬಿಡ್ತಾರೆ ಅನ್ನೋ ಭಯ ಒಳಗೊಳಗೆ ಇದ್ದರೂ ನೋಡುವ ತವಕ ಕಿಂಚಿತ್ತೂ ಕಡಿಮೆಯಾಗಿರಲಿಲ್ಲ.
ಪಿಯುಸಿಯಲ್ಲಿ ವಿಜ್ಞಾನ ವಿಷಯ ಆರಿಸಿಕೊಂಡು ಓದುತ್ತಿದ್ದರೂ, ಸೈನ್ಸಿನ ಯಾವ ಥಿಯರಿಯೂ ಮಹಾರಾಜರ ಕನ್ನಡಕದ ಮೇಲಿನ ನನ್ನ ನಂಬಿಕೆಯನ್ನ ಸಾಸಿವೆ ಕಾಳಿನಷ್ಟೂ ಅಲುಗಾಡಿಸಲು ಆಗಲಿಲ್ಲ. ಕೊನೆಗೂ ಅಂಬಾರಿ ಬಂದೇ ಬಿಟ್ಟಿತ್ತು, ನಮ್ಮ ಮುಂದೆಯೇ ಜಯಮಾರ್ತಾಂಡ ಆನೆಯು ಗಜಗಾಂಭೀರ್ಯದಿಂದ ಅಂಬಾರಿ ಹೊತ್ತು ನಡೆದಿದ್ದ. ರಪ್ ಅಂತ ಸ್ವರ್ಗ ಕಣ್ಣು ಮುಂದೆ ಹಾದು ಹೋಯ್ತು ಅಂತಾರಲ್ಲ ಹಾಗೇ ಭಾಸವಾಯ್ತು ಆ ಕ್ಷಣ. ಅಂಬಾರಿಯ ಮೇಲಿದ್ದಿದ್ದು ತಾಯಿ ಚಾಮುಂಡಿ. ಮಹಾರಾಜರ ದರ್ಬಾರ್ ಮುಗಿದಿದ್ದ ಕಾಲವದು. ಮಹಾರಾಜರನ್ನು ನೋಡಲಾಗಲಿಲ್ಲವಲ್ಲ ಎಂಬ ಕೊರಗೊಂದನ್ನು ಬಿಟ್ಟು ಉಳಿದಿದ್ದೆಲ್ಲಾ ಭರ್ಜರಿ ನೆನಪುಗಳು.
” ಮಹಾರಾಜರ ದರ್ಬಾರ್ ಮುಗಿದಿದ್ದ ಕಾಲವದು. ಮಹಾರಾಜರನ್ನು ನೋಡಲಾಗಲಿಲ್ಲವಲ್ಲ ಎಂಬ ಕೊರಗೊಂದನ್ನು ಬಿಟ್ಟು ಉಳಿದಿದ್ದೆಲ್ಲಾ ಭರ್ಜರಿ ನೆನಪುಗಳು.”
ದೆಹಲಿ ಕಣ್ನೋಟ: ಶಿವಾಜಿ ಗಣೇಶನ್ ಅವರ ವಾರದ ಅಂಕಣ ಪ್ರಶ್ನಿಸುವುದು ಮತ್ತು ಪ್ರತಿಭಟಿಸುವುದು ಜನತಂತ್ರದ ಜೀವಾಳ ಮತದಾರರ ಪಟ್ಟಿಯ ಪರಿಷ್ಕರಣೆಯಲ್ಲಿ…
ಕೃಪಾ ದೇವರಾಜ್, ಮಡಿಕೇರಿ ಒಮ್ಮೆ ಮನೆಗೆ ತಮ್ಮ ಬಂದಿದ್ದ, ‘ಒಂದು ನಾಯಿ ತಂದಿದ್ದೀನಿ ಕಣೇ... ಒಂದು ಲಕ್ಷದ ಹತ್ತು ಸಾವಿರ’…
ಸ್ವಾಮಿ ಪೊನ್ನಾಚಿ ಕೆ.ಆರ್.ಸರ್ಕಲ್ಲಿನ ಪೊಲೀಸು ಆ ಪೆಂಡಾಲ್ ಕೆಳಗಿನಿಂದ ಆಚೆ ನೂಕುವವರೆಗೂ ದಸರಾ ಕಾರ್ಯಕ್ರಮ ಹತ್ತಿರದಿಂದ ನೋಡಲು ಒಂದು ಪಾಸ್…
ಪದ್ಮಾ ಶ್ರೀರಾಮ ಸುಮಾರು ೭೦-೭೨ ವರ್ಷಗಳ ಹಿಂದೆ ‘ದಸರಾ’ ಉತ್ಸವದ ಬಗ್ಗೆ ನಮಗಿದ್ದ ಆಕರ್ಷಣೆ, ಮೈಸೂರಿಗೆ ಹೋಗಬೇಕು, ಅಲ್ಲಿನ ಎಲ್ಲ…
ವರದಿ ರೂಪ: ರವಿಚಂದ್ರ ಚಿಕ್ಕೆಂಪಿಹುಂಡಿ ಬೇರೆಬೇರೆ ಆಂಗಲ್ಗಳಲ್ಲಿ ಸರಣಿ ಫೋಟೋಗಳ ಸೆರೆ ಪಟ್ಟಣಗೆರೆ ಶೆಡ್ನಲ್ಲಿ ಮಹಜರ್ ಮಾಡುವಾಗ ಪೊಲೀಸರು ಕೃತ್ಯ…
ಭೇರ್ಯ ಮಹೇಶ್ ಹೆಬ್ಬಾಳು ಗ್ರಾಮದ ಸುರೇಶ್ ಕಶ್ಯಪ್, ಅರ್ಚಕರಾದ ಶ್ರೀನಿವಾಸಭಟ್ ಅವರ ಮನೆಯಲ್ಲಿ ಆಯೋಜನೆ ಕೆ.ಆರ್.ನಗರ: ನಾಡಹಬ್ಬ ದಸರಾ ಸಂದರ್ಭದಲ್ಲಿ…